Wednesday, April 1, 2026
Wednesday, April 1, 2026

ವಿಯೆಟ್ನಾಂನಲ್ಲಿ ನಮ್ಮವರನ್ನು ಹುಡುಕುವ ಸಾಹಸ

ಪ್ರಯಾಣದಲ್ಲಿ ಗುಂಪನ್ನು ಬಿಟ್ಟು ಹೋಗಬಾರದು, ಮೊಬೈಲು ಎಲ್ಲ ಕಡೆಯೂ ಬರುವ ಹಾಗೆ ರೋಮಿಂಗ್, ರಿಚಾರ್ಜು ಮಾಡಿಕೊಳ್ಳಬೇಕು, ಬಹಳ ಮುಖ್ಯವಾಗಿ ಕನ್ನಡದ ಕಟ್ಟಾ ಅಭಿಮಾನಿಯಾಗಿದ್ದರೂ ಒಂದಿಷ್ಟು ಮಾತನಾಡಲಾದರೂ ಇಂಗ್ಲಿಷ್‌, ಹಿಂದಿ ಬರಬೇಕು, ಕನ್ನಡ ಪ್ರೀತಿಸುತ್ತಾ ಬೇರೆ ಭಾಷೆಯನ್ನೂ ಕಲಿತು ವಿಶ್ವಮಾನವರಾಗಬೇಕು ಎಂದು ಕಲಿಸಿದ ಪ್ರವಾಸವಿದು.

ಬೆಂಗಳೂರಿನಿಂದ ವಿಯೆಟ್ನಾಂಗೆ ನಮ್ಮ ಪಯಣ ವಿಮಾನದ ಮೂಲಕ ಆರಂಭವಾಯಿತು. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು ಮೂವತ್ಮೂರು ಜನರ ತಂಡ ಸಂಜೆ 8 ಗಂಟೆಗೆ ತಲುಪಿತು.

ಎಲ್ಲ ತಪಾಸಣೆ ಮುಗಿಸಿ ಲಾಂಜ್‌ಗೆ ಬರುವಾಗ ರಾತ್ರಿ ಹತ್ತಾಗಿತ್ತು. ನಮ್ಮ ವಿಮಾನ 11.35 ಕ್ಕೆ ಇತ್ತು. ನನಗೆ ನೀರಡಿಕೆಯಾಗಿತ್ತು. ನಾನು ತಂದ ನೀರಿನ ಬಾಟಲಿ, ತಪಾಸಣೆ ಸಂದರ್ಭದಲ್ಲಿ ಒಳಗೆ ಬಿಡುವುದಿಲ್ಲ ಎಂದಾಗ ಅದನ್ನು ಹೊರಗಡೆಯೇ ಇಟ್ಟು ಬಂದಿದ್ದೆ. ಹೊಸ ಬಾಟಲಿ ಖರೀದಿಸಲು ರಿಲೇ ಶಾಪ್‌ಗೆ ಹೋದೆ. ಬಾಟಲಿಗೆ ಎಷ್ಟು ಎಂದು ಕೇಳಿದಾಗ, ನಿಮ್ಮ ಪಾಸ್ಪೋರ್ಟ್ ಮತ್ತು ಟಿಕೆಟ್‌ ಕೇಳಿದರು. ಬಹುಶಃ ನಮಗಿದು ಉಚಿತ ಇರಬೇಕೆಂದುಕೊಂಡು ಕೊಟ್ಟೆ. ಅವರು ಸ್ಕ್ಯಾನ್ ಮಾಡಿ 160 ರು. ಎಂದರು. ದರ ಕೇಳಿ ಹೌಹಾರಿದೆ. ಹತ್ತು ರುಪಾಯಿಗೆ ಸಿಗುವ ಈ ಬಾಟಲಿ ಇಷ್ಟೊಂದು ಮೊತ್ತವೆ ಎಂದುಕೊಂಡು ಹಣ ತೆತ್ತು ಬಂದೆ. ಇಷ್ಟೊಂದು ತುಟ್ಟಿಯ ಬಾಟಲಿ ಹೊರಗೆ ಇಟ್ಟುಕೊಂಡರೆ ನನ್ನೊಂದಿಗಿರುವ ಸಹ ಪ್ರಯಾಣಿಕರು ಖಂಡಿತ ಕೇಳುತ್ತಾರೆ, ಎಂದು ಬ್ಯಾಗಿನಲ್ಲಿ ಇಡಲು ನೋಡಿದೆ. ಇಷ್ಟೊಂದು ಬೆಲೆಯ ನೀರಿನಲ್ಲಿ ಬೇರೆ ಏನೋ ವಿಶೇಷ ಇರಬೇಕೆಂದು ಒಂದು ಗುಟುಕು ಕುಡಿದೆ. ಹಾ! ಅದು ಸಹಜ ನೀರಾಗಿರದೇ ಅಮೃತ ಸಮಾನ ಜಲವೇ ಆಗಿತ್ತು.

ಇದನ್ನೂ ಓದಿ: ಮಾಚು ಪಿಚು ಎಂಬ ಕಳೆದು ಹೋದ ಇಂಕಾ ನಗರ

ಅಷ್ಟೊತ್ತಿಗೆ ನಮ್ಮ ವಿಮಾನ ಬಂದಿತ್ತು. ಸರಿಯಾದ ಸಮಯಕ್ಕೆ ವಿಮಾನ ನಿಧಾನವಾಗಿ ಚಲಿಸುತ್ತಾ ಮೇಲೆ ಮೇಲಕ್ಕೆ ಹಾರಿದಂತೆ, ಸಮಯ ನೋಡಿಕೊಂಡೆ. 12.00 ಗಂಟೆಯಾಗಿತ್ತು. ಬೆಳಗ್ಗೆ ಕಣ್ಣು ತೆರೆದಾಗ ನಾವು ಹೊ ಚಿ ಮಿನ್ ಸಿಟಿಯಲ್ಲಿದ್ದೇವು.

Untitled design (45)

ನಾನೆಲ್ಲಿ?

ನಾವು ಮತ್ತೆ ಬೇರೆ ವಿಮಾನದ ಮೂಲಕ ದನಾಂಗ್ ಸಿಟಿಗೆ ಹೋಗಬೇಕಿತ್ತು. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡೊಮೆಸ್ಟಿಕ್ ವಿಮಾನ ನಿಲ್ದಾಣಕ್ಕೆ ಹೋಗಬೇಕಿತ್ತು. ಬೆಂಗಳೂರಿನಲ್ಲಿ ನಾವಿಟ್ಟಿದ್ದ ನಮ್ಮ ಲಗೇಜು ತೆಗೆದುಕೊಳ್ಳಬೇಕಿತ್ತು. ಲಗೇಜು ಕೆಳಗಡೆ ಬಂದು ವರ್ತುಲಾಕಾರದಲ್ಲಿ ಸುತ್ತುತ್ತಿದ್ದವು. ಎಲ್ಲರೂ ತಮ್ಮ ತಮ್ಮ ಲಗೇಜು ತೆಗೆದುಕೊಂಡು ತೆರಳುತ್ತಿದ್ದರೆ, ನನ್ನ ಲಗೇಜು, ಹತ್ತು, ಇಪ್ಪತ್ತು ನಿಮಿಷ ಕಳೆದರೂ ಪತ್ತೆ ಇಲ್ಲ. ನನ್ನೊಂದಿಗೆ ಬಂದವರು ತಮ್ಮ ಲಗೇಜು ತೆಗೆದುಕೊಂಡು ಹೊರಗೆ ತೆರಳಿದ್ದರು. ನನ್ನೊಂದಿಗೆ ಯಾರೂ ಇರಲಿಲ್ಲ. ಅಲ್ಲಿನ ಸಿಬ್ಬಂದಿಗೆ ಕೇಳೋಣ ಅಂದರೆ, ಅವರಿಗೆ ನಾನು ಹೇಳಿದ್ದು ಅರ್ಥವಾಗಲಿಲ್ಲ. ಲಗೇಜು ಬರುವುದು ನಿಂತಿತು. ಬೆಂಗಳೂರಿನಿಂದ ನನ್ನ ಲಗೇಜು ಬಂದಿಲ್ಲ ಎಂಬುದು ನನಗೆ ಖಾತ್ರಿಯಾಯಿತು. ಯಾರಿಗೆ ಹೇಳೋಣ. ಕರೆ ಮಾಡಬೇಕೆಂದರೆ, ನನ್ನ ಮೊಬೈಲ್ ಇನ್ನೂ ರೊಮಿಂಗ್ ಒಳಪಟ್ಟಿರಲಿಲ್ಲ.

ಆದರೂ ಒಂದು ಪ್ರಯತ್ನವೆಂದು ಒಂದೇ ಕಡೆ ನಿಂತಿದ್ಧ ನಾನು, ಲಗೇಜು ಇಟ್ಟುಕೊಂಡು ಸುತ್ತುವ ವರ್ತುಲದ ಸುತ್ತ ನೋಡಿದೆ. ಅಲ್ಲಿ ಕೆಳಗಡೆ ನನಗಾಗಿಯೇ ಹಂಬಲಿಸುವಂತೆ ನನ್ನ ಲಗೇಜು ಕುಳಿತಿತ್ತು, ಯಾರೋ ಪುಣ್ಯಾತ್ಮರು ನನಗಿಂತ ಮೊದಲು ಬಂದವರು ತಮ್ಮದೇ ಎಂದು ತಿಳಿದುಕೊಂಡು ಅದನ್ನು ಎತ್ತಿದ್ದರು ಎಂದು ಕಾಣುತ್ತದೆ. ತಮ್ಮದಲ್ಲ ಎಂದು ಗೊತ್ತಾದಾಗ ಕೆಳಗಿಟ್ಟಿರಬೇಕು. ಕೈಗೆ ನನ್ನ ಬ್ಯಾಗು ಸಿಕ್ಕಾಗ ನಿರಾಳನಾದೆ.

ಕಳಕೊಂಡ ಕರ

ಈಗ ಮತ್ತೊಂದು ಆತಂಕ ಶುರುವಾಯಿತು. ನಾವು ದನಾಂಗ್ ಹೋಗುವ ಡೊಮೆಸ್ಟಿಕ್ ವಿಮಾನ ನಿಲ್ದಾಣ ಹುಡುಕುವುದು. ಅಲ್ಲಿ ಸಿಬ್ಬಂದಿ ಕೇಳಿದರೆ ಹೀಗೆ ಹೋಗಿ ಎಂದು ಕೈ ಮಾಡಿ ಹೇಳುತ್ತಿದ್ದರೆ ಹೊರತು ಮುಂದೆ ಬಂದು ತೋರಿಸುತ್ತಿರಲಿಲ್ಲ. ನನಗೆ ತಂಡದವರನ್ನು ಹುಡುಕುವುದೇ ಕೆಲಸವಾಯಿತು. ಕಳಕೊಂಡ ಕರ ಹುಡುಕಿಕೊಂಡು ಬರುತ್ತದೆ ಎಂಬ ಗಾದೆಮಾತು ನೆನಪಾಯಿತು. ನಾನಂತೂ ಇಲ್ಲಿ ಅಪರಿಚಿತರ ಮಧ್ಯೆ ಕಳೆದು ಹೋಗಿದ್ದೆ. ಆತಂಕದ ನಡುವೆ ನಾನು ನನ್ನ ಲಗೇಜಿನೊಂದಿಗೆ ಎಲ್ಲ ಕಡೆ ಸುತ್ತಾಡಿದೆ. ಆದರೆ ನಮ್ಮ ತಂಡದ ಜನರು ಎಲ್ಲೂ ಕಾಣಲಿಲ್ಲ. ವಾಟ್ಸಪ್ ಕಾಲ್ ಮಾಡಿ ನೋಡಿದೆ, ಯಾವ ಸಂಪರ್ಕವೂ ಸಿಕ್ಕಲಿಲ್ಲ. ಆತಂಕ ಮತ್ತಷ್ಟು ಜೋರಾಯಿತು, ನಾನು ಹೋಗಬೇಕಾದ ವಿಮಾನವು ಸರಿಯಾದ ಸಮಯಕ್ಕೆ ಹೊರಟು ಹೋದರೆ, ನಾನಿಲ್ಲಿ ಅಪರಿಚಿತ ಜಗತ್ತಿನಲ್ಲಿ ಏನು ಮಾಡುವುದೆಂಬ ನೂರೆಂಟು ಯೋಚನೆಯಲ್ಲಿ ಮುಳುಗಿದೆ.

Untitled design (47)

ನಮ್ಮ ವಿಮಾನದಲ್ಲಿ ಸಹ ಪ್ರಯಾಣಿಕರಾಗಿದ್ದ ನಾಲ್ಕೈದು ಜನರ ಗುಂಪು ಸಿಕ್ಕಿತು. ಅವರನ್ನು ಮಾತನಾಡಿಸಿದೆ. ನಾನು ನಮ್ಮ ತಂಡದಿಂದ ಈ ಲಗೇಜು ಸಲುವಾಗಿ ಕಳಕೊಂಡ ಸಂಗತಿಯನ್ನು ಮತ್ತು ನಾನು ಡೊಮೆಸ್ಟಿಕ್‌ ವಿಮಾನ ನಿಲ್ದಾಣದ ಮೂಲಕ ದನಾಂಗ್ ವಿಮಾನ ಹತ್ತಬೇಕಾಗಿದೆ, ಎಂದು ಎಲ್ಲ ಒಂದೇ ಉಸಿರಿನಲ್ಲಿ ಹೇಳಿದೆ. ಭೇಟಿಯಾದವರು ಮೈಸೂರಿನವರಾಗಿದ್ದರು. ಅವರ ಮೊಬೈಲು ಪಡೆದು ಮಂಜುನಾಥರಿಗೆ ಕರೆ ಮಾಡಿದಾಗ ಯಾವ ಸ್ಪಂದನೆಯೂ ಸಿಕ್ಕಲಿಲ್ಲ. ಅವರು ನೀವು ಆತಂಕ ಪಡುವ ಅಗತ್ಯವಿಲ್ಲ ನಿಮ್ಮ ತಂಡದವರು ಸಿಗುತ್ತಾರೆ, ಬನ್ನಿ ನಾವು ಅದೇ ವಿಮಾನದಲ್ಲಿ ದನಾಂಗ್‌ಗೆ ಹೋಗುವುದಿದೆ, ಅದು ಒಂಬತ್ತು ಮೂವತ್ತಕ್ಕಲ್ಲ ಹತ್ತು ಮೂವತ್ತಕ್ಕೆ ಇದೆ ಎಂದು ಹೇಳಿದಾಗ ನಿಟ್ಟುಸಿರು ಬಿಟ್ಟೆ. ಹೊ ಚಿ ಮಿನ್ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಸುಮಾರು ಅರ್ಧ ಕಿಲೋಮೀಟರಿನಷ್ಟು ನಿಲ್ದಾಣದ ಒಳಗಡೆಯ ಹೂಗಿಡಗಳಿಂದ ಆವೃತ್ತವಾದ ದಾರಿಯಲ್ಲಿ ಚಲಿಸುತ್ತಾ ಹೋಗಿ ದೇಸಿ ನಿಲ್ದಾಣ ಸೇರಿದೆವು. ಒಳಗೆ ಬಂದಾಗ ಅಲ್ಲೂ ನಮ್ಮ ತಂಡದವರು ಯಾರೂ ಕಾಣಲಿಲ್ಲ. ಅವರಾಗಲೇ ಪ್ರಾಥಮಿಕ ತಪಾಸಣೆಗಳನ್ನೆಲ್ಲ ಪೂರೈಸಿಕೊಂಡು ವಿಮಾನ ನಿಲ್ಲುವ ಗೇಟಿಗೆ ಹೋಗಿದ್ದರು. ಸಿಕ್ಕ ಮೈಸೂರಿನ ಆಪದ್ಭಾಂಧವ ಗೆಳೆಯರೊಂದಿಗೆ ಸರದಿ ಸಾಲಿನಲ್ಲಿ ನಿಂತು ನಾವು ತಪಾಸಣೆಗೆ ಬಂದಾಗ ನನ್ನ ಲಗೇಜು ಬಂದಿತ್ತು. ಟಿಕೆಟ್‌ ಮೇಲೆ ನಾವು ಹೋಗಬೇಕಾದ ಜಾಗದ ಗುರುತು ನೀಡಿದ್ದರು. ಅಲ್ಲಿ ಹೋಗುವ ಹೊತ್ತಿಗೆ ನಮ್ಮ ತಂಡ ಕಂಡಿತು. ಆಗ ನಿರಾಳನಾದೆ. ಕಳಕೊಂಡ ಕರ ಹುಡಿಕಿಕೊಂಡುಬಂದು ಬಳಗ ಸೇರಿತ್ತು. ಒಟ್ಟು ಆರೇಳು ತಾಸುಗಳ ಪಯಣ ಒಂದು ಹೊಸ ಅನುಭವವನ್ನೆ ನೀಡಿತು.

ಲೇಖಕರು: ಸಾಹಿತಿ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...