• ಜ್ಯೋತಿ ಪ್ರಸಾದ್

ವರ್ಜೀನಿಯಾದ ಶೆನೆನ್ಡೋವಾ ಕಣಿವೆಯಲ್ಲಿನ ʻಲೂರೆ ಕೇವರ್ನ್ಸ್ʼ ಪ್ರವಾಸಪ್ರಿಯರ ಒಂದು ಅದ್ಭುತ ತಾಣವಾಗಿದ್ದು, ಭೂಗರ್ಭದಲ್ಲಿ ಅಡಗಿರುವ ಒಂದು ವಿಸ್ಮಯಕಾರಿ ಪ್ರಪಂಚವನ್ನು ತೆರೆದಿಡುತ್ತದೆ. ಗುಹೆಯ ಒಳಗಿನ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್‌ಗಳು ಮತ್ತು ದೈತ್ಯ ಕಂಬಗಳ ರಚನೆಗಳು ಅದ್ಭುತ ಕಲಾಕೃತಿಗಳಂತಿವೆ. ನನಗೆ ಇದು ಪುರಾತನ ಭೂವೈಜ್ಞಾನಿಕ ಇತಿಹಾಸವನ್ನು ಅಡಗಿಸಿಕೊಂಡಿರುವ ಕಲಾ ಪ್ರಪಂಚ ಎಂದೆನಿಸಿತ್ತು.

ಪೂರ್ವ ಅಮೆರಿಕದ ಅತಿ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿರುವ ಈ ಗುಹೆಗಳಲ್ಲಿ ಶತ ಶತಮಾನಗಳಿಂದ ತಯಾರಾಗಿರುವ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್ ರಚನೆಗಳನ್ನು ನೋಡಿದರೆ ನಾವು ಮಂತ್ರಮುಗ್ಧರಾಗುವುದು ಖಂಡಿತ.

ಸುಣ್ಣದಕಲ್ಲು ಮತ್ತು ಆಮ್ಲ ಮಿಶ್ರಿತ ನೀರಿನ ರಾಸಾಯನಿಕ ಕ್ರಿಯೆಗಳಿಂದ ಇವು ನಿರ್ಮಾಣವಾಗುತ್ತವೆ.

ಗುಹೆಯ ಛಾವಣಿಯಿಂದ ಕೆಳಮುಖವಾಗಿ ನೇತಾಡುವ ರಚನೆಗಳು ಸ್ಟಾಲಕ್ಟೈಟ್‌ಗಳಾದರೆ, ನೆಲದಿಂದ ಮೇಲ್ಮುಖವಾಗಿ ಬೆಳೆಯುವ ರಚನೆಗಳು ಸ್ಟಾಲಗ್ಮೈಟ್‌ಗಳು. ಇವೆರಡೂ ಸಂಧಿಸಿ ಒಟ್ಟಿಗೆ ಬೆಳೆದು ರೂಪುಗೊಂಡಿರುವ ರಚನೆಗಳು ಕಂಬಗಳು. ಈ ಆಕೃತಿಗಳು ಒಂದು ಇಂಚು ಬೆಳೆಯಲು ಸುಮಾರು 120 ವರ್ಷಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಅಕಸ್ಮಿಕವಾಗಿ ಕೈ ತಾಕಿದರೂ ಅವುಗಳ ಬೆಳವಣಿಗೆ ಶಾಶ್ವತವಾಗಿ ನಿಂತುಹೋಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಇವುಗಳನ್ನು ಮುಟ್ಟುವಂತಿಲ್ಲ. ಅವುಗಳಿಗೆ ಹಾನಿಯಾಗದಂತೆ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ.

luray cave 1

ಗುಹೆಯ ಒಳಗೆ ಕಾಲಿಟ್ಟ ಕೂಡಲೇ ಭೂಮಿಯ ಆಳದಲ್ಲಿರುವ, ವಿಶಾಲವಾದ ನೈಸರ್ಗಿಕ ಸಭಾಂಗಣಗಳು ಪ್ರವಾಸಿಗೆ ಅಚ್ಚರಿ ಮೂಡಿಸುತ್ತವೆ. ಪ್ರಕಾಶಮಾನವಾದ, ಸುಸಜ್ಜಿತ ಹಾದಿಯಲ್ಲಿ ನಡೆದಾಡುತ್ತಾ ಗುಹೆಯ ಒಳಗೆ ಕಳೆಯುವ ಒಂದೂವರೆ ಗಂಟೆಯ ಸಮಯ ಭೂಮಿಯ ಮೇಲಿನ ಪ್ರಪಂಚವನ್ನು ಮರೆಸುವಷ್ಟು ಸುಂದರವಾಗಿರುತ್ತದೆ. ಸುಮಾರು ನಾಲ್ಕುನೂರು ಮಿಲಿಯನ್ ವರ್ಷಗಳಷ್ಟು ಪುರಾತನ ಈ ಗುಹೆಯೊಳಗಿನ ʻಜೈಂಟ್ ಹಾಲ್ʼನಲ್ಲಿನ 47ಅಡಿ ಎತ್ತರದ ಡಬಲ್ ಕಾಲಂಗಳು, 40 ಅಡಿ ಎತ್ತರ ಮತ್ತು 120 ಅಡಿ ಸುತ್ತಳತೆಯ ʻಜೈಂಟ್ ರೆಡ್ ವುಡ್ʼ ಕಂಬ ಹಾಗೂ ಗೋಲಾಕಾರದ ಹಲವಾರು ಕಂಬಗಳು, ʻಟೋಟೆಮ್ ಪೋಲ್ಸ್‌ʼಗಳು ಇಲ್ಲಿನ ಮುಖ್ಯ ಆಕರ್ಷಣೆಗಳು.

ಕೆಲವು ಆಕೃತಿಗಳ ಮೇಲೆ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಹಾಗೂ ಇತರ ಖನಿಜಗಳ ರಾಸಾಯನಿಕ ಕ್ರಿಯೆಗಳ ಕಾರಣದಿಂದ ಕೆಂಪು, ಹಳದಿ, ಹಸಿರು ಮತ್ತು ಕಪ್ಪು ಬಣ್ಣಗಳ ಪಟ್ಟೆಗಳಿದ್ದು ದೃಶ್ಯ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ.

ಇವು ನನ್ನ ಮನಸೆಳೆದವುಗಳು

ಕಿಟಕಿಗಳ ಕರ್ಟನ್‌ಗಳಂತೆ ಗೋಡೆಯಿಂದ ನೇತಾಡುವ ಸುಣ್ಣದ ರಚನೆಗಳಾದ ʻಡ್ರೇಪರೀಸ್ʼ ಹಾಗೂ ಹತ್ತಿಯ ಬಟ್ಟೆಯಂತೆ ಗೋಡೆಯ ಮೇಲಿಂದ ಇಳಿಯುತ್ತಿರುವ ನಯವಾದ ಬಿಳಿಯ ʻಟಿಟಾನಿಯಾಸ್ ವೇಲ್ʼ. ಯಾವುದೇ ಖನಿಜ ಕಲ್ಮಶಗಳು ಇಲ್ಲದೇ ಇರುವುದರಿಂದ ಇವು ಬಹುತೇಕ ಪಾರದರ್ಶಕವಾಗಿವೆ. ಹಾಗೇ ʻಟಿಟಾನಿಯʼ ಎಂಬುದು ವಿಲಿಯಂ ಷೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ʻಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್‌ʼನಲ್ಲಿನ ಏಂಜಲ್ ರಾಣಿಯ ಹೆಸರು. ಹೀಗೇ ನಮ್ಮ ಕಲ್ಪನೆಗೂ ಮೀರಿದ ಇನ್ನೂ ಹಲವಾರು ವಿಭಿನ್ನ ರಚನೆಗಳು ಇಲ್ಲಿವೆ.

ಗುಹೆಯೊಳಗಿನ ಮತ್ತೊಂದು ಅದ್ಭುತ ಆಕರ್ಷಣೆ ʻಡ್ರೀಮ್ ಲೇಕ್ʼ. ಇದು ಕೇವಲ 18 ರಿಂದ 20 ಇಂಚುಗಳಷ್ಟು ಆಳವಿದ್ದರೂ, ಅದರ ಸ್ಪಟಿಕ-ಸ್ವಚ್ಛವಾದ ನೀರು, ಸ್ಟ್ಯಾಲಾಕ್ಟೈಟ್‌ಗಳನ್ನು ಪ್ರತಿಬಿಂಬಿಸಿ ಒಂದು ರೀತಿಯ ʻದೃಷ್ಟಿ ಭ್ರಮೆʼಯನ್ನು ಸೃಷ್ಟಿಸಿ, ಆಳವಾದ ಕೊಳದಂತೆ ಭಾಸ.

ಇಲ್ಲಿನ ʻಗ್ರೇಟ್ ಸ್ಟ್ಯಾಲಕ್ ಪೈಪ್ ಆರ್ಗನ್ʼ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಪ್ರಪಂಚದ ಅತಿದೊಡ್ಡ ಮತ್ತು ಏಕೈಕ ನೈಸರ್ಗಿಕ ಸಂಗೀತ ವಾದ್ಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಆರ್ಗನ್‌ನ ಕೀಬೋರ್ಡ್‌ಗಳನ್ನು ಒತ್ತಿದಾಗ, ರಬ್ಬರ್-ತುದಿಯ ಸುತ್ತಿಗೆಗಳು ವಿದ್ಯುನ್ಮಾನ ನಿಯಂತ್ರಣದಿಂದ ವಿವಿಧ ಸ್ಟ್ಯಾಲಾಕ್ಟೈಟ್‌ಗಳನ್ನು ನಿಧಾನವಾಗಿ ತಟ್ಟಿ, ಪ್ರತಿ ಸ್ಟ್ಯಾಲಾಕ್ಟೈಟ್‌ನ ನೈಸರ್ಗಿಕ ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ವಿಭಿನ್ನ ಸ್ವರಗಳನ್ನು ಹೊರಡಿಸುತ್ತವೆ. ಗುಹೆಯ ವಾತಾವರಣದಲ್ಲಿ ಈ ಸ್ವರಗಳ ಪ್ರತಿಧ್ವನಿ ಸಂಗೀತದ ಸಿಂಫೊನಿಯ ಅನುಭವವಾಗುತ್ತದೆ.

ವರ್ಜೀನಿಯಾದ ಲೂರೆ ಪಟ್ಟಣದ ಸಮೀಪದಲ್ಲಿರುವ ಈ ಸುಂದರ ಪ್ರವಾಸಿ ತಾಣವು ವರ್ಷದ 365 ದಿನಗಳೂ ತೆರೆದಿರುತ್ತದೆ. ಗುಹೆಯನ್ನು ಹೊರತುಪಡಿಸಿ, ಇನ್ನಿತರ ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದಾದರೆ ಇಡೀ ದಿನದ ಸಮಯ ಬೇಕಾಗುತ್ತದೆ.

ಗುಹೆಯೊಳಗಿನ ಪ್ರವಾಸಕ್ಕೆ ನೀವು ʻಸೆಲ್ಫ್ ಗೈಡೆಡ್ ಟೂರ್ʼ ಆಯ್ಕೆ ಮಾಡಿಕೊಂಡು ನಿಮ್ಮದೇ ವೇಗದಲ್ಲಿ ಎಲ್ಲವನ್ನೂ ನೋಡಬಹುದು ಅಥವಾ ನಿಮಗೆ ಇಲ್ಲಿನ ಇತಿಹಾಸ ಮತ್ತು ಭೂ ವಿಜ್ಞಾನದ ಬಗ್ಗೆ ಹೆಚ್ಚು ಆಳವಾದ ಮಾಹಿತಿ ಬೇಕೆನಿಸಿದರೆ ʻಡಿಸ್ಕವರಿ ಟೂರ್ʼ ಅನ್ನು ಆರಿಸಿಕೊಳ್ಳಬಹುದು. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಅಥವಾ ಪ್ರವೇಶ ದ್ವಾರದಲ್ಲಿ ಖರೀದಿಸಬಹುದು. ಟಿಕೆಟ್‌ನಲ್ಲಿ ಗುಹೆಯ ಹೊರಗಿನ ಈ ಕೆಳಗಿನ ಆಕರ್ಷಣೆಗಳ ಪ್ರವೇಶವೂ ಸೇರಿರುತ್ತದೆ:

luray cave 3

1725ರ ಹಿಂದಿನ ವಾಹನಗಳು ಸೇರಿದಂತೆ ಐತಿಹಾಸಿಕ ಕಾರುಗಳು ಮತ್ತು ಬೈಕ್‌ಗಳ ಸಂಗ್ರಹವಾದ ಕಾರ್ ಮತ್ತು ಕ್ಯಾರೇಜ್ ಕಾರವಾನ್ ಮ್ಯೂಸಿಯಂ, ಐತಿಹಾಸಿಕ ಕಟ್ಟಡಗಳ ಪುನರ್ಸ್ಥಾಪಿತ ಸಂಗ್ರಹಗಳ ಚಿಕ್ಕ ಹಳ್ಳಿ ಷೆನೆಂಡೋವಾ ಹೆರಿಟೇಜ್ ವಿಲೇಜ್, ಹಳೆಯ ಕಾಲದ ರೈಲುಗಳು ಮತ್ತು ಆಟಿಕೆಗಳ ಸಂಗ್ರಹವಿರುವ ಟಾಯ್‌ ಟೌನ್ ಜಂಕ್ಷನ್. ಇವುಗಳ ಹೊರತಾಗಿ ಹೆಚ್ಚುವರಿ ಶುಲ್ಕ ಪಾವತಿಸಿ ʻಗಾರ್ಡನ್ ಮೇಸ್ʼ ಮತ್ತು ʻರೋಪ್ ಅಡ್ವೆಂಚರ್ ಪಾರ್ಕ್‌ʼಗಳಲ್ಲಿ ಸಾಹಸಮಯ ಚಟುವಟಿಕೆಗಳ ಅನುಭವವನ್ನು ಪಡೆಯಬಹುದು.

ಇನ್ನು ಲೂರೆ ಕೇವರ್ನ್ಸ್‌ನ ಎದುರಿಗೆ ಇರುವ ಉದ್ಯಾನದಲ್ಲಿ 117 ಅಡಿ ಎತ್ತರದ ʻಲೂರೆ ಕ್ಯಾರಿಲಾನ್ ಸಿಂಗಿಂಗ್ ಟವರ್ʼ ಇದೆ. ಇಲ್ಲಿ ಉಚಿತ ಸಂಗೀತ ಕಾರ್ಯಕ್ರಮಗಳನ್ನು ಆನಂದಿಸಬಹುದು. ಲೂರೆ ಕೇವರ್ನ್ಸ್‌ಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಾಗಿ ಗುಹೆಗಳ ವಿಸ್ಮಯವನ್ನು ಕಂಡು ನಂತರ, ಈ ಸುಂದರ ಸಂಗೀತ ಗೋಪುರದ ಸೌಂದರ್ಯ ಮತ್ತು ಸಂಗೀತವನ್ನು ಆನಂದಿಸುತ್ತಾರೆ. ನೀವು ಪ್ರಕೃತಿ ಪ್ರೇಮಿಯೋ, ಭೂವಿಜ್ಞಾನ ಆಸಕ್ತರೋ ಅಥವಾ ಒಂದು ಅವಿಸ್ಮರಣೀಯ ಪ್ರವಾಸವನ್ನು ಬಯಸುವ ಪ್ರವಾಸಪ್ರಿಯೋ ಆಗಿದ್ದರೆ, ಈ ವಿಸ್ಮಯ ಲೋಕವನ್ನು ಅನ್ವೇಷಿಸಲೇ ಬೇಕು.