ವೆಲ್ ನೆಸ್ ಟೂರಿಸಂ ನ ಹೊಸ ಪರಿಭಾಷೆ
ಕರ್ನಾಟಕದ ಧಾರ್ಮಿಕ ಮತ್ತು ಅಧ್ಯಾತ್ಮಿಕ ಪ್ರವಾಸ ವಿಭಾಗದಲ್ಲಿ ಧರ್ಮಸ್ಥಳ ಎಂದೆಂದಿಗೂ ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ ಪ್ರವಾಸಿ ಪ್ರಪಂಚ ತಂಡ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಾಂಸ್ಕೃತಿಕ, ಶೈಕ್ಷಣಿಕ, ಪಾರಂಪರಿಕ ಹಾಗೂ ವೆಲ್ ನೆಸ್ ಟೂರಿಸಂ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನ ಮಾಡಿದೆ.
ಕರ್ನಾಟಕದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಲು ಅರೆಕ್ಷಣವೂ ಯೋಚಿಸುವ ಪ್ರಮೇಯ ಬರುವುದಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ಕರ್ನಾಟಕದ ಮಾತ್ರವಲ್ಲ ಭಾರತೀಯ ಹಿಂದೂಗಳ ಹಾಗೂ ಜೈನರ ಪಾಲಿನ ಅತ್ಯಂತ ಆಪ್ತ ಧಾರ್ಮಿಕ ನಂಬಿಕೆಯ ಕ್ಷೇತ್ರ. ಸಮಸ್ತ ಭಾರತೀಯ ಹಿಂದೂಗಳ ವಾರಾಣಸಿಯ ಕಾಶಿವಿಶ್ವನಾಥನ ಸನ್ನಿಧಿ ಹೇಗೋ, ಕರ್ನಾಟಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಾನ ಅಷ್ಟೇ ಮಹಾತ್ಮೆಯದ್ದು.
ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ... ಕರೆಯುವರು ಅವನನ್ನೇ ಮಂಜುನಾಥ ಎಂಬ ಸಾಲುಗಳು ಶತಶತಮಾನಗಳ ನಂಬಿಕೆಯಿಂದ, ಪೌರಾಣಿಕ ಐತಿಹ್ಯದಿಂದ ಹುಟ್ಟಿಕೊಂಡಿರುವಂಥದ್ದು.
ಪವಿತ್ರ ನೇತ್ರಾವತಿ ನದಿಯ ತಟದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರತಿ ದಿನ ಸಹಸ್ರಾರು ಧಾರ್ಮಿಕ ಯಾತ್ರಾರ್ಥಿಗಳನ್ನು ಸ್ವಾಗತಿಸಿ ಹರಸುತ್ತದೆ. ಶ್ರೀ ಮಂಜುನಾಥೇಶ್ವರನ ಸನ್ನಿಧಿಗೆ ಬಂದು ಭಕ್ತಾದಿಗಳು ಕೃತಾರ್ಥರಾಗುತ್ತಾರೆ. ನೇತ್ರಾವತಿಯಲ್ಲಿ ಮಿಂದು ಪಾಪಮುಕ್ತರಾಗುತ್ತಾರೆ. ಉಚಿತ ಅನ್ನದಾಸೋಹದಲ್ಲಿ ಭಾಗವಹಿಸಿ ಸಂತೃಪ್ತರಾಗುತ್ತಾರೆ.

ಕರ್ನಾಟಕದ ಧಾರ್ಮಿಕ ಮತ್ತು ಅಧ್ಯಾತ್ಮಿಕ ಪ್ರವಾಸ ವಿಭಾಗದಲ್ಲಿ ಧರ್ಮಸ್ಥಳ ಎಂದೆಂದಿಗೂ ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ ಪ್ರವಾಸಿ ಪ್ರಪಂಚ ತಂಡ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಾಂಸ್ಕೃತಿಕ, ಶೈಕ್ಷಣಿಕ, ಪಾರಂಪರಿಕ ಹಾಗೂ ವೆಲ್ ನೆಸ್ ಟೂರಿಸಂ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನ ಮಾಡಿದೆ.
ಗ್ರಾಮೀಣ ಕ್ಷೇತ್ರದಲ್ಲಿ ಸಾಕ್ಷರತೆ ತರಲು, ಎಲ್ಲ ರೀತಿಯ ಶಿಕ್ಷಣ ಲಭಿಸುವಂತೆ ಮಾಡಲು ಉಜಿರೆಯಲ್ಲಿ ಪ್ರಾರಂಭವಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ರಾಜ್ಯಾದ್ಯಂತ ಐವತ್ತಾರು ಶಿಕ್ಷಣ ಸಂಸ್ಥೆಗಳ ಉಗಮಕ್ಕೆ ಮೂಲವಾಯಿತು. ಎಸ್ ಡಿ ಎಂ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಿಂಡರ್ ಗಾರ್ಟನ್ ನಿಂದ ವೈದ್ಯಕೀಯ ಶಿಕ್ಷಣದ ತನಕ ಎಲ್ಲ ಉತ್ಕೃಷ್ಟ ಶಿಕ್ಷಣ ಸೇವೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಸದಾ ಕರ್ನಾಟಕದ ನಂಬರ್ ಒನ್ ಪಟ್ಟ ದಕ್ಕುತ್ತಿರುವುದರಲ್ಲಿ ಎಸ್ ಡಿ ಎಂ ನ ಸಿಂಹಪಾಲು ಇದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಸಾಂಸ್ಕೃತಿಕ ಮತ್ತು ಪಾರಂಪರಿಕ ವಿಭಾಗವನ್ನು ಪ್ರವಾಸಿ ಕಣ್ಣಿನಿಂದ ನೋಡುವ ಮುನ್ನ, ನಾವು ವೆಲ್ ನೆಸ್ ಟೂರಿಸಂ ನಿಟ್ಟಿನಲ್ಲಿ ಧರ್ಮಸ್ಥಳ ಹೊಂದಿರುವ ಸ್ಥಾನವನ್ನು ವಿಶೇಷವಾಗಿ ನೋಡಬೇಕಿದೆ.

ಪ್ರಕೃತಿ ಚಿಕಿತ್ಸೆಯನ್ನು ರಾಜ್ಯಕ್ಕೆ ಪ್ರಪ್ರಥಮವಾಗಿ ಪರಿಚಯಿಸಿದ ಕೀರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಲ್ಲಬೇಕು, ನೇಚರ್ ಕ್ಯೂರ್ ಅಥವಾ ಪ್ರಕೃತಿ ಚಿಕಿತ್ಸೆ ಎಂಬ ಪರಿಕಲ್ಪನೆಗೆ ಮೂರ್ತರೂಪ ಸಿಕ್ಕಿದ್ದೇ ಧರ್ಮಸ್ಥಳದಲ್ಲಿ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.
ಶಾಂತಿವನ ಎಂಬ ಡಿವೈನ್ ಮ್ಯಾಜಿಕ್
ನೇತ್ರಾವತಿ ನದಿ ದಡದ ಪಶ್ಚಿಮ ಘಟ್ಟದ ತಪ್ಪಲಿನ ಹಸಿರಿನ ಮಧ್ಯೆ ನಿರ್ಮಿತವಾಗಿರುವ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿಗುವ ಚಿಕಿತ್ಸೆಯೇ ವಿಭಿನ್ನ. ಇಂದು ರಾಜ್ಯದಲ್ಲಿ ಹಲವಾರು ಪ್ರಕೃತಿ ಚಿಕಿತ್ಸೆಯ ಕೇಂದ್ರಗಳು ಹುಟ್ಟಿಕೊಂಡಿದ್ದರೆ ಅದಕ್ಕೆ ಸ್ಫೂರ್ತಿ ಹಾಗೂ ಪ್ರೇರಣೆ ಶಾಂತಿವನ.
ಶರೀರ ಮಾಧ್ಯಂ ಖಲು ಧರ್ಮಸಾಧನಂ
ಆರೋಗ್ಯವಂತ ದೇಹ ರೂಪುಗೊಳ್ಳಲು ಮನಸ್ಸು ಆರೋಗ್ಯದಿಂದಿರಬೇಕು ಎಂದು ಪ್ರಕೃತಿ ಚಿಕಿತ್ಸೆ ಬಲವಾಗಿ ನಂಬಿದೆ. 1987 ಜೂನ್ 29ರಂದು ಪ್ರಾರಂಭಗೊಂಡ ಶಾಂತಿವನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯವೇ ಈ ಖ್ಯಾತ ಶಾಂತಿವನ. ಇಲ್ಲಿ ಬರುವ ರೋಗಿಗಳ ಕಾಯಿಲೆಗಳಿಗೆ ಟಾನಿಕ್, ಮಾತ್ರೆ, ಇಂಜೆಕ್ಷನ್ ಇತ್ಯಾದಿ ಯಾವುದೂ ಇಲ್ಲ. ಆಧುನಿಕ ಪಾಶ್ಚಾತ್ಯ ಪದ್ಧತಿಯ ಸೋಂಕು ಅಂಟಿಸಿಕೊಂಡಿಲ್ಲ. ನಿರೌಷಧ ಚಿಕಿತ್ಸೆ ಇಲ್ಲಿಯ ವೈಶಿಷ್ಟ್ಯ.
ಯೋಗ ಮತ್ತು ಆಹಾರಕ್ರಮದಿಂದ ಶರೀರ ಮತ್ತು ಮನಸ್ಸಿನ ಸಮತೋಲನ ತರುವುದು ಶಾಂತಿವನ ಪ್ರಕೃತಿ ಕೇಂದ್ರದ ವಿಶಿಷ್ಟ ಪದ್ಧತಿ.
ಹಬೆಯ ಸ್ನಾನ, ಸೋನಾ ಬಾತ್, ನೀರಿನ ಕಂಪನ ಚಿಕಿತ್ಸೆ, ಸುಳಿಸ್ನಾನ, ಆಯಸ್ಕಾಂತ ಚಿಕಿತ್ಸೆ, ಮಡ್ ಥೆರಪಿ, ಹಲವಾರು ರೀತಿಯ ಸಹಜ ಚಿಕಿತ್ಸೆಗಳ ಮೂಲಕ ದೇಹ ಮತ್ತು ಮನಸ್ಸನ್ನು ಉಲ್ಲಸಿತಗೊಳಿಸುವುದು ಪ್ರಕೃತಿ ಚಿಕಿತ್ಸೆಯ ವಿಧಾನಗಳು.
ಇಲ್ಲಿ ಸಿಗುವ ವಿಶೇಷ ಚಿಕಿತ್ಸೆಗಳು
ಆಕಾಶ ಚಿಕಿತ್ಸಾ
ಈ ಚಿಕಿತ್ಸೆಯಲ್ಲಿ ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ತೆಗೆದು ಶುಚಿಗೊಳಿಸಿ ಸಾತ್ವಿಕ ಆಹಾರಗಳ ಮೂಲಕ ಪುನರುಜ್ಜೀವನಗೊಳಿಸಲಾಗುತ್ತದೆ. ಹಣ್ಣು, ತರಕಾರಿ ಮತ್ತು ಹರ್ಬಲ್ ಪಾನೀಯಗಳೇ ಔಷಧಗಳಾಗಿ ನೀಡಲಾಗುತ್ತದೆ.
ಅಗ್ನಿ ಚಿಕಿತ್ಸಾ
ಸೂರ್ಯನ ಶಾಖ ಸೇರಿದಂತೆ ಪ್ರಾಕೃತಿಕ ಮಾದರಿಯಲ್ಲಿ ಹೀಟ್ ಟ್ರೀಟ್ ಮೆಂಟ್ ನೀಡಿ ದೇಹದ ಬಾಧೆಗಳನ್ನು ನಿವಾರಿಸಲಾಗುತ್ತದೆ.
ಯೋಗ ಥೆರಪಿ
ಯೋಗದ ಮೂಲಕ ಹಲವಾರು ದೀರ್ಘಕಾಲಿಕ ಕಾಯಿಲೆಗಳನ್ನು ಗುಣಪಡಿಸಿರುವುದು ಶಾಂತಿವನದ ಹೆಗ್ಗಳಿಕೆ
ಯಾವ್ಯಾವ ಕಾಯಿಲೆಗಳಿಗೆ ಚಿಕಿತ್ಸೆಯಿದೆ?
ಅಸ್ತಮಾ, ಅಲರ್ಜಿ
ಮಧುಮೇಹ, ಬೊಜ್ಜಿನ ಸಮಸ್ಯೆ, ಥೈರಾಯ್ಡ್ ಸಮಸ್ಯೆ
ಹೈ ಮತ್ತು ಲೋ ಬಿಪಿ, ಹೃದಯ ಸಂಬಂಧಿ ಕಾಯಿಲೆ
ಮೈಗ್ರೇನ್, ತಲೆನೋವು, ಮಾನಸಿಕ ಒತ್ತಡ
ಖಿನ್ನತೆ ಮತ್ತು ನರಸಂಬಂಧಿ ಕಾಯಿಲೆ
ಬೆನ್ನು ನೋವು, ಆರ್ಥ್ರೈಟಸ್
ಗ್ಯಾಸ್ಟ್ರೈಟಿಸ್, ಅಲ್ಸರ್,
ಸೋರಿಯಾಸಿಸ್
ಇನ್ನೂ ಹಲವಾರು ತೀವ್ರ ದೈಹಿಕ ಸಮಸ್ಯೆಗಳಿಗೆ ಪ್ರಕೃತಿ ಚಿಕಿತ್ಸೆಯಲ್ಲೇ ಪರಿಹಾರ ಸಿಗುತ್ತದೆ.
ವಿಶೇಷ ಪ್ಯಾಕೇಜ್ ಪ್ರೋಗ್ರಾಮ್ ಮತ್ತು ಹೊರಾಂಗಣ ಚಟುವಟಿಕೆಗಳ ಮೂಲಕ ಚಿಕಿತ್ಸೆ ನೀಡುವ ಯೋಜನೆಯೂ ಶಾಂತಿವನದ ಪ್ರಕೃತಿ ಚಿಕಿತ್ಸಾವಿಧಾನದಲ್ಲಿ ಇದೆ.
ಸ್ಟ್ರೆಸ್ ಮ್ಯಾನೇಜ್ ಮೆಂಟ್ ಪ್ರೋಗ್ರಾಂ
ಹೃದಯ ಸಂಬಂಧಿ ಸಮಾಲೋಚನೆ
ಪಥ್ಯ ಕುರಿತ ಸಮಾಲೋಚನೆ
ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಿಬಿರ
ಸಾರ್ವಜನಿಕ ಆರೋಗ್ಯ ಜಾಗೃತಿ ಶಿಬಿರ
ವಯೋವೃದ್ಧರಿಗಾಗಿಯೇ ಆಸ್ತಮಾ, ಮಧುಮೇಹ ಶಿಬಿರ
ಇಂಥ ಹತ್ತಾರು ಕಾರ್ಯಕ್ರಮಗಳು ಶಾಂತಿವನದಲ್ಲಿವೆ.
ಇದುವರೆಗೂ ಸಹಸ್ರಾರು ಅಥವಾ ಲಕ್ಷಕ್ಕೂ ಹೆಚ್ಚು ಮಂದಿ ಶಾಂತಿವನದ ಶಿಬಿರಗಳಲ್ಲಿ ಪಾಲ್ಗೊಂಡು ಹೊಸ ಹುಮ್ಮಸ್ಸು ಮತ್ತು ಆರೋಗ್ಯದೊಂದಿಗೆ ಮರಳಿದ್ದಾರೆ. ಅವರಲ್ಲಿ ಜನಸಾಮಾನ್ಯರಿಂದ ಹಿಡಿದು, ಖ್ಯಾತ ರಾಜಕಾರಣಿಗಳು, ಉದ್ಯಮಿಗಳು,ಸಿನಿತಾರೆಯರು, ಮಾಧ್ಯಮಕ್ಷೇತ್ರದವರು ಎಲ್ಲರೂ ಇದ್ದಾರೆ. ಇದನ್ನು ವಾಣಿಜ್ಯ ದೃಷ್ಟಿಯಿಂದ ಕಾಣದೆ ಸಮಾಜದ ಆರೋಗ್ಯ ದೃಷ್ಟಿಯಿಂದ ನೋಡುತ್ತಿರುವುದು ಶಾಂತಿವನದ ವೈಶಿಷ್ಟ್ಯ. ಹೀಗಾಗಿಯೇ ಗುಣಮಟ್ಟದಲ್ಲಿ ಮತ್ತು ರಿಸಲ್ಟ್ ನಲ್ಲಿ ಎಂದೆಂದಿಗೂ ಅತ್ಯುತ್ತಮವಾಗಿಯೇ ಉಳಿದಿದೆ ಶಾಂತಿವನ.
ಸೌಖ್ಯವನ- ಆರೋಗ್ಯದ ಹೊಸ ಪರಿಭಾಷೆ
ಸೌಖ್ಯವನ ವೆಲ್ ನೆಸ್ ಟೂರಿಸಂಗೆ ಧರ್ಮಸ್ಥಳ ಮಂಜುನಾಥೇಶ್ವರ ದಿಂದ ಸಿಕ್ಕಿರುವ ಇನ್ನೊಂದು ಅದ್ಭುತ ಕೊಡುಗೆ. ಶಾಂತಿವನದ ಇನ್ನೊಂದು ವಿಶೇಷ ಘಟಕ ಈ ಸೌಖ್ಯವನ. ಇದು ಧರ್ಮಸ್ಥಳದಿಂದ ತೊಂಬತ್ತೆಂಟು ಕಿಲೋಮೀಟರ್ ದೂರದ ಮಣಿಪಾಲದ ಬಳಿಯಲ್ಲಿದೆ. ಮಣಿಪಾಲದಿಂದ ಐದು ಕಿಲೋಮೀಟರ್ ದೂರವಿರುವ ಪರ್ಕಳದ ಪರೀಕದಲ್ಲಿರುವ ಸೌಖ್ಯವನ ಆರೋಗ್ಯ ಪ್ರವಾಸೋದ್ಯಮ ದೃಷ್ಟಿಯಿಂದ ಬಹಳ ವಿಶೇಷ ಸ್ಥಳ. ಇಲ್ಲಿಯೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗವೇ ಪ್ರಧಾನ ಚಿಕಿತ್ಸಾ ಕ್ರಮ. ವಾತಾವರಣ ಮತ್ತು ಸೌಕರ್ಯಗಳು ಇನ್ನಷ್ಟು ವಿಶೇಷವಾಗಿರುವುದು ಇದನ್ನು ಶಾಂತಿವನಕ್ಕಿಂತ ಡಿಫರೆಂಟ್ ಅನಿಸುವಂತೆ ಮಾಡುತ್ತದೆ.
ಹದಿನೆಂಟು ವರ್ಷಗಳ ಹಿಂದೆ ಅಂದರೆ 2007ರಲ್ಲಿ ಸುಮಾರು ಹದಿನೆಂಟು ಎಕರೆ ವಿಸ್ತೀರ್ಣದಲ್ಲಿ ವಿಶಾಲವಾಗಿ ವ್ಯಾಪಿಸಿರುವ ಸೌಖ್ಯವನ ಬೇರೆಯದ್ದೇ ಪ್ರಪಂಚ. ಶಬ್ದಮಾಲಿನ್ಯ, ಪರಿಸರ ಮಾಲಿನ್ಯ, ಜಲಮಾಲಿನ್ಯ ಎಲ್ಲದರಿಂದ ಮುಕ್ತವಾಗಿರುವ ಸೌಖ್ಯವನದಲ್ಲಿ ಮುನ್ನೂರ ಇಪ್ಪತ್ತಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯವಿದೆ. ನೂರಾನಲವತ್ತಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿದ್ದಾರೆ. ಇಲ್ಲಿ ಕುಟೀರಗಳು, ಪ್ರೀಮಿಯಂ ಡೀಲಕ್ಸ್ ಕೊಠಡಿಗಳು, ಡಾರ್ಮೆಟರಿಗಳು ಹೀಗೆ ವಿಧವಿಧ ಬಗೆಯ ವಿಶ್ರಾಂತಿ ಸ್ಥಳಗಳಿವೆ.
ಆಕ್ಯುಪಂಚರ್, ರಿಫ್ಲೆಕ್ಸಾಲಜಿ, ಜಲಚಿಕಿತ್ಸೆ, ಯೋಗ ಚಿಕಿತ್ಸೆ, ಆಹಾರ ಚಿಕಿತ್ಸೆ ಸೇರಿದಂತೆ ಹಲವು ಮಾದರಿಯ ಪ್ರಕೃತಿ ಚಿಕಿತ್ಸೆಗಳು ಇಲ್ಲಿನ ಹೈಲೈಟ್.
ಬೆಂಗಳೂರು, ಮಂಗಳೂರು, ಉಡುಪಿ, ಧರ್ಮಸ್ಥಳ ಎಲ್ಲಿಂದ ಬೇಕಾದರೂ ವಿಮಾನ ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ತಲುಪಬಹುದಾದ ಸೌಖ್ಯವನ ಕರ್ನಾಟಕ ಮಾತ್ರವಲ್ಲ ದೇಶದೆಲ್ಲೆಡೆಯಿಂದ ಜನರನ್ನು ಸೆಳೆಯುತ್ತಿದೆ. ಕೇವಲ ಮಾನಸಿಕ ದಣಿವು ತಣಿಸಿಕೊಳ್ಳಲು ಇಲ್ಲಿಗೆ ಬರುವ ಸಹಸ್ರಾರು ಮಂದಿ ಇದ್ದಾರೆ.
ಭಕ್ತಿ, ಧಾರ್ಮಿಕ ನಂಬಿಕೆ ಒಂದೆಡೆಯಾದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರವಾಸದ ದೃಷ್ಟಿಯಿಂದ ಇನ್ನಷ್ಟು ಅಚ್ಚರಿ ಹಾಗೂ ವಿಶೇಷಗಳನ್ನು ಒಳಗೊಂಡ ಕ್ಷೇತ್ರ. ಧರ್ಮಸ್ಥಳದ ಅನ್ನದಾಸೋಹ ಕಾರ್ಯಕ್ರಮವಾಗಿರುವ ಅನ್ನಪೂರ್ಣ, ಅಧ್ಯಯನದ ಮತ್ತು ಪ್ರೇರಣೆಯ ದೃಷ್ಟಿಯಿಂದ ಬಹಳ ವಿಶೇಷವಾದದ್ದು. ಅದೇ ರೀತಿ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ, ತನ್ನ ಅಪರೂಪದ ವಸ್ತುಸಂಗ್ರಹಣೆಯಿಂದಾಗಿ ಪ್ರವಾಸಿಗರಿಗೆ ಹೊಸ ವಿಷಯಗಳನ್ನು ತಿಳಿಸಿಕೊಡುತ್ತದೆ. ಇನ್ನು ಧರ್ಮಸ್ಥಳದ ಕಾರ್ ಮ್ಯೂಸಿಯಂ ದೇಶದಲ್ಲೇ ವಿಶಿಷ್ಟವಾದದ್ದು ಮತ್ತು ಆಕರ್ಷಣೀಯವಾದದ್ದು. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಜೊತೆ ಇಲ್ಲಿ ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳಾಗಿ ಆಕರ್ಷಿಸುವುದು ಬಾಹುಬಲಿ ಗೋಮಟೇಶ್ವರನ ವಿಗ್ರಹ, ಚಂದ್ರನಾಥ ಸ್ವಾಮಿ ಬಸದಿ, ಮತ್ತು ಶ್ರೀರಾಮಮಂದಿರ.

ಅನ್ನದಾನ ಮಹಾದಾನ
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಕೊಟ್ಟು ಮಂಜುನಾಥೇಶ್ವರನ ದರ್ಶನ ಪಡೆದವರು ಅಲ್ಲಿನ ಉಚಿತ ಭೋಜನ ಸೇವೆ ಪಡೆಯದೇ ವಾಪಸ್ ಬರುವುದು ಅತ್ಯಪರೂಪ. ಧರ್ಮಸ್ಥಳ ತನ್ನ ಯಾತ್ರಾರ್ಥಿಗಳಿಗೆ ಯಾವುದೇ ಜಾತಿ ಧರ್ಮ ಆಸ್ತಿ ಅಂತಸ್ತು ಅಂತ ನೋಡದೆ ಪ್ರತಿನಿತ್ಯ ಸಂತೃಪ್ತಿಯಾಗುವಂಥ ಅನ್ನದಾಸೋಹ ನಡೆಸುತ್ತಿದೆ. ಅನ್ನಪೂರ್ಣ ಎಂಬ ಭೋಜನಾಲಯ ಯಾತ್ರಿಗಳು ನೋಡಲೇಬೇಕಾದ ಜಾಗ. ಅತ್ಯಾಕರ್ಷಕ ಕಟ್ಟಡವಾಗಿರೋ ಅನ್ನಪೂರ್ಣ ಪ್ರತಿ ದಿನ ಮೂವತ್ತು ಸಾವಿರದಿಂದ ಎಪ್ಪತ್ತು ಸಾವಿರ ಮಂದಿಗೆ ಅನ್ನದಾಸೋಹಕ್ಕೆ ಜಾಗ ಒದಗಿಸಿದೆ. ಅದ್ಭುತವಾದ ಅತ್ಯಾಧುನಿಕ ಅಡುಗೆ ಮನೆ, ನೂತನ ಮಾದರಿಯ ಅಡುಗೆ ಯಂತ್ರಗಳು, ಇಲ್ಲಿ ಅಡುಗೆ ತಯಾರಾಗುವ ಬಗೆ, ಎಲ್ಲವೂ ವಿಶಿಷ್ಟ ಮತ್ತು ಅದ್ಭುತ. ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್ ಕೂಡ ಅನ್ನಪೂರ್ಣದ ಮೆಗಾ ಕಿಚನ್ ಅನ್ನು ಸರಣಿ ರೂಪದಲ್ಲಿ ಜಗತ್ತಿಗೆ ತೋರಿಸಿದೆ.
ಬಯೋಗ್ಯಾಸ್ ಬಳಕೆ, ಸಾಂಪ್ರದಾಯಿಕ ಬಾಳೆ ಎಲೆ ಊಟ, ಶುಚಿ ರುಚಿ, ತ್ವರಿತ ಸೇವೆ, ತಾಳ್ಮೆಯ ಸಿಬ್ಬಂದಿವರ್ಗ ಅನ್ನಪೂರ್ಣದಲ್ಲಿ ನಡೆಯುವ ದಾಸೋಹದ ವಿಶೇಷತೆಗಳು. ಇಂಥ ಒಂದು ಉದಾತ್ತ ಯೋಜನೆಯ ಹರಿಕಾರರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪ್ರಸ್ತುತ ರಾಜ್ಯಸಭಾ ಸದಸ್ಯರೂ ಆಗಿರುವ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರು. ಅನ್ನ ಆರೋಗ್ಯ ಮತ್ತು ಶಿಕ್ಷಣ ಇವು ಮೂರು ಧರ್ಮಕ್ಕೆ ಪೂರಕ ಅಂಶಗಳು ಎಂದು ಬಲವಾಗಿ ನಂಬಿರುವ ಹೆಗ್ಗಡೆಯವರು ಈ ಮೂರೂ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ.
ಮಂಜೂಷ ಮ್ಯೂಸಿಯಂ
ಇದು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಧರ್ಮಸ್ಥಳದ ಮಹತ್ವದ ಕೊಡುಗೆ. ಶ್ರೀ ವೀರೇಂದ್ರ ಹೆಗ್ಗಡೆಯವರ ಕಳೆದ ಐವತ್ತು ವರ್ಷಗಳಲ್ಲಿ ರೂಪಿಸಿರುವ ಈ ವಸ್ತುಸಂಗ್ರಹಾಲಯ ಪ್ರವಾಸಿಗರಲ್ಲಿ ಅಚ್ಚರಿ ಮೂಡಿಸುವುದು ಖಚಿತ. ಲೋಹದ ಪ್ರತಿಮೆಗಳು, ಪೇಂಟಿಂಗ್ ಗಳು, ಧಾರ್ಮಿಕ ಕಲಾಕೃತಿಗಳು, ವಿಶಿಷ್ಟ ಕಲ್ಲುಗಳು, ತಾಳೆಗರಿ ಶಾಸನಗಳು, ಆಭರಣಗಳು, ವಿಶೇಷ ಫೊಟೋಗಳು, ವಿಧವಿಧ ಕ್ಯಾಮೆರಾಗಳು, ಮೂರುಶತಮಾನ ಹಳೆಯ ವೀಣೆ, ಮೌರ್ಯ ಕಾಲದ ನಾಣ್ಯಗಳು, ಬೆರಗು ಮೂಡಿಸುವ ಕಾರುಗಳು, ಹೀಗೆ ಸಾಲುಸಾಲು ಅಚ್ಚರಿ ಮೂಡಿಸುತ್ತದೆ ಈ ಮ್ಯೂಸಿಯಂ. ಎಂಬತ್ತು ಸಾವಿರ ಚದರಡಿಯಲ್ಲಿ ಕಟ್ಟಲ್ಪಟ್ಟಿರುವ ಈ ಮ್ಯೂಸಿಯಮ್ ನಲ್ಲಿ ಬರೋಬ್ಬರಿ ಇಪ್ಪತ್ತೊಂದು ಸಾವಿರ ಕಲಾಕೃತಿಗಳು, ಇಪ್ಪತ್ತೈದು ಸಾವಿರ ಪುಸ್ತಕಗಳು, ಏಳೂವರೆ ಸಾವಿರ ತಾಳೆಗರಿ ಶಾಸನಗಳು ಇವೆ ಎಂಬುದು ಸಣ್ಣ ಮಾತೇ? ಅಂದ ಹಾಗೆ ಈ ಮ್ಯೂಸಿಯಂ ನ ನಿರ್ಮಾಣ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಆ ಮೂಲಕ ಭಾರತ ಹಾಗೂ ವಿದೇಶಕ್ಕೂ ಈ ಮ್ಯೂಸಿಯಂನ ಖ್ಯಾತಿ ಹಬ್ಬಿದೆ.
ಗೋಮಟೇಶ್ವರ
ಧರ್ಮಸ್ಥಳದ ಮತ್ತೊಂದು ಪ್ರಮುಖ ಆಕರ್ಷಣೆ ಬಾಹುಬಲಿ ಅಥವಾ ಗೋಮಟೇಶ್ವರ ಪ್ರತಿಮೆ. ಏಕಶಿಲೆಯಿಂದ ಕೆತ್ತಲ್ಪಟ್ಟ ಗೋಮಟೇಶ್ವರ ಕರ್ನಾಟಕದಲ್ಲಿರುವ ಐದು ಬಾಹುಬಲಿ ಪ್ರತಿಮೆ ಪೈಕಿ, ಶ್ರವಣಬೆಳಗೊಳ ಹೊರತುಪಡಿಸಿದರೆ ಅತಿ ಎತ್ತರದ್ದು. 1983ರಲ್ಲಿ ನಿರ್ಮಾಣವಾದ ಗೋಮಟೇಶ್ವರ ಮೂರ್ತಿಯ ಎತ್ತರ ಮೂವತ್ತೊಂಬತ್ತು ಅಡಿ. ಅಂದರೆ ಸುಮಾರು ಹನ್ನೆರಡು ಮೀಟರ್.

ಹದಿಮೂರು ಅಡಿ ಎತ್ತರದ ಪೀಠದ ಮೇಲೆ ನಿಂತಿರುವ ಗೋಮಟೇಶ್ವರ ಮೂರ್ತಿಯ ತೂಕ ಬರೋಬ್ಬರಿ ನೂರಾ ಎಪ್ಪತ್ತೈದು ಟನ್. ಜೈನಧರ್ಮೀಯರ ಆರಾಧ್ಯದೈವವಾಗಿರುವ ಗೋಮಟೇಶ್ವರನನ್ನು ವೀಕ್ಷಿಸಲೆಂದೂ ಸಹಸ್ರಾರು ಮಂದಿ ಇಲ್ಲಿಗೆ ಬರುವುದುಂಟು.
ಶ್ರೀ ಕ್ಷೇತ್ರ ಧರ್ಮಸ್ಥಳ ಹಲವು ದೃಷ್ಟಿಕೋನಗಳಿಂದ ಬಹುವಿಶೇಷವೆನಿಸುತ್ತದೆ. ಶ್ರೀ ಮಂಜುನಾಥೇಶ್ವರ ದೇವಾಲಯ ಜೈನಧರ್ಮೀಯರಾಗಿರುವ ವೀರೇಂದ್ರ ಹೆಗ್ಗಡೆ ಕುಟುಂಬದಿಂದ ನಿರ್ಮಿಸಲ್ಪಟ್ಟು ಅವರದ್ದೇ ಆಡಳಿತಕ್ಕೆ ಒಳಪಟ್ಟಿದೆ. ಆದರೆ ಇಲ್ಲಿ ವೈಷ್ಣವ ಸಿದ್ಧಾಂತ ಅನುಸರಿಸುವ ಹಿಂದೂ ಅರ್ಚಕರಿಂದ ಪೂಜೆ ನಡೆಯುತ್ತದೆ. ಬರುವ ಭಕ್ತಾದಿಗಳಿಗೆ ಜಾತಿಧರ್ಮದ ಹಂಗಿಲ್ಲ. ಜೈನರೂ ಮತ್ತು ಹಿಂದೂಗಳು ಸಮಾನ ಧಾರ್ಮಿಕ ನಂಬಿಕೆಯಿಂದ ಧರ್ಮಸ್ಥಳ ಯಾತ್ರೆ ಕೈಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಇದೊಂದು ಬಹುವಿಶಿಷ್ಠ ಧಾರ್ಮಿಕ ಪ್ರವಾಸ ಕೇಂದ್ರ ಎನ್ನಬಹುದಾಗಿದೆ.
ವೆಲ್ ನೆಸ್ ಟೂರಿಸಂ ದೃಷ್ಟಿಯಿಂದ ಶಾಂತಿವನ, ಸೌಖ್ಯವನ ಮತ್ತು ಕ್ಷೇಮವನ ಗಮನಾರ್ಹವಾದರೆ, ಧಾರ್ಮಿಕ ಕೋನದಿಂದ ಶ್ರೀಮಂಜುನಾಥೇಶ್ವರ ದೇವಾಲಯ ಮತ್ತು ಗೋಮಟೇಶ್ವರ ಪ್ರತಿಮೆಗಳು ಪ್ರಮುಖವಾಗುತ್ತವೆ. ಪಾರಂಪರಿಕ ದೃಷ್ಟಿಕೋನದಿಂದ ನೋಡಲು ಮಂಜೂಷ ಮ್ಯೂಸಿಯಂ ಸಿಗುತ್ತದೆ. ಮಾನವೀಯ ಆಯಾಮವಾಗಿ ಅನ್ನದಾಸೋಹದ ಅನ್ನಪೂರ್ಣ ಕಾಣಸಿಗುತ್ತದೆ.
ಇದೊಂದು ವಿಶಿಷ್ಟ ಯಾತ್ರಾ ಪ್ಯಾಕೇಜ್ ಅನ್ನಬಹುದಲ್ಲವೇ?
ಆನ್ ಲೈನ್ ಬುಕಿಂಗ್ ಗಾಗಿ
ಸೌಖ್ಯವನ:
+91 9945801594, +91 9483932325
ಶಾಂತಿವನ:
+91 9483798277, +91 9902116277,