ಈ ಚಿಕ್ಕತಿರುಪತಿಗೆ ಯುಗಕ್ಕೊಂದು ಹೆಸರು!
ತಿರುಪತಿಗೆ ಭೇಟಿ ನೀಡಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಇಲ್ಲಿಗೆ ಬಂದು ಭಕ್ತಿ-ಶ್ರದ್ಧೆಯಿಂದ ಸ್ವಾಮಿಯನ್ನು ಆರಾಧಿಸಿದರೆ, ಅವಿವಾಹಿತರಿಗೆ ಕಂಕಣ ಭಾಗ್ಯವೂ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವೂ ದೊರೆಯುತ್ತದೆ ಎಂಬ ಅಚಲ ವಿಶ್ವಾಸ ಭಕ್ತರಲ್ಲಿದೆ.
- ಹೊಸ್ಮನೆ ಮುತ್ತು
ವೀಕೆಂಡ್‌ನಲ್ಲಿ ನಗರದ ಜಂಜಾಟದಿಂದ ದೂರವಾಗಿ, ಹಸಿರು ಸಿರಿಯಲ್ಲಿ ಮಿಂದೇಳಬೇಕು, ಕೆಲ ಹೊತ್ತು ಮನಸ್ಸಿಗೆ ಪ್ರಶಾಂತ ಎನ್ನಿಸುವ ಪರಿಸರದಲ್ಲಿರಬೇಕು, ಮಕ್ಕಳಲ್ಲಿ ಟ್ರೆಕ್ಕಿಂಗ್ ಸಾಹಸಗಳನ್ನು ರೂಢಿಸಬೇಕು ಹಾಗೂ ಜಡಗೊಂಡ ಮೈಮನಗಳಿಗೆ ಕೊಂಚ ವ್ಯಾಯಾಮ ಬೇಕು ಎನ್ನುವ ತುಡಿತದಲ್ಲಿರುವವರಿಗೆ ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಭೇಟಿ ನೀಡಲು ಸೂಕ್ತವಾದ ಸ್ಥಳ "ಹುಲಿಗಿನ ಮುರಡಿ".
ಪ್ರಕೃತಿ, ದೈವ ಸಾನ್ನಿಧ್ಯ ಮೇಳೈಸಿದ, ವಿಶಿಷ್ಟ ಪೌರಾಣಿಕ ಹಿನ್ನೆಲೆಯುಳ್ಳ ಈ ತಾಣ ಕೇವಲ ಪೂಜಾ ಸ್ಥಳವಾಗಿರದೆ, ಪ್ರಕೃತಿಯ ಸೊಬಗನ್ನು ಸವಿಯುವ, ಮನಸ್ಸಿಗೆ ಶಾಂತಿ ನೀಡುವ ಒಂದು ವಿಶಿಷ್ಟ ತಾಣವಾಗಿ ಭಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಇಲ್ಲಿನ ಕುರುಚಲು ಗಿಡಮರಗಳ ನಡುವೆ ಬೀಸುವ ತಂಪಾದ ಗಾಳಿಯನ್ನು ಸೀಳಿಕೊಂಡು, ಅಂಕು-ಡೊಂಕು ಹಾದಿಯಲ್ಲಿ ಬೆಟ್ಟದ ತುದಿಯತ್ತ ಸಾಗುವಾಗ, ಸ್ವಚ್ಛಂದವಾಗಿ ವಿಹರಿಸುವ ವೈವಿಧ್ಯಮಯ ಪಕ್ಷಿಗಳು, ಹಚ್ಚ ಹಸಿರಿನ ಗದ್ದೆಗಳು, ಫಲವತ್ತಾದ ತೋಟಗಳು, ಅಲ್ಲಲ್ಲಿ ಮಿನುಗುವ ಕೆರೆಗಳು ಮತ್ತು ವಿಶಾಲವಾದ ಬಯಲಿನ ರಮಣೀಯ ನೋಟ ನಿಮ್ಮ ಮನಸ್ಸಿಗೆ ಅವರ್ಣನೀಯ ಆನಂದ ನೀಡುತ್ತದೆ. ಪ್ರಕೃತಿ ಸೌಂದರ್ಯ ಮತ್ತು ದೈವ ಸಾನ್ನಿಧ್ಯ ಮೇಳೈಸಿದ ಈ ವಿಶಿಷ್ಟ ತಾಣವೇ ‘ಹುಲಿಗಿನ ಮುರಡಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ.’
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ, "ಚಿಕ್ಕ ತಿರುಪತಿ" ಎಂದೇ ಖ್ಯಾತಿ ಪಡೆದಿರುವ ಶ್ರೀ ಹುಲಿಗಿನ ಮುರಡಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯವು ಅಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ತಾಣವಾಗಿದೆ. ಸುಮಾರು 300 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲೆ ನೆಲೆ ನಿಂತಿರುವ ಸ್ವಾಮಿಯು, ಪೂರ್ವಾಭಿಮುಖವಾಗಿ ಅಭಯ ಹಸ್ತ, ಶಂಖ, ಚಕ್ರಗಳನ್ನು ಧರಿಸಿ, ಶ್ರೀದೇವಿ ಮತ್ತು ಭೂದೇವಿ ಸಮೇತನಾಗಿ ಭಕ್ತರಿಗೆ ದರ್ಶನ ನೀಡುತ್ತಾನೆ. ಈ ಸ್ಥಳಕ್ಕೆ " ಹುಲಿಗಿನ ಮುರಡಿ" ಎಂಬ ಹೆಸರು ಬರಲು ಒಂದು ಐತಿಹಾಸಿಕ ಹಿನ್ನೆಲೆಯಿದೆ. ಹಿಂದೆ ಈ ಪ್ರದೇಶವು ದಟ್ಟವಾದ ಕಾಡಾಗಿದ್ದು, ಅಲ್ಲಿ ಅಪಾರ ಸಂಖ್ಯೆಯ ಹುಲಿಗಳು ವಾಸಿಸುತ್ತಿದ್ದವಂತೆ. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಹುಲಿಗಿನ ಮುರಡಿ ಎಂಬ ಹೆಸರು ಬಂತು. ಇದನ್ನು ಹುಲಿಗಾದ್ರಿ, ದಕ್ಷಿಣ ಶೇಷಾದ್ರಿ, ಮತ್ತು ವ್ಯಾಘ್ರಾಚಲ (ವ್ಯಾಘ್ರಾದ್ರಿ) ಎಂದೂ ಕರೆಯಲಾಗುತ್ತದೆ.

ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ:
ಹುಲಿಗಿನ ಮುರಡಿ ಕೇವಲ ಒಂದು ಪ್ರವಾಸಿ ತಾಣವಲ್ಲ, ಬದಲಿಗೆ ಅಸಂಖ್ಯಾತ ಪೌರಾಣಿಕ ಕಥೆಗಳು, ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪ್ರಕೃತಿಯ ಸೊಬಗನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಒಂದು ಪವಿತ್ರ ಕ್ಷೇತ್ರ. ಇದರ ಸ್ಥಳ ಮಹಾತ್ಮೆಯು ವರಾಹ ಪುರಾಣದ ಉತ್ತರ ಕಾಂಡದಲ್ಲಿ ಪ್ರಸ್ತಾಪವಾಗಿದೆ. ಈ ಬೆಟ್ಟವು ಶ್ವೇತಾದ್ರಿ (ಬಿಳಿಗಿರಿ ಬೆಟ್ಟ) ಮತ್ತು ಕಮಲಾದ್ರಿ (ಹಿಮವದ್ ಗೋಪಾಲಸ್ವಾಮಿ) ಬೆಟ್ಟಗಳ ಮಧ್ಯೆ ದಕ್ಷಿಣ ಶೇಷಾದ್ರಿಯಾಗಿ ನೆಲೆಗೊಂಡಿದೆ. ಯುಗದಿಂದ ಯುಗಕ್ಕೆ ಇದರ ಹೆಸರು ಬದಲಾಗುತ್ತಾ ಬಂದಿದೆ: ಕೃತಯುಗದಲ್ಲಿ ಶೇಷಾದ್ರಿ, ತ್ರೇತಾಯುಗದಲ್ಲಿ ಕನಕಾದ್ರಿ, ದ್ವಾಪರಯುಗದಲ್ಲಿ ವೆಂಕಟಾದ್ರಿ, ಮತ್ತು ಕಲಿಯುಗದಲ್ಲಿ ವ್ಯಾಘ್ರಾಚಲ ಅಥವಾ ಹುಲಿಗಾದ್ರಿ ಎಂದು ಪ್ರಸಿದ್ಧವಾಗಿದೆ.
ಆದಿಶೇಷ ಮತ್ತು ವಾಯುದೇವನ ಸ್ಪರ್ಧೆ:
ಪೂರ್ವದಲ್ಲಿ, ನಾಗರಾಜನಾದ ಆದಿಶೇಷನಿಗೂ ವಾಯುದೇವನಿಗೂ ತಮ್ಮಿಬ್ಬರೊಳಗೆ ಯಾರು ಹೆಚ್ಚು ಬಲಿಷ್ಠರು ಎಂಬ ವಿವಾದ ಹುಟ್ಟಿತು. ತಮ್ಮ ಬಲವನ್ನು ಪ್ರದರ್ಶಿಸಲು, ಆದಿಶೇಷನು ಮೇರು ಪರ್ವತವನ್ನು ದೃಢವಾಗಿ ಸುತ್ತಿಕೊಂಡನು. ಆಗ ವಾಯುದೇವನು ರಭಸವಾಗಿ ಗಾಳಿ ಬೀಸಿದಾಗ, ಮೇರು ಪರ್ವತವು ಆಕಾಶದಲ್ಲಿ ಗಿರಗಿರನೆ ಸುತ್ತಿ, ನೆಲದ ಮೇಲೆ ಬಿದ್ದು ಎರಡು ಭಾಗವಾಯಿತು. ಈ ಎರಡು ಭಾಗಗಳಲ್ಲಿ ಒಂದು ತಿರುಪತಿಯ ವೃಷಾದ್ರಿಯಾದರೆ, ಮತ್ತೊಂದು ಭಾಗವೇ ಈಗಿನ ಹುಲಿಗಿನ ಮುರಡಿ. ಇದನ್ನು ದಕ್ಷಿಣ ಶೇಷಾದ್ರಿ ಎಂದೂ ಕರೆಯುತ್ತಾರೆ.

ಪೂಜಿಸಿದ ಮಹಾನ್ ಚೇತನಗಳು ಮತ್ತು ಇತಿಹಾಸ:
ಈ ಪವಿತ್ರ ಕ್ಷೇತ್ರದಲ್ಲಿ ನೆಲೆಸಿರುವ ಸ್ವಾಮಿಯನ್ನು ಋಷಿಶ್ರೇಷ್ಠರಾದ ಮಾಂಡವ್ಯರು, ಅಗಸ್ತ್ಯರು, ಮತ್ತು ಆದಿಶೇಷನು ಪೂಜಿಸಿದ್ದಾರೆ ಎಂದು ಪುರಾಣಗಳು ತಿಳಿಸುತ್ತವೆ. ತ್ರೇತಾಯುಗದಲ್ಲಿ ಶ್ರೀ ರಾಮ-ಲಕ್ಷ್ಮಣರೂ, ದ್ವಾಪರಯುಗದಲ್ಲಿ ಪಾಂಡವರು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯನ್ನು ಆರಾಧಿಸಿದ್ದಾರೆ. ಇಂದಿನ ದೇವಾಲಯವು ಕ್ರಿ.ಶ. 14ನೇ ಶತಮಾನದಲ್ಲಿ ನಿರ್ಮಾಣವಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ಆಚರಣೆಗಳು ಮತ್ತು ತೀರ್ಥಗಳು:
ಹುಲಿಗಿನ ಮುರಡಿ ಕ್ಷೇತ್ರದಲ್ಲಿ ಪ್ರತಿ ವರ್ಷ ವಿಜೃಂಭಣೆಯ ಆಚರಣೆಗಳು ನಡೆಯುತ್ತವೆ. ಸಂಕ್ರಾಂತಿ ಹಬ್ಬದಂದು ದೊಡ್ಡ ರಥೋತ್ಸವವೂ, ಮೊದಲ ಶ್ರಾವಣ ಶನಿವಾರದಂದು ಚಿಕ್ಕ ರಥೋತ್ಸವವೂ ಇಲ್ಲಿ ಸಡಗರದಿಂದ ಜರುಗುತ್ತದೆ. ಇದಲ್ಲದೆ, ಪ್ರತಿ ಶನಿವಾರದಂದು ಸ್ವಾಮಿಗೆ ವಿಶೇಷ ಪೂಜೆಗಳು ಸಲ್ಲುತ್ತವೆ. ಈ ಪುಣ್ಯ ಕ್ಷೇತ್ರದಲ್ಲಿ ಧನುಷ್ಕೋಟಿ ತೀರ್ಥ, ವೇದ ಪುಷ್ಕರಣಿ ತೀರ್ಥ, ಮತ್ತು ವೈಕುಂಠ ತೀರ್ಥಗಳು ಎಂಬ ಪವಿತ್ರ ತೀರ್ಥ ಕೊಳಗಳಿವೆ.
ನಂಬಿಕೆಗಳು ಮತ್ತು ಫಲಗಳು:
ಇಲ್ಲಿಗೆ ಭೇಟಿ ನೀಡುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿ, ಕಷ್ಟ ನಿವಾರಣೆ ಮತ್ತು ಆಧ್ಯಾತ್ಮಿಕ ನೆಮ್ಮದಿಗಾಗಿ ಸ್ವಾಮಿಯ ಮೊರೆ ಹೋಗುತ್ತಾರೆ. ತಿರುಪತಿಗೆ ಭೇಟಿ ನೀಡಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಬಂದು ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಇಲ್ಲಿಗೆ ಬಂದು ಭಕ್ತಿ-ಶ್ರದ್ಧೆಯಿಂದ ಸ್ವಾಮಿಯನ್ನು ಆರಾಧಿಸಿದರೆ, ಅವಿವಾಹಿತರಿಗೆ ಕಂಕಣ ಭಾಗ್ಯವೂ, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವೂ ದೊರೆಯುತ್ತದೆ ಎಂಬ ಅಚಲ ವಿಶ್ವಾಸ ಭಕ್ತರಲ್ಲಿದೆ.

ಹೀಗೆ ಬನ್ನಿ:
ಶ್ರೀ ಹುಲಿಗಿನ ಮುರಡಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ. ಮೈಸೂರಿನಿಂದ ಸುಮಾರು 73ಕಿ.ಮೀ. ದೂರದಲ್ಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಿಂದ ಕೇವಲ 8ಕಿ.ಮೀ. ಅಂತರದಲ್ಲಿದೆ. ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ 20ಕಿ.ಮೀ. ಪ್ರಯಾಣಿಸಬೇಕು. ಜಿಲ್ಲಾ ಕೇಂದ್ರದಿಂದ 30ಕಿ.ಮೀ. ದೂರವಿದೆ. ದೇವಾಲಯಕ್ಕೆ ಬರುವವರು ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ತೆರಕಣಾಂಬಿಗೆ ತೆರಳಿದರೆ ಅಲ್ಲಿಂದ ದೇವಾಲಯದವರೆಗೆ ಶೇರ್ ಆಟೋ ಸೌಲಭ್ಯ ಲಭ್ಯವಿದೆ. ಪ್ರತಿ ಶನಿವಾರದಂದು ವಿಶೇಷ ಪೂಜೆಗಳು ನಡೆಯುವುದರಿಂದ ಅಂದು ಆಟೋಗಳು ನೇರವಾಗಿ ದೇವಾಲಯದವರೆಗೂ ಹೋಗುತ್ತವೆ. ಇತರೆ ದಿನಗಳಲ್ಲಿ ಅಟೋ ಅಥವಾ ಬಸ್ ಮೂಲಕ ಕಿಲಗೆರೆ ಕ್ರಾಸ್ ವರೆಗೆ ಬಂದು, ಅಲ್ಲಿಂದ ದೇವಾಲಯಕ್ಕೆ ಸುಮಾರು 3ಕಿ.ಮೀ. ನಡೆದುಕೊಂಡು ಹೋಗಬೇಕು. ಖಾಸಗಿ ಅಥವಾ ಬಾಡಿಗೆ ವಾಹನದಲ್ಲಿ ಪ್ರಯಾಣಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.
ಪ್ರವಾಸೋದ್ಯಮದ ಹೊಸ ಮೈಲಿಗಲ್ಲು:
ಮೈಸೂರು ತನ್ನ ವಿಶ್ವವಿಖ್ಯಾತ ಪ್ರವಾಸಿ ತಾಣಗಳು ಮತ್ತು ಸುತ್ತಮುತ್ತಲಿನ ಅಭಯಾರಣ್ಯಗಳಿಂದಾಗಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಈ ಭವ್ಯ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅಪಾರ. ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ನೆಲೆಸಿರುವ ಹುಲಿಗಿನ ಮುರಡಿ ವ್ಯಾಘ್ರಾಚಲ ಬೆಟ್ಟವನ್ನು ಸೂಕ್ತ ಮೂಲಸೌಕರ್ಯಗಳೊಂದಿಗೆ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ, ಮೈಸೂರಿಗೆ ಬರುವ ಪ್ರವಾಸಿಗರು ಸಹ ಇಲ್ಲಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಇದು ಕೇವಲ ಸ್ಥಳೀಯ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ, ರಾಜ್ಯ ಸರ್ಕಾರದ ಆದಾಯ ವೃದ್ಧಿಗೂ ಸಹಕಾರಿಯಾಗಲಿದೆ.