Friday, September 26, 2025
Friday, September 26, 2025

ಚಿಕ್ಕಮಗಳೂರು ಟು ಬೆಂಗಳೂರು ಜರ್ನಿ; ಇದು ಸಾ.ನಾ. ರಮೇಶ್‌ರ ಸಾಧನೆಯ ಕಹಾನಿ!

ಅವರ ಆರಂಭಿಕ ಸಂಬಳ ಮುನ್ನೂರ ಐವತ್ತು ರೂಪಾಯಿ. ವೃತ್ತಿ ಬದುಕಿನಲ್ಲಿ ಸಾಕಷ್ಟು ಸೈಕಲ್‌ ಹೊಡೆದ ಸಾ ನಾ ರಮೇಶ್‌ ಹಲವು ವರ್ಷಗಳ ನಂತರ ರೆಸಾರ್ಟ್‌ ಉದ್ಯಮದತ್ತ ವಾಲಿದರು. ಒಂದೊಂದೇ ಕನಸುಗಳನ್ನು ತಂದಿಟ್ಟುಕೊಂಡರು. ತಮ್ಮ ಗೆಳೆಯನ ಜತೆಗೂಡಿ ಕನಸುಗಳನ್ನು ನನಸು ಮಾಡಿಕೊಂಡರು. ಇಂದು ಪ್ರತಿಯೊಬ್ಬರೂ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾರೆ. ವಿಶೇಷವಾದ ಮತ್ತು ವಿಸ್ಮಯ ಲೋಕವನ್ನೇ ತೆರೆದಿಡುವ ನಾಲ್ಕು ರೆಸಾರ್ಟ್‌ಗಳನ್ನು ನಿರ್ಮಿಸಿದ್ದಾರೆ.

ʼರೆಸಾರ್ಟ್‌ ಉದ್ಯಮಕ್ಕೆ ನಾನು ಆಕಸ್ಮಿಕವಾಗಿ ಬಂದವನು. ಈ ಉದ್ಯಮದ ಓನಾಮವೂ ನನಗೆ ಗೊತ್ತಿರಲಿಲ್ಲ. ಚಿಕ್ಕಮಗಳೂರಿನ ವಾತಾವರಣದಲ್ಲಿ ಬೆಳೆದ ನಾನು ಅನಿವಾರ್ಯವಾಗಿ ಬೆಂಗಳೂರಿಗೆ ಬರಬೇಕಾಯಿತು. ಸಣ್ಣ ಸಂಬಳಕ್ಕೆ ವರ್ಷಪೂರ್ತಿ ದುಡಿಯಬೇಕಾಯಿತು. ಹಳ್ಳಿಯ ವಾತಾವರಣವನ್ನು ಮತ್ತು ಮಲೆನಾಡಿನ ಶುದ್ಧ ಪರಿಸರದ ಗಾಳಿಯನ್ನು ಕಳೆದುಕೊಂಡು ನಾನು ಒದ್ದಾಡಿದೆ. ಬೆಂಗಳೂರು ಜನಜೀವನದಿಂದ ಬೇಸತ್ತು ಹೋದೆ. ಸಣ್ಣ ವಠಾರದಂಥ ಮನೆಗಳಲ್ಲಿ ವಾಸಿಸಿವುದು ಹಿಂಸೆಯೆನಿಸಿತು. ಆಗ ಬೆಂಗಳೂರಿನಲ್ಲಿಯೇ ಮಲೆನಾಡಿನ ವಾತಾವರಣ ನಿರ್ಮಿಸಿದರೆ ಹೇಗೆ? ಅನ್ನಿಸಿತು. ಪೂರ್ಣ ಪ್ರಮಾಣದ ವಾತಾವರಣವನ್ನು ನಿರ್ಮಿಸುವುದು ನಿಜಕ್ಕೂ ಕಷ್ಟ. ಆದರೆ ಆರ್ಟಿಫಿಷಿಯಲ್‌ ವಾತಾವರಣವನ್ನು ಕಟ್ಟಿಕೊಡಬಹುದು. ಅದು ಸಾಧ್ಯವಿರುವುದು ರೆಸಾರ್ಟ್‌ ನಿಂದ ಮಾತ್ರ ಎಂಬುದು ಗೊತ್ತಾಯಿತು. ನಗರದ ಧೂಳು ಕುಡಿದು ಟ್ರಾಫಿಕ್‌ನ ಕಿರಿಕಿರಿ ಅನುಭವಿಸಿ ದಣಿದ ಜನರಿಗೆ ವೀಕೆಂಡ್‌ನಲ್ಲಿ ರೆಸಾರ್ಟ್‌ಗಳು ಒಳ್ಳೆಯ ಅನುಭೂತಿಗಳನ್ನು ಕೊಡುತ್ತವೆ. ಹಾಗಾಗಿ ನಾನು ನನ್ನ ಗೆಳೆಯ ಸೇರಿ ಈ ಉದ್ಯಮವನ್ನು ಆರಂಭಿಸಿದೆವು. ಇಂದು ಅತ್ಯಂತ ಯಶಸ್ವಿಯಾಗಿ ನಾಲ್ಕು ರೆಸಾರ್ಟ್‌ ಗಳನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಆತ್ಮವಿಶ್ವಾಸ ಮತ್ತು ಧೃಢನಿರ್ಧಾರದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಸಿಕ್ಕ ಅವಕಾಶಗಳನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು. ನಾನು ಅವಕಾಶಗಳನ್ನು ಬಳಸಿಕೊಂಡೆ. ಆ ಕಾರಣದಿಂದ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತುʼ ಇಷ್ಟು ಸುದೀರ್ಘವಾಗಿ ಮಾತನಾಡಿದವರು ಸಾ ನಾ ರಮೇಶ್.‌

ಆರಂಭಿಕ ವೃತ್ತಿ ಬದುಕಿನಲ್ಲಿ ಮುನ್ನೂರ ಐವತ್ತು ರೂಪಾಯಿ ಸಂಬಳಕ್ಕೆ ಸೇರಿ ಇಂದು ನಾಲ್ಕು ರೆಸಾರ್ಟ್‌ಗಳ ಮಾಲೀಕರಾಗಿರುವ ಅಸಾಮಾನ್ಯ ಸಾಧಕ. ರೆಸಾರ್ಟ್‌ ಉದ್ಯಮದಲ್ಲಿ ಅವರದ್ದು ಅಸಾಧಾರಣ ಸಾಧನೆ. ಅವರು ನಡೆದು ಬಂದ ಹಾದಿ ಎಂಥವರಿಗೂ ಸ್ಫೂರ್ತಿ ಮತ್ತು ಮಾದರಿ.

guhantara

ಚಿಕ್ಕಮಗಳೂರಿನಲ್ಲಿ ಜನಿಸಿದ ಸಾ ನಾ ರಮೇಶ್‌ ಡಿಪ್ಲೋಮಾ ಸಿವಿಲ್‌ ಪದವೀಧರ. ಚಿಕ್ಕಮಗಳೂರಿನಲ್ಲಿ ಒಂದು ವರ್ಷ ಸರ್ವೇಯರ್‌ ಆಗಿ ದುಡಿದ ಅವರು‌ ಅನಿವಾರ್ಯವಾಗಿ ಬೆಂಗಳೂರಿಗೆ ಬರಬೇಕಾಯಿತು. ಇಂಜಿನಿಯರಿಂಗ್‌ ಹಿನ್ನೆಲೆಯ ಅವರು 1987 ರಲ್ಲಿ ವೃತ್ತಿಗೆ ಸೇರಿದರು. ಅವರ ಆರಂಭಿಕ ಸಂಬಳ ಮುನ್ನೂರ ಐವತ್ತು ರೂಪಾಯಿ. ವೃತ್ತಿ ಬದುಕಿನಲ್ಲಿ ಸಾಕಷ್ಟು ಸೈಕಲ್‌ ಹೊಡೆದ ಸಾ ನಾ ರಮೇಶ್‌ ಹಲವು ವರ್ಷಗಳ ನಂತರ ರೆಸಾರ್ಟ್‌ ಉದ್ಯಮದತ್ತ ವಾಲಿದರು. ಒಂದೊಂದೇ ಕನಸುಗಳನ್ನು ತಂದಿಟ್ಟುಕೊಂಡರು. ತಮ್ಮ ಗೆಳೆಯನ ಜತೆಗೂಡಿ ಕನಸುಗಳನ್ನು ನನಸು ಮಾಡಿಕೊಂಡರು. ಇಂದು ಪ್ರತಿಯೊಬ್ಬರೂ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾರೆ. ವಿಶೇಷವಾದ ಮತ್ತು ವಿಸ್ಮಯ ಲೋಕವನ್ನೇ ತೆರೆದಿಡುವ ನಾಲ್ಕು ರೆಸಾರ್ಟ್‌ಗಳನ್ನು ನಿರ್ಮಿಸಿದ್ದಾರೆ. ರಮೇಶ್‌ ರೆಸಾರ್ಟ್‌ ಉದ್ಯಮಿ ಅಷ್ಟೇ ಅಲ್ಲ. ಅವರೊಬ್ಬ ಪ್ರತಿಭಾವಂತ ವಾಸ್ತುಶಿಲ್ಪಿ, ಪ್ರಭಾವಶಾಲಿ ಕವಿ, ಲೇಖಕ ಮತ್ತು ಮಾತುಗಾರ. ಈವರೆಗೆ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ʼಶ್ರದ್ಧೆಯೊಂದಿದ್ದರೆ ಏನು ಬೇಕಾದರೂ ಮಾಡಬಹುದು, ಸಮಯವಿಲ್ಲ ಎಂಬುದು ಕೈಲಾಗದವರ ನೆಪ ಅಷ್ಟೇ. ಇಷ್ಟೆಲ್ಲ ಮಾಡಿಯೂ ಪ್ರತಿದಿನ ನನ್ನಲ್ಲಿ ಸಮಯ ಉಳಿಯುತ್ತದೆʼ ಹೀಗೆನ್ನುತ್ತಾರೆ ಸಾ ನಾ ರಮೇಶ್.

siri resort

ನಾಲ್ಕು ರೆಸಾರ್ಟ್‌ಗಳ ಮಾಲೀಕ

ಸಾ ನಾ ರಮೇಶ್‌ ಅವರ ಒಡೆತನದಲ್ಲಿ ನಾಲ್ಕು ರೆಸಾರ್ಟ್‌ಗಳಿವೆ. ಜಗದ ಸೌಂದರ್ಯವನ್ನು ರೆಸಾರ್ಟ್‌ ಒಳಗೆ ತರುವುದು ಅವರ ಧ್ಯೇಯ. ರಮೇಶ್‌ ಮತ್ತು ಅವರ ಗೆಳೆಯನ ಸಾರಥ್ಯದಲ್ಲಿ ನಡೆಯುತ್ತಿರುವ ಗುಹಾಂತರ ರೆಸಾರ್ಟ್‌ ರಾಜ್ಯವಷ್ಟೇ ಅಲ್ಲ ದೇಶ-ವಿದೇಶದಲ್ಲಿಯೂ ಹೆಚ್ಚು ಪ್ರಸಿದ್ಧಿಪಡೆದಿದೆ. ಕೃತಕ ಗುಹೆಗಳು ಮತ್ತು ಪ್ರಾಕೃತಿಕ ವಾತಾವರಣವನ್ನು ನಿರ್ಮಿಸಿ ರೆಸಾರ್ಟ್‌ನ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಆತಿಥ್ಯದಲ್ಲೂ ವಿಶ್ವಾಸಗಳಿಸಿದ್ದಾರೆ. ಗುಹಾಂತರ ರೆಸಾರ್ಟ್‌ ಬೆಂಗಳೂರಿನ ಕನಕಪುರ ರಸ್ತೆಯಲ್ಲಿದೆ. ಇನ್ನು ಇವರ ಮಾಲೀಕತ್ವದ ಮತ್ತೊಂದು ಪ್ರಸಿದ್ಧ ರೆಸಾರ್ಟ್‌ ಆದ ಶಿಲ್ಹಾಂದರಾ ರಾಮನಗರದಲ್ಲಿದೆ. ರಮೇಶ್‌ ತಮ್ಮ ಹುಟ್ಟೂರಾದ ಚಿಕ್ಕಮಗಳೂರಿನಲ್ಲೂ ಸಿರಿ ನೇಚರ್‌ ಮತ್ತು ಜರಿ ಎಂಬ ಎರಡು ರೆಸಾರ್ಟ್‌ಗಳನ್ನು ನಿರ್ಮಿಸಿದ್ದಾರೆ. ಪ್ರತಿ ರೆಸಾರ್ಟ್‌ ಕೂಡ ಒಂದಕ್ಕಿಂತ ಒಂದು ಭಿನ್ನ ಮತ್ತು ವಿಭಿನ್ನ. ನಾಲ್ಕು ರೆಸಾರ್ಟ್‌ ನಲ್ಲೂ ಸಾ ನಾ ರಮೇಶ್‌ ಅವರೊಳಗಿರುವ ವಾಸ್ತುಶಿಲ್ಪಿಯ ಕೈಚಳಕ ಕಾಣುತ್ತದೆ.

cave resort

ದೋಸ್ತಿಗಳ ಸಾಧನೆ

ರಾಜ್ಯ ಮತ್ತು ಹೊರ ರಾಜ್ಯದ ಪ್ರವಾಸಿಗರನ್ನು ಸೆಳೆಯುವ ರೆಸಾರ್ಟ್‌ ಗಳನ್ನು ನಿರ್ಮಿಸಿರುವ ಸಾ ನಾ ರಮೇಶ್‌ ಅವರ ಬೆನ್ನ ಹಿಂದೆ ಮತ್ತು ಜತೆಗೆ ಅವರ ಗೆಳೆಯನಿದ್ದಾನೆ. ಇವರಿಬ್ಬರೂ ಜೋಡಿಜೀವ. ಆಶ್ಚರ್ಯವೆಂದರೆ ಸಾ ನಾ ರಮೇಶ್‌ ಅವರ ಗೆಳೆಯನ ಹೆಸರೂ ರಮೇಶ್.‌‌ ಇದು ರಮೇಶಮಯ. R² ಸಾಧನೆ ಎಂತಲೂ ಕರೆಯಬಹುದು. ಸಿವಿಲ್‌ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಗಿಸಿದ್ದವರು ಒಟ್ಟಿಗೆ ನೌಕರಿಗೆ ಸೇರಿದರು. ಅಕ್ಕಪಕ್ಕದ ಮನೆಯಲ್ಲೇ ವಾಸ ಮಾಡಿದರು. ಎಲ್ಲಿಗೆ ಹೋದರೂ ಏನು ಮಾಡಿದರೂ ಎಲ್ಲ ಒಟ್ಟೊಟ್ಟಿಗೆ. ಬೆಂಗಳೂರಿನ ಜೀವನಕ್ಕೆ ಬೇಸತ್ತ ಗೆಳೆಯರು ರೆಸಾರ್ಟ್‌ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಸಾ ನಾ ರಮೇಶ್‌ ಕ್ರಿಯೇಟಿವ್‌ ಐಡಿಯಾಗಳತ್ತ ಗಮನಕೊಟ್ಟರೆ ಅವರ ಗೆಳೆಯ ರಮೇಶ್‌ ವ್ಯಾವಹಾರಿಕ ಜವಾಬ್ದಾರಿಗಳನ್ನು ನಿಭಾಯಿಸಿದರು. ಇಬ್ಬರೂ ತಮ್ಮ ಕನಸಿನ ಉದ್ಯಮವನ್ನು ದಡ ಮುಟ್ಟಿಸಿದರು. ಇಂದು ಇವರಿಬ್ಬರ ಮಾಲೀಕತ್ವದ ನಾಲ್ಕು ರೆಸಾರ್ಟ್‌ಗಳು ಪ್ರಸಿದ್ಧಿ ಪಡೆದಿದ್ದು ಲಾಭದಲ್ಲಿವೆ. ʼನಮ್ಮಿಬ್ಬರದ್ದು ಮೂರು ದಶಕಗಳ ಶುದ್ಧ ಸ್ನೇಹ. ನಾವಿಬ್ಬರು ತಳಮಟ್ಟದಿಂದ ಮೇಲಕ್ಕೆ ಎದ್ದವರು. ಇಷ್ಟೆಲ್ಲ ವ್ಯವಹಾರಗಳ ಮಧ್ಯೆಯೂ ನಮ್ಮ ಗೆಳೆತನ ಗಟ್ಟಿಯಾಗಿ ಉಳಿದುಕೊಂಡಿದೆ. ನಮ್ಮಿಬ್ಬರ ಕುಟುಂಬಗಳ ಮಧ್ಯೆ ಸಾಮರಸ್ಯವಿದೆ. ಪರಸ್ಪರ ಇಬ್ಬರಿಗೂ ಗೊತ್ತಾಗದಂತೆ ನಾವು ಯಾವ ವ್ಯವಹಾರಗಳಿಗೂ ಕೈ ಹಾಕುವುದಿಲ್ಲ. ನಮ್ಮಿಬ್ಬರ ನಡುವೆ ನಂಬಿಕೆಯ ಸೇತುವೆ ಇದೆ. ಇಷ್ಟು ವರ್ಷಗಳ ನಮ್ಮ ಸ್ನೇಹದಲ್ಲಿ ಮುನಿಸು ಮತ್ತು ಮನಸ್ತಾಪಗಳು ಸುಳಿದಿಲ್ಲ. ಇಬ್ಬರಿಗೂ ಹಣದ ದುರಾಸೆಯಿಲ್ಲ. ಆ ಕಾರಣದಿಂದಲೇ ನಮ್ಮ ಗೆಳೆತನ ಪಾವಿತ್ರ್ಯವನ್ನು ಕಾಪಾಡಿಕೊಂಡಿದೆ. ಮೂರು ದಶಕಗಳಿಂದ ನಾವಿಬ್ಬರೂ ಅಕ್ಕಪಕ್ಕದಲ್ಲೇ ವಾಸವಿದ್ದೇವೆ. ನಮ್ಮ ಕನಸಿನ ಮನೆಯ ಹೆಸರು ʼರಮೇಶ್ವರʼ ನಮ್ಮ ಎಲ್ಲ ಕನಸುಗಳು ಈಡೇರಿವೆ ಎಂದು ನಾನು ಹೇಳುವುದಿಲ್ಲ. ನಾನು ಮತ್ತು ರಮೇಶ್‌ ಇದೀಗ ಮತ್ತೊಂದು ಕನಸಿನ ಬೆನ್ನತ್ತಿದ್ದೇವೆʼ ಎನ್ನುತ್ತಾರೆ ಸಾ ನಾ ರಮೇಶ್.‌

guheshwar

ಅದು ಬರಿ ಮನೆಯಲ್ಲೋ ಅಣ್ಣಾ

ಸ್ವತಃ ವಾಸ್ತುಶಿಲ್ಪಿಯಾದ ಸಾ ನಾ ರಮೇಶ್‌ ಅವರು ವಿಶಾಲವಾದ ಜಾಗದಲ್ಲಿ ಅದ್ಭುತ ಮತ್ತು ವಿಶಿಷ್ಟವಾದ ತಮ್ಮ ಕನಸಿನ ಮನೆಯೊಂದನ್ನು ಕಟ್ಟಿದ್ದಾರೆ. ಆ ಮನೆಯ ಹೆಸರು ʼರಮೇಶ್ವರʼ ಅದು ಜೀವದ ಗೆಳೆಯರ ನಡುವಿನ ಸ್ನೇಹದ ಸಂಕೇತ. ನೋಡಲು ತೀರಾ ದುಬಾರಿ ಮನೆ ಅನ್ನಿಸಿದರೂ ಕಡಿಮೆ ಬಜೆಟ್‌ ನಲ್ಲಿ ನಿರ್ಮಿಸಿರುವ ಮನೆಯದು. ರಮೇಶ್‌ ಅವರ ಮನೆಯೊಳಗೆ ಹೋಗುತ್ತಿದ್ದಂತೆ ʼ ಬಯಲು ಆಲಯದೊಳಗೊ, ಆಲಯವು ಬಯಲೊಳಗೊʼ ಎಂಬ ಕನಕದಾಸರ ಕೀರ್ತನೆ ನೆನಪಾಗುತ್ತದೆ. ಅವರ ಮನೆಯು ಬೇರೆಲ್ಲ ಮನೆಗಳಿಗಿಂತಲೂ ವಿಭಿನ್ನವಾಗಿದೆ. ಇವರ ಮನೆ ನೆಲ ಮಹಡಿಯಿಂದ ಮೂರು ಅಡಿ ಎತ್ತರದಲ್ಲಿದೆ. ತಾರಸಿಯಿಂದ ಕೆಳಗಿಳಿದು ಮನೆಯನ್ನು ಪ್ರವೇಶಿಸಬೇಕು. ಮನೆಯೊಳಗೆ ನಾಲ್ಕು ದಿಕ್ಕುಗಳಿಂದಲೂ ಬೆಳಕು ಹರಿಯುತ್ತದೆ. ಕತ್ತಲೆ ಕೋಣೆಯಲ್ಲಿ ಮಲಗಿ ಅಭ್ಯಾಸವಿರುವವರಿಗೆ ಸಾ ನಾ ರಮೇಶ್‌ ಅವರ ಮನೆಯಲ್ಲಿ ಜಪ್ಪಯ್ಯವೆಂದರೂ ನಿದ್ದೆ ಹತ್ತುವುದಿಲ್ಲ. ರಮೇಶ್ವರದಲ್ಲಿ ಗೋಡೆಗಳಿಲ್ಲ. ʼನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಲು ನನಗೆ ಇಷ್ಟವಿಲ್ಲ. ಮನೆ ಎಂದರೆ ಎಲ್ಲರೂ ಹೈ ಸೆಕ್ಯುರಿಟಿ ಇರಬೇಕು ಎಂದು ಭಾವಿಸುತ್ತಾರೆ. ದೊಡ್ಡ ಗೋಡೆ, ಎತ್ತರದ ಗೇಟು, ಕಿಟಕಿ ಅದಕ್ಕೆ ಗಟ್ಟಿಯಾದ ಸರಳುಗಳನ್ನು ಹಾಕಿಸುತ್ತಾರೆ. ಉಹೂಂ, ಅದು ಮನೆಯ ಲಕ್ಷಣವನ್ನು ಹಾಳು ಮಾಡುತ್ತದೆʼ ಇದು ರಮೇಶ್‌ ಅವರ ಮಾತುಗಳು. ರಮೇಶ್‌ ಅವರು ಹೊಯ್ಸಳ ಶೈಲಿಯಲ್ಲಿ ತಮ್ಮ ಮನೆಯನ್ನು ನಿರ್ಮಿಸಿದ್ದಾರೆ. ತೇಲುವ ಸಿನಿಮಾ ಥಿಯೇಟರ್‌, ಕಲ್ಯಾಣಿ, ಎರಡು ಓಪನ್‌ ಕಿಚನ್‌, ತೋಟ ಎಲ್ಲವೂ ಇದೆ. ಮನೆಯಾಚೆಗಿನ ತೋಟದಲ್ಲಿ ದೇವಸ್ಥಾನವನ್ನು ಕಟ್ಟಿಕೊಂಡಿದ್ದಾರೆ. ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಲೂ ಇಲ್ಲಿ ಅವಕಾಶವಿದೆ. ಮನೆಯನ್ನೂ ರೆಸಾರ್ಟ್‌ ರೀತಿಯೇ ನಿರ್ಮಿಸಿದ್ದಾರೆ. ಒಟ್ಟಾರೆ ರಮೇಶ್ವರ ಹೋಂ ಟೂರ್‌ಗೆ ಹೇಳಿ ಮಾಡಿಸಿದ ಜಾಗ.

ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ನಮ್ಮ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಮಂದಗತಿಯಲ್ಲಿದೆ. ಬೇರೆಲ್ಲ ಇಲಾಖೆಗಳಿಗಿಂತ ಹೆಚ್ಚಿನ ಆದಾಯವನ್ನು ಪ್ರವಾಸೋದ್ಯಮ ಇಲಾಖೆಯಿಂದ ಗಳಿಸಬಹುದು ಎಂಬುದು ಸರಕಾರಕ್ಕೂ ಗೊತ್ತಿಲ್ಲ, ಇದು ವಿಪರ್ಯಾಸ. ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ರೆಸಾರ್ಟ್‌ ಮತ್ತು ಹೋಂ ಸ್ಟೇ ನಿರ್ಮಾಣಕ್ಕೆ ಸ್ವತಃ ಸರಕಾರಗಳು ಸಹಕರಿಸುತ್ತವೆ. ಅಲ್ಲಿ ಪ್ರಕ್ರಿಯೆ ಕಾರ್ಯಗಳೂ ಸುಲಭವಾಗಿ ನಡೆಯುತ್ತವೆ. ನಮ್ಮಲ್ಲಿ ನೂರಾರು ಪ್ರಕ್ರಿಯೆಗಳಿವೆ. ಎಲ್ಲವೂ ಗೊಂದಲ. ರೆಸಾರ್ಟ್‌ ನಿರ್ಮಾಣಕ್ಕೆ ಅನುಮತಿ ತರುವುದರೊಳಗೆ ಹೈರಾಣಾಗಿ ಬಿಡುತ್ತೇವೆ. ಇನ್ನು ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಫಂಡ್‌ ಇಲ್ಲ. ಬಿಡುಗಡೆಯಾಗುವ ಫಂಡ್‌ ಕೂಡ ಮತ್ಯಾವುದಕ್ಕೋ ಬಳಕೆಯಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯು ನೆಪ ಮಾತ್ರಕ್ಕಷ್ಟೇ ಇದೆ. ಬೇರೆ ರಾಜ್ಯಗಳ ಪ್ರವಾಸ ಜಾಹೀರಾತುಗಳನ್ನು ನಮ್ಮ ರಾಜ್ಯದ ಬಸ್ಸು ಮತ್ತು ಬೇರೆ ಜಾಗಗಳಲ್ಲಿ ನೋಡುತ್ತೇವೆ. ನಮ್ಮ ರಾಜ್ಯದ ಪ್ರವಾಸಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಬೇರೆ ರಾಜ್ಯಗಳಲ್ಲಿ ನೋಡಿದ್ದೇವೆಯೇ? ಎಲ್ಲರ ಬಾಯಲ್ಲೂ ಕೇರಳ ಮತ್ತು ಗೋವಾ ರಾಜ್ಯದ ಗುಣಗಾನ. ನಮ್ಮ ರಾಜ್ಯದಲ್ಲಿರುವ ಅದ್ಭುತ ತಾಣಗಳು ಎಲ್ಲ‌ ರಾಜ್ಯಗಳ ಪ್ರವಾಸಿ ತಾಣಗಳನ್ನು ಮೀರಿಸುವಂತಿವೆ. ಸರಕಾರ ಹೆಚ್ಚು ಪ್ರಚಾರ ಮಾಡಬೇಕು. ಪ್ರವಾಸಿ ತಾಣಗಳ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡಬೇಕು. ಇಲಾಖೆ ಮತ್ತು ಇಲಾಖೆಯ ಸಚಿವರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡಬೇಕು.
-ಸಾ ನಾ ರಮೇಶ್‌
Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ