Saturday, June 20, 2026
Saturday, June 20, 2026

ಕೂರ್ಗ್‌ನ ಹೆರಿಟೇಜ್‌ ರೆಸಾರ್ಟ್‌

ನಮಗೆ ನೀಡಿದ್ದ ಮೌಂಟನ್ ವ್ಯೂ ರೂಮ್‌ ನೋಡುತ್ತಿದ್ದಂತೆ, ಮನಸು ಹರ್ಷದಿಂದ ತುಂಬಿತು. ವಿಶಾಲ ಕೊಠಡಿ, ಸುಂದರ ಅಲಂಕೃತ ಒಳಾಂಗಣ, ಶುಚಿತ್ವ ಮತ್ತು ಬಾಲ್ಕನಿಯಿಂದ ಕಾಣುತ್ತಿದ್ದ ಹಸಿರಿನ ಬೆಟ್ಟಗಳ ದೃಶ್ಯ ಎಲ್ಲವೂ ಆ ಕ್ಷಣವನ್ನು ವಿಶೇಷವಾಗಿಸಿತ್ತು. ಒಂದಷ್ಟು ಸಮಯ ಬಾಲ್ಕನಿಯಲ್ಲಿ ನಿಂತು ತಂಪಾದ ಗಾಳಿಯನ್ನು ಅನುಭವಿಸುತ್ತಿದ್ದಾಗ ನಗರ ಜೀವನದ ಎಲ್ಲ ಒತ್ತಡಗಳು ನಿಧಾನವಾಗಿ ಕರಗುತ್ತಿರುವ ಅನುಭವ…

  • ನಿಕಿತಾ ಪವನ ಹುಯಿಲ್ಗೋಳ

ನಗರದ ಗದ್ದಲ, ವಾಹನಗಳ ಸದ್ದು, ದಿನನಿತ್ಯದ ಒತ್ತಡಗಳಿಂದ ಸ್ವಲ್ಪ ದೂರ ಹೋಗಿ ಮನಸಿಗೆ ನೆಮ್ಮದಿ ನೀಡುವ ಕ್ಷಣಗಳು ಎಲ್ಲರ ಬದುಕಲ್ಲೂ ಬರುತ್ತವೆ. ಅಂಥ ಸಮಯದಲ್ಲಿ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರ ರೆಸಾರ್ಟ್‌ಗಳು ಹೊಸ ಉಸಿರನ್ನೇ ನೀಡುವಂತೆ ಅನುಭವವಾಗುತ್ತದೆ. ಹಸಿರಿನ ಹೊದಿಕೆಯ ನಡುವೆ ನೆಲೆಸಿರುವ ಹೆರಿಟೇಜ್ ರೆಸಾರ್ಟ್‌ ಕೂರ್ಗ್‌ಗೆ ಕಾಲಿಟ್ಟ ಕ್ಷಣದಿಂದಲೇ ನಮ್ಮ ಮನಸು ಬೇರೆ ಲೋಕಕ್ಕೆ ಹೋಗಿದೆಯೇನೋ ಎಂಬ ಭಾವನೆ ಮೂಡಿತ್ತು.

ಇದನ್ನೂ ಓದಿ:ಈ ರೆಸಾರ್ಟ್‌ಗೆ ಹೋದರೆ ನೀವೂ ತಗಲಾಕ್ಕೊಳ್ತೀರಿ

ಹೆರಿಟೇಜ್‌ ರೆಸಾರ್ಟ್‌ನ ಪ್ರವೇಶ ದ್ವಾರ ತಲುಪುತ್ತಿದ್ದಂತೆ, ಅಲ್ಲಿ ಕಂಡ ಹಸಿರು ವಾತಾವರಣ, ಸುತ್ತಮುತ್ತ ಹರಡಿಕೊಂಡಿದ್ದ ತಂಪಾದ ಗಾಳಿ ಮತ್ತು ಮೌನದ ಸೌಂದರ್ಯ ಮನಸೆಳೆದವು. ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿ ನೀಡಿದ ವೆಲ್ಕಮ್ ಡ್ರಿಂಕ್ ಪ್ರಯಾಣದ ದಣಿವನ್ನು ಮರೆಸಿತು. ನಂತರ ಅವರು ನಮ್ಮನ್ನು ಕೊಠಡಿಗೆ ಕರೆದುಕೊಂಡು ಹೋದ ರೀತಿಯಲ್ಲೇ ಅತಿಥಿಗಳತ್ತ ಇರುವ ಕಾಳಜಿ ಸ್ಪಷ್ಟವಾಗಿ ಕಾಣಿಸಿತು.

Untitled design (20)

ನಮಗೆ ನೀಡಿದ್ದ ಮೌಂಟನ್ ವ್ಯೂ ರೂಮ್‌ ನೋಡುತ್ತಿದ್ದಂತೆ, ಮನಸು ಹರ್ಷದಿಂದ ತುಂಬಿತು. ವಿಶಾಲ ಕೊಠಡಿ, ಸುಂದರ ಅಲಂಕೃತ ಒಳಾಂಗಣ, ಶುಚಿತ್ವ ಮತ್ತು ಬಾಲ್ಕನಿಯಿಂದ ಕಾಣುತ್ತಿದ್ದ ಹಸಿರಿನ ಬೆಟ್ಟಗಳ ದೃಶ್ಯ ಎಲ್ಲವೂ ಆ ಕ್ಷಣವನ್ನು ವಿಶೇಷವಾಗಿಸಿತ್ತು. ಒಂದಷ್ಟು ಸಮಯ ಬಾಲ್ಕನಿಯಲ್ಲಿ ನಿಂತು ತಂಪಾದ ಗಾಳಿಯನ್ನು ಅನುಭವಿಸುತ್ತಿದ್ದಾಗ ನಗರ ಜೀವನದ ಎಲ್ಲ ಒತ್ತಡಗಳು ನಿಧಾನವಾಗಿ ಕರಗುತ್ತಿರುವ ಅನುಭವವಾಯಿತು.

ಮಧ್ಯಾಹ್ನದ ಹೊತ್ತಿಗೆ ರೆಸಾರ್ಟ್‌ನ ಇನ್ಫಿನಿಟಿ ಪೂಲ್‌ಗೆ ಇಳಿದೆ. ಅದು ಮತ್ತೊಂದು ಅದ್ಭುತ ಅನುಭವ. ದೂರದ ಬೆಟ್ಟಗಳು ಮತ್ತು ನೀರಿನ ನೀಲಿ ಹೊಳಪು ಒಂದೇ ಚಿತ್ರವಾಗಿ ಕಣ್ಣೆದುರು ಮೂಡಿದಂತಿತ್ತು. ತಂಪಾದ ನೀರಿನಲ್ಲಿ ಕೆಲ ಹೊತ್ತು ಕಳೆಯುತ್ತಿದ್ದಂತೆ ಮನಸು ಮತ್ತು ದೇಹ ಎರಡಕ್ಕೂ ಹೊಸ ಚೈತನ್ಯ ಸಿಕ್ಕಂತಾಯಿತು. ಪ್ರಕೃತಿಯ ಮಧ್ಯೆ ಇಂಥ ಅನುಭವವನ್ನು ಪದಗಳಲ್ಲಿ ವಿವರಿಸುವುದೇ ಕಷ್ಟ.

Untitled design (18)

ಸಂಜೆಯ ವೇಳೆಗೆ ರೆಸಾರ್ಟ್‌ನ ಸುತ್ತಲಿನ ತೋಟಗಳಲ್ಲಿ ನಡೆದು ಬಂದ ಅನುಭವ ಕೂಡ ಮನಸಿಗೆ ತುಂಬ ಹತ್ತಿರವಾದದ್ದು. ವಿವಿಧ ಬಣ್ಣಗಳ ಹೂಗಳು, ಚೆನ್ನಾಗಿ ನಿರ್ವಹಿಸಿದ್ದ ಗಾರ್ಡನ್‌, ಎಲೆಗಳ ಮೇಲೆ ಬೀಳುತ್ತಿದ್ದ ಮಂಜಿನ ಹನಿಗಳು ಎಲ್ಲವೂ ಕಣ್ಣಿಗೆ ಹಬ್ಬದಂತಿತ್ತು. ಅಲ್ಲಿನ ಗಾಳಿ ಅಷ್ಟು ತಾಜಾ ಮತ್ತು ಶುದ್ಧವಾಗಿತ್ತು; ಆ ವಾತಾವರಣದಲ್ಲಿ ಆಳವಾಗಿ ಉಸಿರೆಳೆದರೆ ಮನಸೇ ಹಗುರವಾಗುವ ಭಾವನೆ ಮೂಡುತ್ತಿತ್ತು.

ಸಂಜೆ ನೀಡಿದ ತಿಂಡಿಗಳನ್ನು ಸವಿಯುತ್ತಾ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿದ್ದೇ ಮತ್ತೊಂದು ಸುಂದರ ಕ್ಷಣ. ಬಳಿಕ ಆರಂಭವಾದ ಆಟಗಳ ಸಂಭ್ರಮ ನಮ್ಮನ್ನು ಮತ್ತೆ ಬಾಲ್ಯದ ದಿನಗಳಿಗೆ ಕರೆದೊಯ್ದಿತು. ಕ್ಯಾರಂ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಸ್ನೂಕರ್‌ ಸೇರಿ ಹಲವು ಒಳಾಂಗಣ ಮತ್ತು ಹೊರಾಂಗಣ ಆಟಗಳಲ್ಲಿ ಸಮಯ ಕಳೆಯುತ್ತಾ ನಗುವಿನ ಕ್ಷಣಗಳನ್ನು ಸಂಗ್ರಹಿಸಿಕೊಂಡೆವು. ಪ್ರತಿಯೊಂದು ಚಟುವಟಿಕೆಯಲ್ಲೂ ಉಲ್ಲಾಸ ತುಂಬಿತ್ತು.

ರಾತ್ರಿ ಹೊತ್ತಿಗೆ ಹಚ್ಚಿದ್ದ ಕ್ಯಾಂಪ್‌ ಫೈರ್ ಸುತ್ತ ಕುಳಿತ ಕ್ಷಣ ವಿಶೇಷವಾದದ್ದು. ತಂಪಾದ ಗಾಳಿಯ ನಡುವೆ ಬೆಂಕಿಯ ಮಂದ ಉಷ್ಣತೆ, ಸುತ್ತಲಿನ ಮೌನ, ದೂರದಿಂದ ಕೇಳಿಬರುತ್ತಿದ್ದ ಪ್ರಕೃತಿಯ ಸದ್ದು ಇವೆಲ್ಲವೂ ಸೇರಿ ಆ ರಾತ್ರಿಯನ್ನು ಮರೆಯಲಾಗದ ಅನುಭವವನ್ನಾಗಿಸಿತು. ನಂತರ ಸವಿದ ರಾತ್ರಿಯ ಊಟವೂ ರುಚಿ ಮತ್ತು ಗುಣಮಟ್ಟದಲ್ಲಿ ಮನಸಿಗೆ ತುಂಬ ತೃಪ್ತಿ ನೀಡಿತು.

Untitled design (16)

ಮರುದಿನ ಬೆಳಗ್ಗೆ ಎದ್ದ ಕೂಡಲೆ ಪರದೆ ತೆರೆದ ಕ್ಷಣ ನಮ್ಮ ಕಣ್ಣಿಗೆ ಕಂಡ ದೃಶ್ಯ ನಿಜಕ್ಕೂ ಪ್ರಕೃತಿಯ ಉಡುಗೊರೆ. ಬಾಲ್ಕನಿಯಾಚೆ ಹರಡಿಕೊಂಡಿದ್ದ ಬೆಟ್ಟಗಳ ನೋಟ, ಮುಂಜಾನೆಯ ಮಂಜು, ತಂಪಾದ ಗಾಳಿ ಮಂತ್ರಮುಗ್ದಗೊಳಿಸಿತ್ತು. ನಂತರ ಸ್ಪಾ ಮತ್ತು ಸೌನಾ ಬಾತ್‌. ದೇಹ ಮತ್ತು ಮನಸಿಗೆ ವಿಶ್ರಾಂತಿ ನೀಡಿದವು. ಸುಗಂಧಭರಿತ ವಾತಾವರಣ, ಮಧುರ ಸಂಗೀತ ಮತ್ತು ಶಾಂತ ವಾತಾವರಣದಲ್ಲಿ ಕಳೆದ ಆ ಸಮಯ ಸಂಪೂರ್ಣ ನೆಮ್ಮದಿ ನೀಡಿತು. ಅಲ್ಲಿಂದ ಹೊರಬಂದಾಗ ದೇಹ ಮತ್ತು ಮನಸು ಹಗುರವಾದ ಅನುಭವವಾಯಿತು.

ನನ್ನ ಪತಿ ಪವನ್ ಹುಯಿಲ್ಗೋಳ್ ಅವರೊಂದಿಗೆ ಈ ರೆಸಾರ್ಟ್‌ನಲ್ಲಿ ಕಳೆದ ಕ್ಷಣಗಳು ನಮ್ಮಿಬ್ಬರಿಗೂ ತುಂಬಾ ವಿಶೇಷವಾಗಿದ್ದು, ಮತ್ತೆ ಮತ್ತೆ ಭೇಟಿ ನೀಡಬೇಕೆನ್ನಿಸುವಷ್ಟು ಈ ಪ್ರವಾಸ ಮನಸಿಗೆ ಹತ್ತಿರವಾಯಿತು.

ದಾರಿ ಹೇಗೆ?

ಹೆರಿಟೇಜ್‌ ರೆಸಾರ್ಟ್‌ ಕೂರ್ಗ್‌ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿದೆ. ಮಡಿಕೇರಿಯಿಂದ ಗಾಳಿಬೀಡಿಗೆ ನೇರ ಸರಕಾರಿ ಬಸ್‌ ಸಂಚಾರ ಸೌಲಭ್ಯವಿದೆ. ಅಲ್ಲಿಂದ ರೆಸಾರ್ಟ್‌ಗೆ ಖಾಸಗಿ ವಾಹನಗಳ ಮೂಲಕ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..