ಯೋಸೆಮೈಟ್ ನೋಡೋಕೆ ಇಷ್ಟು ದೂರ ಹೋಗಿದ್ದೆವು!
ಹಗಲಿನಲ್ಲಿ ಬೃಹದಾಕಾರವಾಗಿ ಕಾಣುವ, ಮುಸ್ಸಂಜೆಯ ಕೆಂಪಿನಲ್ಲಿ ನಿಗಿನಿಗಿ ಕೆಂಡದುಂಡೆಗಳಂತೆ ಗೋಚರಿಸುವ, ಕತ್ತಲಾವರಿಸಿದರೆ ಗವ್ ಎಂದು ಭಯಮೂಡಿಸುವ ಶಿಲ್ಪಸಾಮ್ರಾಜ್ಯ. ಕಣಿವೆಯಲ್ಲಿ ದೈತ್ಯಾಕಾರದ ಸಿಕೋಯಾ ಮತ್ತು ಕೋಸ್ಟ್ ರೆಡ್ವುಡ್ ಮರಗಳು, ನಡುವಿನಲ್ಲಿ ಜುಳುಜುಳು ನಿನಾದದೊಂದಿಗೆ ಹರಿವ ತಣ್ಣನೆಯ ನೀರು. ಈ ಉದ್ಯಾನವನದ ಅಗಾಧತೆಗೆ ಹೇಳಿಯೂ ತೀರದಷ್ಟಿದೆ.
- ಎಸ್. ಶಿವಲಿಂಗಯ್ಯ
ಅಮೆರಿಕದ ಒಂದು ಭೇಟಿಯ ವೇಳೆ ಯೂಸ್ಟನ್ ನಗರದಲ್ಲಿರುವ ನಮ್ಮ ಬಂಧುವೊಬ್ಬರ ಮನೆಗೆ ಹೋಗಿದ್ದೆವು. ಪ್ರಕೃತಿಪ್ರಿಯ ಯುವಜೋಡಿ ಅದು. ಆಗಾಗ್ಗೆ ನಿಯಮಿತವಾಗಿ ರೋಡ್ ಟ್ರಿಪ್ ಹೋಗುವ ಹವ್ಯಾಸವುಳ್ಳವರು. ಮೇಲಾಗಿ ʻಪಾರ್ಕ್ ಫ್ರೆಂಡ್ಸ್ʼ ಎಂಬ ಸಂಘಟನೆಯ ಸದಸ್ಯರು.
ಯುಎಸ್ಎ ದೇಶದಾದ್ಯಂತ 63 ರಾಷ್ಟ್ರೀಯ ಉದ್ಯಾನಗಳಿವೆ. ಒಂದಕ್ಕಿಂತ ಒಂದು ಭಿನ್ನ. ಆರೋಹಣಕ್ಕೆ ಕೆಲವು ಪರ್ವತಗಳಿವೆ. ಚಾರಣಕ್ಕೆ ಅನುವಾಗುವ ಹಲವು ದಟ್ಟಾರಣ್ಯಗಳಿವೆ. ಕೆಲವು ನದಿಯ ಕೊರಕಲಗಳನ್ನು ಒಳಗೊಂಡಿದ್ದರೆ, ಇನ್ನೂ ಕೆಲವು ಪಾಪಸ್ ಕಳ್ಳಿ ಬೆಳೆದಿರುವ ಮರುಭೂಮಿ ಪ್ರದೇಶ. ಪ್ರತಿಯೊಂದೂ ಅವುಗಳದ್ದೇ ವೈಶಿಷ್ಟ್ಯಗಳನ್ನು ಹೊಂದಿದ್ದು, ಸಾಹಸ ಪ್ರವೃತ್ತಿಗೆ, ಪ್ರಕೃತಿ ಅಧ್ಯಯನಕ್ಕೆ, ಮಾನಸೋಲ್ಲಾಸಕ್ಕೆ ಹೇಳಿಮಾಡಿಸಿದಂತಿವೆ.
ಮಾತಿನ ಮಧ್ಯೆ, ಅಮೆರಿಕದಲ್ಲಿ ಏನೇನು ನೋಡಿದಿರಿ ಎಂಬ ಅವರ ಪ್ರಶ್ನೆಗೆ ನ್ಯೂಯಾರ್ಕ್, ವಾಷಿಂಗ್ಟನ್, ಶಿಕಾಗೊ, ಇತ್ಯಾದಿ ಹೆಸರು ಹೇಳಿದಾಗ, ಅವರು ನಸುನಕ್ಕರು. ʻಇವು ಅಮೆರಿಕದ ವಿಶೇಷಗಳಲ್ಲʼ. ಇಂಥ ಮಾನವ ನಿರ್ಮಿತ ಬಹುಮಹಡಿ ಕಟ್ಟಡಗಳನ್ನು, ಸ್ಮಾರಕಗಳನ್ನು, ವಸ್ತುಸಂಗ್ರಹಾಲಯಗಳನ್ನು ಅನೇಕ ಕಡೆ ನೋಡಬಹುದು. ಒಂದು ಊರಿನಲ್ಲಿ ನೋಡಿದ ಮೇಲೆ, ಮತ್ತೊಂದೆಡೆ ನೋಡಲು ಉತ್ಸಾಹ ಉಳಿಯದು. ಇಂದು ಅತ್ಯುನ್ನತ ಎನ್ನುವುದು ನಾಳೆಗೆ ಹಳೆಯದು ಎಂದಾಗ ನಮ್ಮ ಮುಖ ಕಳೆಗುಂದಿತು.

ಮಾತು ಮುಂದುವರೆಸಿದ ಅವರು, ಯಾವುದೇ ದೇಶಕ್ಕೆ ಹೋದಾಗ, ಮೊದಲು ಆ ದೇಶಕ್ಕೆ ಪ್ರಕೃತಿದತ್ತ ಸೌಂದರ್ಯ, ವಿಚಿತ್ರ / ವಿಶೇಷತೆಗಳನ್ನು ಗಮನಿಸುವ ಪ್ರಯತ್ನ ಮಾಡಬೇಕು. ಅಮೆರಿಕದಲ್ಲಿ ಆ ಥರದವು ಗ್ರ್ಯಾಂಡ್ ಕ್ಯಾನಿಯನ್, ನಯಾಗರ ಜಲಪಾತ, ಸಿಕೋಯಾ ಕಾಡು ಇಲ್ಲವೇ ಯೋಸೆಮೈಟ್‌ನಂಥ ಸುಂದರ ಕಣಿವೆಯಾಗಬಹುದು. ಮೊದಲಿನ ಮೂರು ಹೆಸರುಗಳನ್ನು ಕೇಳಿದ್ದ ನಮಗೆ, ಯೋಸೆಮೈಟ್ ಅಪರಿಚಿತವೆನಿಸಿತ್ತು. ಸ್ವಲ್ಪ ವಿವರ ಪಡೆದೆವು. ಮನೆಗೆ ಬಂದು, ಅಂತರ್ಜಾಲದ ಒಳಹೋದರೆ, ಯೋಸೆಮೈಟ್ ವಿವರಗಳು, ಅಲ್ಲಿಯ ದೃಶ್ಯವೈಭವ ಬಿಟ್ಟು ಹೊರಬರಲು ಮನಸಾಗುತ್ತಿಲ್ಲ. ಇನ್ನು ಪ್ರತ್ಯಕ್ಷವಾಗಿ ನೋಡುವುದಾದರೆ? ಎಂಬ ಆಲೋಚನೆಗಳು ಶುರುವಾದವು. ದೂರ, ದಿನ, ಬಿಡುವು, ಬಜೆಟ್ ಹೊಂದುತ್ತಿದ್ದಂತೆ ಕನಸು ಗರಿಗೆದರಿತು.
ಯುಎಸ್ಎ ಭಾರತಕ್ಕಿಂತ ವಿಶಾಲವಾದ ದೇಶ. ಇಲ್ಲಿ ವಿಸ್ತಾರವಾದ ಬಯಲುಗಳಿರುವಂತೆ ಉನ್ನತ ಶಿಲಾರಚನೆಯ ಬೆಟ್ಟಗಳು, ನದಿ ಉಂಟುಮಾಡಿರುವ ಕೊರಕಲುಗಳಿರುವಂತೆ ಪ್ರಕೃತಿದತ್ತ ಕಣಿವೆಗಳೂ ಇವೆ. ಇವುಗಳಲ್ಲಿ ಕ್ಯಾಲಿಫೋರ್ನಿಯ ರಾಜ್ಯದ ಸಿಯಾರ ನೆವಾಡಾ ಪರ್ವತ ಪ್ರದೇಶದಲ್ಲಿರುವ ಸುಮಾರು 1170 ಚದರ ಮೈಲಿ ವಿಸ್ತಾರದ ಯೋಸೆಮೈಟ್ ಅಂಥ ಒಂದು ಸುಂದರ ʻUʼ ಆಕಾರದ ಕಣಿವೆ. ಇದರಲ್ಲಿ ಕೇವಲ 5% ಮಾತ್ರ ಸಾರ್ವಜನಿಕ ಬಳಕೆಗೆ ಲಭ್ಯವಿದೆ. ಇದು ಪ್ರಕೃತಿ ಪ್ರಿಯರಿಗೆ ಸ್ವರ್ಗ. ಈ ಬಾರಿ ಸ್ಯಾನ್‌ಹೋಸೆಗೆ ಹಾರಿ, ಗೆಳೆಯರನ್ನು ಕಂಡು, ಅಲ್ಲಿಂದ ಬಾಡಿಗೆ ಕಾರಿನಲ್ಲಿ ರೋಡ್ ಟ್ರಿಪ್ ಆರಂಭಿಸಿದೆವು.

ಮಾರಿಪೋಸಾ ಮೂಲಕ ಬೆಟ್ಟದ ತಪ್ಪಲಿನಲ್ಲಿಯೇ ಹೊರಟ ನಮಗೆ, ಹಸಿರುಹಾದಿಯನ್ನು ಕ್ರಮಿಸುತ್ತಿದ್ದಾಗಲೇ ದೂರದಲ್ಲಿ ತಲೆಯೆತ್ತಿ ನಿಂತಿದ್ದ ಸುಮಾರು 4800ಅಡಿ ಎತ್ತರದ ಅರ್ಧ ಗೋಳಾಕಾರದ ಬೃಹತ್ ಬಂಡೆಯ ದರ್ಶನವಾಯಿತು. ಇದು ಶಿಖರಾರೋಹಣ ಪ್ರಿಯರಿಗೆ ಸವಾಲೊಡ್ಡುವ ತಾಣ. ಅನೇಕ ಅಪಘಾತ, ಆತ್ಮಹತ್ಯೆಯ ಸಾವುಗಳಿಗೆ ಕುಖ್ಯಾತವಾಗಿದೆ. ದಾರಿಯುದ್ದಕ್ಕೂ ಸಿಗುವ ಅನೇಕ ಕಿರುತೊರೆಗಳನ್ನೂ ಮರ್ಸೀಡ್ ನದಿಯನ್ನೂ ದಾಟಿ ಮುನ್ನೆಡೆದೆವು. ಆಗ ಉದ್ಯಾನದ ಸುಪ್ರಸಿದ್ದ ಕೋಡುಗಲ್ಲು ಎಲ್ ಕ್ಯಾಪಿಟನ್ ಹಾಗೂ ಎದುರಿನ ಬ್ರೈಡಲ್ ವೆಲ್ ಎಂಬ ಸುಂದರ ಜಲಪಾತ ಕಣ್ಸೆಳೆದವು.
ಇದು ಕಣಿವೆಯಾದ್ದರಿಂದ, ಮಳೆಗಾಲದಲ್ಲಿ ಇಕ್ಕೆಲಗಳಲ್ಲಿ ಹರಿಯುವ ನೀರು, ಚಳಿಗಾಲದ ಹಿಮರಾಶಿ, ಧುಮ್ಮಿಕ್ಕುವ ನಯನಮನೋಹರ ಜಲಪಾತಗಳು ಇಲ್ಲಿ ಸೃಷ್ಟಿಯಾಗುತ್ತವೆ. ಇವುಗಳಲ್ಲೆಲ್ಲಾ ಹಿರಿದಾದುದು ಹಾಗೂ ಕಣಿವೆಯ ಪ್ರಮುಖ ಆಕರ್ಷಣೆ ವಿಶ್ವದ ಐದನೇಯ ಮತ್ತು ಉತ್ತರ ಅಮೆರಿಕದ ಅತ್ಯಂತ ಎತ್ತರದ ಜಲಪಾತವಾಗಿದೆ. 2400ಅಡಿ ಎತ್ತರದಿಂದ ಧುಮುಕುವ ಇದು ಮೂರು ಹಂತಗಳಲ್ಲಿ ಕಣಿವೆಯ ಕೆಳಕ್ಕೆ ತಲುಪುತ್ತದೆ. ಹೆಚ್ಚಿನ ಪ್ರಮಾಣದ ನೀರಿನ ಲಭ್ಯತೆಯಿದ್ದಾಗ ಇದರ ಮೂರೂ ಹಂತಗಳು ಜತೆಯಾದರೂ, ಒಂದೇ ಸ್ಥಳದಿಂದ ವೀಕ್ಷಣೆ ಕಷ್ಟ. ಬೇರೆಬೇರೆ ಸ್ಥಳದಿಂದ ಒಂದೊಂದನ್ನು ನೋಡಿ ಆನಂದಿಸಬಹುದು. ಇದರ ಜತೆಗೆ ಇಲ್ಲಿ ವೆರ್ನಲ್ ಜಲಪಾತ, ನೆವಾಡಾ ಜಲಪಾತ, ಬ್ರೈಡಲ್ ವೈಲ್ ಜಲಪಾತಗಳೂ ಮನಸಿಗೆ ಮುದನೀಡುತ್ತವೆ.

ಹಗಲಿನಲ್ಲಿ ಬೃಹದಾಕಾರವಾಗಿ ಕಾಣುವ, ಮುಸ್ಸಂಜೆಯ ಕೆಂಪಿನಲ್ಲಿ ನಿಗಿನಿಗಿ ಕೆಂಡದುಂಡೆಗಳಂತೆ ಗೋಚರಿಸುವ, ಕತ್ತಲಾವರಿಸಿದರೆ ಗವ್ ಎಂದು ಭಯಮೂಡಿಸುವ ಶಿಲ್ಪಸಾಮ್ರಾಜ್ಯ. ಕಣಿವೆಯಲ್ಲಿ ದೈತ್ಯಾಕಾರದ ಸಿಕೋಯಾ ಮತ್ತು ಕೋಸ್ಟ್ ರೆಡ್ವುಡ್ ಮರಗಳು, ನಡುವಿನಲ್ಲಿ ಜುಳುಜುಳು ನಿನಾದದೊಂದಿಗೆ ಹರಿವ ತಣ್ಣನೆಯ ನೀರು. ಈ ಉದ್ಯಾನವನ ಕೇವಲ ಕಲ್ಲುಬಂಡೆ, ಜಲಪಾತ, ಹರಿವ ನೀರು, ಆಕಾಶ ಚುಂಬಿಸುವ ಮರಗಳಿಗಷ್ಟೇ ಸೀಮಿತವಾಗಿಲ್ಲ. ಇವುಗಳ ಜತೆಗೆ, ಕರಡಿ, ನರಿ, ಜಿಂಕೆಗಳಂಥ ಕಾಡು ಪ್ರಾಣಿಗಳು ನಿರ್ಭಯವಾಗಿ ಓಡಾಡುವ ದೃಶ್ಯಗಳೂ ಕಾಣಸಿಗುತ್ತವೆ. ಫಾಲ್ ಕಾಲದಲ್ಲಿ (ಎಲೆ ಉದುರಲು ಮೊದಲಾಗುವ ಮುನ್ನ) ಬಣ್ಣದುಡುಗೆ ಧರಿಸಿರುವಂತೆ ತೋರುವ ವರ್ಣರಂಜಿತ ವೃಕ್ಷ ಸಮೂಹ, ಅದರ ಮೇಲೆ ಚಿಲಿಪಿಲಿಗುಟ್ಟುವ ಪಕ್ಷಿಸಂಕುಲ ಪ್ರವಾಸಿಗರ ಕಣ್ಮನ ತಣಿಸುತ್ತವೆ.
ಇಷ್ಟೆಲ್ಲ ಸೌಂದರ್ಯ ಒಂದೆಡೆ ನೋಡಲು ಬರುವವರ ಉಪಯೋಗಕ್ಕಾಗಿ (ಮುಂಗಡ ಕಾಯ್ದಿರಿಸುವವರಿಗಾಗಿ) ಕೆಲವು ವಸತಿಗೃಹಗಳು, ತಿರುಗಾಟಕ್ಕೆ ಬಸ್‌ಗಳಿವೆ. ಹಸಿವು, ನೀರಡಿಕೆಗಳ ಪೂರೈಕೆಗೆ, ಸ್ಮರಣಿಕೆ, ಪುಸ್ತಕ, ಫೊಟೋ ಮುಂತಾದವುಗಳನ್ನು ಕೊಳ್ಳಲು ಅಂಗಡಿಯೂ ಇಲ್ಲಿದೆ. ಇನ್ನು ತಮ್ಮದೇ ವಾಹನದಲ್ಲಿ ಸುತ್ತುವವರಿಗಾಗಿ ಮಾಹಿತಿ ಕೇಂದ್ರ, ರಸ್ತೆ, ಅಪರಿಚಿತರ ಸಹಾಯಕ್ಕಾಗಿ ಎಚ್ಚರಿಕೆ ಫಲಕಗಳೂ ಇದ್ದುದು ನಮ್ಮ ಪ್ರವಾಸವನ್ನು ಸುಗಮಗೊಳಿಸಿದ್ದವು. ಎಲ್ಲವನ್ನೂ ಕಂಡು ಆನಂದಿಸಿ ಹಿಂದಿರುಗಿದೆವು.