ಆ.5ರಿಂದ ಐಆರ್‌ಸಿಟಿಸಿ ʼಅಷ್ಟ ಜ್ಯೋತಿರ್ಲಿಂಗ ಯಾತ್ರೆʼ
ಭಾರತದ ಎಂಟು ಪವಿತ್ರ ಜ್ಯೋತಿರ್ಲಿಂಗ ದರ್ಶನವನ್ನು ಪಡೆಯಬೇಕು ಎಂದುಕೊಳ್ಳುವ ಮಂದಿಗೆ ಇಲ್ಲಿದೆ ಗುಡ್ ನ್ಯೂಸ್. ಐಆರ್‌ಸಿಟಿಸಿ ತನ್ನ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಧಾರ್ಮಿಕ ಪ್ರವಾಸಕ್ಕೆ ಸಜ್ಜಾಗಿದ್ದು, ಆಗಸ್ಟ್ 5ರಂದು ಯಾತ್ರೆ ಪ್ರಾರಂಭವಾಗಲಿದೆ.
ಮುಂಬೈ: ಭಾರತೀಯ ರೈಲ್ವೆ (ಐಆರ್‌ಸಿಟಿಸಿ) ಶ್ರಾವಣ ಮಾಸದಲ್ಲಿ ಭಕ್ತರಿಗಾಗಿ ʼಅಷ್ಟ ಜ್ಯೋತಿರ್ಲಿಂಗ ದರ್ಶನʼದ ಯಾತ್ರೆಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ʼಐಆರ್‌ಸಿಟಿಸಿ ಪಶ್ಚಿಮ ಮುಂಬೈ ಘಟಕ ಈ ರೈಲು ಯಾತ್ರೆ ಘೋಷಿಸಿದ್ದು, ಆಗಸ್ಟ್ 5ರಂದು ಮಡಗಾಂವ್‌ನಿಂದ ಯಾತ್ರೆ ಹೊರಡಲಿದೆ.
ಈ ಪ್ಯಾಕೇಜ್‌ಗೆ ಆರಂಭಿಕ ಶುಲ್ಕ 23,880 ರು. ಎಂದು ನಿಗದಿಪಡಿಸಲಾಗಿದೆ. ಕುಟುಂಬ ಸಮೇತ ಅಥವಾ ಒಬ್ಬರೇ ಈ ಯಾತ್ರೆ ಕೈಗೊಳ್ಳಬಹುದಾಗಿದ್ದು, ಆರಾಮದಾಯಕ ಪ್ರಯಾಣ ಅನುಭವ ನೀಡಲಿದೆʼ ಎಂದು ಐಆರ್‌ಸಿಟಿಸಿ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಗೌರವ್ ಜಾ ತಿಳಿಸಿದ್ದಾರೆ.

ಈ ಯಾತ್ರೆಯ ಮೂಲಕ ಉಜ್ಜಯಿನಿಯ ಮಹಾ ಕಾಲೇಶ್ವರ, ಮಹಾರಾಷ್ಟ್ರದ ಭೀಮಾಶಂಕರ ಮಧ್ಯಪ್ರದೇಶದ ಓಂಕಾರೇಶ್ವರ, ನಾಸಿಕ್‌ನ ತ್ರಯಂಬಕೇಶ್ವರ, ಆಂಧ್ರಪ್ರದೇಶದ ಮಲ್ಲಿಕಾರ್ಜುನ, ಎಲ್ಲೋರಾ ಬಳಿಯ ಗ್ರಿಪ್ಲೇಶ್ವರ, ವಾರಾಣಸಿಯ ಕಾಶಿ ವಿಶ್ವನಾಥ, ಜಾರ್ಖಂಡ್‌ನಲ್ಲಿ ಬೈದ್ಯನಾಥ ಸೇರಿ ಭಾರತದ ಎಂಟು ಪವಿತ್ರ ಜ್ಯೋತಿರ್ಲಿಂಗ ದರ್ಶನ ಮಾಡಬಹುದು. ಹೆಚ್ಚಿನ ಮಾಹಿತಿಗೆ www.irctctourism.com ಸಂಪರ್ಕಿಸಿ.