Tuesday, February 10, 2026
Tuesday, February 10, 2026

ಇದು ಒನ್ ಅಂಡ್ ಓನ್ಲೀ ಅಮ್ಮಂದಿರ ’ಮಾ’ರುಕಟ್ಟೆ!

ಇಲ್ಲಿನ ಪದ್ಧತಿಯಂತೆ, ಇಮಾ ಕೈಥೆಲ್‌ನಲ್ಲಿ ಮದುವೆಯಾದ ಮಹಿಳೆಯರು ಮಾತ್ರ ವ್ಯಾಪಾರ ಮಾಡುತ್ತಾರೆ. ಅಧಿಕೃತ ಜಾಗದಲ್ಲಿ ವ್ಯಾಪಾರ ನಡೆಸಲು ಭತ್ಯೆ ಪಡೆಯಲು, ನಿವೃತ್ತಿಯಾಗುವವರು ನಾಮನಿರ್ದೇಶನ (ನಾಮಿನೇಶನ್)ಮಾಡಬೇಕು. ಉತ್ತರಾಧಿಕಾರಿಯನ್ನು ಅವರೇ ಆಯ್ಕೆ ಮಾಡುತ್ತಾರೆ. ಅದು ಕುಟುಂಬದ ಸಂಬಂಧಿ, ಸಹೋದರಿ, ಮಗಳು ಅಥವಾ ಸೋದರ ಸಂಬಂಧಿ ಆಗಿರಬಹುದು. ಇಲ್ಲಿನ ಬಹಳಷ್ಟು ಅಂಗಡಿಗಳು ತಾಯಿಯಿಂದ ಮಗಳಿಗೆ ವಂಶ ಪಾರಂಪರ್ಯವಾಗಿ ಸಾಗುತ್ತಾ ಬಂದಿವೆ.

  • ವಿದ್ಯಾ ವಿ. ಹಾಲಭಾವಿ

“ಸೆವೆನ್ ಸಿಸ್ಟರ್ಸ್” ಎಂದೇ ಕರೆಯಲ್ಪಡುವ ಭಾರತದ ಈಶಾನ್ಯ ರಾಜ್ಯಗಳಲ್ಲಿ ಮಣಿಪುರವೂ ಒಂದಾಗಿದೆ. ಇಂಫಾಲ ನದಿ ದಡದಲ್ಲಿರುವ ಇಂಫಾಲ ಇದರ ರಾಜಧಾನಿ. ಇದು ಅತ್ಯಂತ ಸುಂದರ ಹಾಗೂ ಜನನಿಬಿಡ ನಗರ. ಈ ನಗರದ ಕೇಂದ್ರ ಭಾಗದಲ್ಲಿ ಅಪರೂಪದಲ್ಲೇ ಅಪರೂಪವೆನಿಸುವ ಮಾರುಕಟ್ಟೆಯೊಂದಿದೆ. ಇದು ಮಹಿಳಾ ಸಬಲೀಕರಣದ ನೋಟವನ್ನು ನೀಡುವ ವಿಶಿಷ್ಟ ಮಾರ್ಕೆಟ್. ಇಮಾ ಕೈಥೆಲ್ ಎಂಬ ಹೆಸರಿನ ಈ ಮಾರುಕಟ್ಟೆಯ ವಿಶೇಷವೇನು ಗೊತ್ತೇ? ಇಲ್ಲಿರುವ ಅಂಗಡಿಗಳನ್ನು ಸ್ತ್ರೀಯರು ಮಾತ್ರ ನಡೆಸುತ್ತಾರೆ. ಒಬ್ಬನೇ ಒಬ್ಬ ಪುರುಷನೂ ಇಲ್ಲಿನ ಸ್ಟಾಲ್‌ಗಳಲ್ಲಿ ಕಾಣಸಿಗುವುದಿಲ್ಲ! ಇದು ಮಣಿಪುರ ರಾಜ್ಯದಲ್ಲಿ ಒಂದು ವಾಣಿಜ್ಯ ಕೇಂದ್ರ ಮತ್ತು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.

ಇದನ್ನೂ ಓದಿ: ಯಾನಕ್ಕೊಂದು ಸುಂದರ ತಾಣ ಯಾಣ

ಇಮಾ ಕೈಥೆಲ್ ಎಂದರೆ ಸ್ಥಳೀಯ ಮೈತೆಯಿ ಭಾಷೆಯಲ್ಲಿ “ತಾಯಂದಿರ ಮಾರುಕಟ್ಟೆ” ಎಂಬರ್ಥ. ವಿವಾಹಿತ ಮಹಿಳೆಯರು ಮಾತ್ರ ಇಲ್ಲಿ ವ್ಯಾಪಾರಕ್ಕಾಗಿ ಅಂಗಡಿಗಳನ್ನು ಹೊಂದಲು ಅನುಮತಿ ಇದೆ. ಪುರುಷ ವ್ಯಾಪಾರಸ್ಥರು ಇದರ ಗಡಿಯೊಳಗೆ ಅಂಗಡಿ ಇಡುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಆದರೆ ಅವರು ಗ್ರಾಹಕರಾಗಿ, ಪೋರ್ಟರ್‌ಗಳಾಗಿ, ಕಾವಲುಗಾರರಾಗಿ ಅಥವಾ ಮಹಿಳೆಯರಿಗೆ ಚಹಾ, ಹಾಲು ಇತ್ಯಾದಿಗಳನ್ನು ಕೊಡಲು ಬರಬಹುದಾಗಿದೆ.

Untitled design (18)

ಮಾರುಕಟ್ಟೆಯನ್ನು ‘ಲೀಮರೆಲ್ ಸಿದಾಬಿ’, ‘ಎಮೋಯಿನು’ ಮತ್ತು ‘ಫೌಯಿಬಿ’ ಎನ್ನುವ ಮೈತೆಯಿ ದೇವತೆಗಳ ಹೆಸರಿನ ಮೂರು ದೊಡ್ಡ ಕಟ್ಟಡಗಳನ್ನಾಗಿ ವಿಂಗಡಿಸಲಾಗಿದೆ. ಸಾವಿರಾರು ಮಹಿಳೆಯರು ಸಾಂಪ್ರದಾಯಿಕ ಉಡುಪು ‘ಫೆನೆಕ್’ (ದೇಹದ ಕೆಳಭಾಗದಲ್ಲಿ ಧರಿಸುವ ಒಂದು ಬಗೆಯ ಲುಂಗಿ)ಮತ್ತು ಮೇಲೆ ‘ಇನೆಫಿಸ್’ (ಒಂದು ಬಗೆಯ ಶಾಲು) ಧರಿಸಿ ಇಲ್ಲಿ ಕುಳಿತು ಅಂಗಡಿಗಳನ್ನು ಅಲಂಕರಿಸುತ್ತಾರೆ. ಸುಮಾರು 5000 ರಿಂದ 6000 ದಷ್ಟು ಸಂಖ್ಯೆಯಲ್ಲಿ ಮಹಿಳಾ ವ್ಯಾಪಾರಸ್ಥರು ಇಲ್ಲಿದ್ದಾರೆ. ಥರಥರದ ಹೂಗಳು, ತಾಜಾ ತರಕಾರಿ ಹಣ್ಣುಗಳು, ಮೀನು, ಬಣ್ಣ ಬಣ್ಣದ ಬಟ್ಟೆಗಳು, ಕೈಯಿಂದಲೇ ತಯಾರಿಸಿದ ಆಭರಣಗಳು, ಚಪ್ಪಲಿ, ಕತ್ತಿಚಾಕು, ಮಡಿಕೆ, ಬುಟ್ಟಿ ಸಾಂಬಾರ ಪದಾರ್ಥ, ಮಣಿಪುರಿಯ ಖಾದ್ಯ ಮುಂತಾದವುಗಳೆಲ್ಲಾ ಈ ಮಾರುಕಟ್ಟೆಯಲ್ಲಿ ದೊರೆಯುತ್ತವೆ.

ಇಮಾ ಕೈಥೆಲ್ 16ನೆಯ ಶತಮಾನದಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಇದು “ಲುಲುಪ್-ಕಾಬಾ” (ಜೀತ ಪದ್ಧತಿ)ಯಿಂದ ಹುಟ್ಟಿಕೊಂಡಿತು. ಆ ಕಾಲದಲ್ಲಿ ಮೈತೆಯಿ ಸಮುದಾಯದ ಪುರುಷ ಸದಸ್ಯರು ಸೈನ್ಯದಲ್ಲಿ ಸೇವೆ ಮಾಡುವುದು ಅಥವಾ ದೂರದ ಊರುಗಳಲ್ಲಿ ಕೆಲಸ ಮಾಡುವುದು ಅಗತ್ಯವಾಗಿತ್ತು. ಮಹಿಳೆಯರು ಆರ್ಥಿಕತೆಯನ್ನು ನಿರ್ವಹಿಸುವುದು, ಹೊಲಗದ್ದೆಗಳಲ್ಲಿ ಬೆಳೆಗಳನ್ನು ಬೆಳೆಯುವುದು ಮತ್ತು ತಮ್ಮ ಕುಟುಂಬಗಳನ್ನು ಪೋಷಿಸಲು ಉತ್ಪನ್ನಗಳನ್ನು ಮಾರಾಟ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಅವರು ಹೊಲಗಳಲ್ಲಿ ಕೆಲಸ ಮಾಡಿ ಬಿತ್ತಿದ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದರು. ಇದು ಮಹಿಳೆಯರು ಮಾತ್ರ ಸರಕುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯ ಹುಟ್ಟಿಗೆ ಕಾರಣವಾಯಿತು. ಬ್ರಿಟಿಷ್ ಸರ್ಕಾರ ಮಣಿಪುರದಲ್ಲಿ ಆರ್ಥಿಕ ಸುಧಾರಣೆಗಳನ್ನು ಬಲವಂತವಾಗಿ ಜಾರಿಗೆ ತರಲು ಪ್ರಯತ್ನಿಸಿದಾಗ ಇಮಾ ಕೈಥೆಲ್‌ನ ಗಟ್ಟಿಗಿತ್ತಿಯರು ಅದನ್ನು ಬಹಿರಂಗವಾಗಿಯೇ ವಿರೋಧಿಸಿದರಂತೆ!

Untitled design (20)

ಯಾವುದೇ ಮಾಹಿತಿಯ ಮೂಲವಿಲ್ಲದಿದ್ದಾಗ ಸುತ್ತಮುತ್ತಲಿನ ಪ್ರದೇಶದ ಸುದ್ದಿಗಳನ್ನು ತಿಳಿದುಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಮಹಿಳೆಯರು ತಮ್ಮದೇ ಆದ ಸಂಘಟನೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಅಗತ್ಯವಿದ್ದಾಗ ಸ್ವಸಹಾಯ ಗುಂಪುಗಳಂತೆ ಸಾಲವನ್ನು ಸಹ ನೀಡುತ್ತಾರೆ.

ಇಲ್ಲಿನ ಪದ್ಧತಿಯಂತೆ, ಇಮಾ ಕೈಥೆಲ್‌ನಲ್ಲಿ ಮದುವೆಯಾದ ಮಹಿಳೆಯರು ಮಾತ್ರ ವ್ಯಾಪಾರ ಮಾಡುತ್ತಾರೆ. ಅಧಿಕೃತ ಜಾಗದಲ್ಲಿ ವ್ಯಾಪಾರ ನಡೆಸಲು ಭತ್ಯೆ ಪಡೆಯಲು, ನಿವೃತ್ತಿಯಾಗುವವರು ನಾಮನಿರ್ದೇಶನ (ನಾಮಿನೇಶನ್)ಮಾಡಬೇಕು. ಉತ್ತರಾಧಿಕಾರಿಯನ್ನು ಅವರೇ ಆಯ್ಕೆ ಮಾಡುತ್ತಾರೆ. ಅದು ಕುಟುಂಬದ ಸಂಬಂಧಿ, ಸಹೋದರಿ, ಮಗಳು ಅಥವಾ ಸೋದರ ಸಂಬಂಧಿ ಆಗಿರಬಹುದು. ಇಲ್ಲಿನ ಬಹಳಷ್ಟು ಅಂಗಡಿಗಳು ತಾಯಿಯಿಂದ ಮಗಳಿಗೆ ವಂಶ ಪಾರಂಪರ್ಯವಾಗಿ ಸಾಗುತ್ತಾ ಬಂದಿವೆ. ಮಾತೃಶಕ್ತಿಯ ಅದ್ಭುತ ಪರಿಚಯವನ್ನು ನೀಡುವ ಈ ಮಾರ್ಕೆಟ್ ಬಹುಶಃ ಮಹಿಳೆಯರು ಮಾತ್ರ ನಡೆಸುವ ವಿಶ್ವದ ಏಕೈಕ ಮಾರುಕಟ್ಟೆ ಎನ್ನಬಹುದು.

ನೀವು ಬೆಳಗಿನ ವೇಳೆಯಲ್ಲಿ ಈ ಮಾರ್ಕೆಟ್ ಗೆ ಬಂದರೆ ಹಿಸುಕಿದ ಆಲೂಗಡ್ಡೆ, ಬಿದಿರಿನ ಚಿಗುರು ಮತ್ತು ಒಣಗಿದ ಮೀನಿನ ಚಟ್ನಿಯಿಂದ ತಯಾರಿಸಿದ ಮಣಿಪುರಿ ಖಾದ್ಯ ‘ಈರೋಂಬಾ’ದ ಪರಿಮಳ ಘಂ ಎಂದು ಮೂಗಿಗೆ ಬಡಿಯುತ್ತದೆ. ಒಂದು ಮೂಲೆಯಲ್ಲಿ ತಾಯಂದಿರ ಗುಂಪು ವಿಳಂಬ ವಿತರಣೆ, ಕಳಪೆ ಉತ್ಪನ್ನದ ಬಗ್ಗೆ ಸುತ್ತುವರಿದು ನಿಂತು ಚರ್ಚಿಸುತ್ತಿರುತ್ತಾರೆ. ಈ ಮಧ್ಯೆ ಕೆಲವರು ಐಶ್ವರ್ಯ ದೇವತೆ ಹಾಗೂ ಮಾರುಕಟ್ಟೆಯ ರಕ್ಷಕಿ “ಇಮಾ ಇಮಾಯಿನು” ದೇವಾಲಯದಲ್ಲಿ ಕಾಣಿಕೆಗಳನ್ನು ಇಡಲು ಬರುತ್ತಾರೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಮಹಿಳೆಯರ ಮುಖಗಳು ನಿಮ್ಮನ್ನು ಆಕರ್ಷಿಸುತ್ತವೆ. ಸುತ್ತಮುತ್ತಲೂ ನಡೆಯುತ್ತಿರುವ ಗದ್ದಲವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ!

Untitled design (19)

ಪ್ರಸ್ತುತ ಕಾಲದಲ್ಲಿ ಇಮಾ ಮಾರುಕಟ್ಟೆಯು ಮಣಿಪುರದ ಸಮಾನತಾವಾದಿ ಸಮಾಜದ ಸೂಕ್ಷ್ಮ ರೂಪವಾಗಿದೆ ಈ ರಾಜ್ಯವು ಭಾರತದಲ್ಲಿಯೇ ಅತೀ ಹೆಚ್ಚು ಮಹಿಳಾ ಸಾಕ್ಷರತೆಯನ್ನು ಹೊಂದಿದೆ ಮತ್ತು ದೇಶಾದ್ಯಂತ ಲಿಂಗ ಸಮಾನತೆಗೆ ಉದಾಹರಣೆಯೂ ಆಗಿದೆ.

ಸಮೀಕ್ಷೆಯೊಂದರ ಪ್ರಕಾರ ಇಮಾ ಕೈಥೆಲ್‌ನ ಮಹಿಳಾ ವ್ಯಾಪಾರಿಗಳು ವರ್ಷಕ್ಕೆ 73000 ರಿಂದ 2,00,000 ರುಪಾಯಿಗಳಷ್ಟು ದುಡಿಮೆ ಮಾಡುತ್ತಾರೆ. 2003ರಲ್ಲಿ ಇಲ್ಲಿನ ಸರಕಾರವು ಈ ಮಾರುಕಟ್ಟೆಯನ್ನು ಸೂಪರ್ ಮಾರ್ಕೆಟ್ ಆಗಿ ಬದಲಾವಣೆ ಮಾಡಲು ಯೋಚಿಸಿತ್ತಂತೆ. ಆದರೆ ಮಹಿಳಾ ವ್ಯಾಪಾರಿಗಳು ಇದನ್ನು ಬಲವಾಗಿ ವಿರೋಧಿಸಿದರಂತೆ.

ಒಟ್ಟಿನಲ್ಲಿ ಇಮಾ ಕೈಥೆಲ್ ಮಹಿಳಾ ಸ್ವಾವಲಂಬಿ ಬದುಕಿನ ಕೈಗನ್ನಡಿಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!