• ದೀಪ್ತಿ ಕೆ ಟಿ

ಮುಂಬೈನಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ಎಲಿಫೆಂಟಾ ಗುಹೆಗಳು ಭಾರತದ ಅತ್ಯಮೂಲ್ಯ ಪೌರಾಣಿಕ ಕಲಾಸಂಪತ್ತಿನ ಕೇಂದ್ರಗಳಲ್ಲಿ ಒಂದಾಗಿದೆ. ಅರೇಬಿಯನ್ ಸಮುದ್ರದ ಮಧ್ಯದಲ್ಲಿರುವ ಈ ಪುಟ್ಟ ದ್ವೀಪವನ್ನು ಸ್ಥಳೀಯರು ಘರಾಪುರಿ ಎಂದು ಕರೆಯುತ್ತಾರೆ. ಸಮುದ್ರದ ಮಧ್ಯದಲ್ಲಿ ಹಸಿರು ಬೆಟ್ಟಗಳ ನಡುವೆ ನೆಲೆಗೊಂಡಿರುವ ಈ ಸ್ಥಳವು ಕಾಲಾಂತರದಿಂದ ಮಾನವಕಲೆಯ ಅದ್ಭುತವನ್ನು ಹೊತ್ತು ನಿಂತಂತಿದೆ.

ಮುಂಬೈನ ಗೇಟ್‌ವೇ ಆಫ್ ಇಂಡಿಯಾಯಿಂದ ಬೆಳಗಿನ ಜಾವ ಹೊರಡುವ ಫೆರ್ರಿ ಹಡಗಿನಲ್ಲಿ ಪ್ರಯಾಣ ಪ್ರಾರಂಭವಾದ ಕ್ಷಣದಿಂದಲೇ ಪ್ರವಾಸಿಗನ ಮನಸ್ಸು ಒಂದು ಹೊಸ ಲೋಕದತ್ತ ಪ್ರವೇಶಿಸುತ್ತದೆ. ಸಮುದ್ರದ ತೇಲುವ ನೀರು, ಗಾಳಿಯ ತಂಪು, ದೂರದ ಮೀನುಗಾರರ ದೋಣಿಗಳು, ಈ ಎಲ್ಲವೂ ಒಂದು ಚಿತ್ತಾಕರ್ಷಕ ಚಿತ್ರವನ್ನು ರಚಿಸುತ್ತವೆ. ಸುಮಾರು ಒಂದು ಗಂಟೆಯ ಹಡಗಿನ ಪ್ರಯಾಣದ ನಂತರ ಕಾಣಸಿಗುವ ಎಲಿಫೆಂಟಾ ದ್ವೀಪವು ಪ್ರಕೃತಿಯ ಸುಂದರ ತೋಳಲ್ಲಿ ಮಡಿಲು ಹೊರೆದುಕೊಂಡಂತೆ ತೋರುತ್ತದೆ.

Untitled design (8)

ದ್ವೀಪಕ್ಕೆ ಇಳಿದ ನಂತರ ಸುಮಾರು ನೂರಕ್ಕೂ ಹೆಚ್ಚು ಮೆಟ್ಟಿಲುಗಳ ಏರುಗಾಡು ಹಾದಿ ನಿಮ್ಮನ್ನು ಪ್ರಾಚೀನ ಕಾಲದತ್ತ ಕರೆದುಕೊಂಡು ಹೋಗುತ್ತದೆ. ಮೆಟ್ಟಿಲಿನ ಎರಡೂ ಬದಿಗಳಲ್ಲಿ ಸಣ್ಣ ಅಂಗಡಿಗಳು ಕಲಾತ್ಮಕ ಕೈಪಡೆಗಳು, ಮರದ ಶಿಲ್ಪಗಳು, ಸ್ಮರಣಿಕೆಗಳು, ಈ ಎಲ್ಲಾ ಆಕರ್ಷಣೆಗಳು ಪ್ರಯಾಣವನ್ನು ಇನ್ನೂ ಹೆಚ್ಚು ಬಣ್ಣವನ್ನಾಗಿಸುತ್ತದೆ. ಎಲಿಫೆಂಟ ಗುಹೆಗಳ ಅಂತ್ಯದಲ್ಲಿ ಕಲ್ಲಿನ ಮೇಲೆ ಕೆತ್ತಿದ ಮಹಾಕಾವ್ಯ ಇದೆ.ಇವು ಕ್ರಿ.ಶ. 5ನೇ ಅಥವಾ 6ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿವೆ ಎಂದು ಇತಿಹಾಸಕಾರರು ಹೇಳುತ್ತಾರೆ. ಪ್ರಮುಖ ಗುಹೆಯೊಳಗೆ ಪ್ರವೇಶಿಸಿದಾಗ ಎದುರಿಗೆ ಕಾಣುವ ತ್ರಿಮೂರ್ತಿ ಶಿಲ್ಪ ಪ್ರವಾಸಿಗನ ಮನಸ್ಸನ್ನು ಕ್ಷಣಾರ್ಧದಲ್ಲಿ ಸೆಳೆಯುತ್ತದೆ. ಶಿವನ ಸೃಷ್ಟಿ, ಸ್ಥಿತಿ ಮತ್ತು ಸಂಹಾರರೂಪಗಳನ್ನು ಪ್ರತಿನಿಧಿಸುವ ಈ ಮೂರುಮುಖದ ಶಿಲ್ಪ ಸುಮಾರು 20 ಅಡಿ ಎತ್ತರದ್ದಾಗಿದೆ. ಕಲ್ಲಿನ ಶಾಂತ ಮುಖಗಳಲ್ಲಿ ಮೂಡಿರುವ ಆ ಧೈರ್ಯ, ಕರುಣೆ ಮತ್ತು ಶಕ್ತಿಯ ಸಂವೇದನೆಗಳು ಕೇವಲ ಕಲೆಗಷ್ಟೇ ಅಲ್ಲ, ಆಧ್ಯಾತ್ಮಿಕತೆಯೂ ಹೌದು.

ಇದರ ಪಕ್ಕದ ಗೋಡೆಗಳಲ್ಲಿ ಅರ್ಧನಾರೀಶ್ವರ, ಗಂಗಾವತರಣ, ನಟರಾಜ, ಲಿಂಗೋದ್ಭವ ಮೊದಲಾದ ಶಿವನ ವಿವಿಧ ರೂಪಗಳ ಶಿಲ್ಪಗಳು ಅಲಂಕರಿಸಿರುವುದು ಕಣ್ತುಂಬಿಸಿಕೊಳ್ಳುವಂಥದ್ದು. ಕಲ್ಲಿನೊಳಗೆ ಮೂಡಿಸಿದ ಈ ದೃಶ್ಯಗಳು ಜೀವಂತವಾಗಿಯೇ ಕಾಣುತ್ತವೆ. ಪ್ರತಿ ರೇಖೆಯಲ್ಲೂ, ಪ್ರತಿ ವಕ್ರದಲ್ಲೂ ಅಂದಿನ ಶಿಲ್ಪಿಗಳ ನಿಸ್ಸೀಮ ನೈಪುಣ್ಯ ಮತ್ತು ಭಕ್ತಿಭಾವಗಳು ಅಡಕವಾಗಿದೆ.

Untitled design (7)

ಇಂದು ಎಲಿಫೆಂಟಾ ಗುಹೆಗಳು ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯ ಭಾಗವಾಗಿವೆ. ಪ್ರತಿವರ್ಷ ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಈ ದ್ವೀಪವನ್ನು ಭೇಟಿ ಮಾಡಿ ಭಾರತದ ಪುರಾತನ ಕಲಾ ಪರಂಪರೆಯ ಅದ್ಭುತತೆಯನ್ನು ಅನುಭವಿಸುತ್ತಾರೆ. ಹಡಗಿನ ಪ್ರಯಾಣದಿಂದ ಗುಹೆಗಳ ಸೌಂದರ್ಯವರೆಗಿನ ಪ್ರತಿಯೊಂದು ಕ್ಷಣವೂ ಪ್ರವಾಸಿಗನ ಮನಸ್ಸಿನಲ್ಲಿ ಅಚ್ಚಳಿಯದಂತೆ ಮಾಡುತ್ತದೆ.

ಎಲಿಫೆಂಟಾ ಕೇವಲ ಒಂದು ಗುಹಾಸಮೂಹವಲ್ಲ ಅದು ಕಲ್ಲಿನೊಳಗೆ ಕೆತ್ತಲ್ಪಟ್ಟ ಕಾಲದ ಕಲೆ, ಭಕ್ತಿಯ ಭಾವನೆ, ಮತ್ತು ಭಾರತೀಯ ಸಂಸ್ಕೃತಿಯ ಶಾಶ್ವತ ಧ್ವನಿ. ಸಮುದ್ರದ ಮಿಡಿತದೊಡನೆ ಈ ಕಲ್ಲುಗಳು ಹೇಳುವ ಕಥೆ ಕೇಳಲು ಒಮ್ಮೆ ಈ ದ್ವೀಪದತ್ತ ಪ್ರಯಾಣಿಸಲೇಬೇಕು.