ಲೀ ಯು ಕ್ವಾನ್ ಕ್ರಾಂತಿಯ ರೋಚಕ ಕಹಾನಿ
ಸಿಂಗಾಪುರದ ಬಹುತೇಕ ನಾಗರಿಕರಿಗೆ ಕಡಿಮೆ ಬೆಲೆ, ಸಾಲ ಮತ್ತು ಸಹಾಯಧನ ಮುಂತಾದ ಸೌಲಭ್ಯಗಳಿಂದಾಗಿ ತಮ್ಮದೇ ಮನೆಯನ್ನು ಹೊಂದಲು ಸಾಧ್ಯವಾಗಿದೆ. ಕನಿಷ್ಟ ವೇತನದ ಪದ್ಧತಿ ಇಲ್ಲದಿದ್ದರೂ ಮಧ್ಯಮವರ್ಗದವರೂ ಕೂಡ ಒಳ್ಳೆಯ ಜೀವನ ನಡೆಸುತ್ತಾರೆ. ಪ್ರತಿ ಮನೆಯಲ್ಲೂ ಮಕ್ಕಳ ಲಾಲನೆ ಪಾಲನೆಗೆ, ಮನೆಗೆಲಸಕ್ಕೆ ಸಹಾಯಕರಿದ್ದಾರೆ. ಆಧುನಿಕ ತಂತ್ರಜ್ಞಾನ ಎಲ್ಲ ಕಡೆಗೂ ಬಳಕೆಯಾಗುತ್ತದೆ. ಉತ್ತಮ ಗುಣಮಟ್ಟದ ಜೀವನ ಎಲ್ಲರಿಗೂ ಲಭ್ಯವಾಗಿದೆ.
- ಸುಚಿತ್ರಾ ಹೆಗಡೆ
ಬೆಂಗಳೂರು ಸೇರಿದಂತೆ ಸಿಂಗಾಪುರವಾಗಲು ಬಯಸುವ ನಗರಗಳು ಮತ್ತು ದೇಶಗಳು ವಿಶ್ವದೆಲ್ಲೆಡೆ ಬಹಳಷ್ಟಿವೆ. ಈ ಭೂಮಿಯಲ್ಲಿರುವ ಅಷ್ಟೊಂದು ಸುಂದರ, ಸುಭೀಕ್ಷ ತಾಣಗಳನ್ನೆಲ್ಲ ಬಿಟ್ಟು ಇವರಿಗೆಲ್ಲ ಅದೇಕೆ ಸಿಂಗಾಪುರವಾಗುವ ಆಸೆ ಎನ್ನುವ ಪ್ರಶ್ನೆ ಕೆಲಕಾಲದಿಂದ ನನಗೂ ಕಾಡಿತ್ತು. ಆ ಪ್ರಶ್ನೆಗೆ ಇತ್ತೀಚೆಗೆ ಹೋದ ಏಷ್ಯಾ ಪೆಸಿಫಿಕ್ ಪ್ರವಾಸದಲ್ಲಿ ಸಿಂಗಾಪುರವೇ ಉತ್ತರಿಸಿತು.
ನಗರವೇ ದೇಶ..!
ಹಾಗೆ ನೋಡಿದರೆ ಸಿಂಗಾಪುರ ಒಂದು ನಗರವೂ ಹೌದು. ದೇಶವೂ ಹೌದು. ಒಂದೇ ನಗರವನ್ನೊಳಗೊಂಡ ನಗರ ರಾಷ್ಟ್ರ. ಇಡೀ ವಿಶ್ವದಲ್ಲಿ ಅಂಥ ಮೂರೇ ಮೂರು ದೇಶಗಳಿವೆ. ಮೊನಾಕೋ, ವ್ಯಾಟಿಕನ್ ಮತ್ತೊಂದು ಸಿಂಗಾಪುರ. ಇವೆಲ್ಲವೂ ವ್ಯಾಪಾರ ಮತ್ತು ಪ್ರವಾಸೋದ್ಯಮಗಳನ್ನೇ ನೆಚ್ಚಿಕೊಂಡಿರುವಂಥದ್ದು. ಆದರೆ ಇವ್ಯಾವುದೂ ಸಿಂಗಾಪುರದಂತೆ ರಾತ್ರಿ ಬೆಳಗಾಗುವುದರಲ್ಲಿ ತೃತೀಯ ರಾಷ್ಟ್ರದ ಹಣೆಪಟ್ಟಿಯಿಂದ ಅಭಿವೃದ್ಧಿ ಹೊಂದಿದ ದೇಶಗಳ ಮುಂಚೂಣಿಗೆ ಜಿಗಿಯಲಿಲ್ಲ. ಸಿಂಗಾಪುರವೆಂಬ ಯಾರಿಗೂ ಬೇಡವಾದ ದೇಶ, ಅತಿ ಕಡಿಮೆ ಅವಧಿಯಲ್ಲಿ ಗಗನಕ್ಕೇರಿದ ಜಿಡಿಪಿಯೊಂದಿಗೆ ಏಷ್ಯಾದ ನಂಬರ್ ಒನ್ ದೇಶದ ಪಟ್ಟವನ್ನು ಏರಿದ್ದಾದರೂ ಹೇಗೆ?

ಚುನಾವಣೆ ಹತ್ತಿರ ಬಂದಾಗ ಕಿತ್ತು ಹೋದ ರಸ್ತೆಗೆ ತೇಪೆ ಹಾಕುವ ನಮ್ಮಂಥವರಿಗೆ ಸಿಂಗಾಪುರದ ವಿಜಯಗಾಥೆಯನ್ನು ಊಹಿಸುವುದು ಕಷ್ಟ. ಮೊದಲ ನೋಟಕ್ಕೆ ತನ್ನ ಗಗನಚುಂಬಿ ಕಟ್ಟಡಗಳಿಂದ, ನಳನಳಸುವ ಹಸಿರಿನಿಂದ, ಒಂದು ಕಸದ ಕಣವೂ ಇರದ ಸ್ವಚ್ಛವಾದ ಪರಿಸರದಿಂದ ಗಮನ ಸೆಳೆಯುವ ಈ ನಗರವನ್ನು ಮೇಲ್ನೋಟಕ್ಕೆ ನೋಡಿ ಬರುವುದಾದರೆ ಎರಡು ಮೂರು ದಿನಗಳು ಧಾರಾಳವಾಗಿ ಸಾಕು. ಆದರೆ ಅದರ ಯಶಸ್ಸಿನ ರಹಸ್ಯ ಭೇದಿಸಬೇಕೆಂದರೆ ಅಲ್ಲಿಯ ಜನರೊಂದಿಗೆ ಒಡನಾಡಬೇಕು. ಅವರ ಅತ್ಯಂತ ದಕ್ಷವಾದ ಸಾರ್ವಜನಿಕ ಸಾರಿಗೆಯ ಬಸ್ಸು, ಟ್ರಾಮು, ಮೆಟ್ರೋಗಳಲ್ಲಿ ಓಡಾಡಬೇಕು. ಆಗ ಒಂದಲ್ಲ, ಎರಡಲ್ಲ, ನೂರು ಚೋದ್ಯಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಎಷ್ಟೇ ಹುಲಿಯ ಚರ್ಮ ಹೊದ್ದರೂ ನರಿಯೊಂದು ಹುಲಿಯಾಗದ ಕಥೆ ಅರ್ಥವಾಗುತ್ತದೆ.
ಲೀ ಯು ಕ್ವಾನ್ – ದ ಗೇಮ್ ಚೇಂಜರ್!
ಸಿಂಗಾಪುರದ ಆಯಕಟ್ಟಿನ ಜಾಗ ಮತ್ತು ಅತ್ಯುತ್ತಮ ಬಂದರಿನ ಕಾರಣದಿಂದ ಏಷ್ಯಾದ ಜೊತೆಗಿನ ವ್ಯಾಪಾರದಲ್ಲಿ ಲಾಭ ಗಳಿಸುವ ಉದ್ದೇಶದಿಂದ ಅದನ್ನು ತನ್ನ ವಸಾಹತುವನ್ನಾಗಿ ಮಾಡಿಕೊಂಡ ಬ್ರಿಟಿಷರು ನೂರಾನಲವತ್ತನಾಲ್ಕು ವರ್ಷಗಳ ಕಾಲ ಆಳಿದ ಮೇಲೆ ಜಾಗತಿಕ ಯುದ್ಧ, ಜಪಾನಿನ ದಾಳಿ ಮೊದಲಾದ ಕಾರಣಗಳಿಂದ ಅಲ್ಲಿಂದ ಕಾಲ್ಕಿತ್ತರು. ಆಗ ಸಿಂಗಾಪುರದ ಪ್ರಧಾನಿಯಾಗಿದ್ದು ಮುಂದೆ ದೇಶದ ನಿರ್ಮಾತೃನೆಂದೇ ಹೆಸರಾದ ಲೀ ಕ್ವಾನ್ ಯು. ಆ ಸಮಯದಲ್ಲಿ ಅಲ್ಲಿ ಕಿತ್ತು ತಿನ್ನುವ ಬಡತನ, ಹಸಿವು, ಲೂಟಿ, ಕಳ್ಳತನ, ಮಾದಕ ವಸ್ತುಗಳ ದಾಸ್ಯ ತಾಂಡವವಾಡುತ್ತಿತ್ತು. ಅಷ್ಟೇ ಅಲ್ಲ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ರಕ್ಷಣಾ ವ್ಯವಸ್ಥೆಯೂ ಇಲ್ಲದ ಸಿಂಗಾಪುರ ಅನಿವಾರ್ಯವಾಗಿ ಮಲೇಷ್ಯಾದ ಜೊತೆಗೆ ಒಂದು ಸ್ವಾಯತ್ತ ರಾಜ್ಯವಾಗಿ 1963 ರಲ್ಲಿ ಸೇರ್ಪಡೆಯಾಯಿತು. ಅಲ್ಲಿಂದ ಮುಂದೆ 1965 ರ ಹೊತ್ತಿಗೆ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ಮಲೇಷ್ಯಾದಿಂದ ಹೊರಬಂದು ಮತ್ತೆ ಸ್ವಾಯತ್ತ ದೇಶವಾಯ್ತು.
ಈ ದೇಶಕ್ಕಿನ್ನೂ ಈಗ ಐವತ್ತೊಂಬತ್ತರ ಹರೆಯ. ಈ ಅಲ್ಪಕಾಲದಲ್ಲಿ ಹೀನಾಯವಾದ ಸ್ಥಿತಿಯಿಂದ ಅತ್ಯಂತ ಶ್ರೀಮಂತವಾದ ರಾಷ್ಟ್ರವಾಗಲು ಮುಖ್ಯ ಕಾರಣವೇ ಅಲ್ಲಿ ಮೂವತ್ತೊಂದು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಲೀ ಯು ಕ್ವಾನ್ ಮತ್ತು ಅವನ ತಂಡ. ದಕ್ಷತೆ, ದೂರದೃಷ್ಟಿ, ಭ್ರಷ್ಟತೆಯಿಲ್ಲದ ನಾಯಕನ ಜೊತೆಗೆ ಏಕತೆಯುಳ್ಳ, ನಿಯಮಗಳನ್ನು ಪಾಲಿಸುವ ನಾಗರೀಕರು ಜೊತೆಯಾದರೆ ಒಂದು ದೇಶವನ್ನು ಎಲ್ಲಿಂದೆಲ್ಲಿಗೆ ಕೊಂಡೊಯ್ಯಬಹುದೆಂಬುದಕ್ಕೆ ಆಧುನಿಕ ಜಗತ್ತಿನಲ್ಲಿ ಇದೊಂದು ಶ್ರೇಷ್ಠ ನಿದರ್ಶನವಾಗಿದೆ.
18 ತುಂಬಿದರೆ ಮಿಲಿಟರಿ ಸೇವೆ ಕಡ್ಡಾಯ!
ಲೀ ಯು ಕ್ವಾನ್ ತನ್ನ ದೇಶದ ದುರ್ಭರ ಸ್ಥಿತಿಯನ್ನು ನೋಡಿ ಹತಾಶೆಯಿಂದ ಕೈ ಕಟ್ಟಿ ಕೂರಲಿಲ್ಲ. ಉದ್ದುದ್ದ ಭಾಷಣಗಳನ್ನು ಬಿಗಿದು ಜನರನ್ನು ಮರುಳು ಮಾಡಲು ನೋಡಲಿಲ್ಲ. ಬದಲಾಗಿ ವಿವಿಧ ಕ್ಷೇತ್ರಗಳ ಪರಿಣಿತರ ಜೊತೆಗೆ ಹಗಲಿರುಳು ಚರ್ಚಿಸಿ ಕ್ಷಿಪ್ರ ನಿರ್ಧಾರಗಳನ್ನು ಕೈಗೊಂಡದ್ದಲ್ಲದೇ ಅವುಗಳನ್ನು ಜಾರಿಗೆ ತರುವಲ್ಲಿ ಅಗಾಧ ಶಿಸ್ತು ಮತ್ತು ತನ್ನ ದೂರದೃಷ್ಟಿಯನ್ನು ಪ್ರದರ್ಶಿಸಿದ. ಯಾವ ಸಂಪನ್ಮೂಲಗಳಿಲ್ಲದ, ಪ್ರಾಕೃತಿಕ ಸಂಪತ್ತಿಲ್ಲದ ದೇಶವೊಂದು ಸದ್ಯದ ವಿಪತ್ತಿನಿಂದ ಪಾರಾಗಿ, ಭವಿಷ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ತನ್ನ ದೇಶ, ವಿದೇಶಿ ಹೂಡಿಕೆ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ಕೊಡುವುದು ಅನಿವಾರ್ಯವೆಂದು ಮನಗಂಡು ವಿದೇಶಿ ಉದ್ಯಮಿಗಳಿಗೆ, ಹೂಡಿಕೆಗೆ ಅನುಕೂಲವಾಗುವಂಥ ಅನೇಕ ನಿಯಮಗಳು, ಕಾಯಿದೆಗಳನ್ನು ರೂಪಿಸಿದ. ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಲಾಯ್ತು. ವಿದೇಶಗಳಿಗೆ, ವ್ಯಾಪಾರಿಗಳಿಗೆ ಆಹ್ವಾನ ನೀಡಲಾಯಿತು. ಅತ್ಯಂತ ಸರಳವಾದ ನಿಯಮಗಳು, ಉದಾರವಾದ ತೆರಿಗೆ ಪದ್ಧತಿ, ಇಂಗ್ಲಿಷ್ ಮಾತನಾಡುವ ಜನರು, ಆಯಕಟ್ಟಿನ ಜಾಗ ಮುಂತಾದ ಸವಲತ್ತುಗಳಿಂದ ವಿಶ್ವದೆಲ್ಲೆಡೆಯಿಂದ ವಾಣಿಜ್ಯೋದ್ದಿಮೆಗಳು ಹರಿದು ಬರಲು ತಡವಾಗಲಿಲ್ಲ. ಇಂದಿಗೂ ಸಿಂಗಾಪುರದಲ್ಲಿ ವಿದೇಶೀಯರು ಒಂದು ಉದ್ಯಮ ಶುರುಮಾಡಲು ಒಂದೇ ಒಂದು ದಿನ ಸಾಕು ಅನ್ನುವಷ್ಟು ಸರಳೀಕೃತ ವ್ಯವಸ್ಥೆಯಿದೆ. ಅಷ್ಟಕ್ಕೆ ಕ್ವಾನ್ ಸುಮ್ಮನಿರುವ ಜಾತಿಯೇ ಅಲ್ಲ. ತನ್ನ ನಾಗರೀಕರಿಗೆ ಉದ್ಯೋಗಾವಕಾಶಗಳು, ಅತ್ಯುತ್ತಮ ವೈದ್ಯಕೀಯ ಸೌಲಭ್ಯ, ಉಚಿತ ಶಿಕ್ಷಣ ಮುಂತಾದವುಗಳನ್ನು ಒದಗಿಸುವಲ್ಲಿ ನಿರತನಾದ. ದೇಶದ ರಕ್ಷಣೆಗಾಗಿ, ಸಮುದ್ರ ಮಾರ್ಗದ ಉಸ್ತುವಾರಿಗಾಗಿ ತನ್ನದೇ ಜನರ ಪಡೆಯನ್ನು ನಿರ್ಮಿಸಿದ. ಅದಕ್ಕಾಗಿ ಹದಿನೆಂಟು ತುಂಬಿದ ಪ್ರತಿ ಯುವಕರಿಗೂ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿದ.
ಕಾಂಕ್ರೀಟಿಗಿಂತ ಹಸಿರು ಜಾಸ್ತಿ!
ಈ ಮಧ್ಯೆ ಪ್ರತಿ ಯೋಜನೆಯಲ್ಲಿಯೂ ದೂರಗಾಮಿ ಯೋಚನೆ ಮತ್ತು ಪರಿಸರದ ಕುರಿತು ಕಾಳಜಿ ಮರೆಯಲಿಲ್ಲ. ಸಿಂಗಾಪುರದ ಪರಿಸರ ನಿರ್ವಹಣೆ ಇಡೀ ವಿಶ್ವಕ್ಕೆ ಮಾದರಿಯಾಗುವಂಥದ್ದು. ಅಲ್ಲಿಯ ಜನದಟ್ಟಣೆ ಮತ್ತು ಸೀಮಿತ ಜಾಗ ನೋಡಿದರೆ ಇಡೀ ದೇಶವೂ ಕಾಂಕ್ರೀಟು ಕಾಡಾಗಿರಬೇಕಿತ್ತು. ಆದರೆ ಅಲ್ಲಿರುವ ಹಸಿರು ನೋಡಿದರೆ ಆಶ್ಚರ್ಯವಾಗುತ್ತದೆ. ಪ್ರತ್ಯೇಕವಾದ ಮನೆಗಳಿಂದಾಗುವ ಸ್ಥಳಾಭಾವವನ್ನು ಗಮನಿಸಿ ಸರಕಾರವೇ ವಸತಿ ಸಮುಚ್ಚಯಗಳನ್ನು ನಿರ್ಮಿಸಿತು. ಇದರಿಂದಾಗಿ ಎಲ್ಲೆಲ್ಲೂ ಪಾರ್ಕುಗಳು, ಮೈದಾನಗಳು ಮೈದಾಳಿದವು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಬದಿಯಲ್ಲಿ, ಫ್ಲೈಓವರಿನ ಕೆಳಗೆ ಎಲ್ಲೆಲ್ಲೂ ಗಿಡ ಮರಗಳನ್ನು ಬೆಳೆಸಿದ್ದಾರೆ.

ಕಾರು- ತಕರಾರು!
ವಾಹನ ದಟ್ಟಣೆಯನ್ನು ಕಡಿತಗೊಳಿಸುವ ಉದ್ದೇಶದಿಂದ ಸ್ವಂತ ವಾಹನಗಳು, ಕಾರುಗಳನ್ನು ಕೊಳ್ಳಲು ಕಠಿಣವಾದ ನಿಯಮಗಳು ಮತ್ತು ದುಬಾರಿ ಬೆಲೆಯನ್ನು ನಿಗದಿ ಮಾಡಿದ್ದಾರೆ. ಖಾಸಗಿ ಕಾರುಗಳನ್ನು ಕೊಳ್ಳಲು ಅಧಿಕೃತ ಅನುಮತಿ ಪತ್ರ ಪಡೆಯಬೇಕು. ನಂಬರ್ ಪ್ಲೇಟಿಗಾಗಿ ಕಾಯಬೇಕು. ಅದೂ ಕೂಡ ವಿವಿಧ ಮಾದರಿಗಳಲ್ಲಿವೆ. ಮನೆಯಲ್ಲಿ ಒಬ್ಬರಿಗೊಂದು ಕಾರಿಟ್ಟುಕೊಂಡು, ಕೊತ್ತಂಬರಿ ಸೊಪ್ಪು ತರಲೂ ಕಾರು ತೆಗೆದುಕೊಂಡು ಹೋಗುವ ಪರಿಪಾಠವೆಲ್ಲ ಅಲ್ಲಿಲ್ಲ. ಕಾರು ಚಾಲನೆಯ ಅನುಮತಿ ಪತ್ರಗಳು ವಿವಿಧ ನಮೂನೆಗಳಲ್ಲಿವೆ. ವಾರದ ದಿನಗಳಿಗಾಗಿ, ವಾರಾಂತ್ಯದ ಬಳಕೆಗೆ, ದಟ್ಟಣೆಯಿಲ್ಲದ ಸಮಯಕ್ಕೆ, ಹಳೆಯ ವಾಹನಗಳಿಗೆ ಹೀಗೆ ಪ್ರತಿಯೊಂದು ವರ್ಗಕ್ಕೂ ವಿಭಿನ್ನ ಬಣ್ಣದ ಸಂಖ್ಯಾಫಲಕಗಳಿವೆ. ನಿಗದಿತ ಕಾರಿನ ಸರಿಯಾದ ಬಳಕೆ, ವೇಗದ ಮಿತಿ, ಚಾಲನೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಹಾಗಾಗಿ ಜನರು ಹೆಚ್ಚಾಗಿ ಅತ್ಯಂತ ಸಮರ್ಥವಾದ, ಅಗ್ಗವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸುವುದರಿಂದ ನಗರದ ಹೃದಯಭಾಗದಲ್ಲೂ ಸಂಚಾರ ದಟ್ಟಣೆಯಾಗದು. ಖಾಸಗಿ ವಾಹನಗಳ ಸೀಮಿತವಾದ ಬಳಕೆಯಿಂದ ವಾಯು ಮಾಲಿನ್ಯವೂ ಕಡಿಮೆ. ಸಿಂಗಾಪುರದ ಬಸ್ಸುಗಳು, ಮೆಟ್ರೋ ರೈಲುಗಳಲ್ಲಿ ಸಂಚರಿಸುವಾಗ ಅಲ್ಲಿಯ ಸಮಯ ಪಾಲನೆ, ಜನರು ಪಾಲಿಸುವ ಶಿಸ್ತು, ಸ್ವಚ್ಛತೆಗಳನ್ನು ಗಮನಿಸಿದರೆ ಆ ದೇಶವನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ.
ಕಸ ಕಂಡ್ರೆ ಏನು ಮಾಡ್ತಾರೆ ಗೊತ್ತಾ?
ಲೀ ಕ್ವಾನ್ ತನ್ನ ದೇಶದ ಒಂದೊಂದೇ ದೌರ್ಬಲ್ಯಗಳನ್ನು ಮೆಟ್ಟಿ ನಿಂತ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಕಳ್ಳತನ, ಸುಲಿಗೆ, ಅಪರಾಧಗಳು, ಮಾದಕ ವ್ಯಸನಗಳ ಪಿಡುಗುಗಳನ್ನು ಹತ್ತಿಕ್ಕಲು ಕಠಿಣವಾದ ಕಾಯಿದೆಗಳನ್ನು , ಶಿಕ್ಷೆಗಳನ್ನು ರೂಪಿಸಲಾಯಿತು. ನಿಯಮಗಳ ಉಲ್ಲಂಘನೆಗಳಿಗೆ ಅತ್ಯಧಿಕ ದಂಡ ತೆರುವಂತಾಯ್ತು. ಅದರಿಂದಾಗಿ ಇಂದಿಗೂ ಸಿಂಗಾಪುರ ಜಗತ್ತಿನ ಅತಿ ಸುರಕ್ಷಿತ ದೇಶಗಳಲ್ಲೊಂದು. ಅಪರಾಧಗಳು, ಮಾದಕ ವಸ್ತುಗಳ ಬಳಕೆ ಮತ್ತು ಸಾಗಣೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಸ್ವಚ್ಛತೆಯ ಪಾಲನೆಗಾಗಿ ಸ್ವಚ್ಛತಾ ತಂಡದ ಜೊತೆಗೆ ಆಪತ್ತು ನಿರ್ವಹಣೆಯಂತೆ ವಿಶೇಷ ದೂರವಾಣಿಯ ಸೌಲಭ್ಯಗಳಿವೆ. ಅಕಸ್ಮಾತ್ತಾಗಿ ಎಲ್ಲಾದರೂ ಕಸ ಕಂಡರೆ ಅಫಘಾತವಾದಾಗ ಮಾಡುವಂತೆ ಸುತ್ತಲೂ ನಿರ್ಬಂಧಿತ ಟೇಪುಗಳನ್ನು ಕಟ್ಟಿ ಆ್ಯಂಬುಲೆನ್ಸ್ ಕರೆಯುವಂತೆ ಸ್ವಚ್ಛತಾ ಪಡೆಯನ್ನು ಕರೆಯುತ್ತಾರೆಂದ ಮೇಲೆ ಅಲ್ಲಿಯ ಸ್ವಚ್ಛತಾ ಅಭಿಯಾನ ಯಾವ ಮಟ್ಟದಲ್ಲಿದೆಯೆಂದು ಊಹಿಸಬಹುದು.
ಇನ್ನು ಮಲಯ, ಚೀನಿ ಮತ್ತು ಭಾರತದ ಮೂಲದ ಜನರನ್ನು ಹೊಂದಿರುವ, ವಿವಿಧ ಭಾಷೆಗಳನ್ನು ಮಾತನಾಡುವ, ಸಿಂಗಾಪುರದ ವೈವಿಧ್ಯಮಯ ಜನರಲ್ಲಿ ನಾವೆಲ್ಲಾ ಒಂದು ಅನ್ನುವ ಭಾವ ಮೂಡಿಸುವುದು ಅತಿ ಮುಖ್ಯವೆಂದು ಲೀ ಕ್ವಾನ್ ಮನಗಂಡಿದ್ದ. ಒಂದು ದೇಶದ ಅಭಿವೃದ್ಧಿಗೆ ಅತ್ಯಗತ್ಯವಾಗಿ ಬೇಕಾಗಿರುವ ಏಕತೆಯನ್ನು, ಒಗ್ಗಟ್ಟನ್ನು ತಂದ ಬಗೆಯಂತೂ ನಾವು ಅರಿತುಕೊಳ್ಳಲೇಬೇಕಾದದ್ದು. ಮೊಟ್ಟಮೊದಲು ಮಲಯ್, ಮ್ಯಾಂಡರಿನ್, ತಮಿಳು ಮತ್ತು ಆಂಗ್ಲಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿಸಿದ್ದು. ಶಾಲಾ ಶಿಕ್ಷಣದಲ್ಲಿ ಕೂಡ ಈ ಎಲ್ಲ ಭಾಷೆಗಳನ್ನು ಸೇರಿಸಿಕೊಳ್ಳಲಾಯಿತು. ಇನ್ನೊಂದು ಅತ್ಯಂತ ಮಹತ್ವದ ವಿಷಯವೆಂದರೆ ಸಿಂಗಾಪುರದಲ್ಲಿ ಒಂದು ಜಾತಿ, ಧರ್ಮ ಅಥವಾ ಭಾಷೆಯವರಿಗಾಗಿ ಮೀಸಲಾಗಿರುವ ವಸತಿ ಪ್ರದೇಶಗಳು ಇಲ್ಲವೇ ಇಲ್ಲ. ಒಂದು ವಸತಿ ಸಮುಚ್ಛಯ ಅಥವಾ ಶಾಲೆಯನ್ನು ನಿರ್ಮಿಸುವಾಗ ಎಲ್ಲಾ ಧರ್ಮಗಳ, ಎಲ್ಲಾ ಭಾಷೆಗಳ ಮತ್ತು ವಿವಿಧ ಆರ್ಥಿಕ ಹಿನ್ನೆಲೆಯ ನಾಗರೀಕರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ದೊರಕುವಂತೆ ನೋಡಿಕೊಂಡಿದ್ದಾರೆ. ಇದರಿಂದಾಗಿ ಜನರು ಪ್ರತ್ಯೇಕತೆಯನ್ನು ಮರೆತು ಎಲ್ಲರೊಡನೆ ಬೆರೆತು ಬಾಳುವಂತಾಯಿತು. ಸಹಜವಾಗಿ ಮಕ್ಕಳೂ ವೈವಿಧ್ಯತೆಯಲ್ಲಿ ಏಕತೆಯ ಸೊಗಸನ್ನು ಬಾಲ್ಯದಿಂದಲೇ ಅರಿತರು.
ಸಿಂಗಾಪುರದ ಬಹುತೇಕ ನಾಗರಿಕರಿಗೆ ಕಡಿಮೆ ಬೆಲೆ, ಸಾಲ ಮತ್ತು ಸಹಾಯಧನ ಮುಂತಾದ ಸೌಲಭ್ಯಗಳಿಂದಾಗಿ ತಮ್ಮದೇ ಮನೆಯನ್ನು ಹೊಂದಲು ಸಾಧ್ಯವಾಗಿದೆ. ಕನಿಷ್ಟ ವೇತನದ ಪದ್ಧತಿ ಇಲ್ಲದಿದ್ದರೂ ಮಧ್ಯಮವರ್ಗದವರೂ ಕೂಡ ಒಳ್ಳೆಯ ಜೀವನ ನಡೆಸುತ್ತಾರೆ. ಪ್ರತಿ ಮನೆಯಲ್ಲೂ ಮಕ್ಕಳ ಲಾಲನೆ ಪಾಲನೆಗೆ, ಮನೆಗೆಲಸಕ್ಕೆ ಸಹಾಯಕರಿದ್ದಾರೆ. ಆಧುನಿಕ ತಂತ್ರಜ್ಞಾನ ಎಲ್ಲ ಕಡೆಗೂ ಬಳಕೆಯಾಗುತ್ತದೆ. ಉತ್ತಮ ಗುಣಮಟ್ಟದ ಜೀವನ ಎಲ್ಲರಿಗೂ ಲಭ್ಯವಾಗಿದೆ. ಅಚ್ಚುಕಟ್ಟಾದ ರಸ್ತೆಗಳು, ಹಾರ್ನ್ ಮಾಡದೇ ತಮ್ಮ ಲೇನಿನಲ್ಲಿ ಶಿಸ್ತಾಗಿ ಓಡಾಡುವ ವಾಹನಗಳು, ವರ್ಷವಿಡೀ ಮಳೆಯಾಗುವುದರಿಂದ ಕಾಲ್ನಡಿಗೆಯ ದಾರಿಗಳಿಗೆ ಸೂರು ಹೊದೆಸಿದ್ದಾರೆ. ಮಳೆಯಿಂದ ಯಾವ ಕಟ್ಟಡದ ಬಣ್ಣವೂ ಮಾಸದಂತೆ ಜತನ ಮಾಡಿದ್ದಾರೆ. ಆಹಾರ ವಿಹಾರಕ್ಕಾಗಿ ವಿಫುಲವಾದ ಆಯ್ಕೆಗಳಿವೆ. ಜುರಾಸಿಕ್ ಪಾರ್ಕಿನಲ್ಲಿ ಬರುವಂಥ ಅದ್ಭುತವಾದ ಕೈತೋಟವನ್ನು, ಜಲಪಾತವನ್ನು ಕೃತಕವಾಗಿ ನಿರ್ಮಿಸಿದ್ದಾರೆ. ವಿವಿಧ ಭೂಭಾಗಗಳ ಸಸ್ಯಜಾತಿಯ ಅಸಂಖ್ಯ ಪ್ರಭೇದಗಳನ್ನು ಸಂರಕ್ಷಿಸಲಾಗಿದೆ.

ಇಷ್ಟೊಂದು ಸುಖ ಸೌಲಭ್ಯಗಳು, ಸೌಕರ್ಯಗಳನ್ನು ಅತಿ ಶೀಘ್ರವಾಗಿ ಜಾರಿಗೆ ತರುವುದು ಬೇರೆ ದೇಶಗಳಿಗೇಕೆ ಸಾಧ್ಯವಿಲ್ಲವೆಂದರೆ ಅನೇಕ ಕಾರಣಗಳಿವೆ. ರಾಜಕೀಯ ಸ್ಥಿರತೆ, ದೂರದೃಷ್ಟಿಯುಳ್ಳ ದಕ್ಷ ನೇತೃತ್ವ, ಮಿತವಾದ ಜನಸಂಖ್ಯೆ, ಪಾರದರ್ಶಕ, ಸರಳ ಹಾಗೂ ಶೀಘ್ರವಾಗಿರುವ ಆಡಳಿತಯಂತ್ರ, ಬಿಗಿಯಾದ ಕಾಯ್ದೆ ಕಾನೂನುಗಳು, ಎಲ್ಲಕ್ಕಿಂತ ಮಿಗಿಲಾಗಿ ಅವುಗಳನ್ನು ಪಾಲಿಸುವ ನಾಗರೀಕರು… ಈ ಎಲ್ಲ ಅಂಶಗಳೂ ಹೊಂದಾಣಿಕೆಯಾಗಿ ಒಂದೆಡೆ ಸೇರುವುದು ಸುಲಭ ಸಾಧ್ಯವಲ್ಲ ಅಲ್ಲವೇ?
ಸಿಂಗಾಪುರವನ್ನು ಮೆಚ್ಚಿ ಅಹುದಹುದೆನ್ನುತ್ತ ಪಕ್ಕದ ಮಲೇಶಿಯಾಕ್ಕೆ ಬಂದಾಗ ಅಲ್ಲಿಯ ಜನರ ಬಾಯಲ್ಲಿ ನಾ ನೋಡಿದ ಸಿಂಗಾಪುರ ಕಾಣಲೇ ಇಲ್ಲ. ಅಲ್ಲಿ ಸಿಂಗಾಪುರದ ಸಂಪತ್ತು, ಶ್ರೀಮಂತ ನಾಗರಿಕರ ಕುರಿತು ಇರುವ ಅಭಿಪ್ರಾಯಗಳೇ ಭಿನ್ನ. ಮಲೇಶಿಯನ್ನರು ಕಂಡುಕೊಂಡ ಸತ್ಯವೆಂದರೆ ಸಿಂಗಾಪುರದಲ್ಲಿ ಕೈತುಂಬ ಕೆಲಸವಿದೆ, ದುಡ್ಡಿದೆ. ಸುಖವಾಗಿ ಬದುಕುವ ಸೌಲಭ್ಯಗಳಿವೆ. ಆದರೂ ಇತ್ತೀಚೆಗೆ ಜನರಲ್ಲಿ ಒಂದು ರೀತಿಯ ಅಸಮಾಧಾನ ಒಳಗೊಳಗೇ ಹರಿಯುವಂತಿದೆ. ಕಠಿಣವಾದ ನಿಯಮ ಕಾನೂನುಗಳು ತಮ್ಮ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತಿರುವ ಅಸಹನೆ ಕಾಣುತ್ತಿದೆ. ಮುಖ್ಯ ಕಾರಣವೆಂದರೆ ಸಿಂಗಾಪುರದಲ್ಲಿ ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶವಿಲ್ಲ. ಸರ್ಕಾರದ ವಿರುದ್ಧ ಯಾರೂ ಸೊಲ್ಲೆತ್ತುವಂತಿಲ್ಲ. ಮನುಷ್ಯನಿಗೆ ಯಾವತ್ತೂ ತಿನ್ನಲಾರದ ಹಣ್ಣು ಬಲು ರುಚಿ. ವಿರೋಧಿಸುವ, ಪ್ರತಿಭಟಿಸುವ ಸ್ವಾತಂತ್ರ್ಯ ಮನುಷ್ಯನಿಗೆ ಮೂಲಭೂತ ಸೌಲಭ್ಯಗಳಷ್ಟೇ ಅಗತ್ಯವೆನಿಸುತ್ತದೆ. ಚ್ಯೂಯಿಂಗ್ ಗಮ್ ಮಾರಾಟ ಮಾಡುವ ಮತ್ತು ತಿನ್ನುವ ಸ್ವಾತಂತ್ಯ ಇಲ್ಲದ ಯುವಜನತೆಗೆ ಏನಿದ್ದರೇನು ಅನ್ನುವ ವೈರಾಗ್ಯ ಕಾಡುತ್ತಿದೆಯಂತೆ. ಅವರಲ್ಲಿ ಅಪಾರ ಸಂಪತ್ತಿದ್ದರೂ ಅದನ್ನು ಹೇಗೆ ಬೇಕೆಂದರೆ ಹಾಗೆ ಖರ್ಚು ಮಾಡಿ ಮಜಾ ಮಾಡುವಂತಿಲ್ಲ. ಲಕ್ಸುರಿ ಕಾರನ್ನು ಕೊಂಡು ವೇಗವಾಗಿ ಚಲಾಯಿಸುವಂತಿಲ್ಲ. ಕ್ಯಾಸಿನೋಗೊ ಹೋಗಿ ಜೂಜಾಡುವ ಹಾಗಿಲ್ಲ. ಕುಡಿದು, ನಶೆಯಲ್ಲಿ ಮನಸ್ವೇಚ್ಛೆ ಪಾರ್ಟಿ ಮಾಡುವಂತಿಲ್ಲ. ಅದಕ್ಕಾಗಿ ವಾರಾಂತ್ಯದಲ್ಲಿ ಬಹಳಷ್ಟು ಜನರು ಮಲೇಶಿಯಾಕ್ಕೆ ಬಂದು ಮನಬಂದಂತೆ ಖರ್ಚು ಮಾಡಿ ಆನಂದಿಸುತ್ತಾರಂತೆ. ಇದನ್ನು ಕೇಳಿದಾಗ ‘ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ’ ಕವನದ ಸಾಲುಗಳು ಮನದಲ್ಲಿ ಸುಳಿದು ಹೋದವು.
ಅಕ್ಕ ಪಕ್ಕದ ದೇಶಗಳು ಒಂದನ್ನೊಂದು ಹೀಗಳೆಯುವ ಚಾಳಿ ನಮಗೇನೂ ಹೊಸತಲ್ಲವೆಂದುಕೊಂಡರೂ ಸಿಂಗಾಪುರದಿಂದ ಬಂದು ತುಸು ದಿನಗಳಾದ ಮೇಲೆ ನನಗೂ ಮಲೇಶಿಯಾದವರ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ ಎನಿಸಿತು. ಸಿಂಗಾಪುರ ಶ್ರೀಮಂತವಾಗಿದ್ದರೂ ಅಲ್ಲಿಯ ಜನರು ಸಂತುಷ್ಟರಲ್ಲವಂತೆ. ಬಲು ದುಬಾರಿಯಾದ ಜೀವನ ಮಟ್ಟದಿಂದಾಗಿ ಎಷ್ಟೇ ಹಣವಿದ್ದರೂ ಸಾಲದಿರುವುದು, ನೌಕರಿ ಮತ್ತು ಕೌಟುಂಬಿಕ ಜೀವನದ ನಡುವಿನ ಅಸಮತೋಲನ, ಯಾವುದೇ ಪ್ರಾಕೃತಿಕ ಸೌಂದರ್ಯವಿಲ್ಲದ ಅತಿ ಚಿಕ್ಕ ದೇಶದೊಳಗೆ ವಾಸಿಸುವ ಪರಿಸ್ಥಿತಿ, ಕಡ್ಡಾಯವಾದ ಮಿಲಿಟರಿ ಸೇವೆ, ಸ್ವಾತಂತ್ರ್ಯವಿಲ್ಲದ ಜೀವನ… ಹೀಗೆ ಪಟ್ಟಿ ಮಾಡುತ್ತಾ ಹೋದರೆ ಯಾವ ದೇಶವೂ ಪರಿಪೂರ್ಣವಲ್ಲ. ನಮ್ಮತನವನ್ನು ಉಳಿಸಿಕೊಂಡು, ಬೆಳೆಸಿಕೊಂಡು, ಬಲಿಷ್ಠವಾದ ದೇಶ ಕಟ್ಟುವುದೇ ನಮ್ಮ ಧ್ಯೇಯವಾದರೆ ಸಾಕು ಅನ್ನಿಸಿತು. ನೀವೇನಂತೀರಿ?