ಕಾವ್ಯದ ಗರ್ಭದಿಂದ ಎದ್ದುಬಂದ ಇತಿಹಾಸ ಮತ್ತು ಪಳೆಯುಳಿಕೆ
ಕಾವ್ಯವೊಂದು ಕೇವಲ ಕಲ್ಪನೆಯಲ್ಲ, ಇತಿಹಾಸದ ಕಳೆದುಹೋದ ಪುಟಗಳಿಗೂ ದಾರಿ ತೋರಿಸಬಲ್ಲದು ಎಂಬುದಕ್ಕೆ ಟ್ರಾಯ್ ನಗರಿಯೇ ಸಾಕ್ಷಿ. ಹೋಮರ್‌ನ ‘ಇಲಿಯಡ್’ ಕಾವ್ಯದ ಸಾಲುಗಳನ್ನು ನಕ್ಷೆಯನ್ನಾಗಿ ಮಾಡಿಕೊಂಡು ಶೋಧಿಸಲ್ಪಟ್ಟ ಟ್ರಾಯ್, ಪುರಾಣ ಮತ್ತು ವಾಸ್ತವದ ನಡುವಿನ ಅದ್ಭುತ ಸೇತುವೆಯಾಗಿದೆ. ಇಂದು ಅದರ ಅವಶೇಷಗಳ ನಡುವೆ ನಿಂತಾಗ, ಸಾವಿರಾರು ವರ್ಷಗಳ ಹಿಂದಿನ ಯುದ್ಧ, ಪ್ರೀತಿ, ಅಹಂಕಾರ ಮತ್ತು ಸಾಮ್ರಾಜ್ಯಗಳ ನಶ್ವರತೆಯ ಕಥೆ ಕಲ್ಲುಗಳ ಮೂಲಕವೇ ಕೇಳಿಸುತ್ತದೆ.
- ಶಿವರಾಜ ಸೂ. ಸಣಮನಿ, ಮದಗುಣಕಿ
ಸಾಮಾನ್ಯವಾಗಿ ಇತಿಹಾಸದ ಗರ್ಭದಿಂದ ಸಾಹಿತ್ಯ ಹುಟ್ಟುತ್ತದೆ. ಆದರೆ, ಕಾವ್ಯವೊಂದರ ಗರ್ಭದಿಂದ ಇಡೀ ಇತಿಹಾಸವೇ ಮರುಹುಟ್ಟು ಪಡೆದ ವಿಸ್ಮಯವೊಂದು ಜಗತ್ತಿನಲ್ಲಿದ್ದರೆ, ಅದು ಹೋಮರ್‌ನ ‘ಇಲಿಯಡ್’(Iliad) ಮತ್ತು ಟ್ರಾಯ್ (Troy) ನಗರದ ಶೋಧನೆ ಮಾತ್ರ. ಜಗತ್ತಿನ ಭೂಪಟದಲ್ಲಿ ಕಳೆದುಹೋಗಿದ್ದ, ಕೇವಲ ಕಟ್ಟುಕಥೆ ಎಂದು ಮೂದಲಿಸಲ್ಪಟ್ಟಿದ್ದ ಸಾಮ್ರಾಜ್ಯವೊಂದನ್ನು, ಸಾವಿರಾರು ವರ್ಷಗಳ ಹಿಂದಿನ ಮಹಾಕಾವ್ಯವೊಂದರ ಸಾಲುಗಳನ್ನೇ ನಕ್ಷೆಯನ್ನಾಗಿ ಬಳಸಿಕೊಂಡು ಹುಡುಕಿ ತೆಗೆದದ್ದು ಮನುಕುಲದ ಅತಿ ದೊಡ್ಡ ಸಾಂಸ್ಕೃತಿಕ ಪವಾಡ. ಟರ್ಕಿಯ ವಾಯವ್ಯ ಭಾಗದಲ್ಲಿರುವ ಏಜಿಯನ್ ಸಮುದ್ರದ ತೀರದಲ್ಲಿ ನಿಂತು ಆ ಪ್ರಾಚೀನ ಅವಶೇಷಗಳನ್ನು ನೋಡುವಾಗ, ಕಾವ್ಯ ಮತ್ತು ಭೌಗೋಳಿಕತೆಯ ನಡುವಿನ ಅದೃಶ್ಯ ಕೊಂಡಿ ನಮ್ಮನ್ನು ಬೆರಗುಗೊಳಿಸುತ್ತದೆ.
ಇದನ್ನೂ ಓದಿ: ಮೌಂಟ್ ಪ್ಲೆಸೆಂಟ್ ಸಿಮೆಟರಿ
ಕಾವ್ಯ ಹುಡುಕಿದ ಕಳೆದುಹೋದ ನಗರ
ಹೆಲೆನ್‌ಳ ಅಪ್ರತಿಮ ಸೌಂದರ್ಯ, ಪ್ಯಾರಿಸ್‌ನ ವ್ಯಾಮೋಹ, ಅಕಿಲಿಸ್‌ನ ಭೀಕರ ಕ್ರೋಧ, ಹೆಕ್ಟರ್‌ನ ಶೌರ್ಯ ಮತ್ತು ಆ ಕುಖ್ಯಾತ ಮರದ ಕುದುರೆಯ (Trojan Horse) ಕಥೆಯನ್ನು ಪಾಶ್ಚಿಮಾತ್ಯ ಜಗತ್ತು ಶತಮಾನಗಳ ಕಾಲ ಕೇವಲ ಒಂದು ಸುಂದರ ಕಾಲ್ಪನಿಕ ಪುರಾಣವೆಂದೇ ನಂಬಿತ್ತು. ಆದರೆ, 19ನೆಯ ಶತಮಾನದ ಜರ್ಮನ್ ಉದ್ಯಮಿ ಹಾಗೂ ಪುರಾತತ್ತ್ವಶಾಸ್ತ್ರಜ್ಞ ಹೈನ್ರಿಕ್ ಶ್ಲೀಮಾನ್ ಎಂಬ ಹುಂಬನಿಗೆ ಹೋಮರ್‌ನ ಸಾಲುಗಳೇ ವೇದವಾಕ್ಯವಾಗಿದ್ದವು. ಆತ ಇಲಿಯಡ್ ಕಾವ್ಯವನ್ನು ಕೈಯಲ್ಲಿ ಹಿಡಿದು, ಅದರಲ್ಲಿ ವರ್ಣಿಸಿರುವ ನದಿಗಳು, ಬೆಟ್ಟಗಳು ಮತ್ತು ಸಮುದ್ರತೀರದ ಅಳತೆಗಳನ್ನು ಆಧರಿಸಿ ಟರ್ಕಿಯ 'ಹಿಸಾರ್ಲಿಕ್' ಎಂಬ ಗುಡ್ಡವನ್ನು ಅಗೆಯಲಾರಂಭಿಸಿದ. ಆ ಗುಡ್ಡದ ಗರ್ಭದಲ್ಲಿ, ಒಂದರ ಮೇಲೊಂದರಂತೆ ಪುನರ್ ನಿರ್ಮಾಣಗೊಂಡು ನಾಶವಾದ ಒಟ್ಟು ಒಂಬತ್ತು ಟ್ರಾಯ್ ನಗರಗಳ ಜೀವಂತ ಪದರಗಳು (Layers of Troy) ಹುದುಗಿದ್ದವು! ಕಾವ್ಯವೊಂದು ಭೂಗೋಳದ ಎದೆಯನ್ನು ಬಗೆದು ಸತ್ಯವನ್ನು ಹೊರತೆಗೆದಿತ್ತು!

ಪುರಾಣದ ಹಿಂದೆ ಅಡಗಿದ ಸತ್ಯ
ಹೋಮರ್‌ನ 'ಇಲಿಯಡ್' ಕಾವ್ಯದ ಆಳವಾದ ಗ್ರಹಿಕೆಯಲ್ಲಿ, ಮನುಷ್ಯನ ಅಹಂಕಾರ, ಕೋಪ, ವಿನಾಶ ಮತ್ತು ವಿಧಿಯ ಕ್ರೂರತೆಯ ದಾರ್ಶನಿಕ ವಿಶ್ಲೇಷಣೆಯು ಅನಾವರಣಗೊಳ್ಳುತ್ತದೆ. ಅಕಿಲಿಸ್‌ನ ಕೋಪದಿಂದ ಶುರುವಾಗುವ ಕಾವ್ಯ, ಟ್ರಾಯ್‌ನ ವೃದ್ಧ ರಾಜ ಪ್ರಿಯಾಮ್ ತನ್ನ ಶತ್ರುವಿನ ಕಾಲಿಗೆ ಬಿದ್ದು ಮಗನ ಶವವನ್ನು ಬೇಡುವ ಕರುಣಾಜನಕ ದೃಶ್ಯದೊಂದಿಗೆ ಮುಕ್ತಾಯವಾಗುತ್ತದೆ. ಟರ್ಕಿಯ ಆ ಪ್ರಾಚೀನ ಅವಶೇಷಗಳ ನಡುವೆ ನಡೆಯುವಾಗ ನಮಗೆ ಕಾಣುವುದು ಕೇವಲ ಕಲ್ಲುಗಳಲ್ಲ, ಆ ಕಲ್ಲುಗಳ ಹಿಂದೆ ಅಡಗಿರುವ ಮನುಷ್ಯನ ದುರಾಸೆ ಮತ್ತು ಸಾಮ್ರಾಜ್ಯಗಳ ನಶ್ವರತೆ. ಹೋಮರ್ ವರ್ಣಿಸಿದ ಟ್ರಾಯ್ (ಟ್ರಾಯ್-6 ಅಥವಾ 7ನೆಯ ಪದರ) ಕೇವಲ ಗ್ರೀಕರ ಕತ್ತಿಗಳಿಗೆ ಬಲಿಯಾಗಲಿಲ್ಲ, ಅದಕ್ಕೂ ಮುನ್ನ ಭೂಕಂಪಗಳಿಗೂ ತುತ್ತಾಗಿತ್ತು ಎಂಬ ಸತ್ಯ, ನಿಸರ್ಗದ ಎದುರು ಮನುಷ್ಯನ ಅಸಹಾಯಕತೆಯನ್ನು ಸಾರುತ್ತದೆ.
ಅಹಂಕಾರವನ್ನು ಗೆದ್ದ ಕಾಲ
ಇಂದು ಟರ್ಕಿಗೆ ಭೇಟಿ ನೀಡುವ ಪ್ರವಾಸಿಗರು ಇಸ್ತಾಂಬುಲ್‌ನಿಂದ ಡಾರ್ಡನೆಲ್ಲೆಸ್ ಜಲಸಂಧಿಯಗುಂಟ ಪ್ರಯಾಣಿಸಿ ಹಿಸಾರ್ಲಿಕ್ ಗುಡ್ಡವನ್ನು ತಲುಪಿದಾಗ, ಪ್ರವೇಶದ್ವಾರದಲ್ಲೇ ಬೃಹತ್ ಮರದ ಕುದುರೆಯೊಂದು ಸ್ವಾಗತಿಸುತ್ತದೆ. ಆದರೆ, ನಿಜವಾದ ಟ್ರಾಯ್ ಇರುವುದು ಆ ಮರದ ಕುದುರೆಯಲ್ಲಿ ಅಲ್ಲಿ, ಅದು ಆ ಮಣ್ಣಿನಲ್ಲಿದೆ. ಅಲ್ಲಿನ ಅರೆಬರೆ ಕುಸಿದಿರುವ ರಕ್ಷಣಾ ಗೋಡೆಗಳು, ಪುರಾತನ ರಂಗಮಂದಿರದ (Amphitheatre) ಮೆಟ್ಟಿಲುಗಳು ಮತ್ತು ಬಿರುಕು ಬಿಟ್ಟ ಕಂಬಗಳ ನಡುವೆ ಬೀಸುವ ಗಾಳಿಗೆ ಇಂದಿಗೂ ರಕ್ತದ ವಾಸನೆಯಿದೆ, ಹೆಕ್ಟರ್‌ನ ಹೆಂಡತಿ ‘ಆಂಡ್ರೊಮಾಕಿ’ಯ ಆಕ್ರಂದನದ ದನಿಯಿದೆ. ಕೇವಲ ಒಂದು ಹೆಣ್ಣಿಗಾಗಿ ಅಥವಾ ಅಹಂಕಾರಕ್ಕಾಗಿ ಇಡೀ ಸಾಮ್ರಾಜ್ಯವನ್ನೇ ಸುಟ್ಟುಬೂದಿ ಮಾಡಿದ ಉನ್ಮಾದದ ಇತಿಹಾಸ ಆ ಕಲ್ಲುಬಂಡೆಗಳಲ್ಲಿ ಹೆಪ್ಪುಗಟ್ಟಿದೆ.

ಕಲ್ಲುಗಳಲ್ಲಿ ಜೀವಂತವಾದ ಇತಿಹಾಸ
ನಾವು ಟ್ರಾಯ್ ಅನ್ನು ನೋಡಲು ಏಕೆ ಹೋಗುತ್ತೇವೆ? ಹಾಳಾದ ಗೋಡೆಗಳ ಚಿತ್ರಗಳನ್ನು ತೆಗೆದುಕೊಳ್ಳುವುದಕ್ಕಂತೂ ಖಂಡಿತಾ ಅಲ್ಲ. ಕತ್ತಿ, ಗುರಾಣಿ ಮತ್ತು ರಕ್ತದಿಂದ ಕಟ್ಟಿದ ಸಾಮ್ರಾಜ್ಯಗಳು ಕಾಲನ ಗರ್ಭದಲ್ಲಿ ಮಣ್ಣಾಗಿ ಹೋಗುತ್ತವೆ, ಆದರೆ ಮನುಷ್ಯನ ಭಾವನೆಗಳಿಂದ ಮತ್ತು ಅಕ್ಷರಗಳಿಂದ ಕಟ್ಟಿದ ಕಾವ್ಯ ಮಾತ್ರ ಸಾವಿರಾರು ವರ್ಷಗಳ ಕಾಲ ಅಮರವಾಗಿರುತ್ತದೆ ಎಂಬ ದಾರ್ಶನಿಕ ಸತ್ಯವನ್ನು ಅರಿತುಕೊಳ್ಳಲು ನಾವಲ್ಲಿಗೆ ಹೋಗುತ್ತೇವೆ. ಅಕಿಲಿಸ್ ಎಷ್ಟೇ ಬಲಶಾಲಿಯಾಗಿದ್ದರೂ ಆತ ಇಂದು ಕೇವಲ ಮಣ್ಣು, ಆದರೆ ಆತನನ್ನು ವರ್ಣಿಸಿದ ಹೋಮರ್‌ನ ಅಕ್ಷರಗಳು ಇಂದಿಗೂ ಉಸಿರಾಡುತ್ತಿವೆ.
ಪ್ರವಾಸವೆಂದರೆ ಕೇವಲ ನೋಡುವ ಪ್ರಕ್ರಿಯೆಯಲ್ಲ, ಅದೊಂದು ಆಲಿಸುವ ಕಲೆ. ಟ್ರಾಯ್‌ನ ಅವಶೇಷಗಳ ಬಳಿ ನಿಂತು ಕಣ್ಣು ಮುಚ್ಚಿದರೆ, ದೂರದ ಏಜಿಯನ್ ಸಮುದ್ರದಿಂದ ಬೀಸುವ ಗಾಳಿಯಲ್ಲಿ ಹೋಮರ್‌ನ ಗ್ರೀಕ್ ಪದ್ಯದ ಲಯಬದ್ಧ ಗಾಯನ ಕೇಳಿಸುತ್ತದೆ. ಕಲ್ಪನೆ ಮತ್ತು ವಾಸ್ತವ, ಪುರಾಣ ಮತ್ತು ಇತಿಹಾಸ ಎರಡೂ ಒಂದೇ ಬಿಂದುವಿನಲ್ಲಿ ಲೀನವಾಗುವ ಟ್ರಾಯ್, ಭೂಮಿಯ ಮೇಲಿನ ಪ್ರತಿಯೊಬ್ಬ ಸಾಹಿತ್ಯ ಮತ್ತು ಇತಿಹಾಸ ಪ್ರೇಮಿಯೂ ಮಾಡಲೇಬೇಕಾದ ಜ್ಞಾನಯಾತ್ರೆ. ಕಾಲನ ರಥಚಕ್ರದಡಿ ಸಿಲುಕಿ ಮನುಷ್ಯನ ಅಹಂಕಾರ ಹೇಗೆ ನುಚ್ಚುನೂರಾಗುತ್ತದೆ ಎನ್ನುವುದಕ್ಕೆ ಟ್ರಾಯ್ ಒಂದು ಮೌನ ಸಾಕ್ಷಿ.