Tuesday, September 16, 2025
Tuesday, September 16, 2025

ಟೂರು ಮಾಡಲು ಕಾರು ಬೆಸ್ಟು- ಐಶಾನಿ ಶೆಟ್ಟಿ

ಹಾಂಗ್ ಕಾಂಗ್ ಸಿಟಿ ತುಂಬ ಚೆನ್ನಾಗಿದೆ. ಅದೇ ರೀತಿ ಪ್ಲಾಜ ಎನ್ನುವ ನಗರದಲ್ಲಿ ಸ್ಟ್ರೀಟ್ ಶಾಪಿಂಗ್ ವ್ಯವಸ್ಥೆ ಕೂಡ ಚೆನ್ನಾಗಿದೆ. ಸಾಕಷ್ಟು ಅದ್ಧೂರಿ ಅಂಗಡಿಗಳ ಹಾಗೆ ಸಾಮಾನ್ಯ ರೀತಿಯ ಮಾರಾಟವೂ ಇದೆ. ಅಲ್ಲಿ ಸುತ್ತಾಡಬೇಕಾದರೆ ನನಗೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನೆನಪಾಗಿದ್ದು ಸುಳ್ಳಲ್ಲ.

- ಶಶಿಕರ ಪಾತೂರು

ವಾಸ್ತುಪ್ರಕಾರ ಚಿತ್ರದ ಮೂಲಕ ಚಿತ್ರರಂಗದಲ್ಲಿ ನೆಲೆಯೂರಿದ ಐಶಾನಿ ಶೆಟ್ಟಿಗೆ ಇನ್ನಷ್ಟು ಖ್ಯಾತಿ ಸಿಕ್ಕಿದ್ದು ನಡುವೆ ಅಂತರವಿರಲಿ ಎಂಬ ಚಿತ್ರದ ಶಾಕುಂತ್ಲೆ ಸಿಕ್ಕಳು ಸುಮ್ ಸುಮ್ನೆ ನಕ್ಕಳು.. ಗೀತೆಯಿಂದ. ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಹೆಸರು ಮಾಡಿರುವ ಐಶಾನಿ ಶೆಟ್ಟಿ ಈಗ ಸ್ವತಃ ನಿರ್ಮಾಣ ಸಂಸ್ಥೆ ಶುರುಮಾಡಿ ನಿರ್ದೇಶನಕ್ಕೂ ಮುಂದಾಗಿರುವುದು ಕೂಡ ಹೊಸ ವಿಷಯವೇನಲ್ಲ. ಆದರೆ ಪ್ರವಾಸ ಇಷ್ಟ ಪಡುವ ಐಶಾನಿ ಕೆಲದಿನಗಳ ಹಿಂದಷ್ಟೇ ಹಾಂಗ್ ಕಾಂಗ್ ಟೂರ್ ಮಾಡಿ ಬಂದಿದ್ದಾರೆ. ಈ ಹೊತ್ತಿನಲ್ಲಿ ಪ್ರವಾಸದ ಕುರಿತಾದ ತಮ್ಮ ಸಂಪೂರ್ಣ ದೃಷ್ಟಿಕೋನವನ್ನು ಪ್ರವಾಸಿ ಪ್ರಪಂಚದೊಂದಿಗೆ ಬಿಡಿಸಿಟ್ಟಿದ್ದಾರೆ.

ನಿಮ್ಮ ಮೊದಲ ಪ್ರವಾಸದ ನೆನಪು ಯಾವುದು?

ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ಇಲ್ಲಿನದೇ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದೇನೆ. ಹೀಗಾಗಿ ಮೊದಲ ಬಾರಿ ದೂರದ ಊರಿಗೆ ಪ್ರವಾಸ ಹೋಗಿರುವುದು ಅಂದರೆ ಕೇರಳ ಮತ್ತು ಗೋವಾಗೆ. ಅದು ಅಂದು ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರೌಢ ಶಾಲೆಯಿಂದ ಹೋದಂಥ ಪ್ರವಾಸ ಅನುಭವ. ಉಳಿದಂತೆ ಬೆಂಗಳೂರಿನಲ್ಲೇ ಸಾಕಷ್ಟು ರೆಸಾರ್ಟ್ ಗಳಿಗೆಲ್ಲ ಟ್ರಿಪ್ ಹೋಗಿದ್ದೆವು. ರಜಾ‌ ದಿನಗಳಲ್ಲಿ ಪುತ್ತೂರಿನಲ್ಲಿರುವ ನಮ್ಮ ಕುಟುಂಬದ ಮನೆಗೆ ಹೋಗುವುದೇ ಒಂದು ರೀತಿ ಪ್ರವಾಸದಂಥ ಅನುಭವವಾಗಿರುತ್ತಿತ್ತು.

WhatsApp Image 2025-09-16 at 5.37.51 AM

ನೀವು ಇತ್ತೀಚೆಗೆ ಪ್ರವಾಸ ಹೋದಂಥ ಜಾಗ ಯಾವುದು?

ಇತ್ತೀಚೆಗಷ್ಟೇ ಹಾಂಗ್ ಕಾಂಗ್ ಗೆ ಹೋಗಿದ್ದೆವು. ಅಲ್ಲಿ ನನ್ನ ಅತ್ತೆ ವಾಸವಾಗಿದ್ದಾರೆ.‌ ನನ್ನ ಅಣ್ಣ ಮಖಾವ್ ನಲ್ಲಿರುವುದು. ಹಾಗಾಗಿ ಹಾಂಗ್ ಕಾಂಗ್ ಮತ್ತು ಮಖಾವ್ ಎನ್ನುವ ಎರಡೂ ಕಡೆಗಳಲ್ಲಿಯೂ ಸುಮಾರು 15 ದಿನಗಳ‌ ಕಾಲ ತಿರುಗಾಡಿದ್ದೆ. ಅದೊಂದು ದ್ವೀಪ. ಹಾಗಾಗಿ ಅಲ್ಲಿ ವಿಮಾನ ಭೂಸ್ಪರ್ಶ ಪಡೆಯುತ್ತಿರುವಾಗಲೇ ಸಮುದ್ರದ ಮಧ್ಯದ ಆ ಭೂಪ್ರದೇಶ ಆಕರ್ಷಕವಾಗಿ ಕಂಡಿತ್ತು. ಅದೊಂದು ತುಂಬಾ ಚೆನ್ನಾಗಿ ಅಭಿವೃದ್ಧಿ ಹೊಂದಿರುವಂಥ ನಗರ.‌ ಅಂಥ ನೀಟ್, ಕ್ಲೀನ್ ಸಿಟಿಯನ್ನು ನನ್ನ ಬಾಳಲ್ಲಿ ನೋಡಿರುವುದು ಅದೇ ಪ್ರಥಮ! ಪ್ರತಿಯೊಬ್ಬ ಸಾರ್ವಜನಿಕರು ಕೂಡ ಶಿಸ್ತಾಗಿ ನಿಯಮಗಳನ್ನು ಅನುಸರಿಸುತ್ತಿದ್ದರು. ಸಾರ್ವಜನಿಕ‌ ಸಾರಿಗೆ ಕೂಡ ಕಡಿಮೆ ದರದಲ್ಲೇ ಲಭ್ಯವಿತ್ತು.

ಹಾಂಗ್ ಕಾಂಗ್ ನಲ್ಲಿ ನಿಮಗೆ ತೀರ ಹೊಸದಾಗಿ ಕಂಡ ಸಂಗತಿಗಳೇನು?

ಹಾಂಗ್ ಕಾಂಗ್ ಸಿಟಿ ತುಂಬ ಚೆನ್ನಾಗಿದೆ. ಅದೇ ರೀತಿ ಪ್ಲಾಜ ಎನ್ನುವ ನಗರದಲ್ಲಿ ಸ್ಟ್ರೀಟ್ ಶಾಪಿಂಗ್ ವ್ಯವಸ್ಥೆ ಕೂಡ ಚೆನ್ನಾಗಿದೆ. ಸಾಕಷ್ಟು ಅದ್ಧೂರಿ ಅಂಗಡಿಗಳ ಹಾಗೆ ಸಾಮಾನ್ಯ ರೀತಿಯ ಮಾರಾಟವೂ ಇದೆ. ಅಲ್ಲಿ ಸುತ್ತಾಡಬೇಕಾದರೆ ನನಗೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನೆನಪಾಗಿದ್ದು ಸುಳ್ಳಲ್ಲ.

ನನಗೆ ಹೆಚ್ಚು ಆಕರ್ಷಕವಾಗಿ ಕಾಣಿಸಿದ್ದು ಅಲ್ಲಿನ ಮಂದಿಯ ದೈಹಿಕ ಆಕಾರ.‌ ಪ್ರತಿಯೊಬ್ಬರು ಕೂಡ ಫಿಟ್ ಆ್ಯಂಡ್ ಫೈನಾಗಿದ್ದರು. ಬಹುಶಃ ಅವರೆಲ್ಲ ಸಾಕಷ್ಟು ದೈಹಿಕ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂದು ನನ್ನ ಭಾವನೆ. ನಾ‌ ಕಂಡಂತೆ ಪ್ರತಿಯೊಬ್ಬರೂ ಅವರವರದೇ ಕೆಲಸಗಳಲ್ಲಿ ಬ್ಯುಸಿಯಾಗಿರುವಂತೆ ಇತ್ತು.

ಅಲ್ಲಿನವರ ಫಿಟ್ ನೆಸ್ ನಲ್ಲಿ ಆಹಾರ ಪದ್ಧತಿಯ ಪ್ರಭಾವ ಕೂಡ ಇರಬಹುದಲ್ಲವೇ?

ಖಂಡಿತವಾಗಿ. ಆಹಾರ ಪದ್ಧತಿಯೂ ಅಷ್ಟೇ ಆಸಕ್ತಿಕರ. ನಿಜವಾದ ಚೈನೀಸ್ ಆಹಾರ ಅಲ್ಲಿತ್ತು. ಅಂದರೆ ಅದು ಇಂಡಿಯನ್ ಚೈನೀಸ್ ಅಲ್ಲ.‌ ಅವುಗಳನ್ನೆಲ್ಲ ಟ್ರೈ ಮಾಡಿದ್ದೆ. ಹೆಚ್ಚಾಗಿ ಮೆಣಸು, ಕರಿಮೆಣಸು ಮತ್ತು ಬೆಳ್ಳುಳ್ಳಿ ಬಳಸಿದ ಆಹಾರಗಳೇ ಇದ್ದವು. ಅಲ್ಲಿನ ಮಂದಿ ಕೋಳಿಗಿಂತ ಹೆಚ್ಚಾಗಿ ಹಂದಿಯನ್ನು ಸೇವಿಸುತ್ತಿದ್ದರು. ಅವರ ಸಾಂಪ್ರದಾಯಿಕ ಆಹಾರಗಳು ಪೋರ್ಕ್ ನಲ್ಲೇ ಇದ್ದವು. ನನಗೆ ಕೊಡವ ಶೈಲಿಯಲ್ಲಿನ ಪೋರ್ಕ್ ಅಷ್ಟೇ ತಿಂದು ಅಭ್ಯಾಸ ಇತ್ತು. ಹಾಗಾಗಿ ನನಗೆ ಹೊಂದಿಕೊಳ್ಳುವಂಥ ಆಹಾರಗಳನ್ನೆಲ್ಲ ಸೇವಿಸಿ ನೋಡಿದ್ದೆ.

ಹಾಂಗ್ ಕಾಂಗ್ ನಲ್ಲಿ ಹೊಟೇಲ್ ಉದ್ಯಮಗಳು ಯಾವ ರೀತಿಯಲ್ಲಿವೆ?

ಹೊಟೇಲ್ ವಿಚಾರಕ್ಕೆ ಬಂದರೆ ನನಗೆ ಹಾಂಗ್ ಕಾಂಗ್ ಗಿಂತ ಮಖಾವ್ ಬಗ್ಗೆ ಹೇಳುವುದಿದೆ. ಮಖಾವ್ ಎನ್ನುವುದು ಹಾಂಗ್ ಕಾಂಗ್ ನಿಂದ ವಿಭಿನ್ನ ಪ್ರದೇಶ. ಹೆಚ್ಚು ಜೀವಂತಿಕೆ ತೋರುತ್ತಿದ್ದಂಥ ಜಾಗ. ಹೆಚ್ಚು ಕ್ಯಾಸಿನೋಗಳು ಇದ್ದವು. ಅಲ್ಲಿನ ಹೊಟೇಲ್ ಗಳ ವಾಸ್ತುಶಿಲ್ಪ ಶೈಲಿ ಕೂಡ ವಿಭಿನ್ನವಾಗಿತ್ತು. ಸಾಕಷ್ಟು ಹೊಟೇಲ್ ಗಳಿದ್ದು, ಪ್ರತಿಯೊಂದು ಕೂಡ ಒಂದೊಂದು ಯುರೋಪಿಯನ್ ದೇಶಗಳ ಥೀಮ್ ಒಳಗೊಂಡಿತ್ತು. ಲಂಡನ್, ಇಟಲಿ, ಪ್ಯಾರಿಸ್ ಹೀಗೆ ದೇಶಗಳ ಥೀಮ್ ಹೊಂದಿರುವ ಈ‌ ಹೊಟೇಲ್ ಗಳ ಸಮುಚ್ಛಯವನ್ನು ಒಂದರೊಳಗೆ ಒಂದರಂತೆ ಬೆಸೆಯಲಾಗಿತ್ತು. ಅವುಗಳ‌ ಒಳಭಾಗದಲ್ಲಿ ಮಾಲ್ ಗಳಿದ್ದು ಆ ಮಾಲ್ ನಿಂದಲೇ ಮತ್ತೊಂದು ಹೊಟೇಲ್ ಗೆ ಪ್ರವೇಶಿಸಬಹುದು. ಹೀಗೆ ನಡೆದಾಡುತ್ತಲೇ ಪೂರ್ತಿ ನಗರವನ್ನು ಒಂದು ಸುತ್ತು ಹಾಕುವಂತಿದೆ. ನಾವು ರಾತ್ರಿಯಿಂದ ಮುಂಜಾನೆ ಮೂರು ಗಂಟೆಯವರೆಗೂ ಅಡ್ಡಾಡಿದ್ದೇವೆ. ಈ ಹೊಟೇಲ್ ಗಳಲ್ಲಿ ಆಂಗ್ಲಭಾಷೆ ಕೇಳಿಸಬಹುದು ಬಿಟ್ಟರೆ ನಗರದಲ್ಲಿ ಇಂಗ್ಲಿಷ್ ಬಳಸುವವರೇ ವಿರಳ. ಬಹುಶಃ ಇಲ್ಲಿಗೆ ಚೈನಾದ ಪ್ರವಾಸಿಗರೇ ಹೆಚ್ಚು ಬರುತ್ತಿರುವುದೇ ಇದಕ್ಕೆ ಕಾರಣ ಇರಬಹುದು. ಮಖಾವ್ ನಲ್ಲಿ ಭಾರತೀಯರು ಕಡಿಮೆ. ಹೀಗಾಗಿಯೇ ಭಾರತೀಯ ಹೊಟೇಲ್ ಗಳು ಕಾಣಿಸಲಿಲ್ಲ. ಈ ಬೃಹತ್ ಹೊಟೇಲ್ ಗಳ‌‌ ಒಳಗೆ ಎಲ್ಲಾದರೊಂದು ಸಣ್ಣ ಇಂಡಿಯನ್ ರೆಸ್ಟೋರೆಂಟ್ ಸಿಕ್ಕರೆ ಅದೇ ಹೆಚ್ಚು.

WhatsApp Image 2025-09-16 at 5.38.38 AM

ನಿಮ್ಮ ಕುಟುಂಬದ ಮೂಲವಾದ ಪುತ್ತೂರು ಪರಿಸರಕ್ಕೆ ಹೋದಾಗ ಹೇಗೆ ಸಂಭ್ರಮಿಸುತ್ತೀರಿ?

ಊರಿಗೆ ಹೋದರೆ ಪ್ರಯಾಣ ಪ್ರವಾಸದಂತೆ ಇರುವುದೇ ಹೊರತು, ನಾನು ಅಲ್ಲಿನ ಪ್ರವಾಸಿ ತಾಣಗಳನ್ನು ಸಂದರ್ಶಿಸುವುದಿಲ್ಲ. ನನ್ನ ಅಜ್ಜಿ, ದೊಡ್ಡಮ್ಮಂದಿರು ಇರುವ ಮನೆ ಅಲ್ಲಿದೆ. ಅಲ್ಲೇ ಹತ್ತಿರದಲ್ಲಿ ನಾಲ್ಕೈದು ಊರುಗಳಿವೆ. ನನ್ನ ತಾಯಿಗೆ ಒಂದಷ್ಟು ಸಹೋದರಿಯರಿದ್ದಾರೆ. ಅವರೆಲ್ಲರ ಮನೆಗೆ ಹೋಗುತ್ತಿರುತ್ತೇನೆ. ಹೀಗಾಗಿ ಆ ಊರುಗಳೆಲ್ಲ ಚೆನ್ನಾಗಿ ಪರಿಚಯವಿದೆ. ತಿಂಗಳಾಡಿ, ಈಶ್ವರ ಮಂಗಲ, ಆದೂರು ಮೊದಲಾದ ಸ್ಥಳಗಳಲ್ಲಿ ಪ್ರಯಾಣಿಸುತ್ತಿರುತ್ತೇನೆ.

ನಿಮ್ಮ ಪ್ರಕಾರ ರಾಜ್ಯದೊಳಗೆ ನೀವು ಸಲಹೆ ನೀಡುವಂಥ ಪ್ರವಾಸಿ ತಾಣಗಳು ಯಾವುದು?

ಒಂದು ಊರು ಎಂದೊಡನೆ ಪ್ರವಾಸಕ್ಕೆ ಜನಪ್ರಿಯವಾಗಿರುವ ಜಾಗವನ್ನಷ್ಟೇ ಆಯ್ದುಕೊಳ್ಳಬಾರದು‌‌. ಉದಾಹರಣೆಗೆ ಮಂಗಳೂರು ಅಂದರೆ ಪಣಂಬೂರು ಕಡಲತೀರ, ಮಚಲಿ ಹೋಟೆಲ್ ಎನ್ನುವಲ್ಲಿಗೆ ಮುಗಿಯುವುದಿಲ್ಲ. ಮಂಗಳೂರಿನ ಒಳಬೀದಿಗಳಲ್ಲಿ ಸಾಗಿದರೆ ನಗರದ ವಾಸ್ತುಶಿಲ್ಪ ಶೈಲಿ ಎಷ್ಟೊಂದು ವಿಭಿನ್ನವಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ ಬೆಂಗಳೂರಿಗೆ ಬಂದರೆ ಜಯನಗರದಂಥ ಆಕರ್ಷಕ ಪ್ರದೇಶ ಬೇರೆ ನನಗೆ ಗೊತ್ತಿಲ್ಲ. ಇನ್ನೂ ತನ್ನತನವನ್ನು ಉಳಿಸಿಕೊಂಡಿರುವ ಜಯನಗರದ ಹಾಗೆ ರಾಜ್ಯದೊಳಗೆ ನಾನು ಇಷ್ಟಪಡುವುದು ಮೈಸೂರನ್ನು. ಚಾಮುಂಡಿ ಬೆಟ್ಟಕ್ಕೆ ಹೋಗುವಾಗ ಕಾಣಿಸುವ ಪೂರ್ತಿ ನಗರದ ದೃಶ್ಯವೊಂದೇ ನಾಡಿನ ಬಗ್ಗೆ ಪ್ರೀತಿ ಮೂಡಿಸುತ್ತದೆ. ನನಗೆ ಪ್ರಾಕೃತಿಕ ಸೌಂದರ್ಯ ಇರುವ ಜಾಗ ಇಷ್ಟ. ಮುಂದೆ ಯಾವತ್ತಾದರೂ ಟ್ರೆಕ್ಕಿಂಗ್ ಮಾಡುವ ಆಸಕ್ತಿ ಇದೆ.

ನಗರ ಪ್ರದೇಶಗಳಲ್ಲಿ ಆದರೆ ಸ್ಥಳೀಯರ ಜತೆ ಹೆಚ್ಚು ಬೆರೆಯಲು, ಅರ್ಥಮಾಡಿಕೊಳ್ಳಲು ಆಸಕ್ತಿ ತೋರುತ್ತೇನೆ. ಪ್ರವಾಸದ ವೇಳೆ ನಮ್ಮದೇ ಕಾರು ಇದ್ದಲ್ಲಿ ಉತ್ತಮ. ಆಗ ನಮಗೆ ಆಸಕ್ತಿ ಮೂಡಿಸುವತ್ತ ನಾವೇ ಡ್ರೈವ್ ಮಾಡಿಕೊಳ್ಳಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್