ವಾಷಿಂಗ್ಟನ್‌ನ ವಾಸ್ತುಶಿಲ್ಪ
ವಾಷಿಂಗ್ಟನ್ ಕಾಲದಲ್ಲಿ ನಿರ್ಮಿತಗೊಂಡ ಈ ಕಟ್ಟಡವನ್ನು ಆಗಿಂದಾಗ್ಗೆ ದುರಸ್ತಿ ಮಾಡುತ್ತಾ ಆ ಕಾಲಮಾನದ ವಾಸ್ತುಶಿಲ್ಪಕ್ಕೆ ಭಂಗವಾಗದಂತೆ ಕಾಪಾಡಿಕೊಳ್ಳಲಾಗಿದೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿ ಇಲ್ಲೇ ನೀಡುವ ಆಡಿಯೋ ಯಂತ್ರವನ್ನು ಕೈಯ್ಯಲ್ಲಿ ಹಿಡಿದು, ಏಕಾಂಗಿಯಾಗಿ ಇಡೀ ಪ್ರದೇಶವನ್ನು ಯಾರ ನೆರವೂ ಇಲ್ಲದೆ ಸುತ್ತಾಡಿ ಮಾಹಿತಿ ಸಂಗ್ರಹಿಸಿಕೊಳ್ಳಬಹುದು.
- ಡಾ. ಡಿ . ಮಂಗಳಾ ಪ್ರಿಯದರ್ಶಿನಿ
ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ನ ಮನೆ ಹಾಗೂ ಎಸ್ಟೇಟ್‌ಗಳನ್ನು ನೋಡುವುದೇ ಒಂದು ಚಂದದ ಅನುಭವ. ಪೋಟಮ್ಯಾಕ್ ನದಿಯ ದಡದಲ್ಲಿ ‘ಪಲಾಡಿಯನ್ʼ ಶೈಲಿಯಲ್ಲಿ ನಿರ್ಮಿತವಾದ ಈ ಬಂಗಲೆಯು ಅವನ ಪೂರ್ವಜರು 1784ರಲ್ಲಿ ನಿರ್ಮಿಸಿದ ಕಟ್ಟಡವಾಗಿದೆ. ಇಲ್ಲಿ ಆತ ತನ್ನ ಪತ್ನಿ ಮಾರ್ಥಾ ಹಾಗೂ ತನ್ನ ಕುಟುಂಬದೊಡನೆ ವಾಸ ಮಾಡುತ್ತಿದ್ದನು. ಜತೆಗೆ ಈ ಪ್ರಾಂತ್ಯದಲ್ಲಿ ಆತ ಅತ್ಯಂತ ಶ್ರೀಮಂತನಾಗಿದ್ದು, ಇಡೀ ಪ್ರಾಂತ್ಯದ ಜಮೀನು ಅವನ ತಂದೆಯ ಸ್ವಂತ ಆಸ್ತಿಯಾಗಿತ್ತು. ಔದಾರ್ಯ ಗುಣದಿಂದಾಗಿ ವಾಷಿಂಗ್ಟನ್ ತನ್ನ ಬಹುತೇಕ ಆಸ್ತಿಯನ್ನು ಸ್ಥಳೀಯರಿಗೆ ದಾನ ಮಾಡಿದ್ದನೆಂದು ಹೇಳಲಾಗುತ್ತದೆ. ಇಲ್ಲಿಯೇ ದುಡಿಯುತ್ತಿದ್ದ ಕಾರ್ಮಿಕರು ಮತ್ತು ಪತ್ನಿ ಮಾರ್ಥಾಳೊಂದಿಗೆ ವಾಷಿಂಗ್ಟನ್‌ನನ್ನು ಸಮಾಧಿ ಮಾಡಲಾಗಿದೆಯಂತೆ.

ಎಂಟು ಸಾವಿರ ಎಕರೆಗಳ ಈ ಬೃಹತ್ ಎಸ್ಟೇಟಿನಲ್ಲಿ ಮೂವತ್ತಕ್ಕೂ ಹೆಚ್ಚಿನ ಕಟ್ಟಡಗಳಿವೆ. ವಾಷಿಂಗ್ಟನ್‌ನ ಮನೆ, ಕಟ್ಟಡಗಳು ರಾಷ್ಟ್ರೀಯ - ಚಾರಿತ್ರಿಕ ಸ್ಮಾರಕವಾಗಿ ಪರಿವರ್ತಿತವಾಗಿವೆ. ‘ಮೌಂಟ್ ವೆರ್ನ್ನಾನ್ ಲೇಡೀಸ್ ಅಸೋಸಿಯೇಷನ್ʼಇದರ ರಕ್ಷಣೆಯ ಸ್ವಾಮ್ಯ ಪಡೆದಿದೆ. ಸಾರ್ವಜನಿಕರ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದ್ದು, ಅಲ್ಲೇ ಇರುವ ಚಿತ್ರ ಮಂದಿರದಲ್ಲಿ ‘ಅಮೆರಿಕ ವಾರ್ ಆಫ್ ಇಂಡಿಪೆಂಡೆನ್ಸ್ʼ ಚಲನಚಿತ್ರವನ್ನು ವೀಕ್ಷಿಸಬಹುದು. ಅಮೆರಿಕದ ಯಾವ ಮ್ಯೂಸಿಯಮ್‌ಗೆ ಹೋದರೂ ಸ್ಥಳ ಪುರಾಣ, ಚರಿತ್ರೆಗಳನ್ನು ಕೂಲಂಕುಷವಾಗಿ ತಿಳಿದು ಹೋಗುವ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿದೆ. ಇದು ಪ್ರವಾಸಿಗರಿಗೆ ಅಪೇಕ್ಷಣೀಯವೂ ಹೌದು. ಇಲ್ಲಿಗೆ ಭೇಟಿ ಕೊಡುವ ಪ್ರೇಕ್ಷಕ, ಕೌಂಟರ್‌ನಲ್ಲಿ ಟಿಕೇಟಿನೊಂದಿಗೆ ಒದಗಿಸಲಾಗುವ ನಕ್ಷೆ, ಆಡಿಯೋ ಯಂತ್ರವನ್ನು ಕೈಯ್ಯಲ್ಲಿ ಹಿಡಿದು ಏಕಾಂಗಿಯಾಗಿ ಇಡೀ ಎಸ್ಟೇಟ್ ಪ್ರದೇಶವನ್ನು ಯಾರ ನೆರವೂ ಇಲ್ಲದೆ ಸಂಪೂರ್ಣವಾಗಿ ಸುತ್ತಾಡಿ ಮಾಹಿತಿ ಸಂಗ್ರಹಿಸಿಕೊಳ್ಳಬಹುದು. ವಾಷಿಂಗ್ಟನ್ ಕಾಲದಲ್ಲಿ ನಿರ್ಮಾಣಗೊಂಡ ಈ ಕಟ್ಟಡವನ್ನು ಆಗಿಂದಾಗ್ಗೆ ದುರಸ್ತಿ ಮಾಡುತ್ತಾ ಆ ಕಾಲಮಾನದ ವಾಸ್ತುಶಿಲ್ಪಕ್ಕೆ ಭಂಗವಾಗದಂತೆ ಕಾಪಾಡಿಕೊಳ್ಳಲಾಗಿದೆ. ವಾಷಿಂಗ್ಟನ್ ಮನೆ ಹದಿನೆಂಟು ಕೋಣೆಗಳ ಎರಡು ಅಂತಸ್ತಿನ ಕಟ್ಟಡವಾಗಿದ್ದು, ಡ್ರಾಯಿಂಗ್ ಹಾಲ್, ಸಂಗೀತ ಕೋಣೆ, ಮಂತ್ರಾಲೋಚನಾ ಕೊಠಡಿ, ಬೃಹತ್ ಗ್ರಂಥಾಲಯ, ಅತಿಥಿ ಗೃಹ, ಓದಲು ಉಪಯೋಗಿಸುವ ಕೊಠಡಿಯನ್ನು ಹೊಂದಿದೆ. ಅಲ್ಲಿಯ ಪೀಠೋಪಕರಣಗಳು, ಪಲ್ಲಂಗ, ಹೂದಾನಿಗಳು, ಚಹಾ ಕಪ್ಪುಗಳು, ಪಿಯಾನೋ, ಪಿಟೀಲುಗಳು, ಗೋಡೆಯ ಮೇಲಿನ ವಾಲ್ ಪೇಪರ್‌ಗಳು ಎಲ್ಲವೂ ಆ ಕಾಲಕ್ಕೆ ಬದ್ಧವಾಗಿವೆ. ಕೆಳಗಡೆ ಹಿತ್ತಿಲಲ್ಲಿ ಅಡುಗೆ ಮನೆಯಿದ್ದು, ಎದುರಿಗೇ ಉಗ್ರಾಣವಿದೆ. ಅದಕ್ಕೆ ಹೊಂದಿಕೊಂಡಂತೆ ಕುರಿ ಕೋಳಿಗಳನ್ನು ಕಡಿದು ಅಡುಗೆ ತಯಾರು ಮಾಡುವ ಜಾಗವಿದೆ. ದೊಡ್ಡ ದೊಡ್ಡ ಸೌದೆ ಒಲೆಗಳಿವೆ. ಬೃಹದಾಕಾರದ ಸೌಟುಗಳು, ಕಬ್ಬಿಣ- ಪಿಂಗಾಣಿ ಪಾತ್ರೆಗಳು, ಚಮಚಗಳು, ತಟ್ಟೆ- ಬಟ್ಟಲು ಮೊದಲಾದವುಗಳನ್ನುಅಂದವಾಗಿ ಜೋಡಿಸಿಟ್ಟಿದ್ದಾರೆ.

ಕಟ್ಟಡದ ಹೊರ ಆವರಣದಲ್ಲಿ ಬಟ್ಟೆ ಒಗೆಯುವ ಲಾಂಡ್ರಿ, ಕುದುರೆ ಲಾಯ, ದನ - ಕರುಗಳ ಕೊಟ್ಟಿಗೆ ಇವೆ. ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಮನೆಗಳ ಸಂಕಿರ್ಣವೇ ಒಂದು ಪುಟ್ಟ ಹಳ್ಳಿಯಂತಿದೆ. ಕಣ್ಣು ಹಾಯಿಸಿದಷ್ಟು ದೂರದವರೆಗೂ ಹಸಿರಿನಿಂದ ಕಂಗೊಳಿಸುತ್ತಿರುವ ಹೊಲಗಳು -ತೋಟಗಳು, ಸ್ಫಟಿಕದಂತೆ ಶುಭ್ರವಾಗಿ ಹರಿಯುತ್ತಿರುವ ಪೋಟಮ್ಯಾಕ್ ನದಿಯಿದೆ. ಇಲ್ಲಿ ದೋಣಿ ವಿಹಾರವೂ ಇದ್ದು, ಇಂಥ ಹಲವು ಅವಕಾಶಗಳು ಈ ಪ್ರದೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಬೃಹತ್ ಎಸ್ಟೇಟನ್ನು ನಡೆದು ನೋಡಲು ಸಾಧ್ಯವಿಲ್ಲದವರಿಗೆ ಉಚಿತ ಬಸ್ ಸೇವೆಯೂ ಇದೆ. ಎಲ್ಲವನ್ನೂ ಕಂಡು ಹೊರಗೆ ಬರುವ ಹಾದಿಯಲ್ಲಿ ಸೊವವೀರ್ ಅಂಗಡಿಗಳು, ಕಾಫಿ ಶಾಪ್‌ಗಳು, ಹೊಟೇಲ್‌ಗಳು ಇವೆ. ಮೌಂಟ್ ವೆರ್ಮಾನ್‌ನ ಹೋಂ ಟೂರಿನ ಟಿಕೆಟ್ ಪಡೆದು ಒಳಗೆ ಪ್ರವೇಶಿಸುತ್ತಿರುವಾಗ ವಾಷಿಂಗ್ಟನ್, ಅವನ ಹೆಂಡತಿ ಮಾರ್ಥಾ ಹಾಗೂ ಮೊಮ್ಮಕ್ಕಳ ಕೈ ಹಿಡಿದು ಅತಿಥಿಗಳನ್ನು ಸ್ವಾಗತಿಸಲು ನಿಂತ ಭಂಗಿಯ ಆಳೆತ್ತರದ ಕಪ್ಪು ಪ್ರತಿಮೆಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ನಿಂತಿವೆ. ವಾಸ್ತವದಲ್ಲಿ ಆರೂವರೆ ಅಡಿ ಎತ್ತರವಿದ್ದ ಜಾರ್ಜ್ ವಾಷಿಂಗ್ಟನ್, ಅಮೆರಿಕ ದೇಶದ ಸಂವಿಧಾನವನ್ನು ಬರೆದು, ತನ್ನ ವ್ಯಕ್ತಿತ್ವದ ಕಾರಣದಿಂದಲೂ ಇತಿಹಾಸದಲ್ಲೂ ಎತ್ತರದ ಮನುಷ್ಯನಾಗಿದ್ದಾನೆ. ಸ್ಮಾರಕಗಳ ತವರೂರಾದ ವಾಷಿಂಗ್ಟನ್‌ನ ವರ್ಜೀನಿಯಾದ ಹೊರ ವಲಯದ ಈ ತಾಣ, ನೋಡಿದವರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂಥದ್ದು.