ಮಿಡ್ಲ್ ಕ್ಲಾಸ್ ಗರ್ಲ್ ವಿತ್ ಫಸ್ಟ್ ಕ್ಲಾಸ್ ಡ್ರೀಮ್!
ಇಷ್ಟು ದಿನ ಫೋನಿನ ವಾಲ್‌ಪೇಪರ್‌ನಲ್ಲಿ ನೋಡುತ್ತಿದ್ದ ಬಿಗ್‌ಬೆನ್ ಕ್ಲಾಕ್‌ಟವರ್ ಕಣ್ಣಮುಂದೆ ಬಂದು ಧುತ್ತೆಂದು ನಿಂದಾಗ ಸಿಕ್ಕಾಪಟ್ಟೆ ಬೆರಗಾಗಿದ್ದೆ. ಬಸ್ಸಿನಲ್ಲಿ ಸಂಚರಿಸುತ್ತಿದ್ದರೆ ಸುತ್ತಮುತ್ತ ಕಾಣುತ್ತಿದ್ದ ಪುರಾತನ ಕಟ್ಟಡಗಳು, ಪಾರ್ಕ್‌ಗಳು, ಪುಟ್ಟ ಕೆಫೆಗಳು, ಬ್ರಿಟಿಷರ ಇತಿಹಾಸ ಸಾರುವ ಸ್ಥಳಗಳು..ಆಹಾ! ಇದನ್ನೆಲ್ಲ ನೋಡುವ ಜೊತೆಗೆ ಬಸ್ಸಿನಲ್ಲಿ ಕೊಟ್ಟ ಇಯರ್‌ಫೋನ್ ಧರಿಸಿ ಎಲ್ಲದರ ಇತಿಹಾಸವನ್ನೂ ಕೇಳುತ್ತಿದ್ದುದು ಮಜವಾಗಿತ್ತು.
- ಸಿರಿ ಮೈಸೂರು
ಏಳೆಂಟು ವರ್ಷಗಳ ಹಿಂದಿನ ಮಾತು. ಆಗಿನ್ನೂ ಪದವಿ ಓದುತ್ತಿದ್ದೆ. ಎರಡನೆಯ ವರ್ಷದಲ್ಲಿ ಕೃಷ್ಣಾನಂದ ಕಾಮತರ ʼನಾನು ಅಮೆರಿಕೆಗೆ ಹೋಗಿದ್ದೆʼ ಎಂಬ ಪುಸ್ತಕ ಇತ್ತು. ಅದನ್ನು ಓದುತ್ತಾ ಅದೆಷ್ಟು ಪ್ರಭಾವಿತಳಾಗಿದ್ದೆ ಎಂದರೆ, ʼನಾನೂ ಒಂದು ದಿನ ವಿದೇಶಕ್ಕೆ ಹೋಗೇ ತೀರಬೇಕುʼ ಎನ್ನುತ್ತಿತ್ತು ಮನಸ್ಸು. ಆಗ ಹೊಸದಾಗಿ ಕೈಲೊಂದು ಮೊಬೈಲು ಸಹ ಇತ್ತು. ಒಂದು ಚೆಂದದ ವಾಲ್‌ಪೇಪರ್ ಹಾಕೋಣವೆಂದು ಗೂಗಲ್ ತೆರೆದು ʼಬೆಸ್ಟ್ ವಾಲ್‌ಪೇಪರ್ಸ್ʼ ಅಂತ ಟೈಪ್ ಮಾಡಿದೆ. ಒಂದೆರಡು ನಿಮಿಷಗಳ ಹುಡುಕಾಟದ ನಂತರ ಕಂಡದ್ದು ಒಂದು ದೊಡ್ಡ ಕ್ಲಾಕ್ ಟವರ್. ಮುಂದೆ ಒಂದು ಕೆಂಪು ಬಸ್ಸು, ಕಪ್ಪು ಟ್ಯಾಕ್ಸಿ. ಫೋಟೋ ಚೆಂದವಾಗಿತ್ತೆಂದು ವಾಲ್‌ಪೇಪರ್ ಹಾಕಿಕೊಂಡೆ. ʼಯಾವುದಿದು ಇಷ್ಟು ಚೆಂದದ ಜಾಗ?ʼ ಎಂದು ಹುಡುಕಿದಾಗ ತಿಳಿದಿದ್ದು ಅದು ಲಂಡನ್! ಬ್ರಿಟಿಷರ ಊರು. ಇದೆಲ್ಲಾ ನಡೆದು ಏಳೆಂಟು ವರ್ಷಗಳಷ್ಟೇ ಆಗಿವೆ. ಖುಷಿಯ ಸಂಗತಿ ಎಂದರೆ ಅಷ್ಟು ವರ್ಷಗಳ ಹಿಂದಿನ ಕನಸು ಈಗ ನನಸಾಗಿದೆ. ʼಹೋಗಿರೋ ಒಂದು ದೇಶಕ್ಕೆ ಅದೆಷ್ಟು ಬಿಲ್ಡ್‌ಅಪ್ ಕೊಡ್ತಾಳಪ್ಪʼ ಎಂದು ಯಾರಾದರೂ ಅಂದುಕೊಳ್ಳುತ್ತಿದ್ದಲ್ಲಿ, ಒಂದು ಸಾಮಾನ್ಯ ಮಧ್ಯಮವರ್ಗದ ಹುಡುಗಿಗೆ ಇದು ದೊಡ್ಡ ವಿಷಯವೇ ಎಂಬುದು ಕೆಲವರಿಗೆ ಮಾತ್ರ ಅರ್ಥವಾಗುವ ಸಂಗತಿ. ಜೀವನದ ಪುಟ್ಟ ಕನಸೊಂದು ನನಸಾದಾಗ ಆಗುವ ಖುಷಿಯೇ ಬೇರೆ. ಲಂಡನ್ ನಗರದ ಪ್ರಸಿದ್ಧ ಸ್ಥಳಗಳು, ಪುರಾತನ ಕಟ್ಟಡಗಳನ್ನು ಮೊಬೈಲ್‌ನಲ್ಲೇ ನೋಡುತ್ತಾ ಕಣ್ಣರಳಿಸುತ್ತಿದ್ದ ನನಗೆ ಅಲ್ಲಿಗೆ ಅವಕಾಶ ಸಿಕ್ಕಿದ್ದು ಸೋಜಿಗ. ಇಷ್ಟೆಲ್ಲಾ ಇರುವಾಗ ಅದರ ಬಗ್ಗೆ ಬರೆಯದಿದ್ದರೆ ಹೇಗೆ?
ನನ್ನ ಲಂಡನ್ ಪ್ರವಾಸ 2024ರ ನವೆಂಬರ್‌ನಲ್ಲಿ ನಡೆದದ್ದು. ಪೂರಾ ಎಂಟು ದಿನಗಳ ಪ್ರವಾಸ. ಪಾಸ್‌ಪೋರ್ಟ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ವೀಸಾ ನೋಡಿದಾಕ್ಷಣ ಅನುಭವಿಸಿದ ಖುಷಿಗಂತೂ ಪದಗಳೇ ಇಲ್ಲ. ವೀಸಾ ತಲುಪಿದ ಐದೇ ದಿನಗಳ ನಂತರ ಪ್ರಯಾಣ ಗೊತ್ತಾಗಿತ್ತು. ಲಂಡನ್ ಚಳಿಯ ಊರು ಎಂದು ತಿಳಿದಿದ್ದ ಕಾರಣ ಹಾಗೂ ನವೆಂಬರ್ ಚಳಿಗಾಲವಾದ ಕಾರಣ ಎಂದೂ ಬಳಸದ ಭರಪೂರ ಜಾಕೆಟ್‌ಗಳು, ಶಾಲು, ಕುಲಾವಿ, ಶೂ..ಎಲ್ಲವನ್ನೂ ಪ್ಯಾಕ್ ಮಾಡಿಕೊಂಡಿದ್ದೆ. ಬೆಚ್ಚನೆ ಬಟ್ಟೆಗಳು, ಥರ್ಮಲ್ಸ್ ಸಹ ಬ್ಯಾಗಿನೊಳಗೆ ಬಂಧಿಯಾಗಿದ್ದವು. ಹನ್ನೊಂದು ಗಂಟೆಕಾಲದ ವಿಮಾನಪ್ರಯಾಣ ಅದೇ ಮೊದಲು. ಬೆಳಿಗ್ಗೆ ಏಳಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ಲಂಡನ್ ತಲುಪಿದಾಗ ಅಲ್ಲಿನ ಸಮಯ ಮಧ್ಯಾಹ್ನ 12.30. ಇಳಿಯುತ್ತಿದ್ದಂತೆ ಏರ್‌ಪೋರ್ಟ್‌ನಲ್ಲೇ Oyster Card ಖರೀದಿಸಿ ರೈಲು ಹತ್ತಿ ಹೊರಟಿದ್ದಾಯಿತು. ಲಂಡನ್‌ನ ಮೊದಲ ಚಳಿಯ ಅನುಭವ ಮಾತ್ರ ಮರೆಯಲು ಅಸಾಧ್ಯ. ಕೈ ಮರಗಟ್ಟುತ್ತಿತ್ತು, ಧರಿಸಿದ್ದ ತೆಳ್ಳಗಿನ ಸ್ವೆಟರ್ ದಾಟಿ ಚಳಿ ನನ್ನಲ್ಲೇ ಒಂದಾಗುತ್ತಿತ್ತು. ರೈಲು ಪ್ರಯಾಣದಲ್ಲಿ ಅತ್ತಿತ್ತ ಮರದ ಮನೆಗಳು, ಹುಲ್ಲುಗಾವಲು, ಆಕರ್ಷಕ ಬಣ್ಣದ ಎಲೆಗಳನ್ನೊಳಗೊಂಡ ಮರಗಳು..ಆಹಾ! ನಾನು ಪುಸ್ತಕಗಳಲ್ಲಿ ಓದಿದ್ದಂತೆ, ವಿಡಿಯೋಗಳಲ್ಲಿ ನೋಡಿದ್ದಂತೆಯೇ ಇತ್ತು ಲಂಡನ್.

ಸಂಜೆ ನಾಲ್ಕಕ್ಕೇ ಕತ್ತಲು!
ಮಧ್ಯಾಹ್ನ ನಾಲ್ಕು ಗಂಟೆಯಾಗುತ್ತಿದ್ದಂತೆ ʼಅರೆರೆ! ಸಮಯ ಆಗಲೇ ಆರು ಗಂಟೆಯಾಯಿತೇ?ʼ ಅನಿಸುವಷ್ಟು ಕತ್ತಲು. ಆದರೆ ಅಲ್ಲಿ ಪ್ರಕೃತಿಯೇ ಹಾಗೆ. ಸಂಜೆ ಬೆಚ್ಚಗಿನ ದಿರಿಸು, ಶೂ, ಜಾಕೆಟ್ ಧರಿಸಿ ಆಕ್ಸ್‌ಫರ್ಡ್ ಸ್ಟ್ರೀಟ್‌ಗೆ ಹೊರಟಿದ್ದಾಯಿತು. ರಸ್ತೆಯಲ್ಲೆಲ್ಲಾ ಅದೆಷ್ಟು ಜನರು! ಇಲ್ಲಿ ಎಲ್ಲರೂ ನಡೆದೇ ಹೋಗುತ್ತಾರೆ ಎಂಬುದೇ ನನ್ನನ್ನು ಮೊದಲು ಸೋಜಿಗಗೊಳಿಸಿದ ಸಂಗತಿ. ಕೈಯಲ್ಲೊಂದು ಕಾಫಿ ಲೋಟ ಹಿಡಿದು ಮೊಣಕಾಲುದ್ದದ ಜಾಕೆಟ್‌ಗಳು, ಬೂಟ್ಸ್ ಧರಿಸಿ ಹೋಗುತ್ತಿದ್ದರೆ ಅವರದ್ದೇ ಲೋಕ. ಇನ್ನು ಆಕ್ಸ್‌ಫರ್ಡ್ ಸ್ಟ್ರೀಟ್‌ನಲ್ಲಿದ್ದ ಕ್ರಿಸ್‌ಮಸ್ ಲೈಟಿಂಗ್‌ಗಳನ್ನು ನೋಡಲು ಎರಡು ಕಣ್ಣು ಸಾಲದು. ಲಂಡನ್‌ನ ಗಿಜಿಗುಡುವ ರಸ್ತೆಗಳಲ್ಲಿ, ಅಪರಿಚಿತ ಜನರ ನಡುವೆ, ಹೊಸದೊಂದು ಸಂಸ್ಕೃತಿಯ ಭಾಗವಾಗಿ ನಡೆದು ಹೋಗುತ್ತಿದ್ದರೆ ಜೀವನದ ಅತಿದೊಡ್ಡ ಕನಸೊಂದು ನನಸಾಗುತ್ತಿರುವ ಖುಷಿ ಹೆಚ್ಚಾಗುತ್ತಾ ಹೋಗುತ್ತಿತ್ತು. ಅಲ್ಲಂತೂ ಹೋದಲ್ಲೆಲ್ಲಾ ವೈಫೈ! ಇಂಟರ್‌ನ್ಯಾಷನಲ್ ರೋಮಿಂಗ್ ಇಲ್ಲದಿದ್ದರೂ ನಡೆಯುತ್ತಿತ್ತು ಎನಿಸುವಷ್ಟು ಸಲೀಸಾಗಿತ್ತು ಇಂಟರ್‌ನೆಟ್ ಸೌಲಭ್ಯ. ನಮ್ಮಲ್ಲಿನ ಕಾಯಿನ್ ಬೂತ್‌ಗಳಂತೆ ಇಲ್ಲಿ ಕೆಲವು ಕಡೆ ವೈಫೈ ಬೂತ್ ಸಹ ಕಾಣಿಸಿದ್ದು ಸುಳ್ಳಲ್ಲ.
ಟ್ಯೂಬ್ ನಲ್ಲೇ ಸುತ್ತಬಹುದು!
ಇನ್ನು ಇಲ್ಲಿನ ಟ್ರೈನ್/ಟ್ಯೂಬ್‌ಗಳು ಬಳಸಲು ಅದೆಷ್ಟು ಅನುಕೂಲವೆಂದರೆ, ಯಾರನ್ನೂ ಕೇಳದೆಯೂ ಸಲೀಸಾಗಿ ಎಲ್ಲಿಗೆ ಬೇಕಾದರೂ ಹೋಗಬಹುದು. ಏಕೆಂದರೆ ಎಲ್ಲೆಡೆ ಟ್ಯೂಬ್‌ನ ಮ್ಯಾಪ್‌ಗಳು, ಮಾಹಿತಿ ಫಲಕಗಳು, ಸಹಾಯಕ್ಕೆಂದು ಸಿಬ್ಬಂದಿ ಇರುತ್ತಾರೆ. ಎಷ್ಟೋ ಕಡೆ ಮೆಟ್ಟಿಲು ಹತ್ತೇ ಹೋಗಬೇಕು, ಮೆಟ್ಟಿಲು ಇಳಿದೇ ಬರಬೇಕು. ಅನುಕೂಲ ಇರುವವರಿಗೆ ಟ್ಯಾಕ್ಸಿ ಸೌಲಭ್ಯ ಇದೆಯಾದರೂ ಟ್ಯೂಬ್‌ಗಳಲ್ಲಿ ಓಡಾಡುವುದು ನಮಗೂ ಖುಷಿ, ಜೇಬಿಗೂ ಖುಷಿ. ಮೊದಲ ದಿನ ತಂಗಿದ್ದ ಜಾಗದಿಂದ ಒಂದು ಟ್ಯೂಬ್ ಹಿಡಿದು, ಮೂರ್ನಾಲ್ಕು ಜಾಕೆಟ್ ಧರಿಸಿ ಟ್ಯೂಬ್‌ನಲ್ಲಿ ವರ್ಲ್ಡ್ ಟ್ರಾವೆಲ್ ಮಾರ್ಟ್‌ಗೆ ತಲುಪಿದೆ. ಆ ಚಳಿಯಲ್ಲಿ ಲಂಡನ್ ನಗರದ ಹಗಲು ನೋಡುವುದು ಮನಸ್ಸಿಗೆ ಮುದ ನೀಡುತ್ತಿತ್ತು. ವರ್ಲ್ಡ್ ಟ್ರಾವೆಲ್ ಮಾರ್ಟ್ ಅಂತೂ ಬೇರೆಯದ್ದೇ ಪ್ರಪಂಚ. ಪ್ರಪಂಚದ ಮೂಲೆಮೂಲೆಯಲ್ಲಿದ್ದ ಸ್ಥಳಗಳ ಮಳಿಗೆಗಳು ಕಾಣಸಿಕ್ಕವು. ಇಡೀ ಮಾರ್ಟ್ ಕಣ್ತುಂಬಿಕೊಳ್ಳಲು ಎಷ್ಟು ಸಮಯ ಸಿಕ್ಕರೂ ಸಾಲುವುದಿಲ್ಲ. ಸಂಜೆ 4ರ ಹೊತ್ತಿಗೆಲ್ಲಾ ಮತ್ತೆ ಅದೇ ಕತ್ತಲೆ, ಮಿನುಗುವ ಕ್ರಿಸ್‌ಮಸ್ ದೀಪಗಳು, ಪ್ರಶಾಂತವಾಗಿ ಹರಿಯುವ ನೀರು. ಆಹಾ! ಸ್ವರ್ಗಕ್ಕೆ ಮೂರೇ ಗೇಣಲ್ಲ, ಅದೇ ಸ್ವರ್ಗ.

ಓಪನ್ ರೂಫ್ ಬಸ್!
ಇಲ್ಲಿ ಎಲ್ಲಕ್ಕಿಂತ ಖುಷಿಕೊಟ್ಟ ಸಂಗತಿ ಎಂದರೆ ಸೈಟ್‌ಸೀಯಿಂಗ್ ಬಸ್‌ಗಳು. ಒಂದು ನಿಲ್ದಾಣದಲ್ಲಿ ಟಿಕೆಟ್ ಖರೀದಿಸಿ ಬಸ್ ಹತ್ತಿದರೆ ಇಂತಿಷ್ಟು ಸಮಯದವರೆಗೂ ಆ ಟಿಕೆಟ್‌ಗಳು ಮಾನ್ಯವಾಗಿರುತ್ತವೆ. ಮಧ್ಯೆ ಯಾವ ನಿಲ್ದಾಣದಲ್ಲಾದರೂ ಇಳಿದು ಅಲ್ಲಿಗೆ ಹತ್ತಿರವಿರುವ ಸ್ಥಳಗಳನ್ನು ನೋಡಿಕೊಂಡು ಮತ್ತೆ ಅದೇ ಬಸ್ ನಿಲ್ದಾಣಕ್ಕೆ ಬಂದರೆ ಹತ್ತು-ಹದಿನೈದು ನಿಮಿಷಗಳ ಒಳಗೆ ಮತ್ತೊಂದು ಬಸ್ ಬರುತ್ತದೆ. ಅದರಲ್ಲಿ ಹತ್ತಿ ಮತ್ತೆ ಎಲ್ಲಿ ಬೇಕೋ ಅಲ್ಲಿ ಇಳಿದರಾಯಿತು. ಈ ಓಪನ್ ರೂಫ್ ಬಸ್‌ನಲ್ಲಿ ಲಂಡನ್‌ನ ಅಂದ ನೋಡಿದ ಸಮಯ ಮಾತ್ರ ಸ್ಮೃತಿಪಟಲದಲ್ಲಿ ಕೊನೆಯ ಉಸಿರಿನವರೆಗೂ ಅಚ್ಚಾಗಿ ಉಳಿಯುತ್ತದೆ.

ಬಿಗ್ ಬೆನ್ ಕ್ಲಾಕ್ ಟವರ್
ಇಷ್ಟು ದಿನ ಫೋನಿನ ವಾಲ್‌ಪೇಪರ್‌ನಲ್ಲಿ ನೋಡುತ್ತಿದ್ದ ಬಿಗ್‌ಬೆನ್ ಕ್ಲಾಕ್‌ಟವರ್ ಕಣ್ಣಮುಂದೆ ಬಂದು ಧುತ್ತೆಂದು ನಿಂದಾಗ ಸಿಕ್ಕಾಪಟ್ಟೆ ಬೆರಗಾಗಿದ್ದೆ. ಬಸ್ಸಿನಲ್ಲಿ ಸಂಚರಿಸುತ್ತಿದ್ದರೆ ಸುತ್ತಮುತ್ತ ಕಾಣುತ್ತಿದ್ದ ಪುರಾತನ ಕಟ್ಟಡಗಳು, ಪಾರ್ಕ್‌ಗಳು, ಪುಟ್ಟ ಕೆಫೆಗಳು, ಬ್ರಿಟಿಷರ ಇತಿಹಾಸ ಸಾರುವ ಸ್ಥಳಗಳು..ಆಹಾ! ಇದನ್ನೆಲ್ಲ ನೋಡುವ ಜೊತೆಗೆ ಬಸ್ಸಿನಲ್ಲಿ ಕೊಟ್ಟ ಇಯರ್‌ಫೋನ್ ಧರಿಸಿ ಎಲ್ಲದರ ಇತಿಹಾಸವನ್ನೂ ಕೇಳುತ್ತಿದ್ದುದು ಮಜವಾಗಿತ್ತು. ನಾನು ಹಾಗೆಲ್ಲಾ ಶೂಸ್, ಜಾಕೆಟ್, ಗ್ಲೌಸ್ ಹಾಕಿದ್ದು ಆಗಲೇ ಮೊದಲು. ಅಲ್ಲಿನ ಚಳಿಯ ಮಧ್ಯೆ ತಿಂದ ಚಾಕೊಲೇಟ್ ಸ್ಟ್ರಾಬೆರಿ ರುಚಿ ಇನ್ನೂ ನಾಲಿಗೆಯಲ್ಲಿ ಹಾಗೆಯೇ ಇದೆ.

ಒಂದೇ ಉಸಿರಲ್ಲಿ ಲಂಡನ್ ಯಾತ್ರೆ
ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ, ಬಕಿಂಗ್‌ಹ್ಯಾಮ್ ಪ್ಯಾಲೇಸ್, ಟವರ್ ಬ್ರಿಡ್ಜ್, ದಿ ಲಯನ್ ಕಿಂಗ್ ನಾಟಕ ಪ್ರದರ್ಶನ..ಇವೆಲ್ಲದರ ಬಗ್ಗೆ ಓದಿ, ಕೇಳಿ ಮಾತ್ರ ತಿಳಿದಿದ್ದ ನನಗೆ ಎಲ್ಲವನ್ನೂ ನೋಡಿದ್ದು ಅವಿಸ್ಮರಣೀಯ ಅನುಭವ. ಲಂಡನ್ ಮಾತ್ರವಲ್ಲದೆ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್ ಹಾಗೂ ಗ್ಲಾಸ್‌ಗೋ ನೋಡಿದ್ದು ಇತಿಹಾಸದಲ್ಲಿ ಬದುಕಿ ಬಂದ ಅನುಭವ. ಅಲ್ಲಿನ ಕೋಟೆ/ಕ್ಯಾಸಲ್‌ಗಳು, ಚರ್ಚ್‌ಗಳು, ಪುರಾತನ ಕಟ್ಟಡಗಳು, ಅದ್ಭುತ ವಾಸ್ತುಶಿಲ್ಪ ನೋಡುತ್ತಿದ್ದರೆ ಸಮಯ ಹೀಗೇ ನಿಂತುಬಿಡಬಾರದಾ ಎನಿಸುತ್ತಿತ್ತು. ಈ ನಡುವೆ ನೋಡಿದ ಮ್ಯೂಸಿಯಂಗಳು, ಲಂಡನ್ ಐನಿಂದ ನೋಡಿದ ನಗರದ ವಿಹಂಗಮ ನೋಟ, ಟವರ್ ಬ್ರಿಡ್ಜ್‌ನ ಮೇಲೆ ವಾಕಿಂಗ್ ಮಾಡಿದ ಅನುಭವ, ಗ್ಲಾಸ್‌ಗೋನಿಂದ ಎಡಿನ್‌ಬರ್ಗ್‌ವರೆಗಿನ ಅತ್ಯದ್ಭುತ ರೈಲು ಪ್ರಯಾಣ, ಅಲ್ಲಿನ ಜನರ ಶಿಸ್ತು, ಎಲ್ಲೆಡೆಯೂ ಕಾಣಿಸುತ್ತಿದ್ದ ಹೂವಿನ ಬೊಕ್ಕೆಯ ಅಂಗಡಿಗಳು, ಅಲ್ಲಿನ ಬ್ರೆಡ್-ಜಾಂ ಜೊತೆಗೆ ಸಿಕ್ಕ ವೀರಸ್ವಾಮಿ ಹಾಗೂ ಟೇಸ್ಟ್ ಆಫ್ ಚೆನ್ನೈ ಎಂಬ ಚೆಂದದ ಇಂಡಿಯನ್ ರೆಸ್ಟೋರೆಂಟ್‌ಗಳು...ಹೇಳಿದಷ್ಟೂ ಉಳಿಯುತ್ತವೆ ಲಂಡನ್ ಕಥೆಗಳು.
ಅಲ್ಲಿದ್ದ ಎಂಟು ದಿನ ಅದು ಕಣ್ಮುಚ್ಚಿ ಬಿಡುವ ವೇಳೆಗೆ ಕಳೆದುಹೋಗಿತ್ತು. ಮರಳಿ ಬರುವಾಗ ಗಂಟು ಮೂಟೆ ಕಟ್ಟಿ ತಂದದ್ದು ಒಂದಷ್ಟು ಕೀ ಚೈನ್, ಫ್ರಿಜ್ ಮ್ಯಾಗ್ನೆಟ್, ಚಾಕೊಲೇಟ್ ಜೊತೆಗೆ ಹೊತ್ತಷ್ಟೂ ಹೊರೆಯಾಗದ ನೆನಪುಗಳು. ನೆನಪಿನ ಲಗೇಜ್ ಇಷ್ಟೇ ತೂಕವಿರಬೇಕೆಂಬ ನಿಯಮವೇನೂ ಏರ್‌ಪೋರ್ಟ್‌ನಲ್ಲಿಲ್ಲ ನೋಡಿ!