Tuesday, April 28, 2026
Tuesday, April 28, 2026

ಸಾಗರಕ್ಕೆ ಶಾಂತಿಮಂತ್ರ ಕಲಿಸುತ್ತಿರುವ ಬುದ್ಧ!

ಅಂದು ರೈಲಿನಲ್ಲಿ ಇದ್ದದ್ದು ಬರೋಬ್ಬರಿ 1700 ಮಂದಿ. ಸುನಾಮಿಯ ಸುಳಿವು ದೊರಕುತ್ತಿದ್ದಂತೆಯೇ ಅಧಿಕಾರಿಗಳು ಈ ರೈಲು ನಿಲ್ಲಿಸುವ ಸಕಲ ಪ್ರಯತ್ನ ನಡೆಸುತ್ತಾರೆ. ಅಂದು ಹಲವಾರು ರೈಲುಗಳು ತಮ್ಮ ಪ್ರಯಾಣ ನಿಲ್ಲಿಸಿ ಸುರಕ್ಷಿತ ಜಾಗದಲ್ಲಿ ತಂಗುತ್ತವೆ. ಆದರೆ ಈ ರೈಲನ್ನು ನಿಲ್ಲಿಸಲು ಸಾಧ್ಯವಾಗುವುದೇ ಇಲ್ಲ.

ಭಾರತ ಭೂಪಟದಿಂದ ರಾಜ್ಯವೊಂದು ಉದುರಿಬಿದ್ದು ಸಮುದ್ರದಲ್ಲಿ ತೇಲುತ್ತಿದ್ದೆಯೇನೋ ಅಂತಷ್ಟೇ ಅನಿಸುತ್ತದೆ, ಶ್ರೀಲಂಕಾವನ್ನು ಅಟ್ಲಾಸ್, ಗ್ಲೋಬ್ ಅಥವಾ ನಕಾಶೆಗಳಲ್ಲಿ ನೋಡಿದಾಗ. ಶ್ರೀಲಂಕಾ ಅಂದಾಕ್ಷಣ ರಾಮಾಯಣ ನೆನಪಾಗಿ, ರಾವಣ ಸೀತೆಯನ್ನು ಹೊತ್ತೊಯ್ದ ಪುರಾಣ ನೆನಪಾಗಿ ಅದೊಂದು ಶತ್ರುಭೂಮಿ ಅನಿಸುತ್ತದೆ. ಹನುಮಂತನಿಂದ ದಹಿಸಲ್ಪಟ್ಟು ಕರಕಲಾಗಿ ಹೋಗಿರುವ ಭೂಮಿಯೊಂದು ಕಣ್ಣಮುಂದೆ ಬರುತ್ತದೆ. ಇದಿಷ್ಟನ್ನು ಹೊರತುಪಡಿಸಿದರೆ ಶ್ರೀಲಂಕಾ ಅಂದಾಕ್ಷಣ ನೆನಪಿಗೆ ಬರುವುದು ಅಲ್ಲಿನ ಕ್ರಿಕೆಟಿಗರ ಮುಖಗಳು ಮತ್ತು ಹೆಸರುಗಳು. ಜಿಯೋಪೊಲಿಟಿಕಲ್ ದೃಷ್ಟಿಯಿಂದ ನೋಡದೇ ಹೋದಲ್ಲಿ ಶ್ರೀಲಂಕಾ ಅಂದರೆ ನಮ್ಮ ಕೇರಳ ತಮಿಳುನಾಡಿನಂತಿರುವ ಜಾಗವಂತಷ್ಟೇ ಅನಿಸಿಬಿಡುತ್ತದೆ. ಯಾರಾದರೂ ಶ್ರೀಲಂಕಾಗೆ ಪ್ರವಾಸ ಹೋಗಿದ್ದೆ ಅಂದಾಗ ಶ್ರೀಲಂಕಾ ಪ್ರವಾಸ ಹೋಗುವಷ್ಟು ವರ್ಥ್ ಇರುವ ದೇಶವಾ? ಅಸಲಿಗೆ ಅದು ವಿದೇಶ ಅನ್ನುವ ಭಾವವಾದರೂ ಕೊಡುತ್ತದೆಯಾ ಎಂಬೆಲ್ಲ ಪ್ರಶ್ನೆಗಳು ಸುಳಿದಾಡುತ್ತವೆ. ಆದರೆ ನಂಬಿ, ಶ್ರೀಲಂಕಾ ನಿಮ್ಮ ಪ್ರವಾಸಿ ಪಟ್ಟಿಯಲ್ಲಿ ಇರಲೇಬೇಕಾದ ದೇಶಗಳಲ್ಲೊಂದು. ಭೂಪಟದಲ್ಲಿ ಒಂದು ಚಿಟಿಕೆಯಷ್ಟು ಕಾಣುವ ಶ್ರೀಲಂಕಾವನ್ನು ಪೂರ್ತಿಯಾಗಿ ನೋಡಿಬರಲು ಕನಿಷ್ಠ ಹತ್ತು ದಿನಗಳಾದರೂ ಬೇಕು. ಹಾಗೆ ಹತ್ತೇಹತ್ತು ದಿನ ಇದ್ದರೆ ಶ್ರೀಲಂಕಾದಲ್ಲೇ ಇದ್ದುಬಿಡೋಣ ಅನಿಸುವಷ್ಟು ಅಪಾಯಕಾರಿ ಅಡಿಕ್ಟಿವ್ ಗುಣವೂ ಈ ಲಂಕೆಗಿದೆ.

ಇದನ್ನೂ ಓದಿ: ಅಮೆರಿಕದಲ್ಲೂ ಭಾರತೀಯ ಪರಂಪರೆಯ ಹೊನಲು

ಇಡೀ ರಾಮಾಯಣವನ್ನು ಒಂದು ಪ್ಯಾರಾಗ್ರಾಫಿನಲ್ಲಿ ಹೇಳಿಬಿಡಬಹುದು, ಆದರೆ ಶ್ರೀಲಂಕಾ ಪ್ರವಾಸವನ್ನು ಒಂದು ಲೇಖನದಲ್ಲಿ ಕಟ್ಟಿಕೊಡುವುದು ಕಷ್ಟಸಾಧ್ಯ. ಅದು ಶ್ರೀಲಂಕಾ ಪ್ರವಾಸಕ್ಕೆ ಮಾಡುವ ಅಪಚಾರ.

ಶ್ರೀಲಂಕಾದ ಪ್ರವಾಸೋದ್ಯಮ, ಜನಜೀವನ, ವ್ಯವಸ್ಥೆ ಇನ್ನಿತರ ವಿಷಯಗಳನ್ನು ಪ್ರತ್ಯೇಕ ಲೇಖನದಲ್ಲಿ ಹೇಳುವುದು ಸೂಕ್ತ. ಈ ಲೇಖನದಲ್ಲಿ ಒಂದು ಅದ್ಭುತ ಬುದ್ಧ ಪ್ರತಿಮೆ ಹಾಗೂ ಆ ಪ್ರತಿಮೆ ನಿರ್ಮಾಣದ ಹಿಂದಿನ ದುರಂತ ಕಥೆಯನ್ನು ಮಾತ್ರ ಹೇಳುತ್ತೇನೆ.

Untitled design - 2026-04-28T164448.113

ನಿಮಗೆ ಶ್ರೀಲಂಕಾದ ವಿಮಾನ ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಹೆಜ್ಜೆ ಹೆಜ್ಜೆಗೂ ಬುದ್ಧನ ಮುಖ ಕಾಣುತ್ತಲೇ ಇರುತ್ತದೆ. ಸರ್ಕಲ್ ಗಳಲ್ಲಿ, ಗಲ್ಲಿ ಬದಿಗಳಲ್ಲಿ, ಅಂಗಡಿ ಮನೆಗಳಲ್ಲಿ ಎಲ್ಲೆಲ್ಲಿಯೂ ಬುದ್ಧ. ಪಗೋಡಗಳು, ಸ್ತೂಪಗಳು ಕೂಡ ಹೇರಳವಾಗಿ ಕಣ್ಣಿಗೆ ಬೀಳುತ್ತವೆ. ಯಾಕಂದ್ರೆ ಇಂದಿನ ಲಂಕೆ ಬೌದ್ಧ ಧರ್ಮೀಯರ ನಾಡು. ಕ್ರೈಸ್ತರು ಮತ್ತು ಮುಸಲ್ಮಾನರು ಸಾಕಷ್ಟು ಆಕ್ರಮಿಸಿಕೊಂಡರೂ ಬೌದ್ಧ ಧರ್ಮ ಗಟ್ಟಿಯಾಗಿ ನೆಲೆನಿಂತಿದೆ. ಕೊಲಂಬೋದಿಂದ ಗಾಲ್ಲೆಗೆ (ಗಾಲ್ ಎಂದು ಅಲ್ಲಿನವರು ಹೇಳುತ್ತಾರೆ) ಹೋಗುವ ಮಾರ್ಗದಲ್ಲಿ ಇನ್ನೇನು ಗಾಲ್ಲೆ ತಲುಪಲು ಇಪ್ಪತ್ತು ಕಿಲೋಮೀಟರ್ ಇದೆ ಎನ್ನುವ ಹೊತ್ತಿಗೆ ರಸ್ತೆಯ ಎಡಭಾಗದಲ್ಲಿ ಒಂದರ ನಂತರ ಒಂದು ಎಂಬಂತೆ ಸುನಾಮಿ ಮ್ಯೂಸಿಯಮ್‌ಗಳು ಕಾಣಿಸಿಕೊಳ್ಳುತ್ತವೆ. ಅದೇ ರಸ್ತೆಯ ಬಲಭಾಗದಲ್ಲಿ ದಾರಿಯುದ್ದಕ್ಕೂ ಕೇಳಿಸುವುದು ಹಿಂದೂ ಮಹಾಸಾಗರದ ಭೋರ್ಗರೆತ. ರಸ್ತೆಗೆ ಕೇವಲ ಮುನ್ನೂರು ಮೀಟರ್ ದೂರದಲ್ಲಿ ಸಮುದ್ರ. ಹಗಲು ಹೊತ್ತಿನಲ್ಲಿ ಆ ರಸ್ತೆಯ ಜರ್ನಿಯೇ ಸೊಗಸು.

ಆದರೆ ಸುನಾಮಿ ಎಂಬ ಆ ಒಂದು ಪದ ಈ ಕ್ಷಣಕ್ಕೂ ಬೆಚ್ಚಿಬೀಳಿಸುತ್ತದೆ. ಸುನಾಮಿ ಮ್ಯೂಸಿಯಮ್‌ ಎಂದಾಕ್ಷಣ ಕಾಲವೊಮ್ಮೆ ಹಿಂದೆ ಚಲಿಸುತ್ತದೆ. ಬರೋಬ್ಬರಿ ಇಪ್ಪತ್ತೊಂದು ವರ್ಷ ಹಿಂದಕ್ಕೆ.

ಡಿಸೆಂಬರ್ 26 2004. ಜಗತ್ತು ಕಂಡು ಕೇಳರಿಯದ ಅನಾಹುತಕ್ಕೆ ಸಾಕ್ಷಿಯಾಗಿತ್ತು. ಅಲ್ಲಿಯತನಕ ಸುನಾಮಿ ಎಂಬ ಪದವೇ ಹೊಸತು. ಭೂಕಂಪ ಮತ್ತು ಪ್ರವಾಹಗಳೇ ಅತ್ಯಂತ ಭಯಾನಕ ನೈಸರ್ಗಿಕ ದುರಂತ ಎಂದು ಭಾವಿಸಿದ್ದ ನಮಗೆ, ಸಮುದ್ರದೊಳಗೊಂದು ಜ್ವಾಲಾಮುಖಿ ಸ್ಫೋಟವೋ, ಭೂಕಂಪವೋ ಜರುಗಿದರೆ ಏನಾಗಬಹುದು, ಅದಕ್ಕೆ ಏನೆಂದು ಕರೆಯಬಹುದು ಎಂಬ ಕಲ್ಪನೆಯೂ ಇರಲಿಲ್ಲ.

ಅವತ್ತು ಬುದ್ಧ ಪೂರ್ಣಿಮೆ ಅಷ್ಟೇ ಅಲ್ಲ, ಕ್ರಿಸ್‌ಮಸ್ ಹಬ್ಬದ ಮರುದಿನವೂ ಆಗಿತ್ತು. ಶ್ರೀಲಂಕಾ ನೆಮ್ಮದಿಯಿಂದಿತ್ತು. ಆದರೆ ಹಿಂದೂ ಮಹಾಸಾಗರ ಇದ್ದಕ್ಕಿದ್ದಂತೆ ಕೆರಳಿಬಿಟ್ಟಿತು. ಸಮುದ್ರ ಹಿಂದೆಂದೂ ಕಂಡಿರದಂತೆ ಅಬ್ಬರಿಸಿ ಬೊಬ್ಬಿರಿಯತೊಡಗಿತು. ನೂರಾರು ಅಡಿ ಎತ್ತರದ ಅಲೆಗಳು ಅಪ್ಪಳಿಸತೊಡಗಿದವು. ಸಮುದ್ರ ತಾನಿದ್ದ ಜಾಗದಿಂದ ಊರಿನತ್ತ ದಾಳಿ ಇಡತೊಡಗಿತು. ಕಿಲೋಮೀಟರ್‌ಗಳಷ್ಟು ದೂರ ಇದ್ದ ಮನೆಗಳನ್ನು ತಳ್ಳಿ ನೆಲಸಮ ಮಾಡಿತು. ಗಿಡಮರ, ಅಂಗಡಿ, ಮನೆ, ದೊಡ್ಡ ದೊಡ್ಡ ಕಟ್ಟಡ ಎಲ್ಲವನ್ನೂ ಧ್ವಂಸಗೊಳಿಸತೊಡಗಿತು. ಜನರಂತೂ ಹುಳಹುಪ್ಪಟೆಯಂತೆ ಹೊಸಕಿಹಾಕಲ್ಪಟ್ಟರು. ಸಾವಿನ ಸಂಖ್ಯೆ ಸಾವಿರಗಳಲ್ಲಿ ಏರುತ್ತಾ ಮೂವತ್ತು ಸಾವಿರ ಜೀವಗಳನ್ನು ಬಲಿತೆಗೆದುಕೊಂಡಿತು ಭೀಕರ ಸುನಾಮಿ.

ಅದೇ ಹೊತ್ತಲ್ಲಿ ನಂಬರ್ 50 ಮಟಾರಾ ಎಕ್ಸ್‌ಪ್ರೆಸ್ ಎಂಬ ರೈಲು ಬೆಳಗಿನ ಜಾವ ಕೊಲಂಬೋದಿಂದ ಹೊರಟಿತ್ತು. ಕ್ವೀನ್ ಆಫ್ ಸೀ ಎಂದೂ ಆ ರೈಲನ್ನು ಕರೆಯುತ್ತಿದ್ದರು. ಶ್ರೀಲಂಕಾದ ರೈಲು ಪ್ರಯಾಣವೇ ಒಂದು ಅದ್ಭುತ ಪ್ರವಾಸಾನುಭವ. ಅಲ್ಲಿನ ದೈನಂದಿನ ಪ್ರಯಾಣಕ್ಕೂ ಶ್ರೀಲಂಕಾ ರೈಲುಗಳ ಮೇಲೆಯೇ ಅವಲಂಬನೆ ಇದೆ. ಅಂದು ರೈಲಿನಲ್ಲಿ ಇದ್ದದ್ದು ಬರೋಬ್ಬರಿ 1700 ಮಂದಿ. ಸುನಾಮಿಯ ಸುಳಿವು ದೊರಕುತ್ತಿದ್ದಂತೆಯೇ ಅಧಿಕಾರಿಗಳು ಈ ರೈಲು ನಿಲ್ಲಿಸುವ ಸಕಲ ಪ್ರಯತ್ನ ನಡೆಸುತ್ತಾರೆ. ಅಂದು ಹಲವಾರು ರೈಲುಗಳು ತಮ್ಮ ಪ್ರಯಾಣ ನಿಲ್ಲಿಸಿ ಸುರಕ್ಷಿತ ಜಾಗದಲ್ಲಿ ತಂಗುತ್ತವೆ. ಆದರೆ ಈ ರೈಲನ್ನು ನಿಲ್ಲಿಸಲು ಸಾಧ್ಯವಾಗುವುದೇ ಇಲ್ಲ. ಅಪಾಯದ ಮೆಸೇಜು ಇವರಿಗೆ ತಲುಪುವುದೇ ಇಲ್ಲ. ಸುಮಾರು ಒಂಬತ್ತೂವರೆ ಹೊತ್ತಿಗೆ ಗಾಲ್ಲೆಗೆ ಇಪ್ಪತ್ತೆರಡು ಕಿಮೀ ದೂರದಲ್ಲಿರುವ ಹಿಕ್ಕಡುವಾ ಪಟ್ಟಣದ ಪೆರಾಲಿಯ ಎಂಬಲ್ಲಿ ರೈಲು ಚಲಿಸುತ್ತಿರುವಾಗ ಇಂಡಿಯನ್ ಓಶನ್‌ನ ರಣರಾಕ್ಷಸ ಅಲೆಗಳು ಬೃಹದಾಕಾರ ತಾಳಿ ರೈಲಿನತ್ತ ನುಗ್ಗಿ ಬರುತ್ತವೆ. ಅಕ್ಷರಶಃ ರೈಲನ್ನು ತಳ್ಳಿ ಹಾಕುತ್ತದೆ. ಭಯಗೊಂಡ ಪ್ರಯಾಣಿಕರು ಅಲೆಯ ದಾಳಿ ತಪ್ಪಿಸಿಕೊಳ್ಳಲು ರೈಲಿನ ಮೇಲೆ ಹತ್ತುತ್ತಾರೆ. ಎಲ್ಲೆಲ್ಲೋ ಬಚ್ಚಿಟ್ಟುಕೊಳ್ಳುತ್ತಾರೆ. ಆದರೆ ಅಷ್ಟರಲ್ಲಿ ಇನ್ನೊಂದು ಭಾರೀ ಗಾತ್ರದ ಅಲೆಯೊಂದು ಬಂದು ಇಡೀ ರೈಲನ್ನು ಹಳಿಯ ಸಮೇತವೇ ಎತ್ತಿ ಬಿಸಾಡಿಬಿಡುತ್ತದೆ. ಕಬ್ಬಿನ ಗದ್ದೆಗೆ ಆನೆಗಳು ನುಗ್ಗಿದರೆ ಹೇಗಾದೀತೋ ಹಾಗೆ ನಿಮಿಷಾರ್ಧದಲ್ಲಿ ರೈಲು ಛಿದ್ರಛಿದ್ರ, ಸಾವಿರದ ಏಳುನೂರಕ್ಕೂ ಹೆಚ್ಚು ಪ್ರಯಾಣಿಕರು ಶವ!

ಇಂಥದ್ದೊಂದು ದಾರುಣ ಕಥೆ ಸಿಕ್ಕಿದ್ದು ಪೆರಲಿಯದ ಸುನಾಮಿ ಹೊಂಗಾಂಜಿ ವಿಹಾರ ಎಂಬ ಸ್ಥಳದಲ್ಲಿ.

ಅಲ್ಲೊಂದು ತೊಂಬತ್ತೆಂಟು ಅಡಿ ಎತ್ತರದ ಬೃಹತ್ ಬುದ್ಧ ಪ್ರತಿಮೆ ಎದ್ದುನಿಂತಿದೆ. ಸುನಾಮಿ ದುರಂತ ನಡೆದು ಸರಿಯಾಗಿ ಎರಡು ವರ್ಷಕ್ಕೆ ಅಂದರೆ 2006 ಡಿಸೆಂಬರ್ 26ರಂದು ಈ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಸಮುದ್ರದತ್ತ ಮುಖ ಮಾಡಿ ನಿಂತಿರುವ ಈ ಪ್ರತಿಮೆಯೇ ಆ ಸಮುದ್ರವನ್ನು ಶಾಂತವಾಗಿರಿಸುತ್ತಿದೆ ಎಂದು ಲಂಕನ್ನರು ನಂಬುತ್ತಾರೆ. ಈ ಪ್ರತಿಮೆಯ ಎತ್ತರವೇ ಅಂದಿನ ನರಹಂತಕ ಅಲೆಗಳ ಎತ್ತರವೂ ಆಗಿದೆ. ಸುನಾಮಿ ಎಷ್ಟು ಭೀಕರವಾಗಿತ್ತು ಎಂಬುದನ್ನು ಅರಿಯಲು ಒಮ್ಮೆ ಈ ಬುದ್ಧ ಪ್ರತಿಮೆಯ ಎತ್ತರ ಹಾಗೂ ಅದರ ಹಿಂದೆ ನೂರು ಮೀಟರ್ ದೂರದಲ್ಲಿರುವ ರೈಲ್ವೆ ಹಳಿಯನ್ನು ನೋಡಿದರೆ ಸಾಕು. ಸ್ಥಳೀಯರ ಪ್ರಕಾರ ಬುದ್ಧ ಪ್ರತಿಮೆಯ ಕತ್ತಿನ ಭಾಗದಷ್ಟು ಎತ್ತರಕ್ಕೆ ಅಂದಿನ ಅಲೆಗಳು ಇದ್ದವಂತೆ. ಇದ್ದಿರಲೇಬೇಕು. ಏಕೆಂದರೆ ಬುದ್ಧನ ಪ್ರತಿಮೆಗೂ ಸಮುದ್ರಕ್ಕೂ ಇರುವ ದೂರ ಸುಮಾರು ಅರ್ಧ ಕಿಲೋಮೀಟರ್. ಬುದ್ಧನ ಪ್ರತಿಮೆಯ ಹಿಂದೆ ಸುಮಾರು ನೂರು ಮೀಟರ್ ದೂರದಲ್ಲಿ ರೈಲು ಮಾರ್ಗವಿದೆ. ಅಲ್ಲಿ ಓಡುವ ರೈಲನ್ನು ತಳ್ಳಿ ಮುಳುಗಿಸಿ ಬಿಸಾಕಿದೆ ಅಂದರೆ ಆ ಅಲೆ ಅಷ್ಟು ಎತ್ತರವಿದ್ದಿರಲೇಬೇಕು.

Untitled design - 2026-04-28T164434.157

ಸುನಾಮಿಯಂಥ ದುರಂತ ಇನ್ನೊಮ್ಮೆ ಆಗದಿರಲಿ, ಸಮುದ್ರ ಶಾಂತವಾಗಿರಲಿ ಎಂದು ಈ ಪ್ರತಿಮೆ ನಿರ್ಮಾಣವಾಗುತ್ತದೆ. ಅದಕ್ಕೆ ಜಪಾನ್ ದೇಣಿಗೆ ಕೊಡುತ್ತದೆ. ಅಫ್ಘಾನಿಸ್ಥಾನದ ಬೇಮಿಯನ್ ಬುದ್ಧ ಪ್ರತಿಮೆಯ ಮಾದರಿಯಲ್ಲಿ ಈ ಪ್ರತಿಮೆಯನ್ನು ಕಡೆಯಲಾಗುತ್ತದೆ. ಇದು ಕೇವಲ ಪ್ರವಾಸಿ ಸ್ಥಳವಲ್ಲ. ಒಂದು ದುರಂತದ ಸ್ಮಾರಕ. ಮರುನಿರ್ಮಿತವಾದ ರೈಲುಮಾರ್ಗ, ಮನೆಗಳು, ಸುನಾಮಿ ಮ್ಯೂಸಿಯಮ್‌, ಎಲ್ಲವನ್ನೂ ನೋಡುತ್ತಾ ಅಂದಿನ ಘಟನೆ ನೆನಪಿಸಿಕೊಂಡರೆ ಮನಸು ಮಗುಚಿಕೊಳ್ಳುತ್ತದೆ. ನಂತರ ಬುದ್ಧನ ಪ್ರತಿಮೆ ನೋಡಿ, ಶಾಂತ ಸಮುದ್ರವನ್ನು ಗಮನಿಸಿದರೆ ಮುಂದೆಂದೂ ಇಂಥ ಅನಾಹುತವಾಗದು ಎಂಬ ಭರವಸೆ ಮೂಡುತ್ತದೆ. ಪ್ರವಾಸಿಗರು ತಪ್ಪದೇ ಭೇಟಿ ನೀಡಬೇಕಾದ ಸ್ಥಳ ಸುನಾಮಿ ಹೊಂಗಂಜಿ ವಿಹಾರ.

--

ಮಾಹಿತಿ ಪೆಟ್ಟಿಗೆ

ಕೊಲಂಬೋ-ಗಾಲ್ಲೆ ಮಾರ್ಗ

ಹಿಕ್ಕಡುವ ಪಟ್ಟಣದ ಪೆರಲಿಯಾ ಗ್ರಾಮದಲ್ಲಿದೆ ಪ್ರತಿಮೆ

ಪ್ರತಿಮೆ ಎತ್ತರ: 98 ಅಡಿ (ಗೂಗಲ್ ಪ್ರಕಾರ 60 ಅಡಿ)

ಕ್ವೀನ್ ಆಫ್ ಸೀ ರೈಲು ದುರಂತ ನಡೆದ ಜಾಗ ಇದು

ಪ್ರತಿ ವರ್ಷ ಡಿ.26ರಂದು ದುರಂತದ ಸ್ಮರಣಾರ್ಥ ಅಂದು ವಿಶೇಷ ರೈಲು ಸಂಚಾರ

ಸುನಾಮಿ ಮ್ಯೂಸಿಯಮ್‌ನಲ್ಲಿ ಐತಿಹಾಸಿಕ ಘಟನೆಗಳ ಸಚಿತ್ರ ವಿವರ

ಪ್ರವೇಶ ಉಚಿತ-ಸ್ವಯಂಪ್ರೇರಿತ ದೇಣಿಗೆ ಸ್ವೀಕಾರ

Naveen Sagar

Naveen Sagar

Travel blogger and adventurer passionate about exploring new cultures and sharing travel experiences.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...