ದಕ್ಷಿಣ ಭಾರತದ ಗುಪ್ತ ಗಿರಿಧಾಮಗಳು
'ಮೇಘಮಲೈ' ಅಂದರೆ ಮೋಡದಿಂದ ಆವೃತವಾದ ಬೆಟ್ಟ ಎಂದರ್ಥ. ಈ ಬೆಟ್ಟದ ತಪ್ಪಲಿನಲ್ಲಿ ಅಸಂಖ್ಯ ಮೋಡಗಳು ಮನೆಮಾಡಿಕೊಂಡಿವೆ! ಇದು ಪಶ್ಚಿಮಘಟ್ಟದ ಸ್ವರ್ಗ. ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿದೆ. ಅಂಕುಡೊಂಕಾದ ರಸ್ತೆಗಳು, ದಟ್ಟವಾದ ಕಾಡು ಮತ್ತು ಬೆಟ್ಟವನ್ನು ನಿಧಾನಗತಿಯಲ್ಲಿ ಅಪ್ಪಿಕೊಳ್ಳುವ ಮೋಡಗಳು ಇಲ್ಲಿ ಮೋಡಿ ಮಾಡುತ್ತವೆ!
- ನವೀನಕೃಷ್ಣ ಎಸ್. ಉಪ್ಪಿನಂಗಡಿ
ದಕ್ಷಿಣ ಭಾರತದ ಗಿರಿಧಾಮಗಳೆಂದರೆ ಕೇವಲ ಮುನ್ನಾರ್, ಊಟಿ, ಕೊಡೈಕೆನಾಲ್ ಮಾತ್ರವಲ್ಲ. ಅದರ ಹೊರತಾಗಿಯೂ ನಾವು ನೋಡಲು ಹಲವು ಗಿರಿಧಾಮಗಳಿವೆ. ದಕ್ಷಿಣ ಭಾರತದ ಬೆಟ್ಟಗಳು ಸದಾ ಹಸಿರಿನಿಂದ ಆವೃತವಾಗಿರುತ್ತವೆ. ತೇಲುವ ಮೋಡಗಳು, ಕವಿದ ಮಂಜು, ಪಚ್ಚೆ ಇಳಿಜಾರುಗಳು, ಶುಭ್ರ ಗಾಳಿಯಿಂದ ಇಲ್ಲಿನ ಬೆಟ್ಟಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಏಕಾಂತ, ಶಾಂತಿ ಜತೆಗೆ ನೆಮ್ಮದಿ ದೊರೆಯುವ ತಾಣಗಳಿವು.
ವಾಗಮೋನ್
ವಾಗಮೋನ್ ಗಿರಿಧಾಮ, ಕೇರಳದ ಇಡುಕ್ಕಿ ಮತ್ತು ಕೊಟ್ಟಾಯಮ್ ಜಿಲ್ಲೆಗಳ ನಡುವೆ ಇದೆ. ಜನದಟ್ಟಣೆ ಇಲ್ಲ. ವಿಶಾಲ ಹುಲ್ಲುಗಾವಲು, ಎತ್ತರದ ಪೈನ್ ಕಾಡು ಮತ್ತು ಕಣಿವೆಗಳ ಮೇಲೆ ಬೀಳುವ ಮಂಜಿನಿಂದ ಮನಸಿಗೆ ಹಿತ ನೀಡುತ್ತದೆ. ಆಲ್ಪೈನ್ ಹುಲ್ಲುಗಾವಲಿಗೆ ಹೋಲಿಸಿದರೆ ವಾಗಮಾನ್ ಹುಲ್ಲುಗಾವಲು ನಡಿಗೆಗೆ ಸೂಕ್ತವಾಗಿದೆ. ಅಲ್ಲಿ ಗಾಳಿ ಮತ್ತು ದನಗಳು ಮೇಯುವ ಶಬ್ದ ಮಾತ್ರ ಕೇಳಿಬರುತ್ತದೆ. ಮೌನಕ್ಕೂ ಭಾಷೆ ಇದೆ ಎಂಬುದು ಇಲ್ಲಿ ಅರಿವಿಗೆ ಬರುತ್ತದೆ. ಸೂರ್ಯೋದಯ, ಸೂರ್ಯಾಸ್ತದ ಸಮಯದಲ್ಲಿನ ವಾಗಮೋನ್ ಸೌಂದರ್ಯವನ್ನು ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಇದು ಭಾರತದ ಪ್ಯಾರಾ ಗ್ಲೈಡಿಂಗ್ ಕೇಂದ್ರಗಳಲ್ಲಿ ಒಂದಾಗಿದ್ದು, ಸಾಹಸಪ್ರಿಯರಿಗೆ ಪ್ರಿಯವಾಗಿದೆ. ಇಲ್ಲಿನ ಸಣ್ಣ ಕುಟುಂಬಗಳು ಹೋಂ ಸ್ಟೇ ನಡೆಸುತ್ತವೆ. ಅವರು ಕೊಡುವ ಆಹಾರ ರುಚಿಯಾಗಿರುತ್ತದೆ. ಇಲ್ಲಿನ ರಸ್ತೆಗಳಲ್ಲಿ ಬೈಕ್ ರೈಡ್ ಮಾಡುವುದು ಸೊಗಸಾಗಿರುತ್ತದೆ. ನಗರದ ಗದ್ದಲಗಳಿಂದ ವಿರಾಮ ಬಯಸುವವರಿಗೆ ಇದು ಹೇಳಿಮಾಡಿಸಿದ ಜಾಗ.
ಸಮುದ್ರ ಮಟ್ಟದಿಂದ 11000ಮೀ ಎತ್ತರದಲ್ಲಿದೆ. ಎಲಪ್ಪಾರ-ಪುಲ್ಲಿಕ್ಕಣಂನ ಹತ್ತಿರದಲ್ಲಿದೆ. ಕೊಟ್ಟಾಯಮ್‌ನಿಂದ 65 ಕಿಮೀ ದೂರದಲ್ಲಿದೆ. ಕಾರು, ಟ್ಯಾಕ್ಸಿ, ಬಸ್ ವ್ಯವಸ್ಥೆಯಿದೆ. ಹತ್ತಿರದ ರೈಲ್ವೇ ನಿಲ್ದಾಣ ಕೊಟ್ಟಾಯಮ್. ಹತ್ತಿರದ ವಿಮಾನ ನಿಲ್ದಾಣ ಕೊಚ್ಚಿ.

ಕೋಟಗಿರಿ
ಇದು ನೀಲಗಿರಿಯ ಮ್ಯಾಜಿಕ್. ವಿಶೇಷವೆಂದರೆ ಇದು ಕಡಿಮೆ ವಾಣಿಜ್ಯೀಕರಣಗೊಂಡ ಗಿರಿಧಾಮಗಳಲ್ಲಿ ಒಂದು. ಊಟಿಯಿಂದ ಕೇವಲ 28ಕಿಮೀ ದೂರದಲ್ಲಿದೆ. ತಂಪು ಹವಾಮಾನ, ಪುರಾತನ ಪ್ರಪಂಚಕ್ಕೆ ಕಾಲಿಟ್ಟ ಅನುಭವ, ವಿಶಾಲ ಟೀ ಎಸ್ಟೇಟ್‌ಗಳು ಕೋಟಗಿರಿಯನ್ನು ವಿಶಿಷ್ಟ ಗಿರಿಧಾಮವಾಗಿಸಿವೆ.
ಇಲ್ಲಿನ ಚಹಾತೋಟಗಳು ಅಂತ್ಯವಿಲ್ಲದಂತೆ ಭಾಸವಾಗುತ್ತವೆ! ಇಲ್ಲಿನ ಕೊಡನಾಡ್ ಎಸ್ಟೇಟ್ ಅಥವಾ ಲಾಂಗ್ ವುಡ್ ಶೋಲಾದಲ್ಲಿ ನಡೆಯುವಾಗ ಚಿಟ್ಟೆ, ಪಕ್ಷಿಗಳು, ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತದೆ. ಕೋಟಗಿರಿಗೆ ಬಂದರೆ ಕ್ಯಾಥರೀನ್ ಜಲಪಾತಕ್ಕೆ ಸಾಗುವ ಚಾರಣ ಮಿಸ್ ಮಾಡಬೇಡಿ. ಹರಿಯುವ ಜಲಪಾತ, ಕೆಳಗಿನ ಕಣಿವೆ, ಆಹಾ.. ಎಲ್ಲವೂ ಸುಂದರ.
ಪುಟ್ಟ ಕೆಫೆಗಳು, ಪಾರಂಪರಿಕ ಕಟ್ಟಡಗಳು, ಹಳೆಯ ಪಾಕವಿಧಾನಗಳನ್ನು ಅನುಸರಿಸುವ ಬೇಕರಿಗಳಿಂದ ಕೋಟಗಿರಿ ಪಟ್ಟಣ ತುಂಬಿದೆ. ಇಲ್ಲಿ ಊಟಿಗಿಂತ ಕಡಿಮೆ ವಾಹನಗಳು ಓಡಾಡುತ್ತವೆ. ಶುದ್ಧ ಗಾಳಿಯಲ್ಲಿ ಉಸಿರಾಡಬಹುದು! ವೀಕ್ಷಣಾ ಸ್ಥಳಗಳೂ ಅಷ್ಟೇ ಅದ್ಭುತವಾಗಿವೆ. ಶಬ್ಧ ಮತ್ತು ದಟ್ಟಣೆಯನ್ನು ಹೊರತುಪಡಿಸಿ ಊಟಿ ನೀಡುವ ಎಲ್ಲಾ ಖುಷಿಗಳನ್ನು ಇದೂ ನೀಡುತ್ತದೆ!
ಇದು ತಮಿಳುನಾಡಿನ ನೀಲಿಗಿರಿ ಬೆಟ್ಟಗಳ ಸಾಲಿನ ಸುಂದರ ಗಿರಿಧಾಮ. ಸಮುದ್ರ ಮಟ್ಟದಿಂದ 1793 ಮೀ ಎತ್ತರದಲ್ಲಿದೆ. ಕೊಯಮತ್ತೂರಿನಿಂದ 66 ಕಿಮೀ ದೂರದಲ್ಲಿದೆ. ತಮಿಳುನಾಡಿನ ಸರಕಾರಿ ಸಾರಿಗೆ ಸೌಲಭ್ಯವಿದೆ. ಸಮೀಪದ ರೈಲ್ವೇ ನಿಲ್ದಾಣ ಮೆಟ್ಟುಪಾಳಯಮ್.
ಮೇಘಮಲೈ
'ಮೇಘಮಲೈ' ಹೆಸರು ಕೇಳುವಾಗ ರೋಮಾಂಚನ ಆಗುತ್ತದೆ. 'ಮೇಘಮಲೈ' ಅಂದರೆ ಮೋಡದಿಂದ ಆವೃತವಾದ ಬೆಟ್ಟ ಎಂದರ್ಥ. ಈ ಬೆಟ್ಟದ ತಪ್ಪಲಿನಲ್ಲಿ ಅಸಂಖ್ಯ ಮೋಡಗಳು ಮನೆಮಾಡಿಕೊಂಡಿವೆ! ಇದು ಪಶ್ಚಿಮಘಟ್ಟದ ಸ್ವರ್ಗ. ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿದೆ. ಅಂಕುಡೊಂಕಾದ ರಸ್ತೆಗಳು, ದಟ್ಟವಾದ ಕಾಡು ಮತ್ತು ಬೆಟ್ಟವನ್ನು ನಿಧಾನಗತಿಯಲ್ಲಿ ಅಪ್ಪಿಕೊಳ್ಳುವ ಮೋಡಗಳು ಇಲ್ಲಿ ಮೋಡಿ ಮಾಡುತ್ತವೆ!
ಇಲ್ಲಿನ ಮೆಣಸು, ಏಲಕ್ಕಿ ತೋಟಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಬೆಟ್ಟದ ಇಳಿಜಾರಿನಲ್ಲಿ ಚಹಾ ತೋಟಗಳಿವೆ. ಆಗಾಗ ಆನೆ, ಕಾಡೆಮ್ಮೆ ಮತ್ತು ಅಪರೂಪದ ಪಕ್ಷಿಗಳೂ ಕಾಣಿಸಿಕೊಳ್ಳುತ್ತವೆ. ಮೇಘಮಲೈನ ತಪ್ಪಲಿನಲ್ಲಿ ಮಣಾಲಾರ್, ಇರಮಂಗಲಾರ್ ಮತ್ತು ಮೇಘಮಲೈ ಅಣೆಕಟ್ಟು ವೀಕ್ಷಣಾ ತಾಣಗಳಿದ್ದು, ಪ್ರತಿಯೊಂದರಲ್ಲೂ ಮಂಜು ಕವಿದಿರುತ್ತದೆ.
ಸಮುದ್ರ ಮಟ್ಟದಿಂದ 1500 ಮೀ ಎತ್ತರದಲ್ಲಿದೆ. ಟ್ಯಾಕ್ಸಿ ಅಥವಾ ಜೀಪ್‌ನಲ್ಲಿ ಪ್ರಯಾಣಿಸುವುದು ಸೂಕ್ತ. ಹತ್ತಿರದ ರೈಲ್ವೇ ನಿಲ್ದಾಣ ಥೇಣಿ. ಹತ್ತಿರದ ವಿಮಾನ ನಿಲ್ದಾಣ ಮಧುರೈ.
ಯೆರ್ಕಾಡ್
ಪೂರ್ವ ಘಟ್ಟದಲ್ಲಿರುವ 'ಯೆರ್ಕಾಡ್' ದಕ್ಷಿಣ ಭಾರತದ ಇತರ ಗಿರಿಧಾಮಗಳಿಗಿಂತ ವಿಭಿನ್ನವಾಗಿದೆ. 'ಬಡವರ ಊಟಿ' ಎಂದು ಕರೆಯಲ್ಪಡುವ ಈ ಗಿರಿಧಾಮ ಶಾಂತಿಯುತವಾಗಿದೆ. ಇಲ್ಲಿ ಎಲ್ಲವೂ ಕೈಗೆಟಕುವ ಬೆಲೆಯಲ್ಲಿದ್ದರೂ ನಾವು ಗಳಿಸುವ ಅನುಭವ ಮಾತ್ರ ಶ್ರೀಮಂತವಾಗಿರುತ್ತದೆ. ಬ್ರಿಟಿಷ್ ಕಾಲದ ಹಲವು ಕುರುಹುಗಳು ಇಲ್ಲಿ ಸಿಗುತ್ತವೆ. ವಸಾಹತುಶಾಹಿ ಕಾಲದ ಭಾರತ ಹೇಗಿತ್ತು ಎಂಬ ಸ್ಥೂಲ ಚಿತ್ರಣ ದೊರೆಯುತ್ತದೆ.
32 ಕಿಮೀಗಳ ಲೂಪ್ ರಸ್ತೆ ಯೆರ್ಕಾಡ್‌ನ ವಿಶಿಷ್ಟತೆ. ತಿರುವುಗಳು, ಕಾಫಿ ಎಸ್ಟೇಟ್‌ಗಳು, ಮಸಾಲೆ ಪದಾರ್ಥಗಳ ತೋಟಗಳು, ಸಣ್ಣ ಬುಡಕಟ್ಟು ಹಳ್ಳಿಗಳು ತುಂಬಿದ ಮನೋಹರ ಪ್ರಯಾಣವಿದು. ಕಾಫಿಯನ್ನು ಬೆಳೆಯುವುದು, ಒಣಗಿಸುವುದು, ಸಂಸ್ಕರಿಸುವುದರ ಪರಿಚಯ ನಿಮಗಲ್ಲಿ ಆಗುತ್ತದೆ. ಇದು ತೋಟಗಾರಿಕಾ ಪ್ರವಾಸಕ್ಕೆ ಉತ್ತಮ ತಾಣ.

ಎಮರಾಲ್ಡ್ ಸರೋವರ ಇಲ್ಲಿನ ಕೇಂದ್ರಬಿಂದು. ಮುಂಜಾನೆ ನೀರಿನ ಮೇಲೆ ಮಂಜು ಆವರಿಸಿದಾಗ ಸರೋವರದ ನೋಟ ಸೊಗಸಾಗಿರುತ್ತದೆ. ಹತ್ತಿರದ ಅನ್ನಾ ಪಾರ್ಕ್, ರೋಸ್ ಗಾರ್ಡನ್ ಸರೋವರದ ಸೊಗಸಿಗೆ ಇಂಬು ನೀಡುತ್ತವೆ.
ಯೆರ್ಕಾಡ್, ಸಮುದ್ರ ಮಟ್ಟದಿಂದ 1515 ಮೀ ಎತ್ತರದಲ್ಲಿದೆ. 32ಕಿಮೀ ದೂರದ ಸೇಲಂನಿಂದ 20 ಹೇರ್‌ಪಿನ್ ತಿರುವುಗಳ ಪ್ರಸಿದ್ಧ ಲೂಪ್ ರಸ್ತೆಯ ಮೂಲಕ ಯೆರ್ಕಾಡ್ ತಲುಪಬಹುದು. ಹತ್ತಿರದ ರೈಲ್ವೇ ಮತ್ತು ವಿಮಾನ ನಿಲ್ದಾಣಗಳು ಸೇಲಂನಲ್ಲೇ ಇವೆ.
ಕಲ್ಪೆಟ್ಟ
ಕೇರಳದಲ್ಲಿನ ಕಲ್ಪೆಟ್ಟ ಮೊದಲು ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿತ್ತು. ಆಗ ಅದರ ಹೆಸರು 'ಕಲ್ಲುಪೇಟೆ'. ಮುಂದೆ ಮಲಯಾಳಿಗರ ಬಾಯಲ್ಲಿ 'ಕಲ್ಪೆಟ್ಟ' ಎಂದಾಯಿತು ಅಷ್ಟೇ! ಇದು ವಯನಾಡಿನ ಹೃದಯಭಾಗದಲ್ಲಿದೆ. ಹೆಚ್ಚೂಕಮ್ಮಿ ಇಲ್ಲಿನ ವೆದರ್ ಕೊಡಗಿನಂತಿದೆ. ಮಸಾಲೆ ಪದಾರ್ಥಗಳ ತೋಟಗಳು, ಬುಡಕಟ್ಟು ಸಂಸ್ಕೃತಿ, ವನ್ಯಜೀವಿಗಳ ವೀಕ್ಷಣೆಗಾಗಿ ಇಲ್ಲಿಗೆ ಬರಬೇಕು. ಪ್ರವಾಸಿಗರು ಹೃದಯದ ಆಕಾರದ ಪ್ರಸಿದ್ಧ 'ಚೆಂಬ್ರಾ' ಶಿಖರಕ್ಕೆ ಇಲ್ಲಿ ಚಾರಣ ಮಾಡಬಹುದು. ಭಾರತದ ಪ್ರಮುಖ ಗುಹೆಗಳಲ್ಲಿ ಒಂದಾದ ಎಡಕ್ಕಲ್ ಗುಹೆಗೆ ಭೇಟಿನೀಡಬಹುದು. ಮೀನ್ ಮುಟ್ಟಿ ಮತ್ತು ಸೂಚಿಪ್ಪಾರದಂಥ ಜಲಪಾತಗಳು ಕಾಡಿನ ಮಧ್ಯೆ ಉಲ್ಲಾಸಕರ ಅನುಭವ ನೀಡುತ್ತವೆ.
ಬಿದಿರಿನ ಗುಡಿಸಲುಗಳು, ಮರದ ಮನೆಗಳು, ಪರಿಸರ ಸ್ನೇಹಿ ಹೋಂ ಸ್ಟೇಗಳು, ತೋಟಗಾರಿಕೆ ಇಲ್ಲಿನ ವಿಶೇಷ. ಕಾಫಿ, ಏಲಕ್ಕಿ, ಮೆಣಸಿನ ಗಂಧ ಇಲ್ಲಿನ ಗಾಳಿಯಲ್ಲಿ ತುಂಬಿದೆ. ಕಿರಿದಾದ ರಸ್ತೆಗಳು ಇಲ್ಲಿನ ದಟ್ಟ ಹಸಿರಿನ ಮಧ್ಯೆ ಹಾದುಹೋಗುತ್ತವೆ. ವಯನಾಡಿನ ಬುಡಕಟ್ಟು ಪರಂಪರೆ - ವಿಶೇಷವಾಗಿ ಪನಿಯಾ ಮತ್ತು ಕುರಿಚಿಯಾಗಳ ಸಂಸ್ಕೃತಿಯನ್ನು ಕಾಣಲು ಕಲ್ಪೆಟ್ಟ ಸೂಕ್ತ ತಾಣ.
ಸಮುದ್ರಮಟ್ಟದಿಂದ 780 ಮೀ ಎತ್ತರದಲ್ಲಿನ ಇದು ವಯನಾಡ್‌ನ ಎಲ್ಲಾ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲು ಪ್ರವೇಶ ದ್ವಾರ! ಮೈಸೂರಿನಿಂದ 132 ಕಿಮೀ ದೂರದಲ್ಲಿದೆ. ಬಸ್ ಸೌಲಭ್ಯ ನಿಯಮಿತವಾಗಿದೆ. ಹತ್ತಿರದ ರೈಲ್ವೇ ನಿಲ್ದಾಣ ಕೋಯಿಕೋಡ್. ಹತ್ತಿರದ ವಿಮಾನ ನಿಲ್ದಾಣ ಕಣ್ಣೂರು.
ಇಂಥ ಅಪರೂಪದ ಗಿರಿಧಾಮಗಳಿಗೆ ಭೇಟಿ ನೀಡಿದಾಗ ಸ್ವಚ್ಛತೆ ನಿಮ್ಮ ಗಮನದಲ್ಲಿರಲಿ.