Tuesday, February 17, 2026
Tuesday, February 17, 2026

ಹಬ್ಬಿದಾ ಮಲೆ ಮಧ್ಯದೊಳಗೆ….

ಹುಲಿಯನ್ನು ಕಂಡ ಗುಂಗಿನಿಂದ ನಾವ್ಯಾರೂ ಹೊರಬರಲೇ ಇಲ್ಲ. ಪುನಃ ಸಿಗಬಹುದೆಂದು ಎಲ್ಲಾ ಕಡೆ ಬಹಳ ಉತ್ಸುಕತೆಯಿಂದ ಹುಡುಕುತ್ತಾ ಸಾಗಿದೆವು. ಎದುರುಗಡೆ ಬಳುಕಾಡುತ್ತಾ ಸಾಗುವ ನದಿ. ಅದರ ದಂಡೆಯ ಮೇಲೆಲ್ಲಾ ಬೆಳ್ಳನೆಯ ಕಲ್ಲುಗಳು, ಸುತ್ತಲೂ ದಟ್ಟ ಕಾನನ, ಆಕಾಶದಿಂದ ಹಾರುತ್ತಾ ಕೆಂಬಣ್ಣ ಸೂಸುತ್ತಿರುವ ಸೂರ್ಯ. ಆ ಕ್ಷಣದ ದೃಶ್ಯ ರಮಣೀಯವಾಗಿತ್ತು. ನದಿಯಲ್ಲಿ ನೀರು ಕುಡಿಯುತ್ತಿರುವ ಹುಲಿ ಎಲ್ಲಾದರೂ ಕಾಣಸಿಗುವುದೇನೋ ಎಂದು ಆಶಿಸಿದರೂ ಕಾಣಸಿಗಲಿಲ್ಲ.

-ವೀಣಾ ಪುರುಷೋತ್ತಮ

ಧರಣಿ ಮಂಡಲ ಮಧ್ಯದೊಳಗೆ ಎಂದು ಪ್ರಾರಂಭವಾಗಿ, ಹಬ್ಬಿದಾಮಲೆ ಮಧ್ಯದೊಳಗೆ ಅರ್ಬುತಾನೆಂಬ ವ್ಯಾಘ್ರನು ಅಬ್ಬರಿಸಿ ಹಸಿಹಸಿದು ಬೆಟ್ಟದಾ ಕಿಬ್ಬಿಯೊಳು ತಾನಿದ್ದನು ಎಂದು ಮುಂದುವರಿಯುತ್ತಾ, ನಿನ್ನ ಹೊಟ್ಟೆಯ ಸೀಳಿ ಬಿಡುವೆನು ಎನುತಾ ಕೋಪದಿ ಖೂಳ ವ್ಯಾಘ್ರನು ಕೂಗಲು ಎಂದು ಭಯ ಕುತೂಹಲ ಮೂಡಿಸಿದ ಪುಣ್ಯಕೋಟಿಯ ಹಾಡು, ಕೊನೆಗೆ ನಿನ್ನ ಕೊಂದು ನಾನೇನು ಪಡೆವೆನು ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು ಎನ್ನುವಲ್ಲಿಗೆ ಮನದಲ್ಲಿದ್ದ ಆತಂಕ ಮರೆಯಾಗಿ ನಿಟ್ಟುಸಿರು ಬಿಡುವಲ್ಲಿಗೆ ಗೋವಿನ ಹಾಡು ಮುಗಿಯುತ್ತದೆ. ಅದು ಎಂದಿಗೂ ಮರೆಯದ ಹಾಡು. ಮರೆತರೂ ಮತ್ತೆ ನೆನಪಾಗಿ ಕಾಡುವ ಹಾಡು. ಇದೇ ನೆನಪಿನಲ್ಲಿ ಹಬ್ಬಿದಾಮಲೆ ಮಧ್ಯಕ್ಕೆ ‘ಹುಲಿಯ ಹೆಜ್ಜೆಯನರಸುತ್ತಾ’ ಹೊರಟೇ ಬಿಟ್ಟೆ ನಾನೊಂದು ದಿನ. ಅದುವೇ ಉತ್ತರಾಖಂಡದಲ್ಲಿರುವ ‘ಜಿಮ್ ಕಾರ್ಬೆಟ್’ ರಕ್ಷಿತಾರಣ್ಯ.

ಇದನ್ನೂ ಓದಿ: ಚಂದ್ರವಳ್ಳಿಯ ಕಲ್ಲುಕಲ್ಲಿನಲ್ಲು ಕನ್ನಡದ ಐತಿಹ್ಯವಿದೆ

ಜಿಮ್‌ ಕಾರ್ಬೆಟ್‌ನಲ್ಲಿ ನಾಲ್ಕು ದಿನಗಳು

ನೈನಿತಾಲ್ ಜಿಲ್ಲೆಯಲ್ಲಿರುವ ಈ ಹುಲಿ ಸಂರಕ್ಷಣಾ ತಾಣ ಅತ್ಯಂತ ಹಳೆಯದು ಎಂಬ ಹೆಗ್ಗಳಿಕೆ ಪಡೆದಿದೆ. 1936ರಲ್ಲಿ ಬಂಗಾಳಿ ಹುಲಿಗಳ ರಕ್ಷಣೆಗಾಗಿ ಪ್ರಾರಂಭವಾಯಿತು. ಬ್ರಿಟಿಷರ ಕಾಲದ ಪ್ರಸಿದ್ಧ ಬೇಟೆಗಾರ, ಪ್ರಕೃತಿ ಪ್ರೇಮಿ, ಬರಹಗಾರರಾದ ‘ಜಿಮ್ ಕಾರ್ಬೆಟ್’ ಅವರ ಹೆಸರನ್ನೇ ಈ ರಕ್ಷಿತಾರಣ್ಯಕ್ಕೆ ಇಡಲಾಗಿದೆ. ಮನುಷ್ಯರನ್ನು ಕೊಂದು ತಿನ್ನುತ್ತಿದ್ದ ಹಲವಾರು ಹುಲಿಗಳನ್ನು ಚಿರತೆಗಳನ್ನು ಕೊಂದು ನಿಷ್ಣಾತ ಬೇಟೆಗಾರ ಎನಿಸಿಕೊಂಡಿದ್ದರು. ಡೆಲ್ಲಿಯ ಹುಲಿಪ್ರೇಮಿ ‘ಮಿಹಿರ್’ ಆಯೋಜಿಸಿದ್ದ ‘ಹುಲಿ ಸಫಾರಿ’ಯಲ್ಲಿ ಪಾಲ್ಗೊಳ್ಳಲು ನನಗೆ ನನ್ನ ಕುಟುಂಬ ಸ್ನೇಹಿತರಿಂದ ಅವಕಾಶ ದೊರೆಯಿತು. ‘ಜಿಮ್ ಕಾರ್ಬೆಟ್’ ದ್ವಾರದಿಂದಲೇ 4 ಜನ ಕೂರಲು ಅವಕಾಶವಿರುವ ಜಿಪ್ಸಿಯಲ್ಲಿ ನಮ್ಮ ಮುಂದಿನ ಪಯಣ. ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ‘ಧಿಕಾಲಾ’ಕ್ಕೆ ಪ್ರವೇಶಿಸಿದೆವು. ಉಳಿದುಕೊಳ್ಳಲು ಚೆನ್ನಾಗಿರುವ ರೂಮ್, ಸ್ವಸ್ಥ, ಸ್ವಚ್ಛ ಊಟ, ತಿಂಡಿ ಎಲ್ಲವೂ ಬಹಳ ಚೆನ್ನಾಗಿತ್ತು. 4 ದಿನ ಅಲ್ಲ 14 ದಿನ ಇರಲೂ ಯಾವುದೇ ಕೊರತೆ ಇರದಂತೆ ಉತ್ತರಾಖಂಡ ಸರಕಾರ ವ್ಯವಸ್ಥೆ ಮಾಡಿದೆ.

Untitled design (99)

ಹುಲಿಯೂರಿನ ಸರಹದ್ದು

‘2.30ಕ್ಕೆ ಎಲ್ಲರೂ ಜಿಪ್ಸಿ ಬಳಿ ಬನ್ನಿ, ಹುಲಿ ಸಫಾರಿಗೆ’ ಎಂದು ಟೀಮ್ ಲೀಡರ್ ಮಿಹಿರ್ ಹೇಳಿದಂತೆ ಎಲ್ಲರೂ ಸಮಯಕ್ಕೆ ಸರಿಯಾಗಿ ತಯಾರಾಗಿ ಬಂದಿದ್ದೆವು. ಒಂದು ಜಿಪ್ಸಿಯಲ್ಲಿ 4 ಜನರಂತೆ ಕ್ಯಾಂಪಿನಲ್ಲಿದ್ದ ಎಲ್ಲರೂ 20-25 ಜಿಪ್ಸಿಗಳಲ್ಲಿ ಕುಳಿತು ಎಲ್ಲವೂ ಜತೆಯಲ್ಲಿ ರೊಯ್ಯಂನೆ ಧೂಳೆಬ್ಬಿಸುತ್ತಾ ಹೊರಡುವುದು ನೋಡಲು ಬಲುಸೊಗಸು. ಪ್ರತೀ ಜಿಪ್ಸಿಯಲ್ಲಿ ಡ್ರೈವರ್ ಹಾಗೂ ಗೈಡ್‌ಗಳಿರುತ್ತಾರೆ. ಗೈಡ್ ಹೇಳಿದಂತೆ ಡ್ರೈವರ್ ಸಾಗಬೇಕು. ಕಾಡಿನೊಳಗೆ ಹಲವಾರು ಕವಲುದಾರಿಗಳಿವೆ. ಒಬ್ಬೊಬ್ಬರು ಒಂದೊಂದು ಮಾರ್ಗದಲ್ಲಿ ಸಂಚರಿಸುತ್ತಾ ‘ಹುಲಿ’ಯ ಹುಡುಕಾಟದಲ್ಲಿ ತೊಡಗುತ್ತಾರೆ. ‘ಹುಲಿ ಸಫಾರಿ’ ನನಗೆ ಹೊಸತಾದುದರಿಂದ, ಏನೋಪ್ಪ, ಮೈಸೂರು ಮೃಗಾಲಯದಲ್ಲಿ ಹಲವು ಬಾರಿ ಹುಲಿ ಕಂಡಾಗಿದೆ, ಇಲ್ಲಿಯವರೆಗೆ ಬರಬೇಕಿತ್ತಾ ಎನ್ನುವ ಉದಾಸಿನಭಾವ ಮನೆ ಮಾಡಿತ್ತು. ಮುಂದೆ ಸಾಗುವಾಗ ನೂರಾರು ಜಿಂಕೆಗಳು ಹುಲ್ಲು ಮೇಯುತ್ತಾ ಇರುವುದನ್ನು ನೋಡಲು ಅಪ್ಯಾಯಮಾನವಾಗಿತ್ತು. ಹಾಗೆಯೇ ದೂರದಲ್ಲಿ ‘ಒಂಟಿಸಲಗ’ವೊಂದು ಮಣ್ಣಿನ ಅಭಿಷೇಕ ಮಾಡುತ್ತಾ ನಿಂತಿತ್ತು. ಅಷ್ಟರೊಳಗೆ ಗೈಡ್‌ ಶಬ್ದ ಮಾಡಬೇಡಿ, ಮಾತನಾಡಬೇಡಿ ಎಂದು ಮೆಲುದನಿಯಲ್ಲಿ ಇಲ್ಲೆಲ್ಲೋ ಹುಲಿ ಅಡಗಿದೆ ಎಂದ. ಹ್ಞಾಂ! ಎಂದು ಒಮ್ಮೆಲೇ ನವಚೈತನ್ಯ ಬಂದಂತಾಯಿತು. ಡ್ರೈವರ್ ವೇಗವಾಗಿ ಜಿಪ್ಸಿ ಚಲಾಯಿಸುತ್ತಾ, ಗಟ್ಟಿ ಹಿಡಿದುಕೊಳ್ಳಿ ಎಂದ. ಎಲ್ಲರೂ ಕ್ಯಾಮೆರಾ, ಮೊಬೈಲ್ ರೆಡಿ ಇಟ್ಟುಕೊಂಡು ಹುಲಿಯ ಬೇಟೆಗೆ ಸಜ್ಜಾದ ಬೇಟೆಗಾರರಂತೆ ಮೈಯಲ್ಲಾ ಕಣ್ಣಾಗಿ ಕುಳಿತಿದ್ದೆವು. ನಡುರಸ್ತೆಯಲ್ಲಿ ಹುಲಿಯೊಂದು ಆಕಳಿಸುತ್ತಾ ಅಂಗಾತ ಮಲಗಿತ್ತು. ಆಗಲೇ 10-12 ಜಿಪ್ಸಿಗಳು ಆ ಕಡೆ ಬರದಾಗಿತ್ತು. ಸ್ವಲ್ಪವೂ ಸದ್ದು ಮಾಡಬಾರದೆಂದು ಮೊದಲೇ ಹೇಳಿದ್ದರಿಂದ ಅಷ್ಟು ಜನರಿದ್ದರೂ ಉಸಿರಿನ ಸದ್ದು ಬಿಟ್ಟರೆ ಬೇರೇನೂ ಇಲ್ಲ. ಎಲ್ಲರ ಕಣ್ಣೂ ಮಲಗಿದ್ದ ಹುಲಿಯ ಮೇಲೆ ಈಗ ಚಕಚಕನೆ ಫೊಟೋ ಕ್ಲಿಕ್ಕಿಸುವ ಸದ್ದು ಬಿಟ್ಟರೆ ಬೇರೆ ಸದ್ದಿಲ್ಲ. 10 ನಿಮಿಷ ಹಾಗೇ ಮಲಗಿದ್ದ ಹುಲಿ ನಿಧಾನಕ್ಕೆ ಎದ್ದು ಮರದ ಬಳಿ ಹೋಗಿ ಕುತ್ತಿಗೆ ತುರಿಸಲು ಪ್ರಾರಂಭಿಸಿತು. ಅಲ್ಲಿಂದ ಮೆಲ್ಲನೇ ಕಾಡಿನೊಳಗೆ ಮಾಯವಾಯಿತು.

ಹುಲಿಯ ದರ್ಶನ ಭಾಗ್ಯ

ಮೊದಲನೇ ದಿನದ ಸಫಾರಿಯಲ್ಲೇ ನಿಮಗೆ ಹುಲಿಯ ದರ್ಶನವಾಗಿದೆ. ನೀವು ಅದೃಷ್ಟವಂತರು ಕೆಲವರಿಗೆಲ್ಲ ಒಂದುವಾರ ಕಾದು ಕುಳಿತಾಗಲೂ ಒಂದೂ ಹುಲಿಯನ್ನು ನೋಡದೇ ಹೋದವರಿದ್ದಾರೆ ಎಂದು ಗೈಡ್ ಹೇಳಿದಾಗ ʼಓಹೋ, ಹೀಗೂ ಉಂಟೇ?ʼ ಎನಿಸಿತು. ಈಗ ಮೃಗಾಲಯದ ಹುಲಿಗೂ, ಕಾಡಿನ ಮಧ್ಯದಲ್ಲಿ ಸ್ವತಂತ್ರವಾಗಿ ತಿರುಗಾಡುವ ಹುಲಿಗೂ ಅಜಗಜಾಂತರವಿದೆ ಎನ್ನುವ ಅರಿವು ಮೂಡಲು ಪ್ರಾರಂಭವಾಯಿತು. ಅಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ಹುಲಿಗಳನ್ನು ನೋಡುವ ಉತ್ಸಾಹ, ಕಾತರ ಮನದಲ್ಲಿ ಮನೆ ಮಾಡಿತ್ತು. ಇನ್ನೂ ಬೇರೊಂದು ಮಾರ್ಗದಲ್ಲಿ ಸಫಾರಿ ಸಾಗಿತು. ಹುಲಿಯನ್ನು ಕಂಡ ಗುಂಗಿನಿಂದ ನಾವ್ಯಾರೂ ಹೊರಬರಲೇ ಇಲ್ಲ. ಪುನಃ ಸಿಗಬಹುದೆಂದು ಎಲ್ಲಾ ಕಡೆ ಬಹಳ ಉತ್ಸುಕತೆಯಿಂದ ಹುಡುಕುತ್ತಾ ಸಾಗಿದೆವು ಎದುರುಗಡೆ ಬಳುಕಾಡುತ್ತಾ ಸಾಗುವ ನದಿ. ಅದರ ದಂಡೆಯ ಮೇಲೆಲ್ಲಾ ಬೆಳ್ಳನೆಯ ಕಲ್ಲುಗಳು, ಸುತ್ತಲೂ ದಟ್ಟ ಕಾನನ, ಆಕಾಶದಿಂದ ಹಾರುತ್ತಾ ಕೆಂಬಣ್ಣ ಸೂಸುತ್ತಿರುವ ಸೂರ್ಯ. ಆ ಕ್ಷಣದ ದೃಶ್ಯ ರಮಣೀಯವಾಗಿತ್ತು. ನದಿಯಲ್ಲಿ ನೀರು ಕುಡಿಯುತ್ತಿರುವ ಹುಲಿ ಎಲ್ಲಾದರೂ ಕಾಣಸಿಗುವುದೇನೋ ಎಂದು ಆಶಿಸಿದರೂ ಕಾಣಸಿಗಲಿಲ್ಲ. ಬೇಗನೆ ರೂಮಿಗೆ ಹೋಗಿ ನಿದ್ರೆಗೆ ಜಾರಿದೆವು.

ಬೆಳಗ್ಗೆ ಎಲ್ಲರಿಗಿಂತ ಮುಂಚೆ ಹೊರಟು ಜಿಪ್ಸಿಯ ಬಳಿ ಬಂದು ನಿಂತಿದ್ದೆ ನಾನು. ಹುಲಿ ನೋಡುವ ಕಾತರ, ಚಡಪಡಿಕೆ ನನ್ನನ್ನು ಬಿಡದೆ ಕಾಡುತ್ತಿತ್ತು. ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು ಉದಯಸೂರ್ಯನಿಗೆ ಅಭಿಮುಖವಾಗಿ ನಮ್ಮ ಗಾಡಿಗಳು ಧೂಳೆಬ್ಬಿಸುತ್ತಾ ಹೊರಟಿತು. ದಿನಕ್ಕೆ 8 ಗಂಟೆಗಳಷ್ಟು ಸಮಯ ‘ಸಫಾರಿ’ಯಲ್ಲಿ ಕಳೆದರೆ, ಉಳಿದ ಸಮಯ, ಹುಲಿ ನೋಡಲು ಸಿಕ್ಕಿತೇ, ಎಷ್ಟು ಹೊತ್ತು ಕಾಣಸಿಕ್ಕಿತು? ಫೊಟೋ ಚೆನ್ನಾಗಿ ಬಂದಿದೆ, ಇಂಥದೇ ಮಾತುಗಳಲ್ಲಿ ಕಳೆಯುತ್ತಿತ್ತು.

Untitled design (98)

ವೈವಿಧ್ಯ ಪ್ರಾಣಿ ಜಗತ್ತು

ಮೊದಲಿಗೆ, ಆನೆಗಳ ಹಿಂಡಿನ ದರ್ಶನವಾಯಿತು. 12 ಆನೆಗಳು, ಮರಿಗಳು, ಜತೆಯಲ್ಲೇ ಹುಲ್ಲು ತಿನ್ನುವ ದೃಶ್ಯ ಎಲ್ಲರ ಕ್ಯಾಮೆರಾದಲ್ಲೂ ಸೆರೆಯಾಯಿತು. ಮುಂದುವರಿಯುತ್ತಾ ನೂರಾರು ಜಿಂಕೆಗಳು ತಮ್ಮ ಪಾಡಿಗೆ ಓಡಾಡುತ್ತಾ, ಛಂಗನೇ ಜಿಗಿಯುತ್ತಾ ಅಡ್ಡಾಡುವುದನ್ನು ನೋಡಲು ಮನಸಿಗೆ ಹಿತವಾಗಿತ್ತು. ಇನ್ನು ಮುಂದೆ ಹೋದಂತೆ ಸಾರಂಗಗಳು, ಕಾಡೆಮ್ಮೆಗಳು, ಅನೇಕಾನೇಕ ಪಕ್ಷಿಗಳು, ಆಮೆಗಳು, ಮೊಸಳೆಗಳು ಹೀಗೇ ಎಲ್ಲಾ ಜೀವ ಪ್ರಬೇಧಗಳು ಸ್ವಚ್ಛಂದವಾಗಿ ವಿಹರಿಸುವುದು ಕಾಣಸಿಕ್ಕಿತ್ತು. ಆದರೂ ಹುಲಿ ಕಾಣಲು ಕಣ್ಣುಗಳು ಕಾತರಿಸುತ್ತಿತ್ತು. ಕಾತರ ವ್ಯರ್ಥವಾಗಲಿಲ್ಲ. ದೊಡ್ಡ ಹುಲಿಯೊಂದು ಹೊಳೆ ದಾಟಿ, ನಮ್ಮೆಡೆಗೇ ಬರುತ್ತಿತ್ತು. ಎಲ್ಲರಿಗೂ ಖುಷಿಯೇ ಖುಷಿ. ಆ ಹುಲಿ ಮುಂದೆ ಬರುತ್ತಿದ್ದಂತೆಯೇ ಒಬ್ಬೊಬ್ಬರ ಎದೆಬಡಿತ ಇನ್ನೊಬ್ಬರಿಗೆ ಕೇಳಲು ಪ್ರಾರಂಭವಾಯಿತು. ಕಾತರ, ಅಂಜಿಕೆ, ಎಲ್ಲವೂ ಮುಖಭಾವದಲ್ಲಿ ಎದ್ದುಕಾಣತೊಡಗಿತು. ಹುಲಿ ರಾಜ ಗಾಂಭೀರ್ಯದಿಂದ ನಿಂತಿದ್ದ ನಮ್ಮ ಜಿಪ್ಸಿಗಳನ್ನೊಮ್ಮೆ ದಿಟ್ಟಿಸಿ ನೋಡಿತು. ಅದರ ಪಾಡಿಗೆ ನಮ್ಮ ಗಾಡಿಗಳ ಮಧ್ಯದಲ್ಲಿ ಜಾಗ ಮಾಡುತ್ತಾ ಮುಂದೆ ಹೋಯಿತು. ಈಗ ನನಗೂ-ಹುಲಿಗೂ ಕೇವಲ 3 ಅಡಿಗಳ ಅಂತರ. ನನ್ನ ಸಫಾರಿಯ ಸಾರ್ಥಕ ಕ್ಷಣಗಳು ಅದಾಗಿತ್ತು.

520 ಕಿಮೀ ವಿಸ್ತೀರ್ಣದಲ್ಲಿರುವ ‘ಜಿಮ್ ಕಾರ್ಬೆಟ್’ ಗುಡ್ಡ, ಬಯಲು, ಹುಲ್ಲುಗಾವಲು, ನದಿ, ತೊರೆ, ಸರೋವರ, ಎಲ್ಲವನ್ನೂ ಒಳಗೊಂಡು ಬಹಳ ಸುಂದರ ತಾಣವಾಗಿದೆ. 500ಕ್ಕಿಂತಲೂ ಅಧಿಕ ಸಸ್ಯ ಪ್ರಬೇಧಗಳು 250ಕ್ಕಿಂತಲೂ ಹೆಚ್ಚಿನ ಹುಲಿಗಳು, 6 ಸಾವಿರಕ್ಕಿಂತಲೂ ಹೆಚ್ಚಿನ ಜಿಂಕೆ ಸಾರಂಗಗಳನ್ನು ತನ್ನೊಡಲಲ್ಲಿ ಸಾಕುತ್ತಿರುವ ಈ ರಕ್ಷಿತಾರಣ್ಯಕ್ಕೊಮ್ಮೆ ಹೋಗಿ ಬಂದರೆ ಪ್ರಕೃತಿಯ ಮುಂದೆ ನಾವೆಷ್ಟು ಕುಬ್ಜರು ಎಂದು ಮನವರಿಕೆಯಾಗುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ