- ರಂಗು ಚಿತ್ರದುರ್ಗ

ವಿದೇಶಗಳಲ್ಲೂ ಉಳಿ - ಸುತ್ತಿಗೆ ಇಟ್ಟು ಕಲ್ಲು ಕೆತ್ತುವಾಗ ನಮ್ಮ ದೇಶದ ಮೂರ್ತಿ ಶಿಲ್ಪಗಳು ರಾರಾಜಿಸುತ್ತಿದ್ದವು. ಇದು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಇಂದಿನ ಚಾಟ್‌ ಜಿಪಿಟಿಯಂಥ ಎಐ ಟೂಲ್‌ಗಳನ್ನು ಕಂಡು ವಿಜ್ಞಾನ ಶಿಖರದ ತುದಿ ಮುಟ್ಟಿದ್ದೇವೆ ಎಂದು ನಾವು ಬೀಗುತ್ತೇವೆ. ಇದು ನಿಜವಾದ ಬೆಳವಣಿಗೆಯಲ್ಲ. ಗೂಗಲ್‌ ಇಲ್ಲದ ಕಾಲದಲ್ಲಿ ಬೆಳೆದು ಬಂದ ವೈಜ್ಞಾನಿಕ ಹಾದಿ ನೋಡಿದರೆ ನಾವು ನಿಬ್ಬೆರಗಾಗುತ್ತೇವೆ. ಅಂಥದ್ದೆ ಒಂದು ಹಾದಿ ತುಳಿಸುತ್ತೇನೆ ಬನ್ನಿ. ಜಂತರ್‌ ಮಂತರ್‌, ಇದು ಭಾರತದ ಖಗೋಳ ಜ್ಞಾನದ ಸಂಕೇತ. ಈ ಭವ್ಯ ಸ್ಮಾರಕ ನಮ್ಮ ಸಾಂಸ್ಕೃತಿಕ ಪರಂಪರೆ ಜತೆಗೆ ಕಲೆ, ವಿಜ್ಞಾನ ಮತ್ತು ಇತಿಹಾಸದ ಸಾವಿರ ಪಾಠ ಹೇಳುತ್ತದೆ. ವಿಶ್ವಪರಂಪರೆಯ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಈ ವೀಕ್ಷಣಾಲಯವು ಭಾರತ ಜಾಗತಿಕ ಖಗೋಳ ಶಾಸ್ತ್ರಕ್ಕೆ ಮತ್ತು ವಾಸ್ತುಶಿಲ್ಪಕ್ಕೆ ಕೊಟ್ಟ ಮಹತ್ವದ ಕೊಡುಗೆಯಾಗಿದೆ.

Untitled design (11)

ಖಗೋಳ ಅಂದರೆ ಕತ್ತಲಲ್ಲಿ ನಿಂತು ನೋಡುವುದು, ಕಣ್ಣಿಗೆ ಕಂಡದ್ದನ್ನೆಲ್ಲಾ ಅನುಭವಿಸಿ ಆನಂದಿಸುವುದು, ಜತೆಗೆ ಕಲ್ಪನಾ ಲೋಕದಲ್ಲಿ ನೀರಿಲ್ಲದೇ ಈಜಾಡಿಸಬಲ್ಲ, ಗಾಳಿಯಿಲ್ಲದೇ ತೇಲಾಡಿಸಬಲ್ಲ ಶಕ್ತಿ ಹೊಂದಿರುವಂಥದ್ದು. ಹದಿನೆಂಟನೆಯ ಶತಮಾನದಲ್ಲಿ ಮಹರಾಜ ಸವಾಯಿ ಜೈ ಸಿಂಗ್‌ ಕಣ್ಣಲ್ಲಿ ಕಂಡ ಕಲ್ಪನೆಯ ಬುನಾದಿ ಮೇಲೆ ನಿಂತಿರುವ ಈ ವೀಕ್ಷಣಾಲಯ ಭವ್ಯ ಭಾರತದ ವಿಜ್ಞಾನದ ಹಿನ್ನೆಲೆಯನ್ನು ಪರಿಚಯಿಸುತ್ತದೆ. ಇದು ವೈಜ್ಞಾನಿಕ ಪ್ರತಿಭೆ, ಸೃಜನಶೀಲ ವಾಸ್ತುಶಿಲ್ಪ, ಆಕರ್ಷಕ ವಿನ್ಯಾಸ ಹೊಂದಿದ್ದು, ವಿಶ್ವದ ಭೂಪಟದಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತಾಗಿ ಉಳಿದಿದೆ. 18ನೆಯ ಶತಮಾನದ ಪೂರ್ವಾರ್ಧದಲ್ಲಿ ಮರುಭೂಮಿ ರಾಜ್ಯದಲ್ಲಿ ನೆಲೆನಿಂತ ಈ ಭವ್ಯಸ್ಮಾರಕ ವೈಜ್ಞನಿಕ ಸಂಸ್ಕೃತಿ ಮತ್ತು ವಿಶ್ವವಿಜ್ಞಾನ ರಾಜಮನೆತನದ ಸಂಕೇತವಾಗಿತ್ತು. ಹದಿನೈದು ಶತಮಾನಗಳಿಗೂ ಹೆಚ್ಚು ಕಾಲ ಪಾಶ್ಚಿಮಾತ್ಯ, ಮಧ್ಯಪ್ರಾಚ್ಯ, ಏಷ್ಯನ್‌ ಮತ್ತು ಆಫ್ರಿಕನ್‌ ಧರ್ಮಗಳ ಸಾಲಿನಲ್ಲಿ ಪ್ರಸಿದ್ಧಿ ಪಡೆದ ಪ್ರಾಚೀನ ವಿಶ್ವವಿಜ್ಞಾನ, ಖಗೋಳ ಸಂಪ್ರಾದಾಯಕ್ಕೆ ಸಾಕ್ಷಿಯಾಗಿದೆ.

ವಾಸ್ತು ಶಿಲ್ಪ

ಜಂತರ್‌ ಮಂತರ್‌ ಸ್ಮಾರಕದ ರಚನೆಯ ವಾಸ್ತುಶಿಲ್ಪ ಮನಮೋಹಕವಾಗಿದೆ. ಕಲ್ಲು, ಹಿತ್ತಾಳೆ ಮತ್ತು ಮರದ ತುಂಡುಗಳು ವಿನ್ಯಾಸಕ್ಕೆ ಮೆರಗು ನೀಡಿವೆ. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ, ವಿಶ್ವದ ಅತಿದೊಡ್ಡ, 27 ಮೀಟರ್ ಎತ್ತರ ಮತ್ತು 44 ಮೀಟರ್ ಅಗಲವಿರುವ ಸೂರ್ಯ ಗಡಿಯಾರವಾದ ಸಾಮ್ರಾಟ್‌ ಯಂತ್ರ. ಶತಮಾನಗಳ ಹಿಂದೆ ಕರಕುಶಲ ಮತ್ತು ಎಂಜಿನಿಯರಿಂಗ್‌ ಜ್ಞಾನದ ಸಂಕೇತವಾಗಿದೆ. ಅಂದಿನ ಎಂಜಿನಿಯರ್‌ಗಳು ತುಂಬಾ ಸೃಜನಾತ್ಮಕವಾಗಿ ತಯಾರಿಸಿದ್ದು, ವಿಜ್ಞಾನ ಮತ್ತು ಪಾರಂಪರಿಕ ಕಲೆಯ ನಡುವಿನ ಸಾಮರಸ್ಯಕ್ಕೆ ಮುನ್ನುಡಿ ಬರೆದಿದೆ. ಹೀಗಾಗಿ ಈ ಸ್ಥಳ ಅಸಂಖ್ಯಾತ ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುತ್ತದೆ.

ಸಾಂಸ್ಕೃತಿಕ ಮಹತ್ವ

ರಾಜ ಮನೆತನದ ಸಂಸ್ಕೃತಿ ಮತ್ತು ಕಲಾ ಪರಂಪರೆಗೆ ಹೆಸರುವಾಸಿಯಾಗಿರುವ ಜೈಪುರ, ವಿಜ್ಞಾನದ ನೆಲೆಯಲ್ಲಿ ಮತ್ತಷ್ಟು ವಿಶೇಷವಾಗಿದೆ. ಬೌದ್ಧಿಕ ವಿನಿಮಯ ಮತ್ತು ಸಹಿಷ್ಣತೆಯ ವಾತವರಣವನ್ನು ಕಲ್ಪಿಸಿ ಸಾಮರಸ್ಯ ಮೂಡಲು ಮುಖ್ಯ ಪಾತ್ರ ವಹಿಸಿತು. ಇದು ಕೇವಲ ಭೂತಕಾಲದ ಒಂದು ಅನ್ವೇಷಣೆಯ ವ್ಯಾಪ್ತಿಗೆ ಸೀಮಿತಗೊಳ್ಳದೆ, ಕಡಿವಾಣವಿಲ್ಲದ ಹುಚ್ಚುಕುದುರೆಯಂತೆ ಸಾಗುತ್ತಿರುವ ಇಂದಿನ ಯಂತ್ರ ಜಗತ್ತಿಗೆ ಹಲವು ಆಯಾಮಗಳಲ್ಲಿ ಸಹಕಾರಿಯಾಗುತ್ತಿದೆ. ಈ ಮೂಲಕ ವಿಶ್ವವಿಜ್ಞಾನದ ಬೆಳವಣಿಗೆಗೆ ಅಡಿಪಾಯ ಹಾಕಿತು ಎನ್ನಬಹುದು.

Untitled design (10)

ಪ್ರವಾಸಿಗನಿಗೆ ಜಂತರ್‌ ಮಂತರ್‌

ಇದು ಕೇವಲ ವಿಜ್ಞಾನಕ್ಕೆ ಸಂಬಂಧಿಸಿದ ಒಂದು ಸ್ಮಾರಕವಾಗಿರದೆ, ಪ್ರವಾಸಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇತಿಹಾಸ ಅಧ್ಯಯನ ಮಾಡುವವರು, ವಿಜ್ಞಾನಕ್ಕೆ ಸಂಬಂಧಿಸಿದ ಅಧ್ಯಯನಗಳಲ್ಲಿ ತೊಡಗಿಕೊಂಡವರು, ಸಾಹಿತಿಗಳು ಸೇರಿದಂತೆ ಅನೇಕರು ವರ್ಷವಿಡೀ ನಿರಂತರವಾಗಿ ಭೇಟಿ ನೀಡಿ ಅಗಾಧ ಅನುಭವ ಹೊತ್ತು ತರುತ್ತಾರೆ. ನಿರ್ಮಾಣ ಕಾಲದಲ್ಲಿ ಬಳಕೆಯಲ್ಲಿದ್ದ ಕೆಲ ಅಪರೂಪದ ಉಪಕರಣಗಳ ಸಂಗ್ರಹವೂ ಇಲ್ಲಿದೆ.

ದಾರಿ ಹೇಗೆ?

ದೆಹಲಿ ನಗರದಲ್ಲಿ ಸಂಚಾರಕ್ಕೆಂದು ಮೆಟ್ರೋ ಮಿತ್ರನಿದ್ದಾನೆ. ಜಂತರ್ ಮಂತರ್ ತಲುಪಲು ಮೆಟ್ರೋ ಅತ್ಯಂತ ವೇಗದ, ಹಾಗೂ ಕಡಿಮೆ ವೆಚ್ಚದ ಸಾರಿಗೆಯಾಗಿದೆ. ಹತ್ತಿರದ ಮೆಟ್ರೋ ನಿಲ್ದಾಣಗಳು ಪಟೇಲ್ ಚೌಕ್ ಮತ್ತು ಜನಪತ್. ಪಟೇಲ್ ಚೌಕ್‌ನಿಂದ ಜಂತರ್ ಮಂತರ್ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದು, ಕಾಲ್ನಡಿಗೆ, ಆಟೋ ಮೂಲಕ ಸುಲಭವಾಗಿ ತಲುಪಬಹುದು. ವಯೊಲೆಟ್ ಲೈನ್‌ನ ಜನಪತ್ ನಿಲ್ದಾಣ ಜಂತರ್ ಮಂತರ್‌ಗೆ ಇನ್ನೂ ಹತ್ತಿರವಾಗಿದ್ದು, ಅಲ್ಲಿ ಇಳಿದ ಕೂಡಲೇ ಕಾಲುದಾರಿಯಲ್ಲೇ ಸ್ಮಾರಕವನ್ನು ತಲುಪಬಹುದು.

ಬಸ್‌ನಲ್ಲಿ ಹೋಗುವುದು ಹೇಗೆ?

ದೆಹಲಿ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಬಸ್‌ಗಳು ಜಂತರ್ ಮಂತರ್ ಸುತ್ತಲಿನ ಪ್ರದೇಶಗಳಿಗೆ ನಿರಂತರವಾಗಿ ಓಡಾಡುತ್ತವೆ. ಕಾನಾಟ್ ಪ್ಲೇಸ್, ಸಂಸತ್ ಮಾರ್ಗ, ಜನಪತ್ ಪ್ರದೇಶಗಳಿಗೆ ಬಸ್‍ಗಳು ನಿರಂತರವಾಗಿ ಸಂಚಾರ ನಡೆಸುತ್ತಿವೆ.