Saturday, May 16, 2026
Saturday, May 16, 2026

ಮರಳುಗಾಡಿನಲ್ಲೊಂದು ಹಿಮಲೋಕ

ದುಬೈ ಎಂದಾಗ ಮೊದಲು ನೆನಪಾಗುವುದು ಎತ್ತರದ ಕಟ್ಟಡಗಳು,ಬಿರು ಬಿಸಿಲಿನ ವಾತಾವರಣ ಮತ್ತು ಐಷಾರಾಮಿ ಜೀವನ ಶೈಲಿ. ಆದರೆ ಇದೇ ಮರಳುನಾಡಿನಲ್ಲಿ ಹಿಮದ ನಡುವೆ ಪೆಂಗ್ವಿನ್‌ಗಳ ಜತೆಗೆ ಕುಳಿತು ಆಹಾರ ಸೇವಿಸುವ ವಿಶಿಷ್ಟ ಅನುಭವ ಲಭ್ಯವಿರುವುದು ಅಚ್ಚರಿಯ ಸಂಗತಿ. ʻಸ್ಕೀ ದುಬೈ ರೆಸ್ಟೋರೆಂಟ್ʼ ಎಂಬ ವಿಶೇಷ ಪರಿಕಲ್ಪನೆಯೊಂದು ಸದ್ಯ ದೇಶ ವಿದೇಶಿಗಳನ್ನು ದುಬೈನತ್ತ ಮುಖ ಮಾಡಲು ಕಾರಣವಾಗಿದೆ.

ವಿಶ್ವದ ಸುಂದರವಾದ ದೇಶಗಳ ಪೈಕಿ ಅರಬ್ಬರ ನಾಡು ದುಬೈ ಅಗ್ರಸ್ಥಾನದಲ್ಲಿದೆ. ಇಲ್ಲಿ ಅಚ್ಚರಿಯೆನಿಸುವ ಅದೆಷ್ಟೋ ಪ್ರವಾಸಿ ಆಕರ್ಷಣೆಗಳಿದ್ದು, ಜೀವನದಲ್ಲಿ ಒಮ್ಮೆಯಾದರೂ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊಳ್ಳಬೇಕೆಂಬುದು ಬಹುತೇಕರ ಕನಸು. ಬುರ್ಜ್ ಖಲೀಫಾ, ಪಾಮ್ ಜುಮೇರಾ, ಮಿರಾಕಲ್ ಗಾರ್ಡನ್, ದುಬೈ ಫ್ರೇಮ್, ಮರೀನಾ, ದುಬೈ ಡಾಲ್ಫಿನೇರಿಯಂ, ಬುರ್ಜ್ ಅಲ್ ಅರಬ್, ಗ್ಲೋಬಲ್ ವಿಲೇಜ್, ಮಾಲ್ , ಡೆಸರ್ಟ್ ಸಫಾರಿ, ಗಾರ್ಡನ್ ಗ್ಲೋ, ಜುಮೇರಾ ಮಸೀದಿ ಹೀಗೆ ದುಬೈನ ಆಕರ್ಷಣೆಗಳು ಹಲವಾದರೂ ಈ ನಡುವೆ ದುಬೈನ ಮಾಲ್‌ ಆಫ್‌ ಎಮಿರೇಟ್ಸ್‌ಗೆ ಭೇಟಿ ನೀಡುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: ಜಿರಾಫ್ ಮ್ಯಾನರ್ : ಜಿರಾಫೆಯೊಂದಿಗೆ ಮಸ್ತ್‌ ಮೀಲ್ಸ್‌

ಇದಕ್ಕೂ ಒಂದು ಕಾರಣವಿದೆ. ಮಾಲ್‌ ಆಫ್‌ ಎಮಿರೇಟ್ಸ್‌ನಲ್ಲಿರುವ ಸ್ಕೀ ದುಬೈನಲ್ಲಿ ಪ್ರವಾಸಿಗರಿಗಾಗಿ ಕೃತಕ ಹಿಮಲೋಕವನ್ನೇ ಸೃಷ್ಟಿಸಲಾಗಿದೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್‌ನಂಥ ಹಿಮಕ್ರೀಡೆಗಳನ್ನು ಆಡಲು ಇಲ್ಲಿಗೆ ಬರುವವರ ಸಂಖ್ಯೆಯ ಜತೆಗೆ ಇಲ್ಲೇ ಇರುವ ʻಸ್ಕೀ ದುಬೈ ರೆಸ್ಟೋರೆಂಟ್‌ʼನಲ್ಲಿ ಪೆಂಗ್ವಿನ್‌ಗಳೊಂದಿಗೆ ಉಪಾಹಾರ, ಮಧ್ಯಾಹ್ನ ಮಾತ್ರವಲ್ಲದೆ ರಾತ್ರಿಯ ಊಟವನ್ನು ಸವಿಯಲು ಬರುವವರಿಗೇನೂ ಕಮ್ಮಿ ಇಲ್ಲ.

New Project (24)

ಪೆಂಗ್ವಿನ್‌ಗಳೊಂದಿಗೆ ಆಟ-ಊಟ

ಪೆಂಗ್ವಿನ್‌ಗಳನ್ನು ನೋಡುವುದೇ ಖುಷಿಯ ಅನುಭವ ನೀಡುತ್ತದೆ. ಅದರಲ್ಲೂ ಅವುಗಳ ಮುದ್ದಾದ ನಡಿಗೆ, ತುಂಟತನ ನೋಟ, ತರಲೆಯಾಟಗಳಂತೂ ಎಂಥವರಲ್ಲೂ ಮಂದಹಾಸ ಮೂಡಿಸುತ್ತದೆ. ಇಂಥ ಪೆಂಗ್ವಿನ್‌ ಗಳನ್ನು ನೋಡುವುದೇ ಸಂಭ್ರಮವೆನ್ನುವಾಗ ಅವುಗಳ ಜತೆಗೆ ಕುಳಿತು ತುಂಟಾಟಗಳನ್ನು ನೋಡುತ್ತಾ ಊಟ ಮಾಡಿದರೆ ಹೇಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸ್ಕೀ ದುಬೈನ ಸ್ಕೀ ರೆಸ್ಟೋರೆಂಟ್‌ನಲ್ಲಿ, ಈ ವಿಶಿಷ್ಟ ಊಟದ ಅನುಭವವನ್ನು ಅತಿಥಿಗಳಿಗಾಗಿ ನೀಡಲಾಗುತ್ತದೆ.

ಏಕಾಏಕಿ ಹೋಗಿ ಪೆಂಗ್ವಿನ್‌ಗಳೊಂದಿಗೆ ಕಾಲಕಳೆಯಬೇಕು, ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕೆಂದರೆ ಅದು ಸಾಧ್ಯವೇ ಇಲ್ಲ. ಬದಲಾಗಿ ಮುಂಗಡವಾಗಿ ಬುಕಿಂಗ್‌ ಮಾಡಿಕೊಂಡು ಅಲ್ಲಿಗೆ ಭೇಟಿ ನೀಡಿದರೆ ರೆಸ್ಟೋರೆಂಟ್‌ ಒಳಾಂಗಣಕ್ಕೆ ಬರುತ್ತಿದ್ದಂತೆಯೇ ಹಿಮದ ವಾತಾವರಣಕ್ಕೆ ನಿಮ್ಮನ್ನು ಹೊಂದುಕೊಳ್ಳುವಂತೆ ಮಾಡುವ ಉಡುಗೆಗಳನ್ನು ನೀಡುತ್ತಾರೆ. ನಂತರ ಸುಂದರವಾಗಿ ವಿನ್ಯಾಸಗೊಳಿಸಲಾದ ಹಿಮ ಗುಹೆಯೊಳಗೆ ಕರೆದೊಯ್ಯುತ್ತಾರೆ. ಅಲ್ಲಿ ಮಂಜುಗಡ್ಡೆಯಿಂದ ಮಾಡಿದ ಮೇಜುಗಳು ಮತ್ತು ಕುರ್ಚಿಗಳು ಸೇರಿದಂತೆ ಮಂಜಿನ ಲೋಕವನ್ನೇ ಸೃಷ್ಟಿಸಿರುತ್ತಾರೆ. ಹಿಮದ ಲೋಕವನ್ನು ಕಣ್ತುಂಬಿಕೊಳ್ಳುವ ಮುನ್ನವೇ ಮೆತ್ತನೆಯ ಬೆಡ್‌ ಶೀಟ್‌ ಹಾಗೂ ವೆಲ್‌ಕಮ್‌ ಡ್ರಿಂಕ್ಸ್‌ ನಿಮ್ಮ ಮುಂದಿಟ್ಟುಬಿಡುತ್ತಾರೆ.

ವೆಲ್‌ಕಮ್‌ ಡ್ರಿಂಕ್ಸ್‌ ಹೀರುತ್ತಲೇ ಹಿಮದ ವಾರಾವರಣಕ್ಕೆ ತಕ್ಕಂತೆ ಸಿದ್ಧಪಡಿಸಲಾದ ವೆಜ್‌ ಹಾಗೂ ನಾನ್‌ ವೆಜ್‌ ಮೆನು ನೋಡುತ್ತಾ ಬಿಸಿ ಸೂಪ್, ಗ್ರಿಲ್ ಮಾಡಿದ ಮಾಂಸಾಹಾರ, ಪಾಸ್ತಾ, ಹಾಗೂ ಸಿಹಿ ತಿನಿಸುಗಳು, ವೆಜ್‌ ಖಾದ್ಯಗಳು ಹೀಗೆ ಯಾವುದೋ ಬೇಕೋ ಅದನ್ನು ಆರ್ಡರ್‌ ಕೊಡುವ ವೇಳೆಗೆ ರೆಸ್ಟೋರೆಂಟ್‌ ಒಳಗೆ ಒಂದೊಂದಾಗಿ ಪೆಂಗ್ವಿನ್‌ಗಳ ಆಗಮನವಾಗುತ್ತದೆ. ಮಾರ್ಗದರ್ಶಕ ನಿರ್ದೇಶನಗಳಿಗೆ ಅನುಸಾರವಾಗಿ ಪೆಂಗ್ವಿನ್‌ಗಳು ತಾಳ ಹಾಕುತ್ತವೆ. ಅತಿಥಿಗಳನ್ನು ರಂಜಿಸಲು ಸುತ್ತಮುತ್ತಲೂ ಓಡುತ್ತಾ ಫೊಟೋ, ವಿಡಿಯೋಗಳಿಗೆ ಫೋಸ್‌ ಕೊಡುವ ರೀತಿಯಂತೂ ಇನ್ಯಾವುದೋ ಲೋಕದಲ್ಲಿರುವ ಅನುಭವ ನೀಡುತ್ತದೆ.

New Project (23)

ಸ್ಕೀ ಡಿನ್ನರ್ ದುಬೈ ಬುಕಿಂಗ್‌

ಪೆಂಗ್ವಿನ್‌ ಜತೆಗೆ ಕಾಲ ಕಳೆಯುವುದಕ್ಕೆ, ಆಹಾರ ಸವಿಸುವುದಕ್ಕೂ ಮುಂಡಗ ಬುಕಿಂಗ್‌ ಅತಿ ಅಗತ್ಯ. https://www.skidxb.com/en-ae/ski-dubai/passes-packages/penguin-encounters ಎಂಬ ವೆಬ್‌ ಸೈಟ್‌ ಮೂಲಕ ಪಾಸ್‌ಗಳು ಹಾಗೂ ಪ್ಯಾಕೇಜ್‌ ಗಳ ಬಗೆಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಒಟ್ಟಿನಲ್ಲಿ ಸ್ಕೀ ದುಬೈ ರೆಸ್ಟೋರೆಂಟ್‌ನಲ್ಲಿ ದೊರೆಯುವ ಅಪರೂಪದ ಅನುಭವ ಬೇರೆಲ್ಲೂ ಸಿಗಲಾರದು. ಮರಳುನಾಡಿನಲ್ಲಿ ಹಿಮದ ಮಧ್ಯೆ ಕುಳಿತು ಪೆಂಗ್ವಿನ್‌ಗಳೊಂದಿಗೆ ಸುಂದರ ಸಮಯವನ್ನು ಕಳೆಯುತ್ತಾ, ವಿಶೇಷವಾದ ಆಹಾರವನ್ನು ಸವಿಯಬೇಕೆಂದರೆ ನಿಮ್ಮ ದುಬೈ ಪ್ರವಾಸದ ವೇಳೆ ಮುಂಗಡವಾಗಿ ʻಸ್ಕೀ ದುಬೈ ರೆಸ್ಟೋರೆಂಟ್‌ʼನಲ್ಲಿ ಬುಕಿಂಗ್‌ ಮಾಡಿಕೊಳ್ಳಿ.

ಪೆಂಗ್ವಿನ್‌ ಒಡನಾಟ ಸುಲಭವಲ್ಲ

ಅಲ್ಟಿಮೆಟ್‌ ಪೆಂಗ್ವಿನ್‌ ಎಕ್ಸ್‌ಪೀರಿಯನ್ಸ್‌ - 23,248 ರು.

ಬ್ರೇಕ್‌ಫಾಸ್ಟ್‌ ವಿದ್ ಪೆಂಗ್ವಿನ್‌ - 5,037 ರು.

ಲಂಚ್‌ ವಿದ್ ಪೆಂಗ್ವಿನ್‌- 9,015 ರು.

ಡಿನ್ನರ್‌ ವಿದ್ ಪೆಂಗ್ವಿನ್‌- 9,015 ರು.

ದಕ್ಷಿಣ ಭಾರತದಲ್ಲೇ ಮೊದಲ ಪೆಂಗ್ವಿನ್‌ ಪಾರ್ಕ್‌

ಪೆಂಗ್ವಿನ್ಗಳು ಅಂಟಾರ್ಟಿಕಾ ಪ್ರದೇಶದ ದೇಶಗಳಾದ ದಕ್ಷಿಣ ಆಫ್ರಿಕಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಚಿಲಿ, ಗಲಪಗೋಸ್‌ ದ್ವೀಪ ಇತ್ಯಾದಿ ಕಡೆ ಜೀವಿಸುವ ಜಲ ಜೀವಿಗಳು. ಇವು ಉಷ್ಟಾಂಶ ಇರುವಲ್ಲಿ ಜೀವಿಸುವುದಿಲ್ಲ. ಆದರೆ ಭಾರತದಲ್ಲಿ ಪೆಂಗ್ವಿನ್‌ಗಳನ್ನು ನೋಡಬೇಕೆಂದರೆ ಮುಂಬೈನ ವೀರಮಾತಾ ಜೀಜಾಬಾಯಿ ಭೋಸಲೆ ಉದ್ಯಾನ ಹಾಗೂ ಅಹಮದಾಬಾದ್‌ನಲ್ಲಿರುವ ಗುಜರಾತ್ ವಿಜ್ಞಾನ ನಗರದ ಅಕ್ವಾಟಿಕ್‌ ಸಯನ್ಸ್‌ ಗ್ಯಾಲರಿಯಲ್ಲಷ್ಟೇ ಅವಕಾಶ ಸಿಗುತ್ತದೆ. ಇತ್ತೀಚಿನ ವರದಿಗಳ ಪ್ರಕಾರ ಮೈಸೂರಿನ ಕಾರಂಜಿ ಕೆರೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಪೆಂಗ್ವಿನ್‌ ಪಾರ್ಕ್‌ ನಿರ್ಮಾಣಕ್ಕೆ ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ಸಮಗ್ರ ಯೋಜನಾ ವರದಿ ತಯಾರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇನ್ನು, ಈ ಪೆಂಗ್ವಿನ್‌ ಪಾರ್ಕ್‌ ಕರ್ನಾಟಕದಲ್ಲಿ ಹಾಗೂ ದಕ್ಷಿಣ ಭಾರತದಲ್ಲೇ ಮೊದಲನೆಯದಾಗಿರಲಿದೆ

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ