ವಿಶ್ವದ ಕೊನೆಯ ನಿಲ್ದಾಣ – ಅಂಟಾರ್ಕ್ಟಿಕಾ
ದೊಡ್ಡ ಮಂಜುಗಡ್ಡೆಗಳು, ಪೆಂಗ್ವಿನ್, ಲೆಪರ್ಡ್ ಸೀಲ್ ನೋಡಿ ಬಂದು ಹಡಗಿನಲ್ಲಿ ಊಟ ಮಾಡಿ ಪೋರ್ಟಲ್ ಪಾಯಿಂಟ್ ಎಂಬ ಸ್ಥಳದಲ್ಲಿ ದಪ್ಪ ಹಿಮದಲ್ಲಿ ಅಂಟಾರ್ಕ್ಟಿಕಾ ನೆಲವನ್ನು ಮೊದಲು ಸ್ಪರ್ಶಿಸಿದೆವು. ಅಲ್ಲಲ್ಲಿ ಅಡ್ಡಾಡುವ ಸುಂದರ ಪೆಂಗ್ವಿನ್‌ಗಳು, ಎತ್ತರದ ಸ್ಥಳದಲ್ಲಿ ನಿಂತರೆ ದೂರದಲ್ಲಿ ಮುಳುಗೇಳುತ್ತಾ ಕಾಣುವ ತಿಮಿಂಗಿಲಗಳು! ವಾಪಸ್ ಹಡಗಿಗೆ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಹಡಗಿನ ಪಕ್ಕದಲ್ಲಿಯೇ ಕಿಲ್ಲರ್ ವೇಲ್!
ಸುತ್ತಲು ಹಿಮಪರ್ವತಗಳು. ಅಲ್ಲಲ್ಲಿ ಅಮೂರ್ತ ಕಲೆಯ ರೂಪಗಳಂತೆ ಕಾಣುವ ತಿಳಿನೀಲಿ ಬಣ್ಣದ ಬೃಹತ್ ಮಂಜುಗಡ್ಡೆಗಳು. ಸ್ವಚ್ಛ ಸಮುದ್ರದ ನೀರಿನಲ್ಲಿ ತುಸು ಹಸಿರಿನ ಭಾಗಗಳು. ಮಂಜುಗಡ್ಡೆಯ ಮೇಲೆ ನಿಂತಿರುವ ಪೆಂಗ್ವಿನ್‌ಗಳು. ಅಲ್ಲಲ್ಲಿ ಪೆಂಗ್ವಿನ್‌ಗಳಿಗೆ ಹೊಂಚುಹಾಕುತ್ತ,ಇಲ್ಲವೇ ಊಟದ ನಂತರ ತಾನೇ ಒಂದು ಮಂಜುಗೆಡ್ಡೆಯ ಒಡೆಯನೆಂಬಂತೆ ಮಲಗಿರುವ ಲೆಪರ್ಡ್ ಸೀಲ್‌ಗಳು. ನೀರಿನ ಜುಳುಜುಳು ಸದ್ದು ಬಿಟ್ಟರೆ ಬೇರೇನೂ ಕೇಳಿಬರದ ಆ ನಿರ್ಮಲ ವಾತಾವರಣದಲ್ಲಿ ನಿಮ್ಮ ದೋಣಿಯ ಮುಂದೆ ಕಂಡುಬರುವ ತಿಮಿಂಗಿಲದ ಉಸಿರಿನ ನೀರಿನ ಬುಗ್ಗೆ. ಅದರ ಹಿಂದೆಯೇ, ಇನ್ನೇನು ಮುಟ್ಟಬಹದು ಅನಿಸುವಷ್ಟು ಹತ್ತಿರದಲ್ಲಿ ಬಾಗಿ ಬಳಕುವ ಆ ಪ್ರಾಣಿಯ ಆನೆಗಾತ್ರದ ಬೆನ್ನು. ನೀವು ಪುಳಕಗೊಳ್ಳುವಷ್ಟರಲ್ಲಿ ಆಳದ ನೀರಿನೊಳಗೆ ಧುಮುಕುವ ಆ ತಿಮಿಂಗಿಲದ ಬೃಹತ್ ಬಾಲದಿಂದ ಹಾರಿದ ನೀರಿನ ಹನಿಗಳು! ಆ ಸೌಂದರ್ಯದಲ್ಲಿ ಮೈಮರೆತು ಅಲ್ಲಿಯೇ ಕುಳಿತುಬಿಡೋಣ ಎಂದರೆ, ನೀವು ಎಲ್ಲಿದ್ದೀರಿ ಎನ್ನುವುದನ್ನು ನೆನಪಿಸುವ ಕೊರೆಯುವ ಚಳಿ. ಇದೆಲ್ಲಾ ಅಂಟಾರ್ಕ್ಟಿಕಾದಲ್ಲಿ ಮಾತ್ರ ಸಾಧ್ಯ!
ಭೂಗೋಳದ ಕೆಳಭಾಗದಲ್ಲಿ ಒಂದು ಬಿಳಿ ಬಣ್ಣದ ತೇಪೆ ಹಚ್ಚಿದಂತೆ ಕಾಣುವ ಖಂಡ, ಏಳನೆಯ ಖಂಡವೇ ಅಂಟಾರ್ಕ್ಟಿಕಾ. ಉತ್ತರ ದೃವದ ಸುತ್ತ ಇರುವ ಪ್ರದೇಶ ಆರ್ಕ್ಟಿಕ್ ಆದರೆ, ಇದು ಅಂಟಾರ್ಕ್ಟಿಕ್. ದಕ್ಷಿಣ ದೃವದ ಸುತ್ತ ಸಹಸ್ರಮಾನಗಳಿಂದ ಹೆಪ್ಪುಗಟ್ಟಿದ ಹಿಮದ ನಾಡು. ಯಾವ ದೇಶಗಳಿಗೂ ಸೇರದ ಈ ಭಾಗಕ್ಕೆ ಮೂರು ಖಂಡಗಳಿಂದ ಹೋಗಬಹುದಾದರೂ, ದಕ್ಷಿಣ ಅಮೆರಿಕದ ಚಿಲಿ ಮತ್ತು ಅರ್ಜೆಂಟಿನಾ ದೇಶಗಳಿಂದ ಪ್ರವೇಶ-ಪ್ರವಾಸ ಸೌಲಭ್ಯ ಹೆಚ್ಚು. ಸಮಭಾಜಕ ವೃತ್ತದ ದಕ್ಷಿಣಕ್ಕಿದ್ದು, ಇಲ್ಲಿಯ ಬೇಸಗೆ ಡಿಸೆಂಬರ್ ತಿಂಗಳಿನಿಂದ ಮಾರ್ಚ್‌ವರೆಗೆ ಮಾತ್ರ. ಆಗ ಇಲ್ಲಿ ಕತ್ತಲಾಗುವುದೇ ಇಲ್ಲ. ಆದರೆ ಬೇಸಗೆಯಲ್ಲೂ ಇಲ್ಲಿನ ಗರಿಷ್ಟ ತಾಪಮಾನ ಒಂದು ಡಿಗ್ರಿ ಸೆಂಟಿಗ್ರೇಡ್! ಚಳಿಗಾಳಿ ತೀವ್ರವಾದರೆ ಮೈನಸ್ ಹನ್ನೆರಡು ಡಿಗ್ರಿವರೆಗೆ ಹೋಗಬಹುದು! ಹವಾಮಾನ ಅನಿರೀಕ್ಷಿತವಾಗಿ ಬದಲಾಗುವ ಸಾಧ್ಯತೆ ಇರುತ್ತದೆ.

ನೆನಪಿಡಿ, ಇಲ್ಲಿ ಯಾವ ಹೊಟೇಲ್‌ಗಳು ಇಲ್ಲವಾದ್ದರಿಂದ ಊಟ-ನಿದ್ದೆಯ ವ್ಯವಸ್ಥೆ ಕ್ರೂಸ್ ಹಡಗುಗಳಲ್ಲಿಯೇ ಆಗಬೇಕು. ಕ್ರೂಸ್ ಬುಕ್ ಮುಗಿದ ನಂತರ ಚಿಲಿ ಅಥವಾ ಅರ್ಜೆಂಟಿನಾ ದೇಶದ ವೀಸಾ ಪಡೆಯಬೇಕು. ಚಿಲಿಯ ಪುಂತಾ ಅರೆನಾಸ್ ಅಥವಾ ಅರ್ಜೆಂಟೀನಾದ ಉಷ್ವೆಯಾ ನಗರಗಳಿಂದ ಈ ಕ್ರೂಸ್ಗಳು ಪ್ರಾರಂಭವಾಗುತ್ತವೆ. ಈ ನಗರ ತಲುಪಿದ ನಂತರ ಕನಿಷ್ಠ ಕ್ರೂಸ್ ಅವಧಿ ಹತ್ತುದಿನಗಳಾದರೂ, ತುಸು ಹೆಚ್ಚು ಬೆಲೆ ತೆತ್ತು ಸೌತ್-ಶೆಟ್ಲಾಂಡ್ ದ್ವೀಪಗಳವರೆಗೆ ವಿಮಾನ ಪ್ರಯಾಣದ ವ್ಯವಸ್ಥೆ ಇರುವ ಕ್ರೂಸ್ ಖರೀದಿಸಿದರೆ ನಾಲ್ಕು ದಿನ ಕಡಿಮೆಯಾಗುತ್ತದೆ.
ಕ್ರೂಸ್ ಹಡಗುಗಳಲ್ಲಿ ಹಲವು ವಿಧ. ನಿಯಮಗಳ ಪ್ರಕಾರ ಐನೂರಕ್ಕೂ ಹೆಚ್ಚು ಪ್ರಯಾಣಿಕರು ಒಂದು ಹಡಗಿನಲ್ಲಿ ಇರುವಂತಿಲ್ಲ ಹಾಗೂ ಒಂದು ಸ್ಥಳದಲ್ಲಿ ಒಮ್ಮೆಗೆ ನೂರಕ್ಕೂ ಹೆಚ್ಚು ಪ್ರಯಾಣಿಕರು ಹಡಗಿನಿಂದ ಆಚೆ ಇರುವಂತಿಲ್ಲ. ಹಾಗಾಗಿ ದೊಡ್ಡ ಹಡಗುಗಳಲ್ಲಿ ಆರಾಮದ ಸೌಲಭ್ಯಗಳು ಹೆಚ್ಚಿದ್ದರೂ, ಸಣ್ಣ ದೋಣಿಗಳಲ್ಲಿ ಹೋಗಿ, ಖಂಡದ ನೆಲದ ಮೇಲೆಯೋ ಅಥವಾ ಹಿಮಗೆಡ್ಡೆಗಳ ಬಳಿಯೋ ಹೋಗಿ ನೋಡುವ ಅವಕಾಶಗಳು ಬಲು ಕಡಿಮೆ. ಅಂತೆಯೇ, ಸಣ್ಣ ಹಡಗುಗಳಲ್ಲಿ ಸಮುದ್ರದ ಅಲೆಗಳ ತೂಗಾಟ ಚೆನ್ನಾಗಿ ಅರಿವಾಗುತ್ತದೆ. ಹಡಗುಗಳ ಸಂಖ್ಯೆ ಕಡಿಮೆ ಇರುವುದರಿಂದ ಆರೆಂಟು ತಿಂಗಳ ಮುಂಚೆಯೇ ಬುಕ್ ಮಾಡಬೇಕು.
ಇನ್ನು ಪ್ರಯಾಣಕ್ಕೆ ಬೆಚ್ಚಗಿನ ಬಟ್ಟೆಗಳು ಬೇಕೇಬೇಕು? ಥರ್ಮಲ್, ಫ್ಲೀಸ್ ಮೊದಲಾದ ಪದರಗಳನ್ನು ನಾವು ತೆಗೆದುಕೊಂಡು ಹೋದರೆ ಸಾಕು. ಅಲ್ಲಿ ನಡೆಯಲು ಬೇಕಾಗುವ ಬೂಟು, ಚಳಿಗೆ ಪರ್ಕ ಎನ್ನುವ ದಪ್ಪನೆ ಹೊರಪದರಗಳನ್ನು ಕ್ರೂಸ್ ಕಂಪನಿಗಳು ನೀಡುತ್ತವೆ. ಇನ್ನು ಪ್ರಯಾಣಕ್ಕೆ ಬೇರೆ ಯಾವುದೇ ದೈಹಿಕ ಸಿದ್ಧತೆ ಬೇಡ. ಧೃಢ ಮನಸಿದ್ದರೆ ಸಾಕು!

ನಾನು ಪ್ರಯಾಣಿಸಿದ್ದು ಚಿಲಿಯಿಂದ ಹೊರಡುವ ಅಂಟಾರ್ಕ್ಟಿಕಾ-21 ಎನ್ನುವ ಸಂಸ್ಥೆಯ ಮೆಜೆಲ್ಲಾನ್ ಎಕ್ಸ್‌ಪ್ಲೋರರ್ ಎಂಬ ಕ್ರೂಸ್‌ನಲ್ಲಿ. ನಾನು ಸೌತ್-ಶೆಟ್ಲಾಂಡ್ ದ್ವೀಪಗಳವರೆಗೆ ವಿಮಾನ ಪ್ರಯಾಣ ಆಯ್ಕೆ ಮಾಡಿದ್ದೆ. ಈ ವಿಮಾನ ಪ್ರಯಾಣದ ವೇಳಾಪಟ್ಟಿಯನ್ನು ಪುಂತಾ ಅರೆನಾಸ್ ತಲುಪಿದ ನಂತರವೇ ಅವರು ತಿಳಿಸುವುದು. ಅಲ್ಲಿಂದ ‘ಅಂಟಾರ್ಕ್ಟಿಕ್ ಏರ್ ವೇಸ್’ ವಿಮಾನದಲ್ಲಿ ಬೆಚ್ಚಗಿನ ಬಟ್ಟೆ ಧರಿಸಿಯೇ ವಿಮಾನ ಹತ್ತಬೇಕು. ಬೆಳಗ್ಗೆ ಹತ್ತುಗಂಟೆಗೆ ಹೊರಟು, ಹನ್ನೆರಡು ಗಂಟೆಗೆ ಸೌತ್-ಶೆಟ್ಲಾಂಡ್ ತಲುಪಿದ್ದೆವು. ಅಲ್ಲಿ ವಿಮಾನ ನಿಲ್ದಾಣ ಇಲ್ಲ. ವಿಮಾನ ಇಳಿದ ನಂತರ ಲೈಫ್ ಜಾಕೆಟ್ ತೊಡಿಸಿ ಜೋಡಿಯಾಕ್ ಎನ್ನುವ ಸಣ್ಣ ದೋಣಿಯಲ್ಲಿ ಕರೆದೊಯ್ದು ಮೆಜೆಲ್ಲಾನ್ ಎಕ್ಸ್‌ಪ್ಲೋರರ್ ಹಡಗಿನಲ್ಲಿ ಸೇರಿಸಿದರು. ನಂತರ, ಹಡಗು ಅಲ್ಲಿಂದ ಹೊರಟು ಅಂಟಾರ್ಕ್ಟಿಕಾ ಖಂಡದ ಭಾಗವಾದ ಪೆನಿನ್ಸುಲಾಗೆ ಪ್ರಯಾಣ ಬೆಳೆಸಿತು.
ಮರುದಿನ ಸುಂದರ ಬಿಸಿಲಿನ ಬೆಳಗ್ಗೆ. ಅರ್ಧ ಗಂಟೆ ವ್ಯಯಿಸಿ ಹಲವು ದಪ್ಪ ಪದರಗಳನ್ನು ತೊಟ್ಟು, ಸಿಯೆರ್ವಾ ಕೋವ್ ಎಂಬಲ್ಲಿ ಮೊಟ್ಟಮೊದಲ ಜೋಡಿಯಾಕ್ ಸುತ್ತಾಟ. ದೊಡ್ಡ ಮಂಜುಗಡ್ಡೆಗಳು, ಪೆಂಗ್ವಿನ್, ಲೆಪರ್ಡ್ ಸೀಲ್ ನೋಡಿ ಬಂದು ಹಡಗಿನಲ್ಲಿ ಊಟ ಮಾಡಿ ಪೋರ್ಟಲ್ ಪಾಯಿಂಟ್ ಎಂಬ ಸ್ಥಳದಲ್ಲಿ ದಪ್ಪ ಹಿಮದಲ್ಲಿ ಅಂಟಾರ್ಕ್ಟಿಕಾ ನೆಲವನ್ನು ಮೊದಲು ಸ್ಪರ್ಶಿಸಿದೆವು. ಅಲ್ಲಲ್ಲಿ ಅಡ್ಡಾಡುವ ಸುಂದರ ಪೆಂಗ್ವಿನ್‌ಗಳು, ಎತ್ತರದ ಸ್ಥಳದಲ್ಲಿ ನಿಂತರೆ ದೂರದಲ್ಲಿ ಮುಳುಗೇಳುತ್ತಾ ಕಾಣುವ ತಿಮಿಂಗಿಲಗಳು! ವಾಪಸ್ ಹಡಗಿಗೆ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಹಡಗಿನ ಪಕ್ಕದಲ್ಲಿಯೇ ಕಿಲ್ಲರ್ ವೇಲ್ ತಿಮಿಂಗಿಲಗಳು ಮುಳುಗೇಳುತ್ತಿದ್ದವು! ರಾತ್ರಿ ಊಟ ಮುಗಿಯುವ ವೇಳೆಗೆ ಮನ ಸಂತೃಪ್ತಿ ಹೊಂದಿತ್ತು. ಇದೇ ರೀತಿ ಇನ್ನೂ ಮೂರು ದಿನಗಳು ಸ್ವರ್ಗ ಸದೃಶ ದೃಶ್ಯಗಳು! ಒಮ್ಮೆಯಂತೂ ನಮ್ಮ ಜೋಡಿಯಾಕ್ ಎದುರಿನಲ್ಲಿಯೇ ಹಂಪ್ ಬ್ಯಾಕ್ ತಿಮಿಂಗಿಲವೊಂದು ಮುಳುಗೇಳಿದ್ದು ಮೈ ನವಿರೇಳಿಸಿತ್ತು. ಮತ್ತೊಮ್ಮೆ ರೋಮಾಂಚನ ನೀಡಿದ್ದು ‘ಪೋಲಾರ್ ಪ್ಲಾಂಜ್’ ಎಂದು ಕರೆಯುವ ಆ ಕೊರೆಯುವ ನೀರಿನಲ್ಲಿ ಧುಮುಕುವ ಸಾಹಸದ ಅವಕಾಶ! ಹೀಗೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಅಂಟಾರ್ಕ್ಟಿಕಾ, ಜೀವನದಲ್ಲಿ ಒಮ್ಮೆ ಅನುಭೂತಿ ಪಡೆಯಲು ಕಾಣಬೇಕಾದ ಸ್ಥಳ. ಹೋಗಿ, ನೋಡಿಬನ್ನಿ ಅಂಟಾರ್ಕ್ಟಿಕಾ!