Sunday, October 19, 2025
Sunday, October 19, 2025

ಲಾಂಗ್‌ ಡ್ರೈವ್‌ ಮಾಡುವ ಖುಷಿಯೇ ಬೇರೆ …

ನನಗಿನ್ನೂ ಬಾಯ್‌ ಫ್ರೆಂಡ್‌ ಇಲ್ಲ. ಆದರೆ ಮುಂದೆ ಬಾಯ್‌ ಫ್ರೆಂಡ್‌ ಜತೆ ಎಲ್ಲಾದರೂ ಸುತ್ತಾಡಲು ಹೋಗುವುದಾದರೆ ಕಡಲತೀರವೇ ನನ್ನ ಆಯ್ಕೆ. ಗ್ರೇಟ್‌ ಸನ್‌ ಸೆಟ್‌, ಬೀಚ್‌ ಹಾಗೂ ಆ ಸುಂದರ ವಾತಾವರಣದಲ್ಲಿ ನನ್ನ ಹುಡುಗನ ಜತೆ ಕಳೆಯುವ ಸಂತಸದ ಕ್ಷಣಗಳು…

ಟ್ರಾವೆಲ್‌ ಇಷ್ಟವಿಲ್ಲ ಎನ್ನುವವರು ಬಹಳ ಕಡಿಮೆ.ಅಂಥ ವ್ಯಕ್ತಿಗಳಿದ್ದರೆ ಅವರ ಆಯಸ್ಸು ಬಹಳ ಕಡಿಮೆಯಿರಬಹುದು. ಯಾಕೆಂದರೆ ಇಂದಿನ ಜೀವನ ಶೈಲಿಯಲ್ಲಿ ಒತ್ತಡದಿಂದ ಹೊರಬರಬೇಕಾದರೆ ಹೊಸ ಪ್ರಪಂಚವನ್ನು ಹುಡುಕಲೇಬೇಕು. ಟ್ರಾವೆಲ್‌ ಪರ್ಸನ್‌ ಅಲ್ಲದವರಾದರೆ ಅವರಲ್ಲಿ ಜೀವಂತಿಕೆಯೇ ಇರುವುದಿಲ್ಲ ಎನ್ನುತ್ತಾರೆ ನಟಿ ಪಾವನಾ ಗೌಡ. 'ಗೊಂಬೆಗಳ ಲವ್' ಚಿತ್ರದ ಮೂಲಕ 2013ರಲ್ಲಿ ನಟನೆಗೆ ಪದಾರ್ಪಣೆ ಮಾಡಿದ ಪವಿತ್ರ ಅವರು, ನಂತರ 'ಜಟ್ಟ', 'ಆಟಗಾರ', 'ತೂತು ಮಡಿಕೆ' , 'ವಿಂಧ್ಯಾ ವಿಕ್ಟಿಮ್ ವರ್ಡಿಕ್ಟ್ V3' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರವಾಸಿ ಜೀವನದ ಬಗ್ಗೆ ಪಾವನಾ ಗೌಡ ಮಾತುಗಳು ಪ್ರವಾಸಿಗರಿಗಾಗಿ..

ಜಿಂದಗೀ ನಾ ಮಿಲೇಗೀ ದುಬಾರಾ..

ಪ್ರಯಾಣಕ್ಕೆ ಸಂಬಂಧಪಟ್ಟ ಅನೇಕ ಸಿನಿಮಾಗಳಿವೆ. ಅವುಗಳಲ್ಲಿ ನನಗಿಷ್ಟವಾದುದು ಝೋಯಾ ಅಖ್ತರ್‌ ನಿರ್ದೇಶನದ ʻಜಿಂದಗೀ ನಾ ಮಿಲೇಗೀ ದುಬಾರಾʼ. ಜೀವನವನ್ನು ಪ್ರಯಾಣದ ಮೂಲಕ ಕಂಡುಕೊಳ್ಳುವ ವಿಭಿನ್ನ ಚಲನಚಿತ್ರವದು. ಪ್ರಯಾಣದ ಮೂಲಕವೇ ಆ ಪಾತ್ರದ ಕಂಡುಕೊಳ್ಳುವಿಕೆ ಈ ಚಿತ್ರದ ಪ್ರಮುಖ ಆಕರ್ಷಣೆ. ಕನ್ನಡದಲ್ಲೂ ಇಂಥ ಅನೇಕ ಸಿನಿಮಾಗಳಿವೆ. ಚಾರ್ಲಿ ಸಿನಿಮಾ ಕನ್ನಡದ ಅತ್ಯದ್ಭುತ ಸಿನಿಮಾ. ಇದು ಟ್ರಾವೆಲ್‌ ಸಿನಿಮಾ ಅನ್ನುವುದರ ಜತೆಗೆ ಮನುಷ್ಯ ಮತ್ತು ಪ್ರಾಣಿಯ ನಡುವಿನ ಆತ್ಮೀಯ ಸಂಬಂಧವನ್ನು ಸಾರುವ ಸಿನಿಮಾ.

ಆಟಗಾರನೊಂದಿಗೆ ಗೋವಾ ಅನುಭವ

ನನ್ನ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದ್ದು ಕರ್ನಾಟಕದಲ್ಲಿಯೇ. ಆದರೆ ʻಆಟಗಾರʼ ಚಿತ್ರ ಗೋವಾ ಕಡಲ ತೀರಗಳು, ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಚಿರು, ಮೇಘನಾ, ಪಾರೂಲ್‌, ಪ್ರಕಾಶ್‌ ಬೆಳವಾಡಿ, ಸಾಧುಕೋಕಿಲ, ಅಚ್ಚುತ್‌ ಗೌಡ, ಬಾಲಾಜಿ ಮನೋಹರ್‌, ಅನು ಪ್ರಭಾಕರ್‌ ಹೀಗೆ ಪ್ರಮುಖ ತಾರಾಬಳಗ ಚಿತ್ರೀಕರಣದ 30-40 ದಿನಗಳ ಕಾಲ ಜತೆಗಿದ್ದೆವು. ಅದೊಂದು ಸುಂದರ ಅನುಭವ ಕಟ್ಟಿಕೊಟ್ಟಿದೆ. ಎಲ್ಲಿಗೆ ಪ್ರಯಾಣ ಬೆಳೆಸಿದ್ದವೆನ್ನುವುದಕ್ಕಿಂತ ಯಾರ ಜತೆ ಪ್ರಯಾಣಿಸಿದ್ದೆವು ಎಂಬ ಕಾರಣಕ್ಕೆ ನನಗಿದು ಆಪ್ತವಾಗಿದೆ.

pavana gowda

ಮಂಡ್ಯದ ಹೆಣ್ಣು ನಾನು..

ನಾನು ಮಂಡ್ಯದವಳು. ಆದಿಚುಂಚನಗಿರಿ ಹತ್ತಿರ ನನ್ನೂರು. ಊರಿನಲ್ಲಿ ನನ್ನ ನೆಚ್ಚಿನ ತಾಣವೆಂದರೆ ನನ್ನ ಅಜ್ಜಿ ಮನೆ. ಅಲ್ಲಿನ ಮನೆ, ತೋಟ, ಜಾಗವೆಂದರೆ ತುಂಬಾ ಇಷ್ಟ. ರಜಾದಿನಗಳನ್ನು ನಾನು ಅಲ್ಲಿ ಕಳೆದಿರುವುದೇ ಹೆಚ್ಚು. ಆ ಮನೆಯಲ್ಲಿ ನನಗೆ ಅನೇಕ ನೆನಪುಗಳಿದ್ದು, ನಾನು ನಾನಾಗಿಯೇ ಇರುವ ಜಾಗ ಅದೊಂದೇ. ಆ ಬಗೆಗಿನ ಒಲವು, ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ.

ಬಾಯ್‌ ಫ್ರೆಂಡ್‌ ಜತೆ ಬೀಚ್‌ ಸೈಡ್…

ನನಗಿನ್ನೂ ಬಾಯ್‌ ಫ್ರೆಂಡ್‌ ಇಲ್ಲ. ಆದರೆ ಮುಂದೆ ಬಾಯ್‌ ಫ್ರೆಂಡ್‌ ಜತೆ ಎಲ್ಲಾದರೂ ಸುತ್ತಾಡಲು ಹೋಗುವುದಾದರೆ ಕಡಲತೀರವೇ ನನ್ನ ಆಯ್ಕೆ. ಗ್ರೇಟ್‌ ಸನ್‌ ಸೆಟ್‌, ಬೀಚ್‌ ಹಾಗೂ ಆ ಸುಂದರ ವಾತಾವರಣದಲ್ಲಿ ನನ್ನ ಹುಡುಗನ ಜತೆ ಕಳೆಯುವ ಸಂತಸದ ಕ್ಷಣಗಳು…

ಚುರುಮುರಿಗಾಗಿ ಬೆಂಗಳೂರು ಟು ಮೈಸೂರು ರೌಂಡ್ಸ್‌

ಐ ಆಮ್‌ ನಾಟ್‌ ಎ ಫುಡೀ . ಆಹಾರದ ವಿಚಾರದಲ್ಲಿ ನಾನು ತುಂಬಾ ಚೂಸಿ. ಕೊಕೊನಟ್‌ ಫ್ಲೇವರ್‌ ನ್ಯಾಚುರಲ್ಸ್‌ ಐಸ್‌ ಕ್ರೀಮ್‌, ಚಂದ್ರಲೇಔಟ್‌ ನಲ್ಲಿ ಗೋಬಿ ಮಂಚೂರಿ, ಚಿಕ್ಕಪೇಟೆ ದೊನ್ನೆ ಬಿರಿಯಾನಿ ಇವಷ್ಟೇ ನನಗಿಷ್ಟವಾಗಿರುವುದು. ನನ್ನ ವಿದ್ಯಾಭ್ಯಾಸ ಮೈಸೂರಿನಲ್ಲಾಗಿದ್ದರಿಂದ ಬೆಂಗಳೂರಿಗಿಂತ ಮೈಸೂರಿನ ಆಹಾರಗಳ ಕಡೆಗೆ ಒಲವು ಹೆಚ್ಚು. ಅಲ್ಲಿ ಆಯ್ದ ಕಡೆಗಳಲ್ಲಿ ಸಿಗುವ ಜಿಲೇಬಿ, ಗೋಬಿ ತಿನ್ನುವುದೆಂದರೆ ಎಲ್ಲಿಲ್ಲದ ಪ್ರೀತಿ. ಮೈಸೂರಿನ ಸರಸ್ವತಿಪುರಂನ ಕುವೆಂಪು ಸ್ಕೂಲ್‌ ಮುಂಭಾಗದ ಸ್ಟಾಲ್‌ನಲ್ಲಿ ಸಿಗುವ ಚುರುಮುರಿಗಾಗಿ ಬೆಂಗಳೂರಿನಿಂದ ಮೈಸೂರಿಗೆ ಬರುವುದೂ ಇದೆ.

ಮದುವೆಯಾಗಲು ಡೆಸ್ಟಿನೇಷನ್‌ ಸ್ಪಾಟ್‌

ಡೆಸ್ಟಿನೇಷನ್‌ ವೆಡ್ಡಿಂಗ್‌ಗಾಗಿ ದೇಶ-ವಿದೇಶಗಳನ್ನು ಸುತ್ತುವುದು ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಮದುವೆಗಾಗಿ ಡೆಸ್ಟಿನೇಷನ್‌ ಹುಡುಕುವುದಕ್ಕಿಂತ ಪ್ರವಾಸಕ್ಕಾಗಿ ಸುತ್ತಾಡಬಹುದು. ಅದ್ಧೂರಿ ಮದುವೆಯ ಬಗ್ಗೆ ನನಗೆ ಆಸಕ್ತಿಯಿಲ್ಲ. ಹಸಿರು, ಅರಣ್ಯ ಪ್ರದೇಶಗಳ ಸುಂದರ ಪರಿಸರದ ನಡುವೆ ಆಯ್ದ ಜನರ ಸಮ್ಮುಖದಲ್ಲಿ ಮದುವೆಯಾಗಬೇಕೆಂದುಕೊಂಡಿದ್ದೇನೆ. ಮಂತ್ರ ಮಾಂಗಲ್ಯವಾದರೂ ನನಗಿಷ್ಟ. ನನ್ನನ್ನು ಮದುವೆಯಾಗುವ ಹುಡುಗ ಇಂಥ ನನ್ನ ಆಸಕ್ತಿಗೆ ಒಪ್ಪುವಂತಿದ್ದರೆ ಅದುವೇ ಖುಷಿ ನನಗೆ.

ಆಯಸ್ಸಿಗಾಗಿ ಟ್ರಾವೆಲ್‌ ಮಾಡಿ..

ಟ್ರಾವೆಲ್‌ ಮಾಡಲು ಇಷ್ಟವಿಲ್ಲದೆ ಹುಡುಗ ಸಿಕ್ಕರೆ ತುಂಬಾ ಕಷ್ಟ. ಆದರೆ ಇಂದಿನ ಒತ್ತಡ ಜೀವನದಲ್ಲಿ ಟ್ರಾವೆಲ್‌ ಇಷ್ಟವಿಲ್ಲ ಎನ್ನುವವರು ಬಹಳ ಕಡಿಮೆ. ಪ್ರವಾಸ ಮಾಡದವರ ಆಯಸ್ಸು ಬಹಳ ಕಡಿಮೆಯೇನೋ. ಯಾಕೆಂದರೆ ಇಂದಿನ ಜೀವನ ಶೈಲಿಯಲ್ಲಿ ಒತ್ತಡದಿಂದ ಹೊರಬರಬೇಕಾದರೆ ಹೊಸ ಪ್ರಪಂಚವನ್ನು ಹುಡುಕಲೇಬೇಕು. ಟ್ರಾವೆಲ್‌ ಪರ್ಸನ್‌ ಅಲ್ಲವೆಂದರೆ ನೋಡಿದ ಕೂಡಲೇ ಗೊತ್ತಾಗುತ್ತದೆ. ಅವರಲ್ಲಿ ಜೀವಂತಿಕೆಯೇ ಇರುವುದಿಲ್ಲ.

ವರುಷಕ್ಕೆ ಎರಡು ಪ್ರವಾಸ ಕಡ್ಡಾಯ…

ಒಂದು ದಿನಕ್ಕಾದರೂ ಪ್ರವಾಸೋದ್ಯಮ ಸಚಿವೆಯಾಗುವ ಅವಕಾಶ ನನಗೆ ಸಿಕ್ಕಿದರೆ ಎಲ್ಲ ಕ್ಷೇತ್ರಗಳಲ್ಲೂ ಪ್ರವಾಸಕ್ಕಾಗಿ ಪ್ರತ್ಯೇಕ ಪ್ಯಾಕೇಜ್‌ ಕೊಡಿಸುತ್ತೇನೆ. ಕೆಲವು ಸಂಸ್ಥೆಗಳು ಈಗಾಗಲೇ ತಮ್ಮ ಸಿಬ್ಬಂದಿಯನ್ನು ಪ್ರವಾಸಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಆದರೆ ಸಿನಿಮಾರಂಗದಲ್ಲಿ ಚಿತ್ರೀಕರಣಕ್ಕಾಗಿಯೇ ಅನೇಕ ಸುತ್ತಾಡುತ್ತಾರಾದರೂ ಪ್ರವಾಸ ಕಡ್ಡಾಯಗೊಳಿಸುತ್ತೇನೆ. ಪ್ರವಾಸ ಹೆಚ್ಚಿದಷ್ಟೂ ಸರಕಾರದ ಬೊಕ್ಕಸ ತುಂಬುತ್ತದೆ. ವರುಷಕ್ಕೆ ಒಂದೆರಡು ಪ್ರವಾಸ ಮಾಡುವಂತೆ ಆದೇಶ ಹೊರಡಿಸುತ್ತೇನೆ.

pavana gowda1

ಲಾಂಗ್‌ ಡ್ರೈವ್‌ ಮಜಾ ಕೊಡುತ್ತೆ..

ಎಲ್ಲಾ ವಿಧದ ಸಾರಿಗೆ ವ್ಯವಸ್ಥೆಗಳಿಗೂ ನಾನು ಹೊಂದಿಕೊಳ್ಳುತ್ತೇನೆ. ಆದರೆ ವಾಟರ್‌ವೇಸ್‌ ಇನ್ನೂ ಪ್ರಯತ್ನ ಮಾಡಿಯೇ ಇಲ್ಲ. ಅದನ್ನು ಎಕ್ಸ್‌ಪ್ಲೋರ್‌ ಮಾಡಬಯಸುತ್ತೇನೆ. ಇತ್ತೀಚೆಗೆ ಏರ್‌ ಕ್ರ್ಯಾಶಸ್‌ ಸುದ್ದಿ ಕೇಳಿದ ಮೇಲಂತೂ ವಿಮಾನ ಪ್ರಯಾಣ ಮಾಡುವುದೆಂದರೆ ಯಾಕೋ ಭಯ ಹುಟ್ಟಿಕೊಂಡಿದೆ. ಆದರೆ ಕಾರಿನಲ್ಲಿ ಲಾಂಗ್ ಡ್ರೈವ್‌ ಮಾಡುವುದೆಂದರೆ ಅದರ ಖುಷಿಯೇ ಬೇರೆ. ಅದರಲ್ಲೂ ಸಿಂಗಲ್‌ ಆಗಿ ಲಾಂಗ್‌ ಡ್ರೈವ್‌ ಹೋಗುವುದಾದರೆ ಪಾಂಡಿಚೇರಿ, ಗೋಕರ್ಣ, ಮಂಗಳೂರು, ಉಡುಪಿ, ಗೋವಾ ಕಡೆಗೆ ಸ್ಟೇರಿಂಗ್‌ ತಿರುಗಿಸಿಬಿಡುತ್ತೇನೆ.

ಪ್ರವಾಸದ ಜ್ಞಾನ ಅತಿಮುಖ್ಯ

ಟ್ರಾವೆಲ್‌ ಮಾಡುವಾಗ ಆಯಿಲ್‌ ಫ್ರೈಡ್‌ ಐಟಂನಿಂದ ನಾನು ದೂರವೇ ಇರುತ್ತೇನೆ. ಅದರ ಜತೆಗೆ ಪ್ರವಾಸ, ಪ್ರಯಾಣದ ಜ್ಞಾನವೇ ಇಲ್ಲದಿದ್ದರೂ ಸುಖಾ ಸುಮ್ಮನೆ ಪ್ರಶ್ನೆ ಮಾಡುವವರಿಂದಲೂ ನಾನು ದೂರವೇ ಇರಲು ಇಷ್ಟಪಡ್ತೀನಿ.

ಟ್ರಾವೆಲ್‌ ಸೇಫ್ಟೀ ಕಿಟ್‌ ಜತೆಗಿರಲಿ

ಟ್ರಾವೆಲ್‌ ಟಿಪ್ಸ್‌ ಹೇಳುವುದಾದರೆ ಹೆಣ್ಣು ಮಕ್ಕಳು ಪ್ರವಾಸದ ವೇಳೆ ಯಾರೊಂದಿಗೆ ಹೋಗುವುದಾದರೂ ತನ್ನ ರಕ್ಷಣೆಗಾಗಿ ಸೇಫ್ಟೀ ಕಿಟ್‌ ಜತೆಗಿರಿಸಿಕೊಳ್ಳುವುದು ಒಳ್ಳೆಯದು.ಅಲ್ಲದೆ ಸೀಸನ್‌ಗೆ ತಕ್ಕಂತೆ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡರೆ ಪ್ರವಾಸ ಆರಾಮದಾಯಕವಾಗಿರುತ್ತದೆ. ರೈನ್‌ ಕೋಟ್‌ನಂಥ ವಸ್ತುಗಳನ್ನು ಜತೆಗಿರಿಸಿಕೊಂಡರೆ ಮಳೆಗಾಲವನ್ನೂ ಎಂಜಾಯ್‌ ಮಾಡಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್