ಬಿ ಹ್ಯಾಪಿ ನೋ ಜಿಡಿಪಿ ಅಂತಿದೆ ಭೂತಾನ್
ಭೂತಾನ್ ʻಜಿಎನ್‌ಎಚ್ʼ ತತ್ತ್ವದಿಂದ ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಅಭಿವೃದ್ಧಿಗಿಂತ ಜನರ ಸಂತೋಷ ಮತ್ತು ಶಾಂತಿಗೆ ಹೆಚ್ಚಿನ ಆದ್ಯತೆ. ಬಹುಶಃ ಅದಕ್ಕಾಗಿಯೇ ಇಲ್ಲಿ ಜನರ ಮುಖದಲ್ಲಿ ಸದಾ ನಗು ಕಾಣುತ್ತದೆ. ಭೂತಾನ್‌ಗೆ ಭೇಟಿ ನೀಡುವ ಬಹುತೇಕರು ಒಂದು ʻಇಲ್ಲಿ ಸಮಯ ನಿಧಾನವಾಗಿ ಸಾಗುವಂತೆ ಅನುಭವವಾಗುತ್ತದೆʼ ಎನ್ನುತ್ತಾರೆ.
- ಭಾನುಮತಿ - ಬಿ.ಎಸ್.
ಇತ್ತೀಚೆಗೆ ಭೂತಾನ್ ದೇಶಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಪ್ರಕೃತಿ, ಶಾಂತಿ, ಸಂಸ್ಕೃತಿ ಮತ್ತು ನಿಯಮಬದ್ಧ ಜೀವನಶೈಲಿಯಿಂದ ಪ್ರಸಿದ್ಧವಾಗಿರುವ ಈ ಪುಟ್ಟ ಹಿಮಾಲಯ ರಾಷ್ಟ್ರ, ನಿಜವಾಗಿಯೂ ವಿಭಿನ್ನ ಅನುಭವ ನೀಡಿತು. ಭಾರತದ ಗಡಿಯಿಂದ ಕೆಲವೇ ಗಂಟೆಗಳ ದೂರದಲ್ಲಿದ್ದರೂ, ಭೂತಾನ್ ಪ್ರವೇಶಿಸಿದ ಕ್ಷಣದಿಂದಲೇ ಒಂದು ಹೊಸ ಜಗತ್ತಿಗೆ ಬಂದ ಅನುಭವವಾಗುತ್ತದೆ. ಸ್ವಚ್ಛ ರಸ್ತೆಗಳು, ಹಸಿರು ಪರ್ವತಗಳು, ಶಾಂತ ವಾತಾವರಣ ಮತ್ತು ನಗುವಿನೊಂದಿಗೆ ಮಾತನಾಡುವ ಸ್ಥಳೀಯ ಜನರು ಪ್ರವಾಸಿಗರನ್ನು ಮೊದಲ ಕ್ಷಣದಲ್ಲೇ ಆಕರ್ಷಿಸುತ್ತಾರೆ.
ನಮ್ಮ ಪ್ರಯಾಣವು ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ಆರಂಭವಾಯಿತು. ಅಲ್ಲಿಂದ ಡುವಾರ್ಸ್ ಪ್ರದೇಶದ ಹಸಿರು ಕಾಡುಗಳು ಮತ್ತು ಚಹಾ ತೋಟಗಳ ಮಧ್ಯೆ ಸಾಗುತ್ತಾ ಫುಂಟ್‌ಶೋಲಿಂಗ್ ತಲುಪಿದೆವು. ಇಂಡೋ–ಭೂತಾನ್ ಗಡಿಯನ್ನು ದಾಟಿದ ತಕ್ಷಣವೇ ಅಲ್ಲಿನ ಶಿಸ್ತು ಮತ್ತು ಸ್ವಚ್ಛತೆ ಗಮನ ಸೆಳೆಯಿತು.
ಇದನ್ನೂ ಓದಿ: ನಾನು ಕಂಡ ಕಳೆದು ಹೋದ ಕರ್ನಾಟಕದ ಸುಂದರ ಕೋಟೆ – ಬೇಕಲ
ಫುಂಟ್‌ಶೋಲಿಂಗ್ – ಭೂತಾನ್‌ನ ಪ್ರವೇಶ ದ್ವಾರ
ಫುಂಟ್‌ಶೋಲಿಂಗ್ ಭೂತಾನ್‌ನ ಪ್ರಮುಖ ಗಡಿ ಪಟ್ಟಣ. ಇಲ್ಲಿ ಪರ್ಮಿಟ್ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸ್ಥಳೀಯ ಮಾರುಕಟ್ಟೆ ಸುತ್ತಾಡಿದೆವು. ಭಾರತೀಯ ನಗರಗಳ ಗದ್ದಲಕ್ಕೆ ಹೋಲಿಸಿದರೆ ಇಲ್ಲಿ ಅತ್ಯಂತ ಶಾಂತ ವಾತಾವರಣವಿತ್ತು.
ಥಿಂಪು – ಶಾಂತ ರಾಜಧಾನಿ
ಭೂತಾನ್ ರಾಷ್ಟ್ರದ ರಾಜಧಾನಿ ಥಿಂಪು. ಬೆಟ್ಟಗಳ ಮಧ್ಯೆ ಹರಿಯುವ ನದಿಗಳು ಮತ್ತು ಮೋಡಗಳ ನಡುವೆ ಸಾಗುವ ರಸ್ತೆ ಪ್ರಯಾಣವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿತ್ತದೆ. ಥಿಂಪುವಿನ ಪ್ರಮುಖ ಆಕರ್ಷಣೆ ಬುದ್ಧ ದೊರ್ದೆನ್ಮಾ ಪ್ರತಿಮೆ. ಈ ಪ್ರತಿಮೆ ಭವ್ಯವಾಗಿದ್ದು, ನಗರದ ಸಂಪೂರ್ಣ ದೃಶ್ಯವನ್ನು ಮೇಲಿನಿಂದ ನೋಡುವ ಅವಕಾಶ ನೀಡುತ್ತದೆ. ತಾಶಿಚೋ ಜೋಂಗ್, ಚಾಂಗಾಂಗ್ಖಾ ದೇವಾಲಯ ಹಾಗೂ ಸ್ಥಳೀಯ ಸಾಂಸ್ಕೃತಿಕ ಕೇಂದ್ರಗಳು ಭೂತಾನ್‌ನ ಇತಿಹಾಸ ಮತ್ತು ಬೌದ್ಧ ಸಂಸ್ಕೃತಿಯನ್ನು ನಮಗೆ ಪರಿಚಯಿಸಿತು. ಇಲ್ಲಿ ವಿಶೇಷವಾಗಿ ಗಮನಸೆಳೆದ ಸಂಗತಿ ಎಂದರೆ ಟ್ರಾಫಿಕ್ ಸಿಗ್ನಲ್‌ಗಳ ಕೊರತೆ. ಟ್ರಾಫಿಕ್ ಪೊಲೀಸರು ಕೈಚಳಕದಿಂದ ವಾಹನ ಸಂಚಾರ ನಿಯಂತ್ರಿಸುವುದು ಪ್ರವಾಸಿಗರಿಗೆ ಇಲ್ಲಿ ವಿಭಿನ್ನ ಅನುಭವ ನೀಡುತ್ತದೆ.
ಡೋಚುಲಾ ಪಾಸ್ ಮತ್ತು ಪುನಾಖಾ
ಸುಮಾರು 3,100 ಮೀಟರ್ ಎತ್ತರದಲ್ಲಿರುವ ಡೋಚುಲಾ ಪಾಸ್‌ನಲ್ಲಿ 108 ಡ್ರುಕ್ ವಾಂಗ್ಯಾಲ್ ಚೋರ್ಟೆನ್‌ಗಳು ಅತ್ಯಂತ ಸುಂದರವಾಗಿ ಕಾಣುತ್ತವೆ. ಹವಾಮಾನ ಸ್ವಚ್ಛವಾಗಿದ್ದರೆ ಹಿಮಾಲಯ ಪರ್ವತಗಳ ಅದ್ಭುತ ದೃಶ್ಯ ಕಾಣಬಹುದು. ನಾವು ಅಲ್ಲಿಂದ ಪುನಾಖಾ ಕಣಿವೆಗೆ ತೆರಳಿ ನದಿಗಳ ಸಂಗಮದ ಮಧ್ಯೆ ಇರುವ ಪುನಾಖಾ ಜೋಂಗ್ ವೀಕ್ಷಣೆ ಮಾಡಿದೆವು. ಇದು ಭೂತಾನ್‌ನ ಅತ್ಯಂತ ಸುಂದರ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ.
ಪಾರೋ ಮತ್ತು ಚೆಲೆಲಾ ಪಾಸ್
ಪಾರೋ ನಗರ ಪ್ರಕೃತಿ ಸೌಂದರ್ಯದಿಂದ ಮನಸೆಳೆಯುತ್ತದೆ. ಬೆಟ್ಟಗಳ ನಡುವೆ ಇರುವ ಈ ಪಟ್ಟಣವು ತುಂಬಾ ಶಾಂತ ಮತ್ತು ಸ್ವಚ್ಛವಾಗಿದೆ. ಚೆಲೆಲಾ ಪಾಸ್‌ಗೆ ತೆರಳಿದಾಗ ತಂಪಾದ ಗಾಳಿ, ಮತ್ತು ಹಿಮಾಲಯ ಪರ್ವತಗಳ ದೃಶ್ಯ ಮನಸಿಗೆ ಅಪಾರ ಸಂತೋಷ ನೀಡಿತು. ಸ್ಥಳೀಯ ಮಾರುಕಟ್ಟೆಗಳಲ್ಲಿ ಮರದ ಕಲಾಕೃತಿಗಳು, ಹ್ಯಾಂಡ್‌ಮೇಡ್ ವಸ್ತುಗಳು ಮತ್ತು ಬೌದ್ಧ ಸ್ಮರಣಿಕೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಸಂತೋಷಕ್ಕೆ ಮಹತ್ವ ನೀಡುವ ದೇಶ
ಭೂತಾನ್ ʻಜಿಎನ್‌ಎಚ್ʼ ತತ್ವದಿಂದ ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಅಭಿವೃದ್ಧಿಗಿಂತ ಜನರ ಸಂತೋಷ ಮತ್ತು ಶಾಂತಿಗೆ ಹೆಚ್ಚಿನ ಆದ್ಯತೆ. ಬಹುಶಃ ಅದಕ್ಕಾಗಿಯೇ ಇಲ್ಲಿ ಜನರ ಮುಖದಲ್ಲಿ ಸದಾ ನಗು ಕಾಣುತ್ತದೆ. ಭೂತಾನ್‌ಗೆ ಭೇಟಿ ನೀಡುವ ಬಹುತೇಕರು ಒಂದು ʻಇಲ್ಲಿ ಸಮಯ ನಿಧಾನವಾಗಿ ಸಾಗುವಂತೆ ಅನುಭವವಾಗುತ್ತದೆʼ ಎನ್ನುತ್ತಾರೆ. ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾದ ಗದ್ದಲದಿಂದ ದೂರವಾಗಿ, ಪ್ರಕೃತಿಯ ನಡುವೆ ಕೆಲವು ದಿನಗಳನ್ನು ಕಳೆಯಲು ಇದು ಅತ್ಯುತ್ತಮ ಸ್ಥಳ. ಹಸಿರು ಪರ್ವತಗಳು, ಬೌದ್ಧ ಮಠಗಳು ಮತ್ತು ಇಲ್ಲಿನ ಶಾಂತ ವಾತಾವರಣ ಮನಸಿಗೆ ವಿಶ್ರಾಂತಿ ನೀಡುತ್ತವೆ.
ಆಹಾರ ಮತ್ತು ಜೀವನಶೈಲಿ
ಭೂತಾನಿ ಆಹಾರದಲ್ಲಿ ಮೆಣಸಿನಕಾಯಿ ಮತ್ತು ಚೀಸ್ ಹೆಚ್ಚು ಬಳಸುತ್ತಾರೆ. ʻEma Datshiʼ ಭೂತಾನ್‌ನ ಪ್ರಸಿದ್ಧ ಆಹಾರ. ಸ್ಥಳೀಯರು ತಮ್ಮ ಸಾಂಪ್ರದಾಯಿಕ ಉಡುಪುಗಳಾದ ʻGhoʼ ಮತ್ತು ʻKiraʼ ಧರಿಸುವುದು ವಿಶೇಷ ಆಕರ್ಷಣೆ.
ಟೈಗರ್ಸ್ ನೆಸ್ಟ್ – ಭೂತಾನ್‌ನ ಪ್ರಸಿದ್ಧ ಟ್ರೆಕ್ಕಿಂಗ್ ಸ್ಪಾಟ್
ಭೂತಾನ್ ಪ್ರವಾಸದ ಪ್ರಮುಖ ಆಕರ್ಷಣೆಯೇ ʻಪಾರೋ ತಕ್ತ್ಸಾಂಗ್ʼ ಅಥವಾ ʻಟೈಗರ್ಸ್ ನೆಸ್ಟ್ʼ. ಇದು ಭೂತಾನ್‌ನ ಅತ್ಯಂತ ಪ್ರಸಿದ್ಧ ಬೌದ್ಧ ಮಠ. ಪಾರೋ ಕಣಿವೆಯ ಪರ್ವತದ ಕಲ್ಲಿನ ತುದಿಯಲ್ಲಿ ಸುಮಾರು 3,120 ಮೀಟರ್ ಎತ್ತರದಲ್ಲಿದೆ. ಈ ಮಠಕ್ಕೆ ತಲುಪಲು ಟ್ರೆಕ್ಕಿಂಗ್ ಮಾಡಬೇಕು. ಈ ಟ್ರೆಕ್ ಆರೇಳು ಕಿಮೀ ರೌಂಡ್ ಟ್ರಿಪ್ ಆಗಿದ್ದು, ಬರೋಬ್ಬರಿ ಐದಾರು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
ಸ್ಥಳೀಯ ಕತೆಗಳ ಪ್ರಕಾರ ಗುರು ಪದ್ಮಸಂಭವ ಅವರು ಹುಲಿಯ ಮೇಲೆ ಕುಳಿತು ಈ ಪರ್ವತಕ್ಕೆ ಬಂದು ಧ್ಯಾನ ಮಾಡಿದರು ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಸ್ಥಳಕ್ಕೆ ʻಟೈಗರ್ಸ್ ನೆಸ್ಟ್ʼ ಎಂದು ಕರೆಯಲಾಗುತ್ತಿದೆ. ಇಂದು ಇದು ವಿಶ್ವದ ಅತ್ಯಂತ ಪ್ರಸಿದ್ಧ ಬೌದ್ಧ ಧಾರ್ಮಿಕ ತಾಣಗಳಲ್ಲಿ ಒಂದು.
ಭೂತಾನ್‌ನ ಪ್ರವಾಸವು ಕೇವಲ ಒಂದು ಟೂರ್ ಅಲ್ಲ; ಅದು ಮನಸಿಗೆ ಶಾಂತಿ ನೀಡುವ ಅನುಭವ. ಪ್ರಕೃತಿ, ಸಂಸ್ಕೃತಿ, ಶಾಂತ ಜೀವನಶೈಲಿ ಮತ್ತು ಸಂತೋಷದ ಅರ್ಥವನ್ನು ತಿಳಿದುಕೊಳ್ಳಲು ಭೂತಾನ್ ಒಮ್ಮೆ ನೋಡಲೇಬೇಕಾದ ದೇಶ.
ಗೈಡ್ ಕಡ್ಡಾಯ!
ಥಿಂಪು ಮತ್ತು ಪಾರೋ ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುವಾಗ ಅಧಿಕೃತ ಭೂತಾನ್ ಟೂರ್ ಗೈಡ್ ಕಡ್ಡಾಯವಾಗಿ ನಿಮ್ಮೊಂದಿಗೆ ಇರಬೇಕು. ಭೂತಾನ್ ತನ್ನ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಪ್ರವಾಸಿಗರಿಂದ ʻಸುಸ್ಥಿರ ಅಭಿವೃದ್ಧಿ ಶುಲ್ಕʼ (SDF) ತೆರಿಗೆಯನ್ನು ವಸೂಲಿ ಮಾಡುತ್ತದೆ. ಭಾರತೀಯ ಪ್ರತಿ ವ್ಯಕ್ತಿಗೆ ಪ್ರತಿ ರಾತ್ರಿಗೆ 1,200 ರುಪಾಯಿ, 5 ವರ್ಷದೊಳಗಿನ ಮಕ್ಕಳಿಗೆ ನಿಶುಲ್ಕ, 6 -12 ವರ್ಷದ ಮಕ್ಕಳಿಗೆ 50% ರಿಯಾಯಿತಿ ಇದೆ.
ಭೂತಾನ್ ಬಗ್ಗೆ ಒಂದಷ್ಟು ಮಾಹಿತಿ
- ಅಧಿಕೃತ ಭಾಷೆ: ಜೋಂಗ್ಖಾ
- ಕರೆನ್ಸಿ: ನುಲ್ಟ್ರಮ್ (BTN)
- ಭಾರತೀಯ ರುಪಾಯಿಯನ್ನೂ ಕೆಲವೆಡೆ ಬಳಸಬಹುದು
- ಭಾರತೀಯರಿಗೆ ವೀಸಾ ಅಗತ್ಯವಿಲ್ಲ. ಆದರೆ ಎಂಟ್ರಿ ಪರ್ಮಿಟ್ ಕಡ್ಡಾಯ
- ದೇಶದ ಶೇ. 70ಕ್ಕೂ ಹೆಚ್ಚು ಭಾಗ ಕಾಡಿನಿಂದ ಆವರಿಸಿದೆ
- ಭೂತಾನ್ ವಿಶ್ವದಲ್ಲಿನ ಕಾರ್ಬನ್ ನೆಗೆಟಿವ್ ಕಂಟ್ರಿಗಳಲ್ಲಿ ಒಂದು
- ಭಾರತೀಯ SIM ಕೆಲವೆಡೆ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿ ಸ್ಥಳೀಯ SIM ತೆಗೆದುಕೊಳ್ಳುವುದು ಉತ್ತಮ
- Wi-Fi ಬಹುತೇಕ ಹೊಟೇಲ್‌ಗಳಲ್ಲಿ ಲಭ್ಯ
- ಭೂತಾನ್ ಸಮಯ ಭಾರತಕ್ಕಿಂತ 30 ನಿಮಿಷ ಮುಂದೆ
- ಒಂದೇ ದಿನದಲ್ಲಿ ಬಿಸಿಲು, ಮಳೆ, ಮಂಜು ಸಂಭವಿಸಬಹುದು. ಹಾಗಾಗಿ ಜಾಕೆಟ್ ಮತ್ತು ಛತ್ರಿ ಜತೆಗಿರಲಿ.
- ಪ್ರತಿ ತಿರುವಿನಲ್ಲೂ ಒಂದು ಸುಂದರ ದೃಶ್ಯ ಕಾಣುತ್ತದೆ. ಪರ್ವತಗಳು, ಮಂಜು, ಮರದ ಮನೆಗಳು ಮತ್ತು ನದಿಗಳು ಫೊಟೋಗ್ರಫಿ ಪ್ರಿಯರಿಗೆ ಇದು ಅದ್ಭುತ ತಾಣ.