ಚಂದ್ರವಳ್ಳಿಯ ಕಲ್ಲುಕಲ್ಲಿನಲ್ಲು ಕನ್ನಡದ ಐತಿಹ್ಯವಿದೆ
ಸುಮಾರು 70 ಅಡಿ ಎತ್ತರದ ಬಂಡೆಯ ಅಡಿಯಲ್ಲಿ ಇರುವ ಈ ದೇವಾಲಯದಲ್ಲಿ ಐದು ಲಿಂಗಗಳಿವೆ. ಹಾಗಾಗಿ ಇದನ್ನು ಪಂಚಲಿಂಗೇಶ್ವರ ಎಂದೇ ಕರೆಯುತ್ತಾರೆ. ಇವು ಪಾಂಡವರು ಸ್ಥಾಪಿಸಿದ ಲಿಂಗಗಳು ಎಂದು ನಂಬಲಾಗಿದೆ. ಭಿಮೇಶ್ವರ, ಧರ್ಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ ಮತ್ತು ಸಹದೇವೇಶ್ವರ ಲಿಂಗಗಳು ಇಲ್ಲಿವೆ. ಇಲ್ಲಿ ಸಿಕ್ಕಿರುವ ಶಾಸನದಲ್ಲಿ ತ್ರಿಕಾಲ ಪೂಜೆಗೆ, ಅಂಗರಂಗ ಭೋಗ, ಸಂಕ್ರಮಣ, ದೀಪೋತ್ಸವಕ್ಕೆ ದತ್ತಿ ನೀಡಿದ ಉಲ್ಲೇಖಗಳಿವೆ. 10ನೆಯ ಶತಮಾನದಲ್ಲಿ ಚಿತ್ರದುರ್ಗದ ಸಾಮಂತನಾಗಿದ್ದ ಮಂಗಯ್ಯ ಅವರು ಭೂಮಿಯನ್ನು ದಾನವಾಗಿ ನೀಡಿದ ಉಲ್ಲೇಖವಿದೆ.
ರಾಜ್ಯದ ಹಲವು ಸ್ಥಳಗಳು ಇತಿಹಾಸದ ಕೊಂಡಿಯಾಗಿ ಉಳಿದಿಕೊಂಡಿವೆ. ಹಲವು ಗುಹಾಂತರ ದೇವಾಲಯಗಳು ಮಾನವರ ಪುರಾತನ ನೆಲೆಗೆ ಕುರುಹಾಗಿವೆ. ಅದರಲ್ಲು ಮಯೂರ ಶರ್ಮ ನಾಡಿನ ಮೊದಲ ಸಾಮ್ರಾಜ್ಯ ಕಟ್ಟಲು ಆಸರೆಯಾಗಿದ್ದ ಸ್ಥಳ ಮತ್ತು ಅವನು ಕಟ್ಟಿದ ಕೆರೆ ಇರುವ ಪ್ರಮುಖ ಸ್ಥಳಗಳಲ್ಲಿ ಚಿತ್ರದುರ್ಗಕ್ಕೆ ಹೊಂದಿಕೊಂಡಂತೆ ಇರುವ ಚಂದ್ರವಳ್ಳಿ ಪ್ರಮುಖವಾಗಿದೆ.
ಇತಿಹಾಸ ಪುಟಗಳಲ್ಲಿ ಚಂದ್ರವಳ್ಳಿ ಶಾತವಾಹನರ ಕಾಲಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಇಲ್ಲಿನ ಕೆರೆಯ ಸಮೀಪದಲ್ಲಿ ಸಿಕ್ಕ ನಾಣ್ಯಗಳು ಶಾತವಾಹನರ ಕಾಲದ್ದು. ರಾಜ್ಯದ ಮೊದಲ ವಂಶವೆಂದೇ ಖ್ಯಾತಿ ಪಡೆದ ಕದಂಬರ ಮೊದಲ ಅರಸ ಮಯೂರ ಶರ್ಮ ಇಲ್ಲಿ ಕೆರೆ ಕಟ್ಟಿಸಿದ್ದ ಕುರಿತು ಉಲ್ಲೇಖವಿದೆ. ಹುಲಿಗೊಂದಿ – ಸೂಳ್ಗಲ ತೀರ್ಥ ಎಂದು ಈ ಸ್ಥಳವನ್ನು ಕರೆಯಲಾಗಿದೆ. ಇಲ್ಲಿ ನಡೆದ ಉತ್ಖನನಗಳು ನೂತನ ಶಿಲಾಯುಗದಿಂದ ಶಾತವಾಹನರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಮತ್ತು ಪಾಳೇಗಾರರ ಕಾಲದವರೆಗೂ ಇಲ್ಲಿ ಜನವಸತಿ ಇತ್ತು ಎಂಬುದನ್ನು ಸ್ಪಷ್ಟಪಡಿಸಿವೆ. ಮೈಸೂರ ಅರಸರ ಕಾಲದ ನಾಣ್ಯಗಳೂ ಇಲ್ಲಿ ಸಿಕ್ಕಿವೆ. 1286ರ ಶಾಸನದಲ್ಲಿ ಹೊಯ್ಸಳರ ಅರಸ ಮುಮ್ಮುಡಿ ನರಸಿಂಹನ ಕಾಲದಲ್ಲಿ ಮಹಾಪ್ರಧಾನನಾದ ಪೆರುಮಾಳ್ ದಣ್ಣನಾಯಕ ಇಲ್ಲಿನ ಪಂಚಲಿಂಗಗಳ ದೇವಾಲಯದ ಪೂಜ ಕಾರ್ಯಗಳಿಗೆ ಏಸಗೂರು ಭೂಮಿಯನ್ನು ದತ್ತಿ ನೀಡಿದ ಉಲ್ಲೇಖವಿದೆ. ಸುದೀರ್ಘವಾದ ಶಾಸನದಲ್ಲಿ ಸಿಂಧುರವಳ್ಳಿ ಎಂಬ ಉಲ್ಲೇಖವಿದ್ದು, ಪಂಚಲಿಂಗಗಳ ಹೆಸರು ಸನಿಹದಲ್ಲಿರುವ ಸುಮಾರು 18 ದೇವಾಲಯಗಳ ಉಲ್ಲೇಖವಿದೆ.
ಇದನ್ನೂ ಓದಿ: ಮೋಡಿಗಾರ ಸೃಷ್ಟಿಸಿದ ಕೋಡಿ ಬೀಚ್…
ಚಂದ್ರವಳ್ಳಿ ಕೆರೆ
ಸಿದ್ದೇಶ್ವರ ದೇವಾಲಯದ ಮುಂದೆ ಗುಹಾಂತರ ಸಂಕೀರ್ಣದ ಹಾದಿಯಲ್ಲಿ ದೊಡ್ಡದಾದ ಕೆರೆಯಿದ್ದು, ಇದನ್ನು ಕದಂಬರ ಮಯೂರ ಶರ್ಮ ನಿರ್ಮಿಸಿದ ಉಲ್ಲೇಖವಿದೆ. ಸುಂದರವಾಗಿರುವ ಈ ಕೆರೆ ಪ್ರಕೃತಿ ಪ್ರಿಯರಿಗೆ ಮತ್ತು ಇತಿಹಾಸಕಾರರಿಗೂ ಮುಖ್ಯವಾಗಿದೆ. ಪಕ್ಷೀ ವೀಕ್ಷಣೆಗೆ ಇದು ಉತ್ತಮ ಸ್ಥಳವಾಗಿದೆ. ಕದಂಬರ ಆಳ್ವಿಕೆಯ ಸಿಕ್ಕ ಅತೀ ದೊಡ್ಡ ಕುರುಹು ಇದಾಗಿದ್ದು, ನೋಡಲೇಬೇಕಾದ ಸ್ಥಳ.
ಪಂಚಲಿಂಗೇಶ್ವರ ದೇವಾಲಯ
ಸುಮಾರು 70 ಅಡಿ ಎತ್ತರದ ಬಂಡೆಯ ಅಡಿಯಲ್ಲಿ ಇರುವ ಈ ದೇವಾಲಯದಲ್ಲಿ ಐದು ಲಿಂಗಗಳಿವೆ. ಹಾಗಾಗಿ ಇದನ್ನು ಪಂಚಲಿಂಗೇಶ್ವರ ಎಂದೇ ಕರೆಯುತ್ತಾರೆ. ಇವು ಪಾಂಡವರು ಸ್ಥಾಪಿಸಿದ ಲಿಂಗಗಳು ಎಂದು ನಂಬಲಾಗಿದೆ. ಭಿಮೇಶ್ವರ, ಧರ್ಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ ಮತ್ತು ಸಹದೇವೇಶ್ವರ ಲಿಂಗಗಳು ಇಲ್ಲಿವೆ. ಇಲ್ಲಿ ಸಿಕ್ಕಿರುವ ಶಾಸನದಲ್ಲಿ ತ್ರಿಕಾಲ ಪೂಜೆಗೆ, ಅಂಗರಂಗ ಭೋಗ, ಸಂಕ್ರಮಣ, ದೀಪೋತ್ಸವಕ್ಕೆ ದತ್ತಿ ನೀಡಿದ ಉಲ್ಲೇಖಗಳಿವೆ. 10ನೆಯ ಶತಮಾನದಲ್ಲಿ ಚಿತ್ರದುರ್ಗದ ಸಾಮಂತನಾಗಿದ್ದ ಮಂಗಯ್ಯ ಅವರು ಭೂಮಿಯನ್ನು ದಾನವಾಗಿ ನೀಡಿದ ಉಲ್ಲೇಖವಿದೆ.

ಮುಖ್ಯಲಿಂಗವಾದ ಧರ್ಮೇಶ್ವರದಲ್ಲಿ ಸೋಮಸೂತ್ರವಿದ್ದು, ಮೂರು ಅಡಿ ಎತ್ತರದ ಪಾಣಿಪೀಠದ ಮೇಲೆ ಎರಡು ಅಡಿಯ ಶಿವಲಿಂಗವಿದೆ. ಪಕ್ಕದಲ್ಲಿ ಭಿಮೇಶ್ವರ ಶಿವಲಿಂಗವಿದ್ದು, ಬಲಬದಿಯಲ್ಲಿ ಅರ್ಜುನೇಶ್ವರ ಶಿವಲಿಂಗಗಳಿವೆ. ಇವುಗಳ ಪಕ್ಕದಲ್ಲಿ ನಕುಲೇಶ್ವರ ಮತ್ತು ಸಹದೇವೇಶ್ವರ ಲಿಂಗಗಳು ಕಪ್ಪು ಶಿಲೆಯಲ್ಲಿವೆ. ಜತೆಗೆ ಅಲ್ಲಿನ ಪರಿಸರದಲ್ಲಿ ಸಿಕ್ಕ ನಾಲ್ಕು ಶಿವಲಿಂಗಗಳನ್ನು ಅಲ್ಲಿ ಇರಿಸಲಾಗಿದೆ.
ಅಂಕಲಿ ಮಠ
ಅಂಕಲಿಮಠವೂ ಗುಹಾಂತರ ದೇವಾಲಯ ಸಂಕೀರ್ಣ. ಅಂಕಲಿಪಿಮಠ ನಂತರ ಅಂಕಲಿಮಠವಾಗಿದೆ. ಕಾಳಮುಖ ಮುನಿಗಳು ಇಲ್ಲಿ ವಾಸವಾಗಿದ್ದು, ಇಲ್ಲಿನ ವಸತಿ ಶಾಲೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಮೇಲಿನ ಭಾಗವನ್ನು ಅಂಕಲಿಮಠ ಎಂದು ಕರೆಯಲಾಗುತ್ತದೆ. ಮುನಿಗಳು 1929ರಲ್ಲಿ ಅಂಕಲಗಿಯಿಂದ ತಮ್ಮ ಶಿಷ್ಯರೊಡನೆ ಇಲ್ಲಿಗೆ ಬಂದು ನೆಲೆಸಿದ ಕಾರಣ ಅಂಕಲಿಮಠ ಎಂಬ ಹೆಸರು ಬಂದಿತು ಎನ್ನಲಾಗಿದೆ.
ಬಿಚ್ಚುಗತ್ತಿ ಭರಮಣ್ಣನಾಯಕನ ಕಾಲದಲ್ಲಿ ಅಧಿಕಾರಿಯಾಗಿದ್ದ ಬಾಗೂರು ಪರದೇಸಪ್ಪ ಇಲ್ಲಿನ ಗವಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದ. ಹಾಗಾಗಿ ಇದನ್ನು ಪರದೇಶಪ್ಪನ ಗವಿ ಎಂದೇ ಕರೆಯಲಾಗುತ್ತಿದೆ. ನೆಲಗವಿಯಲ್ಲಿ ಸಂಕೀರ್ಣವಿರುವ ಕಾರಣ ನೆಲಗವಲಿಮಠ ಎಂದೂ ಕರೆಯುತ್ತಾರೆ. ಸಂಪೂರ್ಣ ಕತ್ತಲಿನ ಒಳಭಾಗದಲ್ಲಿ ಬಂಡೆಯ ಕಲ್ಲನ್ನು ಬಳಸಿಕೊಂಡು ಕಂಬಗಳು, ಕೋಣೆಗಳು, ತೊಟ್ಟಿ, ಸ್ನಾನದ ಕೋಣೆ, ಧ್ಯಾನ ಮಂದಿರ, ಪೂಜ ಮಂದಿರ, ಸಭಾಂಗಣ ಮತ್ತು ಗುಮ್ಮಟ, ಗಾಳಿ ಗೂಡುಗಳು, ದೀಪದ ಗೂಡುಗಳು, ವಿವಿಧ ಆಸನಗಳು, ವೀಕ್ಷಣ ಸ್ಥಳಗಳು, ವೇದಿಕಗಳು, ಗಾರೆಯ ತೋರಣಗಳು, ಕಲ್ಲಿನ ಆನೆ, ತಟ್ಟೆ ಬಟ್ಟಲು ಮತ್ತು ಹಲವು ವಿನ್ಯಾಸದಿಂದ ಕೂಡಿದ ವರ್ಣಚಿತ್ರಗಳಿವೆ. ಹಿಂಬದಿಯಲ್ಲಿ ಗಾರೆ ನಿರ್ಮಾಣದ ಸುಂದರ ಕಲಾತ್ಮಕ ಮಂಟಪವಿದೆ.
ಹುಲಿಗೊಂದಿ ಸಿದ್ದೇಶ್ವರ ದೇವಾಲಯ
ಸುಮಾರು 10ನೆಯ ಶತಮಾನದಲ್ಲಿ ಈ ದೇವಾಲಯ ನಿರ್ಮಾಣವಾಯಿತು. ದೇವಾಲಯ ಎರಡು ಗರ್ಭಗುಡಿಗಳು, ನವರಂಗ ಮತ್ತು ಮುಖಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಸುಮಾರು ಐದು ಅಡಿ ಎತ್ತರದ ಸ್ಥಾನಿಕ ತ್ರಿಭಂಗಿಯಲ್ಲಿರುವ ಭೈರವನ ಶಿಲ್ಪವಿದೆ. ಸ್ಥಳೀಯವಾಗಿ ಸಿದ್ದೇಶ್ವರ ಎಂದು ಕರೆಯಲಾಗುತ್ತದೆ. ತ್ರಿಶೂಲ, ಡಮರು, ಖಡ್ಗ ಮತ್ತು ಪಾನಪಾತ್ರೆಯನ್ನು ಹೊಂದಿದೆ. ಎಡಗೈಯಲ್ಲಿ ರುಂಡವಿದ್ದು, ನಾಯಿ ರಕ್ತವನ್ನು ನೆಕ್ಕುವಂತೆ ಇದೆ. ರುಂಡಮಾಲಾಧಾರಿಯಾದ ಶಿಲ್ಪ ಕಾಲ್ಗಡಗ, ಕೀರ್ತಿಮುಖದ ಪ್ರಭಾವಳಿ ಹೊಂದಿದ್ದು, ಇದರ ಕೆಳಗೆ ವೀರಭದ್ರನ ಚಿಕ್ಕ ಶಿಲ್ಪವಿದೆ. ಮತ್ತೊಂದು ಗರ್ಭಗುಡಿಯಲ್ಲಿ ಸುಖಾಸೀನ ಭಂಗಿಯಲ್ಲಿರುವ ನಗ್ನ ಭೈರವ ಶಿಲ್ಪವಿದೆ. ಕೈಗಳಲ್ಲಿ ತ್ರಿಶೂಲ, ಡಮರು, ಖಡ್ಗ ಮತ್ತು ಕಪಾಲ ಹಿಡಿದಿರುವಂತೆ ಇದೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ಉಬ್ಬು ಶಿಲ್ಪಗಳು ಇವೆ. ವಿತಾನದಲ್ಲಿ ಪದ್ಮದ ಕೆತ್ತನೆ ಇದೆ. ಇವುಗಳಲ್ಲಿ ಟಗರು ಕಾಳಗ, ಭೈರವ, ಭೈರವಿ, ಮಿಥುನ ಶಿಲ್ಪಗಳು ಇವೆ. ನವರಂಗದಲ್ಲಿ ಗಣಪತಿಯ ಶಿಲ್ಪವಿದೆ. ಮುಖಮಂಟಪದಲ್ಲಿ ಎರಡು ಕಂಬಗಳಿದ್ದು, ಕಕ್ಷಾಸನವಿದೆ. ದೇವಾಲಯದ ಮುಂಭಾಗದಲ್ಲಿ ಭೈರವನ ಪಾದವಿದ್ದು ನಾಗದಿಂದ ಸುತ್ತವರೆದಿದೆ.

ಧವಳಪ್ಪನ ಬೆಟ್ಟ
ಕೆರೆಯ ಹಿಂಬದಿಯಲ್ಲಿ ಈ ಏಕ ಶಿಲಾ ಬೆಟ್ಟವಿದೆ. ಸುಮುದ್ರ ಮಟ್ಟದಿಂದ ಸುಮಾರು 3285 ಅಡಿ ಎತ್ತರವಿದೆ. ಹಾಗಾಗಿ ಚಾರಣ ಪ್ರಿಯರಿಗೆ ಇಷ್ಟವಾಗುತ್ತದೆ. ಈ ಬೆಟ್ಟದ ತುದಿಯಲ್ಲಿ ಕಟ್ತಿಗೆ ಸಂಗಣ್ಣನ ಶಿಲ್ಪವಿದೆ. ಸಮೀಪದಲ್ಲಿ ಮತ್ತೊಂದು ಬೆಟ್ಟವಿದ್ದು, ಇಲ್ಲಿ ಹದ್ದುಗಳು ಹೆಚ್ಚಾಗಿ ಇರುವ ಕಾರಣ ಹದ್ದಿನ ಬೆಟ್ಟ ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ಗುಹೆಯ ಬಂಡೆಯಲ್ಲಿ ಕೆತ್ತಿದ ಶಿಲಾಯುಗದ ಮಾನವರ ಚಿತ್ರವಿದೆ. ಇಲ್ಲಿನ ಗುಹೆಯಲ್ಲಿ ಧವಳೇಶ್ವರ ಶಿವಲಿಂಗವಿದ್ದು, ಬಂಡೆಗಳಲ್ಲಿ ಅನೇಕ ಶಿವಲಿಂಗಗಳಿವೆ. ತಾಳಗುಂದದಲ್ಲಿ ಸಿಕ್ಕ ಶಾಸನದಲ್ಲಿ ಉಲ್ಲೇಖಗೊಂಡ ಶ್ರೀ ಪರ್ವತ ಇದೇ ಎನ್ನಲಾಗಿದ್ದು, ಮಯೂರವರ್ಮ ಸಾಮ್ರಾಜ್ಯ ಕಟ್ಟಲು ನೆಲೆಸಿದ ಜಾಗವಿದು ಎನ್ನಲಾಗಿದೆ.