ಸಮುದ್ರ ತೀರದಲ್ಲೇ ಲವ್ ಒಟಿಪಿ ಕಥೆ ಹುಟ್ಟಿದ್ದು
ಹಲವು ಕನ್ನಡ ಸಿನಿಮಾಗಳಲ್ಲಿ ನಟನಾಗಿ ಹಾಗು ನಿರ್ದೇಶಕನಾಗಿ ಮಿಂಚಿದ ನಟ ಅನೀಶ್ ತೇಜೇಶ್ವರ್ ನಿರ್ದೇಶನದ ಲವ್ ಒಟಿಪಿ ಸಿನಿಮಾ ಇತ್ತೀಚೆಗಷ್ಟೆ ಡಿಜಿಟಲ್ ಸ್ಟ್ರೀಮ್ ಆಗುತ್ತಿದ್ದು, ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ ಅನೀಶ್ ತಮ್ಮ ಪ್ರವಾಸದ ಬಗ್ಗೆ, ಬರವಣಿಗೆಗೆ ಪ್ರವಾಸ ಸಹಾಯ ಮಾಡಿದ ಬಗ್ಗೆ ಮಾತನಾಡಿದ್ದಾರೆ. ಪ್ರವಾಸ ಎನ್ನುವುದು ಹೊಸ ಅನುಭವಗಳ ಜತೆಗೆ ಹೊಸ ಹುಮ್ಮಸ್ಸನ್ನು ನೀಡುವ ಕೆಲಸ ಮಾಡುತ್ತದೆ. ಗೆಳೆಯರ ಜತೆಗ ಊರು ಸುತ್ತುವುದು ಎಂದರೆ ಬಹಳ ಖುಷಿ ಎನ್ನುವುದು ಅನೀಶ್ ಮಾತು.
ಟ್ರಾವೆಲ್ ಎಂದರೇನು?
-ಟ್ರಾವೆಲ್ ಎಂದರೆ ನನಗೆ ನಮ್ಮದಿ. ಬಹಳ ಸ್ಟ್ರೆಸ್ ಆದಾಗ ಎಲ್ಲಾದರೂ ಹೋದರೆ ಸಮಾಧಾನ ಸಿಗುತ್ತದೆ. ಅದರಲ್ಲೂ ಕಡಲ ತೀರ ಎಂದರೆ ವಿಶೇಷ ಪ್ರೀತಿ. ಬರವಣಿಗೆ ಜತೆಗೆ ಎಡಿಟಿಂಗ್‌ಗೆ ಕೂಡ ಸಮುದ್ರ ತೀರಕ್ಕೆ ಹೋಗುವುದಿದೆ. ಒಮ್ಮೆ ಜಾಗ ಬದಲಾದರೆ ಹೊಸ ವೈಬ್ ಹೊಸ ಶಕ್ತಿ ನೀಡುತ್ತದೆ ಅನಿಸುತ್ತದೆ.
ಬರವಣಿಗೆಗೆ ಟ್ರಾವೆಲ್ ಹೇಗೆ ಪರಿಣಾಮ ಬೀರಿದೆ?
-ಬಹಳ ದೊಡ್ಡ ಪರಿಣಾಮ ಬೀರಿದೆ. ಲವ್ ಓಟಿಪಿ ಸಿನಿಮಾ ಕಥೆಯನ್ನು ಮೊದಲು ಬರೆದಿದ್ದೇ ಸಮುದ್ರ ತೀರದಲ್ಲಿ. ಬೀಚ್ ಬಳಿ ಹೋಗಿ ಸುಮ್ಮನೇ ಕುಳಿತು ಬರೆಯುವುದು ನನಗೆ ಬಹಳ ಮಜಾ ಕೊಡುತ್ತದೆ. ಪ್ರಕೃತಿಯ ನಡುವೆ ಕೂತು ಬರೆಯುವಾಗ ಹೊಸ ಸ್ಫೂರ್ತಿ ಸಿಗುತ್ತದೆ. ಖುಷಿ ಸಿಗುತ್ತದೆ.
ಇದನ್ನೂ ಓದಿ: ಬಿಟ್ಟೆನೆಂದರೂ ಬಿಡದೀ ಪ್ರವಾಸದ ಮಾಯೆ
ಲವ್ ಒಟಿಪಿ ಅನುಭವ ಹೇಳಬಹುದೇ?
-ಈ ಚಿತ್ರದಲ್ಲಿ ಒಂದು ಸನ್ನಿವೇಶವನ್ನು ಉಡುಪಿಯಲ್ಲಿ ಚಿತ್ರೀಕರಣ ಮಾಡಿದ್ದೆವು. ಅಲ್ಲಿಯ ಅನುಭವ ಚೆನ್ನಾಗಿತ್ತು. ಶೂಟ್ ಮಾತ್ರವಲ್ಲ ಸಿನಿಮಾ ಎಡಿಟಿಂಗ್‌ಗೆ ಕೂಡ ಬೀಚ್ ಬಳಿಯೇ ಹೋಗಿದ್ದೆವು. ನಾವೆಲ್ಲ ಸ್ನೇಹಿತರು ದುಬೈಗೆ ಹೋಗಿದ್ದೆವು. ಅಲ್ಲೇ ʼಲವ್ ಒಟಿಪಿʼ ಕಥೆಯ ಮೊದಲ ಡ್ರಾಫ್ಟ್ ಬರೆದಿದ್ದು. ಅಲ್ಲಿ ಒಬ್ಬನೇ ಬೀಚ್‌ಗೆ ಹೋಗಿ ಬೆಳಗ್ಗೆಯಿಂದ ಸಂಜೆಯವರೆಗೂ ಕುಳಿತು ಬರೆಯುತ್ತಿದ್ದೆ. ಬರೆಯುವಾಗ ಮಾತ್ರ ನನಗೊಬ್ಬನೇ ಇರಬೇಕು. ಗೆಳೆಯರ ಜತೆಗೆ ಪ್ರವಾಸಕ್ಕೆ ಹೋದರೂ ಬರೆಯುವ ಸಂದರ್ಭದಲ್ಲಿ ಒಬ್ಬನೇ ಎಲ್ಲದರೂ ದೂರ ಹೋಗಿ ಕುಳಿತುಕೊಂಡು ಬರೆಯುತ್ತೇನೆ. ಆ ಏಕಾಂತ ಬರೆಯಲು ಸಹಾಯ ಮಾಡುತ್ತದೆ.

ನಿಮ್ಮಿಷ್ಟದ ಜಾಗಗಳ ಬಗ್ಗೆ ಹೇಳಬಹುದೇ?
-ನನಗೆ ಯಾವಾಗಲೂ ಖುಷಿ ಕೊಡುವ ಜಾಗವೆಂದರೆ ನಾರ್ವೆ. ಮೊದಲ ಬಾರಿಗೆ ಅಕಿರಾ ಸಿನಿಮಾ ಚಿತ್ರೀಕರಣಕ್ಕೆ ಅಲ್ಲಿಗೆ ಹೋಗಿದ್ದು. ಬಳಿಕ ʼವಾಸು ನಾನ್ ಪಕ್ಕಾ ಕರ್ಷಿಯಲ್ʼ, ʼರಾಮಾರ್ಜುನʼ ಸಿನಿಮಾಗಳನ್ನು ಅಲ್ಲೇ ಶೂಟ್ ಮಾಡಿದೆ. ಆ ಜಾಗ ಎಂದರೆ ಏನೋ ವಿಶೇಷ ಸೆಳೆತ. ಯಾವ ಜಾಗದಲ್ಲಿ ಕ್ಯಾಮರಾ ಇಟ್ಟರೂ ಒಂದು ಫ್ರೇಮ್ ಸಿಗುತ್ತದೆ. ಸುಂದರ ದೇಶವದು. ಯಾವುದೇ ರೀತಿಯ ಮಾಲಿನ್ಯ ಇಲ್ಲದಂಥ ದೇಶ. ಒಂದು ಮಜವಾದ ಸನ್ನಿವೇಶವಿದೆ. ನೀರು ಹುಡುಕಿಕೊಂಡು ಹೋಗಬೇಕಿತ್ತು. ಸ್ಥಳೀಯರೊಬ್ಬರಿಗೆ ನೀರು ಎಲ್ಲಿ ಸಿಗುತ್ತದೆ ಎಂದು ಕೆಳಿದೆ. ಆತ, ʼಇಲ್ಲಿ ಇಷ್ಟು ದೊಡ್ಡ ನದಿಯೇ ಹರಿಯುತ್ತಿದೆʼ ಎಂದ. ಹೊಳೆಯುವಂಥ ನದಿ ಅದಾಗಿತ್ತು. ಅದನ್ನು ಹಾಗೇ ಕುಡಿಯಬಹುದು ಎಂದು ಹೇಳಿದ್ದನ್ನು ಕೇಳಿ ಆಶ್ಚರ್ಯವಾಯಿತು. ಮುಂಚೆ ನದಿ ನೀರನ್ನು ಹಾಗೇ ಕುಡಿಯುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೆ. ಅಲ್ಲಿ ಅನುಭವಕ್ಕೆ ಬಂತು. ದಾರಿಯಲ್ಲಿ ಹೋಗುವಾಗಲೂ ಕಾರ್ ನಿಲ್ಲಿಸಿ ನದಿ ನೀರನ್ನು ಕುಡಿಯುವವರಿದ್ದಾರೆ.
ನೀವು ಹೋಗಬೇಕು ಅಂದುಕೊಂಡಿರುವ ಜಾಗ ಇದೆಯೇ?
-ಕಳೆದ ಕೆಲವು ತಿಂಗಳುಗಳಿಂದ ಕಾಶಿಗೆ ಹೋಗಬೇಕು ಎಂದು ಬಹಳ ಅನಿಸುತ್ತಿದೆ. ಅಲ್ಲಿಗೆ ಹೋಗಿ ಬಂದ ಗೆಳೆಯರೆಲ್ಲ, ಅಲ್ಲೊಂದು ವಿಶೇಷ ವೈಬ್ ಇದೆ, ಹೋಗು ಎಂದು ಒತ್ತಾಯ ಮಾಡಿದ್ದರು. ಈಗ ಯಾಕೋ ಅಲ್ಲಿಗೆ ಹೋಗಬೇಕು ಎಂದು ಬಹಳ ಅನಿಸುತ್ತಿದೆ. ಅಲ್ಲಿ ಹೋಗಿ ಸುಮ್ಮನೆ ಕೂರು, ಮೆಡಿಟೇಟ್ ಮಾಡು, ಏನಾದರು ಬರಿ, ಅಲ್ಲೊಂದು ದೈವಿಕ ಶಕ್ತಿಯಿದೆ ಎಂದು ಗೆಳೆಯರೆಲ್ಲ ಹೇಳಿದ್ದಾರೆ. ಈ ವರ್ಷ ಹೋಗಲೇಬೇಕು ಎಂದುಕೊಂಡಿದ್ದೇನೆ. ಎಲ್ಲ ಜಾಗಗಳಲ್ಲೂ ವಿಶೇಷ ಶಕ್ತಿ ಇದ್ದೇ ಇರುತ್ತದೆ. ಸುಮ್ಮನೇ ಆ ಜಾಗದಲ್ಲಿ ದೇವಾಲಯ ಇರುವುದಿಲ್ಲ. ಕಾಶಿಯಂತೆ ಅರುಣಾಚಲಂ ಕೂಡ ಅಂಥದ್ದೇ ಒಂದು ಜಾಗ. ಅರುಣಾಚಲಂ ಅಲ್ಲೂ ವಿಶೇಷ ಶಕ್ತಿಯಿದೆ.

ಯಾವ ರೀತಿಯ ಪ್ರವಾಸ ನಿಮ್ಮ ಆಯ್ಕೆ? ಫ್ರೆಂಡ್ಸ್ ಜತೆ ಅಥವಾ ಸೋಲೋ?
-ಸೋಲೋ ಟ್ರಿಪ್ ನನ್ನಿಂದ ಸಾಧ್ಯವೇ ಇಲ್ಲ. ಸೋಲೋ ಎಂದರೆ ನನಗೆ ಡಿಪ್ರೆಶನ್ ಫೀಲ್ ಕೊಡುತ್ತದೆ. ಏನೋ ಕಳೆದುಕೊಂಡಂತೆ ಅನುಭವ ನೀಡುತ್ತದೆ. ನನಗೆ ನನ್ನ ಫ್ರೆಂಡ್ಸ್ ಗ್ಯಾಂಗ್ ಬೇಕೇ ಬೇಕು. ಗೆಳೆಯರ ಜತೆಗೆ ಹರಟೆ ಹೊಡಯುತ್ತ, ಮಜಾ ಮಾಡುತ್ತ ಇನ್ನೊಂದು ಜಾಗಕ್ಕೆ ಹೋಗುವ ಖುಷಿಯೇ ಬೇರೆ.
ನಿಮ್ಮಿಷ್ಟದ ಆಹಾರದ ಬಗ್ಗೆ ಹೇಳಬಹುದೇ?
-ನನಗೆ ಭಾರತೀಯ ಆಹಾರಗಳೇ ಹೆಚ್ಚು ಇಷ್ಟ. ಅದರಲ್ಲೂ ದಕ್ಷಿಣ ಭಾರತದ ಆಹಾರಗಳು ಇಷ್ಟ. ಏನೂ ಬೇರೆ ಆಯ್ಕೆಯಿಲ್ಲದಿದ್ದರೆ ಮಾತ್ರ ಬೇರೆ ಆಹಾರ ಟ್ರೈ ಮಾಡುತ್ತೇನೆ. ಇಟಾಲಿಯನ್, ಪಾಸ್ತಾ ಎಲ್ಲ ಮೈಗೆ ಹತ್ತೋದೇ ಇಲ್ಲ. ವಿಚಿತ್ರ ಎಂದರೆ ನನಗೆ ಕೈಯಲ್ಲಿ ತಿಂದರೆ ಮಾತ್ರ ಸಮಾಧಾನ ಆಗುತ್ತದೆ. ಅದೂ ಅಲ್ಲದೆ ಡಯಟ್ ಕೂಡ ಮಾಡಬೇಕಾಗಿರುವುದರಿಂದ ಹೆಚ್ಚು ತಿನ್ನಲೂ ಆಗುವುದಿಲ್ಲ.