• ಡಾ. ಕೆ. ಬಿ. ಸೂರ್ಯಕುಮಾರ್, ಮಡಿಕೇರಿ

ಕಳೆದ ಬೇಸಿಗೆಯಲ್ಲಿ ನಾವು ಕೆನಡಾಕ್ಕೆ ಬಂದಿದ್ದಾಗ, ಹಸಿರು ಚಿಗುರುಗಳ ಆಭರಣ ಹೊತ್ತ ಮರಗಳನ್ನು ನೋಡಿ ಸಂತೋಷಪಟ್ಟಿದ್ದೆವು. ಆದರೆ ಮಕ್ಕಳು ಹೇಳಿದ ಮಾತು ಕಿವಿಗೆ ಅಂಟಿಕೊಂಡಿತ್ತು. ʼ ಶರತ್ಕಾಲದಲ್ಲಿ ಬಣ್ಣ ಬಣ್ಣದ ಎಲೆಗಳು ಹೇಗೆ ಹೊಳೆಯುತ್ತವೆಯೋ ನೋಡಲೇಬೇಕು!ʼ ಎನ್ನುವುದು. ಅವರ ಒತ್ತಾಯಕ್ಕೆ ಮಣಿದು ಈ ವರ್ಷ ಸಪ್ಟೆಂಬರ್ ಮೊದಲ ವಾರದಲ್ಲೇ ಕೆನಡಾಗೆ ಕಾಲಿಟ್ಟೆವು. ಆ ನಿರೀಕ್ಷೆ ವ್ಯರ್ಥವಾಗಲಿಲ್ಲ. ಸೆಪ್ಟೆಂಬರ್ ಮಧ್ಯಭಾಗಕ್ಕೆ ಬಂದೊಡನೆ ಶರತ್ಕಾಲ (Fall/Autumn) ತನ್ನ ಬಣ್ಣದ ಹಬ್ಬವನ್ನು ಆರಂಭಿಸಿತು. ಇದೊಂದು ಕಣ್ಣು ಕೋರೈಸುವ ಪ್ರಕೃತಿ ವಿಸ್ಮಯ. ಈ ಸಮಯದಲ್ಲಿ ಇಲ್ಲಿನ ಪರ್ವತಗಳು, ಉದ್ಯಾನವನಗಳು, ಸರೋವರ ತೀರಗಳು ಹಳದಿ, ಕಿತ್ತಳೆ, ಕೆಂಪು, ನೇರಳೆ, ಕಂದು ಬಣ್ಣಗಳಿಂದ ಕಂಗೊಳಿಸುತ್ತ ಎಲ್ಲೆಡೆ ಪ್ರಕೃತಿಯೇ ಕಲಾವಿದನಾಗಿ ಬಣ್ಣಗಳ ಚಿತ್ರಕಲೆ ಬಿಡಿಸುತ್ತಿರುವಂತೆ ಕಾಣುತ್ತಿತ್ತು. ಒಂದೊಂದು ಮರವು ಒಂದೊಂದು ಬಣ್ಣ, ಒಂದೊಂದು ಗಿಡವು ಒಂದೊಂದು ಶೈಲಿ. ನೋಡಲೆರಡು ಕಣ್ಣುಗಳು ಸಾಲದಂಥ ಸುಂದರ ದೃಶ್ಯ. ಈ ಬಣ್ಣ ಬದಲಾವಣೆಯ ಹಿಂದೆ ನೈಸರ್ಗಿಕ ವೈಜ್ಞಾನಿಕ ಕಾರಣಗಳ ಜತೆಗೆ ವಾತಾವರಣದ ಪ್ರಭಾವವೂ ಅಡಕವಾಗಿದೆ.

canada 3

ಶರತ್ಕಾಲ ಬರುವ ಸಂಕೇತಗಳು

ದಿನದ ಬೆಳಕು ಹಗಲಿನ ಉದ್ದ ಕಡಿಮೆಯಾಗುವುದು, ನಿಧಾನವಾಗಿ ತಾಪಮಾನ ಕುಸಿಯುವುದು. ಈ ಬದಲಾವಣೆಗಳು ಮರಗಳಿಗೆ ʼಚಳಿಗಾಲ ಬರುತ್ತಿದೆ, ನಿದ್ರೆಗೆ ತಯಾರಾಗುʼ ಎಂಬ ಸಂದೇಶವನ್ನು ನೀಡುತ್ತವೆ. ಹೀಗಾಗಿ ಮರಗಳು ತಮ್ಮ ಚಯಾಪಚಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ.

ಕ್ಲೋರೊಫಿಲ್‌ನ ಪಾತ್ರ

ಎಲೆಗಳಿಗೆ ಹಸಿರು ಬಣ್ಣ ನೀಡುವ ವರ್ಣ ದ್ರವ್ಯವೇ ಕ್ಲೋರೊಫಿಲ್. ಬೇಸಿಗೆಯಲ್ಲಿ ನಿರಂತರವಾಗಿ ಉತ್ಪತ್ತಿಯಾಗುತ್ತಿದ್ದ ಕ್ಲೋರೊಫಿಲ್ ಶರತ್ಕಾಲದಲ್ಲಿ ಉತ್ಪಾದನೆ ನಿಲ್ಲಿಸಿ ನಿಧಾನವಾಗಿ ಹಾಳಾಗುತ್ತದೆ. ಎನ್ಜೈಮ್ ಪ್ರಕ್ರಿಯೆಗಳ ಮೂಲಕ ಅದು ಬಣ್ಣವಿಲ್ಲದ ಕಣಗಳಾಗಿ ಬದಲಾಗುತ್ತದೆ. ಆ ಸಮಯದಲ್ಲಿ ಮರವು ಕ್ಲೋರೊಫಿಲ್‌ನಲ್ಲಿದ್ದ ನೈಟ್ರಜನ್ ಮತ್ತು ಮ್ಯಾಗ್ನೀಷಿಯಂ ಮುಂತಾದ ಪೋಷಕಾಂಶಗಳನ್ನು ಹೀರಿಕೊಂಡು ಮುಂದಿನ ವಸಂತಕ್ಕೆ ಸಂಗ್ರಹಿಸುತ್ತದೆ. ಹೀಗಾಗಿ ಎಲೆಗಳಲ್ಲಿ ಅಡಗಿದ್ದ ಇತರೆ ಬಣ್ಣಗಳು ಹೊರಬಂದು ಕಂಗೊಳಿಸುತ್ತವೆ.

canada 2

ಹವಾಮಾನದ ಪ್ರಭಾವ

ಶರತ್ಕಾಲದ ಬಣ್ಣಗಳ ತೀವ್ರತೆ ಹವಾಮಾನಕ್ಕೆ ಹೆಚ್ಚು ಅವಲಂಬಿತವಾಗಿದೆ. ಹಗಲು ಹೊತ್ತಿನಲ್ಲಿ ಸೂರ್ಯಪ್ರಕಾಶ ಹೆಚ್ಚು ಸಿಕ್ಕರೂ ರಾತ್ರಿ ತಂಪಾಗಿರುವುದರಿಂದ ಮರಗಳಲ್ಲಿ ಬಣ್ಣಗಳು ಇನ್ನಷ್ಟು ಗಾಢವಾಗುತ್ತವೆ. ಹಗಲು ಹೊತ್ತಿನ ಸಕ್ಕರೆ ಉತ್ಪಾದನೆಯೊಂದಿಗೆ ತಂಪಾದ ರಾತ್ರಿಯಲ್ಲಿ ಆ ವರ್ಣದ್ರವ್ಯಗಳು (anthocyanins) ಹೆಚ್ಚು ಕಾಲ ಉಳಿದುಕೊಳ್ಳುತ್ತವೆ. ವಿರಳವಾದ ಮಳೆ, ಸ್ಥಳೀಯ ಹವಾಮಾನ ಮತ್ತು ಮಣ್ಣಿನ ತೇವಾಂಶವೂ ಬಣ್ಣ ಬದಲಾವಣೆಯ ತೀವ್ರತೆಯನ್ನು ನಿರ್ಧರಿಸುತ್ತದೆ.

ಶರತ್ಕಾಲದ ಬಣ್ಣದ ವೈವಿಧ್ಯತೆ

ಹಳದಿ, ಬಂಗಾರ ಮತ್ತು ಕಿತ್ತಳೆ ಬಣ್ಣ ಕ್ಯಾರೆಟಿನಾಯ್ಡ್ಸ್ ಎಂಬ ವರ್ಣದ್ರವ್ಯದಿಂದ ಬಂದು ಬರ್ಚ್, ಆಸ್ಪೆನ್ ಮತ್ತು ಪಾಪ್ಲರ್ ಮರಗಳಿಗೆ ಚಿನ್ನದ ಹಳದಿ ಹೊಳಪು ತರುತ್ತವೆ. ಶರತ್ಕಾಲದಲ್ಲೇ ರೂಪುಗೊಳ್ಳುವ ಆಂಥೊಸಯಾನಿನ್ಸ್ ಎಂಬ ಪಿಗ್ಮೆಂಟ್ ಕೆಂಪು, ನೀಲಿ ಮತ್ತು ನೇರಳೆ ಬಣ್ಣಗಳನ್ನು ನೀಡುತ್ತವೆ. ರೆಡ್ ಮೇಪಲ್, ಸ್ಕಾರ್ಲೆಟ್ ಓಕ್ ಮತ್ತು ಡಾಗ್‌ವುಡ್ ಮರಗಳಲ್ಲಿ ಇವು ಹೆಚ್ಚಾಗಿ ಕಂಡು ಹೊಳೆಯುವ ಕೆಂಪು ಬಣ್ಣ ತರುತ್ತವೆ. ಟ್ಯಾನಿನ್ಸ್ : ಕಂದು ಮತ್ತು ಕಂಚು ಬಣ್ಣವನ್ನು ನೀಡುತ್ತವೆ. ಕೆಲವು ಓಕ್ ಮತ್ತು ಬೀಚ್ ಮರಗಳಲ್ಲಿ ಶರತ್ಕಾಲದ ಕೊನೆಯ ಕ್ಷಣಗಳಲ್ಲಿ ಇವು ಮುಖ್ಯವಾಗಿ ಗೋಚರಿಸುತ್ತವೆ.

canada (1)

ಬಣ್ಣದ ಹಬ್ಬದ ನಂತರ ಏನು?

ಶರತ್ಕಾಲದ ಕೊನೆಯ ಹಂತದಲ್ಲಿ ಎಲ್ಲಾ ಬಣ್ಣಗಳು ನಿಧಾನವಾಗಿ ಮಂಕಾಗುತ್ತವೆ. ಎಲೆ ಮತ್ತು ಮರದ ನಡುವೆ ಇರುವ ಸಂಪರ್ಕ ಮುಚ್ಚಿಕೊಂಡು ಎಲೆಗಳು ಒಣಗಿ ನೆಲಕ್ಕೆ ಬಿದ್ದು, ಕರಗಿ, ಮಣ್ಣಿಗೆ ಪೋಷಕಾಂಶಗಳನ್ನು ಹಿಂತಿರುಗಿಸುತ್ತದೆ. ಮರಗಳು ಚಳಿಗಾಲದಲ್ಲಿ ನಿಶ್ಚೇಷ್ಟಿತಾವಸ್ಥೆಗೆ (dormancy) ಹೋಗಿ ಮುಂದಿನ ವಸಂತಕ್ಕೆ ಹೊಸ ಚಿಗುರುಗಳನ್ನು ತರಲು ತಮಗೆ ಬೇಕಾದ ಶಕ್ತಿಯನ್ನು ಸಂಗ್ರಹಿಸಿರುತ್ತವೆ. ಹೀಗೆ ವಸಂತದಲ್ಲಿ ಹೊಸ ಜೀವಕ್ಕೆ ದಾರಿ ಮಾಡುತ್ತದೆ. ಕಣ್ಣಿಗೆ ಇಷ್ಟೊಂದು ಆನಂದವನ್ನು ನೀಡುವ ಕ್ಷಣಗಳನ್ನು ಅನುಭವಿಸಲು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಕೆನಡಾ ಪ್ರವಾಸ ಮಾಡಲೇ ಬೇಕು.