• ಸುಮಾರಾಣಿ.ಕೆ.ಹೆಚ್. ಶಿವಮೊಗ್ಗ

ಹಿಮಾಚಲ ಪ್ರದೇಶದ ಕುಲು ಮನಾಲಿಗೆ ಪ್ರವಾಸ ಪ್ರವಾಸ ಹೋಗಿದ್ದೆ. ಶಿಮ್ಲಾ, ಚಂಡಿಗಢ, ಅಮೃತಸರ್, ವಾಘ ಬಾರ್ಡರ್ ಎಲ್ಲಾ ಸುತ್ತಾಡಿ. ಮನಾಲಿಯ ಬಳಿ ಇರುವ ಮಣಿಕರನ್ ಎಂಬ ಹಿಂದೂ ಮತ್ತು ಸಿಖ್ಖರ ಪವಿತ್ರಸ್ಥಳವನ್ನು ನೋಡಿಕೊಂಡು ಲಾಡ್ಜ್ ಒಂದರಲ್ಲಿ ಉಳಿದಿದ್ದೆವು.

ಆ ಲಾಡ್ಜ್ ಎತ್ತರದ ಕಣಿವೆ ಪ್ರದೇಶದಲ್ಲಿತ್ತು. ಆ ಲಾಡ್ಜ್ ನ ಸುತ್ತಲೂ ಸುಂದರ ಬೆಟ್ಟ ಗುಡ್ಡಗಳು. ಕಣಿವೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಸುತ್ತಲೂ ರಭಸದಿಂದ ಹರಿಯುವ ಬೀಸ್ ನದಿಯ ಶಬ್ದ ಮತ್ತು ಹಾವಿನಂತೆ ಹರಿಯುವ ಅದರ ಸುಂದರ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು.

ನಾವು ಹೋಗಿದ್ದು ಮೇ ತಿಂಗಳಿನಲ್ಲಿ ಆಗಲೇ ಅಲ್ಲಿ ಸಂಜೆ ಆರು ಗಂಟೆಯ ನಂತರ ಪತರಗುಟ್ಟುವಂಥ್ ಚಳಿ. ಹಗಲು ಹೊತ್ತಿನಲ್ಲಿಯೂ ಬಿಸಿಲು ಮೈಗೆ ತಾಕುತ್ತಿರಲಿಲ್ಲ. ಬೆಳಗಿನ ಜಾವ ಮಂಜಿನ ಮಳೆ.

manali

ನಾವು ಉಳಿದಿದ್ದ ಲಾಡ್ಜ್ ನ ಸುತ್ತಲೂ ಇರುವ ಬೆಟ್ಟ ಗುಡ್ಡಗಳ ಮೇಲೆ ಜನ ವಾಸಿಸುತ್ತಿದ್ದರು. ನಮ್ಮ ಲಾಡ್ಜ್ ನಿಂದ ಅವರಮನೆಗಳು ಬೆಂಕಿಪೊಟ್ಟಣಗಳಂತೆ ಕಂಡು ಬರುತ್ತಿದ್ದವು. ಅಲ್ಲಿನ ಜನರು ಆ ಬೆಟ್ಟಗಳ ಮೇಲಿಂದ ತಮ್ಮ ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ಇಳಿಯುವುದು ಹತ್ತುವುದು ಮಾಡುತ್ತಿದ್ದರು. ಕೆಲವು ಕಡೆಯಂತೂ ಎಷ್ಟು ದುರ್ಗಮ ಪ್ರದೇಶದಲ್ಲಿ ಅವರ ವಾಸ ಎಂದರೆ. ಕಬ್ಬಿಣದ ಸರಪಳಿಗಳಿಂದ ಮಾಡಿದ ರೋಪ್ ವೇಗಳಿಗೆ ತೊಟ್ಟಿಲನ್ನು ಕಟ್ಟಿರುತ್ತಿದ್ದರು. ನದಿಯ ಮೇಲಿಂದ ಎತ್ತರ ಬೆಟ್ಟದ ವರೆಗೂ ಅದರಲ್ಲಿ ಕುಳಿತು ಹೋಗುವುದು ಇಳಿಯುವುದು ಮಾಡುತ್ತಿದ್ದರು. ಶಾಲಾ ಮಕ್ಕಳು ಸಹ ಭಯವಿಲ್ಲದೆ ಅದರಲ್ಲಿ ಕುಳಿತು ಓಡಾಡುವುದನ್ನು ನೋಡಿ ನಾವೆಷ್ಟು ಪುಣ್ಯವಂತರು ಎಂದು ಕೊಳ್ಳುತ್ತಿದ್ದೆವು.

ಹೀಗೆ ಸಂಜೆ ಲಾಡ್ಜ್ ನಿಂದ ಹೊರಗೆ ಬಂದು ಹತ್ತಿರದಲ್ಲೇ ಇರುವ ಮಾರುಕಟ್ಟೆಗೆ ಶಾಪಿಂಗ್ ಹೋಗೋಣವೆಂದು ಹೊರೆಟೆವು. ಬೆಟ್ಟದ ಮೇಲಿಂದ ಬೆನ್ನಿನ ಮೇಲೆ ಬೆತ್ತದ ಬುಟ್ಟಿಗಳನ್ನು ಹೊತ್ತುಕೊಂಡು ಮಹಿಳೆಯರಿಬ್ಬರು ಇಳಿದು ಬರುತ್ತಿದ್ದರು. ಅದರಲ್ಲಂತೂ ಒಬ್ಬ ಮಹಿಳೆ ಬುಟ್ಟಿಯ ಜೊತೆ ಒಂದು ಹಸುಗೂಸನ್ನು ಕೂಡ ಜೋಳಿಗೆಯಲ್ಲಿ ಕಟ್ಟಿಕೊಂಡು ಇಳಿಯುತ್ತಿದ್ದಳು. ಜೊತೆಗೆ ಮೂರ್ನಾಲ್ಕು ವರ್ಷದ ಮಗುವೊಂದು ಕೂಡ ಅವಳ ಜೊತೆ ನಡೆದು ಬರುತ್ತಿತ್ತು.

ಇನ್ನೊಬ್ಬರು ಮಧ್ಯ ವಯಸ್ಸಿನ ಮಹಿಳೆ ಇಬ್ಬರೂ ತಾವು ವುಲ್ಲನ್ ನಲ್ಲಿ ಹೆಣೆದ ಸ್ವೆಟರ್, ಕಾಲುಚೀಲ, ಟೋಪಿ ಇತ್ಯಾದಿಗಳನ್ನು ದಾರಿಯಲ್ಲಿ ಹರವಿಕೊಂಡು ಕೈಯಲ್ಲಿ ವುಲ್ಲನ್ ನ ಉಂಡೆ ಮತ್ತು ಸೂಜಿಯನ್ನು ಹಿಡಿದು ನಿಟ್ಟಿಂಗ್ ಮಾಡತೊಡಗಿದ್ದರು. ನಿಜಕ್ಕೂ ಅವರು ಹೆಣೆದ ವಸ್ತುಗಳು ತುಂಬಾ ಆಕರ್ಷಕವಾಗಿದ್ದವು. ಈಶಾನ್ಯ ರಾಜ್ಯದ ಮಹಿಳೆಯರು ಅಂದ್ರೆ ಕೇಳಬೇಕೇ? ಬಹಳ ಸುಂದರಿಯರು. ಸಹಜವಾದ ಕೆಂಪುಬಣ್ಣ, ನೇರವಾದ ರೇಷ್ಮೆಯಂಥ ಸುಂದರ ಕೂದಲು ಜೊತೆಗೆ ನಾಚಿಕೆಯ ಸ್ವಭಾವದಿಂದ ಕಂಗೊಳಿಸುತ್ತಿದ್ದರು.

ನಾವು ಅವರು ಮಾರಾಟಕ್ಕಿಟ್ಟ ವಸ್ತುಗಳನ್ನು ಕೊಂಡುಕೊಂಡೆವು. ಮಕ್ಕಳಿಗಾಗಿ ಹೆಣೆದ ಟೋಪಿ ಸ್ವೆಟರ್ ಗಳಂತೂ ಒಂದಕ್ಕಿಂತ ಒಂದು ಚೆಂದವಾಗಿದ್ದವು.

ಜೊತೆಗೆ ಬಂದಿದ್ದ ನನ್ನ ಗೆಳತಿಯೊಬ್ಬಳು" ನನ್ನ ಸೊಸೆ ಪ್ರೆಗ್ನೆಂಟ್ ಇದ್ದಾಳೆ, ಇನ್ನೆರಡು ತಿಂಗಳಿನಲ್ಲಿ ಮೊಮ್ಮಗು ಬರುತ್ತೆ ಅದಕ್ಕೆ ಚಿಕ್ಕದಾದ ಕಾಲುಚೀಲ ಸ್ವೆಟರ್ ಮಾಡಿಕೊಡಲು ಸಾಧ್ಯವೇ" ಎಂದು ಕೇಳಿಕೊಂಡಳು.

manali beauties 1

ಅದಕ್ಕೆ ಅವರು ಖುಷಿಯಿಂದ "ಮೇಡಂ ಜೀ ನೀವು ನಾಳೆಯೂ ಕೂಡ ಇರುವುದಾದರೆ ಈಗ ಆರ್ಡರ್ ಕೊಡಿ ನಾಳೆ ಇಷ್ಟು ಹೊತ್ತಿಗೆ ತಂದು ಕೊಡುತ್ತೇವೆ" ಎಂದರು.

"ನಿಮ್ಮ ಮನೆ ಎಲ್ಲಿ? ಹೇಗೆ ಬರುತ್ತೀರಿ? ನಿಮ್ಮ ಜೀವನ ಹೇಗೆ? ಎಂದು ವಿಚಾರಿಸಿದೆವು.

ಬೆಟ್ಟದ ಮೇಲೆ ಇಲ್ಲಿಂದ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿ ಮನೆಗಳಿವೆ. ಮನೆಯ ಸುತ್ತಲೂ ಸ್ವಲ್ಪ ಸ್ವಲ್ಪ ಹೊಲಗಳಿವೆ ಅಲ್ಲಿ ಆಲೂಗಡ್ಡೆ, ಸಾಸಿವೆ, ಹೂ ಕೋಸು, ಗೋಧಿ, ಬಾರ್ಲಿ, ಹಲವಾರು ಗಡ್ಡೆ ಗೆಣಸುಗಳನ್ನು ಬೆಳೆಯುತ್ತೇವೆ. ಮಳೆಗಾಲದಲ್ಲಿ ಇಲ್ಲಿ ಭೂಕುಸಿತಗಳು ಸರ್ವೇಸಾಮಾನ್ಯ. ಚಳಿಗಾಲದಲ್ಲಿ ಇಲ್ಲಿ ತುಂಬಾ ಹಿಮಪಾತವಾಗುತ್ತಿರುತ್ತದೆ. ಆಗ ಮನೆಯಿಂದ ಹೊರಬರುವುದೇ ಕಷ್ಟ. ಈಗ ಬೇಸಿಗೆಯಲ್ಲಿ ಒಂದು ನಾಲ್ಕು ತಿಂಗಳು ಪ್ರವಾಸಿಗರು ಬರುತ್ತಾರೆ. ಹೀಗೆ ಇಲ್ಲಿ ಸುತ್ತಲೂ ಇರುವ ಲಾಡ್ಜ್ ಗಳಲ್ಲಿ ಉಳಿಯುತ್ತಾರೆ. ಆಗ ಈ ಥರದ ವಸ್ತುಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರು ಮಾಡಿ ಬೆಟ್ಟದ ಮೇಲಿರುವ ಮನೆಗಳಿಂದ ಹೊತ್ತು ತಂದು ಮಾರುತ್ತೇವೆ.ಇದರಿಂದಲೇ ನಮ್ಮ ಜೀವನ ನೆಡೆಸಬೇಕು ಎಂದರು.

ನನಗೆ ಯಾಕೋ ಕರಳು ಕವುಚಿದಂತಾಯಿತು. ನಿಜಕ್ಕೂ ಆ ಸುಂದರಿಯರ ಬದುಕು ಸುಂದರವಾಗಿರಲಿಲ್ಲ. ಮೂರ್ನಾಲ್ಕು ಕಿಲೋಮೀಟರ್ ದೂರದಿಂದ ಬೆಟ್ಟದ ಇಳಿಜಾರುಗಳಲ್ಲಿ ಬುಟ್ಟಿಗಳನ್ನು ಜೊತೆಗೆ ಮಕ್ಕಳನ್ನೂ ಹೊತ್ತು ತಂದು ಈ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಮಾಡುವ ಗಟ್ಟಿಗಿತ್ತಿಯರು ಅವರು.

ಅವರು ಕೇಳಿದ್ದಕ್ಕಿಂತ ಹೆಚ್ಚಿನ ದುಡ್ಡನ್ನೇ ಕೊಟ್ಟು ಅವರಿವರಿಗೆ ಗಿಫ್ಟ್ ಕೊಡಬಹುದೆಂದು ಹೆಚ್ಚಿನ ವಸ್ತುಗಳನ್ನೇ ಕೊಂಡುಕೊಂಡು ಅವರ ಜೀವನ ಸುಖಮಯವಾಗಿರಲಿ ಎಂದು ಮನತುಂಬಿ ಹಾರೈಸಿದೆ.

ಫೋಟೋ ತೆಗೆದುಕೊಳ್ಳಲು ಹೋದಾಗ ಆ ಮಕ್ಕಳತಾಯಿ ನಾಚಿ ಆ ಕಡೆ ತಿರುಗಿಕೊಂಡಳು. ಮಧ್ಯ ವಯಸ್ಸಿನ ಆ ತಾಯಿಯ ಪಟವನ್ನೂ ನೆನಪಿಗಾಗಿ ತೆಗೆದುಕೊಂಡೆ. ಲಾಕ್‌ ಡೌನ್ ನ ಈ ಸಮಯದಲ್ಲಿ, ಈ ದಿನ ಹಳೆಯ ಚಿತ್ರಗಳನ್ನು ನೋಡುತ್ತಾ ಕುಳಿತಾಗ ಅವರಿಬ್ಬರ ಚಿತ್ರಗಳು ಈ ಬರಹ ಬರೆಯಲು ಸ್ಫೂರ್ತಿಯಾದವು.