Saturday, May 2, 2026
Saturday, May 2, 2026

ಪುಸ್ತಕಗಳನ್ನು ಓದ್ತಾನೇ ನಿದ್ರೆ ಮಾಡ್ಬೋದು

ಕಣ್ಣೆದುರಿಗೆ ನಾಲ್ಕು ಸಾವಿರಕ್ಕೂ ಅಧಿಕ ಪುಸ್ತಕಗಳು, ಅಲ್ಲೇ ಪಕ್ಕದಲ್ಲೇ ಹಾಸಿಗೆ. ಆಹಾ! ಒಬ್ಬ ಪುಸ್ತಕ ಪ್ರೇಮಿ ಇದಕ್ಕಿಂತ ಹೆಚ್ಚಾಗಿ ಏನನ್ನು ಬಯಸಬಹುದು ಹೇಳಿ? ಇಂಥ ಒಂದು ಜಾಗಕ್ಕೆ ಹೋಗಿ ಹೊರ ಪ್ರಪಂಚದ ತಲೆ ನೋವುಗಳನ್ನು ಪಕ್ಕಕ್ಕಿಟ್ಟು ಸಮಯ ಕಳೆಯುತ್ತಾ ಕುಳಿತರೆ... ಕಲ್ಪನೆ ಎಷ್ಟು ಸುಂದರ ಅಲ್ವಾ? ನೀವು ಇದನ್ನು ಬರೀ ಕಲ್ಪನೆಯಲ್ಲಿ ಅಷ್ಟೇ ಅಲ್ಲ ನಿಜ ಜೀವನದಲ್ಲಿಯೂ ಕೂಡ ಜೀವಿಸಬಹುದಾಗಿದೆ. 'ಬುಕ್ ಆಂಡ್ ಬೆಡ್ ' ಎಂಬ ಜಪಾನಿನ ಹೊಟೇಲ್ ಒಂದರಲ್ಲಿ ಇಂಥ ಸೌಕರ್ಯವಿದೆ.

  • ತೇಜಾ ಅವಧಾನಿ

ಪುಸ್ತಕಗಳ ಲೋಕದಲ್ಲಿ:

ಜಪಾನಿನ ಈ ಹೋಟೆಲಿನಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು ಅತಿಥಿಗಳಿಗಾಗಿಯೂ ಮತ್ತು ಸಂದರ್ಶಕರಿಗಾಗಿಯೂ ವ್ಯವಸ್ಥೆಯನ್ನು ಮಾಡಲಾಗಿದೆ. ಹೊರಗಿನ ಪ್ರಪಂಚದ ಸದ್ದು ಗದ್ದಲಗಳಿಂದ ದೂರವಿದ್ದು ನೆಮ್ಮದಿಯಿಂದ ನಮ್ಮ ಮತ್ತು ನಮ್ಮ ಪ್ರೀತಿಯ ಪುಸ್ತಕಕ್ಕಾಗಿ ಸಿಗುವ ಏಕಾಂತವನ್ನು ಸಂಭ್ರಮಿಸಬಹುದಾಗಿದೆ. ದೊಡ್ಡ ಗ್ರಂಥಾಲಯ, ವಿಶ್ರಾಂತಿ ವ್ಯವಸ್ಥೆ, ಉಪಹಾರದ ಸೌಕರ್ಯದ ಜೊತೆಗೆ ಕಲಾತ್ಮಕವಾದ ಕೆಫೆಗಳು ಕೂಡ ಒಂದೇ ಜಾಗದಲ್ಲಿ ಸಿಗುತ್ತದೆ. ಇಲ್ಲಿ ಲಕ್ಸುರಿ ಹುಡುಕಬಾರದು. ಏಕೆಂದರೆ ಅದು ಅವರ ಉದ್ದೇಶವೇ ಅಲ್ಲ. ಇಲ್ಲಿʼಓದುತ್ತಾ ಓದುತ್ತಾ ಹಾಗೆಯೇ ಪುಸ್ತಕದ ಮೇಲೆಯೇ ನಿದ್ದೆ ಹೋಗಿʼ ಎನ್ನುವುದು ಇವರ ಫಂಡಾ. ನೀವು ಸುಸ್ತಾಗಿ ಅಲ್ಲಿಗೆ ಹೋದ್ರೆ, ಗೋಡೆ ತುಂಬಾ ಪುಸ್ತಕಗಳು ಕಾಣಿಸುತ್ತವೆ. ಮೆಲ್ಲಗೆ ನೋಡಿದ್ರೆ ಆ ಪುಸ್ತಕಗಳ ಮಧ್ಯೆ ಸಣ್ಣ ಸಣ್ಣ ಗೂಡುಗಳ ಥರ ಬೆಡ್‌ಗಳಿರುತ್ತವೆ. ಯಾವುದೋ ಫ್ಯಾಂಟಸಿ ಸಿನಿಮಾದಲ್ಲಿ ಸೀಕ್ರೆಟ್ ರೂಮ್ ಸಿಕ್ಕಿದ ಹಾಗೆ ಅನಿಸುತ್ತದೆ. ಆದರೆ ಇಲ್ಲಿ ಮ್ಯಾಜಿಕ್ ಪವರ್ ಬದಲು ಮಲಗೋಕೆ ಒಂದು ಪುಟ್ಟ ಮ್ಯಾಟ್ರೆಸ್ ಸಿಗುತ್ತದೆ, ಅಷ್ಟೇ! ಇದು 'ಕ್ಯಾಪ್ಸುಲ್' ಸ್ಟೈಲ್ ಬೆಡ್‌ಗಳು. ಬಾಗಿಲ ಬದಲು ತೆಳು ಪರದೆ ಇರುತ್ತೆ. ಅತ್ತಿತ್ತ ಹೊರಳಾಡೋಕೆ ಅಷ್ಟೋ ಇಷ್ಟೋ ಜಾಗ.

ಇದನ್ನೂ ಓದಿ: ಬಸ್‌ ಅಲ್ಲ.. ಮಿನಿ ಹೋಮ್‌

ಪ್ರವಾಸಿಗರು ಇದನ್ನು ಪುಸ್ತಕ ಪ್ರೇಮಿಗಳ ಪ್ಯಾರಡೈಸ್ ಎಂದೇ ಕರೆದಿದ್ದಾರೆ. ಇಲ್ಲಿನ ಸಿಬ್ಬಂದಿಗಳು ಕೂಡ ಭೇಟಿ ನೀಡಿದವರನ್ನು ಚೆನ್ನಾಗಿ ಸತ್ಕರಿಸಿ ಉಪಚರಿಸುತ್ತಾರೆ. ಜಪಾನಿನಲ್ಲಿ ಇದರ ಎರಡು ಶಾಖೆಗಳಿದ್ದು ಒಂದು ಶಿಂಜುಕುವಿನಲ್ಲಿ ಮತ್ತು ಇನ್ನೊಂದು ಇಕೇಬುಕುರೊವಿನಲ್ಲಿದೆ. ಹೆಚ್ಚಿನ ಪ್ರವಾಸಿಗರು ಇಕೆಬುಕುರೋನಲ್ಲಿನ ಶಾಖೆಯನ್ನು ಇಷ್ಟಪಡುತ್ತಾರೆ. ಇದು ನಗರ ಪ್ರದೇಶದಿಂದ ಸ್ವಲ್ಪ ಹೊರಗಿದ್ದು ಶಾಂತಿಯುತವಾಗಿದೆ ಎಂದು ಹೇಳುತ್ತಾರೆ. ಶಿಂಜುಕುವಿನಲ್ಲಿನ ಶಾಖೆಯು ನಗರದ ಮಧ್ಯದಲ್ಲಿ ಇದ್ದು ಅಕ್ಕಪಕ್ಕದಿಂದ ಶಬ್ದಗಳು ಕೇಳಿಸುತ್ತದೆ ಎಂದು ಹೇಳುತ್ತಾರೆ. ಪ್ರತ್ಯೇಕ ಮೂಲಭೂತ ಸೌಕರ್ಯಗಳ ವ್ಯವಸ್ಥೆಯು ಇಲ್ಲದೆ ಇರುವುದು ಒಂದು ಮುಖ್ಯವಾದ ನಕಾರಾತ್ಮಕ ಪ್ರತಿಕ್ರಿಯೆಯಾಗಿದೆ.

Untitled design - 2026-05-01T202153.455

ನಿಶ್ಶಬ್ದ, ಆದರೆ ಮಜ!

ಇಲ್ಲಿನ ವಾತಾವರಣ ಸಖತ್ ಸೈಲೆಂಟ್. ಅಂದಾಕ್ಷಣ ಲೈಬ್ರರಿ ಥರ ಉಸಿರು ಬಿಡುವುದಕ್ಕೂ ಹೆದರಬೇಕು ಅಂತೇನಿಲ್ಲ. ಎಲ್ಲರೂ ಇಲ್ಲಿ ಓದೋಕೆ ಅಥವಾ ತಮ್ಮದೇ ಪ್ರಪಂಚದಲ್ಲಿ ಕಳೆದುಹೋಗೋಕೆ ಬಂದಿರುತ್ತಾರೆ. ಕೆಲವರು ಪುಸ್ತಕ ಹಿಡಿದು ಮಲಗಿರ್ತಾರೆ, ಕೆಲವರ ಮೂಗಿನ ಮೇಲಿಂದ ಕನ್ನಡಕ ಜಾರಿರುತ್ತೆ, ಇನ್ನು ಕೆಲವರು ಯಾವುದೋ ಲೈನ್ ಓದಿ ʼಅಬ್ಬಾ, ಎಂಥ ಮಾತು!ʼ ಅಂತ ಆಕಾಶ ನೋಡ್ತಾ ಇರ್ತಾರೆ. ಇಲ್ಲಿ ವೈ-ಫೈ ಇದೆ, ಬಾರ್ ಕೂಡ ಇದೆ. ಆದ್ರೆ ಒಂಟಿಯಾಗಿದ್ದೂ ಎಲ್ಲರ ಜತೆಗಿರುವ ಆ 'ವೈಬ್' ಇದೆಯಲ್ಲ, ಅದು ಸೂಪರ್. ಒಂಟಿತನದಲ್ಲೂ ಸುಖವನ್ನು ಕಾಣುವವರಿಗೆ ಎಂದೇ ಇರುವ ಸ್ಥಳ ಇದಾಗಿದೆ. ನವೆಂಬರ್ 2015 ಇಂದ ಪ್ರಾರಂಭಗೊಂಡ ಈ ಹೊಟೇಲ್‌ ಇಂದಿಗೂ ಕೂಡ ಎಲ್ಲರು ಇಷ್ಟಪಡುವಂತೆ ನಡೆಯುತ್ತಿದೆ.

ದುಬಾರಿಯೇನಲ್ಲ..

ಒಂದು ರಾತ್ರಿಗೆ ಸುಮಾರು ₹1,900 ರಿಂದ ₹2,800 ವರೆಗೆ (3,400-5,000 ಯೆನ್). ಸಮಯ ನೋಡಿ ಕೆಲವೊಮ್ಮೆ ₹2,500 ರಿಂದ ₹5,000 ವರೆಗೂ ಆಗಬಹುದು. ಇನ್ನು ಇಲ್ಲಿನ ಕೆಫೆ ಬಗ್ಗೆ ಹೇಳಲೇಬೇಕು. ಇಲ್ಲಿನ ಮೆನು ಸ್ವಲ್ಪ ವಿಚಿತ್ರ ಮತ್ತು ಡಿಫರೆಂಟ್. ಎಲ್ಲವೂ ಸ್ವಲ್ಪ ಡಾರ್ಕ್‌ ಶೈಲಿಯಲ್ಲಿ ಇರುತ್ತದೆ. ಕಾಫಿಗೆ ಯಾವುದೋ ನಿಗೂಢ ಹಿನ್ನೆಲೆ ಇದ್ದರೆ ಹೇಗಿರುತ್ತದೆ ಎನ್ನುವ ಥೀಮ್ ಇಲ್ಲಿನದು. ಕುಡಿಯುವ ಪದಾರ್ಥ ಮತ್ತು ಡೆಸರ್ಟ್‌ಗಳು ಅಂದಾಜು ₹550 ರಿಂದ ₹1,100 ರ ಆಸುಪಾಸಿನಲ್ಲಿ ಇರುತ್ತವೆ. ನೀವು ಆ ಕಪ್ಪು ಕಾಫಿ ಹಿಡ್ಕೊಂಡು ಪುಸ್ತಕಗಳ ಮಧ್ಯೆ ಕುಳಿತರೆ, ಯಾವುದೋ ಹಿಂದಿ ಸಿನಿಮಾದ ಹೀರೋ ಅಥವಾ ಹೀರೋಯಿನ್ ಥರ ಫೀಲ್ ಬರುವುದು ಪಕ್ಕಾ!

ಇಲ್ಲಿನ ಫೇಮಸ್ ಐಟಂಗಳು:

ಬ್ಲ್ಯಾಕ್ ಲ್ಯಾಟ್ಟೆ

ಬ್ಲ್ಯಾಕ್ ಫ್ರೂಟ್ ಸ್ಯಾಂಡ್‌ವಿಚ್

ಬ್ಲ್ಯಾಕ್ ಲೆಮನೇಡ್

ಬೆಳಗ್ಗೆ ಎದ್ದಾಗ ಸ್ವಲ್ಪ ಕನ್ಫ್ಯೂಷನ್ ಆದರೂ ಮನಸಿಗೆ ಮಾತ್ರ ಸಖತ್ ನೆಮ್ಮದಿ ಇರುತ್ತದೆ. ನೀವು ಕೇವಲ ಒಂದು ಹೊಟೇಲ್‌ನಲ್ಲಿ ಉಳಿದುಕೊಂಡಿಲ್ಲ, ನಿಮ್ಮ ಜೀವನವನ್ನೇ ಒಂದು ಕಥೆಯೊಳಗೆ ಸ್ವಲ್ಪ ಹೊತ್ತು ಬಚ್ಚಿಟ್ಟಿದ್ದೀರಿ ಅಷ್ಟೇ!

Untitled design - 2026-05-01T202147.921

ಮಾಹಿತಿ ಪೆಟ್ಟಿಗೆ:

ಮುಖ್ಯವಾಗಿ ಒಂಟಿ ಪಯಣಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಜಪಾನಿಗೆ ಬೇರೆ ಬೇರೆ ಪ್ರದೇಶದಿಂದ ವಲಸೆ ಹೋದ ಹಲವರು ಬೇಜಾರಾದಾಗಲೆಲ್ಲ ಇಲ್ಲೇ ತಮ್ಮ ಕಾಲವನ್ನು ಕಳೆಯುತ್ತಾರೆ. ಬುಕ್ ಆಂಡ್ ಬೆಡ್ ಹೇಳುವುದು ಒಂದು ಸಾಮಾನ್ಯ ಯೋಚನೆ ಆಗಿರದೆ ಇದರಲ್ಲಿ ಹೊಸ ಬಗೆಯ ಕಲಾತ್ಮಕತೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ