Wednesday, January 14, 2026
Wednesday, January 14, 2026

ಆರೋರಾ ಬೋರಿಯಾಲಿಸ್‌ ಎಂಬ ಬಾಂದಳದ ಬ್ಯೂಟಿ

ತಲೆ ಎತ್ತಿ ನಭದಲ್ಲಿ ನೋಡಿದರೆ, ಹಸಿರು-ನಸುಕೆಂಪು- ನೇರಳೆ ಮಿಶ್ರಿತ ಬಣ್ಣದೋಕುಳಿ; ಅದೂ, ಕೆಲವೊಮ್ಮೆ ನರ್ತಿಸುವಂತೆ ಚಲನೆ ಕೂಡಾ. ಅದ್ಭುತ, ಅದೇ ಅವನು ನನಗೆ ತೋರಿಸಲು ಬಯಸಿದ ಸೋಜಿಗ, ಸಾಮಾನ್ಯರ ಮಾತಿನಲ್ಲಿ ನಾರ್ದರ್ನ್ ಲೈಟ್ಸ್. ಭಾರತದಲ್ಲಿ ಕಾಣಸಿಗದು ಈ ನಡುರಾತ್ರಿಯ ಬಾನಂಚಿನ ಬಣ್ಣದ ಚಿತ್ತಾರದ ದೃಶ್ಯವೈಭವ.

- ಎಸ್.ಶಿವಲಿಂಗಯ್ಯ

ಕಳೆದ ವರ್ಷ ನನ್ನ ಗ್ಲಾಸ್ಗೊ ಭೇಟಿಯ ಸಂದರ್ಭದಲ್ಲಿ ನಡೆದ ಒಂದು ಘಟನೆ. ಭಾನುವಾರ ರಾತ್ರಿ ಎಂದಿನಂತೆ ಊಟ ಮುಗಿಸಿ, ಅರ್ಧ ಬಿಟ್ಟಿದ್ದ ಕನ್ನಡ ಸಿನಿಮಾ ನೋಡಿ, ಹಾಸಿಗೆಗೆ ಜಾರಿದ್ದೆವು. ಸಿನಿಮಾದ ಗುಂಗು ಕಣ್ಣು ಮಂಜಾಗಲು ತೊಡರುಗಾಲಾಗಿತ್ತು. ಅಂತೂ ಇಂತೂ ನಿದ್ರೆ ಬಂತು ಎನ್ನುವಷ್ಟರಲ್ಲಿ ನಮ್ಮ ರೂಮಿನ ಬಾಗಿಲು ಬಡಿದ ಸದ್ದಾಯಿತು. ತೆರೆದು ನೋಡಿದರೆ, ಸಾರಿ, ನಿದ್ರೆಯಲ್ಲಿದ್ದವರಿಗೆ ತೊಂದರೆ ಕೊಟ್ಟೆ, ಪರವಾಗಿಲ್ಲಾ ಎನ್ನುವುದಾದರೆ, ನಿಮಗೊಂದು ಸೋಜಿಗ ತೋರಿಸುತ್ತೇನೆ ಹೊರಗೆ ಬನ್ನಿ ಎಂದ, ಅಲ್ಲಿ ನಿಂತಿದ್ದ ನನ್ನ ಮಗ.

ಹೊರಗಿನ ತಾಪಮಾನ 2 ಡಿಗ್ರಿ ಇದೆ, ತಲೆ ಮುಚ್ಚುವಂತೆ ಡ್ರೆಸ್ ಮಾಡಿಕೊಳ್ಳಿ, ನಾನು ಸ್ವಲ್ಪ ಟೀ ತರುತ್ತೇನೆ ಎಂದು ಅವನು ಅಡುಗೆಮನೆ ಕಡೆಗೆ ನಡೆದ. ಆಗತಾನೆ ಆವರಿಸಿದ್ದ ನಿದ್ರೆ, ಅಕ್ಟೋಬರ್ ತಿಂಗಳ ಚಳಿ, ಹೊರಗೆ ಕೂರ್ಗಾಳಿ; ಇನ್ನೇನು ತೋರಿಸುವನೊ ಎಂದು ಅರೆ ಮನಸಿನಲ್ಲಿಯೇ ಕೈಗೆ ಸಿಕ್ಕಿದ್ದರೊಳಕ್ಕೆ ಮೈ-ಕೈ ತೂರಿಸಿಕೊಂಡು ಸಿದ್ಧನಾದೆ. ಹೊಗೆಯಾಡುತ್ತಿದ್ದ ಟೀ ಕುಡಿದು, ಒಳಗೆ ಬಿಸಿಯಾದ ಭರವಸೆ ಮೂಡಿದ ಮೇಲೆ, ಮುಖ್ಯಬಾಗಿಲು ತೆರೆದು ಹೊರಬಂದೆವು. ರಸ್ತೆಯಂಚಿಗೆ ಬಂದು, ಉತ್ತರದ ಕಡೆ ಆಕಾಶ ನೋಡಿ ಎಂದ. ತಲೆ ಎತ್ತಿ ನಭದಲ್ಲಿ ನೋಡಿದರೆ, ಹಸಿರು-ನಸುಕೆಂಪು- ನೇರಳೆ ಮಿಶ್ರಿತ ಬಣ್ಣದೋಕುಳಿ; ಅದೂ, ಕೆಲವೊಮ್ಮೆ ನರ್ತಿಸುವಂತೆ ಚಲನೆ ಕೂಡಾ. ಅದ್ಭುತ, ಅದೇ ಅವನು ನನಗೆ ತೋರಿಸಲು ಬಯಸಿದ ಸೋಜಿಗ, ಸಾಮಾನ್ಯರ ಮಾತಿನಲ್ಲಿ ನಾರ್ದರ್ನ್ ಲೈಟ್ಸ್. ಭಾರತದಲ್ಲಿ ಕಾಣಸಿಗದು ಈ ನಡುರಾತ್ರಿಯ ಬಾನಂಚಿನ ಬಣ್ಣದ ಚಿತ್ತಾರದ ದೃಶ್ಯವೈಭವ. ಉತ್ತರ ದಿಕ್ಕಿನಲ್ಲಿ ಮಾತ್ರ ಕಾಣುತ್ತಿದ್ದ ಈ ಬಾನಚ್ಚರಿಯನ್ನು ಕೆಲಹೊತ್ತು ನೋಡುತ್ತಿದ್ದ ನಮಗೆ, ಬೀಸಿದ ಚಳಿಗಾಳಿ ಸಾಕಿನ್ನು ಹೊರಡಿ ಎಂಬ ಸೂಚನೆ ಕೊಡುತ್ತಿದ್ದಂತೆ, ಒಂದಷ್ಟು ಫೊಟೋ ಕ್ಲಿಕ್ಕಿಸಿ, ಮನೆಯ ಒಳಗೋಡಿದೆವು. ಡಾರ್ಜಿಲಿಂಗ್‌ನ ಸೂರ್ಯೋದಯ, ಆಗುಂಬೆಯ ಸೂರ್ಯಾಸ್ತದ ದೃಶ್ಯವೈಭವದ ಸವಿ ನೋಡಿದ್ದ ನನಗೆ, ಇದೊಂದು ಅಪರೂಪದ ಮತ್ತು ವಿಭಿನ್ನ ಅವಕಾಶವಾಗಿತ್ತು.

arora2

ಬೆಳಗ್ಗೆ ಎದ್ದು, ಉಪಹಾರದ ನಂತರ, ಬಿಸಿ ಕಾಫಿ ಹೀರುತ್ತಾ ಇಂಟರ್ನೆಟ್ ಒಳಹೊಕ್ಕಾಗ ಗ್ರಹಿಸಿದ ಮಾಹಿತಿಯಂತೆ, ಈ ಆರೋರಾ ಬೋರಿಯಾಲಿಸ್ ಅಥವಾ ನಾರ್ದರ್ನ್ ಲೈಟ್ಸ್ ಒಂದು ನೈಸರ್ಗಿಕ ಸಹಜ ವಿದ್ಯಮಾನ. ಸೂರ್ಯನಿಂದ ಉತ್ತೇಜಿತ ಕಣಗಳು (ಚಾರ್ಡ್ ಪಾರ್ಟಿಕಲ್ಸ್) ಸದಾ ಹೊರಹೊಮ್ಮುತ್ತಿರುತ್ತವೆ. ಸೌರಮಾರುತವೆಂಬ ಈ ಪ್ಲಾಸ್ಮಾ ಝರಿ ಭೂಮಿಯ ವಾತಾವರಣದ ಮೇಲ್ಮೈಯನ್ನು ತಲುಪಿದಾಗ, ಅಲ್ಲಿರುವ ಆಮ್ಲಜನಕ ಮತ್ತು ಸಾರಜನಕ ಅನಿಲಗಳ ಪರಮಾಣುಗಳಿಗೆ ಡಿಕ್ಕಿಹೊಡೆಯುತ್ತವೆ. ಆ ಘರ್ಷಣೆಯಲ್ಲಿ ಬಿಡುಗಡೆಯಾಗುವ ಅನಿಲದ ಪರಮಾಣುಗಳ ಶಕ್ತಿ ಬೆಳಕಾಗಿ ಪರಿವರ್ತಿತವಾಗುತ್ತದೆ. ಆಮ್ಲಜನಕದ ಪರಮಾಣುಗಳು ಹಸಿರು ಮತ್ತು ಹಳದಿ ಬಣ್ಣದಲ್ಲಿಯೂ, ಸಾರಜನಕದ ಪರಮಾಣಗಳು ತಿಳಿಗೆಂಪು ಮತ್ತು ನೇರಿಳೆ ಬಣ್ಣದಲ್ಲಿಯೂ ಗೋಚರಿಸುತ್ತವೆ ಎಂದು ತಿಳಿದೆ.

arora1

ಇದು ಧೃವ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ವರ್ಣವಿನ್ಯಾಸ. ಸೆಪ್ಟಂಬರ್‌ನಿಂದ ಮಾರ್ಚ್‌ವರೆಗೆ ಜರುಗುವ ಈ ಪ್ರಕ್ರಿಯೆಯನ್ನು ಉತ್ತರ ಧೃವಕ್ಕೆ ಸಮೀಪವಿರುವ ಅಲಾಸ್ಕ, ಕೆನಡಾ, ಐಸ್ ಲ್ಯಾಂಡ್, ಯೂರೋಪ್‌ನ ಯುಕೆ, ನಾರ್ವೆ, ಸ್ವೀಡನ್, ಫಿನ್ಲ್ಯಾಂಡ್ ಇತ್ಯಾದಿ ದೇಶಗಳ ದಿಗಂತದಲ್ಲಿ ಕಾಣಬಹುದು. ಮಧ್ಯರಾತ್ರಿ ಸುಮಾರು 2-3 ಗಂಟೆಗಳವರೆಗೆ ವಿದ್ಯುತ್ ದೀಪಗಳಿಂದ ಮುಕ್ತವಾದ ಪ್ರದೇಶದಲ್ಲಿ, ಮೋಡವಿಲ್ಲದ ಆಕಾಶದ ಅಂಚಿನಲ್ಲಿ ಸ್ಪಷ್ಟವಾಗಿ ನೋಡಿ ಆನಂದಿಸಬಹುದು. ಮಳೆ, ಚಂಡಮಾರುತ, ಹವಾಮಾನ ಮುನ್ಸೂಚನೆಯಂತೆಯೇ ಈ ದೇಶಗಳಲ್ಲಿ ಸೂರ್ಯಮಾರುತಗಳ ಅಪ್ಪಳಿಸುವಿಕೆಯ ಮುನ್ಸೂಚನೆ ನೀಡಲಾಗುತ್ತದೆ. ಇಂಥ ವರದಿಯನ್ನು ಅನುಸರಿಸಿ, ಅನೇಕರು ಈ ದೇಶಗಳಿಗೆ ಪ್ರವಾಸ ಹಮ್ಮಿಕೊಳ್ಳುತ್ತಾರೆ.

ದಕ್ಷಿಣ ಧೃವ ಪ್ರದೇಶದಲ್ಲಿಯೂ ಈ ನಿಸರ್ಗದ ರಮಣೀಯತೆಯನ್ನು ಕಾಣಬಹುದು. ನ್ಯೂಜಿಲೆಂಡ್, ದಕ್ಷಿಣ ಅಮೆರಿಕದ ತುದಿಯಲ್ಲಿರುವ ಕೆಲವು ದೇಶಗಳಿಂದ ಇದರ ದರ್ಶನ ಪಡೆಯಬಹುದು. ಅಲ್ಲದೆ, ಸಮಶೀತೋಷ್ಣ ವಲಯದ ಉತ್ತರದ ತುದಿಯಲ್ಲಿಯೂ ಇದನ್ನು ಕಾಣಬಹುದಂತೆ. ಕಾಣಲು ಸಿಕ್ಕರೆ ನೀವೂ ಇದನ್ನು ಕಂಡುಬಿಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...