ಕಳ್ಳೆಕಾಯ್ ಪರಿಷೆ ಬಸವನಗುಡಿಯ ಸೂಪರ್ ಹಳ್ಳಿಹಬ್ಬ
ಕಡಲೆಕಾಯಿ ಮಾರುವುದಕ್ಕಿಂತ ಮುಂಚೆ, ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡುವುದು ವಾಡಿಕೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ರೈತರದ್ದು. ಅಂದು ಬಸವನಿಗೆ ವಿಶೇಷವಾದ ಅಲಂಕಾರದ ಜತೆಗೆ ಇಡೀ ದೇವಸ್ಥಾನ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಈ ಜಾತ್ರೆಯಲ್ಲಿ ಭಕ್ತರು ಕಡಲೆ ತಿಂದರೆ ಬಸವ ತೃಪ್ತನಾಗುತ್ತಾನೆ ಎಂದು ನಂಬಲಾಗಿದೆ.
ಕಾರ್ತೀಕ ಮಾಸದ ದೀಪಗಳಡಿಯಲ್ಲಿ ರಾಶಿ ರಾಶಿ ಕಡಲೆಕಾಯಿ. ನೂರಾರು ಮೈಲುಗಳಿಂದ ನೂರಾರು ಹೊಲಗಳಿಂದ ಬಂದ ಇವುಗಳ ರಾಶಿಯ ಸೊಬಗ ನೋಡಬೇಕೇ? ಹಾಗಿದ್ದರೆ ಬನ್ನಿ, ಬಸವನಗುಡಿಗೆ ಕಡಲೆಕಾಯಿ ಜಾತ್ರೆಗೆ. ಬಸವನಗುಡಿಗೆ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಛಾಪಿದೆ. ಕಾರ್ತೀಕ ಮಾಸದ ಕೊನೆಯ ಸೋಮವಾರದ ಹಿಂದು ಮುಂದಿನ ದಿನಗಳಲ್ಲಿ ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಇವುಗಳನ್ನು ನೋಡಬಹುದು. ನಗರದ ಜಂಜಾಟದಲ್ಲೂ ಇದು ಹಳ್ಳಿಯ ಸೊಗಡು, ರುಚಿಯ ಖಾದ್ಯಗಳು, ಚಿಣ್ಣರ ಕಣ್ಣು ಸೆಳೆಯುವ ಆಟಿಕೆಗಳು ಹೀಗೆ ಹೇಳಿದರೆ ಒಂದೇ ಎರಡೇ? ಎಪಿಎಸ್ ಕಾಲೇಜು ಬದಿಯಿಂದ ರಾಮಕೃಷ್ಣ ಚೌಕದವರೆಗೆ ಒಮ್ಮೆ ಹಾದು ಬಂದರೆ ಸಾಕು, ನಿಮಗೊಂದು ಹಳ್ಳಿ ಜಾತ್ರೆಯ ಅನುಭವವಾಗುತ್ತದೆ.
ಕಡಲೆಕಾಯಿ ಪರಿಷೆಯಲ್ಲಿ ಹಸಿ, ಬೇಯಿಸಿದ, ಹುರಿದ ಕಡಲೆಕಾಯಿ ಈ ಎಲ್ಲವೂ ಲಭ್ಯ. ಬೆಂಗಳೂರಿನ ಮಾವಳ್ಳಿ, ಸುಂಕೇನಹಳ್ಳಿ, ಹೊಸಹಳ್ಳಿ, ಕೋಲಾರದ ಚಿಂತಾಮಣಿ, ಆಂಧ್ರ, ತಮಿಳುನಾಡಿನ ಧರ್ಮಪುರಿಯಿಂದಲೂ ಬಂದ ವಿವಿಧ ಕಡಲೆಕಾಯಿಯನ್ನು ನೀವು ಇಲ್ಲಿ ನೋಡಬಹುದು. ಸವಿಯಲೂ ಬಹುದು. ಕಡಲೆಕಾಯಿಯೊಂದಿಗೆ ಸವಿ ಬೆರೆಸಲು ಆಲೆಮನೆಯಿಂದ ನೇರವಾಗಿ ಬಂದ ಬೆಲ್ಲದಚ್ಚುಗಳು, ಬೆಲ್ಲದುಂಡೆಗಳು, ತಿಪಟೂರಿನ ಕೊಬ್ಬರಿ ಚೂರು ಇದ್ದೇ ಇರುತ್ತದೆ.

ಪರಿಷೆಗಿದೆ ಪುರಾತನ ಇತಿಹಾಸ
ಬೆಂಗಳೂರಿನ ಈಗಿನ ಬಸವನಗುಡಿ ಈ ಹಿಂದೆ ಅನೇಕ ಹಳ್ಳಿಗಳ ಜಾಗವಾಗಿತ್ತು. ಇಲ್ಲಿನ ಪ್ರಮುಖ ಬೆಳೆ ಕಡಲೆಕಾಯಿಯೇ ಆಗಿತ್ತು. ಸಮೃದ್ಧವಾಗಿ ಬೆಳೆದು ನಿಂತ ಕಡಲೆಕಾಯಿ ಬೆಳೆಯನ್ನು ಗೂಳಿಯೊಂದು ಹಾಳು ಮಾಡುತ್ತಿತ್ತು. ಇದರ ಉಪಟಳ ತಾಳಲಾರದೆ ರೈತರು ಸಭೆ ಸೇರಿ, ಗೂಳಿಯನ್ನು ಓಡಿಸುವುದಕ್ಕೆ ಉಪಾಯಮಾಡಿ, ಬೆಳೆಗೆ ಬಾಯಿ ಹಾಕಿದ ಗೂಳಿಯನ್ನು ಊರು ಜನರು ಅಟ್ಟಿಸಿಕೊಂಡು ಹೊರಟರು. ರೈತರಿಂದ ತಪ್ಪಿಸಿಕೊಂಡು ಬಂದ ಗೂಳಿ ಸುಂಕೇನಹಳ್ಳಿ ಸಮೀಪದ ಬೆಟ್ಟದ ಮೇಲೇರಿ ಕಲ್ಲಾಯಿತು. ಅದನ್ನು ಕಣ್ಣಾರೆ ಕಂಡ ರೈತರು ಇದು ಸಾಮಾನ್ಯ ಗೂಳಿಯಲ್ಲ, ಶಿವನ ವಾಹನ ನಂದಿ, ಬಸವ ಎಂದು ನಂಬಿದರು. ತಾವು ಮಾಡಿದ ತಪ್ಪಿಗಾಗಿ ರೈತರು ಪ್ರತಿವರ್ಷವೂ ಬೆಳೆದ ಕಡಲೆಕಾಯಿಯನ್ನು ಬಸವನಿಗೆ ಅರ್ಪಿಸುತ್ತಾರೆ. ತಾವು ಮಾಡಿದ ತಪ್ಪನ್ನು ಮನ್ನಿಸು ಎಂದು ಬೇಡಿಕೊಳ್ಳುತ್ತಾರೆ. ಅಂದಿನಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ ಎನ್ನಲಾಗಿದೆ.
ಕಡಲೆಕಾಯಿ ಪರಿಷೆ
ಪರಿಷೆಯ ಮೊದಲ ದಿನವನ್ನು ಚಿಕ್ಕ ಪರಿಷೆ ಎನ್ನುತ್ತಾರೆ. ಕಡಲೆಕಾಯಿ ಮಾರುವುದಕ್ಕಿಂತ ಮುಂಚೆ, ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡುವುದು ವಾಡಿಕೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ರೈತರದ್ದು. ಅಂದು ಬಸವನಿಗೆ ವಿಶೇಷವಾದ ಅಲಂಕಾರದ ಜತೆಗೆ ಇಡೀ ದೇವಸ್ಥಾನ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಈ ಜಾತ್ರೆಯಲ್ಲಿ ಭಕ್ತರು ಕಡಲೆ ತಿಂದರೆ ಬಸವ ತೃಪ್ತನಾಗುತ್ತಾನೆ ಎಂಬ ಕಾರಣಕ್ಕಾಗಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಕಡಲೆಕಾಯಿ ತಿಂದು ಸಂಭ್ರಮಿಸುತ್ತಾರೆ.
ಉತ್ತಮ ಮಾರುಕಟ್ಟೆ
ಬೆಂಗಳೂರಿನಲ್ಲಿ ನಡೆಯುವ ಕಡಲೆಕಾಯಿ ಪರಿಷೆ, ಧಾರ್ಮಿಕ ಜಾತ್ರೆಯಾಗಿ ಪ್ರಸಿದ್ಧಿ ಪಡೆಯುವುದರ ಜತೆಗೆ ರೈತರಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದೆ. ರಾಜ್ಯ ಹೊರ ರಾಜ್ಯಗಳ ರೈತರು ಈ ಪರಿಷೆಗೆ ಕಡಲೆಕಾಯಿ ಮಾರಾಟ ಮಾಡಲು ಬರುತ್ತಾರೆ.

ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಈ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಈ ಪರಿಷೆ ನಮ್ಮ ಸಂಸ್ಕೃತಿಯ ಭಾಗವಾಗಿ ಇರುವುದರಿಂದ ಇಲ್ಲಿಗೆ ಬರುವ ಜನರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರು ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ. ಬಗೆಬಗೆಯ ಕಡಲೆಕಾಯಿ ಪದಾರ್ಥಗಳು ಈ ಪರಿಷೆಯಲ್ಲಿ ಸಿಗುತ್ತವೆ.
ಅಂದು ಐಕ್ಯನಾದ ಬಸವ ಕಾಲಕಳೆದಂತೆ ಬೆಳೆದು, 15ಅಡಿ ಎತ್ತರ, 20ಅಡಿ ಅಗಲದಷ್ಟು ಬೃಹತ್ ನಂದಿ ರೂಪ ಪಡೆದಿದ್ದಾನೆ. ಇನ್ನೂ ಬೆಳೆದರೆ ಪೂಜಿಸಲು ಕಷ್ಟವಾಗುತ್ತದೆಂದು ರೈತರೆಲ್ಲ ಸೇರಿ ಬಸವಣ್ಣನ ತಲೆಯ ಮೇಲೆ ಮೊಳೆ ಹೊಡೆದರು. ಅಂದಿನಿಂದ ಬಸವಣ್ಣ ಬೆಳೆಯುವುದನ್ನು ನಿಲ್ಲಿಸಿದ ಎಂದು ಹೇಳಲಾಗುತ್ತದೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಈ ಬಸವನಿಗೆ 1537ರಲ್ಲಿ ದೇವಾಲಯವನ್ನು ಕಟ್ಟಿಸಿದ್ದಾರೆ. ಈ ದೇವಸ್ಥಾನದಿಂದಲೆ ಈ ಬಡಾವಣೆಗೆ ಬಸವನಗುಡಿ ಎಂದು ಹೆಸರಿಡಲಾಗಿದೆ.
ದೊಡ್ಡ ಬಸವನ ದೇವಸ್ಥಾನವು ಹಲವು ಕಾರಣಗಳಿಂದಾಗಿ ಆಕರ್ಷಣೀಯ ಸ್ಥಳವಾಗಿದೆ. ದೇವಾಲಯದ ಮುಂದೆ ಎತ್ತರವಾದ ಧ್ವಜ ಸ್ತಂಭವಿದ್ದು, ಇದರಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮತ್ತು ಇತರೆ ಶಿಲ್ಪಗಳಿವೆ. ಭವ್ಯವಾದ ಗೋಪುರವು ದೇವಾಲಯಕ್ಕೆ ಮತ್ತೊಂದು ಮೆರುಗು ನೀಡಿದೆ. ಪ್ರದಕ್ಷಿಣೆ ಪಥಕ್ಕೆ ಹೇಳಿ ಮಾಡಿಸಿದಂಥ ವಿಶಾಲವಾದ ಗುಡಿ ಇದು. ಬಾಗಿಲು ಬಳಿ ದ್ವಾರಪಾಲಕ ಶಿಲ್ಪಗಳಿವೆ. ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಬಸವನ ವಿಗ್ರಹವಿದೆ. ದೊಡ್ಡ ಬಸವಣ್ಣನ ಹಿಂಭಾಗದಲ್ಲಿ ಗಣಪತಿಯ ವಿಗ್ರಹ, ಅದರ ಎದುರಿಗೆ ಶಿವನ ದೇವಾಲಯವಿದೆ. ಒಟ್ಟಾರೆ ಈ ಪರಿಷೆ ತಿಂದು ತಿರುಗಲು, ತಿರುಗಿ ತಿಳಿಯಲು ಇರುವ ಉತ್ತಮ ಅವಕಾಶ.
ಪ್ರತಿಬಾರಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಕಡಲೆಕಾಯಿ ಪರಿಷೆ ಈ ಬಾರಿ ನವೆಂಬರ್ 17ರಿಂದ 21ರವರೆಗೆ ಐದು ದಿನಗಳ ಕಾಲ ನಡೆಯಲಿದೆ. 2024ರ ಪರಿಷೆ ಪ್ಲಾಸ್ಟಿಕ್ ಮುಕ್ತ ಪರಿಷೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಬಾರಿ ʻಪರಿಷೆಗೆ ಬನ್ನಿ, ಕೈ ಚೀಲ ತನ್ನಿʼ ಎನ್ನುವುದೇ ಘೋಷ ವಾಕ್ಯವಾಗಿದೆ. ಮಾರಾಟಗಾರರಿಂದ ಯಾವುದೇ ಸುಂಕ ಪಡೆಯದಿರಲು ನಿರ್ಧರಿಸಲಾಗಿದೆ. ಐದು ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಪೂಜೆ ಮಾಡುವ ಮೂಲಕವೇ ಪರಿಷೆಗೆ ಚಾಲನೆ ದೊರೆಯಲಿದೆ.