Tuesday, February 17, 2026
Tuesday, February 17, 2026

ಚೋಳರ ವಾಸ್ತುಶಿಲ್ಪದ ವೈಭವ ತಂಜಾವೂರು

ಚೋಳರ ಕಾಲದ ವಾಸ್ತುಶಿಲ್ಪದ ವೈಭವವನ್ನು ಸಾರುವ ತಂಜಾವೂರಿನ ಬೃಹದೀಶ್ವರ ಮತ್ತು ಜಂಬುಲಿಂಗೇಶ್ವರ ದೇವಸ್ಥಾನಗಳು ಇತಿಹಾಸದ ಭವ್ಯತೆಯನ್ನು ಕಣ್ಣ ಮುಂದೆ ನಿಲ್ಲಿಸುತ್ತವೆ. ಸಾವಿರ ವರ್ಷಗಳ ಇತಿಹಾಸವಿದ್ದರೂ ಈ ದೇವಸ್ಥಾನದ ಗತ್ತು ಇಂದಿಗೂ ಕಡಿಮೆಯಾಗಿಲ್ಲ. ಬೃಹದೀಶ್ವರ ದೇವಸ್ಥಾನದ ಆವರಣ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಬೃಹದಾಕಾರದ ನಂದಿ ವಿಗ್ರಹ ನಮ್ಮನ್ನು ಸ್ವಾಗತಿಸುತ್ತದೆ. ಏಕಶಿಲೆಯಲ್ಲಿ ಕೆತ್ತಲಾದ ಈ ನಂದಿಯನ್ನು ನೋಡುತ್ತಾ ನಿಂತರೆ ಸಮಯ ಹೋಗುವುದೇ ತಿಳಿಯುವುದಿಲ್ಲ.

  • ಸುಮಾ ಕಂಚೀಪಾಲ್‌

ಬೆಂಗಳೂರಿನ ಟ್ರಾಫಿಕ್, ಆಫೀಸಿನ ಕೆಲಸಗಳ ಜಂಜಾಟದ ನಡುವೆ ಒಮ್ಮೊಮ್ಮೆ ಎಲ್ಲಾದರೂ ದೂರ ಹೋಗಿಬಿಡೋಣ ಅನಿಸುವುದು ಸಹಜ. ಅಂಥ ಹೊತ್ತಿನಲ್ಲಿ ಕೇವಲ ಎರಡು ದಿನದ ರಜೆ ಸಿಕ್ಕರೆ ಸಾಕು, ಮನೆಯಲ್ಲಿ ಕೂರಲು ಮನಸ್ಸು ಒಪ್ಪುವುದೇ ಇಲ್ಲ. ಅಂಥದ್ದೇ ಒಂದು ಹಂಬಲ ನಮ್ಮನ್ನು ಕರೆದೊಯ್ದದ್ದು ತಮಿಳುನಾಡಿನ ಪುಣ್ಯಭೂಮಿ ಶ್ರೀರಂಗಂ ಮತ್ತು ತಂಜಾವೂರಿಗೆ. ಆಧ್ಯಾತ್ಮಿಕ ಶಾಂತಿ ಮತ್ತು ಅದ್ಭುತ ಶಿಲ್ಪಕಲೆಯ ಸಮ್ಮಿಲನವಾಗಿರುವ ಈ ತಾಣಗಳು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತವೆ.

ಇದನ್ನೂ ಓದಿ: ಹಬ್ಬಿದಾ ಮಲೆ ಮಧ್ಯದೊಳಗೆ….

ನಾವು ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟಾಗ ಮನಸ್ಸಿನಲ್ಲಿ ದರ್ಶನದ ಕಾತರವಿತ್ತು.

ಬೆಳಗಿನ ಜಾವದ ಹೊತ್ತಿಗೆ ನಾವು ಶ್ರೀರಂಗಂ ತಲುಪಿದ್ದೆವು. ಅಬ್ಬಾ! ಕತ್ತಲ ನಡುವೆ ಆ ದೇವಸ್ಥಾನದ ರಾಜಗೋಪುರಗಳು ದೀಪದ ಬೆಳಕಿನಲ್ಲಿ ಮಿಂದೇಳುತ್ತಿದ್ದ ರೀತಿ ವರ್ಣನಾತೀತ. ದೂರದಿಂದ ನೋಡಿದರೆ ಸಾಕ್ಷಾತ್ ತಿರುಪತಿ ಬೆಟ್ಟದ ದೀಪಾಲಂಕಾರವನ್ನೇ ಕಣ್ಣ ಮುಂದೆ ತಂದಂತಿತ್ತು. ಬೆಳಕಿನ ಹೊಳಪಿಗೆ ಆ ಭವ್ಯ ಗೋಪುರ ಬಂಗಾರದಂತೆ ಹೊಳೆಯುತ್ತಿದ್ದರೆ, ರಾತ್ರಿಯಿಡೀ ಪ್ರಯಾಣ ಮಾಡಿದ ನಮ್ಮೆಲ್ಲ ಆಯಾಸ ಕ್ಷಣಾರ್ಧದಲ್ಲಿ ಮರೆತುಹೋಗಿತ್ತು.

Untitled design - 2026-02-17T182640.625

ಶ್ರೀರಂಗನಾಥನ ದರ್ಶನಕ್ಕಾಗಿ ಸಾಲಿನಲ್ಲಿ ನಿಂತು, ಒಳಗೆ ಹೋದಾಗ ಶೇಷಶಯನನಾಗಿ ಮಲಗಿದ ಆ ರಂಗನಾಥನ ಭವ್ಯ ರೂಪವನ್ನು ಕಂಡು ಕಣ್ತುಂಬಿಕೊಂಡೆವು. ಕಾವೇರಿ ನದಿಯ ನಡುವೆ ನೆಲೆಸಿರುವ ಈ ರಂಗನಾಥ ಭಕ್ತರ ಪಾಲಿನ ಕಾಮಧೇನು.

ದರ್ಶನದ ನಂತರ ಅಲ್ಲಿನ ಪ್ರಸಾದ ಭೋಜನವಂತೂ ಅಮೃತದ ಸವಿ. ಅಲ್ಲಿಂದ ಸ್ವಲ್ಪವೇ ದೂರದಲ್ಲಿರುವ ರಾಘವೇಂದ್ರ ಮಠಕ್ಕೂ ಭೇಟಿ ನೀಡಿ ಗುರುಗಳ ದರ್ಶನ ಪಡೆದೆವು. ಅಲ್ಲಿನ ಪ್ರಶಾಂತತೆ ಮನಸ್ಸಿಗೆ ಅಪಾರ ನೆಮ್ಮದಿ ನೀಡಿತು.

ನಂತರ ನಮ್ಮ ಪಯಣ ಸಾಗಿದ್ದು ಶಿಲ್ಪಕಲೆಯ ತವರೂರು ತಂಜಾವೂರಿನತ್ತ. ಚೋಳರ ಕಾಲದ ವಾಸ್ತುಶಿಲ್ಪದ ವೈಭವವನ್ನು ಸಾರುವ ಇಲ್ಲಿನ ಬೃಹದೀಶ್ವರ ಮತ್ತು ಜಂಬುಲಿಂಗೇಶ್ವರ ದೇವಸ್ಥಾನಗಳು ಇತಿಹಾಸದ ಭವ್ಯತೆಯನ್ನು ಕಣ್ಣ ಮುಂದೆ ನಿಲ್ಲಿಸುತ್ತವೆ. ಸಾವಿರ ವರ್ಷಗಳ ಇತಿಹಾಸವಿದ್ದರೂ ಈ ದೇವಸ್ಥಾನದ ಗತ್ತು ಇಂದಿಗೂ ಕಡಿಮೆಯಾಗಿಲ್ಲ. ಬೃಹದೀಶ್ವರ ದೇವಸ್ಥಾನದ ಆವರಣ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಬೃಹದಾಕಾರದ ನಂದಿ ವಿಗ್ರಹ ನಮ್ಮನ್ನು ಸ್ವಾಗತಿಸುತ್ತದೆ. ಏಕಶಿಲೆಯಲ್ಲಿ ಕೆತ್ತಲಾದ ಈ ನಂದಿಯನ್ನು ನೋಡುತ್ತಾ ನಿಂತರೆ ಸಮಯ ಹೋಗುವುದೇ ತಿಳಿಯುವುದಿಲ್ಲ.

ಅಲ್ಲಿನ ಆವರಣದಲ್ಲಿ ತಿರುಗಾಡುವಾಗ ಚಿಕ್ಕದಾದ ಹನುಮನ ಗುಡಿಯೊಂದು ಕಂಡಿತು. ಅದರ ಎದುರು ದಂಪತಿಯೊಬ್ಬರು ಭಕ್ತರಿಗೆ ವಡೆ ಪ್ರಸಾದವನ್ನು ಹಂಚುತ್ತಿದ್ದರು. ಕುತೂಹಲ ತಾಳಲಾರದೆ ನಾವು ಅವರ ಬಳಿ ಹೋಗಿ, "ಇದೇನು ವಿಶೇಷ ಹರಕೆಯೇ?" ಎಂದು ಆಸಕ್ತಿಯಿಂದ ಕೇಳಿದೆವು. ಅದಕ್ಕವರು ಮುಗುಳ್ನಗುತ್ತಾ, "ಇದು ನಮ್ಮದೊಂದು ಹರಕೆ, ಅದರ ಉದ್ದೇಶವನ್ನಾಗಲಿ ಅಥವಾ ವಿಷಯವನ್ನಾಗಲಿ ಈಗ ತಿಳಿಸಲಾಗದು" ಎಂದು ವಿನಮ್ರವಾಗಿ ಉತ್ತರಿಸಿದರು. ಅವರ ನಂಬಿಕೆಗೆ ಗೌರವ ನೀಡಿ ನಾವು ಸುಮ್ಮನಾದೆವು. ಅಷ್ಟರಲ್ಲಾಗಲೇ ಭಾಷೆ ಬರದ ಆ ಪರವೂರಿನಲ್ಲಿ ನಮಗೆ ನಮ್ಮ ನಾಡಿನವರೇ ಆದ ಕನ್ನಡಿಗರು ಭೇಟಿಯಾದರು. ಅಪರಿಚಿತ ಊರಲ್ಲಿ ಪರಿಚಿತ ಭಾಷೆ ಕೇಳಿದಾಗ ಆಗುವ ಆನಂದವೇ ಬೇರೆ. ಅವರೊಂದಿಗೂ ಸ್ವಲ್ಪ ಕಾಲ ಹರಟೆ ಹೊಡೆದು ಕುಶಲೋಪರಿ ವಿಚಾರಿಸಿದೆವು.

Untitled design - 2026-02-17T182619.490

ವಿಶೇಷವಾಗಿ, ಸಾಯಂಕಾಲದ ಸಮಯದಲ್ಲಿ ಬೃಹದೀಶ್ವರ ದೇವಸ್ಥಾನದ ಆವರಣದಲ್ಲಿ ನಿಂತು ಸೂರ್ಯಾಸ್ತವನ್ನು ನೋಡುವುದೇ ಒಂದು ಯೋಗ. ಮುಳುಗುವ ಸೂರ್ಯನ ಕಿರಣಗಳು ಆ ಕಲ್ಲಿನ ಕೆತ್ತನೆಗಳ ಮೇಲೆ ಬಿದ್ದಾಗ ಮೂಡುವ ಆ ಕೇಸರಿ ಬಣ್ಣದ ದೃಶ್ಯ ಅವಿಸ್ಮರಣೀಯ. ಕತ್ತಲಾವರಿಸುತ್ತಿದ್ದಂತೆ ದೇವಸ್ಥಾನದ ಆವರಣದ ಎಲ್ಲಾ ಬೀದಿ ದೀಪಗಳು ಒಮ್ಮೆಲೇ ಹೊತ್ತಿಕೊಂಡವು. ನಾವು ಕಾರು ಹತ್ತಿ ಹೊರಡುವ ಹೊತ್ತಿಗೆ ಇಡೀ ದೇಗುಲದ ಸಂಕೀರ್ಣ ಮತ್ತೊಮ್ಮೆ ಬಂಗಾರದ ಬಣ್ಣದಲ್ಲಿ ಕಂಗೊಳಿಸತೊಡಗಿತು. ರಸ್ತೆಯಲ್ಲಿ ಸಾಗುತ್ತಿದ್ದಾಗಲೂ ದೂರದವರೆಗೂ ಕಾಣುತ್ತಿದ್ದ ಆ ಗೋಪುರದ ವೈಭವ ಮನಸ್ಸಿನಲ್ಲಿ ಅಚ್ಚೊತ್ತಿದಂತಿತ್ತು.

ದೇವಸ್ಥಾನದ ಆಚೆ ಬಂದರೆ ಸಾಲು ಸಾಲು ದೇಸಿ ಮಳಿಗೆಗಳು ಕಾಣಸಿಗುತ್ತವೆ. ಅಲ್ಲಿನ ಕರಕುಶಲ ವಸ್ತುಗಳು, ತಂಜಾವೂರು ಗೊಂಬೆಗಳು ಮತ್ತು ಕಲಾಕೃತಿಗಳು ನಮ್ಮನ್ನು ಆಕರ್ಷಿಸದೆ ಇರವು. ಅಲ್ಲಿ ಉಳಿದುಕೊಳ್ಳಲು ಅಥವಾ ಊಟಕ್ಕೆ ಯಾವುದೇ ತೊಂದರೆಯಿಲ್ಲ, ಪ್ರವಾಸಿಗರಿಗೆ ಎಲ್ಲವೂ ಅಚ್ಚುಕಟ್ಟಾಗಿದೆ. ಹಳೆಯ ಕಾಲದ ವೈಭವ ಮತ್ತು ಆಧ್ಯಾತ್ಮಿಕ ಶಾಂತಿ ಎರಡನ್ನೂ ಒಂದೇ ಸಲ ಅನುಭವಿಸಬೇಕೆಂದರೆ ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ