ಕಾಲಾಪಾನಿಯ ಲಾಲ್ ಕಹಾನಿ
ಮಹಾವೀರ ಸಿಂಗ್ ಅವರು ಸೆಲ್ಯೂಲರ್ ಜೈಲಿನ ಅತ್ಯಾಚಾರಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿದ್ದರು ಅವರ ಈ ಮುಷ್ಕರವನ್ನು ಮುರಿಯುವ ಸಲವಾಗಿ ಅವರನ್ನು ಹಿಡಿದು ಬಲವಂತವಾಗಿ ಮೂಗಿನೊಳಗೆ ಪೈಪು ತೂರಿಸಿ ಹಾಲು ಸುರಿದು force feeding ಮಾಡಿಸಲಾಯಿತು. ಆಗ ಹಾಲು ಅನ್ನನಾಳದ ಬದಲಿಗೆ ಶ್ವಾಸನಾಳಕ್ಕೆ ಸೇರಿ ಅವರು ಅಲ್ಲೇ ಮಡಿದರು. ನಂತರ ಅವರ ದೇಹಕ್ಕೆ ಕಲ್ಲು ಕಟ್ಟಿ ಸಮುದ್ರಕ್ಕೆ ಎಸೆಯಲಾಯಿತು. ಇಂಥ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಂಸಿಸಿದ ಈ ಜೈಲ್ ಇಂದು ಪ್ರವಾಸಿ ತಾಣ. ಭಾರತೀಯರಿಗೆ ಮಾತ್ರ ತಮ್ಮ ದೇಶದ ಸ್ವಾತಂತ್ರ್ಯಗಾತೆಯನ್ನು ಸಾರುವ ಕಣ್ಣಾಲಿಗಳನ್ನು ಮೂಡಿಸಿಯೂ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸುವ ತಾಣ.
- ಗಾಯತ್ರಿ ರಾಜ್
ಸೌಂದರ್ಯ ಮತ್ತು ಅಷ್ಟೇ ವಿಷಾದ ತುಂಬಿದ ಪೋರ್ಟ್ ಬ್ಲೇರ್‌ಗೆ ನಾನು ಭೇಟಿ ಕೊಟ್ಟಾಗ, ಹಸಿರು ಹುಲ್ಲಿನ ಮಧ್ಯೆ ಬೂದು-ಕೆಂಪು ಗೋಡೆಗಳ ಜೈಲು ನಿಜಕ್ಕೂ ಸುಂದರವಾಗಿ ಕಾಣುತ್ತಿತ್ತು. ಆರಂಭದಲ್ಲಿ ನಾವೂ ಇತರೆ ಪ್ರವಾಸಿ ತಾಣಗಳನ್ನು ನೋಡುವಂತೆಯೇ ಉತ್ಸುಕರಾಗಿದ್ದೆವು. ಆದರೆ ಆ ಸೌಂದರ್ಯದೊಳಗಿನ ಅಪ್ರಕಟಿತ ದುಃಖದ ಕಥೆಗಳು ಒಂದೊಂದಾಗಿ ಪ್ರತಿ ಕಲ್ಲು, ಬಾಗಿಲುಗಳನ್ನು ತೆರೆಯುತ್ತಾ ಹೋದಂತೆ ಮನಸಿನ ಜೊತೆಜೊತೆಯಲಿ ಹೆಜ್ಜೆಗಳೂ ಭಾರವಾಗತೊಡಗಿದವು. ಹೃದಯದಲ್ಲಿ ಕಲ್ಲೊಂದು ಹೊಕ್ಕಂಥ ನೋವು ಒಂದೆಡೆಯಾದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರ ಬಗ್ಗೆ ಅಪಾರ ಗೌರವ ಹುಟ್ಟಿದ್ದು ಮತ್ತೊಂದೆಡೆ.
ಏನಿದು ಕಾಲಾಪಾನಿ...
ಈ ಸೆಲ್ಲ್ಯೂಲರ್ ಜೈಲಿನ ಮತ್ತೊಂದು ಹೆಸರು ಕಾಲಪಾನಿ. 'ಕಾಲಾ' ಅಂದ್ರೆ ಹಿಂದಿಯಲ್ಲಿ ಕಪ್ಪು 'ಪಾನಿ' ಅಂದ್ರೆ ನೀರು. ಅಲ್ಲಿನ ಅಂಡಮಾನ್ ಸಮುದ್ರದ ನೀರು ಕಪ್ಪಾಗಿರುವುದರಿಂದ ಅದರ ದಡದಲ್ಲಿರುವ ಈ ಜೈಲಿಗೆ ಮತ್ತು ಇಲ್ಲಿ ಸಿಗುವ ಶಿಕ್ಷೆಗೆ ಕಾಲಾಪಾನಿ ಎಂದು ಹೆಸರು ಬಂದಿದೆ. ಇನ್ನೊಂದು ಅರ್ಥದಲ್ಲಿ ‘ಕಾಲ’ ಎಂದರೆ ಸಮಯ ಅಥವಾ ಮರಣ, ‘ಪಾನಿ’ ಎಂದರೆ ನೀರು. ಒಮ್ಮೆ ಈ ಸಮುದ್ರ ದಾಟಿ ಇಲ್ಲಿಗೆ ಬಂದ ಕೈದಿಗಳು ಹಿಂದಿರುಗಿದ ಉದಾಹರಣೆಗಳು ಇಲ್ಲ ಅಥವಾ ಕಡಿಮೆಯೇ ಎನ್ನುವ ಅರ್ಥದಲ್ಲಿ ‘ಕಾಲಪಾನಿ’ ಎಂಬ ಹೆಸರು ಬಂದಿರಬಹುದು ಎನ್ನುವ ತರ್ಕಗಳೂ ಇವೆ.

ಅಂಡಮಾನ್ ದ್ವೀಪಗಳು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ ಭಾರತೀಯರನ್ನು ಇನ್ನಿಲ್ಲದಂತೆ ಅಳಿಸಿಹಾಕಲು ಮಾಡಿಕೊಂಡ ಒಂದು ರೀತಿಯ ವಧಾ ಸ್ಥಳ ಎಂದರೆ ತಪ್ಪಾಗದು. ತಿರುಗಿ ಬಿದ್ದವರನ್ನು ಭಾರತದಲ್ಲಿಟ್ಟರೆ ಅವರ ಅನುಯಾಯಿಗಳು ರೊಚ್ಚಿಗೇಳಬಹುದು ಎಂದು ಇಲ್ಲಿ ತಂದು ಕೂಡಿ ಹಾಕುತ್ತಿದ್ದರು. ಆರಂಭದಲ್ಲಿ ರಾಸ್ ಐಲ್ಯಾಂಡ್ ಜೈಲಿನಲ್ಲಿಡುತ್ತಿದ್ದರು. ಆದರೆ ಅದಕ್ಕಿಂತ ಕಠಿಣ ಜೈಲೊಂದು ಬೇಕೆಂದು ಪೋರ್ಟ್ ಬ್ಲೇರ್ ಜೈಲು ನಿರ್ಮಾಣವಾಯಿತು.
ಚಕ್ರದಂತೆ ಕಟ್ಟಿದ ಜೈಲು
ಕೆಂಪು ಇಟ್ಟಿಗೆಗಳ ದಪ್ಪ ಗೋಡೆಯ ಈ ಸೆಲ್ಲ್ಯೂಲರ್ ಜೈಲು ಚಕ್ರದ ಆಕಾರದಲ್ಲಿದೆ. ಮಧ್ಯದಲ್ಲಿ ದೊಡ್ಡ ಗೋಪುರ, ಅದರಿಂದ ಏಳು ರೆಕ್ಕೆಗಳು spokesನಂತೆ ಹರಡಿರುವ ವಿನ್ಯಾಸವಿದೆ. ಅಧಿಕಾರಿಗಳು ಒಂದೇ ಮಧ್ಯ ಗೋಪುರದಿಂದ ಎಲ್ಲಾ ರೆಕ್ಕೆಗಳನ್ನು ನೋಡಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಪ್ರತಿ ರೆಕ್ಕೆಯಲ್ಲೂ ಮೂರು ಮಹಡಿಗಳಿವೆ. ಈ ಜೈಲಿಗೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು ಎಂದು ಹೇಳಲಾಗುತ್ತದೆ. ಕೈದಿಗಳ ಊಟದ ಕಟ್ಟಡ (ಮೆಸ್), ಗಲ್ಲುಗಂಬ, ವರ್ಕ್‌ಶೆಡ್ ಇವೆಲ್ಲಕ್ಕೂ ಪ್ರತ್ಯೇಕ ಕಟ್ಟಡ ಇದ್ದು, ಏಳು ರೆಕ್ಕೆಗಳಲ್ಲಿ ಇಂದು ಮೂರು ಮಾತ್ರ ಉಳಿದಿವೆ.
ಸೆಲ್ಲ್ಯೂಲರ್ ಜೈಲು ಎನ್ನಲು ಕಾರಣ
ಈ ಜೈಲು ‘ಸೆಲ್ಲ್ಯೂಲರ್’ ಆಗಿರುವುದೇ ಇದಕ್ಕೆ ಮುಖ್ಯ ಕಾರಣ. ಒಂದೇ ಬದಿಯಲ್ಲಿ ಒಟ್ಟು 693 ಬಂದಿಖಾನೆಗಳಿದ್ದು, ಪ್ರತಿ ಕೈದಿ ಇಲ್ಲಿ ಸಂಪೂರ್ಣ ಏಕಾಂಗಿ. ಕೈದಿಗಳು ಪರಸ್ಪರ ಮಾತನಾಡಲೂ ಇಲ್ಲಿ ಅವಕಾಶಗಳಿಲ್ಲ. ಸೆಲ್‌ಗಳ ಎದರು ಸೆಲ್‌ಗಳಿರದಂತೆ ನಿರ್ಮಿಸಲಾಗಿದೆ.
ಸೆಲ್‌ಗಳ ಗಾತ್ರ ಸುಮಾರು 15 x 8 ಅಡಿಗಳಷ್ಟಿದ್ದು, ಪ್ರತೀ ಸೆಲ್ಲಿಗೆ ಒಂದು ಬಾಗಿಲು, ಕೈಗೆಟುಕದಂತೆ ಗೋಡೆಯ ಮೇಲ್ತುದಿಗೆ ಒಂದು ಸಣ್ಣ ಗಾಳಿ ಕಿಂಡಿ, ಬಾಗಿಲಿನ ಹೊರಗೂ ಮತ್ತೊಂದು ಬಾರ್ಡ್ ಗೇಟ್. ಪ್ರತಿ ಸೆಲ್ಗೂ ಮಧ್ಯದ ಗೋಪುರದಿಂದ ಸಣ್ಣ ಸೇತುವೆಯ ಮೂಲಕ ಸಂಪರ್ಕ ಹೊಂದಿತ್ತು. ಇಂದು ಪ್ರವಾಸಿಗರು ಗೋಪುರದ ಮೇಲ್ಛಾವಣಿ ಮೇಲೇರಿ ಜೈಲು ಮತ್ತು ಸುತ್ತಲಿನ ದ್ವೀಪಗಳನ್ನು ನೋಡಬಹುದು.
ಅಕ್ಕಪಕ್ಕದ ಸೆಲ್‌ಗಳ ಕೈದಿಗಳ ಮಧ್ಯೆ ಸಂಪರ್ಕ ತಪ್ಪಿಸಲು ತಿಂಗಳಿಗೊಮ್ಮೆ ಕೈದಿಗಳನ್ನು ರೆಕ್ಕೆಗಳಿಂದ ರೆಕ್ಕೆಗಳಿಗೆ ಬದಲಿಸಲಾಗುತ್ತಿತ್ತು. ಇದು ಕೈದಿಯ ಮನೋಬಲ ಕುಗ್ಗಿಸಲು ಇತರ ಕೈದಿಗಳಿಂದ ಪ್ರತ್ಯೇಕಿಸಲು ಮಾಡಿರುವ ವಿನ್ಯಾಸವೇ ಈ ಸೆಲ್ಲುಲರ್ ಜೈಲ್.
ಇಂಥ ಕೋಣೆಗಳಲ್ಲಿ ಅನೇಕರು ತಮ್ಮ ಇಡೀ ಬದುಕನ್ನೇ ಅರ್ಪಿಸಿಬಿಟ್ಟಿದ್ದಾರೆ.
ಸೆಲ್ಲ್ಯುಲರ್ ಜೈಲಿನ ಒಳಗೆ ಪ್ರವೇಶಿಸುವಾಗ, ಗೈಡ್ ನಮ್ಮನ್ನು ನಿಧಾನವಾಗಿ ಒಂದು ನಿರ್ದಿಷ್ಟ ಭಾಗದ ಕಡೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಅದು ಆಗಿನ ವರ್ಕ್ ಶೆಡ್. ಅಲ್ಲಿ ಇಂದಿಗೂ ಒಂದು ‘ಕೈಎಣ್ಣೆ ಗಾಣ’ದ ಮಾದರಿಯಿದೆ. ಕಠಿಣವಾದ Oil Mill Punishment ಗೆ ಬಳಸಿದ್ದ ಉಪಕರಣದ ಪ್ರತಿರೂಪವಿದು. ದೊಡ್ಡ ಕಲ್ಲಿನ ಒರಳು, ಅದನ್ನು ತಿರುಗಿಸಲು ಮರದ ಕಂಬವಿದ್ದು, ಅದನ್ನು ಕೈಯಿಂದ ತಿರುಗಿಸಿ ಕೊಬ್ಬರಿ, ಸಾಸಿವೆ ಎಣ್ಣೆಯನ್ನು ತೆಗೆಸಲಾಗುತ್ತಿತ್ತು. ಕೈ ಬೊಬ್ಬೆ ಬಂದು ರಕ್ತ ಸುರಿದರೂ ನಿಲ್ಲಿಸುವ ಹಾಗಿರಲಿಲ್ಲ. ಇದನ್ನು ತಿಳಿದ ಕ್ಷಣವೇ ಸಾವರ್ಕರ್ ಹಾಗೂ ಅನೇಕರು ಅನುಭವಿಸಿರಬಹುದಾದ ದಿನಗಳು ಕಣ್ಣೆದುರಿಗೆ ಬಂದವು.

ವೀರ ಸವಾರ್ಕರ್ ಮತ್ತು ಇತರ ಕೈದಿಗಳ ವೇದನೆ
ಇಲ್ಲಿನ ಕೈದಿಗಳ ದಿನವಿಡೀ solitary confinement. ಬೆಳಗ್ಗೆ ಕೆಲಸ ರೂಪದ ಶಿಕ್ಷೆಗೆ ಮಾತ್ರ ಸರಪಳಿಗಳೊಂದಿಗೆ ಹೊರಗೆ ಬಂದರೆ, ಸಂಜೆ 6ಕ್ಕೆ ಕತ್ತಲ ಕೋಣೆಯೊಳಗೆ ಮತ್ತೆ ಬಂದ್.
ಹಾಸಿಗೆ, ಧರಿಸಲು ಸರಿಯಾದ ಸಮವಸ್ತ್ರ, ಶೌಚಾಲಯವೂ ಇರಲಿಲ್ಲ. ಎಲ್ಲದ್ದಕ್ಕೂ ಒಂದು ಮಣ್ಣಿನ ಮಡಿಕೆ ಮಾತ್ರ.ಇದನ್ನೇ ವೀರ ಸವಾರ್ಕರ್ ಕೂಡ ಅನುಭವಿಸಿದ್ದಾರೆ. ಅವರ ಸಹೋದರ ಅದೇ ಜೈಲಿನಲ್ಲಿ ಇದ್ದರೂ ಒಂದು ವರ್ಷದ ನಂತರವೇ ಸಾವರ್ಕರ್ರಿಗೂ ತಿಳಿದಿತ್ತು ಎಂದರೆ ಅಲ್ಲಿದ್ದ ಬಿಗಿ ಬಂದೋಬಸ್ತಿನ ಕುರಿತು ನೀವೇ ಆಲೋಚಿಸಬಹುದು. ಒಮ್ಮೆ ಓಡಿಹೋಗಲು ಯತ್ನಿಸಿದ್ದಕ್ಕೆ ಅವರನ್ನು ಇನ್ನೂ ಗಟ್ಟಿಯಾದ ಸೆಲ್‌ನಲ್ಲಿ ಇಡಲಾಗಿತ್ತು. ಇಂದು ಆ ಸೆಲ್‌ನಲ್ಲಿ ಅವರ ಹೆಸರು ಮತ್ತು ಚಿತ್ರವನ್ನು ನೆನಪಿಗಾಗಿ ಇಡಲಾಗಿದೆ.
ಅಲ್ಲಿನ ಮ್ಯೂಸಿಯಂನಲ್ಲಿರುವ ವರದಿಗಳು, ಫೊಟೋಗಳು, ಅವರು ಅನುಭವಿಸಿರಬಹುದಾದ ಮಾನಸಿಕ ಮತ್ತು ದೈಹಿಕ ಶಿಕ್ಷೆಗಳನ್ನು ವಿವರಿಸುತ್ತವೆ.
ಆಯಾ ಮಹಡಿಯಲ್ಲಿ ಯಾರ್ಯಾರು ಬಂಧಿಯಾಗಿದ್ದರು ಎನ್ನುವುದರ ನಾಮಫಲಕಗಳಿವೆ. ಸಾವಾರ್ಕರ್, ಬಟುಕೇಶ್ವರ್ ದತ್ತಾ, ಯೋಗೇಂದ್ರ ಶುಕ್ಲಾ, ಸ್ವರಾಜ್ ಪತ್ರಿಕೆಯ ಆರು ಎಡಿಟರ್‌ಗಳಿದ್ದ ಸೆಲ್‌ಗಳನ್ನೂ ನೋಡಿದೆವು. ಅವರ ತಪ್ಪಾದರೂ ಏನಿತ್ತೆಂದೂ ನಾನು ಕಳವಳ ಪಟ್ಟಾಗ ʻಅದು ಬಿಡಿ ಮೇಡಂ, ಅಲ್ಲಿ ನೋಡಿ ಅಂಗಳದಲ್ಲಿ ಕಾಣುತ್ತಿರುವ ಆ ಪ್ರತಿಮೆ ಯಾರೆಂದು ಗೊತ್ತಾʼ ಎನ್ನುತ್ತಾ ನಮ್ಮ ಗೈಡ್ ಮಹಾವೀರ ಸಿಂಗ್ ಅವರ ಕಥೆಯನ್ನು ಹೇಳತೊಡಗಿದರು. ಅವರು ಜೈಲಿನ ಅತ್ಯಾಚಾರಗಳ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ, ಅವರ ಈ ಮುಷ್ಕರವನ್ನು ಮುರಿಯುವ ಸಲವಾಗಿ ಅವರನ್ನು ಹಿಡಿದು ಬಲವಂತವಾಗಿ ಮೂಗಿನೊಳಗೆ ಪೈಪು ತೂರಿಸಿ ಹಾಲು ಸುರಿದು force feeding ಮಾಡಿದಾಗ ಹಾಲು ಅನ್ನನಾಳದ ಬದಲಿಗೆ ಶ್ವಾಸನಾಳಕ್ಕೆ ಸೇರಿ ಅವರು ಅಲ್ಲೇ ಮಡಿದರು, ನಂತರ ಅವರ ದೇಹಕ್ಕೆ ಕಲ್ಲು ಕಟ್ಟಿ ಸಮುದ್ರಕ್ಕೆ ಎಸೆಯಲಾಯಿತು ಎಂದು ನಮ್ಮ ಗೈಡ್ ನಮಗೆ ವಿವರಿಸಿದರು.
ನಾವು ಅಯ್ಯೋ ಎನ್ನುವಾಗಲೇ ʻಅಷ್ಟೇ ಅಲ್ಲ, ಇಲ್ಲಿ ನೋಡಿ ಮೇಡಂ ಈ ಆಲದಮರ ನೀರಾ ಆರ್ಯರ ನೆನೆಪಿನಲ್ಲಿ ನೆಡಲಾಗಿದ್ದುʼ. ಎಂದು ಒಂದು ಆಲದ ಮರವನ್ನು ತೋರಿಸಿದ. ಆ ಮರ ನಿಜಕ್ಕೂ ಅವರ ನೆನಪಲ್ಲಿ ನೆಡಲಾಗಿದ್ದೋ, ಇಲ್ಲವೋ, ಆದರೆ ಆ ಮಾತಿಂದ ನೀರಾ ಆರ್ಯ ಕಣ್ಮುಂದೆ ಬಂದು ಹೋದದ್ದಂತೂ ಸತ್ಯ.
ʻನೀರಾ ಆರ್ಯಾʼ ಇತಿಹಾಸ ದಾಖಲಿಸಲು ನಡುಗಿದ ಒಂದು ಶೌರ್ಯದ ಪುಟ. ಸ್ವಾತಂತ್ರ್ಯ ಹೋರಾಟದ ಮಹಿಳಾ ಯೋಧರ ಬಗ್ಗೆ ಮಾತನಾಡುವಾಗ ʻನೀರಾ ಆರ್ಯಾʼ ಹೆಸರನ್ನು ನೆನೆಯಲೇಬೇಕು. ಅವರು ಆಜಾದ್ ಹಿಂದ್ ಫೌಜ್ (INA) ಸದಸ್ಯರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದೇಶದ ಮೇರೆಗೆ ಬ್ರಿಟಿಷರ ಚಲನವಲನಗಳನ್ನು ಸಂಗ್ರಹಿಸಿ, ಪತ್ರಗಳ ಮೂಲಕ ಮಾಹಿತಿ ತಿಳಿಸುತ್ತಿದ್ದರು. ಅವರು ಬಂಧಿತರಾದದ್ದು ಬೋಸ್‌ರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದ ತನ್ನ ಪತಿಯನ್ನೇ ಕೊಂದಿದ್ದಕ್ಕೆ.
ಆದರೆ ಬ್ರಿಟಿಷರ ಗುರಿ ಬೋಸ್‌ರ ಬಗ್ಗೆ ಮತ್ತು ಐಎನ್‌ಎ ಕುರಿತು ನೀರಾರಿಂದ ಮಾಹಿತಿ ಪಡೆಯುವುದಾಗಿತ್ತು. ಆಕೆಗೆ ನಾವು ಕಂಡು ಕೇಳಿರಲಾರದ ಅಮಾನವೀಯ ಹಿಂಸೆ ನೀಡಲಾಗಿದೆ. ಇತಿಹಾಸ ಮೂಲಗಳ ಪ್ರಕಾರ ಎಲ್ಲರ ಎದುರಿನಲ್ಲೇ ಸ್ತನಗಳನ್ನು ಕತ್ತರಿಸಿ ಕ್ರೂರವಾಗಿ ಹಿಂಸಿಸಲಾಗಿದೆ. ಇಷ್ಟಾದರೂ ಯಾವ ಗುಟ್ಟನ್ನೂ ಅವರು ಬಿಟ್ಟುಕೊಟ್ಟಿರಲಿಲ್ಲ. ಸೆಲ್ಲ್ಯುಲರ್ ಜೈಲಿನ ಗೋಡೆಗಳ ಮುಂದೆ ನಿಂತಾಗ, ನೀರಾ ಆರ್ಯಾ ಮತ್ತು ಅಂಥ ಅನೇಕರ ಚೀತ್ಕಾರ ನಿಮಗೆ ಕೇಳದೆ ಇರುವುದಿಲ್ಲ.
ಮಧ್ಯದ ಆಲದ ಮರ ಸಂಜೆ
Light & Sound show ನಲ್ಲಿ ಹೇಳುವ ಕಥೆ ಇದು. ನೋಡುಗರಲ್ಲಿ ನೋವು ಮತ್ತು ಗೌರವ ಎರಡನ್ನೂ ತುಂಬಿಸುತ್ತದೆ. ಸಂಜೆಯ ಈ ಶೋ ಇತಿಹಾಸದ ಕೌರ್ಯವನ್ನು ಕಣ್ಣೆದುರಿನಲ್ಲಿ ಮತ್ತೊಮ್ಮೆ ತಂದು ನಿಲ್ಲಿಸುತ್ತದೆ. ನಮ್ಮ ಮಣ್ಣಿಗಾಗಿ ತಮ್ಮ ಬದುಕನ್ನೇ ಮಣ್ಣಾಗಿಸಿಕೊಂಡವರ ಧ್ವನಿಗಳು ಹೃದಯವನ್ನು ನಡುಗಿಸುತ್ತವೆ. ʻವಂದೇ ಮಾತರಂʼ ಎಂಬ ಧ್ವನಿ ನರನಾಡಿಗಳಲ್ಲೂ ಮಿಂಚು ಹರಿಸುತ್ತದೆ. ಅವರ/ನಮ್ಮ ಕಥೆ ಹೇಳುವಾಗ ಜೈಲಿನ ಗಾಳಿ ಕೂಡಾ ನಿಂತು ಕೇಳುತ್ತಿದೆಯೇನೋ ಅನ್ನಿಸುವಷ್ಟು ನಿಶ್ಯಬ್ಧವಾಗುತ್ತದೆ. ಇತಿಹಾಸವೇ ಕಣ್ಮುಂದೆ ಜೀವ ತಳಿದು ಶೋ ಮುಗಿಯುವ ಹೊತ್ತಿಗೆ ನನ್ನಂಥವರ ಕಣ್ಣಲ್ಲಿ ಕಣ್ಣಾಲಿಗಳು ಜಿನುಗಿರುತ್ತವೆ. ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಪ್ರವಾಸಿಗನನ್ನು ಇತಿಹಾಸದ ಸಾಕ್ಷಿಯಾಗಿ ಪರಿವರ್ತಿಸುತ್ತದೆ. ಆ ಕ್ಷಣದಲ್ಲಿ ನಾನು ಅನುಭವಿಸಿದ ಏಕೈಕ ಸಕಾರಾತ್ಮಕ ಭಾವನೆಯೆಂದರೆ ಗೌರವ, ಗೌರವ, ಮತ್ತು ಗೌರವ.
ಸೆಲ್ಲ್ಯೂಲರ್ ಜೈಲಿನಲ್ಲಿ ಹೆಜ್ಜೆ ಹಾಕುವಾಗಲೆಲ್ಲ ಅಸಹನೆ, ಬೇಸರ, ಕೋಪ ಎಲ್ಲವೂ ಸೇರಿ ಗಂಟಲುಬ್ಬಿ ಬರುತ್ತಿದ್ದದ್ದು ನಿಜ ಆದರೂ ಅವಕಾಶ ಸಿಕ್ಕರೆ ಮತ್ತೊಮ್ಮೆ ಹೋಗುತ್ತೇನೆ. ಈ ಧೀರರಿಗಾಗಿ ತಲೆತಗ್ಗಿಸದೆ, ನನ್ನ ತಾಯಿನಾಡಿನವರು ಎಂದು ಎದೆಯುಬ್ಬಿಸಿ ನಿಲ್ಲುವ ಅವಕಾಶವನ್ನು ನಾನು ಮತ್ತೆ ಮತ್ತೆ ನೆನೆಯುತ್ತೇನೆ.

ಸೆಲ್ಲ್ಯುಲರ್ ಜೈಲು, ಭಾರತ ವಾಸ್ತವವಾಗಿ ಯಾವ ಬೆಲೆಯಲ್ಲಿ ಮುಕ್ತವಾಯಿತು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಮ್ಮನ್ನು ಎಚ್ಚರಿಸುತ್ತದೆ. ʻನಾವಿಂದು ಕಾಣುತ್ತಿರುವ ಸ್ವಾತಂತ್ರ್ಯ, ಶಾಂತಿ, ಯಾರೆಲ್ಲರ ನೋವಿನ ಬೆಲೆ ತೆತ್ತು ನಿರ್ಮಾಣವಾಗಿದೆ ಎಂಬ ಸತ್ಯದ ಅರಿವು ನಮಗಲ್ಲಿ ಆಗುತ್ತದೆ. ಸ್ವಾತಂತ್ರ್ಯ ನಮಗೆ ಕೇವಲ ಅಹಿಂಸಾ ಮಾರ್ಗದಿಂದ ದೊರೆತದ್ದಲ್ಲ. ಅದರ ಹಿಂದೆ ರಕ್ತಸಿಕ್ತ ತ್ಯಾಗಗಳಿವೆ ಎಂದು ನೆನಪಿಸುತ್ತದೆ. ಆಗ ಮನಸು ತುಂಬಿ ಬಂದು ಕೈಮುಗಿದು ತಲೆಬಾಗದೇ ಇರಲಾಗುವುದಿಲ್ಲ.
ನಿಮ್ಮ ಮಕ್ಕಳಿಗೆ ಪ್ರಖ್ಯಾತ ಬೀಚುಗಳು, ಬೆಟ್ಟಗಳು, ಕೋಟೆಕೊತ್ತಲಗಳು ತೋರಿಸಿರುತ್ತೀರಿ. ಒಮ್ಮೆಯಾದರೂ ಈ ಪೋರ್ಟ್ ಬ್ಲೇರಿನ ಈ ಜೈಲ್ ಅನ್ನು ತೋರಿಸಿ. ನಮಗೆ ಸ್ವ್ಯಾತಂತ್ರ್ಯ ಒಂದು ಮಧ್ಯರಾತ್ರಿಯಲ್ಲಿ ಬಂದುಬಿಡಲಿಲ್ಲ ಎಂಬ ಸತ್ಯ ತೋರಿಸಿ, ತಿಳಿಸಿ ಹೇಳಿ.
ಸೆಲ್ಲ್ಯೂಲರ್ ಜೈಲಿನ ಸಮಯ:
ಬೆಳಿಗ್ಗೆ 9:00 - ಸಂಜೆ 5:00
ಮಧ್ಯಾಹ್ನ 12:30 - 1:30 ಲಂಚ್ ಬ್ರೇಕ್
ಟಿಕೆಟ್‌ಗಳನ್ನು ಸ್ಥಳದಲ್ಲೇ ತೆಗೆದುಕೊಳ್ಳಬೇಕು.
ತಪ್ಪದೆ ನೋಡಬೇಕಾದ್ದು:
ಸಂಜೆಯ ಲೈಟ್ ಅಂಡ್ ಸೌಂಡ್ ಶೋ.
ಶೋ ಸಮಯ: ಸಂಜೆ 6:00 ಮತ್ತು ಸಂಜೆ 7:15
ಟಿಕೆಟ್‌ಗಳು ಅದೇ ದಿನ ಸಂಜೆ ಮಾತ್ರ ಲಭ್ಯ.