ಕುಂತಿಬೆಟ್ಟ ಇಷ್ಟ, ಮನೆ ಬಿಟ್ಟಿರೋದೇ ಕಷ್ಟ!
ಸಿಂಗಾಪುರ ಪ್ರಯಾಣದ ವೇಳೆ ಹ್ಯೂಜ್ ಟರ್ಬ್ಯುಲೆನ್ಸ್ ಆಗಿತ್ತು..ವಿಮಾನ ಲ್ಯಾಂಡಿಂಗ್ ಆಗುವ ಸಾಧ್ಯತೆಯೇ ಇಲ್ಲವೆಂಬಂತೆ ಕ್ಯಾಪ್ಟನ್ ಹೇಳಿದ್ದರು. ನನಗೆ ಬದುಕುವ ಆಸೆಯೇ ಇಲ್ಲವಾಗಿತ್ತು. ಸಾವು ಕಣ್ಣೆದುರಿಗೆಯೇ ಇದೆಯೇನೋ ಎನಿಸಿಬಿಟ್ಟಿತ್ತು. ಈಗಲೂ ಆ ದಿನವನ್ನು ನೆನಪಿಸಿಕೊಂಡರೆ ಭಯವೆನಿಸುತ್ತದೆ.
ಕನ್ನಡ ಮನರಂಜನಾ ವಾಹಿನಿಗಳಲ್ಲಿ ಶ್ರೀರಸ್ತು ಶುಭಮಸ್ತು, ನಿನಗಾಗಿ, ಸಿಂಧು ಭೈರವಿಯಂಥ ಧಾರವಾಹಿಗಳಿಗಾಗಿ ಬಣ್ಣ ಹಚ್ಚಿಕೊಂಡು ಎಲ್ಲರ ಮನೆ ಮಾತಾಗಿರುವ ನಟಿ ಚಂದನಾ ರಾಘವೇಂದ್ರ. ಧಾರವಾಹಿಗಳಿಗಷ್ಟೇ ಸೀಮಿತವಾಗದೆ, ಸಿನಿಮಾಗಳಲ್ಲೂ ನಟನೆ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಪತಿ ಸಂಕೇತ್ ಜತೆಗೂಡಿ ಇತ್ತೀಚೆಗಷ್ಟೇ ರಸಾರ್ಣವ ಕ್ರಿಯೇಶನ್ಸ್ ಎಂಬ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿರುವ ಇವರು, ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ತಿರುಗಾಟ ಶುರುಮಾಡುತ್ತಾರೆ. ಟ್ರಕ್ಕಿಂಗ್, ನೇಚರ್ ನ ನಡುವೆ ಕಳೆದುಹೋಗಲು ಬಯಸುವ ಇವರ ಪ್ರವಾಸಿ ಪ್ರೀತಿಯ ಬಗ್ಗೆ ಇಂದಿನ ಪ್ರವಾಸಿ ಪ್ರಪಂಚದಲ್ಲಿದೆ ಮಾಹಿತಿ.
ಪ್ರಕೃತಿಯೊಂದಿಗೆ ನನ್ನ ಪಯಣ
ಚಿಕ್ಕ ವಯಸ್ಸಿನಿಂದಲೂ ನಾನು ಸ್ಪೋರ್ಟ್ಸ್ ಪರ್ಸನ್. ಸ್ಕೂಲ್, ಕಾಲೇಜಿನಿಂದ ಅನೇಕ ಪ್ರವಾಸಗಳಿಗೆ ಹೋಗಿದ್ದೆ. ಅಲ್ಲಿಂದ ಶುರುವಾದ ನನ್ನ ಟ್ರಾವೆಲ್ ಸ್ಟೋರಿ ಇಂದಿಗೂ ಮುಂದುವರಿಯುತ್ತಲೇ ಇದ್ದು, ಪ್ರಕೃತಿಯೊಂದಿಗೆ ಹೆಚ್ಚಿಗೆ ಬೆರೆದುಕೊಂಡಿದೆ. ಹಲವು ವರ್ಷಗಳಿಂದಲೂ ಸಾಕಷ್ಟು ಟ್ರಕ್ಕಿಂಗ್ ಗಳಿಗೆ ಹೋಗುತ್ತಲೇ ಇದ್ದೇನೆ.. ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ಅನೇಕ ಕಡೆಗಳಲ್ಲಿ ಕಷ್ಟಕರವಾದ ಚಾರಣವನ್ನು ಮಾಡಿದ್ದೇನೆ. ಪ್ರವಾಸ, ಪ್ರಯಾಣದ ಬಗ್ಗೆ ಇಂದಿಗೂ ಅದೇ ಪ್ರೀತಿ ನನ್ನಲ್ಲಿದೆ.

ಬೆಸ್ಟ್ ಟ್ರಾವೆಲ್ ಡೈರಿ…
ಸ್ಥಳೀಯ, ರಾಜ್ಯ ಮಟ್ಟದ, ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಪ್ರವಾಸಗಳನ್ನು ಮಾಡಿದ್ದೇನೆ. ಆದರೆ ಅಷ್ಟರಲ್ಲಿ ಯಾವುದು ಬೆಟ್ಸ್ ಅಂದರೆ ಇತ್ತೀಚೆಗಷ್ಟೇ ನನ್ನ ಪತಿ, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಿಕ್ಕಿಂ ಹಾಗೂ ಡಾರ್ಜಿಲಿಂಗ್ ಪ್ರವಾಸ ಕೈಗೊಂಡಿದ್ದೆ. ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳು ನನಗೆ ತುಂಬಾ ಆಪ್ತವೆನಿಸಿದೆ.
ಪ್ರತಿ ಪ್ರವಾಸವೂ ವಿಭಿನ್ನ
ಏನಿಲ್ಲವೆಂದರೂ 6-7 ಅಂತಾರಾಷ್ಟ್ರೀಯ ಪ್ರವಾಸಗಳನ್ನು ಕೈಗೊಂಡಿದ್ದೇನೆ. ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್, ಯುರೋಪ್, ಶ್ರೀಲಂಕಾ, ದುಬೈ, ಹೀಗೆ ಅನೇಕ ಕಡೆ ಸುತ್ತಾಡಿದ್ದೇನೆ. ಆದರೆ ನನಗೆ ಪ್ರತಿ ಪ್ರವಾಸವೂ ವಿಭಿನ್ನವೆನಿಸಿದೆ. ಕೆಲಸದ ವಿಚಾರಕ್ಕಾಗಿ ಅನೇಕ ಪ್ರವಾಸಗಳನ್ನು ಕೈಗೊಂಡಿದ್ದರೆ, ಮತ್ತೆ ಕೆಲವು ಖುಷಿಗಾಗಿ, ಕೆಲಸದ ಒತ್ತಡದಿಂದ ಹೊರಬರುವುದಕ್ಕಾಗಿ. ವಿದೇಶ ಪ್ರವಾಸಗಳಲ್ಲಿ ನನ್ನ ಅಚ್ಚುಮೆಚ್ಚಿನದು ಯುರೋಪ್ ಭೇಟಿ. ವಿಭಿನ್ನ ಸಂಪ್ರದಾಯಗಳನ್ನು ನೋಡಿ, ತಿಳಿಯುವ ಆಸಕ್ತಿಯಿರುವ ನನಗೆ ಇದು ವಿಶೇಷ ಅನುಭವಗಳನ್ನು ನೀಡಿದೆ. ಅಲ್ಲಿನ ವಿಶಿಷ್ಟ ಸಂಪ್ರದಾಯ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಆಚರಣೆಗಳು ಎಲ್ಲವೂ ಮೋಡಿ ಮಾಡುತ್ತವೆ. ಯುರೋಪ್ ನಲ್ಲಿ ಮುಖ್ಯವಾಗಿ ಪ್ರೇಗ್ ಗೆ ಹೋಗಿದ್ದೆ. ಅಲ್ಲಿ ಹಳೆಯ ಚರ್ಚ್ ಗಳು, ಸ್ಮಾರಕಗಳೂ ಇದ್ದು, ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ಫಾರಿನ್ ನಲ್ಲಿ ನಿರಾಹಾರ..
ಹೆಚ್ಚಾಗಿ ವಿದೇಶಗಳಿಗೆ ಹೋದಾಗಲೆಲ್ಲಾ ನನಗೆ ಆಹಾರದ್ದೇ ಸಮಸ್ಯೆಯಾಗುತ್ತದೆ. ಜರ್ಮನಿಗೆ ಹೋದಾಗಲೂ ಹಾಗೆಯೇ ಆಗಿತ್ತು. ಅಲ್ಲೆಲ್ಲಾ ಬೇಕನ್ಸ್, ನಾನ್ ವೆಜ್ ಬಳಸುವವರೇ ಹೆಚ್ಚು. ಸಸ್ಯಾಹಾರಿಗಳಿಗೆ ಬಹಳ ಕಷ್ಟವೆನಿಸಬಹುದು. ಮಲೇಷ್ಯಾ, ಬ್ಯಾಂಕಾಕ್ ನಲ್ಲೂ ಇದೇ ಸಮಸ್ಯೆ ನನಗೆ ಎದುರಾಗಿತ್ತು. ಆಹಾರ ತಯಾರಿಯಲ್ಲಿ ಫಿಶ್ ಆಯಿಲ್ ಬಳಸುತ್ತಾರೆ..ಈ ಕಾರಣದಿಂದಲೇ ಬೆಳಗ್ಗಿನ ಉಪಹಾರಕ್ಕೆ ನಾನು ಬರೀ ಬ್ರೆಡ್ ಆಂಡ್ ಬಟರ್, ಕಾರ್ನ್ ಫ್ಲೆಕ್ಸ್, ಅಲ್ಲದಿದ್ದರೆ ಹಣ್ಣು- ತರಕಾರಿಗಳನ್ನು ತಿಂದು ಹಸಿವು ತಣಿಸಿಕೊಳುತ್ತಿದ್ದೆ.
ಸಾವು ಕಣ್ಣೆದುರಿಗಿದ್ದ ಕ್ಷಣ
ಪ್ರವಾಸದ ವೇಳೆ ಸಾಕಷ್ಟು ಸಿಹಿ, ಕಹಿ ಅನುಭವಗಳಾಗಿವೆ. ಅವುಗಳಲ್ಲಿ ಮೊದಲು ನೆನಪಿಗೆ ಬರುವುದು ಸಿಂಗಾಪುರದ ಪ್ರಯಾಣ. ಆ ಪ್ರಯಾಣದ ವೇಳೆ ಹ್ಯೂಜ್ ಟರ್ಬ್ಯುಲೆನ್ಸ್ ಆಗಿತ್ತು..ವಿಮಾನ ಲ್ಯಾಂಡಿಂಗ್ ಆಗುವ ಸಾಧ್ಯತೆಯೇ ಇಲ್ಲವೆಂಬಂತೆ ಕ್ಯಾಪ್ಟನ್ ಹೇಳಿದ್ದರು. ನನಗೆ ಬದುಕುವ ಆಸೆಯೇ ಇಲ್ಲವಾಗಿತ್ತು. ಸಾವು ಕಣ್ಣೆದುರಿಗೆಯೇ ಇದೆಯೇನೋ ಎನಿಸಿಬಿಟ್ಟಿತ್ತು. ಈಗಲೂ ಆ ದಿನವನ್ನು ನೆನಪಿಸಿಕೊಂಡರೆ ಭಯವೆನಿಸುತ್ತದೆ.

ಐ ಲವ್ ಟು ಟ್ರಾವೆಲ್ ಇನ್ ಕ್ರೂಸ್
ನನಗೆ ವಿಮಾನ ಪ್ರಯಾಣವೆಂದರೆ ಅಷ್ಟೊಂದು ಇಷ್ಟವೇನಲ್ಲ. ಅನಿವಾರ್ಯವಷ್ಟೇ. ಐ ಲವ್ ಟು ಟ್ರಾವೆಲ್ ಇನ್ ಕ್ರೂಸ್.. ಅದರಲ್ಲೂ ಮಲೇಷ್ಯಾದಲ್ಲಿ ರಿವರ್ ಟ್ರಾನ್ಸ್‌ಪೋರ್ಟೇಷನ್ ಹೆಚ್ಚಿದ್ದು, ಪ್ರಮುಖ ನಗರಗಳನ್ನು ಸಂಪರ್ಕಿಸಲು ಅದುವೇ ಸಹಕಾರಿ. ನಮಗೆ ಇಲ್ಲಿ ಬಸ್ ಇರುವಂತೆ ಅಲ್ಲಿ ಬೋಟ್, ಮಿನಿ ಕ್ರೂಸ್ ಗಳನ್ನು ಬಳಕೆ ಮಾಡಬಹುದು. ಅದೊಂದು ವಿಭಿನ್ನ ಅನುಭವವೇ ಸರಿ..
ಹೋಮ್ ಸಿಕ್ನೆಸ್ ಗುರು..!
ನನ್ನ ಪತಿ ಸಂಕೇತ್ ಅವರಿಗೆ ತುಂಬಾ ಟ್ರಾವೆಲ್ ಕ್ರೇಜ್. ನಡು ರಾತ್ರಿ ಎಬ್ಬಿಸಿ ಸುತ್ತಾಡೋಕೆ ಹೋಗೋಣ ಎಂದರೂ ಸರಿ ಎಂದು ಹೊರಟೇಬಿಡುತ್ತಾರೆ. ಆದರೆ ನಾನೇ ಸ್ವಲ್ಪ ಹೋಮ್ ಸಿಕ್ನೆಸ್ ಹೆಚ್ಚಿರುವವಳು. ಯಾವುದೇ ಜಾಗಕ್ಕೆ ಹೋದರೂ ಒಂದು ವಾರ, ಹದಿನೈದು ದಿನಗಳಿಗಿಂತ ಹೆಚ್ಚಿಗೆ ಕೂರುವುದು ನನಗೆ ಕಷ್ಟ. ಹಾಗೆ ನೋಡಿದರೆ, ಮದುವೆಯಾಗುತ್ತಲೇ ಇಟಲಿಗೆ ಹನಿಮೂನ್ ಹೋಗುವ ಪ್ಲ್ಯಾನ್ ಇತ್ತು. ಸಿನಿಮಾ, ಧಾರವಾಹಿಗಳನ್ನು ಜತೆಯಾಗಿ ಮಾಡುತ್ತಿದ್ದರಿಂದ ಎಲ್ಲ ಪ್ಲ್ಯಾನ್ ಗಳೂ ಕ್ಯಾನ್ಸಲ್ ಮಾಡಬೇಕಾಯಿತು. ವೃತ್ತಿ ಜೀವನದ ನಡುವೆ ಬಿಡುವ ಮಾಡಿಕೊಂಡು ಸುತ್ತಾಡಬೇಕೆನಿಸುತ್ತದೆ..

ಆಹಾರಕ್ಕೂ ವಿಹಾರಕ್ಕೂ ಬೆಂಗಳೂರೇ ಬೆಸ್ಟ್
ನಮ್ಮ ಬೆಂಗಳೂರು ಸುಂದರವಾದ ಪ್ರವಾಸಿತಾಣ. ಆಹಾರ-ವಿಹಾರಕ್ಕೂ ಸೈ ಎನಿಸಿಕೊಂಡಿರುವ ಬೆಂಗಳೂರಿನ ಸದಾಶಿವನಗರ ನನ್ನ ನೆಚ್ಚಿನ ಪರಿಸರ. ಬೆಂಗಳೂರಿನಲ್ಲಿ ರೋಡ್ ಟ್ರಾವೆಲ್ ಮಾಡುವುದೆಂದರೆ ನನಗೆ ಖುಷಿ ಕೊಡುತ್ತದೆ.
ಅದೆಷ್ಟೇ ಹೈಟೆಕ್ ಸಿಟಿ ಎನಿಸಿಕೊಂಡರೂ ಇಲ್ಲಿ ವಿಭಿನ್ನ ಬಗೆಯ ಸ್ಟ್ರೀಟ್ ಫುಡ್ ತಿನ್ನಲು ಬಯಸುವವರಿಗೆ ಜಯನಗರ, ವಿವಿ ಪುರಂ ಫುಡ್ ಸ್ಟ್ರೀಟ್ ಗಳಿವೆ. ಎಂಜಿ ರಸ್ತೆ, ಸದಾಶಿವ ನಗರದ ಸುತ್ತಮುತ್ತ ಹೈಟೆಕ್ ಕ್ಯುಸೈನ್ಸ್ ಸಿಗುತ್ತದೆ. ಹ್ಯಾಂಡ್ ಲೂಮ್ ವರ್ಕ್, ಪೈಂಟಿಂಗ್ಸ್, ಹ್ಯಾಂಡಿಕ್ರಾಫ್ಸ್ಟ್ ಬೇಕೆನ್ನುವವರಿಗೆ ನಗರದ ಚಿತ್ರಕಲಾಪರಿಷತ್ ಇದೆ. ನಾನು ಶಂಕರ್ ನಾಗ್ ಸರ್ ಫ್ಯಾನ್ ಆಗಿರುವುದರಿಂದ ರಂಗಶಂಕರಕ್ಕೆ ಭೇಟಿ ನೀಡುವುದೆಂದರೂ ನನಗೆ ಬಹಳ ಇಷ್ಟ.
ಟ್ರಕ್ಕಿಂಗ್ ಈಸ್ ಆಲ್ವೇಸ್ ಬೆಸ್ಟ್
ಚಾರಣಕ್ಕೆ ಹೋಗುವುದೆಂದರೆ ನನಗೆ ನೆಚ್ಚಿನ ಚಟುವಟಿಕೆ. ಕರ್ನಾಟಕದ ಮಂಡ್ಯದಲ್ಲಿರುವ ಕುಂತಿ ಬೆಟ್ಟ ನನ್ನ ಫೇವರೆಟ್ ಟ್ರಕ್ಕಿಂಗ್ ತಾಣ..ಅಲ್ಲಿಗೆ ಕುಟುಂಬದ ಜತೆ ಅನೇಕ ಬಾರಿ ಹೋಗಿದ್ದೆ. ಮಡಿಕೇರಿ ಸಮೀಪದ ತಡಿಯಾಂಡಮೋಳ್ ಬೆಟ್ಟ ಮಾತ್ರವಲ್ಲದೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಕುಮಾರ ಪರ್ವತ ಚಾರಣವೂ ಕಷ್ಟಕರವಾದರೂ ಇಷ್ಟವಾಗುತ್ತದೆ. ಬೆಂಗಳೂರು ಸಮೀಪದಲ್ಲೇ ಚಾರಣ ಮಾಡಬೇಕೆಂದುಕೊಳ್ಳುವವರು ಸ್ಕಂದಗಿರಿಗೆ ಹೋಗಬಹುದು. ಬೆಳಗಿನ ಜಾವ ಇಲ್ಲಿಗೆ ಭೇಟಿ ನೀಡಿದರೆ ಸೂರ್ಯೋದಯವನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಕೈಲಾಸದ ಅನುಭವ ಪಡೆಯುವುದಂತೂ ಸುಳ್ಳಲ್ಲ.

ಟ್ರಕ್ಕಿಂಗ್ ಟಿಪ್ಸ್ ಏನ್ ಗೊತ್ತಾ..?
ಘಾಟಿ ಪ್ರದೇಶಗಲ್ಲಿ ಟ್ರಕ್ ಮಾಡುವಾಗ ಜಿಗಣೆಗಳ ಕಾಟ ಹೆಚ್ಚಿಗೆ ಇರುತ್ತದೆ. ಜಿಗಣೆ ಕಚ್ಚಿದ ತಕ್ಷಣ ಅದನ್ನು ಕಿತ್ತು ಬಿಡುವುದಲ್ಲ. ಬದಲಾಗಿ ನಿಮ್ಮ ಬಳಿ ಬಾಡಿ ಸ್ಪ್ರೇ ಇದ್ದಲ್ಲಿ ಸ್ಪ್ರೇ ಮಾಡಿಬಿಡಿ. ಇಲ್ಲವಾದರೆ ಉಪ್ಪು ಇದ್ದರೆ ಉಪ್ಪನ್ನು ಹಾಕಿ ಜಿಗಣೆಯಿಂದ ರಕ್ಷಣೆ ಪಡೆಯಬಹುದು. ಟ್ರಕ್ಕಿಂಗ್ ವೇಳೆ ಫಸ್ಟ್ ಏಯ್ಡ್ ಕಿಟ್ ಜತೆಗಿರಲಿ. ಚಾರಣದ ವೇಳೆ ಮಂಜಿನಿಂದ ಆರೋಗ್ಯ ಕೆಡದಂತೆ ನೋಡಿಕೊಳ್ಳಲು ರೈನ್ ಜಾಕೆಟ್ಸ್, ಮಫ್ಲರ್, ಸಾಕ್ಸ್ ಬಳಕೆ ಮಾಡುವುದು ಉತ್ತಮ.