ಅಬ್ದುಲ್ ಕಲಾಂರ ಚಿರ ನೆನಪಿನಲ್ಲಿ
ಕಲಾಂರವರ ಆಶಯದಂತೆ ಭಾರತದ ಏಕತೆಯನ್ನು ಸಾರುವ ಸಲುವಾಗಿ, ಕಟ್ಟಡಕ್ಕೆ ಉಪಯೋಗಿಸಿರುವ ಹಳದಿ ಬಣ್ಣದ ಕಲ್ಲುಗಳನ್ನು ಪಾಕಿಸ್ತಾನದ ಬಳಿಯಿಂದ ತರಲಾಗಿದೆ. ಕಟ್ಟಡದ ಮರಳು, ಸಾಮಗ್ರಿಗಳನ್ನು ದೇಶದ ವಿವಿಧ ಭಾಗದಿಂದ ತಂದು ಇಲ್ಲಿ ಉಪಯೋಗಿಸಲಾಗಿದೆ. ಕಲಾಂರವರ ಏಕಭಾರತದ ಪರಿಕಲ್ಪನೆಯು ಇಲ್ಲಿ ಸಾಕರಗೊಂಡಿದೆ.
- ಎಸ್.ಸುರೇಶ್
ಭಾರತದ 11ನೇ ರಾಷ್ಟ್ರಪತಿಯಾಗಿ, ಏರೋಸ್ಪೇಸ್ ಇಂಜಿನಿಯರ್, ವಿಜ್ಞಾನಿ, ಲೇಖಕರಾಗಿ, ಸಮಾಜ ಸೇವಕರಾಗಿ, ಎಲ್ಲರಿಗೂ ಚಿರಪರಿಚಿತರಾದ ವ್ಯಕ್ತಿ, ಆಬಾಲವೃದ್ಧರಾಗಿ ಎಲ್ಲರೂ ಮೆಚ್ಚುವ, ಪ್ರೀತಿಸುವ ಅದ್ಭುತ ಚೇತನ.

ಇಸ್ರೋದಲ್ಲಿ ಭಾರತದ ನಾಗರಿಕ ಬಾಹ್ಯಕಾಶ ಕಾರ್ಯಕ್ರಮಗಳಲ್ಲಿ ನಾಲ್ಕು ದಶಕಗಳ ಕಾಲ ವಿಜ್ಞಾನಿಯಾಗಿ, ವಿಜ್ಞಾನ ವ್ಯವಸ್ಥಪಕರಾಗಿ, ಭಾರತಕ್ಕೆ ತಮ್ಮ ಆಮೋಘ ಸೇವೆ ಸಲ್ಲಿಸಿ, DRDO ಬ್ಯಾಲೆಸ್ಟಿಕ್ ಮಿಸೈಲ್ ಮತ್ತು ಲಾಂಜ್ ವೆಹಿಕಲ್ ಟೆಕ್ನಾಲಜಿ, 1998 ರ ಪೋಕ್ರಾನ್-2 ನ್ಯೂಕ್ಲಿಯರ್ ಟೆಸ್ಟ್‌ಗಳಲ್ಲಿ ಮಾಡಿದ ಸಾಧನೆಗಾಗಿ ಭಾರತದ ಕ್ಷಿಪಣಿ ಮಾನವ ಎಂದು ಬಿರುದನ್ನು ಪಡೆದ ವ್ಯಕ್ತಿ. ಬ್ರಹ್ಮಚಾರಿಯಾಗಿದ್ದ ಅವರು ತಮ್ಮ ಇಡೀ ಜೀವನವನ್ನು ಅಧ್ಯಯನ, ಸಂಶೋಧನೆ ಬಾಹ್ಯಾಕಾಶ ಯೋಜನೆಗಳಿಗೆ, ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಗಳಿಗಾಗಿ ಮೀಸಲಿಟ್ಟು ಭಾರತದ ಅತ್ಯನುತ ನಾಗರಿಕ ಪ್ರಶಸ್ತಿ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಆ ಸರಳತೆ ಪ್ರಾಮಾಣಿಕತೆ ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ, ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನ ಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದವರು. ಮದ್ರಾಸ್ ಪ್ರಸಿಡೆನ್ಸಿ ಕಾಲದಲ್ಲಿ ದಕ್ಷಿಣ ಭಾರತದ ರಾಮೇಶ್ವರಂನಲ್ಲಿ ಜನಿಸಿ, ಪೂರ್ವ ಭಾರತದ ಮೇಘಾಲಯದ ಶಿಲಾಂಗ್‌ನಲ್ಲಿ ನಿಧನರಾದರು. 83 ವರ್ಷಗಳ ತುಂಬು ಜೀವನ ನೆಡೆಸಿದರು. ಇಂಥ ಮಹಾನ್ ವ್ಯಕ್ತಿಯ ಸಮಗ್ರ ಪರಿಚಯಕ್ಕಾಗಿ ರಾಮೇಶ್ವರದಲ್ಲಿ ಸ್ಥಾಪಿತಗೊಂಡು ಪ್ರಧಾನ ಮಂತ್ರಿಗಳಿಂದ ಉದ್ಗಟನೆಗೊಂಡ ಸ್ಥಳವೇ ʻAbdul kalm Memorial Hallʼ. ಇಲ್ಲಿಯ ಕಟ್ಟಡವು 3 ಎಕರೆ ಪ್ರದೇಶದಲ್ಲಿ ಇಂಡೋ ಮೊಘಲ್ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಮುಖ್ಯ ದ್ವಾರವು ಇಂಡಿಯಾ ಗೇಟ್ ಮಾದರಿಯಲ್ಲಿದೆ. ಮುಂಬಾಗಿಲು ತಂಜಾವೂರಿನ ಬೃಹದೇಶ್ವರ ದೇವಸ್ಥಾನದ ಬಾಗಿಲನ ಮಾದರಿಯಲ್ಲಿದೆ. ಕಟ್ಟಡದ ಗುಮ್ಮಟ ರಾಷ್ಟ್ರಪತಿ ಭವನದಂತಿದೆ.
ಕಲಾಂರವರ ಆಶಯದಂತೆ ಭಾರತದ ಏಕತೆಯನ್ನು ಸಾರುವ ಸಲುವಾಗಿ, ಕಟ್ಟಡಕ್ಕೆ ಉಪಯೋಗಿಸಿರುವ ಹಳದಿ ಬಣ್ಣದ ಕಲ್ಲುಗಳನ್ನು ಪಾಕಿಸ್ತಾನದ ಬಳಿಯಿಂದ ತರಲಾಗಿದೆ. ಕಟ್ಟಡದ ಮರಳು, ಸಾಮಗ್ರಿಗಳನ್ನು ದೇಶದ ವಿವಿಧ ಭಾಗದಿಂದ ತಂದು ಇಲ್ಲಿ ಉಪಯೋಗಿಸಲಾಗಿದೆ. ಕಲಾಂರವರ ಏಕಭಾರತದ ಪರಿಕಲ್ಪನೆಯು ಇಲ್ಲಿ ಸಾಕರಗೊಂಡಿದೆ. ಒಟ್ಟು ಕಟ್ಟಡದಲ್ಲಿರುವ ನಾಲ್ಕು ಹಾಲ್‌ಗಳ ತುಂಬಾ ಕಲಾಂರವರ ಜೀವನದ ವಿವಿಧ ಘಟ್ಟವನ್ನು ಪರಿಚಯಿಸಲಾಗಿದೆ. ಅವರ ಜೀವನ ಕ್ರಮವನ್ನು ತಿಳಿಸಿ ಕೊಡಲು ನೂರಾರು ಭಾವಚಿತ್ರಗಳು ಇಲ್ಲಿ ತುಂಬಿಕೊಂಡಿವೆ. ಫೋಕ್ರಾನ್ ನ್ಯೂಕ್ಲಿಯಾರ್ ಟೆಸ್ಟ್, ರಾಷ್ಟ್ರಪತಿಯ ಸ್ಥಾನವನ್ನು ಅಲಂಕರಿಸಿರುವ ರೀತಿಯ ಮಾದರಿಗಳನ್ನು ಇಡಲಾಗಿದೆ. ಭಾರತದ ನಾಗರಿಕ, ಬಾಹ್ಯಕಾಶ ಮತ್ತು ಕ್ಷಿಪಣಿಗಳಲ್ಲಿನ ಇವರ ಸೇವೆಯನ್ನು ಗುರುತಿಸುವುದಕ್ಕಾಗಿ ಇವರ ಕಂಚಿನ ಪ್ರತಿಮೆ ಮತ್ತು ರಾಕೆಟ್ ಮಿಸೈಲ್‌ಗಳ ಪ್ರತಿರೂಪವನ್ನು ಸುತ್ತಲಿನ ಉದ್ಯಾನದಲ್ಲಿ ಸ್ಥಾಪಿಸಲಾಗಿದೆ.

ಎರಡನೇ ಹಂತವಾಗಿ ಲೈಬ್ರರಿ, ಪ್ಲಾನೆಟೋರಿಯಂ ಮತ್ತು ಸಭಾಂಗಣವನ್ನು ನಿರ್ಮಾಣ ಮಾಡಿ, ಮುಂದಿನ ದಿನಗಳಲ್ಲಿ ಜ್ಞಾನ ಕೇಂದ್ರವಾಗಿ ಬೆಳೆಸುವ ಉದ್ದೇಶವಿದೆ. ಇದರಿಂದಾಗಿ ರಾಮೇಶ್ವರಂ ಕೇವಲ ಒಂದು ಯಾತ್ರ ಸ್ಥಳವಾಗಿರದೆ, ಪ್ರವಾಸಿಗರಿಗೆ ಒಂದು ಜ್ಞಾನರ್ಜನೆಯ ಸ್ಥಳವಾಗಿಯೂ ಬದಲಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಕಲಾಂರ ಜೀವನಗಾಥೆಯ ಪರಿಚಯವಾಗುತ್ತದೆ. ಇಡೀ ಕಟ್ಟಡದ ತುಂಬ ತುಂಬಿರುವ ಎಲ್ಲ ಚಿತ್ರಣವನ್ನು ಮನಸ್ಸಿನಲ್ಲಿ ತುಂಬಿಕೊಂಡು, ಚಿರನಿದ್ರೆಯಲ್ಲಿರುವ ಅವರ ಸಮಾದಿಯ ಮುಂದೆ ಬಂದು ನಿಂತಾಗ, ಇವರು ನಮಗಾಗಿ ಇನಷ್ಟು ದಿನಗಳ ಕಾಲ ಇರಬಾರದಿತ್ತೆ ಎಂದು ಮನ ಹಂಬಲಿಸಿ, ಮನಸ್ಸು ತುಂಬಾ ಭಾವುಕವಾಗಿ ನಮಗೆ ಅರಿವಿಲ್ಲದಂತೆ ತಟ್ಟನೆ ಎರಡು ಹನಿ ಕಂಬನಿಗಳು ಜಾರುವುದು ಸುಳ್ಳಲ್ಲ.