ಅಬೀಬಿ ಕಂ ಟು ದುಬೈ
ಇಲ್ಲಿನ ಗೋಲ್ಡ್ ಸೂಕ್ ಪ್ರಪಂಚದಲ್ಲೇ ಅತಿದೊಡ್ಡ ಮತ್ತು ಪ್ರಸಿದ್ಧ ಚಿನ್ನದ ಮಾರುಕಟ್ಟೆ ಎನ್ನಲಾಗಿದೆ. ತೆರಿಗೆ ಮುಕ್ತವಾಗಿ ಇಲ್ಲಿ ಚಿನ್ನದ ವಹಿವಾಟು ನಡೆಯುತ್ತದೆ ಎಂದು ಕೇಳಿ ತಿಳಿದೆ. ವಿಶ್ವದಲ್ಲೇ ಅತಿ ದೊಡ್ಡದಾದ ಉಂಗುರ, 'ನಜ್ಮತ್ ತೈಬಾ'ವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇಲ್ಲಿನ ಚಿನ್ನದ ವ್ಯಾಪಾರಿಗಳು ದಾರಿಯಲ್ಲಿ ಓಡಾಡುವವರನ್ನು, ಇಲ್ಲಿ ಬನ್ನಿ/ ಮೇಕಿಂಗ್ ಚಾರ್ಜ್ ಫ್ರೀ, ಟ್ಯಾಕ್ಸ್ ಫ್ರೀ ಎಂದು ಹೇಳುತ್ತ ವ್ಯಾಪಾರ ಮಾಡುವುದು ನೋಡಿ ಚಿನ್ನಕ್ಕಿರುವ ಬೆಲೆಯೇ ಕಡಿಮೆಯಾದಂತೆ ಅನಿಸಿತು.
- ಜ್ಯೋತಿ ರಾಜೇಶ್
ಪ್ರವಾಸ ಎಂದರೆ ನನಗೆ ಸಂಭ್ರಮ. ತಿರುಗಾಟ ಕಷ್ಟವಾದರೂ ಅದರಲ್ಲಿ ಕಾಣುವ ವಿವಿಧ ಜನ, ಸಂಸ್ಕೃತಿ, ಆಚರಣೆಗಳನ್ನು ಅರಿಯುವುದರಲ್ಲಿ ಖುಷಿಯಿದೆ. ಮನಸಿಗೆ ಇದು ನವ ಚೈತನ್ಯ ನೀಡುತ್ತದೆ. ಪ್ರತಿವರ್ಷ ಇಂಥದೊಂದು ಸಂಭ್ರಮಕ್ಕಾಗಿ ನಾನು ಕಾಯುತ್ತಿರುತ್ತೇನೆ. ಈ ಬಾರಿ ಇದನ್ನೆಲ್ಲ ಸಾಧ್ಯವಾಗಿಸಿದ್ದು ನಮ್ಮ ಅಬುದಾಭಿ-ದುಬೈ ಪ್ರವಾಸ.
ಸ್ವಚ್ಛತೆಗೆ ಕಠಿಣ ಕಾನೂನುಗಳಿರುವ ದೇಶವಿದು. ಗಗನಚುಂಬಿ ಕಟ್ಟಡಗಳು, ಮರಳುಗಾಡು, ಕೃತಕ ಐಲ್ಯಾಂಡ್‌ಗಳು ಸೇರಿ ಅನೇಕ ಆಕರ್ಷಣೀಯ ಸ್ಥಳಗಳಿವೆ.
ಇದನ್ನೂ ಓದಿ: ಹೆಂಚಿನಲ್ಲಿ ಶತಮಾನದ ಐತಿಹ್ಯ!
ʻಎತಿಹಾದ್ ಟವರ್ಸ್ʼ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುದಾಭಿಯಲ್ಲಿದೆ. ಇದು ಐದು ಪ್ರಮುಖ ಕಟ್ಟಡಗಳ ಸಂಕೀರ್ಣ. ಅದರ ವಿಶಾಲ ನೋಟ ಎಂಥವರಿಗೂ ಅಚ್ಚರಿ ಮೂಡಿಸುತ್ತದೆ. ಇಲ್ಲಿ ಸೀ ವರ್ಲ್ಡ್, ಫೆರಾರಿ ವರ್ಲ್ಡ್, ವಾರ್ನರ್ ಬ್ರದರ್ಸ್ ಮುಂತಾದವುಗಳನ್ನು ಒಳಗೊಂಡಿರುವ 'ಯಾಸ್ ಐಲ್ಯಾಂಡ್ ' ಇದೆ.
ಸೀ ವರ್ಲ್ಡ್
ಇದು ಪ್ರಪಂಚದಲ್ಲೇ ಅತಿ ದೊಡ್ಡ ʻಇಂಡೋರ್ ಮರೀನ್ ಥೀಮ್ ಪಾರ್ಕ್ʼ. ವಿವಿಧ ಜಲಚರಗಳಿರುವ ಇದು, ನಮ್ಮನ್ನು ಸಾಗರದೊಳಗೇ ಇರುವಂತೆ ಭಾಸವಾಗಿಸುವ ಅದ್ಭುತ ಲೋಕ. ಅಲ್ಲಿನ ರೈನ್ ಫಾರೆಸ್ಟ್‌ನಲ್ಲಿ ಇರುವ ವಿವಿಧ ಪಕ್ಷಿಗಳು, ಪೆಂಗ್ವಿನ್‌ಗಳು ಮನಸಿಗೆ ಮುದ ನೀಡುತ್ತವೆ. ಇಲ್ಲಿನ 'ರೋಲರ್ ಕೋಸ್ಟರ್' ನೋಡಿ ನಮಗೆ ಭಯ ಮೂಡಿಸಿತ್ತು.

ಕಸ್ರ್ ಅಲ್ವತನ್
ಇದು ಅಬುಧಾಬಿಯಲ್ಲಿ ಇರುವ ಯುಎಇ ಕಾರ್ಯ ನಿರ್ವಹಿಸುತ್ತಿರುವ ಭವ್ಯವಾದ ಅರಮನೆ. ಇದು ಅರೇಬಿಕ್ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದರೊಳಗೆ ಅಪರೂಪದ ಗ್ರಂಥಾಲಯವೂ ಇದೆ.
ಶೇಕ್ ಜಾಯೇದ್ ಗ್ರ್ಯಾಂಡ್ ಮಸೀದಿ
ಇದು ಈ ದೇಶದಲ್ಲಿನ ಅತಿದೊಡ್ಡ ಮಸೀದಿ. ಇದರ ವಾಸ್ತುಶಿಲ್ಪ ಮತ್ತು ಕುಸುರಿ ಕಲೆ ನಯನ ಮನೋಹರವಾಗಿದೆ. ವಿಶೇಷವೆಂದರೆ ಇಲ್ಲಿರುವುದು ಮಾನವ ನಿರ್ಮಿತ ವಿಶ್ವದ ಅತಿ ದೊಡ್ಡ ನೆಲಹಾಸು. ಇದನ್ನು ನೋಡಿದರೂ ಅಚ್ಚರಿಯೆನಿಸುತ್ತದೆ. ಇಲ್ಲಿ ಸ್ತ್ರೀಯರಿಗೆ ವಸ್ತ್ರ ಸಂಹಿತೆ ಇದೆ.
ಸ್ವಾಮಿ ನಾರಾಯಣ ದೇವಾಲಯ
ಇದು ಅಬುಧಾಬಿಯಲ್ಲಿರುವ ಹಿಂದೂ ದೇವಾಲಯ. ಇದನ್ನು ಪ್ರಾಚೀನ ಹಿಂದೂ ವಾಸ್ತು ಶಿಲ್ಪದ ಪ್ರಕಾರ ರಚಿಸಲಾಗಿದ್ದು, ಇಲ್ಲಿನ ಪ್ರತೀ ಕೆತ್ತನೆಗಳು ವಿಶಿಷ್ಟವಾಗಿವೆ. ನಮ್ಮ ಪುರಾಣ, ಸಂಸ್ಕೃತಿಯನ್ನು ಬಿಂಬಿಸುತ್ತವೆ. ಶಾಂತಿಯಿಂದ ಕೂಡಿದ ಈ ಮಂದಿರವನ್ನು ರಾತ್ರಿ ದೀಪದ ಬೆಳಕಿನಲ್ಲಿ ನೋಡಿದ್ದು ಮನಸಿಗೆ ತುಂಬಾ ಹಿತವೆನಿಸಿತ್ತು.
ದುಬೈನ ಡೇರಾ ಎಂಬ ಪ್ರದೇಶದಲ್ಲಿ 'ಗೋಲ್ಡ್ ಸೂಕ್', 'ಮಸಾಲ ಸೂಕ್' ಮತ್ತು 'ಪರ್ಫ್ಯೂಮ್ ಸೂಕ್'ಗಳಿವೆ. ಇವುಗಳು ಆಯಾ ಪದಾರ್ಥಗಳನ್ನು ಮಾರುವ ಮಾರುಕಟ್ಟೆಗಳು.
ಇಲ್ಲಿನ ಗೋಲ್ಡ್ ಸೂಕ್ ಪ್ರಪಂಚದಲ್ಲೇ ಅತಿದೊಡ್ಡ ಮತ್ತು ಪ್ರಸಿದ್ಧ ಚಿನ್ನದ ಮಾರುಕಟ್ಟೆ ಎನ್ನಲಾಗಿದೆ. ತೆರಿಗೆ ಮುಕ್ತವಾಗಿ ಇಲ್ಲಿ ಚಿನ್ನದ ವಹಿವಾಟು ನಡೆಯುತ್ತದೆ ಎಂದು ಕೇಳಿ ತಿಳಿದೆ. ವಿಶ್ವದಲ್ಲೇ ಅತಿ ದೊಡ್ಡದಾದ ಉಂಗುರ, 'ನಜ್ಮತ್ ತೈಬಾ'ವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇಲ್ಲಿನ ಚಿನ್ನದ ವ್ಯಾಪಾರಿಗಳು ದಾರಿಯಲ್ಲಿ ಓಡಾಡುವವರನ್ನು, ಇಲ್ಲಿ ಬನ್ನಿ/ ಮೇಕಿಂಗ್ ಚಾರ್ಜ್ ಫ್ರೀ, ಟ್ಯಾಕ್ಸ್ ಫ್ರೀ ಎಂದು ಹೇಳುತ್ತ ವ್ಯಾಪಾರ ಮಾಡುವುದು ನೋಡಿ ಚಿನ್ನಕ್ಕಿರುವ ಬೆಲೆಯೇ ಕಡಿಮೆಯಾದಂತೆ ಅನಿಸಿತು. ಅಲ್ಲಿಂದ 'ಅಬ್ರ' ಎನ್ನುವ ಬೋಟ್ ರೈಡ್ ವ್ಯವಸ್ಥೆಯಲ್ಲಿ ಹೋದರೆ, ಹಳೆಯ ದುಬೈ ನೆನಪಿಸಲು ಕಟ್ಟಿರುವ ಸಾಂಪ್ರದಾಯಿಕ ಕಟ್ಟಡಗಳ 'ಹಿಸ್ಟಾರಿಕಲ್ ನೈಬರ್ ಹುಡ್' ಇದೆ. ಹಳೆಯ ದುಬೈ ಹೀಗಿತ್ತಾ? ಅನ್ನುವ ಅಚ್ಚರಿ ಮೂಡಿಸುತ್ತದೆ.

ದುಬೈ ಫ್ರೇಮ್
ಇದು ಜಬೀಲ್ ಪಾರ್ಕ್‌ನಲ್ಲಿದ್ದು, ವಿಶ್ವದ ಅತಿದೊಡ್ಡ ಫ್ರೇಮ್ ಆಕಾರದ ಕಟ್ಟಡ ಎನ್ನಲಾಗಿದೆ. ಇದು ವೀಕ್ಷಣಾಲಯ ಮತ್ತು ವಸ್ತು ಸಂಗ್ರಹಾಲಯವೂ ಹೌದು. ಇದರಲ್ಲಿನ ನೋಟ ಹಳೆಯ ಮತ್ತು ಆಧುನಿಕ ದುಬೈನ ದೃಶ್ಯಗಳನ್ನು ಒಂದೇ ಚೌಕಟ್ಟಿನಲ್ಲಿ ಬೇರ್ಪಡಿಸಿ ತೋರಿಸುವ ಅನುಭವ ಕೊಡುತ್ತದೆ. ಇದರ ಪಕ್ಕದಲ್ಲೇ .......
ಅರೇಬಿಕ್ ಕವಿತೆಗಳಿಂದ ಆವೃತವಾದ ಅಂಡಾಕಾರದ ಕಟ್ಟಡ ʻಮ್ಯೂಸಿಯಂ ಆಫ್ ದಿ ಫ್ಯೂಚರ್ʼ ಇಲ್ಲಿನ ಅದ್ಭುತಗಳಲ್ಲೊಂದು. ಇದು ಭವಿಷ್ಯದ ಜೀವನ ಶೈಲಿಯನ್ನು ಕಲ್ಪಿಸಿ ಕೊಡುವ ವಸ್ತು ಸಂಗ್ರಹಾಲಯ.
ಡೌನ್ ಟೌನ್‌ನಲ್ಲಿರುವ ʻದುಬೈ ಮಾಲ್ʼ ವಿಸ್ತೀರ್ಣದಲ್ಲಿ ವಿಶ್ವದ ಎರೆಡನೆಯ ದೊಡ್ಡ ಮಾರಾಟ ಮಳಿಗೆ. ಅಲ್ಲಿನ ʻಅಕ್ವೇರಿಯಮ್ʼ ಮತ್ತು ʻಐಸ್ ರಿಂಕ್ʼ ತುಂಬಾ ಆಕರ್ಷಣೀಯವಾಗಿದೆ. ಇದರ ವಿಶೇಷ ದೀಪಾಲಂಕಾರ ಮನ ಸೆಳೆಯಿತು.
ದುಬೈನ ಪ್ರಮುಖ ಆಕರ್ಷಣೆ, ವಿಶ್ವದಲ್ಲೇ ಅತಿ ಎತ್ತರದ ಮಾನವ ನಿರ್ಮಿತ ಕಟ್ಟಡ ʻಬುರ್ಜ್ ಖಲೀಫʼ. ಇದು ಅತ್ಯಾಧುನಿಕ ವಾಸ್ತುಶಿಲ್ಪದ ರಚನೆ ಮತ್ತು ವಿನ್ಯಾಸಗಳನ್ನು ಒಳಗೊಂಡಿದೆ. ಇಲ್ಲಿನ 125ನೆಯ ಮಹಡಿಯಲ್ಲಿ ರಾತ್ರಿ ನಿಂತು ನೋಡಿ ಕಣ್ತುಂಬಿಕೊಂಡ ಜಗಮಗಿಸುವ ಬೆಳಕಿನ ದುಬೈ ನಗರಿಯ ಸೌಂದರ್ಯ ಅಭೂತಪೂರ್ವ ಅನುಭವ ನೀಡುತ್ತದೆ.
ಪಾಮ್ ಜುಮೇರ, ಇದು ದುಬೈನಲ್ಲಿರುವ ಕೃತಕ ದ್ವೀಪಗಳ ಸಮೂಹ. ತಾಳೆ ಮರದ ಆಕೃತಿಯಲ್ಲಿ, ಸಮುದ್ರದ ಮೇಲೆ ರಚಿಸಿದ ವಿಸ್ತಾರವಾದ ದ್ವೀಪ. ಅಲ್ಲಿನ ವಿಶಾಲವಾದ ಅಟ್ಲಾಂಟಿಸ್ ಹೊಟೇಲ್ ಸೇರಿ ಎಲ್ಲವೂ ಮಾನವನ ಸಾಧನೆಯ ಬಗ್ಗೆ ಅಚ್ಚರಿ ಮೂಡಿಸುತ್ತವೆ.
ʻಮರೀನಾ ವಾಕ್ʼ, ದೀಪಗಳಿಂದ ಅಲಂಕೃತಗೊಂಡ ಕ್ರೂಸ್‌ಗಳಲ್ಲಿ ಕುಳಿತು ಸಂಚರಿಸುತ್ತ, ಬೆಳಕನ್ನೇ ಹೊತ್ತುಕೊಂಡು ನಿಂತಿರುವ ಎತ್ತರದ ಕಟ್ಟಡಗಳನ್ನು ನೋಡುತ್ತ ಕಳೆದ ಸಮಯ ಸ್ವಪ್ನ ಲೋಕದಲ್ಲಿಯೇ ಇದ್ದಂತೆನಿಸಿತ್ತು.
ʻಐನ್ ದುಬೈʼ ಎಂದರೆ 'ದುಬೈನ ಕಣ್ಣು'. ಇದು ಇಲ್ಲಿನ 'ಬ್ಲೂವಾಟರ್ಸ್ ದ್ವೀಪ'ದಲ್ಲಿದೆ. ಇದು ವಿಶ್ವದ ಅತಿ ಎತ್ತರದ ವೀಕ್ಷಣಾ ಚಕ್ರ. 250 ಮೀಟರ್ ಎತ್ತರವಿರುವ ಈ ದೈತ್ಯ ಚಕ್ರವು 48 ಕ್ಯಾಬಿನ್‌ಗಳನ್ನು ಹೊಂದಿದೆ. ಇದರಲ್ಲಿ ಕುಳಿತು ಭಯ ಮತ್ತು ಅಚ್ಚರಿಯಲ್ಲೇ ಬುರ್ಜ್ ಅಲ್ ಅರಬ್, ಪಾಮ್ ಜುಮೇರಾ ಹಾಗೂ ಪ್ರಮುಖ ಸ್ಥಳಗಳ ಅದ್ಭುತ ನೋಟವನ್ನು ನೋಡಿದೆವು.
ನಂತರ ಭೇಟಿ ಕೊಟ್ಟ'ಮಿರ್‍ಯಾಕಲ್ ಗಾರ್ಡನ್' ನಿಜಕ್ಕೂ ಸೋಜಿಗ. ಅಬ್ಬಬ್ಬ ಅಲ್ಲಿನ ಹೂಗಳು ಮತ್ತು ಹೂಗಳಿಂದ ರಚಿತವಾದ ವಿವಿಧ ಆಕೃತಿಗಳನ್ನು ನೋಡಲು ಎರೆಡು ಕಣ್ಣು ಸಾಲದು. ಇದು ಆರು ತಿಂಗಳು ಕಾಲ ಮಾತ್ರ ಇರುವ ಸಂಭ್ರಮ. ಇದು ಪ್ರಪಂಚದ ಅತಿ ದೊಡ್ಡ ನೈಸರ್ಗಿಕ ಹೂಗಳ ಉದ್ಯಾನವನ ಎನ್ನುತ್ತಾರೆ. ಬರೀ ಕಾಂಕ್ರೀಟ್ ಕಾಡನ್ನೇ ಕೆಲ ದಿನಗಳಿಂದ ನೋಡಿದ್ದ ನಮಗೆ ದುಬೈ ಜೀವಂತವಿದೆ ಎನಿಸಿದ್ದು ಇಲ್ಲಿಯೇ. ಅದೆಷ್ಟು ಥರದ, ಬಣ್ಣದ ಹೂಗಳು, ಆಕೃತಿಗಳು. ನನಗಂತೂ ಸಿಕ್ಕಾಪಟ್ಟೆ ಇಷ್ಟವಾಯ್ತು. ಅಂಥ ಮರಭೂಮಿಯಲ್ಲೂ ಇಷ್ಟೊಂದು ವಿಶಾಲ ಸ್ಥಳದಲ್ಲಿ ಚೆಂದದ ಹೂವುಗಳನ್ನರಳಿಸುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಕೊನೆಯಲ್ಲಿ ನಾವು ನೋಡಿದ್ದು 'ಗ್ಲೋಬಲ್ ವಿಲೇಜ್'. ಇದಂತೂ ದೀಪಗಳ ಬೆಳಕಿನಲ್ಲಿ ಮಿಂದೆದ್ದ ಪ್ರಪಂಚದಂತೆ ಕಂಡಿತು. ಇಡೀ ವಿಶ್ವವನ್ನೇ ಒಂದು ಹಳ್ಳಿಯಂತೆ ಪರಿಕಲ್ಪಿಸಿ, ರಚಿಸಿದ ಒಂದು ʻಜಾಗತಿಕ ಗ್ರಾಮʼ. ಇದೂ ಇಲ್ಲಿನ ಪ್ರಮುಖ ಪ್ರವಾಸಿ ತಾಣ. ಸಾಂಸ್ಕೃತಿಕ ಮನರಂಜನೆ ಮತ್ತು ಶಾಪಿಂಗ್ ಕೇಂದ್ರವಾಗಿದೆ. ಇಲ್ಲಿ ಮೊದಲು ನಮ್ಮ ದೇಶವನ್ನು ಪ್ರತಿನಿಧಿಸುವ ರಚನೆಯನ್ನು ಹುಡುಕಿ ನೋಡಿ ಸಂಭ್ರಮಿಸಿದೆವು.
ದುಬೈನಲ್ಲಿ ಸುತ್ತಾಡಲು ಈ ಸಮಯದಲ್ಲಿ ಹಿತಕರವಾದ ವಾತಾವರಣವಿರುತ್ತದೆ. ಅಬುದಾಭಿಯಲ್ಲಿ ಶುದ್ಧ ಸಸ್ಯಾಹಾರ ದೊರೆಯುವುದು ಸ್ವಲ್ಪ ಕಷ್ಟ. ಆದರೆ, ದುಬೈನಲ್ಲಿ ದಕ್ಷಿಣ ಭಾರತದವರ ಸಸ್ಯಾಹಾರದ ಹೊಟೇಲ್‌ಗಳು ಸಾಕಷ್ಟಿವೆ. ಸಾರಿಗೆ ವ್ಯವಸ್ಥಿತವಾಗಿದೆ. ಬಾಡಿಗೆ ಟ್ಯಾಕ್ಸಿಗಳಾಗಿ ಬೇಕಾದ ಲಕ್ಸುರಿ ಗಾಡಿಗಳು ಸಿಗುತ್ತವೆ. ಮೆಟ್ರೋ ವ್ಯವಸ್ಥೆಯೂ ಚೆನ್ನಾಗಿದೆ. ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತವೆ.