Monday, August 18, 2025
Monday, August 18, 2025

ಬುಡಕಟ್ಟು ಜನರ ರುಚಿಕಟ್ಟು ಹಬ್ಬಗಳು...!

ಬೀಜ ಬಿತ್ತುವಾಗ, ಬೆಳೆಯ ಕಟಾವು ಮಾಡುವಾಗ, ಮಗು ಹುಟ್ಟಿದಾಗ, ಮದುವೆಯಾಗುವಾಗ, ಮಳೆ ಆರಂಭವಾದಾಗ, ಹಿಮಪಾತ ನಿಂತಾಗ, ಹೊಸ ಲಾಮ ನೇಮಕವಾದಾಗ, ಹಳೆಯ ಗುರುಗಳ ನೆನಪಾದಾಗ, ಆಕಾಶ ನಲಿದಾಗ, ಭೂಮಿ ಹಸಿರಾದಾಗ, ವಯಸ್ಸು ಸರಿದಾಗ, ಮನಸ್ಸು ಕೂಡಿದಾಗ, ಅಗ್ನಿ ಬಿಸಿಯಾದಾಗ, ವಾಯು ಸ್ಪರ್ಶವಾದಾಗ, ಹುಡುಗಿ ಮೈನೆರೆದಾಗ, ಪುರುಷ ಅತ್ತಾಗ ಹೀಗೆ ಎಲ್ಲಕ್ಕೂ ಒಂದು ಹಬ್ಬ ಇಲ್ಲಿ.

  • ಅಂಜಲಿ ರಾಮಣ್ಣ

ಬದುಕನ್ನು ಸಂಭ್ರವನ್ನಾಗಿಸಿಕೊಳ್ಳಲು ಕಾರಣಗಳು ಬೇಕೆನಿಸಿದಾಗ ಒಮ್ಮೆ ಅರುಣಾಚಲಪ್ರದೇಶದ ಬುಡಕಟ್ಟು ಜನರನ್ನು ಈ ನಾಡನ್ನು ತಿರುಗಿ ನೋಡಲೇಬೇಕು. ಹೆಜ್ಜೆಗೊಂದು ಹಬ್ಬ ಆಚರಿಸುವ, ನುಡಿಗೊಂದು ನೃತ್ಯ ಮಾಡುವ ಇಲ್ಲಿನವರು ಬದುಕನ್ನು ಅದೆಷ್ಟು ಸರಳವಾಗಿ ಮತ್ತು ಸಹಜವಾಗಿ ಆದರೆ ಅಷ್ಟೇ ರಂಗುರಂಗಾಗಿ ಸ್ವೀಕರಿಸಿದ್ದಾರೆ ಎಂದರೆ ವರ್ಷವಿಡೀ ಹಬ್ಬಗಳ ದಿನಾಂಕವನ್ನು ಹೊತ್ತು ಭರ್ತಿಯಾಗಿರುವ ಅವರ ಪಂಚಾಂಗವನ್ನು ನೋಡಿಯೇ ತಿಳಿಯಬೇಕು.

ಪ್ರತೀ ಗ್ರಾಮಕ್ಕೂ, ಊರಿಗೂ, ಸರಹದ್ದಿಗೂ, ತನ್ನದೇ ಆದ ಹಬ್ಬ ಮತ್ತು ನೃತ್ಯ ಪದ್ಧತಿಗಳಿವೆ. ಅವುಗಳಿಗೆ ದಂದೈಗಳು (ಪುರೋಹಿತರು) ಮೊದಲೇ ದಿನಾಂಕಗಳನ್ನು ಗೊತ್ತುಪಡಿಸಿರುತ್ತಾರೆ. ಬೀಜ ಬಿತ್ತುವಾಗ, ಬೆಳೆಯ ಕಟಾವು ಮಾಡುವಾಗ, ಮಗು ಹುಟ್ಟಿದಾಗ, ಮದುವೆಯಾಗುವಾಗ, ಮಳೆ ಆರಂಭವಾದಾಗ, ಹಿಮಪಾತ ನಿಂತಾಗ, ಹೊಸ ಲಾಮ ನೇಮಕವಾದಾಗ, ಹಳೆಯ ಗುರುಗಳ ನೆನಪಾದಾಗ, ಆಕಾಶ ನಲಿದಾಗ, ಭೂಮಿ ಹಸಿರಾದಾಗ, ವಯಸ್ಸು ಸರಿದಾಗ, ಮನಸ್ಸು ಕೂಡಿದಾಗ, ಅಗ್ನಿ ಬಿಸಿಯಾದಾಗ, ವಾಯು ಸ್ಪರ್ಶವಾದಾಗ, ಹುಡುಗಿ ಮೈನೆರೆದಾಗ, ಪುರುಷ ಅತ್ತಾಗ ಹೀಗೆ ಎಲ್ಲಕ್ಕೂ ಒಂದು ಹಬ್ಬ ಇಲ್ಲಿ. 11ನೆಯ ಫೆಬ್ರವರಿಯಿಂದ 25ನೆಯ ನವೆಂಬರ್ ವರೆಗೂ ಸತತವಾಗಿ ಆಚರಣೆಯಲ್ಲಿ ತೊಡಗಿರುತ್ತಾರೆ ಇಲ್ಲಿನವರು.

Serbang  2

ಬಲು ಆಕರ್ಷಣೀಯ ಎಂದರೆ ಇಲ್ಲಿನ ಮುಖವಾಡಗಳ ಹಬ್ಬ. ‘ತೊಗ್ರ್ಯಾ’ ಇದು ತವಾಂಗ್‍ನ ಬೌದ್ಧ ವಿಹಾರದಲ್ಲಿ ಆಚರಿಸುವ ಹಬ್ಬವಾಗಿದೆ. ಚಾಂದ್ರಮಾನ ಪಂಚಾಂಗದ ಹನ್ನೊಂದನೆಯ ತಿಂಗಳಿನ ಇಪ್ಪತ್ತೆಂಟನೆಯ ದಿನದಂದು ಇದನ್ನು ಆಚರಿಸಲಾಗುತ್ತದೆ. ಆ ದಿನವನ್ನು ‘ದವ ಚುಕ್ಜಿಪ’ ಎಂದು ಕರೆಯುತ್ತಾರೆ. ಮನುಷ್ಯನು ಹುಟ್ಟಿನಿಂದ ಹಣೆಬರಹದಲ್ಲಿ ತಂದಿರಬಹುದಾದ ದುರದೃಷ್ಟವನ್ನು ದೂರ ಮಾಡಲು, ದೆವ್ವ ಭೂತಗಳ ಕಾಟದಿಂದ ತಪ್ಪಿಸಿಕೊಳ್ಳಲು, ಪ್ರಾಕೃತಿಕ ವಿಕೋಪಗಳಿಂದ ಆಗುವ ಜೀವ ಹಾನಿ, ಬೆಳೆ ಹಾನಿಯನ್ನು ತಡೆಗಟ್ಟುವ ಹಂಬಲವೇ ಈ ಹಬ್ಬದ ಹಿಂದಿನ ಉದ್ದೇಶ.

ಮುಖವಾಡಗಳಲ್ಲಿ ಅತಿಮಾನುಷ ಶಕ್ತಿ ಇದ್ದು ಅದು ಮನುಕುಲವನ್ನು ನಾಶಪಡಿಸುತ್ತದೆ ಎಂದು ನಂಬುವ ಮೊನ್ಪಾ ಜನರು ಲಾಮಾಗಳ ಮೂಲಕ ‘ರಮ್ನೆ’ ಎನ್ನುವ ಪೂಜಾ ವಿಧಾನದಿಂದ ಮುಖವಾಡಗಳಲ್ಲಿ ದೈವೀ ಶಕ್ತಿಯ ಪ್ರತಿಷ್ಠಾಪನೆ ಮಾಡುತ್ತಾರೆ. ಆ ದಿನ ವಿಶೇಷ ಖಾದ್ಯ ಪದಾರ್ಥಗಳನ್ನು ತಯಾರಿಸಿ ಇಪ್ಪತ್ತೊಂದು ಲಾಮಾಗಳಿಗೆ ಬಡಿಸಲಾಗುತ್ತದೆ. ಕೆಡುಕುಗಳ ವಿರುದ್ಧ ಒಳಿತಿನ ವಿಜಯೋತ್ಸಾಹದ ದಿನವಾದ ಅಂದು ಮುಖವಾಡಗಳನ್ನು, ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ, ಆ ದಿನಕ್ಕಾಗಿಯೇ ಸಂಯೋಜನೆಗೊಂಡಿರುವ ನೃತ್ಯವನ್ನು ಮಾಡುತ್ತಾರೆ. ಏಕಾಂಕ ನಾಟಕಗಳನ್ನೂ ಮಾಡುತ್ತಾರೆ. ಎಲ್ಲಾ ಹಬ್ಬಗಳಲ್ಲೂ ಅತ್ಯಂತ ಮನರಂಜನೀಯ, ವರ್ಣಮಯ ಹಬ್ಬವಾಗಿದೆ ತೊಗ್ರ್ಯ.

‘ಸೆರ್ಬಾಂಗ್’ ಎನ್ನುವುದೂ ಸಹ ತವಾಂಗ್‍ನ ಬೌದ್ಧ ವಿಹಾರದಲ್ಲಿ ಆಚರಿಸುವ ಮತ್ತೊಂದು ಮುಖ್ಯವಾದ ಹಬ್ಬ. ಆ ದಿನ ಇಪ್ಪತ್ತೊಂದು ಲಾಮಾಗಳು ಹಲವಾರು ಪೂಜಾ ಪ್ರಕ್ರಿಯೆಗಳ ನಂತರ ಧಾರ್ಮಿಕ ಗುರುಗಳಾಗುವ ದೀಕ್ಷೆ ಪಡೆಯುತ್ತಾರೆ. ಆ ದಿನ ಅವರುಗಳು ಹಳದಿ-ಕೆಂಪು ಮಿಶ್ರಿತ ವಿಶೇಷವಾದ ಬಟ್ಟೆಗಳನ್ನು ಧರಿಸಿರುತ್ತಾರೆ. ಗೌತಮ ಬುದ್ಧ ನಿರ್ವಾಣ ಹೊಂದಿದ ದಿನವನ್ನು ‘ಸಕಾದವಾ’ ಎನ್ನುವುದಾಗಿ ಆಚರಿಸುತ್ತಾರೆ.

Serbang

ಹೆಜ್ಜೆಗೊಂದು ನೃತ್ಯಮಾಡುವ ಈ ಜನರ ಜಾನಪದ ಪ್ರಕಾರವು ಈ ನೆಲದ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಸರಿ. ಇವರುಗಳ ನೃತ್ಯ ಸಂಯೋಜನೆಯು ಅಲ್ಲಿನ ಜನಮಾನಸದ ಜೀವನ್ಮುಖತೆ, ಉತ್ಸಾಹಗಳ ದ್ಯೋತಕವಾಗಿರುತ್ತದೆ. ನೃತ್ಯವು ಈ ಜನಕ್ಕೆ ಕೇವಲ ಮನರಂಜನೆಯ ಮಾಧ್ಯಮವಾಗಿರದೆ ಧಾರ್ಮಿಕ ಆಚರಣೆಯ ಭಾಗವೇ ಆಗಿದೆ. ಪುರೋಹಿತರ ನೃತ್ಯ, ಯುದ್ಧ ನಾಟ್ಯ ಮತ್ತು ಇನ್ನು ಕೆಲವು ಧಾರ್ಮಿಕ ಕ್ರಿಯಾವಿಧಿಗಳ ಸಮಯದಲ್ಲಿ ಮಾಡುವ ನೃತ್ಯವನ್ನು ಹೆಂಗಸರು ಮಾಡುವ ಹಾಗಿಲ್ಲ. ಉಳಿದಂತೆ ಬೇರೆಲ್ಲ ನೃತ್ಯಗಳನ್ನು ಹೆಂಗಸರು ಮತ್ತು ಗಂಡಸರು ಮಾಡುತ್ತಾರೆ.

ಮೊನ್ಪಾ ಜನಗಳ ಅಜಿಲಮು, ನಿಶಿ ಜನಗಳ ರೊಪ್ಪಿ, ಅಪತಾನಿಗಳ ಹಿರ್ರಿ ಕಾನಿಂಗ್, ಆದಿ ಜನರ ಪೊಪಿರ್, ಪೊನಂಗ್, ಪಸಿಕೊಂಗ್ಕಿ ಮತ್ತು ನೊಕ್ತೆ ಬುಡಕಟ್ಟಿನವರ ಚಲೋ, ನಿಶಿಂಗ್ ಜನರ ರೆಖಮ್ ನೃತ್ಯಗಳು ಅತ್ಯಂತ ಪ್ರಸಿದ್ಧ ನೃತ್ಯಗಳು ಎನಿಸಿದ್ದರೂ, ತವಾಂಗ್‍ನಲ್ಲಿ ಮೊನ್ಪ ಜನಗಳು ಮುಖವಾಡ ಧರಿಸಿ, ಗಾಢ ವರ್ಣದ ವಸ್ತ್ರಗಳನ್ನು ತೊಟ್ಟು ಮಾಡುವ ಚಮರೀಮೃಗದ ನೃತ್ಯ, ಸಿಂಹ ಮತ್ತು ನವಿಲಿನ ನಾಟ್ಯಗಳು ಅತೀ ಮನಮೋಹಕ ಪ್ರಕಾರಗಳೆಂದು ಹೆಸರು ಮಾಡಿವೆ. ಎಲ್ಲಾ ನೃತ್ಯಗಳನ್ನೂ ಅಲ್ಲಿನ ಜನರೇ ಹಾಡುವ ಸಮೂಹ ಗಾಯನಕ್ಕೆ ಸಂಯೋಜಿಸಿರುತ್ತಾರೆ. ಅಜಿಲಮು ನೃತ್ಯವು ಸ್ಥಳೀಯರ ರಾಮಾಯಣದ ರೂಪವಾಗಿರುತ್ತದೆ. ಯಾಕ್ ನೃತ್ಯದಲ್ಲಿ ಚಮರೀಮೃಗದ ಹುಟ್ಟಿನ ಜೀವನಗಾಥೆಯನ್ನು ತೋರಿಸುತ್ತಾರೆ. ಸಿಂಹ ನೃತ್ಯ ಪ್ರಕಾರದಲ್ಲಿ ಪರಿಸರದಲ್ಲಿ ಪ್ರಾಣಿಗೂ ಮತ್ತು ಮನುಷ್ಯನಿಗೂ ಇರಬೇಕಾದ ಸಾಮರಸ್ಯವನ್ನು ಆಂಗಿಕಾಭಿನಯದ ಮೂಲಕ ತೋರಿಸಲಾಗುತ್ತದೆ. ‘ಕೆಂಗ್ಚಾಮ್’ ಎನ್ನುವ ನೃತ್ಯದಲ್ಲಿ ಇಬ್ಬರು ಬೆತ್ತಲೆ ಮನುಷ್ಯರು ಅಸ್ಥಿಪಂಜರದ ಮುಖವಾಡ ತೊಟ್ಟು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾರುವಂಥ ಕಥೆಯನ್ನು ರೂಪಕವನ್ನಾಗಿಸುತ್ತಾರೆ. ಅರಪು ನೃತ್ಯವು ಕದನವನ್ನು ತೋರಿಸುವ ಸೈನಿಕರ ನೃತ್ಯವಾಗಿದ್ದು ಅಹೋರಾತ್ರಿ ಮಾಡಲಾಗುತ್ತದೆ. ಇದರಲ್ಲಿ ಹೆಂಗಸರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.

ನನ್ನ ಪ್ರವಾಸದ ಅವಧಿಯಲ್ಲಿ ನೋಡಲು, ಭಾಗಿಯಾಗಲು ಸಿಕ್ಕಿದ್ದು ಲೋಸರ್ ಹಬ್ಬ. ಮೊನ್ಪಾ ಪಂಗಡದವರು ಹೊಸವರ್ಷವನ್ನು ಸ್ವಾಗತಿಸಲು ಈ ಹಬ್ಬವನ್ನು ಆಚರಿಸುತ್ತಾರೆ. ಅಕ್ಕಿಹಿಟ್ಟಿನಿಂದ ತಯಾರಿಸಲಾದ ಹಲವಾರು ಸಿಹಿ ಖಾದ್ಯಗಳನ್ನು ಬುದ್ಧನ ಪ್ರತಿಮೆಯ ಎದುರಿಗಿಟ್ಟು, ದೀಪಗಳನ್ನು ಹಚ್ಚಿ, ಮಂತ್ರಗಳನ್ನು ಓದುತ್ತಾ, ಊದುಬತ್ತಿ ಮತ್ತು ಧೂಪದ ಗೆಡ್ಡೆಗಳನ್ನು ತಲೆಯ ಮೇಲೆ ವೃತ್ತಾಕಾರದಲ್ಲಿ ಸಿಕ್ಕಿಸಿಕೊಂಡು ಪೂಜೆ ಮಾಡಿ ನಂತರ ನೃತ್ಯ ಮಾಡುತ್ತಾರೆ. ಈ ಹಬ್ಬಕ್ಕಾಗಿಯೇ ಯುವತಿಯರು ತಮ್ಮ ತಮ್ಮ ಮನೆಯಲ್ಲಿಯೇ ನೇಯ್ದ ಕೆಂಪು ಮತ್ತು ಕಪ್ಪು ಬಣ್ಣದ ಪಟ್ಟೆ ಇರುವ ಪಂಚೆಯಂಥ ಹೊಸ ಬಟ್ಟೆಯನ್ನು ಹಾಕಿಕೊಂಡು ತಲೆಗೆ ಪಕ್ಷಿಗಳ ರೆಕ್ಕೆ ಪುಕ್ಕಗಳಿಂದ ಮಾಡಿದ ಕಿರೀಟ ತೊಡುತ್ತಾರೆ. ಯಾರ ಕಿರೀಟ ಹೆಚ್ಚು ಆಕರ್ಷಣೀಯ ಎನ್ನುವುದನ್ನು ಊರಿನ ಹಿರಿಯರು ನಿರ್ಧರಿಸಿ ಆಕೆಗೆ ಬಹುಮಾನ ಕೊಡುತ್ತಾರೆ. ಪ್ರಪಂಚಾದ್ಯಂತ ಎಲ್ಲಿಯೇ ಓದುತ್ತಿದ್ದರೂ, ಉದ್ಯೋಗದಲ್ಲಿದ್ದರೂ ಈ ಹಬ್ಬಕ್ಕೆ ಮೊನ್ಪಾ ಪಂಗಡಕ್ಕೆ ಸೇರಿದ ಎಲ್ಲರೂ ಮನೆಗೆ ಹಿಂದಿರುಗುತ್ತಾರೆ.

Serbang  1

ಬೆಂಗಳೂರಿನಲ್ಲಿ ಎಮ್‍ಬಿಎ ವ್ಯಾಸಂಗ ಮಾಡುತ್ತಿದ್ದ ರಿನೆ ಎನ್ನುವ ಯುವತಿಯ ಪರಿಚಯವಾಗಿತ್ತು. ಬಲು ಮುದ್ದಾಗಿ ಕನ್ನಡ ಮಾತನಾಡುತ್ತಿದ್ದವಳು ಈ ಹಬ್ಬದ ಹಿನ್ನೆಲೆಯ ಪರಿಚಯ ಮಾಡಿಕೊಟ್ಟು ಅವಳ ಹಳ್ಳಿಯ ಎಲ್ಲರನ್ನೂ ಪರಿಚಯ ಮಾಡಿಸಿಕೊಟ್ಟಳು. ಪ್ರತೀ ಮನೆಯಲ್ಲೂ ಈ ಹಬ್ಬಕ್ಕಾಗಿಯೇ ಅಕ್ಕಿಹಿಟ್ಟಿನ ಹುದುಗಿನಿಂದ ಪೇಯವೊಂದನ್ನು ತಯಾರಿಸಿರುತ್ತಾರೆ. ಅದನ್ನು ಹಂಚಿಕೊಂಡು ಕುಡಿಯುತ್ತಲೇ ನೃತ್ಯ ಮಾಡುತ್ತಿರುತ್ತಾರೆ. ಒಮ್ಮೆಗೆ ನಮ್ಮ ಕೊಡವರ ಮದುವೆಯ ಸಂಭ್ರಮ ನೆನಪಾಗುತ್ತದೆ. ರೆನೆ ನನಗೂ ಒಂದು ಬೋಗುಣಿಯಲ್ಲಿ ಆ ಪಾನೀಯ ಕೊಟ್ಟಳು. ತುಟಿ ತಾಗುತ್ತಿದ್ದಂತೆ ಅದರ ಹುಳಿಯೊಗರು ಬಹಳ ಗಾಢವಾಗಿ ಇರುವುದು ಗೊತ್ತಾಯಿತು. ನನಗೆ ಸೇರುತ್ತಿರಲಿಲ್ಲ. ಆದರೆ ಅದನ್ನು ಚೆಲ್ಲಿದರೆ ರೆನೆ ಮತ್ತವಳ ಜನರ ಪ್ರೀತಿಯಾದರಗಳನ್ನು ತಿರಸ್ಕರಿಸಿದಂತೆ ಅನಿಸಿ ನಾಲ್ಕಾರು ಗುಟುಕುಗಳನ್ನು ನಾಲಿಗೆಗೆ ಹಾಕಿಕೊಂಡು ಪಕ್ಕಕ್ಕಿಟ್ಟೆ.

ಬಾತ್ರೂಂ ಸಿಂಗರ್, ಬೆಡ್ರೂಮ್ ಡ್ಯಾನ್ಸರ್ ಆದ ನನ್ನನ್ನು ಒಬ್ಬರಾದ ಮೇಲೊಬ್ಬರಂತೆ ಕೈಹಿಡಿದು ಜಗ್ಗಾಡಿ ಕುಣಿಸಿ ಸಂತಸ ಕೊಟ್ಟು ಆನಂದ ಪಟ್ಟ ಅವರುಗಳದ್ದು ಪ್ರತೀ ಉಸಿರಿನಲ್ಲೂ ಅದಮ್ಯ ಚೇತನವನ್ನು ತುಂಬಿಕೊಂಡು, ಜಗತ್ತನ್ನೇ ಜೀವನದೆಡೆಗೆ ಪ್ರೇರೇಪಿಸುವ ಶಕ್ತಿ, ಯುಕ್ತಿ ಎರಡನ್ನು ಹೊಂದಿರುವ ಬುಡಕಟ್ಟು. ಆ ಘಳಿಗೆಯಲ್ಲಿ ಅವರುಗಳು ಮತ್ತವರ ಆಚರಣೆ ನಿಜಕ್ಕೂ ಈ ಭೂಮಿಯ ಮೇಲಿನ ಇಂದ್ರಜಾಲದಂತೆ ತೋರುತ್ತಿದ್ದವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?