ಹಸಿದ ಹುಲಿಯೊಂದಿಗೆ ಮುಖಾಮುಖಿ !
ನನಗೆ ಮಂಗಳೂರು ಕಡೆ ಕಟೀಲು ದುರ್ಗಾ ಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ ದೇವಾಲಯಗಳೆಂದರೆ ಇಷ್ಟ.ಮುರುಡೇಶ್ವರ ನನ್ನ ಫೇವರಿಟ್ ದೇಗುಲ. 2015ರಲ್ಲಿ ಒಮ್ಮೆ ಅನಿರೀಕ್ಷಿತವಾಗಿ ನಾನು ಮುರುಡೇಶ್ವರಕ್ಕೆ ಹೋಗಿ ಮಧ್ಯರಾತ್ರಿ 1 ಗಂಟೆಯ ಹೊತ್ತಿಗೆ ಶಿವನಿಗೆ ಕೈ ಮುಗಿದಿದ್ದೆ.
- ಶಶಿಕರ ಪಾತೂರು
ಅಶ್ವಿನಿ ನಕ್ಷತ್ರ ಧಾರಾವಾಹಿಯಿಂದ ಜೆ.ಕೆ ಎಂದೇ ಹೆಸರಾಗಿರುವ ನಟ ಕಾರ್ತಿಕ್ ಜಯರಾಮ್ ತುಂಬ ವಿಭಿನ್ನ ವ್ಯಕ್ತಿತ್ವದವರು. ಸಿನಿಮಾ, ಬಿಗ್ ಬಾಸ್, ಸಿಸಿಎಲ್ ಕ್ರಿಕೆಟ್ ಹೀಗೆ ಪ್ರತಿ ರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ ಜೆ ಕೆ, 'ಸಿಯಾಕೆ ರಾಮ್' ಧಾರಾವಾಹಿ ಬಳಿಕ ಹಿಂದಿಯಲ್ಲೂ ಖ್ಯಾತರಾದರು. ಮೊದಲಿಂದಲೂ ಕಿರುತೆರೆ ಇರಲಿ ಬೆಳ್ಳಿ ಪರದೆ ಇರಲಿ ಪ್ರಾಜೆಕ್ಟ್ ಗಳ ಆಯ್ಕೆಯಲ್ಲಿ ಇವರು ತುಂಬಾನೇ ಚೂಸಿ. ಪ್ರಸ್ತುತ ಬಾಲಿವುಡ್ ನಲ್ಲಿ 'ಶ್ರೀ ರಾಧಾ ರಮಣ' ಮತ್ತು ಕನ್ನಡದಲ್ಲಿ 'ದಿ ವೀರ್' ಎನ್ನುವ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪ್ರತಿಯೊಂದು ಪ್ರವಾಸದ ಅನುಭವಗಳು ಕೂಡ ರೋಚಕ.
ನಿಮ್ಮ ಮೊದಲ ಪ್ರವಾಸದ ಮರೆಯಲಾಗದ ನೆನಪುಗಳೇನು?
ಮೊದಲ ಬಾರಿ ಮಾಡಿದಂಥ ಮರೆಯಲಾಗದ ಪ್ರವಾಸ ಅಂದರೆ ನನ್ನ ತಂದೆಯ ಜತೆ ಮಾಡಿದಂಥದ್ದು. ಅಪ್ಪ ಸರ್ಕಾರಿ ವೃತ್ತಿಯಲ್ಲಿದ್ದ ಕಾರಣ ಅವರಿಗೆ ಕೌಟುಂಬಿಕ ಪ್ರವಾಸದ ಒಂದು ಪ್ಯಾಕೇಜ್ ಇತ್ತು. ಅವರು ನಮ್ಮನ್ನು ದೆಹಲಿ, ಜೈಪುರ, ಶಿಮ್ಲಗೂ ಕರೆದುಕೊಂಡು ಹೋಗಿದ್ದರು. ನಾನು ಆಗ ಪಿಯು ವಿದ್ಯಾರ್ಥಿ. ನನ್ನ ಪಾಲಿಗೆ ಅದೇ ಮೊದಲ ವಿಮಾನ ಪ್ರಯಾಣವಾಗಿತ್ತು. ಆ 15 ದಿನಗಳ ಪ್ರವಾಸ ತುಂಬ ಚೆನ್ನಾಗಿತ್ತು.

ನಿಮ್ಮ ಮೊದಲ ದೊಡ್ಡ ಪ್ರವಾಸ?
ನಾವು ದೆಹಲಿ ಜೈಪುರದ ಜತೆ ಆಗ್ರಾ, ಮಸ್ಸೂರಿಗೂ ಭೇಟಿ ನೀಡಿದ್ದೆವು. ಹೃಷಿಕೇಶ, ಹರಿದ್ವಾರ ಎಲ್ಲ ಕಡೆಯೂ ಹೋಗಿದ್ದೆವು. ಮಸ್ಸೂರಿಯಲ್ಲಿ ನಾವು 3 ದಿನ ಇರಬೇಕು ಅಂತ ಪ್ಲ್ಯಾನ್ ಮಾಡಿದ್ದೆವು. ಆದರೆ ನೀವು ನಂಬಲ್ಲ; ಅಲ್ಲಿನ ಚಳಿಗೆ ಮೂರು ದಿನ ಕೂಡ ನಾವ್ಯಾರೂ ಕೋಣೆಯೊಳಗಿನಿಂದ ಹೊರಗೆ ಬರಲೇ ಇಲ್ಲ. ಅಷ್ಟು ಥಂಡಿ ಜೀವನದಲ್ಲಿ ಯಾವತ್ತೂ ಅನುಭವಿಸಿರಲಿಲ್ಲ. ಆಗ ಜೈಪುರದ ಚಿತ್ರಮಂದಿರದಲ್ಲಿ 'ಹಮ್ ಆಪ್ಕೆ ಹೈ ಕೌನ್' ಸಿನಿಮಾ 300ನೇ ದಿನದ ಪ್ರದರ್ಶನ ಕಾಣ್ತಿತ್ತು. ನಾವು ಕುಟುಂಬ ಸಮೇತ ಹೋಗಿ ನೋಡಿದ್ದೆವು.
ಇತ್ತೀಚಿನ ಪ್ರವಾಸ?
ಇತ್ತೀಚೆಗೆ ಅಂದರೆ ದುಬೈಗೆ ಕ್ರಿಕೆಟ್ ಆಡೋಕೆ ಹೋಗಿದ್ದೆವು. ಆ ಸಂದರ್ಭದಲ್ಲಿ ನನ್ನ ಬರ್ತ್ ಡೇ ಕೂಡ ಇತ್ತು. ಸಾಮಾನ್ಯವಾಗಿ ಬರ್ತ್ ಡೇ ದಿನ ಮನೇಲೇ ಇರುತ್ತೇನೆ. ಈ ಬಾರಿ ದುಬೈನ ಬೆಸ್ಟ್ ಹೊಟೇಲ್ ನಲ್ಲಿದ್ದೆ. ಮ್ಯಾಚ್ ಮುಗಿಸ್ಕೊಂಡು ಚೆನ್ನಾಗಿ ಸೆಲೆಬ್ರೇಷನ್ ಆಯ್ತು. ಅಲ್ಲಿ ಪಾಮ್ ಜುಮೈರ ಅಂತ ಒಂದು ಪೂಲ್ ರೆಸ್ಟೋರೆಂಟ್ ಇದೆ. ಮಧ್ಯಾಹ್ನದಿಂದ ನೈಟ್ ತನಕವೂ ಅಲ್ಲಿ ಪಾರ್ಟಿ ಇರುತ್ತೆ. ಪೂಲ್ ಒಳಗೆ ಪಾರ್ಟಿ ನಡೆಯುತ್ತೆ. ಜುಮೈರ ಒಳಗೆ ಎಂಟ್ರಿಯಾಗುತ್ತಿದ್ದಂತೆ ಸಿಗುವ ವೈಬೇ ಬೇರೆ. ಹೊಸ ಲೋಕದ ಹಾಗೆ.
ನಿಮ್ಮ ಪ್ರವಾಸದ ಅತ್ಯಂತ ರೋಮಾಂಚಕಾರಿ ಪ್ರಸಂಗ?
ಕೆಲ ವರ್ಷಗಳ ಹಿಂದೆ ಜೈಪುರಕ್ಕೆ ಹೋಗಿದ್ದೆ. ಜಯಪುರದ ಅರಮನೆಯಲ್ಲಿ ಸಾಂಪ್ರದಾಯಿಕ ಉಡುಗೆಗಳ ರಾಯಭಾರಿಯಾಗಿ ಶೂಟಿಂಗ್ ಗೆ ಹೋಗಿದ್ದೆ. ಅಲ್ಲಿಂದ ಒಂದು ಬೆಳಿಗ್ಗೆ ನಾವು ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಟೈಗರ್ ಸಫಾರಿಗೆ ಹೊರಟಿದ್ವಿ. ನಮ್ಮ ಜೀಪ್ ಹೋಗಿ ಹುಲಿ ಪಕ್ಕವೇ ನಿಂತಿತ್ತು. ನಾನು ಮೊದಲ ಬಾರಿ ಹುಲಿಯನ್ನು ಅಷ್ಟು ಹತ್ತಿರದಿಂದ ನೋಡಿದ್ದೆ. ಜೀಪ್ ನಿಂತಿದ್ದೇ ಅದು ನನ್ನತ್ತ ತಿರುಗಿ ನೋಡಿತ್ತು. ಅದರ ಕಣ್ಣುಗಳಲ್ಲಿನ ಕ್ರೌರ್ಯ ಇವತ್ತಿಗೂ ನನ್ನಿಂದ ಮರೆಯೋಕೆ ಆಗಿಲ್ಲ. ಆಗಷ್ಟೇ ಅದು ಕಾಡುಕೋಣವೊಂದನ್ನು ಬೇಟೆಯಾಡಿ ತಿನ್ನುತ್ತಿತ್ತು. ಇದರ ನಡುವೆಯೇ ನನ್ನತ್ತ ನೋಡಿದ ದೃಶ್ಯ ನನ್ನಲ್ಲಿ ಭಯ ಸೃಷ್ಟಿಸಿತ್ತು.
ಪ್ರವಾಸದಲ್ಲಿ ಅತ್ಯಂತ ಖುಷಿ ಕೊಟ್ಟ ಘಟನೆ?
ಯು.ಕೆಗೆ ಹೋಗಿರುವುದು ಮರೆಯಲಾಗದ ಅನುಭವ. ಲಂಡನ್ ನಲ್ಲಿ ಆ್ಯಮ್ ಸ್ಟರ್ ಡ್ಯಾಮ್ ಹೋಗುವುದು ನನ್ನ ಕನಸಾಗಿತ್ತು. 'ಪುಟ 109'ಚಿತ್ರಕ್ಕೆ ಅಲ್ಲಿ ನನಗೆ ಬೆಸ್ಟ್ ಏಷ್ಯನ್ ಆ್ಯಕ್ಟರ್ ಅವಾರ್ಡ್ ಬಂದಿತ್ತು. ಶಾರುಖ್ ಖಾನ್ ಎಲ್ಲ ನಾಮಿನೇಟ್ ಆಗಿದ್ದಂಥ ಸ್ಪರ್ಧೆ ಅದು. ಅಂತಾರಾಷ್ಟ್ರೀಯ ಸಿನಿಮಾಗಳ ಮಧ್ಯೆ ನಮ್ಮ ಪುಟ 109ರ ದೃಶ್ಯವನ್ನು ಪರದೆಯಲ್ಲಿ ಪ್ರದರ್ಶಿಸಿದರು. ಹಾಲಿವುಡ್ ಕಲಾವಿದರು ಕೂಡ ಅಲ್ಲಿದ್ದರು. ಅಲ್ಲಿಂದ ಅದೇ ಖುಷಿಯಲ್ಲಿ ಲಂಡನ್ ನ ಲಾರ್ಡ್ಸ್ ಸ್ಟೇಡಿಯಂ ನೋಡುವ ಆಕಾಂಕ್ಷೆ ಕೂಡ ಪೂರೈಸಿಕೊಂಡೆ. ಕೆಲಸದ ಜತೆ ಜತೆಯಲ್ಲೇ ಇಂಥ ಅನುಭವ ಸಿಕ್ಕರೇನೇ ನಿಜವಾದ ಖುಷಿ.
ನಿಮ್ಮ ಬಕೆಟ್ ಲಿಸ್ಟ್ ತಾಣಗಳು?
ನಾನು ಇದುವರೆಗೂ ಅಮೆರಿಕವನ್ನು ನೋಡೇ ಇಲ್ಲ. ಹಾಗಾಗಿ ಅಮೆರಿಕ ಮತ್ತು ನ್ಯೂಜಿಲೆಂಡ್ ಗೆ ಹೋಗುವುದು ನನ್ನ ಕನಸು. ಭಾರತದಲ್ಲಿ ನಾರ್ಥ್ ಈಸ್ಟ್ ಕಡೆಗೆ ಹೋಗಿಲ್ಲ. ನಾಗಾಲ್ಯಾಂಡ್, ಶಿಲ್ಲಾಂಗ್ ನ ಪ್ರಾಕೃತಿಕ ಸೊಬಗಿನ ಬಗ್ಗೆ ತುಂಬಾ ಕೇಳಿದ್ದೇನೆ. ಅವನ್ನೆಲ್ಲ ಒಮ್ಮೆ ಸವಿಯುವ ಕನಸಿದೆ.
ನಾನು ಅಂಡಮಾನ್ ನಿಕೋಬಾರ್ ಹ್ಯಾವ್ಲಾಕ್ ದ್ವೀಪಕ್ಕೂ ಹೋಗಿದ್ದೆ. ಮುನ್ನಾರ್ ಗೆ ಹೋಗಿದ್ದೇನೆ. ವಯನಾಡಿಗೂ ಹೋಗಿದ್ದೇನೆ.ಆದರೆ ಇದುವರೆಗೂ ಊಟಿಗೆ ಹೋಗುವ ಕನಸು ಈಡೇರಿಲ್ಲ. ಹಾಗಾಗಿ ಊಟಿಗೂ ಹೋಗಬೇಕಿದೆ.

ದೂರ ಪ್ರವಾಸಗಳು ಅಪಾಯಕಾರಿ ಎಂದು ಅನಿಸಿದ್ದಿದೆಯೇ?
ಅಪಾಯ ಆಗಲು ತುಂಬ ದೂರ ಹೋಗಬೇಕಾಗಿಲ್ಲ! ಚಾರ್ಮಾಡಿ ಘಾಟ್ ನಲ್ಲಿ ಒಂದು ಭಯಾನಕ ಅನುಭವ ಆಗಿತ್ತು. ನಾವು ಕುಟುಂಬ ಸಮೇತ ಮಂಗಳೂರಿನ ಒಂದು ದೇವಸ್ಥಾನಕ್ಕೆ ಹೊರಟಿದ್ದೆವು. ನಾನು ಕಾರು ಡ್ರೈವ್ ಮಾಡುತ್ತಿದ್ದೆ. ಹಿಂದುಗಡೆ ಸೀಟಲ್ಲಿ ಅಪ್ಪ, ಅಮ್ಮ ಇದ್ದರೆ ಅಕ್ಕ ನನ್ನ ಪಕ್ಕದಲ್ಲೇ ಇದ್ದರು. ಎದುರುಗಡೆಯಿಂದ ಓವರ್ ಟೇಕ್ ಮಾಡಿಕೊಂಡು ಬಂದ ವಾಹನವೊಂದು ನೇರವಾಗಿ ನನಗೆ ಡಿಕ್ಕಿ ಹೊಡೆಯುವುದಿತ್ತು. ನಾನು ತಕ್ಷಣ ಸಾಧ್ಯವಾದಷ್ಟು ಬದಿಗೆ ತಿರುಗಿಸಿದೆ. ಆತನ ವಾಹನ ದಾಟಿತು. ಮತ್ತೆ ಅಷ್ಟೇ ವೇಗದಲ್ಲಿ ನಾನು ಯಥಾ ಸ್ಥಳಕ್ಕೆ ಕಾರು ತಿರುಗಿಸಿದ್ದೆ. ಯಾಕೆಂದರೆ ಆ ಬದಿಯಲ್ಲಿ ದೊಡ್ಡದೊಂದು ಮರ ಇತ್ತು. ಸೈಡ್ ಕೊಡುವ ಭರದಲ್ಲಿ ನಾನು ಮರಕ್ಕೆ ಗುದ್ದಿಯೇ ಬಿಟ್ಟೆ ಎಂದುಕೊಂಡ ಅಕ್ಕ ತುಂಬಾನೇ ಭಯಪಟ್ಟಿದ್ದಳು. ನಾನು ವಾಹನಕ್ಕೂ ಮರಕ್ಕೂ ತಾಗಿಸದೆ ಪಾರಾದೆ. ನನ್ನ ಡ್ರೈವಿಂಗ್ ಗಿಂತಲೂ ಕಾರೇ ಅಪಘಾತದಿಂದ ಪಾರು ಮಾಡಿತ್ತು.
ದೇವಸ್ಥಾನದ ದಾರಿಯಲ್ಲಿ ಎದುರಾಗುವ ಇಂಥ ಅಪಾಯಗಳು ನಂಬಿಕೆಯನ್ನೇ ಪ್ರಶ್ನಿಸುವಂತೆ ಮಾಡಿದೆಯೇ?
ಹಾಗೇನಿಲ್ಲ. ಬದಲಿಗೆ ದೇವರಲ್ಲಿನ ನಂಬಿಕೆ ಹೆಚ್ಚಿಸುವಂಥ ಘಟನೆಗಳು ನಡೆದಿವೆ. ನನಗೆ ಮಂಗಳೂರು ಕಡೆ ಕಟೀಲು ದುರ್ಗಾ ಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ ದೇವಾಲಯಗಳೆಂದರೆ ಇಷ್ಟ.ಮುರುಡೇಶ್ವರ ನನ್ನ ಫೇವರಿಟ್ ದೇಗುಲ. 2015ರಲ್ಲಿ ಒಮ್ಮೆ ಅನಿರೀಕ್ಷಿತವಾಗಿ ನಾನು ಮುರುಡೇಶ್ವರಕ್ಕೆ ಹೋಗಿ ಮಧ್ಯರಾತ್ರಿ 1 ಗಂಟೆಯ ಹೊತ್ತಿಗೆ ಶಿವನಿಗೆ ಕೈ ಮುಗಿದಿದ್ದೆ. ನೀವು ನಂಬಲಿಕ್ಕಿಲ್ಲ; ಮೂರೇ ದಿನದಲ್ಲಿ ನನಗೆ ಹಿಂದಿಯ 'ಸಿಯಾ ಕೆ ರಾಮ್' ನಲ್ಲಿ ರಾವಣನ ಪಾತ್ರಕ್ಕೆ ಆಹ್ವಾನ ದೊರಕಿತ್ತು! ಆ ಬಳಿಕವಂತೂ ನನಗೆ ಮುರುಡೇಶ್ವರದಲ್ಲಿ ಭಕ್ತಿ ಹೆಚ್ಚಾಯಿತು.
ಹೊಸದಾಗಿ ಪ್ರವಾಸ ಹೋಗುವವರಿಗೆ ಕಿವಿಮಾತು?
ಯಾವುದೇ ಪ್ರವಾಸ ಇರಲಿ ಸರಿಯಾಗಿ ಯೋಜನೆ ಹಾಕಿಕೊಂಡು ಹೋಗಬೇಕು. ಮೊದಲೇ ಜಾಗ ನೋಡಿಕೊಳ್ಳುವುದು ಮಾತ್ರವಲ್ಲ. ನಾವು ಅಲ್ಲಿರುವ ದಿನಾಂಕಕ್ಕೆ ಸರಿಯಾಗಿ ಹೊಟೇಲ್ ಕೂಡ ಬುಕ್ ಮಾಡಿಟ್ಟುಕೊಳ್ಳುವುದು ತುಂಬ ಸಹಕಾರಿ. ಇನ್ನು ಪ್ರವಾಸ ಇಷ್ಟಪಡುವವರನ್ನೇ ನಿಮ್ಮ ಜತೆಗೆ ಕರೆದುಕೊಂಡು ಹೋಗಬೇಕು. ನಿಮಗೆ ಇಷ್ಟವಾದವರು ಜತೆಗಿರಬೇಕು ಎನ್ನುವ ಕಾರಣಕ್ಕೆ ಪ್ರವಾಸ ಇಷ್ಟ ಇಲ್ಲದವರನ್ನು ಜತೆಗೆ ಬಲವಂತವಾಗಿ ಕರೆದೊಯ್ಯಲೇಬಾರದು. ಅವರು ತಾವೂ ಎಂಜಾಯ್ ಮಾಡುವುದಿಲ್ಲ. ನಿಮಗೂ ಬಿಡುವುದಿಲ್ಲ. ಅವರಿಗೆ ಪ್ರವಾಸ ಪ್ರಯಾಸವಾದರೆ ಅದರ ನೆಗೆಟಿವ್ ಪರಿಣಾಮ ಇಡೀ ತಂಡದ ಮೇಲೆ ಬೀಳುವುದು ಖಚಿತ.