ಮಾನವೀಯತೆ ತುಂಬಿದ ಯುದ್ದಭೂಮಿ
ಇಸ್ರೇಲ್ ನ ನನ್ನ ಪ್ರವಾಸ ಪ್ರಾರಂಭವಾದದ್ದೇ ಯಾದ್ ವಶೇಮ್ ನಿಂದ. ಜೆರುಸಲೆಮ್ ನ ಮೌಂಟ್ ಆಫ್ ರಿಮೆಂಬರೆನ್ಸ್ ಎಂಬ ಸ್ಥಳದಲ್ಲಿದೆ ಇಸ್ರೇಲಿನ ಅಧಿಕೃತ ಹೊಲೋಕಾಸ್ಟ್ ಮ್ಯೂಸಿಯಂ. ಹತ್ಯಾಕಾಂಡದಲ್ಲಿ ಬಲಿಯಾದವರ ಸ್ಮಾರಕವಿರುವ ಇದನ್ನು ಮ್ಯೂಸಿಯಂ ಎಂದು ಕರೆಯಲು ಮನಸು ಬರುವುದಿಲ್ಲ. ಇಸ್ರೇಲಿಗರನ್ನು ಪದೇಪದೆ ಜಾಗೃತಗೊಳಿಸುವ ಶಕ್ತಿಸ್ಥಳವಿದು.
- ಹರ್ಷಿತಾ ಝಾ
ಇಸ್ರೇಲ್ ಗೆ ನಾನು ಕಾಲಿಡೋ ಮುನ್ನ ನನಗೊಂದು ದೊಡ್ಡ ಆತ್ಮವಿಶ್ವಾಸವಿತ್ತು.. ನಾನು ಇಸ್ರೇಲ್ ಬಗ್ಗೆ ಎಲ್ಲ ಓದಿ ತಿಳಿದುಕೊಂಡಿದ್ದೇನೆ ಅಂತ. ನಿಜ, ನಾನು ಇಸ್ರೇಲಿನ ಇತಿಹಾಸ, ಆ ದೇಶದ ತಾಕತ್ತು, ತಂತ್ರಜ್ಞಾನದ ಕೌಶಲ್ಯ ಎಲ್ಲವನ್ನೂ ಓದಿಕೊಂಡದ್ದು ಹೌದು. ಆದರೆ ಈ ಪುಟ್ಟ ದೇಶ ನಿಜಕ್ಕೂ ನಮ್ಮ ಅನುಭೂತಿಗೆ ದಕ್ಕಬೇಕು ಅಂದರೆ, ಆ ನೆಲದ ಮೇಲೆ ಕಾಲಿಡಬೇಕು, ಪ್ರತಿ ಸ್ಥಳಗಳಲ್ಲೂ ಹೆಜ್ಜೆ ಊರಬೇಕು. ಇಸ್ರೇಲ್ ಒಂದು ಜೀವಂತ ದಂತಕಥೆ. ಜಗತ್ತಿಗೆ ಜಗತ್ತೇ ಅಚ್ಚರಿಯಿಂದ ಕಣ್ಣರಳಿಸಿ ನೋಡುವ ದೇಶ ಇಸ್ರೇಲ್.
ವಾಸ್ತವ ಏನೆಂದರೆ, ಇಸ್ರೇಲ್ ಒಂದು ದೇಶ ಅಲ್ಲ. ಅದೊಂದು ಎಮೋಷನ್. ಇಸ್ರೇಲನ್ನು ಕೇವಲ ಪ್ರವಾಸಿ ತಾಣ ಎಂದು ಕರೆದರೆ ಅದು ಆ ದೇಶವನ್ನು ಅವಮಾನಿಸಿದಂತೆ. ಪ್ರತಿ ಕಲ್ಲು, ಪ್ರತಿ ಗೋಡೆ ಇಲ್ಲಿ ಕಥೆ ಹೇಳುತ್ತದೆ. ಒಂದು ಪ್ರಾಚೀನ ನೋವಿನ ಇತಿಹಾಸ ಹೇಳುತ್ತದೆ. ಹೋರಾಟದ ಹಿಸ್ಟರಿ ತಿಳಿಸುತ್ತದೆ. ಇನ್ ಫ್ಯಾಕ್ಟ್ ಈಗಾಗಲೇ ನೂರಾರು ಬಾರಿ ಕಥೆ ಹೇಳಿರುವ ಗೈಡ್ ಕಣ್ಣುಗಳು ಪ್ರತಿ ಬಾರಿಯೂ ತೇವವಾಗುತ್ತವೆ ಎಂದರೆ ಇಲ್ಲಿನ ಇತಿಹಾಸ ಎಷ್ಟು ಗಾಢ ಅಂತ ಓದುಗರೇ ಊಹಿಸಬೇಕು.
ಇಸ್ರೇಲ್ ಇತಿಹಾಸದಲ್ಲಿ ಕಳೆದು ಹೋದ ದೇಶವಲ್ಲ. ಇತಿಹಾಸ ಕೊಟ್ಟ ಪ್ರತಿ ಪೆಟ್ಟನ್ನೂ ತಿಂದು ಶಿಲೆಯಾಗಿ ರೂಪುಗೊಂಡ ದೇಶ. ಇತಿಹಾಸದ ಅರಿವಿನ ಆಧಾರದಲ್ಲಿ ಆಧುನಿಕತೆಯ ಉತ್ಕೃಷ್ಟತೆ ತಲುಪಿದ ದೇಶ.
ಯಾದ್ ವಶೇಮ್‌ನ ಮಾತಾಡುವ ಕಲ್ಲುಗಳು
ಇಸ್ರೇಲ್ ನ ನನ್ನ ಪ್ರವಾಸ ಪ್ರಾರಂಭವಾದದ್ದೇ ಯಾದ್ ವಶೇಮ್ ನಿಂದ. ಜೆರುಸಲೆಮ್ ನ ಮೌಂಟ್ ಆಫ್ ರಿಮೆಂಬರೆನ್ಸ್ ಎಂಬ ಸ್ಥಳದಲ್ಲಿದೆ ಇಸ್ರೇಲಿನ ಅಧಿಕೃತ ಹೊಲೋಕಾಸ್ಟ್ ಮ್ಯೂಸಿಯಂ. ಹತ್ಯಾಕಾಂಡದಲ್ಲಿ ಬಲಿಯಾದವರ ಸ್ಮಾರಕವಿರುವ ಇದನ್ನು ಮ್ಯೂಸಿಯಂ ಎಂದು ಕರೆಯಲು ಮನಸು ಬರುವುದಿಲ್ಲ. ಇಸ್ರೇಲಿಗರನ್ನು ಪದೇಪದೆ ಜಾಗೃತಗೊಳಿಸುವ ಶಕ್ತಿಸ್ಥಳವಿದು.
ಮೋಷೆ ಸಫ್ದೀ ಎಂಬ ಶಿಲ್ಪಿಯ ನಿರ್ಮಾಣದ ಈ ಸ್ಮಾರಕದಲ್ಲಿ ನಡೆದಾಡುತ್ತಿದ್ದರೆ ಅಲ್ಲಿನ ಗೋಡೆಗಳು ನೋವಿನ ನಿಟ್ಟುಸಿರು ಬಿಟ್ಟಂತೆ ಭಾಸವಾಗುತ್ತದೆ. ಸ್ಮಾರಕದ ಪ್ರತಿ ವಸ್ತುವೂ ಕಣ್ಣೀರು ತರಿಸುತ್ತವೆ. ಆದರೆ ಅಂಥ ತ್ಯಾಗ ಬಲಿದಾನಗಳೇ ಇಂದಿನ ಇಸ್ರೇಲ್ ಎಂಬ ಬಲಿಷ್ಠ ಹಾಗೂ ಸ್ವಾವಲಂಬಿ ದೇಶದ ನಿರ್ಮಾಣಕ್ಕೆ ತಳಹದಿ ಕಟ್ಟಿಕೊಟ್ಟಿದೆ.

ಈ ಸ್ಮಾರಕದಲ್ಲಿ ನೋಡಲೇಬೇಕಾದ ಸ್ಥಳ ಅಂದರೆ ಅದು ಹತ್ಯೆಯಾದ ಪ್ರತಿಯೊಬ್ಬರ ಫೊಟೋ ಮತ್ತು ವೈಯಕ್ತಿಕ ಫೈಲ್ ಗಳನ್ನಿಟ್ಟಿರುವ ಶಂಕು ಆಕೃತಿಯ ಹಾಲ್ ಆಫ್ ನೇಮ್ಸ್ ಭವನ. ಮಕ್ಕಳ ಸ್ಮಾರಕಗಳನ್ನು ನೋಡಿದಾಗ ಯುದ್ಧ ಎಂಬುದು ಅಮಾಯಕ ಮಕ್ಕಳೆಂದೂ ನೋಡುವುದಿಲ್ಲ, ಅದೊಂದು ಅಮಾನವೀಯತೆಯ ಪರಮಾವಧಿಯಷ್ಟೇ ಅನಿಸಿದ್ದು ನಿಜ.
ಆದರೆ ಹೊಲೊಕಾಸ್ಟ್ ಮ್ಯೂಸಿಯಂನ ಹೊರಗಿರುವ ಮರಗಳನ್ನು ನೋಡಿದಾಗ ಮನಸಿಗೊಂದು ಸಮಾಧಾನ. ಹತ್ಯಾಕಾಂಡದ ಸಮಯದಲ್ಲಿ ಯಹೂದಿಗಳನ್ನು ರಕ್ಷಿಸಲು ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟವರ ಗೌರವಾರ್ಥ ನೆಟ್ಟಿರುವ ಮರಗಳು ಅವು.
ಐನ್ ಕೆರೆಮ್ ಎಂಬ ಚಿತ್ರಗ್ರಾಮ
ಜೆರುಸಲೆಮ್ ಅಂದರೆ ಬರೀ ದುಃಖದ ಕಥೆಗಳ ಆಗರವಾ? ಇಲ್ಲ. ಅದು ಹಲವು ಮನ ಅರಳಿಸುವ ಕಥೆಗಳನ್ನೂ ಹೇಳುತ್ತದೆ. ಐನ್ ಕೆರೆಮ್ ಎಂಬ ಗ್ರಾಮಕ್ಕೆ ಬಂದರೆ ಕಲ್ಲಿನ ಮನೆಗಳು, ಚರ್ಚ್‌ಗಳ ಗಂಟೆ ಗೋಪುರಗಳು ಮತ್ತು ಅಂಕುಡೊಂಕಾದ ಬೀದಿಗಳು ಕುಸಿದು ಬಿದ್ದ ಮನಸ್ಸನ್ನು ಮತ್ತೆ ಹದಮಾಡಿ ಎದ್ದುನಿಲ್ಲಿಸುತ್ತವೆ. ಈ ಗ್ರಾಮದ ಪ್ರತಿ ರಸ್ತೆ, ಗೋಡೆ ಮತ್ತು ಕಟ್ಟಡಗಳು ಕಥೆಗಳಿಂದ ಬಣ್ಣಿಸಲಾಗದ ಕ್ಯಾನ್ವಾಸ್ ಅನ್ನಬಹುದು. ಕಮಾನಿನಂಥ ಬಾಗಿಲುಗಳ ಹಿಂದೆ ಅಡಗಿರುವ ಸಣ್ಣ ಗ್ಯಾಲರಿಗಳಲ್ಲಿ ಕಲಾವಿದರ ಕುಸುರಿ ಕೆಲಸ, ಆಲಿವ್ ಮರಗಳ ಕೆಳಗೆ ಕಾರಂಜಿಗಳು, ಅಲ್ಲಲ್ಲಿ ಮಾನೆಸ್ಟರಿಗಳು ಎಲ್ಲವೂ ಸೇರಿ ಜೆರುಸಲೆಮ್ ನಲ್ಲೊಂದು ಶಾಂತ ವಾತಾವರಣ ನಿರ್ಮಿಸಿದ್ದವು.
ಐನ್ ಕೆರೆಮ್ ಗ್ರಾಮ ನೋಡಿದಾಗ ಇಸ್ರೇಲ್ ಅಂದರೆ ಕೇವಲ ಯುದ್ಧಭೂಮಿ, ಹತ್ಯಾಕಾಂಡ ಕಂಡ ನೆಲ ಮಾತ್ರವಲ್ಲ, ಇದು ಕಲೆ ಸಂಸ್ಕೃತಿಯ ತವರು ಕೂಡ ಎಂದು ಅರ್ಥವಾಗುತ್ತದೆ.
ಜೆರುಸಲೆಮ್ ಓಲ್ಡ್ ಸಿಟಿ
ಶತಶತಮಾನಗಳ ನಂಬಿಕೆ, ಸಂಘರ್ಷ ಮತ್ತು ಸಹಬಾಳ್ವೆಗೆ ಉದಾಹರಣೆಯಾಗಿ ನಿಲ್ಲುತ್ತದೆ ಜೆರುಸಲೆಮ್ ನ ಓಲ್ಡ್ ಸಿಟಿ. ಈ ಪ್ರಾಚೀನ ನಗರದಲ್ಲಿ ನಾವಿಡುವ ಪ್ರತಿ ಹೆಜ್ಜೆಯಲ್ಲಿಯೂ ಇತಿಹಾಸವಿದೆ. ನಾವು ಎಡವುವ ಪ್ರತಿ ಕಲ್ಲಿಗೂ ಇಲ್ಲೊಂದು ಕಥೆಯಿದೆ.
ಕಲ್ಲಿನ ಗೋಡೆಗಳ ಸಂದುಗಳಲ್ಲಿ ಪ್ರಾರ್ಥನೆ ಬರೆದ ಕಾಗದದ ಚೀಟಿ ಸಿಕ್ಕಿಸಿ ಬೇಡಿಕೊಳ್ಳುವ ಯಹೂದಿಗಳ ನಂಬಿಕೆಯಷ್ಟೇ ಗಟ್ಟಿಯಾಗಿ ನಿಂತಿರುವ ವೆಸ್ಟರ್ನ್ ವಾಲ್, ಅದರಿಂದ ಕೂಗಳತೆ ದೂರದಲ್ಲಿ ಚರ್ಚ್ ಆಫ್ ಹೋಲಿ ಸೆಪಲ್ಶ್, ಹಾಗೆಯೇ ತಲೆಯೆತ್ತಿ ನೋಡಿದರೆ ಇಸ್ಲಾಮ್ ಧರ್ಮೀಯರ ಮಸೀದಿ. ಸಂಘರ್ಷಕ್ಕೂ ಸಹಬಾಳ್ವೆಗೂ ಇನ್ಯಾವ ಉದಾಹರಣೆ ಸಿಕ್ಕೀತು. ನನ್ನನ್ನು ಹೆಚ್ಚು ಆಕರ್ಷಿಸಿದ್ದು, ಪ್ರತಿಯೊಂದು ಸ್ಥಳದ ಪಾವಿತ್ರ್ಯ ಮಾತ್ರವಲ್ಲ, ಅವು ಎಷ್ಟು ಹತ್ತಿರದಲ್ಲಿ ನಿಂತಿವೆಯಲ್ಲ ಎಂಬುದು.
ಇಡೀ ಜೆರುಸಲೆಮ್ ಒಂದೇ ಬಣ್ಣದಲ್ಲಿದೆ. ಜೆರುಸಲೆಮ್ ಸ್ಟೋನ್ ನಲ್ಲಿ ಕಟ್ಟುವುದು ಇಲ್ಲಿ ಕಡ್ಡಾಯವಂತೆ. ಬಿಳಿ ಮತ್ತು ಹೊಂಬಣ್ಣ ಮಿಶ್ರಿತ ಕಲ್ಲು ಅದು. ಇದರಿಂದಾಗಿ ಇಡೀ ನಗರವೇ ಒಂದು ಶಿಲ್ಪಕಲೆ ಅನಿಸಿಬಿಡುತ್ತದೆ. ಹಾಗಂತ ನಗರ ಮುಂದುವರಿದಿಲ್ಲವೇ ಅಂತ ಕೇಳುವ ಹಾಗಿಲ್ಲ. ಆಧುನಿಕ ಟ್ರಾಮ್ ಮಾರ್ಗಗಳು ಇದೇ ಪ್ರಾಚೀನ ಸಿಟಿಯಲ್ಲೂ ಹಾದು ಹೋಗುತ್ತವೆ. ಗಿಜಿಗುಡುವ ಮಾರ್ಕೆಟ್ ಗಳೂ ಇಲ್ಲಿವೆ.
ವೆಲ್ ಆಫ್ ನಾಲೆಜ್!
ಜೆರುಸಲೆಮ್ ನ ಇಸ್ರೇಲ್‌ನ ರಾಷ್ಟ್ರೀಯ ಗ್ರಂಥಾಲಯ ಅಚ್ಚರಿತರಿಸುವ ಇನ್ನೊಂದು ತಾಣ. ವು ಬಾವಿಯಂತೆ ನಿರ್ಮಿಸಿರುವ ಈ ಲೈಬ್ರರಿಗೆ ವೆಲ್ ಆಫ್ ನಾಲೆಜ್ ಎಂದೇ ಕರೆಯುತ್ತಾರೆ. ಈ ಲೈಬ್ರರಿಯಲ್ಲಿ ಪುಸ್ತಕ ಓದುವುದು ನಂತರದ ಮಾತು, ಕಟ್ಟಡದ ವಿನ್ಯಾಸ ನೋಡಲೆಂದೇ ಹೋಗಬೇಕು. ಇಲ್ಲಿ ಸೂರ್ಯನ ಬೆಳಕು ಗಾಜಿನ ಗೋಡೆಗಳ ಮೂಲಕ ಓದುವ ಹಾಲ್‌ಗೆ ಹರಿಯುವಂತೆ ಮಾಡಿದ್ದಾರೆ. ನಿಶ್ಶಬ್ದದ ಪರಮಾವಧಿ ಏನೆಂದು ಅರ್ಥವಾಗಲು ಈ ಗ್ರಂಥಾಲಯವನ್ನೊಮ್ಮೆ ಪ್ರವೇಶಿಸಬೇಕು.
ಇಲ್ಲಿ ಪುಸ್ತಕಗಳ ಕೊಡು-ಕೊಳ್ಳುವಿಕೆ, ಜೋಡಿಸುವಿಕೆಗೆ ರೊಬೋಟ್ ಬಳಕೆ ಇದೆ. ಯಹೂದಿ ಹಸ್ತಪ್ರತಿಗಳು, ಅರಬ್ ಸಾಹಿತ್ಯ, ಮರೆತುಹೋದ ಸಮುದಾಯಗಳ ಛಾಯಾಚಿತ್ರಗಳು ಮತ್ತು ಜಾಗತಿಕ ದಾಖಲೆಗಳು ಎಲ್ಲವೂ ಒಂದೇ ಸೂರಿನಡಿ ಸಿಗುವ ಲೈಬ್ರರಿ ಈ ವೆಲ್ ಆಫ್ ನಾಲೆಜ್.
ಬಾಯಿರುಚಿಗೆ ಮಹಾನೆ ಯೆಹೂದ
ಒಂದು ಸ್ಥಳದ ಬಗ್ಗೆ ಅರಿಯಬೇಕು ಅಂದರೆ ಅಲ್ಲಿನ ಆಹಾರವನ್ನು ಸವಿಯಬೇಕಂತೆ. ಜೆರುಸಲೆಮ್ ನ ಈ ಮಾರ್ಕೆಟ್ ನನಗೆ ಇಸ್ರೇಲನ್ನು ಆಹಾರದ ಮೂಲಕ ಅರ್ಥಮಾಡಿಸಿತ್ತು. ಮಹಾನೆ ಯೆಹೂದ ಮಾರ್ಕೆಟ್ ಒಂದು ಕಲರ್ ಫುಲ್ ಜಗತ್ತು. ತಿನಿಸುಗಳೂ ಇಲ್ಲಿ ಬಣ್ಣಗಳ ಸಂಗಮದಂತಿದ್ದವು. ಕೆಂಪು ದಾಳಿಂಬೆಗಳು, ಆಲಿವ್ ಹಣ್ಣುಗಳು, ಮತ್ತು ಬಣ್ಣಬಣ್ಣದ ಹಲ್ವಾ ಇಟ್ಟ ಪಾತ್ರೆಗಳು ಮಾರ್ಕೆಟ್ ತುಂಬ ಫಳಫಳಿಸುತ್ತಿದ್ದವು. ಪ್ರತಿ ಅಂಗಡಿಗಳಲ್ಲೂ ಬಗೆಬಗೆಯ ಸಿಹಿತಿಂಡಿ.
ಸಂಜೆಯಾಗುತ್ತಿದ್ದಂತೆಯೇ ಮಾರ್ಕೆಟ್ ಲೈಫ್ ನೈಟ್ ಲೈಫ್ ಆಗಿ ಬದಲಾಗುತ್ತದೆ. ಬಾರ್‌ಗಳು ಮತ್ತು ಕೆಫೆಗಳು ಸಂಗೀತ ಮತ್ತು ಹರ್ಷೋದ್ಗಾರಗಳಿಂದ ತುಂಬಿ ತುಳುಕುತ್ತವೆ. ಮುಚ್ಚಿದ ಅಂಗಡಿಗಳ ಶಟರ್‌ಗಳ ಮೇಲಿನ ಗ್ರಾಫಿಟಿಗಳು ಆರ್ಟ್ ಗ್ಯಾಲರಿಯನ್ನು ನೋಡುತ್ತಿರುವ ಅನುಭವ ಕೊಡುತ್ತವೆ. ಇಲ್ಲಿ ಯಹೂದಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪ್ರವಾಸಿಗರು ಎಂಬ ಭೇದವಿಲ್ಲ. ಎಲ್ಲರೂ ವೈವಿಧ್ಯಮಯ ಆಹಾರ ಮತ್ತು ನೈಟ್ ಲೈಫ್ ಅನುಭವಿಸುವ ಮನುಜರಷ್ಟೆ.
'ಸೇವ್ ಎ ಚೈಲ್ಡ್ಸ್ ಹಾರ್ಟ್'
ನನ್ನ ಪ್ರವಾಸದ ಅತ್ಯಂತ ಸ್ಫೂರ್ತಿದಾಯಕ ಅನುಭವಗಳಲ್ಲಿ ಒಂದೆಂದರೆ ಟೆಲ್ ಅವೀವ್ ಬಳಿಯಿರುವ ಸೇವ್ ಎ ಚೈಲ್ಡ್ಸ್ ಹಾರ್ಟ್ (Save a Child’s Heart) ಕೇಂದ್ರಕ್ಕೆ ಭೇಟಿ ನೀಡಿದ್ದು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳ ಜೀವ ಉಳಿಸುವ ಸಲುವಾಗಿ ಇದರ ನಿರ್ಮಾಣವಾಗಿದೆ. ಅಂಥ ಮಕ್ಕಳನ್ನು ಶಸ್ತ್ರಚಿಕಿತ್ಸೆಗಾಗಿ ಇಸ್ರೇಲ್‌ಗೆ ಕರೆತರಲಾಗುತ್ತದೆ.

ಇದು ಆಸ್ಪತ್ರೆಯಂತಿರಬಹುದು ಎಂದು ಭಾವಿಸಿದ್ದ ನನ್ನ ಎಣಿಕೆ ತಪ್ಪಾಗಿತ್ತು. ಇದು ಆಸ್ಪತ್ರೆಯಲ್ಲ ಮನೆ. ವೆಸ್ಟ್ ಬ್ಯಾಂಕ್, ಸಿರಿಯಾ, ಇರಾಕ್, ಯೆಮೆನ್, ಆಫ್ರಿಕಾ ಮತ್ತು ಇತರ ಹಲವು ದೇಶಗಳ ಮಕ್ಕಳು ಅಂಗಳದಲ್ಲಿ ಒಟ್ಟಿಗೆ ಆಡುತ್ತಿದ್ದರು. ಇಲ್ಲಿ ಮಕ್ಕಳು ಗುಣವಾಗೋಕೆ ಚಿಕಿತ್ಸೆಗಿಂತ ವಾತಾವರಣವೇ ಔಷಧವಾಗಿದೆ. ಇಲ್ಲಿ ವೈದ್ಯರು ಮತ್ತು ದಾದಿಯರು ರಾಷ್ಟ್ರೀಯತೆ, ಧರ್ಮ ಅಥವಾ ರಾಜಕೀಯದಿಂದ ಪ್ರೇರಿತರಾಗಿಲ್ಲ. ಸೇವೆಯೊಂದೇ ಅವರ ಧ್ಯೇಯ.
ಇಸ್ರೇಲ್ ತಂತ್ರಜ್ಞಾನ, ಯುದ್ಧಕೌಶಲಗಳನ್ನು ಮೀರಿದ ಮಾನವೀಯತೆ ಹೊಂದಿದೆ ಎಂಬುದಕ್ಕೆ ಈ ಆರೋಗ್ಯಕೇಂದ್ರ ಸಾಕ್ಷಿ.
ಸ್ಟಾರ್ಟಪ್ ರಾಷ್ಟ್ರ !
ಇಸ್ರೇಲ್ ಅನ್ನು ಏಕೆ “ಸ್ಟಾರ್ಟ್-ಅಪ್ ರಾಷ್ಟ್ರ” ಎಂದು ಕರೆಯುತ್ತಾರೆ ಎಂಬುದಕ್ಕೆ ಹೈಫಾದಲ್ಲಿರುವ ಟೆಕ್ನಿಯನ್ ಉತ್ತರವಾಗಿ ನಿಲ್ಲುತ್ತದೆ.
ಪಿಲ್‌ಕ್ಯಾಮ್ (PillCam) ಮತ್ತು ಐರನ್ ಡೋಮ್ (Iron Dome) ರಕ್ಷಣಾ ವ್ಯವಸ್ಥೆಯಂಥ ಆವಿಷ್ಕಾರಗಳು ಇಸ್ರೇಲ್ ಅನ್ನು ಜಗತ್ತು ತಿರುಗಿ ನೋಡುವಂತೆ ಮಾಡಿವೆ. ಇಸ್ರೇಲ್‌ನ ಹೊಸತನಗಳು ಅದರ ಸಂಪನ್ಮೂಲಗಳಲ್ಲಿಲ್ಲ; ಅದರ ದೃಢ ಸಂಕಲ್ಪದಲ್ಲಿವೆ. ಒಂದು ಮರುಭೂಮಿ ರಾಷ್ಟ್ರವು ಹನಿ ನೀರಾವರಿಯನ್ನು ಕರಗತ ಮಾಡಿಕೊಂಡಿದೆ, ನೀರಿನ ಲವಣಾಂಶವನ್ನು ತೆಗೆದುಹಾಕಿ ನೀರಿನ ಬಳಕೆ ಮಾಡಲು ಮುಂದಾಗಿದೆ. ಶೇಕಡಾ 90ರಷ್ಟು ತ್ಯಾಜ್ಯ ನೀರನ್ನು ಮರುಬಳಕೆ ಮಾಡಿದೆ ಅಂದರೆ ಇಚ್ಛಾಶಕ್ತಿಯನ್ನು ಅಂದಾಜು ಮಾಡಬಹುದು. ಇಸ್ರೇಲ್ ಎಂಬ ಮರುಭೂಮಿ ಜಗತ್ತಿಗೆ ಚೆರ್ರಿ ಟೊಮೆಟೊಗಳನ್ನು ನೀಡುತ್ತಿದೆ ಎಂಬುದು ಅಚ್ಚರಿಯಲ್ಲವೇ?
ಇಸ್ರೇಲ್ ಕಲಿಸಿದ್ದೇನು?
ನನ್ನ ಪ್ರಯಾಣ ಕೊನೆಗೊಂಡಾಗ, ಇಸ್ರೇಲ್ ಕೇವಲ ವಿರೋಧಾಭಾಸಗಳ ನಾಡಲ್ಲ ಎಂದು ನನಗೆ ಅರಿವಾಯಿತು. ಇದು ಸಂಪರ್ಕಗಳ ನಾಡು. ಭೂತಕಾಲ ಮತ್ತು ಭವಿಷ್ಯ, ನೆನಪು ಮತ್ತು ಹೊಸತನ, ಬದುಕುಳಿಯುವಿಕೆ ಮತ್ತು ಸೃಜನಶೀಲತೆ, ನಂಬಿಕೆ ಮತ್ತು ಸಹಬಾಳ್ವೆಯ ನಡುವಿನ ಸಂಪರ್ಕ ಈ ದೇಶ. ಸ್ವಾಭಿಮಾನ, ಸಹಬಾಳ್ವೆ, ಪುಟಿದೆದ್ದು ನಿಲ್ಲುವ ಛಲ ಇವೆಲ್ಲ ಇಸ್ರೇಲ್ ಕಲಿಸಿದ ಪಾಠಗಳು. ಕೇವಲ ಒಂದು ಭೇಟಿಯಲ್ಲಿ ಇಸ್ರೇಲ್ ಪೂರ್ತಿ ಅರ್ಥವಾಗುವುದಿಲ್ಲ. ಪೂರ್ತಿ ನೋಡಲೂ ಆಗುವುದಿಲ್ಲ. ಬಹುಶಃ ಮತ್ತೆ ಮತ್ತೆ ಇಸ್ರೇಲ್ ಕರೆಸಿಕೊಳ್ಳಬಹುದು.