ಶ್ರೀರಾಮ ಮತ್ತು ಹನುಮ ಭೇಟಿಯಾದ ಮೊದಲ ಜಾಗವಿದು: ಇಲ್ಲಿರುವ ಮಾರುತಿಯ ಮೂರ್ತಿ ಬಗ್ಗೆ ನಿಮಗೆಷ್ಟು ಗೊತ್ತು?
ಅಂಜನಾದ್ರಿ ಬೆಟ್ಟವು ಪ್ರವಾಸಿಗರನ್ನು ಸೆಳೆಯುವ ಅದ್ಭುತ ತಾಣ. ಶ್ರೀರಾಮ ಮತ್ತು ಆಂಜನೇಯ ಮೊದಲ ಬಾರಿಗೆ ಭೇಟಿಯಾದ ಜಾಗವಿದು ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ ಇಡೀ ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಹನುಮಾತ್ ಮೂರ್ತಿ ಇಲ್ಲಿದೆ.
ರಾಮಾಯಣಕ್ಕೆ ಸಂಬಂಧಿಸಿದ ಸಾಕಷ್ಟು ಸ್ಥಳಗಳ ಕುರಿತು ಉಲ್ಲೆಖವಿದೆ. ಅಂತಹದ್ದೇ ಒಂದು ಸ್ಥಳ ನಮ್ಮ ಕರ್ನಾಟಕ ರಾಜ್ಯದಲ್ಲಿದೆ. ಇದು ರಾಮಾಯಣದ ಅತ್ಯಂತ ಪ್ರಮುಖ ಅಧ್ಯಾಯವಾದ 'ಕಿಷ್ಕಿಂಧಾ ಕಾಂಡ'ದ ಆರಂಭವೆಂದು ಪರಿಗಣಿಸಲಾಗಿದೆ. ಇದೀಗ ಈ ಬೆಟ್ಟವು ಅಂಜನಾದ್ರಿ ಬೆಟ್ಟವೆಂದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಭಗವಾನ್ ಶ್ರೀರಾಮ ಮೊದಲ ಬಾರಿಗೆ ಆಂಜನೇಯನನ್ನು ಇದೇ ಸ್ಥಳದಲ್ಲಿ ಭೇಟಿಯಾಗಿದ್ದಾನೆ ಎಂದು ನಂಬಲಾಗಿದೆ. ಅಂಜನಾದ್ರಿ ಬೆಟ್ಟವು ಕೊಪ್ಪಳ ಜಿಲ್ಲೆಯ ಹನುಮನಹಳ್ಳಿಯಲ್ಲಿದೆ.
ಹನುಮನಹಳ್ಳಿಯನ್ನು ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳವು ಹಂಪಿಗೆ ತೀರಾ ಹತ್ತಿರದಲ್ಲಿದೆ. ಇಲ್ಲಿ ಯಂತ್ರೋಧಾರಕ ಹನುಮಾನ್ ದೇವಾಲಯವಿದೆ. ಇದನ್ನು ಪ್ರಾಣದೇವ ದೇವಸ್ಥಾನ ಎಂದೂ ಭಕ್ತರು ಕರೆಯುತ್ತಾರೆ. ಜಗತ್ತಿನಾದ್ಯಂತ ಇರುವ ಹನುಮಂತನ ಎಲ್ಲಾ ದೇವಾಲಯಗಳ ಪೈಕಿ ಇದು ಅತ್ಯಂತ ವಿಶೇಷವಾದ ದೇವಾಲಯ. ಈ ಸ್ಥಳದ ಕುರಿತ ವಿಶೇಷ ಮಾಹಿತಿ ಇಲ್ಲಿದೆ.
ರಾಮ-ಹನುಮ ಭೇಟಿಯಾದ ಜಾಗ
ಶ್ರೀರಾಮ,ಸೀತೆ ಮತ್ತು ಲಕ್ಷ್ಮಣ ವನವಾಸದಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ದಿನ ರಾವಣ ಸೀತೆಯನ್ನು ಅಪಹರಿಸುತ್ತಾನೆ. ಶ್ರೀರಾಮನು ಕಾಡಿನಲ್ಲಿ ತನ್ನ ಸತಿ ಸೀತೆಯನ್ನು ಹುಡುಕುತ್ತಿದ್ದಾಗ ಹನುಮಂತನನ್ನು ಭೇಟಿಯಾದನೆಂದು ಹೇಳಲಾಗುತ್ತದೆ. ಗ್ರಂಥಗಳಲ್ಲಿ ಶ್ರೀರಾಮ ಮತ್ತು ಹನುಮಂತನ ಸಂಗಮವನ್ನು ವಿವರಿಸುವಾಗ, ಹಂಪಿಯ ಮೂಲಕ ಹಾದುಹೋಗುವ ತುಂಗಭದ್ರಾ ನದಿಯನ್ನು ಉಲ್ಲೇಖಿಸಲಾಗಿದೆ.

ಈ ನದಿಯು ಬಿಲ್ಲಿನ ಆಕಾರದಲ್ಲಿ ಹರಿಯುವ ಸ್ಥಳದಲ್ಲಿ ಹನುಮನಹಳ್ಳಿಯಿದೆ. ಸುಗ್ರೀವನ ಆದೇಶದ ಮೇರೆಗೆ ಹನುಮಂತನು ಬ್ರಾಹ್ಮಣನ ವೇಷದಲ್ಲಿ ಈ ನದಿಯ ದಡದಲ್ಲಿರುವ ಮಲ್ಯವಂತ ಬೆಟ್ಟದ ಕಾಡಿನಲ್ಲಿ ತಿರುಗುತ್ತಿದ್ದ ಶ್ರೀರಾಮ ಮತ್ತು ಅವನ ಸಹೋದರ ಲಕ್ಷ್ಮಣರನ್ನು ಭೇಟಿಯಾದನೆಂದು ನಂಬಲಾಗಿದೆ. ರಾಮನು ತಾನು ಅಯೋಧ್ಯೆಯ ರಾಜ ದಶರಥನ ಮಗ ಶ್ರೀರಾಮ ಎಂದು ಹೇಳಿದಾಗ ಹನುಮಂತನು ತನ್ನ ನೈಜ ರೂಪ ತಾಳುತ್ತಾನೆ ಎಂಬ ಉಲ್ಲೇಖವಿದೆ.
ಯಂತ್ರೋಧಾರಕ ಹನುಮಾನ್
ಯಂತ್ರೋಧಾರಕ ಹನುಮಾನ್ ದೇವಸ್ಥಾನವು ತುಂಗಭದ್ರಾ ನದಿಯ ದಡದಲ್ಲಿರುವ ಕೋದಂಡ ರಾಮ ದೇವಾಲಯದ ಹಿಂದೆಯಿದ್ದು, 'ಚಕ್ರ ತೀರ್ಥ' ಬಳಿ ಮಲ್ಯವಂತ ಬೆಟ್ಟದ ಮೇಲೆ ಸ್ಥಾಪಿಸಲಾಗಿದೆ. ಅದನ್ನು ಈಗ ಅಂಜನಾದ್ರಿ ಬೆಟ್ಟ ಎಂದು ಕರೆಯಲಾಗುತ್ತದೆ. ಇದು ಹನುಮಂತನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಸುಮಾರು 500 ವರ್ಷಗಳ ಹಿಂದೆ 1460 ಮತ್ತು 1539 ರ ನಡುವೆ ಮಧ್ವ ಸಂತ ಶ್ರೀ ವ್ಯಾಸರಾಜರು ಆದೇಶದ ಮೇರೆಗೆ ವಿಜಯನಗರದ ಅಂದಿನ ರಾಜ ತಮ್ಮರಾಯರು ನಿರ್ಮಿಸಿದರು ಎನ್ನಲಾಗುತ್ತದೆ. ವ್ಯಾಸರಾಜರು ವಿಜಯನಗರದ ಅಂದಿನ ರಾಜಗುರು ಆಗಿದ್ದು, ಅವರು ಸುಮಾರು 732 ಹನುಮನ ವಿಗ್ರಹಗಳನ್ನು ಸ್ಥಾಪಿಸಿದ್ದರು. ಯಂತ್ರೋಧಾರಕ ಹನುಮಾನ್ ದೇವಾಲಯ ಇವುಗಳಲ್ಲಿ ಮೊದಲನೆಯದು.

ಈ ದೇವಾಲಯದ ವಿಶೇಷತೆಯೆಂದರೆ ಆಂಜನೇಯನು ಧ್ಯಾನದ ಭಂಗಿಯಲ್ಲಿ ಕುಳಿತಿದ್ದಾನೆ. ಸುತ್ತಲೂ ಯಂತ್ರವಿದೆ. ಈ ಮೂರ್ತಿಯನ್ನು ಬಂಡೆಯ ಮೇಲೆ ಕೆತ್ತಲಾಗಿದೆ. ಈ ರೀತಿಯ ಹನುಮನ ಮೂರ್ತಿ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಈ ದೇವಾಲಯದ ಆವರಣದಲ್ಲಿ ರಾಮಮಂದಿರವೂ ಇದೆ. ಇದನ್ನು ರಾಮ-ಹನುಮಂತನ ಮೊದಲ ಭೇಟಿಯ ನೆನಪಿಗಾಗಿ ಇಲ್ಲಿ ನಿರ್ಮಿಸಲಾಗಿದೆ.
ಪ್ರತಿಮೆಗೊಂದು ಕಥೆ
ಒಮ್ಮೆ ವ್ಯಾಸರಾಜರು ಈ ಸ್ಥಳಕ್ಕೆ ಬಂದಿದ್ದರೆಂದು ಹೇಳಲಾಗುತ್ತದೆ. ಹೀಗೊಮ್ಮೆ ಅವರು ತುಂಗಭದ್ರಾ ನದಿಯಲ್ಲಿ ಸ್ನಾನ ಮುಗಿಸಿ ಅದರ ದಡದಲ್ಲಿ ಧ್ಯಾನಸ್ಥರಾಗಿದ್ದರು. ಈ ಸಮಯದಲ್ಲಿ ಅವರು ಧ್ಯಾನ ಭಂಗಿಯಲ್ಲಿರುವ ವಾನರವನ್ನು ನೋಡಿದರು.ಅವರಿಗೆ ಆಶ್ಚರ್ಯವಾಯಿತು. ತಡಮಾಡದೆ ತಕ್ಷಣವೇ ಬಂಡೆಯ ಮೇಲೆ ಅದೇ ರೀತಿ ಚಿತ್ರವನ್ನು ಕೆತ್ತಿದರು. ನಂಬಿಕೆಯ ಪ್ರಕಾರ ಅವರ ಕೆತ್ತನೆ ಮುಗಿದ ತಕ್ಷಣ ವಾನರ ಜೀವಂತವಾಗಿ ಬಂಡೆಗಳ ಮೇಲೆ ಹಾರಿ ಓಡಿಹೋಯಿತು. ವ್ಯಾಸರಾಜರು ಸರಿ ಸುಮಾರು 12 ಬಾರಿ ಈ ರೀತಿ ಮಾಡಿದರೂ ಪ್ರತಿ ಬಾರಿ ಚಿತ್ರ ಮುಗಿದ ತಕ್ಷಣ ವಾನರ ಓಡಿಹೋಯಿತು. ಆ ನಂತರ ಚಿತ್ರ ಬರೆಯುವುದರ ಜೊತೆಗೆ ಯಂತ್ರವನ್ನು ಕೆತ್ತಿದರು. ಇದರಿಂದಾಗಿ ಚಿತ್ರವು ಸ್ಥಿರವಾಯಿತು. ಈ ರೀತಿಯಾಗಿ ವಿಗ್ರಹವು ಅಸ್ತಿತ್ವಕ್ಕೆ ಬಂದಿತು. ಇದಾದ ನಂತರ ದೇವಾಲಯವನ್ನು ನಿರ್ಮಿಸಿ ಮೂರ್ತಿಯನ್ನು ಬೆಟ್ಟದ ತುದಿಯಲ್ಲಿ ಸ್ಥಾಪಿಸಲಾಯಿತು. ಇಲ್ಲಿಗೆ ಸಾವಿರಾರು ಹನುಮ ಭಕ್ತರು ಭೇಟಿ ನೀಡುತ್ತಾರೆ.

ದೇವಾಲಯ ತಲುಪುವುದು ಹೇಗೆ?
ದೇವಸ್ಥಾನವನ್ನು ತಲುಪಲು 570 ಮೆಟ್ಟಿಲುಗಳನ್ನು ಭಕ್ತಾದಿಗಳು ಹತ್ತಬೇಕು. ಯಂತ್ರೋಧಾರಕ ಹನುಮಾನ್ ದೇವಾಲಯವನ್ನು ನೋಡಲು ಹಂಪಿಯನ್ನು ತಲುಪಬೇಕು. ಹಂಪಿಗೆ ಬಳ್ಳಾರಿ ವಿಮಾನ ನಿಲ್ದಾಣವು ಹತ್ತಿರವಾಗುತ್ತದೆ. ಇದು ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಸುಮಾರು 360 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಹೊಂದಿದೆ. ಇದಲ್ಲದೆ ದೇಶದ ಕೆಲವು ಪ್ರಮುಖ ನಗರಗಳಿಂದ ನೇರ ವಿಮಾನಗಳು ಇಲ್ಲಿಗೆ ಬರುತ್ತವೆ. ಬಳ್ಳಾರಿಯಿಂದ ಹಂಪಿಗೆ ಬಸ್ ಸೇವೆಯೊಂದಿಗೆ ಖಾಸಗಿ ಟ್ಯಾಕ್ಸಿಗಳೂ ಕೂಡ ಲಭ್ಯವಿವೆ. ರೈಲಿನಲ್ಲಿ ಬರಲು ಬಯಸಿದರೆ ಹಂಪಿಯಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿರುವ ಹೊಸಪೇಟೆ ಜಂಕ್ಷನ್‌ಗೆ ರೈಲುಗಳಿವೆ. ಹಂಪಿಗೆ ಬಸ್ಸಿನಲ್ಲಿ ಬರಲು ಹೊಸಪೇಟೆಗೆ ಬಸ್ ಹತ್ತಬೇಕು.