- ಡಾ. ಕೆ. ಬಿ. ಸೂರ್ಯಕುಮಾರ್. ಮಡಿಕೇರಿ

ಕೆನಡಾದ ವಾಟರ್ಲೂ-ಕಿಚ್ನರ್‌ನಲ್ಲಿ ನಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ಸಂಜೆ, ಒಂದು ಅನಿರೀಕ್ಷಿತ ರೋಮಾಂಚಕ ಅನುಭವ ನಮಗಾಗಿ ಕಾಯುತ್ತಿತ್ತು. ಮನೆಯ ಹಿಂಬಭಾಗದ ಹುಲ್ಲಿನ ಅಂಗಳದಲ್ಲಿ, ಚುಕ್ಕೆ-ಚುಕ್ಕೆ ಒಡವೆ ಧರಿಸಿದ ಉದ್ದನೆ ಕೊಂಬಿನ ಜಿಂಕೆಗಳು ನಿಂತು "ಹಲೋ!" ಎಂದು ಕಿಚಾಯಿಸಿದವು! ನಗರದ ಒಡಲಾಳದಲ್ಲಿ ಈ ಅತಿಥಿಗಳ ಆಗಮನ ನಮ್ಮ ಕಣ್ಣಿಗೆ ಕಾಣದ ಕಾಡಿನ ಕಥೆ ಹೇಳಿದಂತಾಯ್ತು .

ನಗರದ ಜನರಿಗೆ ಕಾಡು ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುವುದೇ ಅಪರೂಪ. ಮೃಗಾಲಯದಲ್ಲಿ ಪಂಜರದೊಳಗಿನ ಪ್ರಾಣಿಗಳನ್ನೋ, ಅಥವಾ ನಾಗರಹೊಳೆ, ಬಂಡೀಪುರದಂಥ ಅಭಯಾರಣ್ಯದಲ್ಲಿ ದೂರದಿಂದ ಕಾಣುವ ನವಿಲು, ಕಾಡುಹಂದಿ, ಆನೆ, ಅದೃಷ್ಟವಿದ್ದರೆ ಒಂದಿಷ್ಟು ಹುಲಿಯ ಝಲಕ್‌ನೋ ನೋಡಿರುತ್ತೇವೆ. ಆದರೆ, ಕಾಡಿನ ರಾಜ, ರಾಣಿಯರನ್ನು ಅವರದೇ ಸ್ವಾಭಾವಿಕ ಜಗತ್ತಿನಲ್ಲಿ, ಯಾವುದೇ ಗೋಡೆಯಿಲ್ಲದೆ, ಹತ್ತಿರದಿಂದ ಭೇಟಿಯಾಗುವ ರೋಮಾಂಚನವೇ ಬೇರೆ!

ನಮ್ಮ ಪ್ರಾಣಿಪ್ರೀತಿಯನ್ನು ಮನಗಂಡ ಸಂಬಂಧಿಕರು, ʼನಿಮಗೊಂದು ಸರ್ಪ್ರೈಸ್ ಇದೆ!ʼ ಎಂದು ಮರುದಿನ ಒಂದು ವಿಶೇಷ ಸ್ಥಳಕ್ಕೆ ಕರೆದೊಯ್ದರು. ಅಂದು ವಾಟರ್ಲೂದಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿ, 700 ಎಕರೆಯ ವಿಶಾಲ ವನ್ಯಧಾಮವೊಂದು ನಮ್ಮನ್ನು ಕಾಯುತಲಿತ್ತು.

ಆಫ್ರಿಕನ್ ಲಯನ್ ಸಫಾರಿ

ಇದೊಂದು ಏಳು ವಿಶಿಷ್ಟ ಮೀಸಲು ಪ್ರದೇಶಗಳನ್ನು ಒಳಗೊಂಡಿರುವ ಕುಟುಂಬ ಒಡೆತನದ ಕಾಡಿನ ರಾಜ್ಯ. ಇಲ್ಲಿ ನಾವು ನಮ್ಮ ಕಾರಿನಲ್ಲೇ ಅಥವಾ ಸಫಾರಿಯ ಬಸ್‌ನಲ್ಲಿ ಸವಾರಿ ಮಾಡಬಹುದು. ಆದರೆ ಇಲ್ಲಿ ಒಂದು ಟ್ವಿಸ್ಟ್ ಇದೆ— ಹೊರಗೆ ಪ್ರಾಣಿಗಳು ಮುಕ್ತವಾಗಿ ಓಡಾಡುತ್ತಿದ್ದು ನಾವು ವಾಹನಗಳ ಪಂಜರದಲ್ಲಿ ಬಂಧಿಗಳು!

ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರಿಂದ, ಮುಖ್ಯ ಗೇಟಿನಲ್ಲಿ ಸ್ಕ್ಯಾನ್ ಮಾಡಿಸಿ ಒಳಗೆ ಕಾಲಿಟ್ಟೆವು. ರೇಂಜರ್‌ಗಳು ನಗುಮುಖದಿಂದ, ʼಕಾರಿನ ಗಾಜು ಕೆಳಗಿಳಿಸಬೇಡಿ, ಸಿಂಹದ ಬಾಯಿಗೆ ತಿಂಡಿಯಾಗಬೇಡಿ!ʼ ಎಂದು ತಮಾಷೆಯಾಗಿ ಎಚ್ಚರಿಕೆ ನೀಡಿದರು. ಕೆನಡಾದಲ್ಲಿ ಇಂಥ ಖುಷಿಯ ರೇಂಜರ್‌ಗಳನ್ನು ನೋಡುವುದೇ ಒಂದು ಅವಿಸ್ಮರಣೀಯ ದೃಶ್ಯ!

Untitled design (12)

ಸಿಂಬಾ ದೇಶದ ರಾಜರ ದರ್ಶನ

ಕಾರಿನಲ್ಲಿ ನಿಧಾನವಾಗಿ ಸಾಗುತ್ತಿದ್ದಂತೆ, ಮೊದಲಿಗೆ ದೊಡ್ಡ ಬೇಲಿಯ ಒಳಗೆ ನಿದ್ರೆಯಲ್ಲಿ ಮುಳುಗಿದ ಚಿರತೆಗಳು ಕಾಣಿಸಿದವು. ಸ್ವಲ್ಪ ದೂರದಲ್ಲಿ, ಇಲಾಮಗಳ ಗುಂಪು ತಮ್ಮ ದೊಡ್ಡ ಕೊಂಬುಗಳನ್ನು ತೋರಿಸುತ್ತಾ ಸಾಗುತ್ತಿದ್ದವು. ಆದರೆ, ನಿಜವಾದ ರೋಮಾಂಚನ ಸಿಂಬಾ ದೇಶದಲ್ಲಿ ಕಾದಿತ್ತು. ಇಲ್ಲಿ, ಒಂದು ಕ್ಷಣಕ್ಕೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು—ಆದರೆ ಇದು ಬೇರೆಯವರ ಕಾರಿನಿಂದಲ್ಲ, ಸಿಂಹಗಳಿಂದ! ಎಂಟು ಗಂಭೀರ ಸಿಂಹಗಳು ಬಂಡೆಗಳ ಮೇಲೆ ರಾಜನಂತೆ ವಿಶ್ರಾಂತಿ ಪಡೆಯುತ್ತಿದ್ದವು. ಅವುಗಳ ಕೇಸರಿಗಳು ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿದ್ದು ಒಂದು ಕ್ಷಣಕ್ಕೆ ನಾವು ಆಫ್ರಿಕಾದ ಸವನ್ನಾದಲ್ಲಿರುವಂತೆ ಭಾಸವಾಯಿತು. ಕ್ಯಾಮೆರಾಗಳು ಕ್ಲಿಕ್-ಕ್ಲಿಕ್ ಶಬ್ದ ಮಾಡುತ್ತಿದ್ದರು ಒಲ್ಲದ ಮನಸ್ಸಿನಿಂದ ರೇಂಜರ್‌ನ ಸೂಚನೆಯಂತೆ ಮುಂದೆ ಸಾಗಿದೆವು.

ಬಿಳಿ ಸಿಂಹದ ಗಾಂಭೀರ್ಯ

ಮುಂದಿನ ತಿಂಬಾವತಿ ಪ್ರದೇಶದಲ್ಲಿ ನಮ್ಮ ಕಣ್ಣುಗಳಿಗೆ ಸಿಕ್ಕದ್ದು ಒಂದು ಅದ್ಭುತ ದೃಶ್ಯ! ಒಂದು ದಷ್ಟಪುಷ್ಟ, ಹಾಲಿನಂತೆ ಬಿಳಿಯಾದ ಸಿಂಹ, ತನ್ನ ಗಂಭೀರ ನಡಿಗೆಯೊಂದಿಗೆ ನಮ್ಮ ಕಾರಿನ ಮುಂದೆ ರಸ್ತೆ ದಾಟಿತು. ಇಂತಹ ದೃಶ್ಯ ಜೀವನದಲ್ಲಿ ಒಮ್ಮೆಯಾದರೂ ಸಿಗುವುದೇ ದೊಡ್ಡ ಅದೃಷ್ಟ. ಕೂಡಲೇ ಫೋನ್‌ನ ಕ್ಯಾಮೆರಾ ಆನ್ ಆಗಿ ಆ ಕ್ಷಣವನ್ನು ವಿಡಿಯೋದಲ್ಲಿ ಸೆರೆಹಿಡಿದೆವು. ಆ ಬಿಳಿ ಸಿಂಹದ ಪಕ್ಕದಲ್ಲಿ, ಅದರ ಮರಿಗಳು ತಾಯಿಯ ರಕ್ಷಣೆಯಲ್ಲಿ ಆರಾಮವಾಗಿ ಮಲಗಿದ್ದವು. ಇದು ಒಂದು ನ್ಯಾಷನಲ್ ಜಿಯೋಗ್ರಾಫಿಕ್ ಚಿತ್ರಕ್ಕಿಂತಲೂ ಸುಂದರವಾದ ಕ್ಷಣವಾಗಿತ್ತು.

ನೈರೋಬಿಯಿಂದ ವಾಂಕಿ ಬುಷ್‌ಲ್ಯಾಂಡ್‌ಗೆ

ನೈರೋಬಿ ಅಭಯಾರಣ್ಯದಲ್ಲಿ, ಅಂಕೋಲೆ ವಾಟುಸಿ ದನಗಳು ತಮ್ಮ ದೊಡ್ಡ ಕೊಂಬುಗಳನ್ನು ತೂಗಾಡಿಸುತ್ತಾ, ಯುರೋಪಿಯನ್ ಬಿಳಿ ಕೊಕ್ಕರೆಗಳು, ಈಜಿಪ್ಟಿನ ಹೆಬ್ಬಾತುಗಳು, ಮತ್ತು ಬೂದು ಕಿರೀಟದ ಕ್ರೇನ್‌ಗಳು ಓಡಾಡುತ್ತಿದ್ದವು. ವಾಂಕಿ ಬುಷ್‌ಲ್ಯಾಂಡ್ ಟ್ರೈಲ್ ನಲ್ಲಿ ಬಬೂನ್‌ಗಳು ತಮ್ಮ ತುಂಟಾಟದ ಜತೆಗೆ, ದೊಡ್ಡ ಚಕ್ರಗಳ ಗೋಪುರದ ಮೇಲೆ ಕುಣಿದಾಡುತ್ತಿದ್ದವು—ಅದು ಅವರಿಗೆ ಒಂದೇ ಸಮಯದಲ್ಲಿ ಮನೆಯೂ, ಆಟದ ಮೈದಾನವೂ ಆಗಿತ್ತು. ಬೊಂಗೊ, ಮಲಯನ್ ಟ್ಯಾಪಿರ್‌ನಂಥ ಅಪರೂಪದ ಪ್ರಾಣಿಗಳು ಇಲ್ಲಿ ಕಾಣಿಸಿದವು, ಪ್ರತಿಯೊಂದು ತಿರುವಿನಲ್ಲೂ ಒಂದೊಂದು ಆಶ್ಚರ್ಯ ಕಾದಿತ್ತು.

ʼರಾಕಿ ರಿಡ್ಜ್ ವೆಲ್ಡ್ತ್ನ ವಿಶಾಲ ಬಯಲಿನಲ್ಲಿ, ಜಿರಾಫೆಗಳು ತಮ್ಮ ಉದ್ದನೆಯ ಕತ್ತನ್ನು ಎತ್ತಿ ನಿಂತಿದ್ದವು. ಜೀಬ್ರಾಗಳು ತಮ್ಮ ಗೆರೆ-ಗೆರೆ ಒಡವೆಯಲ್ಲಿ ಓಡಾಡುತ್ತಿದ್ದವು. ಕಾಡೆಮ್ಮೆಗಳು ಧೂಳು ಎಬ್ಬಿಸುತ್ತಿದ್ದವು ಮತ್ತು ಘೇಂಡಾಮೃಗಗಳು ನೀರಿನ ಕೊಚ್ಚೆಯಲ್ಲಿ ಕಿವಿ ಆಡಿಸುತ್ತಾ ವಿಶ್ರಾಂತಿ ಪಡೆಯುತ್ತಿದ್ದವು—ಇದು ನಿಜಕ್ಕೂ ಒಂದು ಚಿತ್ರಕಲೆಯಂತಿತ್ತು!

ಆಸ್ಟ್ರೇಲಿಯಾದಿಂದ ಉತ್ತರ ಅಮೆರಿಕಾಕ್ಕೆ

ಆಸ್ಟ್ರೇಲಿಯಾದ ಮೀಸಲು ಪ್ರದೇಶದಲ್ಲಿ ತಹರ್, ಯಾಕ್, ನೀಲ್ಗೈ, ಮತ್ತು ಕಾಂಗರೂಗಳು ನಮ್ಮನ್ನು ಸ್ವಾಗತಿಸಿದರೆ, ಉತ್ತರ ಅಮೆರಿಕಾದ ಪ್ರದೇಶದಲ್ಲಿ ಬೈಸನ್‌ಗಳು ಮತ್ತು ಎಲ್ಕ್‌ಗಳು ತಮ್ಮ ದೈತ್ಯಾಕಾರದ ಗಾಂಭೀರ್ಯವನ್ನು ತೋರಿಸಿದವು. ಈ ಎಲ್ಲ ಪ್ರಾಣಿಗಳು ತಮ್ಮದೇ ಆದ ಜಗತ್ತಿನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದು ನಾವು ಕಾರಿನ ಗಾಜಿನಾಚೆ ಒಂದು ಕಾಡಿನ ಸಿನಿಮಾದೊಳಗೆ ಸಿಕ್ಕಿಬಿದ್ದಂತೆ ಭಾಸವಾಯಿತು.

Untitled design (13)

ಕೀನ್ಯಾ ಗೇಟ್‌ನ ಮೋಡಿ

ತೆರೆದ ಪ್ರದೇಶದ ಸಫಾರಿ ಮುಗಿಸಿ, ಕೀನ್ಯಾ ಗೇಟ್ಗೆ ಕಾಲಿಟ್ಟಾಗ, ಒಂದು ಚಿಕ್ಕ ಊರೇ ತೆರೆದಿತ್ತು! ರೆಸ್ಟೋರೆಂಟ್‌ಗಳು, ಸ್ಮರಣಿಕೆ ಅಂಗಡಿಗಳು, ಮತ್ತು ಸರೋವರದಲ್ಲಿ ಬೋಟಿಂಗ್‌ನ ಆನಂದ. ಸರೋವರದಲ್ಲಿ ವಿವಿಧ ಪಕ್ಷಿಗಳು ತಮ್ಮ ರೆಕ್ಕೆಗಳನ್ನು ಚಾಚಿಕೊಂಡು ಕುಳಿತಿದ್ದವು ಮತ್ತು ಒಂದು ಪುಟ್ಟ ರೈಲು ಮಕ್ಕಳಿಗೂ, ವಯಸ್ಕರಿಗೂ ಒಂದೇ ರೀತಿಯ ಖುಷಿಯನ್ನು ತಂದಿತು. ಪಕ್ಕದಲ್ಲಿ, ಗೂಬೆಗಳು, ಹದ್ದುಗಳು, ದೊಡ್ಡ ಗಿಡುಗಗಳು ಮತ್ತು ಬಣ್ಣ ಬಣ್ಣದ ಗಿಳಿಗಳಿಗೆಂದೇ ಒಂದು ಚಿಕ್ಕ ಜಗತ್ತು ಇತ್ತು. ಒಂದು ಅರ್ಧ ಚಂದ್ರಾಕೃತಿಯ ಕ್ರೀಡಾಂಗಣದಲ್ಲಿ ರೇಂಜರ್‌ಗಳು ದೊಡ್ಡ ಹಾವುಗಳನ್ನು, ಆಮೆಗಳನ್ನು ಕೈಯಲ್ಲಿ ತಂದು, ಅವುಗಳ ಕತೆಯನ್ನು ರೋಮಾಂಚಕವಾಗಿ ವಿವರಿಸಿದರು. ಮಕ್ಕಳು ವಾಹ್! ಎಂದು ಕಿರುಚುತ್ತಿದ್ದರೆ, ನಾವು ಫೊಟೋಗಳನ್ನು ಕ್ಲಿಕ್ಕಿಸುತ್ತಿದ್ದೆವು. ಮುಂದಿನ ಕ್ರೀಡಾಂಗಣದಲ್ಲಿ ಆನೆಗಳ ಕಸರತ್ತು, ಗಿಳಿಗಳ ತಮಾಷೆಯ ಆಟಗಳು—ಪ್ರತಿಯೊಂದು ಕ್ಷಣವೂ ಒಂದೊಂದು ಮಾಂತ್ರಿಕ ಕ್ಷಣವಾಗಿತ್ತು.

ಮಧ್ಯಾಹ್ನದ ಔತಣಕ್ಕೆ ಒಂದು ಟ್ವಿಸ್ಟ್

ಸಫಾರಿಯ ರೋಮಾಂಚಕ ಸುತ್ತು ಮುಗಿಯುವಷ್ಟರಲ್ಲಿ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಮನೆಯಿಂದ ತಂದಿದ್ದ ಮೊಸರನ್ನ, ಪುಳಿಯೊಗರೆಯ ಜತೆಗೆ, ಅಲ್ಲಿನ ರೆಸ್ಟೋರೆಂಟ್‌ನಿಂದ ತಂದ ಪಿಜ್ಜಾದ ತುಂಡು ಮತ್ತು ಐಸ್‌ಕ್ರೀಮ್‌ನ ತಂಪು ಒಂದು ಭಾರತೀಯ-ಕೆನಡಿಯನ್ ಔತಣವಾಯಿತು. ಹೊಟ್ಟೆ ತುಂಬಿದ ಮೇಲೆ, ಮನಸ್ಸು ತುಂಬಿದ ಖುಷಿಯೊಂದಿಗೆ ಮನೆಗೆ ಮರಳಿದೆವು.

ಕೆನಡಾದಲ್ಲಿ ಆಫ್ರಿಕಾದ ಕನಸು

ಈ ಆಫ್ರಿಕನ್ ಲಯನ್ ಸಫಾರಿ ನಮಗೆ ಕೆನಡಾದ ಹೃದಯದಲ್ಲಿ ಆಫ್ರಿಕಾದ ಕಾಡಿನ ಮಾಯಾಲೋಕವನ್ನು ತೋರಿಸಿತು. ಸಿಂಹದ ಗರ್ಜನೆಯಿಂದ ಹಿಡಿದು ಜಿರಾಫೆಯ ಗಾಂಭೀರ್ಯದವರೆಗೆ, ಘೇಂಡಾಮೃಗದ ಕಿವಿ ಆಟದಿಂದ ಕಾಂಗರೂನ ಕುಣಿತದವರೆಗೆ—ಈ ಒಂದು ದಿನ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಿತು. ಇಂಥ ರೋಮಾಂಚಕ ಸಫಾರಿಯನ್ನು ತಪ್ಪಿಸಿ ಕೊಳ್ಳಬೇಡಿ—ಕಾಡಿನ ಕಥೆಯೊಂದಿಗೆ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿ!