• ಸುಕನ್ಯಾ ಸುಬ್ರಾಯ ಹೆಗಡೆ

ಸಮುದ್ರ ಮಟ್ಟದಿಂದ 15,100 ಅಡಿ ಇರುವ ಪಂಗಾರಚುಲ್ಲಾ ಶಿಖರ ಹತ್ತುವುದು ಸುಲಭವಲ್ಲ. ಎಕ್ಸ್‌ಪೆಡಿಷನ್‌ ಮಾಡುವ ತಯಾರಿಯಲ್ಲಿರುವವರಿಗೆ ಇದು ಉತ್ತಮ ಶಿಖರ ಎಂಬುದು ಕೆಲವರ ಅಭಿಪ್ರಾಯ. 90% ಉತ್ಸಾಹ, 9% ಕುತೂಹಲ, ಉಳಿದ 1% ಭಯ ಇಟ್ಟುಕೊಂಡು ಹಿಮಾಲಯದ ಕಡೆ ನನ್ನ ಪಯಣ ಶುರು ಆಗಿತ್ತು.

ಭಾನುವಾರ ಬೆಳ್ಳಂಬೆಳಗ್ಗೆ ಹೃಷಿಕೇಶದಿಂದ ನಮ್ಮ ಪಿಕಪ್ ಇತ್ತು. ಹೀಗಾಗಿ ಶನಿವಾರ ಸಂಜೆಯೇ ಅಲ್ಲಿಗೆ ಹೋಗಿದ್ದೆ. ಗಂಗೆಯ ಮಡಿಲಲ್ಲಿರುವ ಹೃಷಿಕೇಶ ವಿಶ್ವದ ಯೋಗನಗರಿ ಎಂದೇ ಪ್ರಸಿದ್ಧ. ಹೆಜ್ಜೆ ಹೆಜ್ಜೆಗೂ ಯೋಗ ಮತ್ತು ಚಿತ್ರ ಶಾಲೆಗಳಿಂದ ತುಂಬಿದ ಈ ನಗರಿ, ಹೋದ ಕ್ಷಣವೇ ಏನೋ ಖುಷಿಯ ಅನುಭವ ಕೊಡುವುದಂತೂ ಸತ್ಯ. ಪ್ರತಿ ಸಂಜೆ ಲಕ್ಷ್ಮಣ ಜೂಲ ಹತ್ತಿರ ಬಹು ಸುಂದರವಾದ ಗಂಗಾ ಆರತಿ ನಡೆಯುತ್ತದೆ. ಆದರೆ, ನನಗೆ ಕೊನೆಯ ತುಣುಕು ಮಾತ್ರ ನೋಡಲು ಸಿಕ್ಕಿತ್ತು. ಗಂಗಾ ತೀರದಲ್ಲಿ ಸ್ವಲ್ಪ ಸಮಯ ಕುಳಿತು, ಅದರ ಸೌಂದರ್ಯ ಕಣ್ತುಂಬಿಕೊಂಡು, ದಾರಿ ಬದಿಯ ಅಂಗಡಿಯಲ್ಲಿ ಮೊಮೊಸ್ ತಿಂದು ವಾಪಸ್ ಹಾಸ್ಟೆಲ್‌ಗೆ ಬರುವಾಗ ಗಂಟೆ ಒಂಭತ್ತಾಗಿತ್ತು.

ಇದನ್ನೂ ಓದಿ: ಪತ್ರ ಬರೆಯಲಾ ಇಲ್ಲ ಫೊಟೋ ತೆಗೆಯಲಾ..

ಭಾನುವಾರ ಬೆಳಗ್ಗೆ ಪಿಕಪ್ ವಾಹನದ ಹತ್ತಿರ ಒಂದು ಸಣ್ಣ ಗುಂಪು ನಿಂತಿತ್ತು. ಇದು ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವ ಸಮಯ. ಸಹ ಚಾರಣಿಗರಿಬ್ಬರು ಬೆಂಗಳೂರಿನಲ್ಲಿ ನಾನಿರುವ ಜಾಗದಿಂದ 1 km ದೂರದಲ್ಲಿ ಇರುವವರು ಎಂದು ಗೊತ್ತಾದಾಗ ಅಬ್ಬಾ! ಎಷ್ಟು ಚಿಕ್ಕ ಪ್ರಪಂಚ ಅನ್ನಿಸಿತ್ತು. ಅಲಕಾನಂದ ಮತ್ತು ಭಾಗೀರಥಿ ಜತೆ ಸೇರುವ ಜಾಗ ʼದೇವಪ್ರಯಾಗʼ. ಅಲ್ಲಿಂದ ಮುಂದೆ ಆ ನದಿ ಗಂಗೆಯಾಗಿ ಹರಿಯುತ್ತಾಳೆ. ದೇವಪ್ರಯಾಗ ಮತ್ತು ನದಿಯ ಮಧ್ಯೆ ಸ್ಥಾಪಿತವಾದ ದಾರೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಬೇಸ್ ಕ್ಯಾಂಪ್ ತಲುಪಲು ಸಂಜೆ ಸುಮಾರು 4 ಆಗಿತ್ತು.

Untitled design - 2026-04-21T183136.877

ಚಾರಣ ಆರಂಭ:

ಬಹು ಸುಂದರ ಊರು ‘ಪೀಪಲ್ಕೋಟಿ’ ಚಾರಣದ ಬೇಸ್ ಕ್ಯಾಂಪ್. ಅಲ್ಲಿಂದ ಸುಮಾರು 2 ಗಂಟೆ ವಾಹನದಲ್ಲಿ ಸಾಗಿ ನಾವು ತಲುಪಿದ್ದು ‘ತುಗಾಸಿ’ ಎಂಬ ಹಳ್ಳಿಗೆ. ದಾರಿಯ ಎರಡೂ ಕಡೆಯಲ್ಲಿ ಹಿಮಭರಿತ ಪರ್ವತ ಶ್ರೇಣಿ. ದಾರಿಯುದ್ದಕ್ಕೂ ಅಲ್ಲಲ್ಲಿ ಚೆಲ್ಲಿದ ಹಿಮ, ಪುಟ್ಟ ಮನೆಗಳು, ದೂರದಲ್ಲಿ ಮೇಯುತ್ತಿರುವ ಆಡುಗಳ ಗುಂಪು. ಆ ಮನೋಹರ ದೃಶ್ಯವನ್ನು ಕಣ್ಣಿನಲ್ಲಿ ಹಾಗೂ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಾ ನಮ್ಮ ಚಾರಣ ಪ್ರಾರಂಭವಾಗಿತ್ತು.

ಉತ್ಸಾಹ, ಹುಮ್ಮಸ್ಸು ಮನಸ್ಸಿಗೆ ಸಂಬಂಧಿಸಿದ್ದು, ವಯಸ್ಸು ಬರೇ ನೆಪವಷ್ಟೇ ಎಂಬುದಕ್ಕೆ ಉದಾಹರಣೆ ಗುಜರಾತಿನ ಧರ್ಮವೀರ್. ವಯಸ್ಸು 59 ವರ್ಷ ಮಾತ್ರ. ಆದರೆ, ಹುಮ್ಮಸ್ಸು ಯಾವ ಯುವಕನಿಗಿಂತ ಕಡಿಮೆ ಇಲ್ಲ. ಇದು ಅವರ ಎಷ್ಟನೆಯ ಹಿಮಾಲಯ ಚಾರಣ ಎಂಬುದೂ ಲೆಕ್ಕಕ್ಕಿಲ್ಲ. ಜೀವನದ ಬಹು ಹಂತಗಳನ್ನು ನೋಡಿದ ಅವರ ಅನುಭವದ ಮಾತುಗಳು ನಿಜಕ್ಕೂ ಅರ್ಥಪೂರ್ಣ. ʼಒಮ್ಮೆಯೇ ದೊಡ್ಡ ಸಾಧನೆ ಮಾಡಬೇಕೆನ್ನುವುದರ ಹಿಂದೆ ಓಡುವ ಬದಲು ನಾನು ಇಂದೇನು ಮಾಡಿದ್ದೇನೆ ಎನ್ನುವುದನ್ನು ಯೋಚಿಸಿ. ಪ್ರತಿದಿನದ ಗುರಿಯನ್ನು ತಲುಪಲು ಪ್ರಯತ್ನಿಸಿ, ಸಾಧನೆ ಅದಾಗಿಯೇ ನಿಮ್ಮನ್ನು ಹಿಂಬಾಲಿಸುತ್ತದೆʼ.

ಮೊದಲ ಹಿಮಪಾತ:

ಗುಲ್ಲಿಂಗ್ ಟಾಪ್ ತಲುಪಿ, ಊಟ ಮುಗಿಸಿ, 2 ಅಂಗಿಯ ಮೇಲೊಂದು ದಪ್ಪ ಜಾಕೆಟ್ ಹಾಕಿ, ದೂರದ ಹಿಮಾಲಯದ ಶ್ರೇಣಿಗಳ ನೋಟ ಸವಿಯುತ್ತ ಕುಳಿತಾಗ ಏನೋ ಟಪ್ ಎಂದು ಮೈಮೇಲೆ ಬಿದ್ದಂತಾಯಿತು. ನೋಡಿದರೆ ಹಿಮಬಿಂದು. ನೋಡ ನೋಡುತ್ತಲೇ ಹಿಮಪಾತ ಶುರು ಆಗಿತ್ತು. ಮೊದಲೆಂದೂ ಹಿಮಪಾತ ನೋಡಿರಲಿಲ್ಲ. ಆಕಾಶದಿಂದ ಮುತ್ತು ಉದುರುತ್ತಿದೆಯೇನೋ ಎಂಬ ಭ್ರಮೆ ತಂದ ಆ ಹಿಮದ ಮಳೆಯಲ್ಲಿ ಮನಸೋ ಇಚ್ಛೆ ಆಟವಾಡಿ, ರಾತ್ರಿ ಟೆಂಟ್ ಸೇರಿದ ಮೇಲೂ ಹಿಮ ಸುರಿಯುತ್ತಲೇ ಇತ್ತು.

Untitled design - 2026-04-21T183129.722

ಸೌಂದರ್ಯ ರಾಶಿ ʼಕುಲ್ಹಾರʼ:

ಬೆಳಗ್ಗೆ ಎದ್ದಾಗ ಗುಲ್ಲಿಂಗ್ ಟಾಪ್ ರಾತ್ರಿ ಇಡೀ ಸುರಿದ ಹಿಮದಿಂದ ತುಂಬಿತ್ತು. ಆ ಜಾಗಕ್ಕೆ ವಿದಾಯ ಹೇಳಿ ಹಿಮದಲ್ಲೇ ಚಾರಣ ಮುಂದಿನ ಕ್ಯಾಂಪ್ ಕಡೆ ಸಾಗಿತ್ತು. ಹಿಮದ ಚೆಂಡು ಮಾಡಿ ಒಬ್ಬರಿಗೊಬ್ಬರು ಗುರಿಯಿಟ್ಟು ಹೊಡೆಯುತ್ತಾ, ರಜತ ಗಿರಿಯಂತೆ ಕಾಣುವ ಪುಟ್ಟ ಪರ್ವತ ಶ್ರೇಣಿಗಳನ್ನು ದಾಟಿ ನಮ್ಮ ಎರಡನೆಯ ದಿನದ ಕ್ಯಾಂಪ್ ʼಕುಲ್ಹಾರʼ ತಲುಪುವವರೆಗೆ ಸೂರ್ಯ ನೆತ್ತಿಗೆ ಬಂದಾಗಿತ್ತು. ಬೆಟ್ಟ ಹತ್ತಿ ಆದ ದಣಿವು ಕುಲ್ಹಾರ ನೋಡಿದ ಕ್ಷಣವೇ ಹಾರಿ ಹೋಗಿತ್ತು. ಅದೆಂಥ ಅಧ್ಬುತ ಜಾಗ! ಯಾವ ಕಡೆ ನೋಡಿದರೂ ಹಿಮಾವೃತವಾದ ಪರ್ವತಗಳು. ಅದರ ಮಧ್ಯದಲ್ಲಿ ಇಣುಕುವ ಮರಗಳ ಸಾಲು. ಚಾರಣಿಗರು ಹಾಕಿರುವ ಬಣ್ಣ ಬಣ್ಣದ ಟೆಂಟುಗಳು. ಯಾವುದೋ ಕನಸಿನ ನಗರಿಗೆ ಬಂದ ಹಾಗೆ ಅನಿಸಿತ್ತು.

ಕುವರಿ ಪಾಸ್ ಎಂಬ ಮಾಯೆ:

ಕುಲ್ಹಾರ ಕ್ಯಾಂಪ್ ಇಂದ ಸುಮಾರು 7 ಕಿ.ಮೀ ಸಾಗಿದರೆ ಸಿಗುವ ಪರ್ವತದ ತುದಿ ʼಕುವರಿ ಪಾಸ್ʼ. 13,000 ಅಡಿ ಎತ್ತರ. ಪಾರ್ವತಿ ದೇವಿ ಶಿವನನ್ನು ಒಲಿಸಲು ತಪಸ್ಸು ಮಾಡಿದ ಪವಿತ್ರ ಜಾಗವಿದು. ಇಂದಿಗೂ ವರ್ಷದ ಒಂದು ದಿನ ಪಹಾಡಿ ಜನ ಒಂದು ಆಡನ್ನು ದೇವಿಗೆಂದು ಬಿಡುತ್ತಾರಂತೆ. ಬಿಟ್ಟು ತಿರುಗಿ ನೋಡದೆ ಮರಳಿ ಬರುತ್ತಾರಂತೆ. ಆ ಆಡು ನೇರವಾಗಿ ಕುವರಿ ಪಾಸ್‌ನ ತುದಿಗೆ ಹೋಗಿ ದೇವಿಗೆ ತನ್ನನು ತಾನು ಸಮರ್ಪಿಸಿಕೊಳ್ಳುತ್ತದೆ ಎಂಬುದು ನಂಬಿಕೆ. 3ನೆಯ ದಿನ ಕುವರಿ ಪಾಸ್ ಹತ್ತಿ, ಸುತ್ತ ಕಾಣುವ ಅದ್ಭುತ ರಜತ ಗಿರಿಗಳ ದರ್ಶನವಾಯಿತು.

ಕನಸಾಗಿಯೇ ಉಳಿದ ಪಂಗಾರಚುಲ್ಲಾ:

ಈ ಬೆಟ್ಟವನ್ನು ಬೆಳಗಿನ ಸಮಯ ಹತ್ತುವುದು ನಿಷಿದ್ಧ ಮತ್ತು ಕಷ್ಟಸಾಧ್ಯ ಕೂಡ. ಹಾಗಾಗಿ ಮಧ್ಯ ರಾತ್ರಿಯೇ ಪಂಗಾರಚುಲ್ಲಾ ಶಿಖರ ಹತ್ತುವ ಯೋಜನೆಯಿತ್ತು. ಬೇಗ ಊಟ ಮುಗಿಸಿ ರಾತ್ರಿಯ ಸಾಹಸಯಾತ್ರೆಯ ಕನಸು ಕಾಣುತ್ತ ಮಲಗಿದ್ದ ನಮಗೆ ಮಧ್ಯರಾತ್ರಿ ಆಘಾತವೊಂದು ಕಾದಿತ್ತು. ನಿರಂತರ ಹಿಮಪಾತದ ಕಾರಣ ನಾವು ಪಂಗಾರಚುಲ್ಲಾ ಶಿಖರ ಏರುವ ಕನಸನ್ನು ಅಲ್ಲಿಗೇ ಕೈ ಬಿಡಬೇಕಾಯಿತು. ಮರುದಿನ ಬೆಳಗ್ಗೆ ಬೆಟ್ಟ ಇಳಿಯಲು ಶುರು ಮಾಡಬೇಕು ಎಂಬ ವಾಸ್ತವದ ಅರಿವಾದಾಗ ಆ ರಾತ್ರಿಯ ನಿದ್ರೆ ಪಕ್ಕನೆ ಹಾರಿ ಹೋಗಿತ್ತು.

ಪಂಗಾರಚುಲ್ಲಾ ಹತ್ತಲಾಗದ ನೋವು ಮರುದಿನದ ದೃಶ್ಯದಿಂದ ಮಾಸಲು ಶುರುವಾಗಿತ್ತು. ರಾತ್ರಿ ಪೂರ್ತಿ ಸುರಿದ ಹಿಮ ಮೊಣಕಾಲು ಮಟ್ಟಕ್ಕೆ ಬಂದಿತ್ತು. ಮರಗಳ ಮೇಲೆ ಚೆಲ್ಲಿದ ಹಿಮ ಯಾವುದೋ ಮಾಯಾ ನಗರಿಯಲ್ಲಿ ಇರುವ ಅನುಭವ ನೀಡಿತ್ತು. ಹಿಮ ಸೇರಿದ ಬೂಟು ಧರಿಸಿ, ಕೊರೆಯುವ ಚಳಿಯಲ್ಲಿ ಬ್ಯಾಗ್ ಬೆನ್ನಿಗೇರಿಸಿ, ಹರ್ ಹರ್ ಮಹಾದೇವ್ ಎಂದು ಘೋಷಣೆ ಹಾಕಿ ಬೆಟ್ಟ ಇಳಿಯಲು ಪ್ರಾರಂಭ ಮಾಡಿದಾಗ ಹೆಜ್ಜೆಯಷ್ಟೇ ಮನಸೂ ಭಾರವಾಗಿತ್ತು.

Untitled design - 2026-04-21T183123.158

ಮನಸಿನಲಿ ಉಳಿದ ಅಚ್ಚುಗಳು:

ಒಂದು ಪ್ರಯಾಣ ಎನ್ನುವುದು ಬರೀ ಆ ತಾಣಕ್ಕಷ್ಟೇ ಸೀಮಿತವಲ್ಲ. ಸಾಗಿದ ದಾರಿ, ಜತೆ ನಡೆದ ಜನ, ಉಂಡ ಊಟ, ಸ್ಥಳೀಯ ಜನರ ಜೀವನ ಶೈಲಿ, ಹಂಚಿಕೊಂಡ ನಗು ಎಲ್ಲವೂ ಪ್ರಯಾಣದ ಬಹು ಮುಖ್ಯ ಮತ್ತು ಬಹು ಸುಂದರ ಭಾಗ. ಹಿಮಾಲಯದ ಕೊರೆಯುವ ಚಳಿ, ಬೆಟ್ಟದ ಹೂವು, ತನ್ನ ಸ್ವೆಟರ್ ಕೊಡಲು ಸಿದ್ಧವಿದ್ದ 4 ವರ್ಷದ ಮುಗ್ಧ ಅಥರ್ವರಾಣ, ದಾರಿಯಲ್ಲಿ ಕುಡಿದ ರೋಡೋಡೆಂಡ್ರಾನ್ ಹೂವಿನ ಜ್ಯೂಸ್, ಚಾರಣ ಪೂರ್ತಿ ನಮ್ಮ ರಕ್ಷಕರೋ ಎಂಬಂತೆ ಜತೆ ಸಾಗಿದ ನಾಯಿಗಳು, ಹಿಮದುಂಡೆಯ ಹೊಡೆದಾಟಗಳು, ಹಿಮಮನುಷ್ಯನನ್ನು ಮಾಡಲು ಪಟ್ಟ ಪರದಾಟಗಳು, ಕುವರಿ ಪಾಸ್‌ನ ತುದಿಯಲ್ಲಿ ಕುಡಿದ ಚಹಾ, ರಾತ್ರಿ ಹೇಳಿದ ದೆವ್ವದ ಕಥೆಗಳು, ಅಪರಿಚಿತರಿಂದ ಒಳ್ಳೆಯ ಸ್ನೇಹಿತರಾದ ಸಹ ಚಾರಣಿಗರು, ಊಟದ ಟೆಂಟ್ ನಲ್ಲಿ ಎಲ್ಲರೂ ದನಿ ಸೇರಿಸಿ ಹಾಡಿದ ಹಾಡುಗಳು, ಹಿಮಾಲಯದ ಸೂರ್ಯೋದಯಗಳು, ದೇವಪ್ರಯಾಗದ ಬಳಿ ಮಾಡಿದ ಬಂಜಿ ಜಂಪಿಂಗ್ ಇವೆಲ್ಲವೂ ಮನಸ್ಸಿನ ಮೇಲೆ ಚಿರವಾಗಿ ಕುಳಿತ ಗುರುತುಗಳು.