ಮ್ಯೂಸಿಯಂ ಟೂರಿಸಂ ಎಂಬ ಗಳಿಕೆಯ ಹೊಸ ಹಾದಿ
ಒಂದು ದೇಶದ ಆರ್ಥಿಕತೆ ನಿಂತಿರುವುದು ಅದರ ಪ್ರವಾಸೋದ್ಯಮದ ಮೇಲೆ. ಇಂದು ಪ್ಯಾರಿಸ್ ನಗರ ಕೇವಲ ಸುಗಂಧ ದ್ರವ್ಯಕ್ಕೆ ಹೆಸರಾಗಿಲ್ಲ, ಅದು ತನ್ನ ಮ್ಯೂಸಿಯಂಗಳಿಂದ ಬದುಕುತ್ತಿದೆ ಅಂದ್ರೆ ಆಶ್ಚರ್ಯವಾಗಬಹುದು. ನಮ್ಮಲ್ಲಿ ಹಂಪಿ ಇದೆ, ಬೇಲೂರು, ಪಟ್ಟದಕಲ್ಲು ಇದೆ. ಆದರೆ ಈ ತಾಣಗಳ ಪಕ್ಕದಲ್ಲೇ ಜಗತ್ತೇ ಬೆರಗಾಗುವಂಥ ಒಂದು ‘ವರ್ಲ್ಡ್ ಕ್ಲಾಸ್’ ಮ್ಯೂಸಿಯಂ ಯಾಕಿಲ್ಲ? ಆ ಶಿಲ್ಪಗಳನ್ನು ಕೆತ್ತಿದ ಆ ಕೈಗಳ ಕಥೆ ಹೇಳುವ, ಆ ಕಾಲದ ಬದುಕನ್ನು ಮರುಸೃಷ್ಟಿಸುವ ಡಿಜಿಟಲ್ ಮ್ಯೂಸಿಯಂಗಳನ್ನು ಯಾಕೆ ನಾವು ಕಟ್ಟಿಲ್ಲ?
ಮ್ಯೂಸಿಯಂ ಅಂದರೆ ಅದೊಂದು ಕೇವಲ ಹಳೆಯ ವಸ್ತುಗಳ ಗುಜರಿ ಅಂಗಡಿಯಲ್ಲ. ಅದು ನಿಂತು ಹೋದ ಕಾಲದ ಹೆಜ್ಜೆಗುರುತು. ಅವು ಒಂದು ದೇಶದ ಸಾಂಸ್ಕೃತಿಕ ರಾಯಭಾರಿಗಳು. ಅಲ್ಲಿ ಸಾವಿರ ವರ್ಷಗಳ ಹಿಂದೆ ಯಾರೋ ಸುಂದರಿ ಉಟ್ಟಿದ್ದ ಸೀರೆಯ ಜರಿ ಇರಬಹುದು, ಯುದ್ಧದ ಮೈದಾನದಲ್ಲಿ ರಕ್ತ ಕುಡಿದು ಮೌನವಾದ ಖಡ್ಗವಿರಬಹುದು ಅಥವಾ ಪ್ರೀತಿಗಾಗಿ ಪ್ರಾಣ ಕೊಟ್ಟವನ ಕೊನೆಯ ಪತ್ರವಿರಬಹುದು. ನೀವು ಮ್ಯೂಸಿಯಂಗೆ ಹೋಗುವುದು ಅಂದರೆ, ಇವತ್ತಿನ ಟ್ರಾಫಿಕ್, ರೀಲ್ಸ್, ಪೋಸ್ಟ್, ವಾಟ್ಸಾಪ್ ನೋಟಿಫಿಕೇಶನ್ ಮತ್ತು ಆಫೀಸಿನ ಕಿರಿಕಿರಿಗಳಿಂದ ಎಸ್ಕೇಪ್ ಆಗಿ ಸೀದಾ ಇತಿಹಾಸದ ಬೆಡ್‌ರೂಮಿಗೆ ನುಗ್ಗಿದಂತೆ! ನೀವು ಲಂಡನ್‌ಗೆ ಹೋಗಿ ಅಲ್ಲಿನ ‘ಬ್ರಿಟಿಷ್ ಮ್ಯೂಸಿಯಂ’ ಮುಂದೆ ನಿಂತರೆ ನಿಮಗೆ ಮೈ ಜುಂ ಎನ್ನುತ್ತದೆ. ಪ್ಯಾರಿಸ್‌ನ ‘ಲೂವ್ರ್’ ಮ್ಯೂಸಿಯಂ ಒಳಗೆ ಹೋದರೆ ಅಲ್ಲಿನ ಗೋಡೆಗಳು ನಿಮ್ಮ ಜತೆ ಮಾತಾಡುತ್ತವೆ. ಅಲ್ಲಿ ಮೊನಾಲಿಸಾಳ ಮಂದಹಾಸದ ಮುಂದೆ ಜನ ಗಂಟೆಗಟ್ಟಲೆ ಕಣ್ಣು ಮಿಟುಕಿಸದೇ ನಿಲ್ಲುತ್ತಾರೆ. ಯಾಕೆ ಗೊತ್ತಾ? ಆ ದೇಶಗಳಿಗೆ ಗೊತ್ತು, ತಮ್ಮ ಅಸ್ತಿತ್ವದ ಬೇರುಗಳು ಇರುವುದು ಆ ಗಾಜಿನ ಪೆಟ್ಟಿಗೆಯೊಳಗಿನ ಹಳೆಯ ವಸ್ತುಗಳಲ್ಲಿ ಅಂತ!

ಆದರೆ ನಮ್ಮಲ್ಲಿ? ಇಲ್ಲಿನ ಪರಿಸ್ಥಿತಿಯೇ ಬೇರೆ. ನಮ್ಮ ರಾಜ್ಯದಲ್ಲಾಗಲಿ, ಈ ದೇಶದಲ್ಲಾಗಲಿ ಮ್ಯೂಸಿಯಂ ಅಂದ ಕೂಡಲೇ ಮುಖ ಕಿವುಚುವ, ಉದಾಸೀನ ಮಾಡುವವರೇ ಹೆಚ್ಚು. 'ಯಾರೋ ಸತ್ತು ಹೋದವರ ಹಳೆ ಕತ್ತಿ, ಖಡ್ಗ ನೋಡೋಕೆ ಹತ್ತು ರುಪಾಯಿ ಟಿಕೆಟ್ ಕೊಟ್ಟು ಯಾಕೆ ಹೋಗಬೇಕು?' ಅನ್ನೋದು ಅನೇಕರ ರಕ್ತದಲ್ಲೇ ಸೇರಿ ಹೋಗಿರೋ ಉದಾಸೀನತೆ. ಲಂಡನ್, ಪ್ಯಾರಿಸ್ ನಗರಗಳು ಪ್ರವಾಸೋದ್ಯಮದಲ್ಲಿ ಜಗತ್ತನ್ನೇ ಆಳುತ್ತಿವೆ ಅಂದರೆ ಅದಕ್ಕೆ ಅವರ ಮ್ಯೂಸಿಯಂ ಸಂಸ್ಕೃತಿಯೇ ಕಾರಣ. ಆದರೆ ನಮ್ಮಲ್ಲಿ ಮ್ಯೂಸಿಯಂ ಅಂದರೆ ನಿದ್ದೆ ಮಾಡುತ್ತಿರುವ ಸೆಕ್ಯೂರಿಟಿ ಗಾರ್ಡ್, ಧೂಳು ತುಂಬಿದ, ಕತ್ತಲೆ ಕೋಣೆ. ಅಲ್ಲಿ ಎಂದೋ ಪೇರಿಸಿಟ್ಟ ಹಳೆಯ ವಸ್ತುಗಳ ಸಂಗ್ರಹ. ಶಾಲೆ-ಹೈಸ್ಕೂಲುಗಳಲ್ಲಿದ್ದಾಗ ಮ್ಯೂಸಿಯಂಗೆ ಹೋದ ನೆನಪು. ನಂತರ ಯಾರೂ ಅತ್ತ ಹಾಯುವುದೂ ಇಲ್ಲ.
ಲಂಡನ್ ಮ್ಯೂಸಿಯಂನಲ್ಲಿ ನಮ್ಮೂರಿನ ‘ಕೊಹಿನೂರ್’ ವಜ್ರವಿದೆ, ಟಿಪ್ಪು ಸುಲ್ತಾನನ ಖಡ್ಗವಿದೆ. ಅಲ್ಲಿನ ಜನ ಅದನ್ನು ಅಚ್ಚುಕಟ್ಟಾಗಿ ಕಾದಿರಿಸಿದ್ದಾರೆ. ಅದನ್ನು ನೋಡಲು ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ, ಕೋಟಿ ಕೋಟಿ ಹಣ ಸುರಿಯುತ್ತಾರೆ. ಆದರೆ ನಮ್ಮ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಬಿದ್ದಿರೋ ವೀರಗಲ್ಲುಗಳು, ಶಾಸನಗಳು ಏನಾಗಿವೆ ಗೊತ್ತಾ? ಕೆಲವು ಕಡೆ ಅವುಗಳ ಮೇಲೆ ಜನ ಬಟ್ಟೆ ಒಗೆಯುತ್ತಾರೆ, ಇನ್ನು ಕೆಲವು ಕಡೆ ಆ ಕಲ್ಲುಗಳಿಗೆ ಸುಣ್ಣ ಬಳಿದು ಸಿನಿಮಾ ಪೋಸ್ಟರ್ ಅಂಟಿಸುತ್ತಾರೆ. ಮ್ಯೂಸಿಯಂ ಸಂಸ್ಕೃತಿ ಅಂದರೆ ಕೇವಲ ವಸ್ತುಗಳನ್ನು ಜೋಡಿಸಿಡುವುದು ಮಾತ್ರವಲ್ಲ, ಅದು ನಮ್ಮ ಇತಿಹಾಸವನ್ನು ಪ್ರೀತಿಸುವ ಕ್ರಮ. ನಮಗೆ ನಮ್ಮ ಅಪ್ಪ-ಅಮ್ಮನ ಫೊಟೋ ಆಲ್ಬಮ್ ನೋಡುವಾಗ ಸಿಗುವ ಆಪ್ತತೆ, ನಮ್ಮ ನಾಡಿನ ಮ್ಯೂಸಿಯಂಗೆ ಹೋದಾಗ ಯಾಕೆ ಸಿಗಲ್ಲ? ಯಾಕೆಂದರೆ ನಾವು ಮ್ಯೂಸಿಯಂ ಅನ್ನು ಕೇವಲ ಸ್ಕೂಲ್ ಪಿಕ್ ನಿಕ್ ಹೋಗುವ ತಾಣ ಮಾಡಿಕೊಂಡಿದ್ದೇವೆ ಹೊರತು, ಜ್ಞಾನದ ದೇಗುಲವನ್ನಲ್ಲ.

ಒಂದು ದೇಶದ ಆರ್ಥಿಕತೆ ನಿಂತಿರುವುದು ಅದರ ಪ್ರವಾಸೋದ್ಯಮದ ಮೇಲೆ. ಇಂದು ಪ್ಯಾರಿಸ್ ನಗರ ಕೇವಲ ಸುಗಂಧ ದ್ರವ್ಯಕ್ಕೆ ಹೆಸರಾಗಿಲ್ಲ, ಅದು ತನ್ನ ಮ್ಯೂಸಿಯಂಗಳಿಂದ ಬದುಕುತ್ತಿದೆ ಅಂದ್ರೆ ಆಶ್ಚರ್ಯವಾಗಬಹುದು. ನಮ್ಮಲ್ಲಿ ಹಂಪಿ ಇದೆ, ಬೇಲೂರು, ಪಟ್ಟದಕಲ್ಲು ಇದೆ. ಆದರೆ ಈ ತಾಣಗಳ ಪಕ್ಕದಲ್ಲೇ ಜಗತ್ತೇ ಬೆರಗಾಗುವಂಥ ಒಂದು ‘ವರ್ಲ್ಡ್ ಕ್ಲಾಸ್’ ಮ್ಯೂಸಿಯಂ ಯಾಕಿಲ್ಲ? ಆ ಶಿಲ್ಪಗಳನ್ನು ಕೆತ್ತಿದ ಆ ಕೈಗಳ ಕಥೆ ಹೇಳುವ, ಆ ಕಾಲದ ಬದುಕನ್ನು ಮರುಸೃಷ್ಟಿಸುವ ಡಿಜಿಟಲ್ ಮ್ಯೂಸಿಯಂಗಳನ್ನು ಯಾಕೆ ನಾವು ಕಟ್ಟಿಲ್ಲ? ಒಬ್ಬ ವಿದೇಶಿ ಪ್ರವಾಸಿ ಬಂದಾಗ ಅವನಿಗೆ ನಾವು ತೋರಿಸುವುದು ಕೇವಲ ಕಲ್ಲುಗಳನ್ನಲ್ಲ, ಆ ಕಲ್ಲಿನ ಹಿಂದಿರುವ ಕಥೆಯನ್ನು. ಮ್ಯೂಸಿಯಂಗಳು ಪ್ರವಾಸೋದ್ಯಮದ ಬೆನ್ನೆಲುಬು. ನೀವು ಒಂದು ಒಳ್ಳೆಯ ಮ್ಯೂಸಿಯಂ ಸ್ಥಾಪಿಸಿದರೆ, ಅದರ ಸುತ್ತ ನೂರು ಹೊಟೇಲ್‌ಗಳು ಬದುಕುತ್ತವೆ, ಸಾವಿರ ಟ್ಯಾಕ್ಸಿ ಡ್ರೈವರ್‌ಗಳಿಗೆ ಕೆಲಸ ಸಿಗುತ್ತದೆ. ಆದರೆ ನಮಗೆ ಮ್ಯೂಸಿಯಂ ಸ್ಥಾಪಿಸುವುದಕ್ಕಿಂತ, ಯಾವುದೋ ಅನಗತ್ಯ ಪ್ರತಿಮೆ ನಿಲ್ಲಿಸುವುದರಲ್ಲೇ ಆಸಕ್ತಿ ಹೆಚ್ಚು.
ಮ್ಯೂಸಿಯಂ ನೋಡುವ ಕಲೆ ನಮಗೆ ಗೊತ್ತಿಲ್ಲ!
ಮ್ಯೂಸಿಯಂ ನೋಡುವುದೂ ಕೂಡ ಒಂದು ಕಲೆ. ಹೆಚ್ಚಿನವರು ಮ್ಯೂಸಿಯಂಗೆ ಹೋಗುವುದು ಫ್ಯಾಮಿಲಿ ಜತೆ ಟೈಮ್ ಪಾಸ್ ಮಾಡಲು. ಮ್ಯೂಸಿಯಂನಲ್ಲಿ ಇಟ್ಟಿರುವ ವಸ್ತುಗಳ ಕೆಳಗಿರುವ ವಿವರಗಳನ್ನು ಓದುವ ತಾಳ್ಮೆ ಯಾರಿಗಿದೆ? ಅಲ್ಲಿರುವ ರಾಜಕುಮಾರಿಯ ಒಡ್ಯಾಣ, ಕಟಿಬಂಧ, ನಡುಕಟ್ಟು, ಡಾಬು, ಉಡಿದಾರ ಅಥವಾ ಕಮರಪಟ್ಟಿಯನ್ನು ನೋಡಿದಾಗ, ಆ ಕಾಲದ ಚಿನ್ನದ ಕೆಲಸದ ಸೂಕ್ಷ್ಮತೆಯನ್ನು ನೋಡಿ ಬೆರಗಾಗುವ ತಾದಾತ್ಮ್ಯತೆ ಯಾರಿಗಿದೆ? ಮ್ಯೂಸಿಯಂ ಸಂಸ್ಕೃತಿ ನಮ್ಮಲ್ಲಿ ಬರಬೇಕಾದರೆ, ಮೊದಲು ನಮ್ಮ ಶಾಲಾ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಕೊಡುವ ಬದಲು ಅವರನ್ನು ಮ್ಯೂಸಿಯಂಗೆ ಕರೆದೊಯ್ದು, 'ನೋಡು ಮಗನೇ, ಇದು ನಿನ್ನ ನಾಡಿನ ಹೆಮ್ಮೆ' ಎಂದು ತೋರಿಸಬೇಕು. ಇತಿಹಾಸ ಅಂದರೆ ಬೋರ್ ಹೊಡೆಸುವ ವಿಷಯ ಅಲ್ಲ, ಅದು ನಮ್ಮ ನೆಲದ, ಬೆವರಿನ, ರಕ್ತದ ಕಥೆ ಎಂದು ಮನವರಿಕೆ ಮಾಡಿಕೊಡಬೇಕು.
ನಮಗೆ ಈಗ ಬೇಕಿರೋದು ಕೇವಲ ಹಳೆ ಕಾಲದ ಕಟ್ಟಡಗಳಲ್ಲ. ನಮಗೆ ಬೇಕಿರೋದು ‘ಲಿವಿಂಗ್ ಮ್ಯೂಸಿಯಂ’ಗಳು. ಅಲ್ಲಿ ತಂತ್ರಜ್ಞಾನ ಇರಬೇಕು. ತ್ರಿಡಿ ಪ್ರೊಜೆಕ್ಷನ್‌ಗಳ ಮೂಲಕ ಚಾಲುಕ್ಯರ ಕಾಲದ ವೈಭವವನ್ನು ಕಣ್ಣಮುಂದೆ ತರಬೇಕು. ಪ್ರವಾಸಿಗರಿಗೆ ಆಪ್ತವಾಗುವಂಥ ಆಡಿಯೋ ಗೈಡ್‌ಗಳು ಇರಬೇಕು. ಲಂಡನ್‌ನ ಮ್ಯೂಸಿಯಂನಂತೆ ಅಲ್ಲಿನ ಕಾಫಿ ಶಾಪ್, ಲೈಬ್ರರಿ ಮತ್ತು ಸ್ಮರಣಿಕೆ ಅಂಗಡಿಗಳು (Souvenir shops) ಅತ್ಯಂತ ಆಕರ್ಷಕವಾಗಿರಬೇಕು. ನಮ್ಮ ದೇಶದಲ್ಲಿ ಮ್ಯೂಸಿಯಂ ಕಲ್ಚರ್ ಅನ್ನೋದು ಸತ್ತು ಹೋಗಿಲ್ಲ, ಅಸಲಿಗೆ ಅದು ಇನ್ನೂ ಹುಟ್ಟೇ ಇಲ್ಲ! ಅದನ್ನು ಹುಟ್ಟಿಸಬೇಕಾದ ಜವಾಬ್ದಾರಿ ನಮ್ಮದು. ನಾವು ಯಾವಾಗ ಇತಿಹಾಸದ ಚೂರುಗಳನ್ನು ಕೇವಲ ಕಲ್ಲುಗಳೆಂದು ನೋಡದೇ, ನಮ್ಮ ಅಸ್ಮಿತೆ ಎಂದು ನೋಡುತ್ತೇವೋ, ಅಂದು ಲಂಡನ್ ಅಥವಾ ಪ್ಯಾರಿಸ್‌ನಂತೆ ನಮ್ಮ ಬೆಂಗಳೂರಿನ ಅಥವಾ ಮೈಸೂರಿನ ಮ್ಯೂಸಿಯಂಗಳ ಮುಂದೆಯೂ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲುತ್ತದೆ.

'ಮ್ಯೂಸಿಯಂ ಎನ್ನುವುದು ಕೇವಲ ‘ಖರ್ಚು’ ಮಾಡುವ ಇಲಾಖೆಯಲ್ಲ, ಅದು ‘ಗಳಿಕೆ’ ಮಾಡುವ ಉದ್ಯಮವಾಗಬೇಕು' ಎಂಬ ಮಾತು ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಇತಿಹಾಸವನ್ನು ಕೇವಲ ಅಂಕಿ-ಅಂಶಗಳಾಗಿ ನೀಡದೆ, ಅದನ್ನು ಆಕರ್ಷಕ ಕಥೆಯ ರೂಪದಲ್ಲಿ (Storytelling) ಪ್ರಸ್ತುತಪಡಿಸಿದರೆ, ಅದು ಪ್ರವಾಸೋದ್ಯಮದ ಬೆನ್ನೆಲುಬಾಗಿ ನಿಂತು ಕೋಟ್ಯಂತರ ರುಪಾಯಿ ಆದಾಯ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಬಲ್ಲದು. ಜನರು ವಸ್ತುಗಳನ್ನು ನೋಡಲು ಬರುವುದಿಲ್ಲ, ಆ ವಸ್ತುಗಳ ಹಿಂದಿರುವ ಸಾಹಸ, ಪ್ರೀತಿ, ತ್ಯಾಗ ಅಥವಾ ಕುತೂಹಲಕಾರಿ ಕಥೆಗಳನ್ನು ಕೇಳಲು ಬರುತ್ತಾರೆ.
ಉದಾಹರಣೆಗೆ, ಮ್ಯೂಸಿಯಂನಲ್ಲಿ ಒಂದು ಹಳೆಯ ತುಕ್ಕು ಹಿಡಿದ ಖಡ್ಗವಿದ್ದರೆ ಅದು ಕೇವಲ ಲೋಹದ ಚೂರು. ಆದರೆ, 'ಇದು ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡುವಾಗ ಬಳಸಿದ ಖಡ್ಗ' ಎಂದು ಅದರ ಹಿಂದಿನ ವೀರಗಾಥೆಯನ್ನು ವಿವರಿಸಿದಾಗ ಆ ವಸ್ತುವಿಗೆ ಜೀವ ಬರುತ್ತದೆ. ಇಂದಿನ ಪ್ರವಾಸಿಗರು ಕೇವಲ ವೀಕ್ಷಕರಲ್ಲ, ಅವರು ಅನುಭವವನ್ನು ಬಯಸುತ್ತಾರೆ. ಇತಿಹಾಸವನ್ನು ಡಿಜಿಟಲ್ ತಂತ್ರಜ್ಞಾನ (AR/VR) ಬಳಸಿ ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ, ಜನರು ಅದಕ್ಕಾಗಿ ಹಣ ಖರ್ಚು ಮಾಡಲು ಸಿದ್ಧರಿರುತ್ತಾರೆ.
ವಿಶ್ವದ ಪ್ರಮುಖ ಮ್ಯೂಸಿಯಂಗಳು ಇಂದು ಲಾಭದಾಯಕ ಉದ್ಯಮಗಳಾಗಿ ಮಾರ್ಪಟ್ಟಿವೆ. ಫ್ರಾನ್ಸ್‌ನ ಲೂವ್ರ್ ಮ್ಯೂಸಿಯಂನಲ್ಲಿರುವ ಮೊನಾಲಿಸಾ ಚಿತ್ರದ ಹಿಂದಿನ ರಹಸ್ಯ ಮತ್ತು ಕಥೆಗಳನ್ನು ಕೇಳಲು ವರ್ಷಕ್ಕೆ ಕೋಟ್ಯಂತರ ಪ್ರವಾಸಿಗರು ಬರುತ್ತಾರೆ. ಇದರಿಂದ ಫ್ರಾನ್ಸ್ ಸರಕಾರಕ್ಕೆ ಟಿಕೆಟ್ ದರ, ಹೊಟೇಲ್ ಮತ್ತು ಸಾರಿಗೆಯ ಮೂಲಕ ಬಿಲಿಯನ್ ಗಟ್ಟಲೆ ಡಾಲರ್ ಆದಾಯ ಬರುತ್ತದೆ. ಈಜಿಪ್ಟ್ ತನ್ನ ಮಮ್ಮಿಗಳ ಹಿಂದಿನ 'ಮರಣೋತ್ತರ ಜೀವನ'ದ ಕಥೆಗಳನ್ನು ಜಗತ್ತಿಗೆ ಮಾರಿ ತನ್ನ ದೇಶದ ಜಿಡಿಪಿಯ ಬಹುಪಾಲನ್ನು ಪ್ರವಾಸೋದ್ಯಮದಿಂದಲೇ ಪಡೆಯುತ್ತಿದೆ.
ಕೇವಲ ಲಂಡನ್‌ನ ಮೇಡಮ್ ಟುಸಾಡ್ಸ್ ಮ್ಯೂಸಿಯಂ ವರ್ಷಕ್ಕೆ ಸುಮಾರು 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತದೆ. ಲಂಡನ್‌ಗೆ ಬರುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಗರಲ್ಲಿ ಕನಿಷ್ಠ ನಾಲ್ಕರಲ್ಲೊಬ್ಬರು ಮೇಡಮ್ ಟುಸಾಡ್ಸ್ ಮ್ಯೂಸಿಯಂಗೆ ಭೇಟಿ ನೀಡುತ್ತಾರೆ. ಇದೊಂದರಿಂದಲೇ ವಾರ್ಷಿಕವಾಗಿ ಸುಮಾರು $100 ಮಿಲಿಯನ್‌ನಿಂದ $130 ಮಿಲಿಯನ್ (ಅಂದಾಜು ₹1,000 ಕೋಟಿ ರುಪಾಯಿ) ವರೆಗೆ ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ. ಸೆಲೆಬ್ರಿಟಿಗಳ ಸ್ಮರಣಿಕೆಗಳು, ಫೊಟೋಗಳು ಮತ್ತು ಮೇಣದ ಕೈಗಳ ಪ್ರತಿಕೃತಿಗಳನ್ನು ತಯಾರಿಸಿಕೊಡುವ ಮೂಲಕ ನೂರು ಕೋಟಿ ರುಪಾಯಿಗೂ ಅಧಿಕ ಹಣ ಗಳಿಸಲಾಗುತ್ತದೆ. ಇತಿಹಾಸವನ್ನು ಅಥವಾ ವ್ಯಕ್ತಿಗಳ ಕಥೆಯನ್ನು ಸರಿಯಾಗಿ 'ಪ್ಯಾಕೇಜ್' ಮಾಡಿ ಮಾರಾಟ ಮಾಡಿದರೆ ಮ್ಯೂಸಿಯಂ ಎಷ್ಟು ದೊಡ್ಡ ಉದ್ಯಮವಾಗಬಲ್ಲದು ಎಂಬುದಕ್ಕೆ ಮೇಡಮ್ ಟುಸಾಡ್ಸ್ ಅತ್ಯುತ್ತಮ ಉದಾಹರಣೆ.

ಅದೇ ರೀತಿ, ವಸ್ತುಸಂಗ್ರಹಾಲಯ ಅಥವಾ ಐತಿಹಾಸಿಕ ತಾಣವನ್ನು ಹೇಗೆ ಒಂದು ಲಾಭದಾಯಕ ‘ಅನುಭವ ಉದ್ಯಮ’ವನ್ನಾಗಿ (Experience Economy) ಬದಲಾಯಿಸಬಹುದು ಎಂಬುದಕ್ಕೆ ಜಗತ್ತಿನಲ್ಲೇ ಅತ್ಯಂತ ಯಶಸ್ವಿ ಉದಾಹರಣೆ ಎಂದರೆ ಜೋರ್ಡಾನ್ ದೇಶದ 'ಪೆಟ್ರಾ’. ಇದು ಕೇವಲ ಕಲ್ಲುಗಳ ನಗರವಲ್ಲ, ಅದು ಇತಿಹಾಸವನ್ನು ಕಥೆಯ ರೂಪದಲ್ಲಿ ಮಾರಾಟ ಮಾಡಿ ಇಡೀ ದೇಶದ ಆರ್ಥಿಕತೆಯನ್ನೇ ಬದಲಿಸಿದ ಒಂದು ಅದ್ಭುತ ನಿದರ್ಶನ. ಪೆಟ್ರಾ ನಮಗೆ ಕಲಿಸಿಕೊಡುವುದು ಇಷ್ಟೇ - ವಸ್ತುಗಳನ್ನು ಸಂಗ್ರಹಿಸಿಡುವುದು ಮ್ಯೂಸಿಯಂನ ಅರ್ಧ ಕೆಲಸವಾದರೆ, ಆ ವಸ್ತುಗಳ ಮೂಲಕ ಪ್ರವಾಸಿಗರ ಕಲ್ಪನಾ ಲೋಕವನ್ನು ಬಡಿದೆಬ್ಬಿಸಿ ಅದಕ್ಕೆ ಮೌಲ್ಯ ಕಟ್ಟುವುದು ನಿಜವಾದ ಉದ್ಯಮ.
ಮ್ಯೂಸಿಯಂಗಳನ್ನು ಉದ್ಯಮವಾಗಿ ಅಭಿವೃದ್ಧಿಪಡಿಸಿದರೆ ಹತ್ತಾರು ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಒಂದು ಮ್ಯೂಸಿಯಂ ಸ್ಥಾಪಿಸಿದರೆ ನೂರಾರು ಕ್ಯುರೇಟರ್‌ಗಳು, ಇತಿಹಾಸಕಾರರು, ಸಂಶೋಧಕರು ಮತ್ತು ಕಥೆಗಾರರೂ, ಗೈಡ್ ಗಳಿಗೆ ಉದ್ಯೋಗ ಸಿಗುತ್ತವೆ. ಆಡಿಯೋ ಗೈಡ್‌ಗಳು, ತ್ರಿಡಿ ಮ್ಯಾಪಿಂಗ್ ಮತ್ತು ವರ್ಚುವಲ್ ರಿಯಾಲಿಟಿ ಅಭಿವೃದ್ಧಿಪಡಿಸುವ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಕೆಲಸ ಸಿಗುತ್ತದೆ. ಮ್ಯೂಸಿಯಂ ಸುತ್ತಮುತ್ತಲಿನ ಹೊಟೇಲ್‌ಗಳು, ಹೋಂ ಸ್ಟೇಗಳು, ಹ್ಯಾಂಡಿಕ್ರಾಫ್ಟ್ ಮಾರಾಟಗಾರರು ಮತ್ತು ಮಾರ್ಗದರ್ಶಿಗಳಿಗೆ ನಿರಂತರ ಆದಾಯ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕೇವಲ ಕಲ್ಲುಗಳಾಗಿ ತೋರಿಸುವ ಬದಲು, ಅಲ್ಲಿನ ಮಾರುಕಟ್ಟೆ ವ್ಯವಸ್ಥೆ, ಕೃಷ್ಣದೇವರಾಯನ ಆಡಳಿತದ ಕಥೆಗಳನ್ನು 'ಲೈಟ್ ಅಂಡ್ ಸೌಂಡ್ ಶೋ' ಮೂಲಕ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರೆ ಜಾಗತಿಕ ಮಟ್ಟದ ಪ್ರವಾಸಿಗರನ್ನು ಆಕರ್ಷಿಸಬಹುದು.
ಮೈಸೂರು ಸ್ಯಾಂಡಲ್‌ವುಡ್ ಅಥವಾ ರೇಷ್ಮೆ ಇತಿಹಾಸದ ಬಗ್ಗೆ ಪ್ರತ್ಯೇಕ 'ಅನುಭವ ಮ್ಯೂಸಿಯಂ' (Experience Centers) ಮಾಡಿದರೆ, ಪ್ರವಾಸಿಗರು ಬಂದು ವಸ್ತುಗಳನ್ನು ಖರೀದಿಸುವುದಲ್ಲದೇ, ಅದರ ತಯಾರಿಕೆಯ ಪ್ರಕ್ರಿಯೆಯನ್ನು ನೋಡಿ ಆನಂದಿಸುತ್ತಾರೆ. ಇತಿಹಾಸವು ಕೇವಲ ಗತಕಾಲದ ನೆನಪಲ್ಲ, ಅದು ಭವಿಷ್ಯದ ಆರ್ಥಿಕತೆಯ ಇಂಧನ. ಮ್ಯೂಸಿಯಂಗಳನ್ನು ನಾವು 'ಜ್ಞಾನದ ಕೇಂದ್ರ'ಗಳ ಜತೆಗೆ 'ಮನೋರಂಜನೆ ಮತ್ತು ಅನುಭವದ ಕೇಂದ್ರ'ಗಳನ್ನಾಗಿ ಪರಿವರ್ತಿಸಿದರೆ, ಅವು ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯವನ್ನು ತಂದುಕೊಡಬಲ್ಲವು. ಇತಿಹಾಸವನ್ನು ಕಥೆಯಾಗಿಸಿ ಮಾರಾಟ ಮಾಡುವ ಕಲೆ ನಮಗೆ ಒಲಿದರೆ, ನಮ್ಮ ಪರಂಪರೆಯೇ ನಮ್ಮ ಅತಿ ದೊಡ್ಡ ಬಂಡವಾಳವಾಗುತ್ತದೆ.
ಮ್ಯೂಸಿಯಂ ಅಂದರೆ ಬರೀ ಸತ್ತವರ ವಸ್ತುಗಳ ಪ್ರದರ್ಶನವಲ್ಲ, ಗೋರಿಗಳಲ್ಲ. ಇತಿಹಾಸದ ವಸ್ತುಗಳನ್ನು ಸಂಗ್ರಹಿಸಿಡುವ ಪೆಟ್ಟಿಗೆಯಲ್ಲ. ಅದು ನಾವು ಹೇಗಿದ್ದೆವು ಎಂದು ತೋರಿಸುವ ಕನ್ನಡಿ. ಕನ್ನಡಿ ಕೊಳಕಾಗಿದ್ದರೆ ಮುಖ ಅಂದವಾಗಿ ಕಾಣಲ್ಲ. ನಮ್ಮ ಮ್ಯೂಸಿಯಂಗಳನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುವುದು ಅಂದರೆ ನಮ್ಮ ಇತಿಹಾಸದ ಮುಖವನ್ನು ತೊಳೆದು ಲಕಲಕ ಹೊಳೆಯುವಂತೆ ಮಾಡುವುದು. ಮ್ಯೂಸಿಯಂಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಒಂದು ಬೃಹತ್ ಆರ್ಥಿಕ ಶಕ್ತಿಯಾಗಿ (Economic Powerhouse) ರೂಪಗೊಳ್ಳಬಲ್ಲದು. ಮ್ಯೂಸಿಯಂ ಬಗ್ಗೆ ನಮಗೆ ಈಗಿರುವ ಧೋರಣೆ ಮತ್ತು ಕಲ್ಪನೆ ಬದಲಾಗಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅದನ್ನು ಪ್ರಮುಖ ಅಂಗವೆಂದು ನೋಡಬೇಕಿದೆ. ತಡವಾದರೂ ಪರವಾಗಿಲ್ಲ, ಮ್ಯೂಸಿಯಂ ಪ್ರವಾಸೋದ್ಯಮ ಎಂಬ ಹೊಸ ಅಥವಾ ಪ್ರತ್ಯೇಕ ಪ್ರಕಾರದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.