• ಕೆ.ಶ್ರೀನಿವಾಸರಾವ್

ಶಿವಮೊಗ್ಗದಿಂದ ಕುಂದಾಪುರಕ್ಕೆ ಬಾಳೆಬರೆ ಘಾಟಿಯಲ್ಲಿ ಸಾಗುವಾಗ ಶಂಕರನಾರಾಯಣದ ನಂತರ ಸಿಗುವ ಪುಟ್ಟ ಊರು ಹಾಲಾಡಿ. ಇಲ್ಲಿನ ಮೂರು ರಸ್ತೆ ಸೇರುವ ದಾರಿಯಲ್ಲಿ ಒಂದೆಡೆ ಪುಟ್ಟ ಮನೆಯೊಂದರ ಮುಂದೆ ಕಾರುಗಳು, ಬೈಕುಗಳು, ಜನಸಂದಣಿ ಕಾಣುತ್ತದೆ. ತುಪ್ಪದ ಘಮ ನಿಮ್ಮ ನಾಸಿಕದ ಹೊಳ್ಳೆಗಳನ್ನು ಹೊಕ್ಕು ಪುಳಕಿತಗೊಳಿಸುತ್ತದೆ. ಕುತೂಹಲದಿಂದ ಅಲ್ಲಿಗೆ ಸಾಗಿದರೆ ಅದು ಮನೆಯಲ್ಲ. ಪುಟ್ಟದಾದ ಹೊಟೇಲ್. ಮೇಲೆ ‘ಗುರು ಕ್ಯಾಂಟೀನ್ʼ ಬೋರ್ಡ್ ತೂಗಾಡುತ್ತಿರುತ್ತದೆ. ಒಳಗೆ ಸಣ್ಣ ಜಾಗದಲ್ಲಿ ಅರ್ಧ ಭಾಗ ದೋಸೆ ಹೆಂಚಿನ ರೂಮ್‌, ಇನ್ನರ್ಧದಲ್ಲಿ ಉಳಿದ ಕೆಲಸಕ್ಕಾಗಿ ಸ್ಥಳಾವಕಾಶವಿದೆ. ಅಪ್ಪ- ಅಮ್ಮ, ವಯಸ್ಕ ಮಗ, ಒಬ್ಬ ಕ್ಲೀನರ್ ಇಷ್ಟೇ ಜನರ ಭಾಗವಹಿಸುವಿಕೆ.

ಇದನ್ನೂ ಓದಿ:ಮಂಗಳೂರಿನಲ್ಲಿ 130 ವರ್ಷಗಳ ಐತಿಹಾಸಿಕ ಹೊಟೇಲ್‌

22 ವರ್ಷಗಳ ಹಿಂದೆ ಈ ಹೊಟೇಲ್ ಆರಂಭವಾಯಿತು. ಸುಬ್ರಹ್ಮಣ್ಯ ಹೊಳ್ಳರು ತಮ್ಮ ಅಹಮಿಕೆಯಿಲ್ಲದ ಪ್ರಾಂಜಲ ಸೇವೆಯಿಂದ ಇಂದಿಗೂ ಹಿಂತಿರುಗಿ ನೋಡಿಲ್ಲ. ಉಳಿದೆಲ್ಲಾ ಕೆಲಸಗಳನ್ನು ಅಮ್ಮ, ಮಗ ನೋಡಿಕೊಂಡರೆ ಹೊಳ್ಳರದು ದೋಸೆ ಹಾಕುವ ಕೆಲಸ. ಹಾಗಾಗಿ ಯಾವಾಗಲೂ ಹೆಂಚಿನ ಮುಂದೆ ಒಂದು ಸ್ಟೂಲ್ ಹಾಕಿಕೊಂಡು ಸತತ ದೋಸೆ ರೆಡಿಮಾಡಿ ತಟ್ಟೆಗೆ ಹಾಕುತ್ತಿರುತ್ತಾರೆ. ಢಾಳವಾಗಿ ಹಾಕುವ ಬೆಣ್ಣೆ- ತುಪ್ಪ ಹದವಾಗಿ ಬೇಯಿಸಿ ಒಳಗೆ ಕೆಂಪು ಚಟ್ನಿ ಸವರಿ ಕಾಯಿಚಟ್ನಿಯೊಂದಿಗೆ ಕೊಡುವ ದೋಸೆ ತಿಂದಾಗ ಆಹಾ! ಸ್ವಾದ ಆನಂದ ನೀಡುತ್ತದೆ. ದೋಸೆ ತಿಂದು ಹೊರಬರುವ ಗ್ರಾಹಕರ ಮೊಗದಲ್ಲಿ ಅನುಭೂತಿ ಕಾಣುತ್ತದೆ.

Untitled design (97)

ದೋಸೆ, ರವಾವಡೆ ಬಿಟ್ಟರೆ ಕಾಫಿ ಮಾತ್ರ ಇಲ್ಲಿ ಸಿಗುತ್ತದೆ. ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 7:30 ರವರೆಗೆ ಮಾತ್ರ ಬಾಗಿಲು ತೆರೆದಿರುತ್ತದೆ. ಉತ್ತಮ ಗುಣಮಟ್ಟದ ಎಣ್ಣೆ, ತುಪ್ಪ, ಬೆಣ್ಣೆ ಮತ್ತಿತರೆ ಸಾಮಗ್ರಿಗಳೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಜನದಟ್ಟಣೆ ಜಾಸ್ತಿ ಇದ್ದಾಗ ದೋಸೆಗೆ 15 ನಿಮಿಷ, ಒಮ್ಮೊಮ್ಮೆ ಅರ್ಧ ಗಂಟೆಯವರೆಗೂ ಕಾಯಬೇಕು. ಅವಸರ ಬೇಡ, ನಿಧಾನವೆ ಪ್ರಧಾನ ಎಂಬ ನೀತಿ ಇಲ್ಲಿನದು. ತುಪ್ಪದ ಮಸಾಲೆ ದರ 60 ರುಪಾಯಿಗಳು. ಈ ದರ ಕಾಲಕಾಲಕ್ಕೆ ಬದಲಾಗಬಹುದು. ಕೂರಲು, ನಿಂತು ತಿನ್ನಲು ಸ್ಥಳವಿದೆ. ಸಂಜೆ 5:00 ಗಂಟೆಯಾಗುತ್ತಲೇ ಸಮೀಪದ ಊರುಗಳಿಂದ ಮತ್ತು ಕುಂದಾಪುರ, ಕೋಟಾ, ಕೋಟೇಶ್ವರ, ಸಾಲಿಗ್ರಾಮಗಳಿಂದೂ ಜನರು ದೋಸೆ ಸವಿಯಲು ಬರುತ್ತಾರೆ. ಹಾಗಾಗಿ ನಾವೂ ತಲಾ ಎರಡೆರಡು ತುಪ್ಪದ ದೋಸೆ ತಿಂದೆವು. ರಾತ್ರಿ ಊಟದವರೆಗೂ ಬಲ ಅಂಗೈಯಲ್ಲಿನ ತುಪ್ಪದ ಸುಗಂಧವನ್ನು ಆಘ್ರಾಣಿಸುತ್ತಲೇ ಇದ್ದೆವು.

ದಾರಿ ಹೇಗೆ?

ಬೆಂಗಳೂರಿನಿಂದ ಹಾಲಾಡಿಗೆ ಬಸ್‌ ಸಂಚಾರ ಸೌಲಭ್ಯವಿದೆ. ಕುಂದಾರಪುರ ಹತ್ತಿರದ ರೈಲು ನಿಲ್ದಾಣವಾಗಿದ್ದು, ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಹಾಲಾಡಿ ತಲುಪಬಹುದು.