Tuesday, November 17, 2026
Tuesday, November 17, 2026

ಪಹಾಡಿ ಜನರು ಅಕ್ಷರ ಮಿತವ್ಯಯಿಗಳೇ?

ನನಗೆ ಪ್ರವಾಸದ ಗುರಿ ತಲಪುವುದು ಮಾತ್ರ ಮುಖ್ಯ ಅನಿಸುವುದಿಲ್ಲ. ಪ್ರವಾಸದ ಪೂರ್ವತಯಾರಿ, ಸಮಾನಾಸಕ್ತರೊಂದಿಗೆ ಮಾತುಕತೆ, ಪ್ರಯಾಣದ ದಾರಿ, ಪರಿಸರದ ಗಮನಿಸುವಿಕೆ, ಸ್ಥಳೀಯರೊಂದಿಗೆ ಮಾತುಕತೆ, ದಾಖಲೀಕರಣ ಎಲ್ಲವೂ ಸಮಾನ ಸಂತೋಷ ಕೊಡುವ ವಿಚಾರ.

  • ಹೇಮಮಾಲಾ, ಬಿ.

ಹಿಮಾಚಲ ಪ್ರದೇಶ ರಾಜ್ಯದ ಈಶಾನ್ಯ ಭಾಗದಲ್ಲಿ, ಸಮುದ್ರ ಮಟ್ಟದಿಂದ ಸುಮಾರು 12,500 ಅಡಿಗಳಿಗೂ ಅಧಿಕ ಎತ್ತರದಲ್ಲಿರುವ ‘ಸ್ಪಿಟಿ ಕಣಿವೆ’ಯು ಹಸಿರಿಲ್ಲದ ಒಣ ಪರ್ವತಗಳು, ಆಧುನಿಕ ಸುರಂಗ ರಸ್ತೆಗಳು, ಪ್ರಾಚೀನ ಬೌದ್ಧ ಮಠಗಳು ಮತ್ತು ವಿಶಿಷ್ಟ ಟಿಬೆಟಿಯನ್ ಸಂಸ್ಕೃತಿಯನ್ನು ಒಳಗೊಂಡಿದೆ. ‘ಸ್ಪಿಟಿ’ ಎಂದರೆ ಮಧ್ಯದಲ್ಲಿರುವ ಭೂಮಿ ಎಂಬ ಅರ್ಥವಂತೆ. ಪರ್ವತ ಪ್ರದೇಶದ ಪ್ರಕೃತಿ ಸೌಂದರ್ಯ, ದಾರಿಯುದ್ದಕ್ಕೂ ಜತೆಯಾಗುವ ಸ್ಥಳೀಯ ನದಿಗಳು, ಬೆಟ್ಟದಿಂದ ಧುಮುಕುವ ಚಿಕ್ಕ ದೊಡ್ಡ ಜಲಧಾರೆಗಳು, ಬಹುತೇಕ ನಿರ್ಜನವಾಗಿರುವ ರಸ್ತೆಗಳು, ಭೂಕುಸಿತದಿಂದಾಗಿ ಬದಲಾಗುವ ರಸ್ತೆಮಾರ್ಗಗಳು, ಚಳಿಗೆ ಸೂಕ್ತವಾದ ದಿರಿಸನ್ನು ಧರಿಸಿ, ಯಾವುದಾದರೂ ಕೆಲಸ ಮಾಡುತ್ತಿರುವ ಪಹಾಡಿ ಶ್ರಮಜೀವಿ ಜನರು, ಒಟ್ಟಿನಲ್ಲಿ ಕೃತಕತೆ ಮತ್ತು ಧಾವಂತವಿಲ್ಲದ ಬದುಕು ಇಲ್ಲಿದೆ. ನಮ್ಮ ಒಂದು ವಾರದ ಸ್ಪಿಟಿ ಕಣಿವೆ ಪ್ರವಾಸದ ಸಂದರ್ಭದಲ್ಲಿ ಹಲವಾರು ಬೌದ್ಧ ಧರ್ಮೀಯರ ಪವಿತ್ರ ಮೊನಾಸ್ಟ್ರಿಗಳಿಗೆ , ಸ್ತೂಪಗಳಿಗೆ ಭೇಟಿ ಕೊಟ್ಟಿದ್ದೆವು. ದುರ್ಗಮವಾದ ರಸ್ತೆಯಲ್ಲಿ, ಬಾರ್ಡರ್ ರೋಡ್ ಆರ್ಗನೈಸೇಶನ್‌ನವರು ನಿರ್ಮಿಸಿದ ಅದ್ಭುತವಾದ ಸೇತುವೆಗಳನ್ನೂ, ಸುರಂಗಗಳನ್ನೂ ದಾಟಿದ್ದೆವು.

ಇದನ್ನೂ ಓದಿ: ಬುಡಕಟ್ಟು ಜನರ ರುಚಿಕಟ್ಟು ಹಬ್ಬಗಳು...!

Untitled Design - 2026-11-17T155806.919

ಚಿಕ್ಕ ಚಿಕ್ಕ ಹೆಸರುಗಳು

ಅಲ್ಲಿಯ ಜನರ ಅಕ್ಷರ ಮಿತವ್ಯಯವೂ ಸ್ವಾರಸ್ಯಕರವಾಗಿದೆ ಅನಿಸಿತು. ಯಾಕೆಂದರೆ, ಹಿಮಾಚಲ ಪ್ರದೇಶ ತಲಪಿದ ಮೇಲೆ ನಾವು ನೋಡಿದ ಅಥವಾ ಗಮನಿಸಿದ ಸ್ಥಳಗಳ ಹೆಸರು ಹೆಚ್ಚಿನವು ಕನ್ನಡದ ಎರಡಕ್ಷರ ಅಥವಾ ಮೂರಕ್ಷರಗಳಲ್ಲಿ ಬರೆಯಲು ಸಾಧ್ಯವಿರುವಂತವಾಗಿದ್ದುವು. ನಾವು ಉಳಿದುಕೊಂಡಿದ್ದ ಜಾಗಗಳ ಹೆಸರು ಶಿಮ್ಲಾ, ಕುಫ್ರಿ, ಸಾಂಗ್ಲಾ, ಕಲ್ಪಾ, ಟಬೋ, ಕಾಜಾ. ಕಂಡಿದ್ದ ನದಿಗಳ ಹೆಸರು ಸಟ್ಲೆಜ್, ಸ್ಪಿಟಿ, ಪಿನ್, ಬಾಸ್ಪಾ. ನಡೆದಾಡಿದ್ದ ಸೇತುವೆಗಳು ಕಾಭಾ, ಚಿಚಂ. ಭೇಟಿ ಕೊಟ್ಟ ಹಳ್ಳಿಗಳ ಹೆಸರು ಚಿತ್ಕುಲ್, ಕರ್ಚಮ್, ನಾಕೋ, ಚಿಚಂ...ಇತ್ಯಾದಿ. ಸ್ಪಿಟಿ ಕಣಿವೆಯಲ್ಲಿ ಕಾಣಿಸಿದ ಆಡನ್ನು ಹೋಲುವ ಪ್ರಾಣಿಯ ಹೆಸರು 'ಗಾಬೂ'. ನಾವು ಭೇಟಿ ಕೊಟ್ಟ ಒಂದು ಕೋಟೆಯ ಹೆಸರು 'ಕಮ್ರು'. ಇನ್ನು ತಿಂದ ಸ್ಥಳೀಯ ಆಹಾರಗಳು ಮೊಮೊ, ತುಕ್ಪಾ, ರೋಟಿ, ದಾಲ್, ಸಬ್ಜಿ. ಅಲ್ಲಿ ಸ್ಥಳೀಯವಾಗಿ ಬೆಳೆಯುವ ಕೃಷಿ ಉತ್ಪನ್ನಗಳು ಸೇಬ್, ಜಾವ್(ಬಾರ್ಲಿ), ಓಗ್ಲಾ ಅಥವಾ ಕುಟು (ಬಕ್ ವೀಟ್), ಛರ್ಮಾ(ಸೀಬಕ್ ಥೋರ್ನ್ ಚಹಾ). ನಾನು ಮಾತನಾಡಿಸಿದ ಕೆಲವು ಸ್ಥಳೀಯರ ಹೆಸರು ವಿಮ್ಲಾ(ವಿಮಲಾ), ದೋಲ್ಮಾ, ಸುನ್ತಾ (ಸುನೀತಾ), ತೆಂಜಿನ್, ದೋರ್ಜೆ, ನೊಬ್ರು. ಇನ್ನು ಮೊನಾಸ್ಟ್ರಿ ಅಥವಾ ಗೊಂಪಾಗಳ ಹೆಸರು ಎರಡು, ಮೂರಕ್ಷರಗಳ ಜತೆಗೆ ಕನ್ನಡದ ಒಂದಕ್ಷರವೂ ಸಾಕು ಎಂಬಂತೆ ಇದ್ದವು! ಉದಾ: ಧಂಕರ್, ಟಾಬೋ, ಗ್ಲ್ಯೂ, ಕೀ. ನಮ್ಮ 'ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ'ದ ಹೆಸರು ಮತ್ತು 'ಕೀ ಗೊಂಪಾ'ದ ಹೆಸರನ್ನು ಹೋಲಿಸಿ ನೋಡಿ! ನಾವು ಮಾತನಾಡಲು, ಬರೆಯಲು, ಅದೆಷ್ಟು ಅಕ್ಷರ ಧಾರಾಳಿಗಳು ಎಂದು ಗೊತ್ತಾಗುತ್ತದೆ!

ಯಾಕೆ ಹೀಗೆ?

ಈ ಬಗ್ಗೆ, ಕುತೂಹಲದಿಂದ ಗೂಗಲ್‌ನಲ್ಲಿ ಜಾಲಾಡಿದಾಗ ಗೊತ್ತಾದುದೇನೆಂದರೆ, ಹಿಮಾಲಯದ ಎತ್ತರದ ಪ್ರದೇಶದಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಹಲವಾರು ಹಳ್ಳಿಗಳು ಸಂಸ್ಕೃತ ಭಾಷೆ ಮತ್ತು ಟಿಬೆಟಿಯನ್ ಸಂಸ್ಕೃತಿಯಿಂದ ಪ್ರಭಾವಿತಗೊಂಡಿವೆ. ಸಂಸ್ಕೃತ ಭಾಷೆಯಲ್ಲಿ ಹಾಗೂ ದೇವನಾಗರಿ ಲಿಪಿಯಲ್ಲಿ ಪ್ರತಿ ವ್ಯಂಜನಾಕ್ಷರಕ್ಕೆ ಮೂಲಾಕ್ಷರದ ಜತೆಗೆ ಸ್ವರಾಕ್ಷರ ಇರುತ್ತದೆ. ಕಾಲಾನಂತರದಲ್ಲಿ ಪ್ರಚಲಿತಗೊಂಡ ಪ್ರಾಕೃತ್ ಮತ್ತು ಪಹಾಡಿ ಭಾಷೆಗಳ ಹಲವಾರು ರೂಪಗಳಲ್ಲಿ ಶಬ್ದದ ಕೊನೆಯ 'ಸ್ವರವನ್ನು' ಕಡಿತಗೊಳಿಸಿ ಮೂಲ ಅಕ್ಷರವನ್ನು ಮಾತ್ರ ಉಚ್ಚರಿಸುವ ಪದ್ಧತಿ ರೂಢಿಯಾಯಿತು. ಉದಾ: ರಾಮ- ರಾಮ್, ಫಲ-ಫಲ್. ಹೀಗೆ ಕೊನೆಯ ಅಕ್ಷರದ 'ಅ'ಕಾರ ಕಡಿತವಾಯಿತು. ಇದನ್ನು ಭಾಷಾ ಶಾಸ್ತ್ರದ ಅಧ್ಯಯನದಲ್ಲಿ ಆಪೊಕೊಪೆ ಎನ್ನುತ್ತಾರೆ. ಇನ್ನು ಪದದ ನಡುವೆ, ಒತ್ತಿ ಹೇಳದ, ತೇಲಿಸಿದಂತೆ ಹೇಳುವ ಸ್ವರಗಳನ್ನೂ ಉಚ್ಚರಿಸದೆ ಇರುವ ಪದ್ಧತಿ ಆರಂಭವಾಯಿತು. ಉದಾ: ಉಮರ್- ಉಮ್ರ್, ವಿಮಲಾ- ವಿಮ್ಲಾ. ಇದನ್ನು ಸಿನೊಕೋಪಿ ಎಂದು ಗುರುತಿಸುತ್ತಾರೆ. ಇನ್ನು ಹಿಮಾಲಯದ ಎತ್ತರದ ಪರ್ವತ ಪ್ರದೇಶಗಳಲ್ಲಿ, ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇದ್ದು ಬೇಗ ಸುಸ್ತಾಗುತ್ತದೆ. ಬಹುತೇಕ ಸಮಯ ಪ್ರತಿಕೂಲ ವಾತಾವರಣವಿರುವಲ್ಲಿ, ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದ ಜನರು ಉದ್ದುದ್ದ ಹೆಸರುಗಳನ್ನೂ ಹೇಳುತ್ತಾ, ಹೆಚ್ಚು ಮಾತನಾಡಿ ಶಕ್ತಿ ವ್ಯಯ ಮಾಡುವ ಬದಲು ಸರಳವಾದ ಪದಗಳ ಮೂಲಕ ಸಂವಹನದ ಅಭ್ಯಾಸವನ್ನು ರೂಢಿಸಿಕೊಂಡಿರುವುದೂ ಇನ್ನೊಂದು ಕಾರಣವಂತೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ