ಪ್ರವಾಸದ ಸಮಯದಲ್ಲಿ ಸೇಫ್ಟಿ ಪಿನ್ ಜೊತೆಗಿಟ್ಟುಕೊಂಡಿರ್ತೀನಿ! : ಸೋನು ಗೌಡ
ಥಯ್ಲೆಂಡ್ ಅಂದ ತಕ್ಷಣ ಏನೋ ಮಸಾಜ್, ಬರೀ ಪಾರ್ಟಿ, ಹುಡುಗಿಯರು ಎಂದೆಲ್ಲ ಅಂದ್ಕೋತಾರೆ. ಆದರೆ ನಾನು ಕಂಡ ಥಯ್ಲೆಂಡೇ ಬೇರೆ. ತುಂಬಾ ಶಾಂತಿಯಿಂದ ಕೂಡಿತ್ತು. ಹಿತವಾಗಿತ್ತು. ಆದರೆ ಇದನ್ನೆಲ್ಲ ಯಾರೂ ಹೈಲೈಟೇ ಮಾಡುವುದಿಲ್ಲ. ಅದೇ ರೀತಿ ಊಟಿಗೆ ಹೋದಾಗ ಅಲ್ಲಿ ಕನ್ನಡವೂ ಅಲ್ಲದ ತಮಿಳೂ ಅಲ್ಲದ ತೋಡ ಭಾಷೆ ಮಾತನಾಡುತ್ತಾರೆ.
- ಶಶಿಕರ ಪಾತೂರು
ದುನಿಯಾ ಸೂರಿ ನಿರ್ದೇಶನದ ’ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಅಚ್ಚಕನ್ನಡದ ಪ್ರತಿಭೆ ಸೋನು ಗೌಡ. ಹದಿನೇಳು ವರ್ಷಗಳ ಸುದೀರ್ಘ ಜರ್ನಿಯಲ್ಲಿ ಸಾಕಷ್ಟು ಗಮನಾರ್ಹ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸೋನುಗೌಡ ಯಾವತ್ತಿಗೂ ನಿರ್ಮಾಪಕರ ಮತ್ತು ನಿರ್ದೇಶಕರ ಸವಾಲುಗಳನ್ನು ಅರಿತು ಕೆಲಸ ಮಾಡುವ ಪ್ರಬುದ್ಧತೆ ಮತ್ತು ಮನೋವೈಶಾಲ್ಯ ಹೊಂದಿರುವ ನಟಿ. ಇತ್ತೀಚೆಗಷ್ಟೇ ಸಿದ್ಲಿಂಗು 2 ಮೂಲಕ ಸದ್ದು ಮಾಡಿದ ಈ ಸರಳ ಸುಂದರಿ ಇದೀಗ 'ಮಾರ್ನಮಿ' ಮೂಲಕ ಮತ್ತೊಂದು ವಿಭಿನ್ನ ಪಾತ್ರವಾಗಿ ಬರುತ್ತಿದ್ದಾರೆ. ಸೋಲೋ ಪ್ರವಾಸ ಮತ್ತು ಸೋದರಿಯೊಂದಿಗೆ ಪ್ರವಾಸ ಮಾಡುವುದು ಸೋನು ಅವರಿಗೆ ಇಷ್ಟ. ಪ್ರವಾಸ ಪ್ರಿಯೆ ಸೋನುಗೌಡಗೆ ಟ್ರಿಪ್ ಅನ್ನೋದು ಆಡಂಬರ ಅಲ್ಲ. ಅವರಿಗೆ ಅದೊಂದು ಫಿಲಾಸಫಿಕಲ್ ಜರ್ನಿ. ಪ್ರವಾಸವನ್ನೇ ಫಿಲಾಸಫಿ ಮಾಡಿಕೊಂಡ ಸೋನುಗೌಡರ ಚಿನ್ನದಂಥ ಮಾತುಗಳು ಇಲ್ಲಿವೆ.
ಇತ್ತೀಚೆಗೆ ನೀವು ಪ್ರವಾಸ ಮಾಡಿದ ಜಾಗ ಯಾವುದು?
ನಾನು ಮತ್ತು ನನ್ನ ತಂಗಿ ಆಕೆಯ ಮಗಳು ಶಾರದಾಗಾಗಿ ಕೊಡಗು ಪ್ರವಾಸ ಮಾಡಿದ್ದೆವು. ಆ ಪುಟ್ಟ ಮಗುವಿಗೆ ಪ್ರಪಂಚ ಅಂದರೆ ಮನೆ ಅಷ್ಟೇ ಅಲ್ಲ ಅನ್ನೋದನ್ನು ನೇರವಾಗಿ ತೋರಿಸಬೇಕಿತ್ತು. ನನಗೂ ಮನಸಿಗೆ ಖುಷಿ ಕೊಡುವ ವಾತಾವರಣ ಅಲ್ಲಿತ್ತು.

ಬಾಲ್ಯದ ನಿಮ್ಮ ಪ್ರವಾಸದ ನೆನಪುಗಳ ಬಗ್ಗೆ ಹಂಚಿಕೊಳ್ಳುವಿರಾ?
ಮೊದಲ ಪ್ರವಾಸ ಐದು ವರ್ಷದ ಮಗುವಿದ್ದಾಗ. ಮುಂಬೈನ ಎಸ್ಸೆಲ್ ವರ್ಲ್ಡ್‌ಗೆ ನಮ್ಮಪ್ಪ ಕರ್ಕೊಂಡು ಹೋಗಿದ್ದರು. ಅದು ಇಲ್ಲಿನ ವಂಡರ್‌ಲಾ ಥರಾನೇ ಇತ್ತು. ಅಂದು ಖಾಸಗಿ ವಾಹಿನಿಯಲ್ಲಿ ಅದರ ಜಾಹೀರಾತು ನೋಡಿ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದೆವು. ಆಮೇಲೆ ಗೇಟ್‌ವೇ ಆಫ್ ಇಂಡಿಯಾ ನೋಡಿದ್ದೆವು. ಆಮೇಲೆ ಸ್ವಲ್ಪ ದೊಡ್ಡವಳಾದ ಬಳಿಕ ʼರಂಗಸಂಪದʼ ರಂಗತಂಡದಿಂದ ಮಕ್ಕಳೆಲ್ಲರನ್ನೂ ಕರೆದುಕೊಂಡು ಹೋಗ್ತಾ ಇದ್ರು. ನಾನು ನನ್ನ ಅಪ್ಪ ಅಮ್ಮ ಸೇರಿ ಧಾರವಾಡದಿಂದ ದೆಹಲಿಯ ತನಕ ಸುಮಾರು ಜಾಗಗಳನ್ನು ಸುತ್ತಾಡಿದ್ದೇವೆ. ಶಾಲಾ ದಿನಗಳಲ್ಲೇ ಊಟಿ, ಪಾಂಡಿಚೇರಿ, ಜೈಪುರ ಅಂತ ಸಾಕಷ್ಟು ಪ್ರವಾಸ ಮಾಡಿದ ಮಧುರ ನೆನಪುಗಳಿವೆ.
ನೀವು ಎಂದೂ ಮರೆಯದ ಪ್ರವಾಸ ಯಾವುದು?
ನಾನು ಆರನೇ ತರಗತಿಯಲ್ಲಿದ್ದಾಗ ತಮಿಳುನಾಡಿನ ವೇಳಾಂಕಣ್ಣಿಗೆ ಹೋಗಿದ್ದೆವು. ನನ್ನ ಕಸಿನ್‌ಗೆ ಏನೋ ಒಂದು ಕಾಯಿಲೆ ಇತ್ತು. ಪಕ್ಕದ ಮನೆಯವರ ಸಲಹೆಯಂತೆ ವೇಳಾಂಕಣ್ಣಿ ಚರ್ಚ್‌ಗೆ ಹರಕೆ ಹೇಳಿದ್ದೆವು. ಅವಳು ಗುಣಮುಖಗೊಳ್ಳುತ್ತ ಬಂದ ಕಾರಣ ನಾವು ಕುಟುಂಬ ಸಮೇತ ಆ ಚರ್ಚ್‌ಗೆ ಹೋಗಿದ್ದೆವು. ಆದರೆ ಏನಾಯಿತೋ ಗೊತ್ತಿಲ್ಲ ಅವಳ ಸಾವಾಯಿತು. ಆ ಟ್ರಿಪ್ ತುಂಬಾ ಚೆನ್ನಾಗಿತ್ತು. ಆದರೆ ಅವಳ ಸಾವಿನ ಕಾರಣ ಆ ಪ್ರಯಾಣವನ್ನು ಇಂದಿಗೂ ಮರೆಯಲಾಗುತ್ತಿಲ್ಲ. ಇನ್ನೊಂದು ಘಟನೆ ಡಿಮಾನಿಟೈಸೇಶನ್ ಸಂದರ್ಭದಲ್ಲಿ ನಡೆದಿತ್ತು. ನಾನು ಹೃಷಿಕೇಶಕ್ಕೆ ಹೋಗಲು ವಿಮಾನ ಬುಕ್ ಮಾಡಿದ್ದೆ. ಹೋಗಲೇಬೇಕಿತ್ತು. ಆದರೆ ಅಂದಿನ ಪರಿಸ್ಥಿತಿಯಲ್ಲಿ ನನಗೆ ಎಟಿಎಮ್‌ನಿಂದ ಎರಡು ಸಾವಿರಕ್ಕಿಂತ ಹೆಚ್ಚು ಹಣ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಆ ಎರಡು ಸಾವಿರ ಕೂಡ ಟೂರಿಸ್ಟ್ ಗೈಡ್ ಮೋಸ ಮಾಡಿದ್ದ. ಹಾಗಾಗಿ ಇಡೀ ಟ್ರಿಪ್‌ನಲ್ಲಿ 300 ರೂಪಾಯಿ ಮಾತ್ರ ಬಾಕಿ ಉಳಿಸಿಕೊಂಡು ದೆಹಲಿಗೆ ಬಂದಿದ್ದೆ.

ಈಗ ನಿಮಗೆ ಪ್ರವಾಸ ಎಂದ ತಕ್ಷಣ ನೆನಪಾಗುವುದು ಏನು?
ಪ್ರಯಾಣ! ಯಾಕೆಂದರೆ ಪ್ರವಾಸದ ಗುರಿ ನಮಗೆ ಮೊದಲೇ ಇರುತ್ತದೆ. ಆದರೆ ಆ ಪ್ರಯಾಣದ ದಾರಿ ಹೇಗಿರಬಹುದು ಎನ್ನುವುದು ನನ್ನ ಮೊದಲ ಯೋಚನೆಯಾಗಿರುತ್ತದೆ. ದಾರಿಯ ಬಗ್ಗೆಯೂ ಅರಿವು ಇರಬೇಕಾಗುತ್ತದೆ. ಮಾತ್ರವಲ್ಲ ಹೋಗಿ ಸೇರುವ ಜಾಗದ ಬಗ್ಗೆಯೂ ಇತರರಿಂದ ತಿಳಿದಿರುವ ಸಂಗತಿಯೇ ಅಂತಿಮವಲ್ಲ. ನಮ್ಮ ಅನುಭವವೇ ಮುಖ್ಯ. ಅದಕ್ಕಾಗಿಯೇ ನಾವು ಪ್ರವಾಸ ಮಾಡಿರುತ್ತೇವೆ. ಉದಾಹರಣೆಗೆ ಥಯ್ಲೆಂಡ್ ಅಂದ ತಕ್ಷಣ ಏನೋ ಮಸಾಜ್, ಬರೀ ಪಾರ್ಟಿ, ಹುಡುಗಿಯರು ಎಂದೆಲ್ಲ ಅಂದ್ಕೋತಾರೆ. ಆದರೆ ನಾನು ಕಂಡ ಥಯ್ಲೆಂಡೇ ಬೇರೆ. ತುಂಬಾ ಶಾಂತಿಯಿಂದ ಕೂಡಿತ್ತು. ಹಿತವಾಗಿತ್ತು. ಆದರೆ ಇದನ್ನೆಲ್ಲ ಯಾರೂ ಹೈಲೈಟೇ ಮಾಡುವುದಿಲ್ಲ. ಅದೇ ರೀತಿ ಊಟಿಗೆ ಹೋದಾಗ ಅಲ್ಲಿ ಕನ್ನಡವೂ ಅಲ್ಲದ ತಮಿಳೂ ಅಲ್ಲದ ತೋಡ ಭಾಷೆ ಮಾತನಾಡುತ್ತಾರೆ. ಅಲ್ಲಿನ ಬುಡಕಟ್ಟು ನಿವಾಸಿಗಳು ಊಟಿ ಬಿಟ್ಟು ಹೊರಗಿನ ಪ್ರಪಂಚವನ್ನೇ ನೋಡಿಲ್ಲ. ಅವರೊಂದಿಗೆ ಮಾತನಾಡಿ, ಊಟ ಮಾಡಿ ಬೆರೆಯುವುದೇ ಚೆನ್ನಾಗಿತ್ತು. ಹಾಗಾಗಿ ಪ್ರವಾಸ ಅಂದರೆ ನನ್ನ ಪ್ರಕಾರ ವಾಸ್ತವದ ಕಡೆಗಿನ ಪ್ರಯಾಣ..
ಪ್ರವಾಸ ಹೋಗುವವರಿಗೆ ನಿಮ್ಮ ಸಲಹೆ ಏನು?
ಒಬ್ಬೊಬ್ಬರ ಪ್ರವಾಸ ಒಂದೊಂದು ಥರ ಇರುತ್ತದೆ. ಪ್ರವಾಸ ಮಾಡುವವರು ಪಾರ್ಟಿ ಮಾಡಲು, ಐಷಾರಾಮಿಯಾಗಿ ದಿನ ಕಳೆಯಲು ಬಯಸುತ್ತಾರೆ. ನಾನು ಪ್ರವಾಸದಲ್ಲಿ ಎಕ್ಸ್ ಪ್ಲೋರ್ ಮತ್ತು ಎಕ್ಸ್ಪೆರಿಮೆಂಟ್ ಕಡೆಗೆ ಗಮನ ಹರಿಸುತ್ತೇನೆ. ಉತ್ತರ ಭಾರತೀಯರ ಆಹಾರ ಅಂದರೆ ಪರೋಟ ಅಂತ ಮಾತ್ರ ಅಂದುಕೊಳ್ಳುವಂತಿಲ್ಲ. ಆದರೆ ಆಯಾ ಪ್ರದೇಶಗಳಿಗೆ ಲೋಕಲ್ ಫುಡ್ ಅಂತ ಒಂದಿರುತ್ತೆ. ಜೋಧಪುರದಲ್ಲೆಲ್ಲ ಬೆಳಿಗ್ಗೆ ಹೊತ್ತಲ್ಲೇ ಬಿಸಿಬಿಸಿ ಜಿಲೇಬಿ ಜತೆ ಮೆಣಸಿನಕಾಯಿ ಬಜ್ಜಿ ಸೇರಿಸಿಕೊಡುತ್ತಾರೆ. ಆ ಅನುಭವಗಳನ್ನೆಲ್ಲ ಪಡೆದುಕೊಳ್ಳುತ್ತೇನೆ. ಹೀಗೆ ಪ್ರವಾಸಿಗರು ವೈವಿಧ್ಯಕ್ಕೆ ಪ್ರಯತ್ನಿಸುವಂತೆ ಸಲಹೆ ನೀಡಬಲ್ಲೆ.
ಪ್ರವಾಸದಲ್ಲಿ ಅತೀ ಅಗತ್ಯ ಅನಿಸುವುದೇನು?
ಅಗತ್ಯದ ಸುರಕ್ಷಾ ಸಾಮಗ್ರಿಗಳನ್ನು ತೆಗೆದುಕೊಂಡಿರಬೇಕು. ನಾನಂತೂ ಒಂದು ಸೇಫ್ಟಿಪಿನ್ ಜತೆಗಿಟ್ಟುಕೊಂಡಿರುತ್ತೇನೆ. ಸಂದರ್ಭ ಯಾವಾಗ ಹೇಗಿರುತ್ತೆ ಅಂತ ಗೊತ್ತಿರುವುದಿಲ್ಲ. ಆದರೆ ನಾವು ಸಾಧ್ಯವಾದಷ್ಟು ಹೋದಕಡೆಗಳಲ್ಲಿ ಜಗಳಕ್ಕೆ ಹೋಗಬಾರದು. ನಾವೇ ಸರಿ ಇದ್ದರೂ ಸ್ಥಳೀಯರಿಗೆ ಅಲ್ಲಿನ ಪೊಲೀಸರು ಕೂಡ ಬೆಂಬಲಿಸುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಕಾಲು ಕೆರೆದು ಜಗಳಕ್ಕೆ ಬರುವವರೂ ಸಿಗುತ್ತಾರೆ. ಒಂದು ಜಗಳ ಇಡೀ ಪ್ರವಾಸದ ಖುಷಿಯನ್ನೇ ಕಸಿಯಬಹುದು.
ನಮ್ಮ ಓದುಗರ ಪ್ರವಾಸಕ್ಕೆ ನೀವು ಸೂಚಿಸುವ ಜಾಗ ಯಾವುದು?
ಮಕ್ಕಳಿಗಾದರೆ ದಕ್ಷಿಣ ಆಫ್ರಿಕಾದ ಮಸೈಮರಾ ಉತ್ತಮ ಜಾಗ. ಬಯಾಲಜಿ ಪುಸ್ತಕದಲ್ಲಿ ಓದಿರುವುದೆಲ್ಲ ನಿಮ್ಮ ಕಣ್ಣಮುಂದೆ ಬರುತ್ತೆ. ನಿಮ್ಮನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ನೀವು ವರ್ಷದಲ್ಲಿ ಪ್ರವಾಸದ ಯೋಜನೆ ಹಾಕಿಕೊಳ್ಳುವುದು ಯಾವಾಗ?
ದುಡ್ಡು ಬಂದಾಗ ಪ್ರವಾಸ ಮಾಡುವ ಹವ್ಯಾಸ ನನ್ನದು. ಹಾಗಂತ ತುಂಬ ಖರ್ಚು ಮಾಡುತ್ತೇನೆ ಅಂತ ಅಲ್ಲ. ಹೋದ ಕಡೆ ಹಾಸ್ಟೆಲ್‌ನಲ್ಲಿ ಕೂಡ ಇರುತ್ತೇನೆ. ಯಾಕೆಂದರೆ ಇತರರೊಂದಿಗೆ ಬೆರೆಯಬೇಕು. ಎರಡು ದಿನಕ್ಕಿಂತ ಹೆಚ್ಚು ಒಂದೇ ಕಡೆ ಇರುವುದಿಲ್ಲ.
ಪದೇಪದೆ ಒಂದೇ ಕಡೆಗೆ ಹೋಗಬೇಕು ಅನಿಸಿದಂಥ ಜಾಗ ಯಾವುದು?
ಹಿಮಾಲಯಕ್ಕೆ ಮತ್ತೆ ಮತ್ತೆ ಹೋಗಬೇಕು ಅನಿಸುತ್ತೆ. ಹಿಮಾಲಯ ಅಂದರೆ ಹೃಷಿಕೇಶ ಅಥವಾ ಧರ್ಮಶಾಲಾದಿಂದ ಸಿಗುವಂಥ ಬೆಳ್ಳಿಬೆಟ್ಟದ ನೋಟ. ಅಲ್ಲಿಂದ ನೋಡಿದರೆ ಹಿಮಾಲಯ ತೀರ ಹತ್ತಿರ ಇದ್ದಂತೆ ಕಾಣಿಸುತ್ತದೆ. ಆದರೆ ಹತ್ತಿರ ಇರಲ್ಲ. ತುಂಬ ದೂರದಲ್ಲಿರುತ್ತದೆ. ಚಳಿಚಳಿಯ ನಡುವೆ ಹಿಮಾಲಯದ ನೋಟವೇ ನಮ್ಮನ್ನು ಬೆಚ್ಚಗಿಡುತ್ತದೆ.
ಪ್ರವಾಸದ ವೇಳೆ ನಡೆದ ವಿಶಿಷ್ಠ ಘಟನೆ ಏನಾದರೂ ಇದೆಯೇ?
ವಾರಾಣಸಿಯ ಮಣಿಕರ್ಣಿಕಾ ಘಾಟ್ ನಲ್ಲಿ ಹೆಣ ಸುಡುವ ಜಾಗದಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿದ್ದರು. ಅವರು ನಮ್ಮನ್ನು ಒಂದು ವಿಶೇಷ ದೇವಸ್ಥಾನಕ್ಕೆ ಕರೆದೊಯ್ಯುವುದಾಗಿ ಹೇಳಿ ಒತ್ತಾಯಿಸಿದರು. ನಾನು ಮತ್ತು ತಂಗಿ ಮಾತ್ರ ಇದ್ದಿದ್ದು. ಬೇರೆ ಕಡೆಗೆ ಒಯ್ದು ನಮ್ಮ ಮೇಲೇನಾದರೂ ದಾಳಿ ಮಾಡಿದರೆ ಏನು ಮಾಡೋದು ಅಂತ ನಮಗೆ ಒಳಗೊಳಗೇ ಆತಂಕ. ಹೇಗೆ ಎದುರಿಸೋದು ಅಂತಾನೂ ಆ ವ್ಯಕ್ತಿ ಮುಂದೆಯೇ ಮಾತಾಡಿಕೊಂಡಿದ್ದೆವು. ಯಾಕೆಂದರೆ ಆತನಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲವಲ್ಲ. ಆದರೆ ಆನಂತರ ಅವರು ನಮಗೆ ತೋರಿಸಿದ್ದಂತೂ ಮರೆಯಲಾಗದ ದೃಶ್ಯ. ದೊಡ್ಡದೊಂದು ಬಾವಿಯ ಒಳಗಡೆ ಇರುವ ಶಿವಲಿಂಗ. ಮೂರಡಿ ಕಟ್ಟಡದ ಮೇಲಿನಿಂದ ಕೆಳಗೆ ನೋಡುವಷ್ಟು ಆಳದಲ್ಲಿ ಮುತ್ತಿನಂತೆ ಬೆಳಗುವ ಶಿವಲಿಂಗ ಇತ್ತು. ಇಂದಿಗೂ ಕಣ್ಣುಮುಚ್ಚಿದರೆ ಶಿವಲಿಂಗವೇ ಕಣ್ಮುಂದೆ ಬರುತ್ತೆ. ಅಲ್ಲಿನ ಗಂಗಾರತಿಯೂ ಅಷ್ಟೇ.