• ಹಿಮೇಶ್

ಮನಾಲಿ ಎಂಬ ಭೂಸ್ವರ್ಗ ಭಾರತದ ಪ್ರತಿಯೊಬ್ಬರ ಬಕೆಟ್ ಲಿಸ್ಟಿನ ತಾಣ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಮನಾಲಿ ಮೇಲೆ ಒಂಥರ ಕ್ರಶ್. ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಹೋಗಿ ಹಾಗೇ ವಾಪಸ್ ಬಂದರೆ ಅದು ಅಪೂರ್ಣ ಪ್ರವಾಸ. ನೀವು ಸಾಹಸಪ್ರಿಯರಾಗಿದ್ದರೆ ರೋಥಾಂಗ್ ಪಾಸ್ ನೋಡಲೇಬೇಕು.

ರೋಥಾಂಗ್ ಪಾಸ್ ಇರೋದು ಮನಾಲಿಯಿಂದ ಸುಮಾರು 51 ಕಿಮೀ ದೂರದಲ್ಲಿ. ಇಂಜಿನಿಯರಿಂಗ್ ಅದ್ಭುತ ಎನಿಸಿಕೊಂಡಿರೋ ಅಟಲ್ ಟನೆಲ್ ಕೂಡ ನೀವು ಇಲ್ಲಿಂದ ಕಣ್ಣಳತೆ ದೂರದಲ್ಲೇ ಸಿಗುತ್ತದೆ.

Rothang Pass3

ರೋಥಾಂಗ್ ಪಾಸ್​ನ ಸೌಂದರ್ಯವನ್ನು ವರ್ಣಿಸಲು ಶಬ್ದಗಳು ಕಡಿಮೆ ಎನಿಸಬಹುದು. ಮನಾಲಿಯಿಂದ ಹಾವಿನಾಕರಾದ ದಾರಿಯಲ್ಲಿ ಶಿಖರ ಏರಿ ಸುಮಾರು 51 ಕಿಮೀ ಪ್ರಯಾಣ ಮಾಡಿದರೆ ರೋಥಾಂಗ್ ಪಾಸ್ ಸಿಗುತ್ತದೆ. ಇಲ್ಲಿನ ಪ್ರತಿ ಜಾಗವನ್ನು ಯಾರೋ ಚಿತ್ರಕಾರ ಸುಂದರವಾಗಿ ಬಿಡಿಸಿಟ್ಟಂತೆ ಕಾಣುತ್ತದೆ. ಈ ಭಾಗವು ಅಕ್ಷರಶಃ ಜಗದ ಸೌಂದರ್ಯವನ್ನೇ ಹೊದ್ದು ಮಲಗಿದಂತೆ ಭಾಸವಾಗುತ್ತದೆ.

ಈ ಜಾಗ ಸಮುದ್ರ ಮಟ್ಟದಿಂದ ಸುಮಾರು 13,058 ಅಡಿ ಎತ್ತರದಲ್ಲಿದೆ. ಮೇಲೆ ಹೋದಂತೆಲ್ಲ ಚಳಿಯ ಅನುಭವ ಹೆಚ್ಚುತ್ತದೆ. ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಕುಳಿತರೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಈ ಭಾಗದಲ್ಲಿ ಹರಿದು ಹೋದ ಚೆನಾಬ್ ನದಿ ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೆಸರಲ್ಲೇ ಇದೆ ಭಯಾನಕತೆ

‘ರೋಥಾಂಗ್ ಪಾಸ್’ ಹೆಸರಲ್ಲೇ ಭಯಾನಕತೆ ಇದೆ. ‘ರೋಥಾಂಗ್’ ಎಂದರೆ ಸ್ಥಳೀಯ ಭಾಷೆಯಲ್ಲಿ ಶವಗಳ ರಾಶಿ ಎಂದರ್ಥ. ಹಿಂದಿನ ಕಾಲದಲ್ಲಿ ಈ ದಾರಿಯಲ್ಲಿ ಪ್ರಯಾಣ ಮಾಡುವವರು ಹಿಮಪಾತಕ್ಕೆ ಹಾಗೂ ಗುಡ್ಡ ಕುಸಿತಗಳಿಗೆ ಬಲಿಯಾಗುತ್ತಿದ್ದರು. ಹೀಗಾಗಿ, ಈ ಹೆಸರು ಬಂದಿದೆ. ಆದರೆ, ಇತ್ತೀಚೆಗೆ ಇಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಆಗಿದೆ. ಹೀಗಾಗಿ, ಈ ಮಾರ್ಗದ ಮೂಲಕ ಪ್ರವಾಸ ಮಾಡಲು ಯಾವುದೇ ತೊಂದರೆ ಇಲ್ಲ.

Rothang Pass 1

ದೇಶ ಬೆವರಿದರೂ ಇಲ್ಲಿ ಹಿಮ!

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗದಲ್ಲಿ ಸೂರ್ಯ ತನ್ನ ಶಕ್ತಿಯನ್ನು ತೋರಿಸುತ್ತಿರುತ್ತಾನೆ. ಆ ಸಮಯದಲ್ಲಿ ಹೊರಗೆ ಹೋದರೆ ಬೆವರು ಕಿತ್ತುಕೊಂಡು ಬರುತ್ತದೆ. ಆದರೆ, ಮನಾಲಿ-ರೋಥಾಂಗ್ ಪಾಸ್​ನಲ್ಲಿ ಮಾತ್ರ ತಣ್ಣನೆಯ ಗಾಳಿ ಮೈಗೆ ತಾಗುತ್ತದೆ. ಈ ವೆದರ್​ನಲ್ಲಿ ಟೀ ಹೀರಿದರೆ ಬೇರೆಯದೇ ಫೀಲ್ ಸಿಗುತ್ತದೆ.

ಹಿಮಪಾತವಾದರೆ ನೋ ಎಂಟ್ರಿ

ಮೇ ತಿಂಗಳಿಂದ ಅಕ್ಟೋಬರ್​ ತಿಂಗಳವರೆಗೆ ರೋಥಾಂಗ್ ಪಾಸ್ ತೆರೆದಿರುತ್ತದೆ. ಅಕ್ಟೋಬರ್ ಬಳಿಕ ಚಳಿಗಾಲ ಆರಂಭ ಆಗಿ ಹಿಮಪಾತ ಶುರುವಾಗುತ್ತದೆ. ಆಗ ಇಲ್ಲಿ ಹಿಮಗಳ ರಾಶಿ ಬಿದ್ದು ಸಂಪರ್ಕ ಪೂರ್ತಿ ಕಡಿದೇ ಹೋಗುತ್ತದೆ. ಈ ಜಾಗಕ್ಕೆ ಮನಾಲಿಯಿಂದ ಸಂಪರ್ಕ ಕಲ್ಪಿಸೋ ರೋಥಾಂಗ್ ಪಾಸ್ ಕೂಡ ಬಂದ್.

ಅಟಲ್ ಟನಲ್ ಭಾಗದಲ್ಲಿ ಹಿಮ ಬೀಳೋಕೆ ಆರಂಭ ಆದರೆ ಸಾಮಾನ್ಯ ವಾಹನಗಳನ್ನು ಡ್ರೈವ್ ಮಾಡಿಕೊಂಡು ಹೋಗಲು ಅವಕಾಶ ಇರೋದಿಲ್ಲ. ಆ ಸಂದರ್ಭದಲ್ಲಿ 4*4 ವಾಹನಗಳು ಮಾತ್ರ ತೆರಳುತ್ತವೆ. ನೀವು ಜಪ್ಪಯ್ಯ ಅಂದರೂ ನಿಮ್ಮ ವಾಹನಗಳನ್ನು ಅಲ್ಲಿ ಬಿಡೋದೇ ಇಲ್ಲ.

ಅಟಲ್ ಟನಲ್

ರೋಥಾಂಗ್ ಪಾಸ್​ ಹಾಗೂ ಮನಾಲಿ ಮಧ್ಯೆ ಸಂಪರ್ಕ ಕಲ್ಪಿಸಲು ‘ಅಟಲ್ ಟನಲ್’ ನಿರ್ಮಾಣ ಮಾಡಲಾಗಿದೆ. ಬರೋಬ್ಬರಿ 9 ಕಿ.ಮೀ ಇರುವ ಈ ಟನಲ್ ಇಂಜಿನಿಯರಿಂಗ್ ಕ್ಷೇತ್ರದ ಅದ್ಭುತಗಳಲ್ಲಿ ಒಂದು. ಕಡಿದಾದ ಬೆಟ್ಟಗಳನ್ನು ಕತ್ತರಿಸಿ ಅದರೊಳಗೆ ಇದನ್ನು ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2020ರ ಅಕ್ಟೋಬರ್ 3ರಂದು ಇದನ್ನು ಉದ್ಘಾಟನೆ ಮಾಡಿದರು.

Rothang Pass 4

ಅಡ್ವೆಂಚರ್ ಗೇಮ್

ಅಟಲ್ ಟನಲ್ ದಾಟಿದ ಬಳಿಕ ಸಿಗೋ ಸಮತಟ್ಟು ಭಾಗದಲ್ಲಿ ನೀವು ವಿವಿಧ ಅಡ್ವೆಂಚರ್​ ಗೇಮ್​ನ ನೋಡಬಹುದು. ಸ್ಕೀಯಿಂಗ್, ಜಿಪ್ ಲೈನ್, ಬೈಕಿಂಗ್ ಹೀಗೆ ವಿವಿಧ ಆಟಗಳನ್ನು ನೀವು ಇಲ್ಲಿ ಆಡಬಹುದು. ದಾರಿ ಮಧ್ಯೆ ಸಿಗೋ ಸೋಲಂಗ್ ವ್ಯಾಲಿಯಲ್ಲಿ ನೀವು ಪ್ಯಾರಾಗ್ಲೈಡಿಂಗ್, ಕೇಬಲ್ ಕಾರುಗಳ ಅನುಭವ ಕೂಡ ಪಡೆಯಬಹುದು.

ಮನಾಲಿಯಿಂದ ಮಾರ್ಗ

ಮನಾಲಿಯಲ್ಲಿ ನೀವು ತಂಗಿದ್ದೀರಿ ಎಂದರೆ ಅಲ್ಲಿಂದ ರೋಥಾಂಗ್ ಪಾಸ್​ಗೆ ತೆರಳಲು ಸಾಕಷ್ಟು ಬಾಡಿಗೆ ವಾಹನಗಳು ಲಭ್ಯ. ಬೈಕ್ ರೈಡ್ ಮಾಡಿಕೊಂಡು ಹೋಗುವವರಿಗೂ ಒಂದೊಳ್ಳೆಯ ಅನುಭವ ಪಡೆಯಬಹುದು.

ಒಟ್ಟಾರೆ ಹೇಳೋದಾದ್ರೆ ಮನಾಲಿಗೆ ಹೋಗಿ ಅಲ್ಯಾವುದೋ ಮನೇಲಿ ಇರೋದಾದ್ರೆ ಅದರಲ್ಲೇನು ಮಜವಿದೆ. ಮನಾಲಿಯಿಂದ ರೋಥಾಂಗ್ ಪಾಸ್ ಮತ್ತು ಅಟಲ್ ಟನಲ್ ನೋಡಿ ಬನ್ನಿ. ಪ್ರವಾಸ ನೆನಪಲ್ಲುಳಿಯುತ್ತದೆ.