ಲಾಕ್ ಲೋಮಂಡ್ ನೋಡಿ ಲವ್‌ಲಾಕ್ ಆಗಿದ್ದೆ
ಈ ನಿಲ್ದಾಣದಿಂದ ಕಾಲು ನಡಿಗೆಯಲ್ಲಿ ನಾವು ಲಾಕ್ ಲೋಮಂಡ್‌ನತ್ತ ಹೊರಟೆವು. ಸುಮಾರು ಹತ್ತು ನಿಮಿಷಗಳ ನಡಿಗೆ. ಸಮುದ್ರದಂತೆ ವಿಶಾಲವಾಗಿದ್ದ ನೀಲಿ ನೀರಿನ ಸರೋವರ ಸಮೀಪಿಸುತ್ತಿದಂತೆ ನಮ್ಮ ಕಣ್ಣಿಗೆ ಬಿತ್ತು. ಇದು ಗ್ರೇಟ್ ಬ್ರಿಟನ್‌ನ ಅತಿದೊಡ್ಡ ಸಿಹಿನೀರಿನ ಸರೋವರ. ಇದರ ಉದ್ದ ಅಂದಾಜು 35ಕಿಮೀ ಮತ್ತು ಅಗಲ ಸುಮಾರು 8ಕಿಲೋ ಮೀಟರ್‌ಗಳಷ್ಟು. ಸರೋವರ ಮಧ್ಯದಲ್ಲಿ ಸುಮಾರು 60ಕ್ಕೂ ಹೆಚ್ಚು ದ್ವೀಪಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಸಾರ್ವಜನಿಕರಿಗೆ ತೆರೆಯಲ್ಪಟ್ಟಿದೆ.
- ಸ್ವಾತಿ ಹರೀಶ್
ನಮ್ಮ ಇಂಗ್ಲೆಂಡ್ - ಸ್ಕಾಟ್ಲೆಂಡ್ ಪ್ರವಾಸದಲ್ಲಿ ಲಂಡನ್ ಕವೆಂಟ್ರಿ ಹಾಗೂ ಎಡಿನ್‌ಬರಾ ಎಂಬ ಹ್ಯಾರಿಪಾಟರ್‌ನ ಮಾಯಾ ನಗರಿಯ ನಂತರ ಮುಂದಿನ ನಿಲ್ದಾಣ ಗ್ಲಾಸ್ಗೊ ಪಟ್ಟಣವಾಗಿತ್ತು. ಇದು ಸ್ಕಾಟ್ಲೆಂಡ್‌ನ ವ್ಯವಹಾರ ನಗರಿ ಅಂತಾರಾಷ್ಟೀಯ ಬ್ಯಾಂಕ್‌ಗಳ ಮುಖ್ಯ ಶಾಖೆಗಳು ಇಲ್ಲಿವೆ. ಈ ಮಹಾನಗರಗಳನ್ನು ನೋಡಿದ ನಂತರ ನಮಗೆ ಸ್ಕಾಟ್ಲೆಂಡ್, ಒಳನಾಡಿನ ಹಳ್ಳಿಗಳು, ನದಿ, ಸರೋವರ, ಹಾಗೇ ಪುಟ್ಟ ಊರುಗಳನ್ನು ನೋಡುವ ಆಸೆಯಾಯಿತು. ಒಂದು ದೇಶವನ್ನು ನೋಡಿದ ನಿಜವಾದ ಅನುಭವ ಸಿಗಬೇಕಾದರೆ ಅಲ್ಲಿಯ ಹಳ್ಳಿಗಳನ್ನು ನೋಡಬೇಕಲ್ಲವೇ? ಈ ಹುಡುಕಾಟದಲ್ಲಿ ನಮಗೆ ಸಿಕ್ಕಿದ್ದೇ ಲಾಕ್ ಲೋಮಂಡ್.

ಗ್ಲಾಸ್ಗೊದಿಂದ ಕೇವಲ ಒಂದು ಗಂಟೆಯ ರೈಲು ಪ್ರಯಾಣದಷ್ಟು ದೂರವಿರುವ ಈ ಸ್ಥಳ, ಸ್ಕಾಟ್ಲೆಂಡ್‌ನ ನಿಜವಾದ ಸೌಂದರ್ಯವನ್ನು ತೋರಿಸುತ್ತದೆ. ಲಾಕ್ ಎಂದರೆ ಸರೋವರ, ಬಿನ್ ಲೋಮಂಡ್ ಎನ್ನುವುದು ಒಂದು ಪರ್ವತದ ಹೆಸರು, ಗ್ಲಾಸ್ಗೊ ಪಟ್ಟಣದ ಕ್ವೀನ್ ಸ್ಟ್ರೀಟ್ ನಿಲ್ದಾಣದಿಂದ ರೈಲನ್ನು ಏರಿದೆವು. ಸಾಲು ಮನೆಗಳ ಪುಟ್ಟ ಹಳ್ಳಿಗಳು, ಹಸಿರು ಹುಲ್ಲುಗಾವುಗಳು, ಹುಲ್ಲು ಮೇಯುತ್ತಿರುವ ಹಸು-ಕುರಿಗಳು, ಗುಡ್ಡಗಳ ನಡುವೆ ಹರಿಯುವ ತೊರೆಗಳ ನಡುವೆ ಹಾದು ರೈಲು ಸುಮಾರು ಒಂದು ಗಂಟೆಯಲ್ಲಿ ಬಲ್ಲೋಕ್ ತಲುಪಿತು. ಮೂರು ಭೋಗಿಯ ಈ ಸಣ್ಣ ರೈಲು, ಕೆಂಪು ಬಣ್ಣದ ಸ್ಟೇಷನ್ ಮಾಸ್ಟರ್ ಕಚೇರಿ, ದೂರದಲ್ಲಿ ಕಾಣುವ ಬಿಳಿ ಮನೆಗಳ ಸಾಲು ಎಲ್ಲವೂ ಒಂದು ಪೋಸ್ಟ್ ಕಾರ್ಡ್ ಚಿತ್ರದಂತೆ ಭಾಸವಾಗುತ್ತದೆ.
ಈ ನಿಲ್ದಾಣದಿಂದ ಕಾಲು ನಡಿಗೆಯಲ್ಲಿ ನಾವು ಲಾಕ್ ಲೋಮಂಡ್‌ನತ್ತ ಹೊರಟೆವು. ಸುಮಾರು ಹತ್ತು ನಿಮಿಷಗಳ ನಡಿಗೆ. ಸಮುದ್ರದಂತೆ ವಿಶಾಲವಾಗಿದ್ದ ನೀಲಿ ನೀರಿನ ಸರೋವರ ಸಮೀಪಿಸುತ್ತಿದಂತೆ ನಮ್ಮ ಕಣ್ಣಿಗೆ ಬಿತ್ತು. ಇದು ಗ್ರೇಟ್ ಬ್ರಿಟನ್‌ನ ಅತಿದೊಡ್ಡ ಸಿಹಿನೀರಿನ ಸರೋವರ. ಇದರ ಉದ್ದ ಅಂದಾಜು 35ಕಿಮೀ ಮತ್ತು ಅಗಲ ಸುಮಾರು 8ಕಿಲೋ ಮೀಟರ್‌ಗಳಷ್ಟು. ಸರೋವರ ಮಧ್ಯದಲ್ಲಿ ಸುಮಾರು 60ಕ್ಕೂ ಹೆಚ್ಚು ದ್ವೀಪಗಳಿವೆ. ಅವುಗಳಲ್ಲಿ ಕೆಲವು ಮಾತ್ರ ಸಾರ್ವಜನಿಕರಿಗೆ ತೆರೆಯಲ್ಪಟ್ಟಿದೆ. ಸ್ಕಾಟ್ಲೆಂಡ್‌ನ ಲೋಲ್ಯಾಂಡ್ಸ್ ಮತ್ತು ಹೈಲ್ಯಾಂಡ್ಸ್ ಪ್ರದೇಶಗಳ ಮಧ್ಯೆ ಹಾದುಹೋಗುವ ಭೌಗೋಳಿಕ ರೇಖೆಯ ಮೇಲೆ ಇರುವುದು ಈ ಸರೋವರದ ವೈಶಿಷ್ಟ್ಯ. ಲಾಕ್ ಲೋಮಂಡ್ ಸುತ್ತಮುತ್ತಲಿನ ಪ್ರದೇಶಗಳು ಟ್ರೋಸ್ಸಾಕ್ ನ್ಯಾಷನಲ್ ಪಾರ್ಕ್‌ನ ಭಾಗವಾಗಿವೆ. ಇದು ಸ್ಕಾಟ್ಲೆಂಡ್‌ನ ಮೊದಲ ರಾಷ್ಟ್ರೀಯ ಉದ್ಯಾನ.

ಸರೋವರದ ಒಂದು ತೀರದಲ್ಲಿ ನನ್ನ ಮನಸ್ಸಿಗೆ ಅತೀ ಖುಷಿ ಕೊಟ್ಟದ್ದು, ನಾಯಿ ಮಾಲೀಕರು ತಮ್ಮ ಮುದ್ದಿನ ಸಾಕುನಾಯಿಗಳೊಡನೆ ಸಂಚರಿಸುವುದು. ಅಲ್ಲಿದ್ದ ಸ್ಕಾಟಿಶ್ ಬ್ರೀಡ್‌ನ ಪ್ರತಿ ನಾಯಿಯೂ ಅಷ್ಟೇ ವಿಶಿಷ್ಟ ಮತ್ತು ಚಂದ. ಶ್ವಾನಪ್ರೇಮಿಯಾದ ನನಗಂತೂ ಅವುಗಳನ್ನು ನೋಡುವುದೇ ಹಬ್ಬ. ಲೋಮಂಡ್ ಸರೋವರದ ನೀರಿಗೆ ಹಾರಿ ತುಂಟ ನಾಯಿಗಳು ಆಟವಾಡುವುದು ಅವುಗಳ ಮಾಲಿಕರು ಪ್ರೀತಿಯಿಂದ ಗದರುವುದು ಎಲ್ಲಾ ನೋಡಲು ತುಂಬಾ ಚಂದ. ನೀರಿನ ಪಕ್ಕದಲ್ಲಿ ನಾಯಿಗಳಿಗಾಗಿಯೇ ಒಂದು ಐಸ್‌ಕ್ರಿಮ್ ಅಂಗಡಿಯೂ ಇದೆ.
ಇನ್ನೊಂದು ಭಾಗದಲ್ಲಿ ಹಸಿರು ಹುಲ್ಲು ಹಾಸಿನ ಪುಟ್ಟ ಗುಡ್ಡದ ಮೇಲೆ ಕಾಣುವುದು ಬಲ್ಲೋಕ್ ಕ್ಯಾಸಲ್. 1800ರಲ್ಲಿ ಜಾನ್ ಬುಕನನ್ ಅವರಿಗಾಗಿ ಕಲ್ಲಿನಿಂದ ನಿರ್ಮಿಸಲಾದ ಈ ಅರಮನೆ ಈಗ ಯಾರು ಇಲ್ಲದೆ ನಿರ್ಜನವಾಗಿದೆ. ಇದು ಗ್ಲಾಸ್ಗೋ ಸಿಟಿ ಕೌನ್ಸಿಲ್‌ಗೆ ಸೇರಿದೆ. ಹೊರಗಿನಿಂದ ಈ ಕ್ಯಾಸಲ್ ಶೈಲಿ ಹಳೆಯ ಸ್ಕಾಟ್ಲೆಂಡ್‌ನ ರಾಜಮನೆತನದ ನೆನಪುಗಳನ್ನು ತರುತ್ತದೆ.ಮ ಲಾಕ್ ಲೋಮಂಡ್‌ನಲ್ಲಿ ಬೋಟ್ ಕ್ರೂಸ್ ಪ್ರವಾಸಿಗರ ಮತ್ತೊಂದು ಆಕರ್ಷಣೆ. ಒಂದೆರಡು ಗಂಟೆಗಳ ಕಾಲ ಸರೋವರದಲ್ಲಿ ತೇಲುತ್ತ ಇಂಚುರಿನ್ ಮುಂತಾದ ದ್ವೀಪ ಸಮೂಹಗಳ ನಡುವೆ ಚಲಿಸುತ್ತದೆ. ಕೆಲವು ಕ್ರೂಸ್‌ಗಳು ಪಶ್ಚಿಮ ತೀರಕ್ಕೆ ಹೋಗಿ ಬೆನ್ ಲೋಮಂಡ್ ಪರ್ವತದ ನೋಟವನ್ನು ತೋರಿಸುತ್ತವೆ.

ಊಟದ ಸಮಯವಾದ್ದರಿಂದ ಬಲ್ಲೋಕ್ ಟೌನ್‌ನಲ್ಲಿ ಶಾಖಾಹಾರಿ ಆಹಾರಕ್ಕಾಗಿ ಹುಡುಕಾಡಿದಾಗ ʻಅನ್ನಯ್ಯʼ ಎಂಬ ಭಾರತೀಯ ಹೊಟೇಲ್ ಕಣ್ಣಿಗೆ ಬಿದ್ದು ನಮ್ಮ ಖುಷಿಗೆ ಪಾರವೇ ಇರಲಿಲ್ಲ!
ಹತ್ತಿರ ಹೋದಾಗ ಅದು ಬಂದ್ ಎಂದು ಗೊತ್ತಾಗಿ ತೀವ್ರ ನಿರಾಶೆಯಾಯಿತು. ಆದರೆ ಅಲ್ಲೇ ಪಕ್ಕದಲ್ಲಿದ್ದ, ಬಲ್ಲೋಕ್ ಹೌಸ್ ಎನ್ನುವ ಹೊಟೇಲ್‌ನಲ್ಲಿ ರುಚಿಕರವಾದ ಸಮೋಸಾ ಚಾಟ್ ದೊರೆಯಿತು. ಒಟ್ಟಾರೆ ಪೂರ್ತಿ ಯುಕೆಯಲ್ಲಿ ಭಾರತೀಯ ಆಹಾರ ಸುಲಭವಾಗಿ ಅಲ್ಲಲ್ಲಿ ಸಿಗುತ್ತದೆ, ಶಾಖಾಹಾರಿ ಆಹಾರಕ್ಕೂ ಯಾವುದೇ ಕೊರತೆಯಿಲ್ಲ. ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಭಾರತೀಯ ಪ್ರಭಾವಕ್ಕೆ ಇದು ಉದಾಹರಣೆಯಾಗಿದೆ.