ಇಲ್ಲಿ ಆಧುನಿಕತೆ ಅಲ್ಲ ಆತ್ಮೀಯತೆ ಇದೆ
ಆಮಿಶ್ ಕುಶಲಕರ್ಮಿಗಳು ತಾವು ತಯಾರಿಸುವ ಪೀಠೋಪಕರಣಗಳಿಗಾಗಿ ಜಗತ್ಪ್ರಸಿದ್ಧರಾಗಿದ್ದಾರೆ. ಅವರು ಕೈಯಿಂದ ತಯಾರು ಮಾಡುವ ಪೀಠೋಪಕರಣಗಳು ಸರಳ ವಿನ್ಯಾಸವುಳ್ಳದ್ದಾಗಿದ್ದು ಗಟ್ಟಿಮುಟ್ಟಾಗಿರುತ್ತವೆ ಹಾಗೂ ಉತ್ತಮ ಗುಣಮಟ್ಟಕ್ಕೆ ಹೆಸರಾಗಿವೆ. ಅಂತೆಯೇ ಆಮಿಶ್ ಕ್ವಿಲ್ಟ್ (Quilt)ಗಳು ಅವರ ಕರಕುಶಲತೆಗೆ ಉದಾಹರಣೆ.
- ಜ್ಯೋತಿ ಪ್ರಸಾದ್
ಇಂದಿನ ಜಗತ್ತಿನಲ್ಲಿ ಪ್ರತಿಯೊಂದು ಹೊಸ ಹೊಸ ಆವಿಷ್ಕಾರವೂ ನಮ್ಮ ಬದುಕನ್ನು ಸುಲಭಗೊಳಿಸುತ್ತಿದೆ. ವೇಗವಾಗಿ ಓಡುವ ಕಾರುಗಳು, ಯಂತ್ರಗಳು, ಎಲ್ಲವನ್ನೂ ಬೆರಳ ತುದಿಯಲ್ಲಿ ತಂದುಕೊಡುವ ಸ್ಮಾರ್ಟ್‌ಫೋನ್‌ಗಳು, ಇಡೀ ಜಗತ್ತನ್ನೇ ಬೆಳಗುವ ವಿದ್ಯುತ್ ಶಕ್ತಿ—ಇವೆಲ್ಲವೂ ನಮ್ಮ ಜೀವನದ ಭಾಗಗಳಾಗಿವೆ. ಆದರೆ, ಅಭಿವೃದ್ಧಿ ಹೊಂದಿರುವ ಅಮೆರಿಕಾ ದೇಶದ ಪೆನ್ಸಿಲ್ವೇನಿಯಾ ರಾಜ್ಯದ ಲಾಂಕೆಸ್ಟರ್ ಕೌಂಟಿಯಲ್ಲಿ ಒಂದು ವಿಶಿಷ್ಟ ಸಮುದಾಯವಿದೆ. ಅದು ಈ ಎಲ್ಲಾ ಆಧುನಿಕ ಸೌಲಭ್ಯಗಳಿಂದ ದೂರ ಉಳಿದು, 16ನೇ ಶತಮಾನದ ಸರಳ ಜೀವನಶೈಲಿಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಆ ಸಮುದಾಯವೇ 'ಆಮಿಶ್'. ಅವರ ನೆಲೆಯೇ ಆಮಿಶ್ ವಿಲೇಜ್ (Amish Village).
ಪ್ರವಾಸ ಪ್ರಿಯರಿಗೆ ʻಆಮಿಶ್ ವಿಲೇಜ್ʼ ಒಂದು ವಿನೂತನ ಅನುಭವವನ್ನು ನೀಡುತ್ತದೆ. ಆಮಿಶ್ ಸಂಸ್ಕೃತಿಯ ವಿಶೇಷತೆಯೇ ಅವರ 'ಸರಳತೆ’ ಮತ್ತು ‘ನಮ್ರತೆ’. ಅವರಿಗೆ ಅವರ ಸಂಸ್ಕೃತಿಯ ಕುರಿತು ಅಪಾರ ಹೆಮ್ಮೆ ಮತ್ತು ಅದನ್ನು ಹಾಗೆಯೇ ಉಳಿಸಿಕೊಳ್ಳುವ ಹಂಬಲ. ಅವರ ಸಮುದಾಯದ ಹೊರತಾಗಿ ಬೇರೆ ಯಾರೊಂದಿಗೂ ಬೆರೆಯುವುದಿಲ್ಲ.
ಅವರ ಜೀವನ ಶೈಲಿಯು ಕೆಲವು ಧಾರ್ಮಿಕ ಕಟ್ಟುಪಾಡುಗಳಿಗೆ ಒಳಗಾಗಿದ್ದು, ಅದನ್ನು 'ಆರ್ಡ್ನುಂಗ್' (Ordnung) ಎನ್ನುತ್ತಾರೆ. ಆಧುನಿಕ ಉಪಕರಣಗಳು ಕುಟುಂಬ ಮತ್ತು ಸಮುದಾಯದ ಬಾಂಧವ್ಯ ಹಾಳು ಮಾಡುತ್ತವೆ ಮತ್ತು ಬಾಹ್ಯ ಪ್ರಪಂಚದ ಪ್ರಲೋಭನೆಗೆ ಸಿಕ್ಕಿ ಹಾಕಿಸಿಬಿಡುತ್ತವೆ ಎಂದು ನಂಬುವ ಇವರು, ಮನೆಯಲ್ಲಿ ವಿದ್ಯುತ್, ದೂರವಾಣಿ, ಟಿವಿ ಮತ್ತು ವೈಯಕ್ತಿಕ ಕಾರುಗಳನ್ನೂ ಬಳಸುವುದಿಲ್ಲ. ಪುರುಷರು ಮತ್ತು ಮಹಿಳೆಯರು ಸರಳವಾದ, ವಿಶೇಷ ವಿನ್ಯಾಸವಿಲ್ಲದ ಮತ್ತು ಚಿತ್ತಾರಗಳಿಲ್ಲದ ಬಟ್ಟೆಗಳನ್ನೇ ತೊಡುತ್ತಾರೆ. ಜೀವನದುದ್ದಕ್ಕೂ ಸರಳ ಮತ್ತು ಶಾಂತ ಜೀವನಶೈಲಿಯನ್ನು ರೂಢಿಸಿಕೊಂಡಿರುವ ಈ ಆಮಿಶ್ ಜನಾಂಗ ತಮ್ಮ ಓಡಾಟಕ್ಕೆ ಕಪ್ಪುಬಣ್ಣದ ಕುದುರೆಗಳಿಂದ ಎಳೆಯಲ್ಪಡುವ ‘ಬಗ್ಗಿ’ - Buggyಗಳನ್ನು ಬಳಸುತ್ತಾರೆ. ಹಳ್ಳಿಯ ರಸ್ತೆಗಳ ಮೇಲೆ ಈ ಬಗ್ಗಿಗಳನ್ನು ನೋಡುವುದೇ ಸುಂದರ.

ಇವರ ಶಿಕ್ಷಣಪದ್ಧತಿಯೂ ವಿಭಿನ್ನ. ಒಂದು-ಕೊಠಡಿಯ ಶಾಲೆಯಲ್ಲಿ (One room School) ಕೇವಲ ಎಂಟನೇ ತರಗತಿಯವರೆಗೆ ಔಪಚಾರಿಕ ಶಿಕ್ಷಣ ನೀಡಲಾಗುತ್ತದೆ. ದೊಡ್ಡದಾದ ಒಂದು ಕೊಠಡಿಯಲ್ಲಿ ಒಂದರಿಂದ ಎಂಟನೆಯ ತರಗತಿಯವರೆಗಿನ ಮಕ್ಕಳು ಒಟ್ಟಿಗೆ ಕುಳಿತು, ಒಬ್ಬರೇ ಶಿಕ್ಷಕರಿಂದ ಪಾಠ ಕಲಿಯುತ್ತಾರೆ. ಈ ಶಾಲೆಗಳು ಬಹಳ ಸರಳವಾಗಿರುತ್ತವೆ. ಆಧುನಿಕ ತಂತ್ರಜ್ಞಾನದಿಂದ ದೂರವಿರುತ್ತವೆ. ತಮ್ಮ ಮಕ್ಕಳು ಬಾಹ್ಯ ಪ್ರಪಂಚದ ಪ್ರಭಾವಕ್ಕೆ ಒಳಗಾಗದೆ, ತಮ್ಮ ಸಂಸ್ಕೃತಿ ಮತ್ತು ಅಗತ್ಯವಿರುವ ಕೃಷಿ ಹಾಗೂ ಗೃಹಬಳಕೆಯ ಕೌಶಲ್ಯಗಳನ್ನು ಕಲಿಯಲು ಎಷ್ಟು ಬೇಕೋ ಅಷ್ಟು ಸಾಕ್ಷರತೆ, ಸರಳ ಗಣಿತ ಮತ್ತು ಅವರ ಜೀವನಶೈಲಿಗೆ ಅಗತ್ಯವಾದ ಪ್ರಾಯೋಗಿಕ ಕೌಶಲ್ಯ (practical skills)ಗಳನ್ನು ಇಲ್ಲಿ ಕಲಿಸಲಾಗುತ್ತದೆ. ಎಂಟನೇ ತರಗತಿಯ ನಂತರ ಹುಡುಗರು ಕೃಷಿ ಮತ್ತು ಕರಕುಶಲ ಕೆಲಸಗಳನ್ನು ಮತ್ತು ಹುಡುಗಿಯರು ಮನೆಕೆಲಸಗಳನ್ನು ಕಲಿಯುತ್ತಾರೆ. ಶ್ರಮಜೀವಿಗಳಾದ ಇವರ ಮುಖ್ಯ ಉದ್ಯೋಗ ಕೃಷಿ ಮತ್ತು ಕರಕುಶಲ ಕಲೆ. ಜೀವನೋಪಾಯಕ್ಕೆ ಇದನ್ನೇ ಅವಲಂಬಿಸಿದ್ದಾರೆ. ತರಹೇವಾರಿ ಧಾನ್ಯಗಳನ್ನು ಬೆಳೆಯುತ್ತಾರಾದರೂ ಇವರ ಮುಖ್ಯ ಬೆಳೆಗಳು ಮೆಕ್ಕೆ ಜೋಳ ಮತ್ತು ತಂಬಾಕು. ಕೃಷಿಗಾಗಿ ಟ್ರಾಕ್ಟರ್ ಬದಲು ಬಲಶಾಲಿ ಕುದುರೆಗಳನ್ನು ಬಳಸುತ್ತಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಪ್ರತಿಯೊಂದು ಆಮಿಶ್ ಜಮೀನಿನಲ್ಲಿ ದನ-ಕರು, ಕೋಳಿ, ಕುದುರೆ ಮತ್ತು ಹಂದಿಗಳನ್ನು ಸಾಕುತ್ತಾರೆ. ಇವು ಬೆಳೆಗಳಿಗೆ ಅಗತ್ಯವಾದ ಗೊಬ್ಬರವನ್ನು ಮತ್ತು ಕುಟುಂಬಕ್ಕೆ ಮಾಂಸ ಹಾಗೂ ಡೈರಿ ಉತ್ಪನ್ನಗಳನ್ನು ನೀಡುತ್ತವೆ.
ಆಮಿಶ್ ಕುಶಲಕರ್ಮಿಗಳು ತಾವು ತಯಾರಿಸುವ ಪೀಠೋಪಕರಣಗಳಿಗಾಗಿ ಜಗತ್ಪ್ರಸಿದ್ಧರಾಗಿದ್ದಾರೆ. ಅವರು ಕೈಯಿಂದ ತಯಾರು ಮಾಡುವ ಪೀಠೋಪಕರಣಗಳು ಸರಳ ವಿನ್ಯಾಸವುಳ್ಳದ್ದಾಗಿದ್ದು, ಗಟ್ಟಿಮುಟ್ಟಾಗಿರುತ್ತವೆ ಹಾಗೂ ಉತ್ತಮ ಗುಣಮಟ್ಟಕ್ಕೆ ಹೆಸರಾಗಿವೆ. ಅಂತೆಯೇ ಆಮಿಶ್ ಕ್ವಿಲ್ಟ್ (Quilt)ಗಳು ಅವರ ಕರಕುಶಲತೆಗೆ ಉದಾಹರಣೆ. ಕೈಯಿಂದ ಹೊಲಿದ ಈ ಕಂಬಳಿಗಳು ಸಂಕೀರ್ಣವಾದ ಜ್ಯಾಮಿತೀಯ(geometrical) ವಿನ್ಯಾಸಗಳು ಮತ್ತು ಆಳವಾದ ಬಣ್ಣಗಳಿಗೆ ಹೆಸರುವಾಸಿಯಾಗಿವೆ.
ʻಫಾರ್ಮ್-ಟು-ಟೇಬಲ್ʼ ಜೀವನಶೈಲಿಯ ಆಮಿಶ್ ಜನರು ತಯಾರಿಸುವ ವಿವಿಧ ಬಗೆಯ ತಾಜಾ ಆಹಾರ, ಮನೆಯಲ್ಲಿ ಮಾಡಿದ ಬ್ರೆಡ್, ಜಾಮ್‌ಗಳು ಬಹಳ ರುಚಿಕರ. ಅಲ್ಲಿ ಭೇಟಿ ನೀಡಿದಾಗ ನೀವು ಇವುಗಳನ್ನು ಖರೀದಿಸಬಹುದು.
ಆಮಿಶ್ ಹಳ್ಳಿ ಅಥವಾ ಸಮುದಾಯದ ಪ್ರದೇಶವನ್ನು ಸುತ್ತಾಡಲು ಪ್ರವಾಸಿಗರಿಗೆ ಹಲವಾರು ರೀತಿಯ ಸಾರಿಗೆ ವಿಧಾನಗಳು ಲಭ್ಯವಿವೆ. ಪ್ರತಿಯೊಂದು ವಿಧಾನವೂ ವಿಭಿನ್ನ ರೀತಿಯ ಅನುಭವವನ್ನು ಕೊಡುತ್ತದೆ. ಮುಖ್ಯ ರಸ್ತೆಗಳನ್ನು ತಪ್ಪಿಸಿ, ಆಮಿಶ್ ಹಳ್ಳಿಯ ಒಳಗಿರುವ, ಸುತ್ತಮುತ್ತಲಿನ ಜಮೀನುಗಳ ನಡುವೆ ಹಾದು ಹೋಗುವ ಸಣ್ಣ, ಶಾಂತವಾದ ಮತ್ತು ಕಡಿಮೆ ವಾಹನ ದಟ್ಟಣೆಯ ರಸ್ತೆಗಳಲ್ಲಿ ಓಡಾಡುವ ಕುದುರೆ ಗಾಡಿ ಸವಾರಿ (Horse and Buggy Ride)ಯು ಆಮಿಶ್ ಜನರ ಸಹಜವಾದ ಸಾರಿಗೆ ವಿಧಾನ. ಅವರ ಪರಿಸರ ಮತ್ತು ಸಂಸ್ಕೃತಿಯನ್ನು ಅತ್ಯಂತ ಹತ್ತಿರದಿಂದ ಮತ್ತು ಅವರದೇ ವೇಗದಲ್ಲಿ ಅನುಭವಿಸಲು ಇದು ಅತ್ಯುತ್ತಮ ಮಾರ್ಗ.
ಇದಲ್ಲದೇ ಪ್ರವಾಸಿ ಬಸ್‌ಗಳೂ ಲಭ್ಯವಿದ್ದು, ಇಲ್ಲಿ ಮಾರ್ಗದರ್ಶಕರು (Tour Guide) ಆಮಿಶ್ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಅವರ ಜೀವನಶೈಲಿಯ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸುತ್ತಾ ಹೋಗುತ್ತಾರೆ. ನಮ್ಮದೇ ಕಾರುಗಳಲ್ಲಿ ಆಮಿಶ್ ಸಮುದಾಯಗಳು ಇರುವ ಗ್ರಾಮೀಣ ರಸ್ತೆಗಳಲ್ಲಿ ಓಡಾಡಬಹುದು.
ಗಮನದಲ್ಲಿರಲಿ
ಆಮಿಶ್ ಜನರು ಫೊಟೋ ತೆಗೆಸಿಕೊಳ್ಳಲು ಇಷ್ಟಪಡುವುದಿಲ್ಲ. ಅದು ತಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವಾದದ್ದೆಂದು ಅವರು ಭಾವಿಸುತ್ತಾರೆ. ದೂರದಿಂದ, ಕೇವಲ ಪರಿಸರ, ಕುದುರೆ ಗಾಡಿಗಳು ಅಥವಾ ಕಟ್ಟಡಗಳ ಛಾಯಾಚಿತ್ರಗಳನ್ನು ಮಾತ್ರ ತೆಗೆಯಬಹುದು ಅಥವಾ ಛಾಯಾಗ್ರಹಣಕ್ಕೆ ಸ್ಪಷ್ಟವಾಗಿ ಅನುಮತಿ ಇರುವ ಸ್ಥಳಗಳಲ್ಲಿ ಮಾತ್ರ ತೆಗೆಯಬಹುದು.
ಅವರ ಖಾಸಗಿತನವನ್ನು ಗೌರವಿಸುವುದು ಮುಖ್ಯವಾಗಿ ರಸ್ತೆಯಲ್ಲಿ ಹೋಗುವ ಕುದುರೆ ಗಾಡಿಗಳಿಗೆ ಆದ್ಯತೆ ನೀಡಿ ಜಾಗರೂಕತೆಯಿಂದ ಚಾಲನೆ ಮಾಡುವುದು ಅತ್ಯಗತ್ಯ.
ಇಲ್ಲಿನ ಭೇಟಿಯ ಸಮಯದಲ್ಲಿ ಆಮಿಶ್ ಜನರ ಐತಿಹಾಸಿಕ ಮನೆಗಳು, ದೊಡ್ಡ ಕೊಟ್ಟಿಗೆಗಳು, ಮತ್ತು ಕೃಷಿ ಪದ್ಧತಿಗಳನ್ನುನೋಡುವುದಲ್ಲದೇ ಈ ಮನೆಗಳ ಒಳಗೆ ವಿದ್ಯುತ್ ಮತ್ತು ಯಾವುದೇ ಆಧುನಿಕ ಪರಿಕರಗಳಿಲ್ಲದೇ ಹೇಗೆ ಬದುಕು ಸಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಆಮಿಶ್ ಸಮುದಾಯದ ನಡುವೆ ಆಮಿಶ್ ಜನಾಂಗವಲ್ಲದವರೂ ವಾಸಿಸುತ್ತಾರೆ. ಅವರನ್ನು ʻಇಂಗ್ಲೀಷರುʼ ಎನ್ನುತ್ತಾರೆ. ನೀವು ಆಮಿಶ್ ಕುದುರೆ ಗಾಡಿಗಳನ್ನು ನೋಡುವ ಅದೇ ರಸ್ತೆಗಳಲ್ಲಿ ಆಧುನಿಕ ಕಾರುಗಳೂ ಓಡಾಡುತ್ತವೆ. ಆಮಿಶ್ ಜಮೀನುಗಳ ಪಕ್ಕದಲ್ಲೇ ಆಧುನಿಕ ಮನೆಗಳೂ ಇರುತ್ತವೆ. ಇವುಗಳ ವ್ಯತ್ಯಾಸವು ಸುಲಭವಾಗಿ ಗೋಚರಿಸುತ್ತದೆ ಏಕೆಂದರೆ ‘ಇಂಗ್ಲೀಷರ’ ಮನೆಗಳಾದರೆ ವಿದ್ಯುತ್ ತಂತಿಯ ಸಂಪರ್ಕವನ್ನು ನೋಡುವಿರಿ. ಆಮಿಶರ ಮನೆಯಲ್ಲಿ ಸಹಜವಾಗಿಯೇ ಇದನ್ನು ಕಾಣಲಾರಿರಿ.
ಆಧುನಿಕ ಜಗತ್ತಿನ ವೇಗದ ನಡುವೆಯೂ, ಎರಡು ವಿಭಿನ್ನ ಜೀವನಶೈಲಿಗಳು (ಆಮಿಶ್ ಮತ್ತು ಇಂಗ್ಲಿಷ್) ಒಂದೇ ಭೌಗೋಳಿಕ ಪ್ರದೇಶದಲ್ಲಿ ಗೌರವಯುತವಾಗಿ ಸಹಬಾಳ್ವೆ ನಡೆಸುತ್ತಿರುವುದು ಮೆಚ್ಚಬೇಕಾದ ಸಂಗತಿಯೇ ಸರಿ
ಒಟ್ಟಾರೆ, ಕಾಲಚಕ್ರದಲ್ಲಿ ಹಿಂದೆ ಸರಿದು ಧಾರ್ಮಿಕ ನಂಬಿಕೆ, ʻಕುಟುಂಬ ಮತ್ತು ಸಮುದಾಯʼ ಕೇಂದ್ರೀಕೃತವಾದ ಒಂದು ಸರಳ ಜೀವನಶೈಲಿ ಮತ್ತು ತಮ್ಮ ಸಂಸ್ಕೃತಿಯ ಬಗೆಗೆ ಅವರಿಗಿರುವ ಅಭಿಮಾನವನ್ನು ತಿಳಿಯಲಿಕ್ಕಾದರೂ ಒಮ್ಮೆ ಆಮಿಶ್ ವಿಲೇಜ್‌ಗೆ ಭೇಟಿ ನೀಡಲೇಬೇಕು.