Monday, August 18, 2025
Monday, August 18, 2025

ಕೈ ಮುಗಿದು ಏರು ಇದು ಕೆಎಸ್‌ಟಿಡಿಸಿ ತೇರು.. ಪಯಣ ಮಡಿಕೇರಿ ಕಡೆಗೆ

ಸುತ್ತುವ ಖಯಾಲಿ ಇರುವವರಿಗಾಗಿಯೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಕರ್ನಾಟಕದ ಪ್ರವಾಸಿಗರನ್ನು ಇಡೀ ರಾಜ್ಯ ಸುತ್ತಿಸುವ ಯೋಜನೆ ಹಾಕಿಕೊಂಡಿದೆ. ಬಜೆಟ್‌ ಸ್ನೇಹಿ ಪ್ಯಾಕೇಜ್‌ ಗಳೊಂದಿಗೆ ವಿಸ್ಮಯವಾದ ತಾಣಗಳಿಗೆ ಕರೆದೊಯ್ಯುತ್ತಿದೆ. ಹತ್ತಾರು ಪ್ಯಾಕೇಜ್‌ ಗಳನ್ನು ಘೋಷಿಸುವ ಮೂಲಕ ಕೇರಳ ಪ್ರವಾಸೋದ್ಯಮಕ್ಕೂ ಸೆಡ್ಡು ಹೊಡೆಯುತ್ತಿದೆ.

ಇದೀಗ ಸಂಭ್ರಮದ ಮುಸಲಧಾರೆ ಶುರುವಾಗಿದೆ. ಸಸ್ಯ ಶ್ಯಾಮಲೆ ಎಲ್ಲೆಡೆ ತನ್ನ ಸೆರಗನ್ನು ಚಾಚಿ ಕಂಗೊಳಿಸುತ್ತಿದ್ದಾಳೆ. ನದಿಗಳು ತುಂಬಿ ಹರಿಯುತ್ತಿವೆ. ಜಲಪಾತಗಳು ಭೋರ್ಗರೆಯುತ್ತಿವೆ. ಕೋಕಿಲ ಗಾನ ಮೊಳಗುತ್ತಿದೆ. ಹಕ್ಕಿಗಳು ಇಂಪಾಗಿ ಚಿಂವ್‌ ಗುಟ್ಟುತ್ತಿವೆ. ನವಿಲುಗಳು ಥಕ ಥೈ ಕುಣಿಯುತ್ತಿವೆ. ವನ್ಯ ಜೀವಿಗಳೆಲ್ಲವೂ ಮೈ ಕೈ ಅರಳಿಸಿಕೊಂಡು ನಿಂತಿವೆ. ಇದು ಶ್ರಾವಣ ಮಾಸ. ನಾವು ʼಶ್ರಾವಣ ಮಾಸ ಬಂದಾಗ ಆನಂದ ತಂದಾಗʼ ಎಂದು ದನಿಬಿಚ್ಚಿ ಹಾಡಬಹುದು. ಇತ್ತ ಪ್ರವಾಸಿಗರು ಹೊಸ ಹುರುಪಿನೊಂದಿಗೆ ಮಾನ್ಸೂನ್‌ ಮಳೆಯಲ್ಲಿ ತೊಯ್ದು ಸಂಭ್ರಮಿಸಲು ಸಜ್ಜಾಗಿದ್ದಾರೆ.

madikeri 1

ಕರ್ನಾಟಕದಲ್ಲಿರುವ ಅದ್ಭುತ ತಾಣಗಳಿಗೆ ದಂಡು ದಂಡಾಗಿ ಹೋಗುತ್ತಿದ್ದಾರೆ. ಪ್ರವಾಸಿ ಪ್ರಿಯರು ಅಕ್ಷರಶಃ ರೆಕ್ಕೆ ತೆರೆದ ಹಕ್ಕಿಗಳಾಗಿದ್ದಾರೆ. ಪ್ರವಾಸದ ಮೂಲಕವೇ ಎಲ್ಲ ಜಂಜಾಟಗಳನ್ನು ಮರೆಯುತ್ತಿದ್ದಾರೆ. ಜಗತ್ತಿನ ಎಲ್ಲ ಸಡಗರವನ್ನು ತಮ್ಮೊಳಗೆ ತಂದುಕೊಳ್ಳುತ್ತಿದ್ದಾರೆ ಮತ್ತು ತುಂಬಿಕೊಳ್ಳುತ್ತಿದ್ದಾರೆ. ಇಡೀ ಪ್ರಕೃತಿ ನಗುವಿನ ಹೊಳೆ ಹರಿಸಿದೆ. ಮನಸ್ಸಿಗೆ ತಿಲ್ಲಾನ ಬರೆದಿದೆ. ಇಷ್ಟೆಲ್ಲ ಸಂತಸದ ನಡುವೆ ನಾವು ಮನೆಯೊಳಗೆ ಬೆಚ್ಚಗೆ ಅವಿತು ಕೂರುವುದು ಸರಿಯಲ್ಲ. ಕಂಬಳಿ ಸರಿಸಿ ಹೊಸ್ತಿಲು ದಾಟಿ ಹೊರಬರಲೇಬೇಕು.

ಯಾಂತ್ರಿಕ ಬದುಕಿನಿಂದ ನುಣುಚಿಕೊಂಡು ಯಾತ್ರಿಕ ಬದುಕಿಗೆ ತೆರೆದುಕೊಳ್ಳಬೇಕು. ಯಾತ್ರಿಕ ಬದುಕು ಮಾತ್ರ ನಮ್ಮ ಬದುಕನ್ನು ಸಂಭ್ರಮದ ಖಜಾನೆ ಆಗಿಸಬಲ್ಲದು. ಸುತ್ತುವವರಿಗಷ್ಟೇ ಈಗ ಕಿಮ್ಮತ್ತು. ಸುತ್ತುವ ಅಭಿರುಚಿ ಇಲ್ಲದವನು ರಸಿಕನೇ ಅಲ್ಲ. ಅವನು ಶುದ್ಧ ಅರಸಿಕ. ಅದೆಲ್ಲಾ ಇರಲಿ; ಸುತ್ತುವ ಖಯಾಲಿ ಇರುವವರಿಗಾಗಿಯೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಕರ್ನಾಟಕದ ಪ್ರವಾಸಿಗರನ್ನು ಇಡೀ ರಾಜ್ಯ ಸುತ್ತಿಸುವ ಯೋಜನೆ ಹಾಕಿಕೊಂಡಿದೆ. ಬಜೆಟ್‌ ಸ್ನೇಹಿ ಪ್ಯಾಕೇಜ್‌ ಗಳೊಂದಿಗೆ ವಿಸ್ಮಯವಾದ ತಾಣಗಳಿಗೆ ಕರೆದೊಯ್ಯುತ್ತಿದೆ. ಹತ್ತಾರು ಪ್ಯಾಕೇಜ್‌ ಗಳನ್ನು ಘೋಷಿಸುವ ಮೂಲಕ ಕೇರಳ ಪ್ರವಾಸೋದ್ಯಮಕ್ಕೂ ಸೆಡ್ಡು ಹೊಡೆಯುತ್ತಿದೆ. ಈ ಮೂಲಕ ಬೇರೆಲ್ಲ ರಾಜ್ಯಗಳಿಗಿಂತಲೂ ನೈಸರ್ಗಿಕವಾಗಿ ಶ್ರೀಮಂತವಾಗಿರುವ ಕರ್ನಾಟಕವು ಪ್ರವಾಸೋದ್ಯಮದಲ್ಲಿ ಹೊಸ ಭಾಷ್ಯ ಬರೆಯುವುದರಲ್ಲಿ ಅನುಮಾನವಿಲ್ಲ.

ನವ ಚೈತನ್ಯದೊಂದಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್ ಟಿಡಿಸಿ) ಪ್ರವಾಸಿಗರಿಗಾಗಿಯೇ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಿದೆ. ನಿಸರ್ಗ ಸೌಂದರ್ಯ ಸವಿಯಲು, ಗತ ಕಾಲದ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು, ಜಲಪಾತಕ್ಕೆ ಮೈಯೊಡ್ಡಲು ಕೆ ಎಸ್ ಟಿ ಡಿ ಸಿ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಅದರಲ್ಲಿ ಬಹಳ ಪ್ರಮುಖವಾಗಿ ನಾಗರಹೊಳೆ-ಮಡಿಕೇರಿ-ನಿಸರ್ಗಧಾಮ-ಗೋಲ್ಡನ್‌ ಟೆಂಪಲ್‌ ಗೆ ಪ್ರವಾಸಿಗರನ್ನು ಕೈ ಹಿಡಿದು ಕರೆದುಕೊಂಡು ಹೋಗುತ್ತಿದೆ. ಇದು ಎರಡು ದಿನಗಳ ವಿಶೇಷ ಪ್ಯಾಕೇಜ್‌ ಆಗಿದ್ದು, ಬಹಳ ಅಚ್ಚುಕಟ್ಟಾಗಿ ಪ್ರತಿಯೊಂದನ್ನೂ ರೂಪಿಸಿದ್ದಾರೆ. ಎರಡು ದಿನಗಳ ಪ್ರವಾಸದಲ್ಲೂ ಕಣ್ಮನ ಸೆಳೆಯುವ ಜಾಗಗಳು, ಪ್ರಸಿದ್ಧ ಹೊಟೇಲ್‌ ಗಳಲ್ಲಿ ಬೆಳಗಿನ ಉಪಾಹಾರ, ಊಟ ಸೇವನೆ ಮತ್ತು ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೆ ಎಸ್ ಟಿ ಡಿ ಸಿ ಇದೀಗ ಪ್ರವಾಸಿಗರ ಆಪ್ತ ಸಂಗಾತಿ.

madikeri (1)

ಮಡಿಕೇರಿ ಮಂಜು

ಕೊಡಗು ಯಾರಿಗೆ ಗೊತ್ತಿಲ್ಲ ಹೇಳಿ? ವನಸಿರಿಯ ಸೌಂದರ್ಯವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಪ್ರವಾಸಿಗರನ್ನು ಸದಾ ಸೆಳೆಯುವ ಕೊಡಗು ಭಾರತದ ಸ್ಕಾಟ್‌ ಲ್ಯಾಂಡ್.‌ ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಕೊಡಗಿನ ನೆಲದಲ್ಲಿ ನಿಂತು ಕಣ್ತುಂಬಿಕೊಳ್ಳಬಹುದು. ಕೊಡವರ ನಾಡಾದ ಕೊಡಗಿನಲ್ಲಿ ಏನೇನಿಲ್ಲ? ಎಲ್ಲವೂ ಇದೆ. ಧುಮುಕುವ ಜಲಪಾತ, ನದಿ, ತೊರೆ, ಅರಣ್ಯ ಅಷ್ಟು ಮಾತ್ರವೇ? ಉಹೂಂ. ಪುರಾಣ ಪ್ರಸಿದ್ಧ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು, ವನ್ಯಜೀವಿ ಅಭಯಾರಣ್ಯ ಹೀಗೆ ಕೊಡಗಿನಲ್ಲಿ ಎಲ್ಲವೂ ಇದೆ. ಕೊಡಗಿನ ಸೆಳೆತವೆಂಬುದು ಬಿಟ್ಟೆನೆಂದರೂ ಬಿಡದ ಮಾಯೆಯ ಹಾಗೆ. ಪ್ರವಾಸಿಗರೆಲ್ಲರೂ ಗುಪ್ತರತ್ನದಂತಿರುವ ಕೊಡಗಿನ ಸೊಬಗಿಗೆ ಮಾರು ಹೋಗಿದ್ದಾರೆ. ಪ್ರವಾಸಿ ಪ್ರಿಯರು ಅದೇ ಕೊಡಗಿನಲ್ಲಿ ಹತ್ತಾರು ಬಾರಿ ಸುತ್ತಾಡಿ ಬಂದರೂ ಅದರ ಮೋಹದಿಂದ ಕಳಚಿಕೊಳ್ಳಲಾಗಿಲ್ಲ.

ಅರೆ.. ದೇಶ-ವಿದೇಶದ ಜನರಿಗೂ ಕೊಡಗಿನ ವಾತಾವರಣ ಮತ್ತು ಇಲ್ಲಿನ ಭೂದೃಶ್ಯ ಹಿತವಾದ ಅನುಭವವನ್ನು ಕೊಡುತ್ತದೆ. ಮಡಿಕೇರಿಯ ಮಂಜು? ಆಹಾ! ಯಾವ ಹಿಮಾಲಯಕ್ಕೂ ಕಮ್ಮಿ ಇಲ್ಲ. ಕರ್ನಾಟಕದಲ್ಲಿ ನೂರಾರು ಅತ್ಯದ್ಭುತವಾದ ಪ್ರವಾಸಿ ತಾಣಗಳಿರಬಹುದು. ಆದರೆ ಮಡಿಕೇರಿ, ನಾಗರಹೊಳೆಗೆ ಸರಿ ಸಾಟಿಯಿರುವ ಮತ್ತೊಂದು ತಾಣವುಂಟೆ? ನಮ್ಮಲ್ಲೇ ಇರುವ ವಿಸ್ಮಯವಾದ ತಾಣಗಳನ್ನು ತೋರಿಸಲು ಕೆಎಸ್‌ ಟಿ ಡಿ ಸಿ ಈಗ ಎರಡು ದಿನಗಳ ಪ್ಯಾಕೇಜ್‌ ತಂದಿದೆ. ಮಡಿಕೇರಿ, ನಾಗರಹೊಳೆ, ನಿಸರ್ಗಧಾಮ, ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ನರ ಪವಿತ್ರ ಸ್ಥಳವಾದ ಗೋಲ್ಡನ್‌ ಟೆಂಪಲ್‌, ತಲಕಾವೇರಿ, ಭಗಂಡೇಶ್ವರ ದೇವಾಲಯ, ಅಬ್ಬೆ ಫಾಲ್ಸ್‌ ಹೀಗೆ ಮನಮೋಹಕ ಜಾಗಗಳಿಗೆ ಈ ಪ್ಯಾಕೇಜ್‌ ನಡಿ ಹೋಗಿಬರಬಹುದು. ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ಸ್ಟ್ಯಾಂಡ್‌ ಮತ್ತು ಮೈಸೂರಿನ ಸ್ಟ್ಯಾಂಡ್‌ ನಿಂದಲೂ ಕೆಎಸ್ ಟಿ ಡಿ ಸಿ ಬಸ್ಸುಗಳು ಪ್ರವಾಸಿಗರನ್ನು ತುಂಬಿಕೊಂಡು ಮಡಿಕೇರಿಯತ್ತ ಹೊರಡುತ್ತವೆ. ಜತೆಗೆ ಟೂರ್ ಗೈಡ್ ಗಳಿರುತ್ತಾರೆ. ಅಗತ್ಯ ಮತ್ತು ಕುತೂಹಲಕಾರಿ ಮಾಹಿತಿಯನ್ನು ಒದಗಿಸುತ್ತ ಸ್ಥಳ ಮಹಿಮೆಯನ್ನು ಪರಿಚಯಿಸುತ್ತಾರೆ. ಬಸ್ ಪ್ರಯಾಣ ಆರಾಮದಾಯಕವಾಗಿರುತ್ತದೆ. ಎಲ್ಲಿಯೂ ನಿರಾಶೆಯಾಗದಂತೆ ಅಚ್ಚುಕಟ್ಟಾಗಿ ಯೋಜನೆಯನ್ನು ರೂಪಿಸಿರಲಾಗುತ್ತದೆ.

madikeri

ಪ್ಯಾಕೇಜ್

ಕೆಎಸ್‌ಟಿಡಿಸಿಯಲ್ಲಿ ಬುಕ್‌ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್‌ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಎರಡು ದಿನದ ಪ್ರವಾಸ(ಶುಕ್ರವಾರ ಮತ್ತು ಶನಿವಾರ)

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಮೊದಲ ದಿನ

ಬೆಳಗ್ಗೆ 6:30 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್‌ ಸ್ಟ್ಯಾಂಡ್‌ ನ ಕೆಎಸ್‌ಟಿಡಿಸಿ ಬುಕಿಂಗ್‌ ಕೌಂಟರ್‌ ನಿಂದ ಹೊರಡಲಾಗುತ್ತದೆ.

ಬೆಳಗ್ಗೆ 8:30-9:00 ಗಂಟೆಗೆ ಬಿಡದಿಯ ಕಾಮತ್‌ ಹೊಟೇಲ್‌ ನಲ್ಲಿ ಶುಚಿ-ರುಚಿಯಾದ ಉಪಾಹಾರ.

ಮಧ್ಯಾಹ್ನ 12:30-1:00 ಗಂಟೆಗೆ ಬೈಲುಕುಪ್ಪೆಯಲ್ಲಿರುವ ಗೋಲ್ಡನ್‌ ಟೆಂಪಲ್‌ ಗೆ ಭೇಟಿ.

ಮಧ್ಯಾಹ್ನ 1:15-2:00 ಗಂಟೆಗೆ ಕುಶಾಲನಗರದಲ್ಲಿ ಊಟ.

ಮಧ್ಯಾಹ್ನ 2:15-3:15 ಗಂಟೆಗೆ ಕಾವೇರಿ ನಿಸರ್ಗಧಾಮಕ್ಕೆ ಭೇಟಿ.

ಸಂಜೆ 4:15-5:00 ಗಂಟೆಗೆ ಅಬ್ಬೆ ಜಲಪಾತ.

ಸಂಜೆ 5:20-6:30 ಗಂಟೆಗೆ ರಾಜಾಸೀಟ್‌ ಪಾರ್ಕ್‌ ಗೆ ಭೇಟಿ.

ರಾತ್ರಿ 7:45 ಗಂಟೆಗೆ ಭಾಗಮಂಡಲದಲ್ಲಿರುವ ಮಯೂರ ಹೊಟೇಲ್‌ ನಲ್ಲಿ ವಾಸ್ತವ್ಯ.

ಎರಡನೇ ದಿನ

ಬೆಳಗ್ಗೆ 6:00 ಗಂಟೆಗೆ ತಲಕಾವೇರಿಗೆ ಹೊರಡಲಾಗುತ್ತದೆ.

ಬೆಳಗ್ಗೆ 8:00-8:30 ಗಂಟೆಗೆ ತಲಕಾವೇರಿ(ಕಾವೇರಿ ಉಗಮಸ್ಥಾನ) ಭೇಟಿ.

ಬೆಳಗ್ಗೆ 8:45-9:15 ಗಂಟೆಗೆ ಭಾಗಮಂಡಲದಲ್ಲಿ ಉಪಾಹಾರ, ತ್ರಿವೇಣಿ ಸಂಗಮ ಮತ್ತು ಭಗಂಡೇಶ್ವರ ದೇವಾಲಯಕ್ಕೆ ಭೇಟಿ.

ಮಧ್ಯಾಹ್ನ 12:30-1:15 ಗಂಟೆಗೆ ಗೋಣಿಕೊಪ್ಪದಲ್ಲಿ ಊಟ.

ಮಧ್ಯಾಹ್ನ 3:15- ಸಂಜೆ 5:00 ಗಂಟೆಗೆ ನಾಗರಹೊಳೆ ಭೇಟಿ.

ಸಂಜೆ 5:00 ಗಂಟೆಗೆ ಬೆಂಗಳೂರಿಗೆ ಹೊರಡಲಾಗುತ್ತದೆ.

ರಾತ್ರಿ 10:00 ಗಂಟೆಯ ಸುಮಾರಿಗೆ ಬೆಂಗಳೂರಿಗೆ ತಲುಪಲಾಗುವುದು.

ಸಂಪರ್ಕ:
+91 80-4334 4334

kstdc 1


ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್‌ ಬಜೆಟ್‌ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್‌ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್‌ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ತೆರೆದಿದೆ ಮಯೂರ.. ಓ ಬಾ ಅತಿಥಿ

ಎರಡು ದಿನಗಳು ಕೊಡಗಿನ ಪ್ರವಾಸದಲ್ಲಿ ಸಂಭ್ರಮಿಸಬಹುದು. ಅಲ್ಲಿನ ವಾತಾವರಣಕ್ಕೆ ಮೈ ಮರೆತು ರೆಕ್ಕೆ ಬಿಚ್ಚಿ ಕುಣಿಯಲೂಬಹುದು. ಆದರೆ ರಾತ್ರಿ ಅಲ್ಲಿಯೇ ಉಳಿದುಕೊಂಡು ಶುಚಿ ರುಚಿ ಊಟ ಮಾಡುವ ಮನಸ್ಸಾಗುತ್ತದೆ. ಯಾವ ಹೊಟೇಲ್‌ ಸೂಕ್ತ? ಯಾರ ಆತಿಥ್ಯ ನಮಗೆ ಹಿತವೆನಿಸುತ್ತದೆ? ಆತಿಥ್ಯಕ್ಕಂತಲೇ ಪಶ್ಚಿಮಘಟ್ಟದ ಬೆಟ್ಟಗಳ ಸಮೀಪ ಮಯೂರ ಹೊಟೇಲ್‌ ಇದೆ. ರಾಜಾಸೀಟ್‌ ನ ಸೊಬಗನ್ನು ಸವಿಯುತ್ತಾ, ಬೆಟ್ಟಗಳ ಮೇಲೆ ನಿಂತು ವ್ಯೂ ಪಾಯಿಂಟ್‌ ವೀಕ್ಷಿಸುತ್ತಾ ಮಯೂರದಲ್ಲಿ ಉಳಿದುಕೊಳ್ಳಬಹುದು.

ಪ್ರವಾಸಿಗರ ಮನೋಭಿಲಾಷೆಗಳನ್ನು ಈಡೇರಿಸುವ ಕೆಲಸವನ್ನು ಮಯೂರ ಬಹಳ ಪ್ರಾಮಾಣಿಕವಾಗಿ ಮಾಡುತ್ತಿದೆ. ಅತ್ಯಂತ ವಿಶ್ವಾಸಾರ್ಹ ಮತ್ತು ಗ್ರಾಹಕರ ಅಚ್ಚುಮೆಚ್ಚಿನ ಹೊಟೇಲ್‌ ಎಂದರೆ ಅದು ಮಯೂರ. ಈ ಹೊಟೇಲ್ ರೆಸ್ಟೋರೆಂಟ್‌ ಮತ್ತು ಬಸ್ ಶೆಟರ್‌ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದೆ.‌ ವಾಸ್ತವ್ಯ ವ್ಯವಸ್ಥೆ, ಶುಚಿ ಮತ್ತು ರುಚಿಯಾದ ಊಟ, ಆಕರ್ಷಕವಾದ ರೆಸ್ಟೋರೆಂಟ್‌, ಫಂಕ್ಷನ್‌ ಹಾಲ್‌, ಲಾನ್‌ ಮತ್ತು ಈಜುಕೊಳ ಹೀಗೆ ಬೇಕಾದ್ದು ಅಲ್ಲಿದೆ. 1725 ರುಪಾಯಿಯಿಂದ ರೂಮುಗಳ ಶುಲ್ಕ ಪ್ರಾರಂಭವಾಗುತ್ತದೆ. ಉಳಿದುಕೊಳ್ಳಲು ಅಲ್ಲಿ ಸಾಕಷ್ಟು ಕೋಣೆಗಳಿವೆ. ರಸಗವಳದಂಥ ಊಟವನ್ನು ಅಲ್ಲಿನ ಸಿಬ್ಬಂದಿಗಳು ವ್ಯವಸ್ಥೆ ಮಾಡುತ್ತಾರೆ. ಆಪ್ತತೆಯಿಂದ ಮಾತಿಗಿಳಿಯುತ್ತಾರೆ. ಸರಿ ರಾತ್ರಿಯ ಮುಂಚೆಯೇ ಮಯೂರಗೆ ಚೆಕ್‌ ಇನ್‌ ಆಗಬೇಕು. ಹೊಟೇಲ್‌ ನ ಕಿಟಕಿ ತೆರೆದು ಹೊರಗಿನ ನೋಟಕ್ಕೆ ಕಣ್ಣು ನೆಟ್ಟಾಗ ಆಹಾ! ಅವ್ಯಕ್ತ ಆನಂದ. ಚಿಲ್‌ ಆಗಬೇಕೆಂದರೆ ಡ್ರಿಂಕ್ಸ್‌ ವ್ಯವಸ್ಥೆಯೂ ಇದೆ. ಕೊಡಗಿಗೆ ಹೋದಾಗ ಮಯೂರದಲ್ಲಿ ತಂಗಿ ಬನ್ನಿ.

ವಿಳಾಸ ಮತ್ತು ಸಂಪರ್ಕ:

ಹೊಟೇಲ್‌ ಮಯೂರ , ತಲಕಾವೇರಿ-ಭಾಗಮಂಡಲ

ರಾಜಾ ಸೀಟ್ ಹತ್ತಿರ, ಮಡಿಕೇರಿ 571 201

ಶ್ರೀ ರಿಜ್ವಾನ್ ಅಹ್ಮದ್ +918970650028

08272-228387

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat