Tuesday, April 14, 2026
Tuesday, April 14, 2026

ಹಾರುವ ವಿಮಾನದಿಂದ ಕೆಳಗೆ ಜಂಪ್ ಮಾಡಿದ್ದೆ

ದುಡ್ಡು, ಆರೋಗ್ಯ, ಅವಕಾಶವಿದ್ದರೂ ಅನೇಕರು ಪ್ರವಾಸ ಹೋಗುವುದಿಲ್ಲ. ಆದರೆ ಇನ್ನೂ ಅನೇಕರಿಗೆ ಇದ್ಯಾವುದೂ ಇಲ್ಲವಾದರೂ ಪ್ರವಾಸಿ ಜೀವನ ಬೇಕೆನಿಸುತ್ತದೆ. ಜ್ಞಾನ ಹೆಚ್ಚಿಸಿಕೊಳ್ಳಲು, ಪ್ರಪಂಚದ ಬಗ್ಗೆ ತಿಳಿವಳಿಕೆ ಪಡೆಯಲು ಪ್ರವಾಸದಿಂದ ಮಾತ್ರವೇ ಸಾಧ್ಯ ಎನ್ನುತ್ತಾರೆ ನಟಿ ಕಾವ್ಯಾ ಶಾ. ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು, ಸದ್ಯ ಸೋಷಿಯಲ್‌ ಮೀಡಿಯಾ ಕಂಟೆಂಟ್‌ಗಳ ಮೂಲಕವೂ ಮನೆ ಮಾತಾಗಿರುವ ಕಾವ್ಯಾ, ಪ್ರವಾಸ ಎಂದರೆ ನೋ ಪ್ರಯಾಸ ಎನ್ನುತ್ತಾರೆ. ಅವರ ಪ್ರವಾಸಿ ಜೀವನ ಈ ವಾರದ ಪ್ರವಾಸಿ ಪ್ರಪಂಚದಲ್ಲಿ.

ವರುಷಕ್ಕೊಂದು ವಿದೇಶ ಪ್ರವಾಸ

ಮಿ ಟೈಮ್‌ ಎಂಬುದು ಪ್ರತಿಯೊಬ್ಬ ವ್ಯಕ್ತಿಯೂ ತನಗಾಗಿಯೇ ಹೊಂದಿಸಿಕೊಳ್ಳಬೇಕಾದ ಸಮಯ. ಕೆಲಸ ಒತ್ತಡದ ನಡುವೆ ಚಿಕ್ಕದೊಂದು ಮಿ ಟೈಮ್‌ ಬೇಕೆನಿಸಿದಾಗ ದೇಶದೊಳಗೇ ಅಥವಾ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ಹೋಗಿಬರುತ್ತೇನೆ. ಮೈಸೂರು, ಸಕಲೇಶಪುರ, ಹಾಸನಕ್ಕೆ ಆಗಾಗ ಹೋಗುತ್ತಿರುತ್ತೇನೆ. ವರ್ಷಕ್ಕೊಮ್ಮೆಯಾದರೂ ಹೊರದೇಶಗಳಿಗೆ ಪ್ರಯಾಣಿಸುತ್ತೇನೆ. ಅದರಲ್ಲೂ ಒಮ್ಮೆಯೂ ಭೇಟಿ ನೀಡದ ದೇಶವನ್ನೇ ನೋಡಿ ಬರಬರಲು ಪ್ರಯತ್ನಿಸುತ್ತೇನೆ.

ಇದನ್ನೂ ಓದಿ: ಲವ್‌ ಮಾಕ್ಟೇಲ್‌ಗಾಗಿ ಊರೂರು ತಿರುಗಿದ ಡಾರ್ಲಿಂಗ್‌

ಮರೆಯಲಾಗದ ಹಾಂಕಾಂಗ್‌ ಪ್ರವಾಸ

ಇತ್ತೀಚೆಗಷ್ಟೇ ಡಿಸ್ನಿಲ್ಯಾಂಡ್‌ ನೋಡುವುದಕ್ಕಾಗಿಯೇ ಗ್ರೂಪ್‌ ಟೂರ್‌ ಜತೆಗೆ ಹಾಂಗ್ ಕಾಂಗ್‌ಗೆ ಹೋಗಿದ್ದೆ. ಜತೆಗೆ ಅಲ್ಲಿನ ಪ್ರವಾಸಿ ಸ್ಥಳಗಳ ಭೇಟಿಯೂ ಮಾಡಿದ್ದೆ. ಬಹುದಿನಗಳಿಂದಲೂ ಡಿಸ್ನಿಲ್ಯಾಂಡ್‌ನಲ್ಲಿ ಇಂಡಿಯನ್‌ ಪ್ರಿನ್ಸೆಸ್‌ನಂತೆ ಗೌನ್‌ ತೊಟ್ಟುಕೊಂಡು ಫೊಟೋಶೂಟ್‌ ಮಾಡಿಸಿಕೊಳ್ಳುವ ಆಸೆ ನನಗಿತ್ತು. ಆದರೆ ಟೂರ್ ಆಪರೇಟರ್ಸ್‌ ಗೊಂದಲದಿಂದಾಗಿ ನಾನು ಒಬ್ಬಳೇ ಅಲ್ಲಿನ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಡಿಸ್ನಿಲ್ಯಾಂಡ್‌ ತಲುಪುವಂತಾಗಿತ್ತು. ಅದೇನೇ ಆದರೂ ನನ್ನಾಸೆಯನ್ನು ಈಡೇರಿಸಿಕೊಂಡ ಖುಷಿಯಿದೆ.

New Project (22)

ಚೀನಾದಲ್ಲಿ ಇಂಗ್ಲಿಷ್‌ ಮಾತನಾಡೋರಿಲ್ಲ..

ಯಾವುದೋ ಕೆಲಸದ ನಿಮಿತ್ತ ಚೀನಾಗೆ ಹೊರಟಿದ್ದ ಪತಿಯ ಜತೆ ಪ್ರವಾಸಕ್ಕಾಗಿ ನಾನೂ ಸೇರಿಕೊಂಡಿದ್ದೆ. 10 ದಿನಗಳ ಕಾಲ ಅಲ್ಲಿ ಸಮಯ ಕಳೆಯುವ ಅವಕಾಶ ನನ್ನದಾಗಿತ್ತು. ಅವರು ಕೆಲಸಕ್ಕಾಗಿ ಹೋದಾಗ ನಾನು ಒಬ್ಬಂಟಿಯಾಗಿ ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ ಬಳಸಿಕೊಂಡು ಎಲ್ಲೆಡೆ ಸುತ್ತಾಡಿಬರುತ್ತಿದ್ದೆ. ಜಪಾನ್‌ನಲ್ಲಿ ಎಲ್ಲೂ ಇಂಗ್ಲಿಷ್‌ ಬೋರ್ಡ್‌ಗಳು ಕಾಣಸಿಗುವುದಿಲ್ಲ. ಆಂಗ್ಲ ಭಾಷೆ ಮಾತನಾಡುವವರ ಸಂಖ್ಯೆಯೂ ಕಡಿಮೆ. ಟ್ರಾನ್ಸ್ ಲೇಟರ್‌ ಆಗಾಗ ಕೈಕೊಡುತ್ತದೆ. ಆದರೂ ನಾನು ಛಲ ಬಿಡದೆ ಅಲ್ಲಿನ ಪ್ರಮುಖ ನಗರಗಳನ್ನು ನೋಡಿಬಂದಿದ್ದೇನೆ.

ಮೊದಲ ಅಂತಾರಾಷ್ಟ್ರೀಯ ಪ್ರವಾಸ

ನನಗೆ 21 ವರ್ಷ ವಯಸ್ಸಾಗಿದ್ದಾಗಲೇ ಮೊದಲ ಬಾರಿಗೆ ಸಿಂಗಾಪುರದಲ್ಲಿ ಡ್ಯಾನ್ಸ್‌ ಇವೆಂಟ್‌ನಲ್ಲಿ ಭಾಗಿಯಾಗಲು ವಿಮಾನವೇರಿದ್ದೆ. ಅದು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರವಾಸವಾಗಿತ್ತು. ಕನ್ನಡ ಸಂಘದ ಕಾರ್ಯಕ್ರಮವಾದ್ದರಿಂದ ಶಿವರಾಜ್‌ ಕುಮಾರ್‌, ಯಶ್‌, ಐಂದ್ರಿತಾ, ದಿಗಂತ್‌, ಪ್ರಜ್ವಲ್ ನಂಥ ಅನೇಕ ನಟ ನಟಿಯರನ್ನು ಕರೆಸಿದ್ದರು. ನಾನಾಗ ಬ್ಯಾಗ್ರೌಂಡ್‌ ಡ್ಯಾನ್ಸರ್‌ ಆಗಿ ಪಾಲ್ಗೊಳ್ಳುವುದಕ್ಕೆ ಹೋಗಿದ್ದೆ. ಅದೊಂದು ಮರೆಯಲಾಗದ ಅನುಭವ.

ನನ್ನೂರು ಶ್ರವಣಬೆಳಗೊಳ

ಅದೆಷ್ಟು ಬಾರಿ ಹೋದರೂ ಮತ್ತೆ ಮತ್ತೆ ಹೋಗಬೇಕೆನಿಸುವ ಜಗತ್ತಿನ ಏಕೈಕ ಜಾಗ ನನ್ನ ಊರು ಶ್ರವಣಬೆಳಗೊಳ. ಅಲ್ಲಿನ ಇತಿಹಾಸ, ದೇವಾಲಯಗಳು ಮತ್ತು ವಾಸ್ತುಶಿಲ್ಪವೆಂದರೆ ನನಗೆ ಆಪ್ತವೆನಿಸುತ್ತದೆ. ಅದಲ್ಲದೆ ತಮಿಳುನಾಡಿನ ತಂಜಾವೂರು ಸೇರಿದಂತೆ ಅನೇಕ ದೇವಾಲಯಗಳು,ಗುಜರಾತ್‌, ಕೋಲ್ಕತ್ತಾದಂಥ ಒಂದಷ್ಟು ಪ್ರದೇಶಗಳು ನನಗೆ ಬಹಳ ಇಷ್ಟ.

New Project (21)

ಶಿಲೆಗಳು ಸಂಗೀತವಾ ಹಾಡಿವೆ…

ದೇವಾಲಯಗಳ ವಾಸ್ತುಶಿಲ್ಪವನ್ನು ನೋಡುವ ಸಲುವಾಗಿಯೇ ಅನೇಕ ಧಾರ್ಮಿಕ ಪ್ರವಾಸಗಳನ್ನು ಕೈಗೊಂಡಿದ್ದೇನೆ. ತಂತ್ರಜ್ಞಾನವೇ ಅಭಿವೃದ್ಧಿ ಹೊಂದದಿರುವ ಆ ಕಾಲದಲ್ಲಿ ಶಿಲ್ಪಕಲಾಕೃತಿಗಳು, ಅತ್ಯದ್ಭುತವಾದ ದೇವಾಲಯಗಳನ್ನು ನಿರ್ಮಿಸಿರುವ ಶಿಲ್ಪಿಗಳ ಬಗ್ಗೆ ಎಂದಿಗೂ ನನಗೆ ಅಚ್ಚರಿಯೆನಿಸುತ್ತದೆ. ಅಲ್ಲದೆ ಸ್ಥಳ ಮಹಿಮೆಯನ್ನು ತಿಳಿಯುವುದಕ್ಕಾಗಿಯೂ ಅನೇಕ ಧಾರ್ಮಿಕ ಪ್ರವಾಸಗಳನ್ನು ಕೈಗೊಂಡಿರುವುದಿದೆ.

ಬರುವಾಗ ಏನು ತಂದೆ ಎನ್ನದಿರಿ

ಯಾವುದೇ ಪ್ರವಾಸಕ್ಕೆ ಹೋದರೂ ಬರುವಾಗ ಸಿಹಿ ನೆನಪುಗಳನ್ನು ಹೊತ್ತು ತರುತ್ತೇನೆ. ಅದರ ಜತೆಗೆ ಯಾವುದೇ ದೇಶಕ್ಕೆ ಹೋದರೂ ಮಿಸ್‌ ಮಾಡದೆಯೇ ಅಲ್ಲಿನ ಫ್ರಿಜ್ ಮ್ಯಾಗ್ನೆಟ್‌ ತರುತ್ತೇನೆ. ಸಾಧ್ಯವಾದಾಗಲೆಲ್ಲಾ ಪ್ರವಾಸ ಕೊನೆಯ ದಿನದಂದು ಅಲ್ಲಿನ ವಿಶೇಷ ಹಣ್ಣುಗಳ ಜತೆಗೆ ಬೆಂಗಳೂರಿಗೆ ಮರಳುತ್ತೇನೆ.

New Project (20)

ಸಿಂಗಾಪುರ-ಲಂಡನ್‌ನಲ್ಲಿ ಮುಂದಿನ ಜೀವನ

ಮುಂದಿನ ಜೀವನವನ್ನು ಯಾವ ದೇಶದಲ್ಲಿ ಕಳೆಯಲು ಬಯಸುತ್ತೀಯೆಂದು ಯಾರೇ ಕೇಳಿದರೂ ನನ್ನ ಬಳಿ ಎರಡು ಉತ್ತರಗಳಿವೆ. ಮೊದಲನೆಯದು ಸಿಂಗಾಪುರ. ಭಾರತಕ್ಕೆ ಸಮೀಪದಲ್ಲಿರುವ ಈ ದೇಶದಲ್ಲಿ ನಮ್ಮಲ್ಲಿರುವಂತೆಯೇ ದೇವಾಲಯಗಳಿದ್ದು, ನಮ್ಮ ಸಂಸ್ಕೃತಿಯನ್ನೇ ಪ್ರತಿಬಿಂಬಿಸುವಂತಿದೆ. ಭಾರತದಲ್ಲೇ ಇರುವ ಅನುಭವವನ್ನೂ ನೀಡುತ್ತದೆ. ಎರಡನೆಯದು ಲಂಡನ್‌. ಇಲ್ಲಿನ ಶಿಕ್ಷಣರಂಗ, ಜನಸಾಮಾನ್ಯರಿಗೆ ಸರಕಾರದಿಂದ ಸಿಗುವ ಸೌಕರ್ಯ, ಸವಲತ್ತುಗಳೆಲ್ಲವೂ ಮೆಚ್ಚುಗೆಯಾಗಿದೆ.

ಪ್ರವಾಸ ಮುಗಿದಾಗಲೇ ಬ್ಯಾಗ್‌ ಹೆವಿ

ನಾನು ಟ್ರಾವೆಲ್‌ ಮಾಡುವ ಯೋಜನೆಯೊಂದಿಗೆ ಬ್ಯಾಗ್‌ ಪ್ಯಾಕ್‌ ಮಾಡುವಾಗ ಯಾವತ್ತೂ ಬ್ಯಾಗ್‌ ತೀರಾ ಲೈಟ್‌ ಆಗಿರುತ್ತದೆ. ಆದರೆ ಪ್ರವಾಸದ ವೇಳೆ ಹೆಚ್ಚು ಶಾಪಿಂಗ್‌ ಮಾಡುವುದರಿಂದ ಪ್ರಯಾಣ ಮುಗಿಸಿ ಬರುವಾಗ ಬೇಡವೆಂದರೂ ಬ್ಯಾಗ್‌ ಭಾರವೆನಿಸಿಬಿಡುತ್ತದೆ.

ವಿದೇಶಿ ನೆಲದಲ್ಲಿ ಪ್ಯೂರ್‌ ವೆಜ್‌ ಕಷ್ಟವಾದೀತು

ವೆಜಿಟೇರಿಯನ್‌ ಆಗಿರುವುದರಿಂದ ವಿದೇಶಗಳಿಗೆ ಪ್ರಯಾಣಿಸಿದಾಗ ಆಹಾರದ ಸಮಸ್ಯೆಯಾಗುತ್ತದೆ. ಇದೇ ಕಾರಣಕ್ಕೆ ಪ್ರತಿ ದಿನದ ಒಂದು ಹೊತ್ತಿನ ಆಹಾರಕ್ಕಾಗಿ ಶೇಕ್ಸ್‌ನಂಥ ಆಯ್ಕೆಯನ್ನು ಜತೆಗಿಟ್ಟುಕೊಂಡಿರುತ್ತೇನೆ. ಉಳಿದಂತೆ ಅಲ್ಲಿನ ಹಣ್ಣುಗಳನ್ನು ಸೇವಿಸುತ್ತೇನೆ. ಲೋಕಲ್‌ ಕ್ಯುಸಿನ್‌ ಬೇಕೆಂದರೆ ಸ್ವಲ್ಪ ಹುಡುಕಬೇಕಾಗುತ್ತದೆ. ಅದಕ್ಕಾಗಿಯೇ ಬ್ರೆಡ್‌, ಬನ್‌, ಕೇಕ್‌, ಬಿಸ್ಕೆಟ್‌ಗಳನ್ನು ಸೇವಿಸಿ ದಿನ ದೂಡುತ್ತೇನೆ.

ಟ್ರಾವೆಲ್‌ ಜತೆಗೆ ಅಡ್ವೆಂಚರ್ ನನಗಿಷ್ಟ. ದುಬೈ ನಲ್ಲಿ ಸ್ಕೈ ಡೈವ್‌, ಅಂಡಮಾನ್‌ ನಲ್ಲಿ ಅಂಡರ್ ವಾಟರ್‌ ಮಾಡಿದ್ದೇನೆ. ಅಡ್ವೆಂಚರ್‌ ಎಂಬುದು ಬೇರೆಯದೇ ಪ್ರಪಂಚ. ಮೊದಲಿನಿಂದಲೂ ಹೈಟ್‌ ಫೋಬಿಯಾ ಇತ್ತಾದರೂ ನೃತ್ಯದ ಮೂಲಕ ಅದನ್ನು ಕಡಿಮೆ ಮಾಡಿಕೊಂಡಿದ್ದೆ. ಸೇಫ್ಟಿ ಇಲ್ಲದೆಯೇ ರಿಂಗ್‌ ನಲ್ಲಿ ಡ್ಯಾನ್ಸ್‌ ಮಾಡುವುದು ಅಭ್ಯಾಸ ಮಾಡಿಕೊಂಡಿದ್ದೆ. ಹೀಗೆ ಭಯ ಕಡಿಮೆಯಾದ ನಂತರ ದುಬೈ ಪ್ರವಾಸದ ವೇಳೆ ಏರೋಪ್ಲೇನ್‌ನಿಂದ ಕೆಳಕ್ಕೆ ಹಾರಿದಾಗಲೂ ನನಗೆ ಭಯವೆನಿಸಲೇ ಇಲ್ಲ. ಬದಲಾಗಿ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಲೇ ಭೂಮಿಯ ಸೌಂದರ್ಯವನ್ನು ನೋಡಿದ್ದೆ.

ಸೂಕ್ತ ಸಮಯಕ್ಕಾಗಿ ಕಾಯಬೇಕಿಲ್ಲ

ನಮ್ಮ ಸುತ್ತಲೂ ಟ್ರಾವೆಲ್‌ ಮಾಡದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ಸಾಕಷ್ಟು ಜನರ ಬಳಿ ಪಾಸ್‌ ಪೋರ್ಟ್‌ ಇಲ್ಲ. ಇದ್ದರೂ ಪಾಸ್‌ಪೋರ್ಟ್‌ನ ಅವಧಿ ಮುಗಿದಿರುತ್ತದೆ. ಪ್ರವಾಸವೆಂದರೆ ಬರಿಯ ವಿದೇಶವೇ ಆಗಬೇಕೆಂದಿಲ್ಲ. ಬಿಡುವು ಮಾಡಿಕೊಂಡು ನಿಮ್ಮ ಸುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿನೀಡಿ. ಅದಕ್ಕಾಗಿ ಯಾರನ್ನೂ ಕಾಯಬೇಕಿಲ್ಲ. ನಮಗಾಗಿ ನಾವೇ ಸಮಯ ನೀಡಬೇಕು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್